ವಿಜ್ಞಾನಮಯಿ/ಮಹಿಳೆಯೇ ಮೊದಲ ವಿಜ್ಞಾನಿ- ಸುಮಂಗಲಾ ಮುಮ್ಮಿಗಟ್ಟಿ

ರಾಷ್ಟ್ರಕವಿ ಕುವೆಂಪು ಅವರು ಮಹಿಳೆಗೆ ವಿಜ್ಞಾನಮಯಿ ಎಂದು ಕರೆದಿದ್ದಾರೆ. ಅವಳೇ ಕೃಷಿಯನ್ನು ಮೊದಲು ಕಂಡು ಹಿಡಿದವಳು

’ವಿಜ್ಞಾನಮಯಿ’ ಇದು ಮಹಿಳೆ ಮತ್ತು ವಿಜ್ಞಾನದ ವಿಷಯಗಳನ್ನೊಳಗೊಂಡ ಪಾಕ್ಷಿಕ ಅಂಕಣ. ಹಾಗೆಂದಾಕ್ಷಣ ಮಹಿಳೆಗೊಂದು ವಿಜ್ಞಾನ ಬೇರೆಯಾಗಿಯೂ ಇದೆಯೇ? ಎಂಬ ಪ್ರಶ್ನೆ ಉದ್ಭವಿಸಬಹುದು. ಖಂಡಿತಾ ಇಲ್ಲ. ಆದರೆ, ತನ್ನ ಜೀವನದ ಪ್ರತಿ ಚಟುವಟಿಕೆಯಲ್ಲಿ ವಿಜ್ಞಾನವನ್ನು, ವೈಜ್ಞಾನಿಕ ಮನೋಭಾವವನ್ನು ಅಳವಡಿಸಿಕೊಂಡ ಮಹಿಳೆ ವಿಜ್ಞಾನಮಯಿಯಾಗುತ್ತಾಳೆ. ವಿಜ್ಞಾನಮಯಿ ಪದವನ್ನು ರಾಷ್ಟ್ರಕವಿ ಕುವೆಂಪು ಅವರು ಬಳಸಿದ್ದಾರೆ. ಅವರು ಬಳಸಿದ ಈ ಶಬ್ಧದೊಂದಿಗೆ ಸಾಮಾನ್ಯ ಮಹಿಳೆಗೂ ಕೊಟ್ಟಿರುವ ಗೌರವವನ್ನು ನೆನೆಯುವುದು ಇಲ್ಲಿ ಸೂಕ್ತವೆನಿಸುತ್ತದೆ.
ಮನೆ ಮನೆಯಲ್ಲಿ ನೀವಾಗಿಹೇ ಗೃಹಶ್ರೀ
ಹೆಸರಿಲ್ಲದ ಹೆಸರು ನಿನಗೆ ಗೃಹಶ್ರೀ
ಹೇ ದಿವ್ಯ ಸಾಮಾನ್ಯ
ಹೇ ಭವ್ಯ ದೇವಮಾನ್ಯ
ಚಿರಂತನ ಅಕೀರ್ತಿ ಕನ್ಯೆ
ಅನ್ನಪೂರ್ಣೆ, ಅಹಂ ಶೂನ್ಯೆ
ನಮೋ ನಿನಗೆ ನಿತ್ಯ ಧನ್ಯೆ
ಇಂತಹ, ಮಹಾನ್ ಸ್ಥಾನವುಳ್ಳ ಮಹಿಳೆ ಮನೆ, ರಾಷ್ಟ್ರ ಮತ್ತು ವಿಶ್ವ ಶಾಂತಿಗೂ ಕಾರಣೀಭೂತಳಾಗುತ್ತಾಳೆ ಎನ್ನುವುದು ಅವರ ಅನಿಸಿಕೆ. ಇಂತಹ ಮಹಿಳೆಯ ಜೀವನ ಮೌಲ್ಯವನ್ನು ಹೆಚ್ಚಿಸಲು ಆಕೆಗೆ ವಿಜ್ಞಾನಿ ಮತ್ತು ವೈಜ್ಞಾನಿಕ ಮನೋಭಾವದ ಅನಿವಾರ್ಯ, ಅವಶ್ಯಕತೆ ಇಂದಿದೆ. ವಿಜ್ಞಾನ ಎಂದಾಕ್ಷಣ ವ್ಯಾಖ್ಯೆ, ಸೂತ್ರ, ಸಮೀಕರಣಗಳಿಂದ ಕೂಡಿದ ಪಠ್ಯ ವಿಜ್ಞಾನ ಮಾತ್ರವಲ್ಲ. ಮಹಿಳೆಯ ನಿತ್ಯ ಜೀವನದ ಪ್ರತಿ ಹಂತದಲ್ಲಿಯೂ ಏನು? ಏಕೆ? ಹೇಗೆ? ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳುವುದು ಸೂಕ್ತ. ಯಾವುದೇ ಹಂತದಲ್ಲಿ ಇದಕ್ಕೆ ಉತ್ತರ ದೊರೆಯದೇ ಉತ್ತರವನ್ನು ಪಡೆಯಲು ಪ್ರಯತ್ನಿಸುವುದರಲ್ಲಿ ಆಕೆಯ ಜ್ಞಾನ ಹೆಚ್ಚುವುದರೊಂದಿಗೆ ಆಕೆಯ ಜೀವನ ಮೌಲ್ಯವೂ ಹೆಚ್ಚುತ್ತದೆ ಹಾಗೂ ಮೋಸ ಹೋಗುವುದು ತಪ್ಪುತ್ತದೆ. ಇಂದು ವೈಜ್ಞಾನಿಕ ಉಪಕರಣಗಳಿಂದ ಸುತ್ತುವರೆದಿರುವ ನಾವು ಅವುಗಳನ್ನು ಬಳಸುವುದನ್ನು ತಿಳಿದಿದ್ದೇವೆಯೇ ಹೊರತು ಅವುಗಳ ಹಿಂದಿನ ವೈಜ್ಞಾನಿಕ ತತ್ವಗಳ ಬಗ್ಗೆ ಯೋಚಿಸುವುದಿಲ್ಲ. ಇಂತಹ ಸಾಮಾನ್ಯವಾದ ಅಮೂಲ್ಯವಾದ ಮತ್ತು ಎಲ್ಲರಿಗೂ ಬೇಕಾದ ವಿಷಯಗಳನ್ನು ಈ ಅಂಕಣ ಚರ್ಚಿಸುತ್ತದೆ. ಓದುಗರಿಗೆ ಈ ಅಂಕಣಕ್ಕೆ ಪ್ರೀತಿಯ ಸ್ವಾಗತ.
ವಿಕಾಸದ ಹಾದಿಯಲ್ಲಿ ಈ ಭೂಮಿಯ ಮೇಲೆ ಸುಮಾರು 30 ಲಕ್ಷ ವರ್ಷಗಳ ಹಿಂದೆ ಮಾನವನ ಹತ್ತಿರ ಬಂಧುಗಳು ಓಡಾಡಲಾರಂಬಿಸಿದರು. ಅವರಲ್ಲಿ ಕೆಲವರು ನೆಟ್ಟಗೆ ನಿಂತಾಗ ಅನೇಕ ಲಾಭಗಳಾದವು. ದೃಷ್ಟಿಯ ಹರವು ವಿಸ್ತಾರವಾಯಿತು, ಮುಂದಿನ ಕಾಲುಗಳಾಗಿದ್ದ, ಕೈಗಳು ಆಯುಧಗಳನ್ನು ಬಳಸಲು ಸ್ವತಂತ್ರವಾದವು. ಮಿದುಳು ದೊಡ್ಡದಾಯಿತು. ಪರಿಣಾಮವಾಗಿ ಮಾನವ ಮತಿವಂತನಾಗಲು ಪ್ರಯತ್ನಿಸಿದ.
ಆದರೆ, ಈ ಮಹಾನ್ ಸಾಧನೆಗೆ ಮಹಿಳೆ ತೆತ್ತ ಬೆಲೆ ಸಾಮಾನ್ಯವಾಗಿ ಕಂಡು ಬರುವುದಿಲ್ಲ. ನಾಲ್ಕು ಕಾಲುಗಳ ಮೇಲೆ ನಡೆಯುತ್ತಿದ್ದಾಗ ಆಕೆಗೆ ‘ವಸ್ತಿ’ ಭಾಗ (ಪೆಲ್ವಿಸ್) ದೊಡ್ಡದಾಗಿತ್ತು, ಆದರೆ, ನೆಟ್ಟಗೆ ನಿಂತಾಗ ದೇಹದ ಸಮತೋಲನವನ್ನು ಕಾಯ್ದುಕೊಳ್ಳಲು ಅದು ಕಿರಿದಾಗಬೇಕಾಯಿತು. ಇದರಿಂದ ಆ ಭಾಗದಲ್ಲಿದ್ದ “ಜನನ ಮಾರ್ಗ” (ಬರ್ತ್ ಕೆನಾಲ್) ಕಿರಿದಾಯಿತು. ಕಿರಿದಾದ ಜನನ ಮಾರ್ಗ ಕೇವಲ ಪ್ರಸವದ ಸಮಯದಲ್ಲಿ ಮಾತ್ರ ದೊಡ್ಡದಾಗಿ ಮಗುವಿನ ಜನನಕ್ಕೆ ದಾರಿ ಮಾಡಿಕೊಡಬೇಕಾಯಿತು, ಕಿರಿದಾದ ಜನನ ಮಾರ್ಗದ ಮುಖಾಂತರ, ದೊಡ್ಡ ಮಿದುಳನ್ನು ಒಳಗೊಂಡ ಮಗು ಹೊರಬರುವುದು. ‘ಕಷ್ಟವಾದಾಗ’ ತಾಯಿ ಪ್ರಸವ ಸಮಯದಲ್ಲಿ ಮರಣವನ್ನಪ್ಪುತ್ತಿದ್ದಳು. ಪ್ರಸವ ಸಮಯಕ್ಕಿಂತ ಅಂದರೆ ಅವಧಿಗೆ ಮುಂಚೆ ಜನಿಸಿದ ಮಕ್ಕಳು ಮತ್ತು ತಾಯಂದಿರು ನೈಸರ್ಗಿಕ ಆಯ್ಕೆಗೆ ಒಳಗಾದರು.
ಆಡು, ಆನೆ, ಹಸು ಮುಂತಾದ ಎಲ್ಲಾ ಪ್ರಾಣಿಗಳ ಮರಿಗಳು ಜನಿಸಿದಾಕ್ಷಣ ಎದ್ದು ನಿಲ್ಲಲು ಪ್ರಯತ್ನಿಸುವುದನ್ನು ನೀವು ನೋಡಿರುತ್ತೀರಿ, ಕೆಲವೇ ಗಂಟೆಗಳಲ್ಲಿ ಅವು ಓಡಾಡಲು ಪ್ರಾರಂಭಿಸುತ್ತವೆ. ಆದರೆ, ಮಾನವರ ಮಕ್ಕಳು ಆ ರೀತಿ ಪೂರ್ತಿ ಬೆಳವಣಿಗೆಯನ್ನು ಹೊಂದುವವರೆಗೆ ತಾಯಿ ದೇಹದಲ್ಲಿದ್ದರೆ, ಪ್ರಸವ ಸುರಕ್ಷಿತವಾಗಲು ಸಾಧ್ಯವಾಗಲಿಲ್ಲ. ಇದರಿಂದ ಪೂರ್ತಿಯಾಗಿ ಬೆಳೆಯದ, ಸಂಪೂರ್ಣವಾಗಿ ತಾಯಿಯ ಮೇಲೆ ಅವಲಂಬಿತವಾದ ಮಗು ಜನಿಸಲಾರಂಭಿಸಿತು. ಈಗ ತಾಯಿಯ ಜವಾಬ್ದಾರಿ ಮತ್ತೂ ಹೆಚ್ಚಾಯಿತು. ಮೊದಲನೆಯದಾಗಿ ಪ್ರತಿದಿನವೂ ಆಕೆಗೆ ಒಂದು ಸವಾಲೇ, ಅದರೊಂದಿಗೆ ಪ್ರಸವಾನಂತರವೂ ಕೂಡ ಮಗು ತಾಯಿಯನ್ನು ಮತ್ತು ಕುಟುಂಬದ ಇತರ ಸದಸ್ಯರನ್ನು ಅವಲಂಬಿಸಬೇಕಾಯಿತು. ಆಕೆಯ ಪೆಲ್ವಿಸ್ ಎಲ್ಲ ಪ್ರಕ್ರಿಯೆಗಳಲ್ಲಿ ದೈಹಿಕ ಬಲ ತುಂಬಿತು. ಸಾಮಾಜಿಕ ಜೀವನ ಶೈಲಿಯೊಂದಿಗೆ ಆಕೆಯ ಜವಾಬ್ದಾರಿಯೂ ಹೆಚ್ಚಾಯಿತು. ಕುಟುಂಬ ವ್ಯವಸ್ಥೆಯಲ್ಲಿ ಆಕೆ ಮನೆಗೆ ಸೀಮಿತ ಎಂದೆನಿಸಿದರೂ ಕೂಡ ಅಲ್ಲಿಯ ಜವಾಬ್ದಾರಿಯೊಂದಿಗೆ ಆಹಾರದ ಸಂಗ್ರಹಣೆಯ ಕಾರ್ಯದಲ್ಲಿ ಆಕೆ ಪಾಲ್ಗೊಳ್ಳಬೇಕಿತ್ತು. ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ಆಕೆ, ಜಗತ್ತಿನ ಮೊದಲ ವಿಜ್ಞಾನಿ ಎಂದರೆ ತಪ್ಪಾಗಲಾರದು. ಹಾಗೆಯೇ ಪರಿಣತರು ಮಾನವ ವಿಕಾಸಕ್ಕೆ ಮಹಿಳೆಯ ಕೊಡುಗೆಯನ್ನು ವಿಶೇಷವಾಗಿ ಗುರುತಿಸುತ್ತಾರೆ.
ಇಂದು ಆಧುನಿಕ ಮಾನವ “ಹೋಮೋ ಸೆಪಿಯನ್” ತಾನೊಬ್ಬನೇ ಬುದ್ಧಿವಂತ ಎಂದು ಬೀಗಲು ವಿಕಾಸದಲ್ಲಿ ಉಂಟಾದ ಈ ಎಲ್ಲಾ ಬದಲಾವಣೆಗಳು ಕಾರಣವಾದವು. ನಾವಿಂದು ಕೇವಲ ಮನೆಗಳಲ್ಲಿ ಮಾತ್ರವಲ್ಲ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಪುರುಷನಿಗೆ ಸಮ ಸಮವಾಗಿ ಸಾಧನೆ ಮಾಡುತ್ತಿರುವ ಮಹಿಳೆಯರನ್ನು ನೋಡುತ್ತಿದ್ದೇವೆ. ನಿಸರ್ಗ ಆಕೆಗಿತ್ತಿರುವ ಜವಾಬ್ದಾರಿಗಳೊಡನೆ ಮಾನವ ಜನಾಂಗವು ಆಕೆಗೆ ಹಲವಾರು ಜವಾಬ್ದಾರಿಗಳನ್ನು ಹೊರಿಸಿದೆ. ಆಕೆ ಈ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸುವ ಬಗೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.
ಕೃಷಿಯಿಂದ ಹಿಡಿದು ಅಂತರಿಕ್ಷದವರೆಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಮಹಿಳೆಯನ್ನು ನಾವೀಗ ನೋಡುತ್ತೇವೆ. ಇವೆಲ್ಲದರ ನಡುವೆ ಆಕೆಯನ್ನು ಸುತ್ತಿಕೊಂಡಿರುವ ಮೂಢನಂಬಿಕೆಗಳು. ಕುಟುಂಬದ ಎಲ್ಲ ಸದಸ್ಯರ ಸಮಸ್ಯೆಗೂ ಆಕೆ ಕೈಗೊಳ್ಳುತ್ತಿರುವ ಮೌಢ್ಯ ತುಂಬಿದ ಪರಿಹಾರೋಪಾಯ ಬೇಸರ ಹುಟ್ಟಿಸುವಂತಿದೆ.
ಇವೆಲ್ಲವುಗಳ ಬಗ್ಗೆ ತಿಳಿವಳಿಕೆಯನ್ನು ಮೂಡಿಸಿ, ಮಹಿಳೆಯ ಅಂತಃಶಕ್ತಿಯ ಬಗೆಗೆ ಆಕೆಯ ಗಮನವನ್ನು ಮತ್ತೊಮ್ಮೆ ಸೆಳೆದು ಆಕೆಯ ಸರ್ವತೋಮುಖ ಹಾಗೂ ಸಮಾಜದ ಆರೋಗ್ಯ ಪೂರ್ಣ ಅಭಿವೃದ್ಧಿಗೆ ಪ್ರಯತ್ನಿಸುತ್ತಿರುವ ಈ ಅಂಕಣ ಮುಂದಿನ ದಿನಗಳಲ್ಲಿ ಮಹಿಳೆ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಹತ್ತು ಹಲವು ವಿಷಯಗಳನ್ನು ನಿಮ್ಮ ಮುಂದಿಡಲಿದೆ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ವಿಜ್ಞಾನಮಯಿ/ಮಹಿಳೆಯೇ ಮೊದಲ ವಿಜ್ಞಾನಿ- ಸುಮಂಗಲಾ ಮುಮ್ಮಿಗಟ್ಟಿ

  • July 19, 2018 at 8:21 am
    Permalink

    Very interesting.Thanks

    Reply

Leave a Reply

Your email address will not be published. Required fields are marked *