ವಿಜ್ಞಾನಮಯಿ/ ಮಹಿಳೆಗಾಗಿ ವಿಜ್ಞಾನ, ವಿಜ್ಞಾನಕ್ಕಾಗಿ ಮಹಿಳೆ -ಸುಮಂಗಲಾ. ಎಸ್. ಮುಮ್ಮಿಗಟ್ಟಿ

ಫೆಬ್ರವರಿ ತಿಂಗಳು ಬಂದರೆ ಶಾಲೆ ಕಾಲೇಜುಗಳಿಗೆ, ಸರಕಾರಿ ಮತ್ತು ಸರಕಾರೇತರ ಸಂಘ ಸಂಸ್ಥೆಗಳಿಗೆ, ನೆನಪಾಗುವುದು ವಿಜ್ಞಾನ ದಿನ. ಹೌದು ಫೆಬ್ರವರಿ 28 ರಾಷ್ಟ್ರೀಯ ವಿಜ್ಞಾನ ದಿನ, ಇದು ಸರ್ ಸಿ.ವಿ ರಾಮನ್ ರವರು ತಮ್ಮ ಸಂಶೋಧನೆಯನ್ನು ಪ್ರಕಟಿಸಿದ ದಿನ. ಈ ದಿನಕ್ಕೊಂದು ಘೋಷ ವಾಕ್ಯವನ್ನುಕೊಡಲಾಗುತ್ತದೆ. ಈ ಬಾರಿಯ ಘೋಷ ವಾಕ್ಯ, ಜನರಿಗಾಗಿ ವಿಜ್ಞಾನ ಮತ್ತು ವಿಜ್ಞಾನಕ್ಕಾಗಿ ಜನ ಎಂದು. ಇದನ್ನು ಮಹಿಳೆಯರಿಗೆ ಅನ್ವಯಿಸಿ ನಾವು ನೋಡಿದಾಗ ಮಹಿಳೆಯ ಬದುಕನ್ನುಹಗುರವಾಗಿಸಿದ, ಆಕೆಯ ಪ್ರತಿಭೆ ಬೇರೆ ಕ್ಷೇತ್ರಗಳಿಗೂ ದಕ್ಕುವಂತೆ ಮಾಡುವಲ್ಲಿ ವಿಜ್ಞಾನದ ಕೊಡುಗೆ ಅಪಾರ.

ಇಂದು ನಾವು ಮಿಕ್ಸಿ ಇಲ್ಲದ, ಪ್ರೆಷರ್ ಕುಕ್ಕರ್ ಇಲ್ಲದ ಗ್ಯಾಸ್ ಒಲೆ ಇಲ್ಲದಅಡುಗೆ ಮನೆಯನ್ನು ಕಾಣುವುದು ಅಪರೂಪ. ( ಹಾಗೆಂದು ದೇಶದ ಎಲ್ಲ ಮಹಿಳೆಯರಿಗೆ ಇದು ಸಿಕ್ಕಿದೆ ಎಂದಲ್ಲ, ಇನ್ನೂ ಗ್ರಾಮೀಣ ಭಾಗದ ಹಲವು ಮಹಿಳೆಯರು ಈ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.) ಮಹಿಳೆಯ ಬದುಕನ್ನು ಸಹನೀಯವಾಗಿಸಿದ ಹಲವಾರು ಸೌಲಭ್ಯಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆಗಳು. ಮಹಿಳೆ ಮನೆಯಿಂದ ಹೊರ ಬಂದು ಸಮಾಜಕ್ಕೆ ತನ್ನ ಕೊಡುಗೆಯನ್ನು ನೀಡುವಂತೆ ಮಾಡುವಲ್ಲಿಯೂ ಕೂಡ ಇದರ ಕೊಡುಗೆ ಇದೆ. ಹಾಗಾದರೆ ಇವೆಲ್ಲ ಮಹಿಳೆಯ ಅನುಕೂಲಕ್ಕೆಂದೇ ಕೈಗೊಂಡ ಸಂಶೋಧನೆಗಳೇ ಎಂದರೆ ತಪ್ಪಾಗುತ್ತದೆ, ಮನುಕುಲದ ಏಳ್ಗೆ ಮತ್ತು ಮಾನವರ ಜೀವನ ಮೌಲ್ಯದ ಹೆಚ್ಚಳ ವಿಜ್ಞಾನದ ಉದ್ದೇಶ. ಆ ನಿಟ್ಟಿನಲ್ಲಿ ಮಾಡಿದ ಸಂಶೋಧನೆಗಳು ಮಹಿಳೆಗೆಂದೇ ಸೀಮಿತವಾಗಿದ್ದ,(ವಿಶೇಷವಾಗಿ ನಮ್ಮ ದೇಶದಲ್ಲಿ) ಕೆಲಸಗಳನ್ನು ಸುಲಭವಾಗಿಸಿವೆ.

ಹಾಗಾದರೆ ಮಹಿಳೆಯ ಕೊಡುಗೆ ಈ ವಿಜ್ಞಾನಕ್ಕೆ ಏನು? ಎಂದು ವಿಚಾರ ಮಾಡಿ ನೋಡಿದಾಗ, ವಿಜ್ಞಾನದ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿರುವ ಮಹಿಳೆ ಅದೇ ವಿಜ್ಞಾನ ಕೊಡಮಾಡುವ ತಿಳಿವಳಿಕೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ಸೋಲುತ್ತಿರುವುದನ್ನು ನೋಡುತ್ತಿದ್ದೇವೆ. ಅಂಧ ಶೃದ್ಧೆಗಳು, ಮೌಢ್ಯಗಳು, ಸಂಪ್ರದಾಯ, ಸಂಸ್ಕೃತಿಯ ಹೆಸರಿನಲ್ಲಿ ಶೋಷಣೆ ಗಳು ಹೆಚ್ಚಾಗಿ ಮಹಿಳೆಯಲ್ಲಿಯೇ ಕಂಡುಬರುತ್ತವೆ. ಕಾಲ ಬದಲಾದಂತೆ ಇವು ಕಡಿಮೆಯಾಗುದರ ಬದಲು ಹೆಚ್ಚಾಗುತ್ತಿವೆ. ವಿಚಿತ್ರವೆಂದರೆ, ವಿಜ್ಞಾನ ಮತ್ತು ತಂತ್ರಜ್ಞಾನ ಕೊಡಮಾಡುವ ಸೌಲಭ್ಯಗಳನ್ನೇ ಬಳಸಿಕೊಂಡು ಇವು ಹೆಚ್ಚಾಗುತ್ತಿರುವುದು ವಿಪರ್ಯಾಸವೇ ಸರಿ. ಇದಕ್ಕೆ ಕಾರಣಗಳು ಏನೇ ಇರಲಿ, ಮಹಿಳೆ ವಿಜ್ಞಾನದ ಮೂಲಭೂತ ಪ್ರಶ್ನೆಗಳಾದ, ಏನು? ಯಾಕೆ? ಹೇಗೆ? ಎಂಬ ಪ್ರಶ್ನೆಗಳನ್ನು ಹಾಕುವ, ಯಾವುದನ್ನೇ ಆಗಲಿ ವಿವೇಚನೆ ಮಾಡಿ ನೋಡುವ ಸ್ವಭಾವವನ್ನು ಬೆಳಸಿಕೊಳ್ಳುವ ಅನಿವಾರ್ಯತೆ ಈಗ ಬಂದೊದಗಿದೆ. ಇಲ್ಲವಾದಲ್ಲಿ ಜಗತ್ತು ವಿಕಾಸವಾಗುತ್ತಿದ್ದರೆ, ನಾವು ಹಿಂದಕ್ಕೋಡುತ್ತಿರುತ್ತೇವೆ.

ಗಾಜಿನ ಗೋಡೆ
ಮಹಿಳೆ ವಿಜ್ಞಾನ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಏನು ಎಂದು ವಿಚಾರ ಮಾಡಿ ನೋಡಿದಾಗ ನಮಗೆ ಮತ್ತೊಂದು ಅಚ್ಚರಿ ಕಾದಿದೆ, ಹತ್ತನೇ ತರಗತಿ ಮತ್ತು ಪಿ.ಯು.ಸಿ ಯ ಫಲಿತಾಂಶಗಳು ಹೊರ ಬಿದ್ದಾಗ ಬಹುತೇಕ ಎಲ್ಲ ಪತ್ರಿಕೆಗಳ ಮುಖ ಪುಟದಲ್ಲಿ ಬಾಲಕಿಯರೇ ಮೇಲು ಗೈ ಎಂಬ ಶೀರ್ಷಿಕೆ ಕಂಡು ಬರುತ್ತದೆ, ಆದರೆ ಉನ್ನತ ಅಧ್ಯಯನದ ವಿಚಾರ ಬಂದಾಗ ಹುಡುಗಿಯರ ಸಂಖ್ಯೆ ಮತ್ತೂ ಕಡಿಮೆಯಾಗುತ್ತದೆ. ಇನ್ನು ಪಿ.ಎಚ್.ಡಿ ಗಳ ವಿಷಯಕ್ಕಂತೂ ತೀರ ಕಡಿಮೆ.ಹೀಗೇಕೆ? ಹಾಗಾದರೆ ಮೇಲು ಗೈ ಸಾಧಿಸಿದ್ದ ಅವರೆಲ್ಲ ಎಲ್ಲಿ ಹೋದರು?

ವೈದ್ಯಕೀಯ, ಕಾನೂನು, ವ್ಯಾಪಾರ ಇವೆಲ್ಲಕ್ಕೆ ಹೋಲಿಸಿದರೆ, ವಿಜ್ಞಾನ ವಿಭಾಗದಲ್ಲಿ ಮಾತ್ರ ಇದು ತೀರಾ ಕಡಿಮೆ. ಭಾರತದ ಒಟ್ಟು2.8 ಲಕ್ಷ ವಿಜ್ಞಾನಿಗಳಲ್ಲಿ ಮಹಿಳೆಯರು ಕೇವಲ 14% ಮಾತ್ರ. ಭಾರತದ ವಿಶ್ವವಿದ್ಯಾನಿಲಯ, ಅಥವಾ ಶಿಕ್ಷಣ ಸಂಸ್ಥೆಗಳಲ್ಲಿರುವ ಒಟ್ಟು ಪ್ರಾಧ್ಯಾಪಕರಲ್ಲಿ 25% ಮಾತ್ರ ಮಹಿಳೆಯರು ಆದರೆ ಜೀವಶಾಸ್ತ್ರ ವಿಭಾಗದಲ್ಲಿ ಮಾತ್ರ ಒಮ್ಮೊಮ್ಮೆ ಇದಕ್ಕೆ ಅಪವಾದ ಕಂಡು ಬರುತ್ತದೆ. 2017 ರಲ್ಲಿ ಐ.ಐ.ಟಿ ಗಳಿಗೆ ಬಂದ ಒಟ್ಟು ಅರ್ಜಿಗಳಲ್ಲಿ ಕೇವಲ 10% ವಿದ್ಯಾರ್ಥಿನಿಯರದಾಗಿತ್ತು. ಭಾರತೀಯ ವಿಜ್ಞಾನ ಅಕಾಡೆಮಿ ಮತ್ತು ಕೃಷಿ ವಿಜ್ಞಾನಗಳು ನೀಡುವ ಫೆಲೋಷಿಫ್ ಗಳಲ್ಲಿ 5% ಮಾತ್ರ ಮಹಿಳೆಯರಿಗೆ ಹೋಗಿವೆ. ಇಸ್ರೋದ ವೈಜ್ಞಾನಿಕ ಮತ್ತು ತಾಂತ್ರಿಕ ಉದ್ಯೋಗಿಗಳಲ್ಲಿ ಕೇವಲ 8% ಮಾತ್ರ ಮಹಿಳೆಯರು. ಇತ್ತೀಚಿನ ದಿನಗಳಲ್ಲಿ ಪ್ರಕಟವಾದ ಹಲವಾರು ಅಧ್ಯಯನದ ವರದಿಗಳು ಇದನ್ನು ಮತ್ತೆ ಮತ್ತೆ ಸಾಬೀತು ಪಡಿಸಿದ್ದರಿಂದ ಆ ನಿಟ್ಟಿನಲ್ಲಿ ಪರಿಣಿತರ ಕಾಳಜಿ ಹೆಚ್ಚುತ್ತಿದೆ. ಇದರ ಕಾರಣಗಳನ್ನು ಹುಡುಕುವ ಪ್ರಯತ್ನಗಳು ಸಹ ನಡೆದವು.

ಮಹಿಳೆಯ ಸಾಮರ್ಥ್ಯ ಮತ್ತು ಲಿಂಗ ತಾರತಮ್ಯವನ್ನು ಹೊರತು ಪಡಿಸಿ ದೊರೆತ ಅವಕಾಶಗಳನ್ನು ಸಹ ಮಹಿಳೆ ಸರಿಯಾಗಿ ಉಪಯೋಗಿಸಿಕೊಳ್ಳುವುದಿಲ್ಲ, ಕೆಲಸವನ್ನು ಪೂರ್ತಿ ಮಾಡುವುದಿಲ್ಲ ಎಂಬ ಆಪಾದನೆಯೂ ಆಕೆಯ ಮೇಲಿದೆ. ಆದುದರಿಂದ ಗೈಡ್ ಗಳು ಮಹಿಳಾ ಅಭ್ಯರ್ಥಿ ಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ ಎನ್ನುತ್ತದೆ ಅಧ್ಯಯನದ ವರದಿ. ಇದಕ್ಕೆ ಕಾರಣಗಳು ಮತ್ತೆ ಸಾಮಾಜಿಕ ಹಾಗೂ ಜೀವ ವೈಜ್ಞಾನಿಕ. ಸಂಶೋಧನೆ ಮಾಡುತ್ತಿರುವ ಪುರುಷ ಅಭ್ಯರ್ಥಿ ವಿವಾಹವಾದರೆ, ಅವನ ಅಧ್ಯಯನಕ್ಕೆ ಯಾವ ಅಡೆತಡೆಯೂ ಬರುವುದಿಲ್ಲ. ಆದರೆ ಮಹಿಳೆಯ ವಿಷಯದಲ್ಲಿ ಹಾಗಲ್ಲ ಆಕೆ ಇರಬೇಕಾಗಿರುವ ಸ್ಥಳದಿಂದ ಮೊದಲುಗೊಂಡು ಮನೆ, ವಾತಾವರಣ, ಕೆಲಸ ಕಾರ್ಯಗಳು ಎಲ್ಲವೂ ಬದಲಾಗುತ್ತವೆ.ವಿವಾಹ ಆಕೆಯ ದೇಹದಲ್ಲಿಯೂ ಬದಲಾವಣೆಯನ್ನುಂಟು ಮಾಡುತ್ತದೆ. ಬಸಿರು ಬಾಣಂತನಗಳು ಅಡ್ಡಿಯಾಗುತ್ತವೆ. ಇದೇ ಕಾರಣಕ್ಕೆ ಹಲವಾರು ಬಾರಿ ಉನ್ನತ ಅಧ್ಯಯನ ಇಲ್ಲವೇ ಕುಟುಂಬ ಜೀವನ ಎರಡರಲ್ಲಿ ಒಂದನ್ನು ಮಹಿಳೆ ಆಯ್ದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಎಷ್ಟೋ ಮಹಿಳಾ ವಿಜ್ಞಾನಿಗಳು ವಿಜ್ಞಾನವನ್ನು ಆರಿಸಿಕೊಂಡಿರುವ ಉದಾಹರಣೆಗಳು ನಮ್ಮ ಕಣ್ಣಮುಂದಿವೆ.
ಇವೆಲ್ಲವನ್ನೂ ಮೀರಿ ಮಹಿಳೆ ಆ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾಳೆ ಎಂದರೆ, ಕುಟುಂಬದ ಸಂಪೂರ್ಣ ಸಹಕಾರವೂ ಇದ್ದಾಗ, ಆಕೆಯ ಕ್ಷೇತ್ರದಲ್ಲಿ ಆಕೆಗೆ ದೊರೆಯಬೇಕಾದ ಸವಲತ್ತುಗಳು ಪೂರ್ತಿಯಾಗಿ ಆಕೆಗೆ ದೊರಕದೇ ಹೋಗಬಹುದು, ವಿವಿಧ ಸಮ್ಮೇಳನಗಳು, ವಿಚಾರ ಗೋಷ್ಟಿಗಳಲ್ಲಿ ಪ್ರಬಂದ ಮಂಡಣೆಯ ಅವಕಾಶಗಳು ಕೈ ತಪ್ಪಿ ಹೋಗುತ್ತವೆ. ಕಾರಣಗಳು ಮತ್ತೆ ಹಲವಾರಿದ್ದರೂ ಆಕೆ ಮಹಿಳೆ ಎಂಬ ಹಿನ್ನೆಲೆ ಅದಕ್ಕಿರುತ್ತದೆ. ಕಣ್ಣಿಗೆ ಎಲ್ಲವೂ ಪಾರದರ್ಶಕವಾಗಿರುತ್ತದೆ. ಆದರೆ ಕಣ್ಣಿಗೆ ಕಾಣದ ಗಾಜಿನ ಗೋಡೆಯೊಂದು ಅಲ್ಲಿರುತ್ತದೆ. ಇದನ್ನೂ ಮೀರಿ ಆಕೆಗೆ ಅವಕಾಶಗಳು ದೊರೆತಾಗ ಕೊನೆಯ ಅಸ್ತ್ರವಾಗಿ ಆಕೆಯ ನಡತೆಯ ಬಗೆಗಿನ ಮಾತುಗಳು ಆಕೆಯನ್ನು ಅಧೀರಳನ್ನಗಿಸಲು ಪ್ರಯತ್ನಿಸಿದ ಉದಾಹರಣೆಗಳಿವೆ.

ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ? ಖಂಡಿತಾ ಇದೆ . ಮಹಿಳೆಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ ಸಿಗಬೇಕು. ಇಂದು ಎಷ್ಟು ರಾಷ್ಟ್ರೀಯ ಸಂಸ್ಥೆಗಳ ನಿರ್ದೇಶಕರು ಮಹಿಳೆಯರಿದ್ದಾರೆ? ಕೇವಲ ಬೆರಳೆಣಿಕೆಯಷ್ಟು.ಅಂಥ ಸ್ಥಾನ ಆಕೆಗೆ ದೊರೆತಾಗ ಇದನ್ನು ಪರಿಹರಿಸಲು ಆಕೆ ಪ್ರಯತ್ನಿಸಬಹುದು. ಹಾಗೆಂದು ಮಹಿಳೆ ಸುಮ್ಮನೆ ಕುಳಿತಿಲ್ಲ. ಎಲ್ಲ ಅಡೆತಡೆಗಳ ನಡುವೆಯೂ ಆಕೆ ಸಾಧನೆಗಳನ್ನು ಮೆರೆದಿದ್ದಾಳೆ. ಜಾನಕಿ ಅಮ್ಮಾಳ್, ಅಣ್ಣಾಮಣೀ, ಅಸೀಮಾ ಚಟರ್ಜಿ, ದರ್ಶನ್ ರಂಗನಾಥನ್……. ಇತ್ಯಾದಿ ಹೋರಾಡುತ್ತಲೇ ವಿಜ್ಞಾನವನ್ನು ಅಪ್ಪಿಕೊಂಡವರು ವಿಜ್ಞಾನ ತಮ್ಮನ್ನು ಒಪ್ಪಿಕೊಳ್ಳುವಂತೆ ಮಾಡಿದವರು. ಅವರು ಸುಗಮಗೊಳಿಸಿದ ಹಾದಿಯಲ್ಲಿ ಇನ್ನೂ ಹಲವರು ನಡೆಯುತ್ತಿದ್ದಾರೆ. ಅವರೆಲ್ಲ ನಮ್ಮ ಹೆಮ್ಮೆ. ಆದರೆ ಆ ಗಾಜಿನ ಗೋಡೆಯನ್ನೊಡೆದು ತನ್ನೆಲ್ಲ ಸಾಮರ್ಥ್ಯವನ್ನು ಮಹಿಳೆ ಸಂತೋಷದಿಂದ ವಿಜ್ಞಾನಕ್ಕೆ ನೀಡಬೇಕಾದ ದಿನಗಳಿನ್ನೂ ಬರಬೇಕಾಗಿದೆ.

ಸುಮಂಗಲಾ. ಎಸ್. ಮುಮ್ಮಿಗಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *