Latestಅಂಕಣ

ವಿಜ್ಞಾನಮಯಿ/ ಮರಗಳು ಮತ್ತು ಮಾನಿನಿಯರು – ಸುಮಂಗಲಾ ಮುಮ್ಮಿಗಟ್ಟಿ

ಪರಿಸರ ಸಂರಕ್ಷಣೆಯ ಚರಿತ್ರೆಯಲ್ಲಿ ‘ಚಿಪ್ಕೋ’ ಚಳವಳಿ ಒಂದು ಉಜ್ವಲ ಅಧ್ಯಾಯ. ಅದರ ಮುಂಚೂಣಿಯಲ್ಲಿ ಮಹಿಳೆಯರೂ ಇದ್ದರು ಎನ್ನುವುದನ್ನು ಮರೆಯುವಂತಿಲ್ಲ. ಈಗ ಇತಿಹಾಸ ಮರುಕಳಿಸುತ್ತಿದೆ.  ಇತ್ತೀಚೆಗೆ ಒಡಿಶಾದ ಧೇನ್ಕನಲ್ ಜಿಲ್ಲೆಯ ಬಲರಾಮಪುರ್ ಹಳ್ಳಿಯಲ್ಲಿ ಮಹಿಳೆಯರೆಲ್ಲ ಒಂದಾಗಿ ಕಾಡಿನ ರಕ್ಷಣೆಗೆ ನಿಲ್ಲಬೇಕಾದ ಪರಿಸ್ಥಿತಿ ಬಂತು. ನವೆಂಬರ್ ಹತ್ತೊಂಭತ್ತರಂದು ಈ ಯೋಜನೆಯನ್ನು ಕೈ ಬಿಟ್ಟಿರುವುದಾಗಿ ಮುಖ್ಯ ಮಂತ್ರಿಗಳು ಘೋಷಿಸಿದಾಗ ಹಳ್ಳಿಯ ಜನ ನಿರಾಳವಾಗಿ ಉಸಿರಾಡಿದರು. ಈ ಹೋರಾಟದಲ್ಲಿ ಮತ್ತೊಮ್ಮೆ ಮಹಿಳೆಯರು ತಮ್ಮ ಪರಿಸರದ ಬಗೆಗಿನ ಬದ್ಧತೆಯನ್ನು  ತೋರಿಸಿದರು, ಹೋರಾಡಿದರು ಮತ್ತು ಜಯಗಳಿಸಿದರು.

 

ಮಹಿಳೆಯರು ಮತ್ತು ಪರಿಸರದ ನಡುವಿರುವ ಸಂಬಂಧದ ಅರಿವು ನಮಗಿದೆ. ಅದರಲ್ಲೂ ಪರಿಸರಕ್ಕೆ ಹತ್ತಿರವಾಗಿರುವ ಮಹಿಳೆಯರಂತೂ ಯಾವುದೇ ಸ್ವಾರ್ಥವಿಲ್ಲದೆಯೇ ಪರಿಸರವನ್ನು, ಮರಗಿಡಗಳನ್ನು ಕಾಯ್ದುಕೊಂಡು ಬರುತ್ತಾರೆ. ಅದನ್ನು ತಮ್ಮ ನಿತ್ಯ ಜೀವನದ ಒಂದು ಭಾಗವಾಗಿಕೊಂಡು ಬಿಡುತ್ತಾರೆ. ಇನ್ನು ಪರಿಸರಕ್ಕೆ ಧಕ್ಕೆ ಬರುವ ಸಂದರ್ಭ ಬಂದರೆ, ಹೋರಾಟಕ್ಕೂ ಸಿದ್ಧರಾಗುತ್ತಾರೆ. ಇದನ್ನವರು ಎಪ್ಪತ್ತರ ದಶಕದ ಚಿಪ್ಕೋ ಚಳುವಳಿಯಿಂದ ಇಂದಿನವರೆಗೆ ಮತ್ತೆ ಮತ್ತೆ ಸಾಬೀತು ಪಡಿಸಿದ್ದಾರೆ. ಈಗ ಅದಕ್ಕೆ ಮತ್ತೊಂದು ಉದಾಹರಣೆ ನಮ್ಮ ಮುಂದಿದೆ.

ಒಡಿಶಾದ ಧೇನ್ಕನಲ್ ಜಿಲ್ಲೆಯ ಬಲರಾಮಪುರ್ ಎಂಬ ಹಳ್ಳಿಯ ಮಹಿಳೆಯರು ತಮ್ಮ ಹಳ್ಳಿಯ ಸುತ್ತಲೂ ಇರುವ ಕಾಡನ್ನು ರಕ್ಷಿಸಿದ್ದಾರೆ. ಇದು ಇಂದು ನಿನ್ನೆಯ ಕತೆಯಲ್ಲ. ಈಗ ಎಪ್ಪತ್ತು ವರ್ಷದ ಚತುರಿ ಸಾಹು ಕಳೆದ ನಾಲ್ಕು ದಶಕಗಳಿಂದ ಪ್ರತಿ ದಿನ ತನ್ನ ಮನೆಯಿಂದ ಒಬ್ಬ ಪುರುಷನನ್ನು ಕಾಡು ಕಾಯಲು ಕಳಿಸುತ್ತಾ ಬಂದಿದ್ದಾಳೆ. ಆಕೆಯ ಮಾವ, ಗಂಡ ಮತ್ತು ಮಗ ಇದನ್ನು ಮಾಡಿದ್ದಾರೆ. ೨೦೧೪ ರಿಂದೀಚೆಗೆ ಹಳ್ಳಿಯ ಎರಡು ಮನೆಗಳಿಂದ ಇಬ್ಬರು ಸದಸ್ಯರು ಪ್ರತಿ ದಿನ ಕಾಡು ಕಾಯುತ್ತಾರೆ. ಕಾಡಿನಲ್ಲಿ ಮರ ಕಡಿಯುವ ಸೂಚನೆಯೇನಾದರೂ ಕಂಡರೆ ಹಳ್ಳಿಗೆ ಸೂಚನೆ ಕೊಡುತ್ತಾರೆ. ಅದಕ್ಕಾಗಿ ಸನ್ನದ್ದವಾಗಿರುವ ದಂಡು ಕಾಡಿನತ್ತ ನುಗ್ಗುತ್ತದೆ. ಇದರಿಂದಾಗಿ ಈ ಕಾಡು ಹಾಗೆಯೇ ಉಳಿದು ಕೊಂಡು ಬಂದಿದೆ. ಮನೆಯಲ್ಲಿ ಪುನಾ ಕುಂಟಿಯಾ ತನ್ನ ಮನೆಯ ಸರದಿ ಬಂದಾಗ ಕೂಲಿ ಕೊಟ್ಟು ಆಳುಗಳನ್ನು ಕಳಿಸುತ್ತಾಳೆ.

ಆದರೆ ಇತ್ತೀಚೆಗೆ ಮಹಿಳೆಯರೆಲ್ಲ ಒಂದಾಗಿ ಕಾಡಿನ ರಕ್ಷಣೆಗೆ ನಿಲ್ಲಬೇಕಾದ ಪರಿಸ್ಥಿತಿ ಬಂತು. ಕಾಡಿನ ಸ್ವಲ್ಪ ಭೂಮಿಯನ್ನು ಕೈಗಾರಿಕೆಯೊಂದಕ್ಕೆ ಕೊಡಲು ಜಿಲ್ಲಾಡಳಿತ ವ್ಯವಸ್ಥೆ ನಿರ್ಧಾರ ಮಾಡಿತು. ಹಳ್ಳಿಯ ಜನ ವಿರೋಧಿಸಿದಾಗ ಕಾನೂನಿನ ಪ್ರಕಾರ ಇರಬೇಕಾದುದಕ್ಕಿಂತ ಹೆಚ್ಚು ಕಾಡು ನಿಮಗಿದೆ, ಈ ಕೈಗಾರಿಕೆಯಿಂದ ನಿಮಗೆ ಕೆಲಸ ದೊರೆಯುತ್ತದೆ ಎಂಬ ಉತ್ತರ ಬಂತು.

ಹಳ್ಳಿಯ ಹಿರಿಯ ಮಹಿಳೆ ಚಿಂತಾಮಣಿ ಸೇಠಿ ಹೇಳುವಂತೆ ಎಪ್ಪತ್ತರ ದಶಕದಲ್ಲಿ ಇಲ್ಲಿಯ ಸುತ್ತಮುತ್ತಲಿನ ಮರಗಳನ್ನು ನೆಲಕ್ಕುರುಳಿಸಲಾಯಿತು. ಅದಾದ ನಂತರ ಬಲರಾಮಪುರ್ ಹಳ್ಳಿಯ ಜನರು ಮತ್ತೆ ಕಾಡು ಬೆಳೆಸಿ ಪೋಷಿಸಿ ಕೊಂಡು ಬಂದರು. ಕಾಡಿನ ಮರದ ಒಂದೇ ಒಂದು ಟೊಂಗೆಯನ್ನು ಕಡಿಯಲು ಬಿಟ್ಟಿಲ್ಲ. ಆ ೪೦ ವರ್ಷಗಳಲ್ಲಿ ಕಾಡು ಬೆಳೆದಿದೆ. ಅದೇ ಕಾಡಿನ ಒಂದು ಭಾಗವನ್ನು ತಮ್ಮ ಬಳಕೆಗಾಗಿ ಬಿಟ್ಟು ಪೋಷಿಸಿಕೊಂಡು ಬಂದಿದ್ದಾರೆ. ಅಲ್ಲಿಂದ ಮಾತ್ರ ಅವರು ಉರುವಲು ಮತ್ತಿತರ ಬಳಕೆಗಾಗಿ ಮರ ಕಡಿಯುತ್ತಾರೆ. ಉಳಿದ ಭಾಗಕ್ಕೆ ತೊಂದರೆ ಬಂದರೆ ಅವರು ರಕ್ಷಣೆಗಾಗಿ ಮುನ್ನುಗ್ಗುತ್ತಾರೆ.

ಕೈಗಾರಿಕೆಗಾಗಿ ೧೨ ಎಕರೆ ಕಾಡನ್ನು ಬಿಟ್ಟು ಕೊಡುವ ಯೋಜನೆ ಇತ್ತು. ಅಂದರೆ ಸುಮಾರು ೫೦೦೦ ಮರಗಳನ್ನು ಕಡಿಯಬೇಕಾಗಿತ್ತು.ನವೆಂಬರ್ ೧೭ ರಂದು ಧೇನ್ಕನಲ್ ಜಿಲ್ಲಾಡಳಿತ ಆಯುಧದಾರಿ ಪೋಲೀಸರೊಂದಿಗೆ ಝಿಂಕರಗಡಿ ಕಾಡನ್ನು ತಲುಪಿತು. ಆಗ ನಸುಕಿನ ನಾಲ್ಕು ಗಂಟೆ, ಹಳ್ಳಿಗರಿಗೆ ವಿಷಯ ತಿಳಿದು ಅವರು ಅಲ್ಲಿಗೆ ಬರುವ ವೇಳೆಗೆ ೧೦೦೦ ಮರಗಳು ಧರೆಗುರುಳಿದ್ದವು. ಹಳ್ಳಿಯ ಮಹಿಳೆಯರಿಗೆ ವಿಷಯ ತಿಳಿದ ಕೂಡಲೇ ಅವರೆಲ್ಲ ಕಾಡಿಗೆ ಓಡಿ ಬಂದರು, ಪ್ರತಿಯೊಬ್ಬರೂ ಒಂದೊಂದು ಮರವನ್ನು ತಬ್ಬಿ ನಿಂತರು. ಮರ ಮತ್ತು ಕತ್ತರಿಸುವ ಯಂತ್ರಗಳ ನಡುವೆ ಮಾನಿನಿಯರಿದ್ದರು. ಮರ ಕಡಿಯುವವರು ಮೊದಲು ನಮ್ಮನ್ನು ಕಡಿಯಬೇಕು ಎಂದರು. ಇವರ ಈ ದೃಢ ನಿರ್ಧಾರ ಸುತ್ತಲಿನ ಎಲ್ಲರನ್ನು ನಡುಗಿಸಿತು. ರಾಜ್ಯಾದ್ಯಂತ ಈ ಸುದ್ದಿ ಹರಡಿ ಜನರೆಲ್ಲ ಈ ಮಹಿಳೆಯರನ್ನು ಹೊಗಳಲು ಪ್ರಾರಂಭಿಸಿದರು.

“ ನಮ್ಮ ಪೂರ್ವಜರು ಈ ಮರಗಳನ್ನು ನೆಟ್ಟರು ,೧೯೭೨ ರಿಂದ ನಾವು ಅವುಗಳನ್ನು ಕಾಪಾಡಿಕೊಂಡು ಬಂದಿದ್ದೇವೆ, ಪರಿಣಾಮ ಏನು ಬೇಕಾದರೂ ಆಗಲಿ ನಾವು ಮರ ಕಡಿಯಲು ಬಿಡುವುದಿಲ್ಲ” ಎಪ್ಪತ್ತೈದರ ದೂಶನ್ ಫರೀದಾ ಹೇಳಿದಾಗ, “ಈ ಮರಗಳು ನಮ್ಮ ಮಕ್ಕಳಂತೆ ಪ್ರತೀ ಕುಟುಂಬವೂ ಈ ಮರಗಳನ್ನು ನೋಡಿಕೊಂಡಿದೆ ಅಂದಾಗ ಈ ಮರಗಳನ್ನು ಕಡಿಯುವುದು , ಅಥವಾ ಕಡಿಯಲು ಬಿಡುವುದಿಲ್ಲ” ಎಂದು ೧೫ ವರ್ಷಗಳಿಂದ ಹಳ್ಳಿಯಲ್ಲಿ ನೆಲೆಸಿರುವ ಶಕುಂತಲಾ ಜೈನಾ ಹೇಳಿದಾಗ ತಬ್ಬಿಬ್ಬಾಗುವ ಸರದಿ ವರದಿಗಾರರದಾಗಿತ್ತು. ಇಡಿಯ ದೇಶದ ಗಮನವನ್ನು ತನ್ನೆಡೆಗೆ ಸೆಳೆದ ಈ ಘಟನೆಯಿಂದ ಮಾಧ್ಯಮಗಳ ಗಮನವೂ ಪರಿಸರವಾದಿಗಳ ಗಮನವೂ ಅತ್ತ ಹೋಗಿ ಮರುದಿನ ಅಂದರೆ ನವೆಂಬರ್ ೧೮ ರ ಹೊತ್ತಿಗೆ ಅದು ರಾಜಕೀಯ ರೂಪವನ್ನು ಪಡೆಯಿತು. ವಿರೋಧ ಪಕ್ಷದವರು ಮಾಧ್ಯಮದವರ ಮುಂದೆ ತಮ್ಮಕಾಳಜಿಯನ್ನು ತೋಡಿಕೊಂಡರು. ಈ ಎಲ್ಲ ಗಮನ ಸೆಳೆಯುವ ಚಟುವಟಿಕೆಗಳಿಂದ ಎಚ್ಚೆತ್ತ ರಾಜ್ಯ ಸರಕಾರ ಇದರ ವಿಚಾರಣೆಗೆ ಆದೇಶವನ್ನು ನೀಡಿತು. ರಾಜ್ಯದ ಮುಖ್ಯ ಮಂತ್ರಿ ನವೀನ ಪಟ್ನಾಯಕ್ ತಕ್ಷಣ ಮರ ಕಡಿಯುವುದನ್ನು ನಿಲ್ಲಿಸುವಂತೆ ಆದೇಶವಿತ್ತರು.

ಇತ್ತ ಹಳ್ಳಿಯ ಮಹಿಳೆಯರು ಕಡಿದ ಮರಗಳನ್ನು ತೆಗೆಯಲು ಬಿಡದೇ ಆ ಬೊಡ್ಡೆಗಳ ಪೂಜೆ ಮಾಡಿದರು ಅವುಗಳನ್ನು ಉಳಿಸಲು ಸಾಧ್ಯವಾಗದೇ ಇದ್ದದ್ದಕ್ಕಾಗಿ ಕ್ಷಮೆ ಕೇಳಿದರು, ನಂತರ ಅದೇ ಸ್ಥಳಗಳಲ್ಲಿ ಹಣ್ಣಿನ ಮರಗಳ ಸಸಿಗಳನ್ನು ನೆಟ್ಟರು. ಮುಂದೆಂದೂ ಮರ ಕಡಿಯಲು ಬಿಡುವುದಿಲ್ಲ ಎಂದು ಪ್ರಮಾಣ ಮಾಡಿದರು.

ನವೆಂಬರ್ ಹತ್ತೊಂಭತ್ತರಂದು ಈ ಯೋಜನೆಯನ್ನು ಕೈ ಬಿಟ್ಟಿರುವುದಾಗಿ ಮುಖ್ಯ ಮಂತ್ರಿಗಳು ಘೋಷಿಸಿದಾಗ ಹಳ್ಳಿಯ ಜನ ನಿರಾಳವಾಗಿ ಉಸಿರಾಡಿದರು. ಈ ಹೋರಾಟದಲ್ಲಿ ಮತ್ತೊಮ್ಮೆ ಮಹಿಳೆಯರು ತಮ್ಮ ಪರಿಸರದ ಬಗೆಗಿನ ಬದ್ಧತೆಯನ್ನು  ತೋರಿಸಿದರು, ಹೋರಾಡಿದರು ಮತ್ತು ಜಯಗಳಿಸಿದರು.

ಈ ಘಟನೆ ಮತ್ತೊಮ್ಮೆ ೧೯೭೩ ರ ಚಿಪ್ಕೋ ಚಳುವಳಿಯನ್ನು, ಅದರೊಂದಿಗೆ ಅಂದು ಹೋರಾಡಿದ ಗೌರಾದೇವಿ, ಸುರಕ್ಷಾ ದೇವಿ, ಸುದೇಶಾ ದೇವಿ ಅವರನ್ನು ನೆನೆಯುವಂತೆ ಮಾಡಿತು. ಉತ್ತರಾಖಂಡ್  ಚಮೋಲಿ ಜಿಲ್ಲೆಯ ರೇನಿ ಹಳ್ಳಿಯ ಸಮೀಪದ ೨೫೦೦ ಮರಗಳನ್ನು ಉಳಿಸಲು ಇವರು ಮಾಡಿದ ಹೋರಾಟ ಇತಿಹಾಸದಲ್ಲಿ ದಾಖಲಾಗಿದೆ. ೧೯೭೪ ರ ಮಾರ್ಚ್ ೨೫ ರಂದು , ಮರ ಕಡಿಯುವವರು ಕಾಡಿಗೆ ಬಂದಿದ್ದರು. ರೇನಿ ಹಳ್ಳಿಯ ಗಂಡಸರೆಲ್ಲ ಚಮೋಲಿ ಹಳ್ಳಿಯಲ್ಲಿದ್ದರು. ಅವರನ್ನು ಸರಕಾರ ಮತ್ತು ಗುತ್ತಿಗೆದಾರರು, ಅವರನ್ನು ಪರಿಹಾರದ ನೆಪದಲ್ಲಿ ಸೆಳೆದಿದ್ದರು. ಇತ್ತ ಕಾಡಿಗೆ ಟ್ರಕ್ ಬಂತು, ಇದನ್ನು ನೋಡಿ ಸ್ಥಳೀಯ ಹುಡುಗಿಯೊಬ್ಬಳು ಓಡಿ ಹೋಗಿ ಗೌರಾದೇವಿಗೆ ಸುದ್ದಿ ಮುಟ್ಟಿಸಿದಳು. ವಿಷಯ ತಿಳಿದ ಗೌರಾ ದೇವಿ ಹಳ್ಳಿಯ ೨೭ ಮಹಿಳೆಯರ ಜೊತೆಗೂಡಿ ಕಾಡಿಗೆ ಬಂದು ಮರಕಡಿಯಲು ಬಂದಿದ್ದವರೊಡನೆ ಮಾತಾಡಲು ಪ್ರಯತ್ನಿಸಿದರು, ಅದು ಸಾಧ್ಯವಾಗದೇ ಇದ್ದಾಗ ಗನ್ ಹಿಡಿದಿದ್ದ ಅವರೊಡನೆ ಈ ಮಹಿಳೆಯರು ಹೋರಾಟಕ್ಕೆ ಇಳಿದರು, ಮರ ಕಡಿಯಲು ಸಾಧ್ಯವಾಗದಂತೆ ಮರವನ್ನು ಅಪ್ಪಿ ನಿಂತರು. ಇದು ಬಹಳ ಹೊತ್ತು ನಡೆಯಿತು. ರಾತ್ರಿಯೆಲ್ಲ ಮಹಿಳೆಯರು ಮರಗಳನ್ನು ಕಾಯ್ದರು. ಇದು ಮರು ದಿನ ಬಹಳ ಜನರನ್ನು ಆಕರ್ಷಿಸಿತು. ಹಾಗೂ ನಾಲ್ಕು ದಿನಗಳ ವರೆಗೆ ನಡೆಯಿತು. ಕೊನೆಗೆ ಗುತ್ತಿಗೆದಾರರು ಕಾಡು ಬಿಟ್ಟು ತೆರೆಳಿದ್ದರು.

ಇದು ಇತಿಹಾಸವನ್ನು ಸ್ರಷ್ಟಿಸಿತು. ಮತ್ತು ಅದೇ ಇತಿಹಾಸ ಮರುಕಳಿಸಿದೆ. ಮಹಿಳೆಯರು ಮನಸ್ಸು ಮಾಡಿದರೆ, ಏನನ್ನಾದರೂ ಮಾಡಬಲ್ಲರು, ಹಾಗೂ ಪರಿಸರದ, ಸಂರಕ್ಷಣೆಯ ವಿಷಯ ಬಂದಾಗ, ಮರ, ಗಿಡ, ಪ್ರಾಣಿಗಳನ್ನುಉಳಿಸುವ ಸಂದರ್ಭ ಬಂದಾಗ ಆಕೆ ಸದಾ ಮುಂದು.

ಸುಮಂಗಲಾ ಎಸ್. ಮುಮ್ಮಿಗಟ್ಟಿ
.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *