ಅಂಕಣ

ವಿಜ್ಞಾನಮಯಿ / ಮಹಿಳೆಗಾಗಿ ಋತುಸ್ರಾವದ ಕಪ್ -ಸುಮಂಗಲಾ ಎಸ್.ಮುಮ್ಮಿಗಟ್ಟಿ

ಪ್ರತಿ ಬಾರಿಯಂತೆ ವಿಜ್ಞಾನದ ಹೊಸಸಂಶೋಧನೆಗಳು ಮಹಿಳೆಯ ನೆರವಿಗೆ ಬಂದಿವೆ. ಅದರ ಪರಿಣಾಮವಾಗಿ ಮೆನ್‍ಸ್ಟ್ರುಯಲ್ ಕಪ್‍ಗಳು ಮಾರುಕಟ್ಟೆಗೆ ಬಂದಿವೆ. ಮರುಬಳಸಬಹುದಾದ ಇವು ಪರಿಸರದ ಸಮಸ್ಯೆಯನ್ನು ಪರಿಹರಿಸುವುದರ ಜೊತೆಗೆ, ವೆಚ್ಚವನ್ನು ತಗ್ಗಿಸುತ್ತವೆ ಎನ್ನುತ್ತಾರೆ ಪರಿಣತರು. ಅನೇಕ ಸಂಶೋಧನೆಗಳು ಹಾಗು ಅಧ್ಯಯನಗಳ ಪ್ರಕಾರ ಇವುಗಳನ್ನು ಸುರಕ್ಷಿತ ಎಂದೇ ಹೇಳಲಾಗುತ್ತಿದೆಯಾದರೂ ವೈದ್ಯರ ಸಲಹೆಯ ಪಡೆದು ಇವುಗಳನ್ನು ಬಳಸುವುದು ಒಳ್ಳೆಯದು.

 ಇಡಿಯ ಜೀವಸಂಕುಲದಲ್ಲಿ ಹೆಣ್ಣುಜೀವಿಗಳಿಗೆ ನಿಸರ್ಗ ಜವಾಬ್ದಾರಿಯೊಂದನ್ನು ಕೊಟ್ಟಿದೆ- ತನ್ನ ಸಂತತಿಯನ್ನು ಮುಂದುವರೆಸುವುದು. ಅದಕ್ಕಾಗಿ ಹೆಣ್ಣುಜೀವ ಕೆಲತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ವಿಕಾಸದಲ್ಲಿ ಮುಂದುವರಿದ ಜೀವಿಗಳಲ್ಲಿ ಕೆಲವು ಋತುಮಾನಕ್ಕೆ ತಕ್ಕಂತೆ ಅಂಡಾಣುವನ್ನು ಉತ್ಪತ್ತಿ ಮಾಡಿದರೆ, ಇನ್ನು ಕೆಲವು ಸಾರ್ವಕಾಲಿಕವಾಗಿ ಅಂಡಾಣುಗಳನ್ನು ಉತ್ಪತ್ತಿಮಾಡುತ್ತವೆ. ಅಂತಹಜೀವಿಗಳಲ್ಲಿ ಮಾನವಜೀವಿಯೂ ಒಂದು. ಮಹಿಳೆ ತನ್ನ ಜೀವಮಾನದಲ್ಲಿ ಉತ್ಪಾದಿಸಬಹುದಾದ ಅಂಡಾಣುಗಳ ಸಂಖ್ಯೆ ಆಕೆ ಮಗುವಾಗಿದ್ದಾಗಲೇ ನಿರ್ಣಯವಾಗಿರುತ್ತದೆ. ಪ್ರತಿ 28 ದಿನಗಳಗೊಮ್ಮೆ ಫಲಿತಗೊಳ್ಳದ ಅಂಡಾಣು, ಮತ್ತು ವೀರ್ಯಾಣುವನ್ನು ಸ್ವಾಗತಿಸಿ ಭ್ರೂಣವನ್ನು ಹುದುಗಿಸಿಕೊಳ್ಳಲು ಮಾಡಿಕೊಂಡಿದ್ದ ತಯಾರಿಯನ್ನ ಋತುಸ್ರಾವದ ರೂಪದಲ್ಲಿ ಹೊರಹಾಕುತ್ತದೆ. ಹಾಗಾಗಿ ಮಹಿಳೆ ಪ್ರತಿತಿಂಗಳೂ ಇದನ್ನು ಅನುಭವಿಸುತ್ತಾಳೆ.

ಎಲ್ಲಿಯವರೆಗೆ ಮಹಿಳೆ ಮನೆಯಲ್ಲಿ ಮಾತ್ರ ಇರುತ್ತಿದ್ದಳೋ ಅಲ್ಲಿಯವರೆಗೆ ಆಕೆಗೆ ಇದೇನು ದೊಡ್ಡಸಮಸ್ಯೆಯಾಗಿರಲಿಲ್ಲ. ಆದರೆ ಆಕೆ ಯಾವಾಗ ಮನೆಯಿಂದ ಹೊರ ಹೋಗಿ ದೀರ್ಘ ಕಾಲದವರೆಗೆ ಉಳಿಯ ಬೇಕಾಯಿತೊ ಆಗ ಹೊಸ ಹೊಸ ವಿಧಾನಗಳನ್ನು ಈ ಸ್ರಾವವನ್ನು ಹೀರಿಕೊಳ್ಳಲು ಬಳಸಲು ಪ್ರಾರಂಭಿಸಿದರು. ಸಾಂಪ್ರದಾಯಿಕವಾದ ಬಟ್ಟೆಗಳು ಅನಾರೋಗ್ಯಕರ ಎಂದು ಕಂಡು ಬಂದಾಗ ಪ್ಯಾಡ್ ಗಳ ಬಳಕೆ ಪ್ರಾರಂಭಿಸಿದರು. ಇತ್ತೀಚಿನ ದಿನಗಳಲ್ಲಿ ಪ್ಯಾಡ್ ಗಳನ್ನು ಬಳಸಿದ ನಂತರ ಅವುಗಳ ನಿರ್ವಹಣೆಯ ಸಮಸ್ಯೆ ತಲೆದೋರಿತು. ಪ್ರತಿ ಬಾರಿಯಂತೆ ವಿಜ್ಞಾನದ ಹೊಸಸಂಶೋಧನೆಗಳು ಆಕೆಯ ನೆರವಿಗೆ ಬಂದಿವೆ. ಅದರ ಪರಿಣಾಮವಾಗಿ ಮೆನ್‍ಸ್ಟ್ರುಯಲ್ ಕಪ್‍ಗಳು ಮಾರುಕಟ್ಟೆಗೆ ಬಂದಿವೆ. ಮರುಬಳಸಬಹುದಾದ ಇವು ಪರಿಸರದ ಸಮಸ್ಯೆಯನ್ನು ಪರಿಹರಿಸುವುದರ ಜೊತೆಗೆ, ವೆಚ್ಚವನ್ನು ತಗ್ಗಿಸುತ್ತವೆ ಎನ್ನುತ್ತಾರೆ ಪರಿಣತರು. ಆರಂಭದಲ್ಲಿ ವೆಚ್ಚ ಅಧಿಕವೆನಿಸಿದರೂ ದೀರ್ಘಕಾಲೀನ ಬಳಕೆ ಮಾಡಿದಾಗ ಮತ್ತು ಹೆಚ್ಚುಜನರು ಬಳಸಿದಾಗ ಮತ್ತು ಬೇಡಿಕೆ ಹೆಚ್ಚಾದಾಗ ಬೆಲೆಯೂ ತಗ್ಗುತ್ತದೆ.

ಕಪ್ ಕೆಲಸ ಮಾಡುವುದು ಹೇಗೆ?
ಎರಡು ವಿವಿಧ ಅಳತೆಗಳಲ್ಲಿ ಮಾರುಕಟ್ಟೆಯಲ್ಲಿರುವ ಇವು ಸಣ್ಣಬಟ್ಟಲಿನಾಕಾರದಲ್ಲಿದ್ದು, ಸ್ಥಿತಿಸ್ಥಾಪಕ ಸಿಲಿಕಾನ್  ಅಥವಾ ಲೇಟೇಕ್ಸನಿಂದ ಆಗಿವೆ. ಪ್ಯಾಡ್ , ಬಟ್ಟೆ ಅಥವಾ ಟ್ಯಾಂಪನ್‍ಗಳಂತೆ ಇವು ಸ್ರಾವವನ್ನು ಹೀರಿಕೊಳ್ಳುವುದಿಲ್ಲ ಬದಲಾಗಿ ಅದನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತವೆ. ಸ್ರಾವದ ತೀವ್ರತೆಗೆ ಅನುಸಾರವಾಗಿ ನಾಲ್ಕರಿಂದ ಹನ್ನೆರೆಡು ಗಂಟೆಗಳವರೆಗೆ ಇದು ಕೆಲಸ ಮಾಡುತ್ತದೆ. ಅದಾದ ನಂತರ ಅದನ್ನು ತೆಗೆದು ಮತ್ತೆ ಶುಚಿಯಾಗಿ ತೊಳೆದು ಬಳಸಬಹುದು. ಇದನ್ನು ಹಲವಾರು ಬಾರಿ ಮರು ಬಳಕೆ ಮಾಡಬಹುದು.ಇವು ಪ್ಯಾಡ್ ಗಳಂತೆ ಪರಿಸರಕ್ಕೆ ಹಾನಿಯನ್ನುಂಟು ಮಾಡುವುದಿಲ್ಲ ಎನ್ನುವುದು ಪರಿಣತರ ವಾದ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಪ್ ಅನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಪ್ರತಿ ಬಾರಿ ತೆಗೆದು ತೊಳೆಯುವಾಗ ಶುದ್ಧವಾದ ನೀರು ಬಳಸುವುದು ಸೂಕ್ತ. ಪ್ರತಿ ಮಾಸದ ಋತುಸ್ರಾವದ ಅವಧಿಯ ನಂತರ ಅದನ್ನು ಶುಚಿಯಾಗಿಸಿ ತೆಗೆದಿರಿಸಿ ಮತ್ತೆ ಮುಂದಿನ ಅವಧಿಯಲ್ಲಿ ಬಳಸಬಹುದು. ಅತ್ಯುತ್ತಮ ಗುಣಮಟ್ಟದ ವೈದ್ಯಕೀಯವಾಗಿ ಪ್ರಮಾಣಿತವಾದ ಹಿಗ್ಗುವ ಗುಣವುಳ್ಳ ಸಿಲಿಕಾನಿನಿಂದಾದ ಇವು ಸಾಮಾನ್ಯವಾಗಿ ಗಂಟೆಯಾಕಾರದವುಗಳಾಗಿದ್ದು ತಳದಲ್ಲಿ ಸಣ್ಣಕಾಂಡದಂತಹ ರಚನೆಯನ್ನು ಇವುಗಳಲ್ಲಿ ನೋಡಬಹುದು. ಇಲ್ಲಿ ಮೂಡುವ ಪ್ರಮುಖ ಸಂಶಯವೆಂದರೆ ಇವು ಸುರಕ್ಷಿತವೆ ಎನ್ನುವುದು. ಅನೇಕ ಸಂಶೋಧನೆಗಳು ಹಾಗು ಅಧ್ಯಯನಗಳ ಪ್ರಕಾರ ಇವುಗಳನ್ನು ಸುರಕ್ಷಿತ ಎಂದೇ ಹೇಳಲಾಗುತ್ತಿದೆಯಾದರೂ ವೈದ್ಯರ ಸಲಹೆ ಪಡೆದು ಇವುಗಳನ್ನು ಬಳಸುವುದು ಒಳ್ಳೆಯದು. ಯಾಕೆಂದರೆ ಇದರ ತಯಾರಿಕೆಯಲ್ಲಿ ಬಳಸುವ ಸಿಲಿಕಾನ್ ಕೆಲವರಿಗೆ ಅಲರ್ಜಿಯನ್ನು ಉಂಟು ಮಾಡಬಹುದು ಎನ್ನಲಾಗುತ್ತದೆ. ಮಹಿಳೆಯರು ಇದನ್ನು ಬಳಸುವ ಇಂತಹ ಒಂದು ಎಚ್ಚರಿಕೆಯನ್ನು ತೆಗೆದುಕೊಂಡರೆ ಸಾಕು.

ಋತುಸ್ರಾವದ ಕಪ್ ಗಳನ್ನು ಯಾಕೆ ಬಳಸಬೇಕು?
ಸಾಂಪ್ರದಾಯಿಕವಾಗಿ ಬಳಸುವ ಸ್ಯಾನಿಟರಿ ನ್ಯಾಪ್‍ಕಿನ್‍ಗಳು ಪರಿಸರಕ್ಕೆ ಉಂಟು ಮಾಡುವ ಹಾನಿ ಅಪಾರವಾಗಿದೆ ಎನ್ನುವುದು ನಮಗೀಗಾಲೇ ತಿಳಿದಿರುವ ವಿಷಯ. ಅಧ್ಯಯನ ಒಂದರ ಪ್ರಕಾರ ಭಾರತದಲ್ಲಿ ಪ್ರತಿ ದಿನ 113000 ಟನ್ ಸ್ಯಾನಿಟರಿ ಕಸ ಅಂದರೆ ಸುಮಾರು ೪೩೨ ಮಿಲಿಯನ್ ಪ್ಯಾಡ್ ಗಳು ಪ್ರತಿ ವರ್ಷ ಉತ್ಪಾದನೆಯಾಗುತ್ತಿವೆ. ಇವುಗಳಲ್ಲಿ 80% ಫ್ಲಶ್ ಗಳನ್ನು ಸೇರುತ್ತವೆ ಅಥವಾ ಹೂಳು ಗುಂಡಿಗಳಲ್ಲಿ (ಲ್ಯಾಂಡ್ ಫಿಲ್) ತುಂಬುತ್ತವೆ. ಒಮ್ಮೆ ಬಳಸಿದ ನಂತರ ಕಸದ ತೊಟ್ಟಿಯನ್ನು ಸೇರುವ ಈ ಪ್ಯಾಡ್ ಗಳು ಸುತ್ತಲಿನವರ ಆರೋಗ್ಯ ಮತ್ತು ಪರಿಸರ ಎರಡಕ್ಕೂ ಹಾನಿಕರ. ಮಹಿಳೆಯ ಋತುಸ್ರಾವದ ದಿನಗಳನ್ನು ಗುಟ್ಟಾಗಿ ನಿರ್ವಹಿಸುವ ನಮ್ಮಲ್ಲಿ ಪ್ಯಾಡ್ ನ ವಿಲೇವಾರಿಯೂ ಕೂಡ ಒಂದು ಸಂಕೋಚದ ವಿಷಯವೇ, ಪರಿಸ್ಥಿತಿ ಹೀಗಿರುವಾಗ ಸಾಮಾನ್ಯವಾಗಿ ಮಹಿಳೆಯರು ಬಳಸಿದ ಪ್ಯಾಡ್ ಪ್ಲಾಸ್ಟಿಕ್ ಚೀಲವೊಂದರಲ್ಲಿ ಹಾಕಿ ಮನೆಯ ಇತರ ಕಸದೊಂದಿಗೆ ಎಸೆದು ಬಿಡುತ್ತಾರೆ. ಇಲ್ಲವೇ ತಮ್ಮ ಟಾಯ್ಲೆಟ್‍ನಲ್ಲಿ ಫ್ಲಶ್ ಮಾಡುತ್ತಾರೆ. ಎರಡೂ ಅನಾರೋಗ್ಯಕರ ಅಭ್ಯಾಸಗಳೇ.

ಕಸದ ತೊಟ್ಟಿಯನ್ನು ಸೇರಿದ ಪ್ಯಾಡ್ ಗಳು ಅಲ್ಲಿ ಮೈಕ್ರೋಬ್ ಗಳು ಸಾಲ್ಮೊನೆಲ್ಲಾ, ಇ.ಕೊಲೈ, ಸ್ಟಾಫಿಲೋಕಾಕಸ್, ಎಚ್.ಐ.ವಿ ಹಾಗೂ ಹೆಪಟೈಟಿಸ್ ಉಂಟು ಮಾಡುವ ಮಾಡುವ ಪ್ಯಾಥೋಜೆನ್ ಗಳು ಸುತ್ತಲಿನ ಪರಿಸರದಲ್ಲಿ ಹರಡಲು ಪ್ರಾರಂಭವಾಗುತ್ತವೆ. ಕಸದ ವಿಂಗಡಣೆ ಮಾಡುವ ಹುಡುಗರು ತಮ್ಮ ಕೈಯಿಂದ ಈ ಕಸವನ್ನು ವಿಂಗಡಣೆ ಮಾಡುವಾಗ ಈ ರೋಗಗಳ ಸೋಂಕಿಗೆ ಒಳಗಾಗುತ್ತಾರೆ. ಸೋಂಕು ಅಲ್ಲಿರುವ ಕಸಕ್ಕೆಲ್ಲಾ ಹರಡಿ ಕಸ ರೋಗದ ಕೂಪವಾಗುತ್ತದೆ. ಇದು ಸುತ್ತಲಿನ ಪರಿಸರದ ಮೇಲೆಯೂ ಪರಿಣಾಮ ಬೀರುತ್ತದೆ.

ಇದಾದ ನಂತರ ಕಸದ ಡಂಪ್ ಯಾರ್ಡ್ ಗಳನ್ನು ಸೇರಿದ ಕಸವನ್ನು ಸುಡುತ್ತಾರೆ ಇಲ್ಲವೇ ಕಾಂಪೋಸ್ಟ್ ಮಾಡುತ್ತಾರೆ. ಆದರೆ ಬಯೋಮೆಡಿಕಲ್ ವೇಸ್ಟ ನ ಗುಂಪಿಗೆ ಸೇರುವ ಇದನ್ನುಇವೆರೆಡನ್ನೂ ಮಾಡಲು ಬರುವುದಿಲ್ಲ.ಆದ್ದರಿಂದ ಇದನ್ನು ಇನ್ಸಿರನೇಟರುಗಳಲ್ಲಿ ಅಧಿಕ ತಾಪಮಾನದಲ್ಲಿ ಸುಡಬೇಕು. ಅದೂ ಕೂಡಾ ವೈಜ್ಞಾನಿಕವಾಗಿ ಸರಿಯಾಗಿದ್ದರೆ ಮಾತ್ರ ಸುರಕ್ಷಿತ ಇಲ್ಲವಾದಲ್ಲಿ ಮತ್ತೆ ಅಪಾಯ ಕಟ್ಟಿಟ್ಟದ್ದು. ಇನ್ಸಿರನೇಟರಗಳು ಎಲ್ಲೆಡೆ ಇರುವುದಿಲ್ಲ ಹಾಗಾಗಿ ತೆರೆದ ವಾತಾವರಣದಲ್ಲಿ ಇದನ್ನು ಸುಟ್ಟಾಗ ಇದರಲ್ಲಿರುವ ಪ್ಲಾಸ್ಟಿಕ್ ಸುಡುತ್ತದೆ. ಪ್ಯಾಡ್ ನ 90% ಪ್ಲಾಸ್ಟಿಕ್ ನಿಂದಾಗಿದೆ. ಅದರ ಮೇಲಿನ ತೆಳುವಾದ ಪ್ಲಾಸ್ಟಿಕ್ಕಿನ ಪದರ ಪಾಲಿ ಪ್ರೊಪೈಲೀನ್ ನಿಂದ ಆಗಿದ್ದು, ಹೀರುವ ವಸ್ತುವಿನಲ್ಲಿ ಪಾಲಿಮರ್ ಗಳು ಇರುತ್ತವೆ ಮತ್ತೆ ಕೆಳಪದರವೂ ಸಹ ಪ್ಲಾಸ್ಟಿಕ್ ನಿಂದಾಗಿದೆ. ಇವುಗಳನ್ನು ಲ್ಯಾಂಡ್ ಫಿಲ್ ಮಾಡಿದಾಗ ಇವು ಜೈವಿಕವಾಗಿ ವಿಘಟನೆಗೊಳ್ಳದೆ ಸುಮಾರು ೮೦೦ ವರ್ಷಗಳ ಕಾಲ ಹಾಗೆಯೇ ಉಳಿಯುತ್ತವೆ. ತೆರೆದ ವಾತಾವರಣದಲ್ಲಿ ಸುಟ್ಟಾಗ ಹಾನಿಕಾರಕ ರಾಸಾಯನಿಕ ವಸ್ತುಗಳು ವಾತಾವರಣವನ್ನು ಸೇರುತ್ತವೆ. ಇವುಗಳಲ್ಲಿ ಡೈಯಾಕ್ಸಿನ್ ಗಳು ಮತ್ತು ಫ್ಯುರಾನ್ ಗಳು ಪ್ರಮುಖವಾಗಿವೆ.
ಈ ಎಲ್ಲ ಸಮಸ್ಯೆಗಳಿಗೆ ಈ ಕಪ್ ಗಳು ಪರಿಹಾರವಾಗುತ್ತವೆ ಎನ್ನಲಾಗುತ್ತಿದೆ. ಆದರೆ ಇದರ ವೆಚ್ಚ ಅಧಿಕವಾಗಿರುವುದು ಒಂದು ದೊಡ್ಡ ಸಮಸ್ಯೆ. ಬಳಕೆ ಹೆಚ್ಚಾದಂತೆಲ್ಲ ವೆಚ್ಚವೂ ತಗ್ಗುತ್ತದೆ ಎನ್ನುತ್ತಾರೆ ಉತ್ಪಾದಕರು. ಅದಕ್ಕಾಗಿ ನಾವು ಕಾಯ್ದು ನೋಡಬೇಕಿದೆ.

-ಸುಮಂಗಲಾ ಎಸ್.ಮುಮ್ಮಿಗಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *