ವಿಜ್ಞಾನಮಯಿ/ ಮಗುವಿನ ನಡವಳಿಕೆ: ತಾಯಿಯೊಬ್ಬಳದ್ದೇ ಹೊಣೆಯಲ್ಲ- ಸುಮಂಗಲಾ ಎಸ್. ಮುಮ್ಮಿಗಟ್ಟಿ
ಮಗುವಿಗೆ ಒಳಿತು, ಕೆಡುಕು ಹೇಳಿಕೊಡುವ ಜವಾಬ್ದಾರಿ ತಾಯಿಗೆ ಮಾತ್ರ ಸೇರಿಲ್ಲ. ಅಪ್ಪನೂ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ಈ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಆಗ ಮಾತ್ರ ಮಣ್ಣಿನ ಮುದ್ದೆಯಂತಿರುವ ಕೂಸನ್ನು ಜಬಾಬ್ದಾರಿಯುತ ನಾಗರಿಕನಾಗಿ/ಳಾಗಿ ರೂಪಿಸಲು ಸಾಧ್ಯ.
ಅದೊಂದು ಸಮಾರಂಭ ಬಹಳ ಜನ ಒಂದೆಡೆ ಸೇರಿದ್ದರು. ಅಲ್ಲಿ ಸುಮಾರು ಮೂರು ವರ್ಷದ ಮಗುವೊಂದು ಎಲ್ಲರ ಗಮನ ಸೆಳೆಯುತ್ತ ಓಡಾಡುತ್ತಿತ್ತು, ಎಲ್ಲರೊಂದಿಗೆ ಯಾವುದೇ ಸಂಕೋಚವಿಲ್ಲದೆಯೇ ಮಾತಾಡುತ್ತಿದ್ದ ಅ ಮಗುವನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಆದರೆ ಮಗುವಿನ ತಾಯಿ ಮಾತ್ರ ಮಗುವನ್ನು ಒಂದೆಡೆ ಕೂತುಕೊಳ್ಳುವಂತೆ ಮಾಡಲು ಪ್ರಯತ್ನಿಸುತ್ತಿದ್ದಳು. ಆಕೆಯ ಮುಖದ ಮೇಲೆ ದುಗುಡವೂ ಇತ್ತು.
“ ಯಾಕೆ ? ಆಡಲಿ ಬಿಡಿ” ಎಂದು ನಾನು ಹೇಳಿದಾಗ, “ ಅಯ್ಯೋ ಅವನು ಬಹಳ ತುಂಟ ಯಾವಾಗ ಏನ್ ಮಾಡ್ತಾನೆ ಹೇಳಕ್ಕಾಗಲ್ಲ”, ಎಂದು ಆಕೆಯ ಮಾತಿನ್ನೂ ಮುಗಿದಿರಲಿಲ್ಲ, ಆಗ ಇನ್ನೊಂದು ಮಗು ಜೋರಾಗಿ ಅಳಲು ಪ್ರಾರಂಭಿಸಿತು. ಈ ಮೊದಲ ಹುಡುಗ ತನ್ನೊಡನೆ ಆಡಲು ಬಂದ ಮತ್ತೊಂದು ಹೆಣ್ಣು ಮಗುವಿಗೆ ಹೊಡೆದಿದ್ದ.
ಆ ಮಗುವಿನ ತಾಯಿ, ಈಕೆಯತ್ತ ನೋಡುತ್ತಾ ತನ್ನ ಮಗುವನ್ನು ಸಂತೈಸುತ್ತಿದ್ದಳು. ಈಕೆ ತಕ್ಷಣವೇ ಓಡಿ ಹೋಗಿ “ ಸಾರಿ, ಎ ಚಿನ್ನು ಬಾ ಇಲ್ಲಿ ನೋಡು ಪಾಪ ಹೇಗ್ ಹೊಡಿದಿಯಾ ಹಾಗೆಲ್ಲ ಮಾಡಾಬಾರದು ಕಂದಾ ನೋವಾಗಲ್ವಾ?” ಎಂದಳು. ಆ ಹುಡುಗನೂ ಬಂದು ಆ ಮಗುವಿನ ಕೆನ್ನೆ ಮುಟ್ಟುತ್ತಾ “ ಸಾರೀ” ಎಂದ. ಅಷ್ಟರಲ್ಲಿ ಅದುವರೆಗೆ ಎಲ್ಲಿದ್ದನೋ ಆ ಹುಡುಗನ ತಂದೆ ಬಂದು “ ಮಕ್ಕಳು ಏನ್ ಗೊತ್ತಾಗುತ್ತೆ ಅವಕ್ಕೆ ಅಷ್ಟಕ್ಕೇ ಸಾರಿ ಎಲ್ಲಾ ಕೇಳ್ಸೋದಾ ಚಿಕ್ಕ ಮಗು ಹತ್ರ” ಎಂದು ಹೆಂಡತಿಗೆ ರೇಗಿ “ ಬಾ ಚಿನ್ನು ನಿಂಗೆ ಕಾಟನ್ ಕ್ಯಾಂಡಿ ಕೊಡಿಸ್ತೀನಿ” ಎಂದು ಮಗುವನ್ನು ಎತ್ತಿಕೊಂಡು ಹೋದ.
ಪೆಚ್ಚು ಮೋರೆ ಹಾಕಿದ ಈಕೆ ಮತ್ತೆ ನಾನಿದ್ದಲ್ಲಿಗೆ ಬಂದು ಕುಳಿತಳು ಮುಖದಲ್ಲಿ ಸಿಟ್ಟು ಅವಮಾನ ಎಲ್ಲ ಮೇಳೈಸಿದ್ದವು. “ ಹೋಗಲಿ ಬಿಡಿ ಬೇಜಾರ್ ಮಾಡ್ಕೋ ಬೇಡಿ ಇವೆಲ್ಲ ಕಾಮನ್” ನಾನಂದಾಗ ಆಕೆಯ ಕಣ್ಣಲ್ಲಿ ನೀರಾಡಿತು “ ಇದು ಇಷ್ಟಕ್ಕೆ ಮುಗಿಯಲ್ಲ ಮನೆಗ್ ಹೋದ ಮೇಲೆ ನಂಗೆ ಅತ್ತೆ, ಮಾವ, ನಾದಿನಿ, ಎಲ್ಲ ಸೇರಿ ಕ್ಲಾಸ್ ತಗೊತಾರೆ ” ಎಂದಳು . “ ನಾನು ಮಗೂಗೆ ಏನೂ ಹೇಳಬಾರದು, ತಪ್ಪು ಮಾಡಿದರೆ ತಿದ್ದಬಾರದು, ಹೀಗಾದ್ರೆ ಮಗೂಗೆ ಶಿಸ್ತು ಕಲಿಸೋದು ಹೇಗೆ ನೀವೇ ಹೇಳಿ?” ಅಸಹಾಯಕತೆ ಆಕೆಯಲ್ಲಿ ತುಂಬಿತ್ತು. ಮುಂದೆ ಆಕೆಯೂ ನಾನೂ ಯೋಚಿಸುವವರಂತೆ ಸುಮ್ಮನೆ ಕುಳಿತೆವು.
ಮನೆಗೆ ಬಂದ ಮೇಲೆ ನನ್ನ ತಲೆಯಲ್ಲಿ ಅದೇ ಯೋಚನೆ ಕೊರೆಯುತ್ತಿತ್ತು. ಮಕ್ಕಳ ಬೆಳವಣಿಗೆ ಮತ್ತು ಪೋಷಕತ್ವ ಯಾಕೆ ಇಷ್ಟೊಂದು ಸಮಸ್ಯಾತ್ಮಕವಾಗಿದೆ? ತಾಯಿಯಾದವಳಿಗೆ ತನ್ನ ಮಗು ಶಿಸ್ತಿನಿಂದ ಬೆಳೆಯಲಿ, ಸರಿ ತಪ್ಪನ್ನು ಮಗುವಿಗೆ ತಿಳಿಸಿ ಹೇಳುವ ಹಕ್ಕೂ ಇಲ್ಲವೇ? ಯಾವ ತಾಯಿಯೂ ತನ್ನ ಮಗುವಿಗೆ ಕೆಡುಕುಂಟಾಗಲಿ ಎಂದು ಬಯಸುವುದಿಲ್ಲ? ಯಾಕಿಂತಹ ಸಮಸ್ಯೆ ಎದುರಾಗುತ್ತದೆ? ಎಂಬ ಪ್ರಶ್ನೆಗಳು ಸುಳಿದಾಡಿದವು.
ತಾಯಿ ಮಾತ್ರ ಗುರುವಲ್ಲ
ಸಾಮಾನ್ಯವಾಗಿ ಮಗು ಮೊದಲ ಒಂದು ವರ್ಷ ತಾಯಿಯ ಸಾಮೀಪ್ಯದಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತದೆ. ಆನಂತರ ಮಗು ಮನೆಯ ಇತರ ಸದಸ್ಯರ ಕೈಗೂಸಾಗುತ್ತದೆ. ಮಾತ್ರವಲ್ಲ ಮನೆಯವರೆಲ್ಲರ ಕಣ್ಮಣಿಯೂ ಆಗುತ್ತದೆ. ಒಟ್ಟು ಕುಟುಂಬಗಳಲ್ಲಿ ಮಗುವಿನ ಸ್ನಾನ, ಊಟ, ಶುಚಿಗೊಳಿಸುವಿಕೆ ಮುಂತಾದ ಕೆಲಸಗಳ ನಂತರ ಮಗುವನ್ನು ಇತರ ಸದಸ್ಯರು ಆಟವಾಡಿಸುತ್ತಾರೆ ಅಥವಾ ದುಡಿವ ಮಹಿಳೆಯಾಗಿದ್ದರೆ ಕೆಲಸದವರು ಮತ್ತು ಬೇಬಿ ಸಿಟ್ಟಿಂಗ್ ನಲ್ಲಿ ಕಳೆಯುತ್ತದೆ.
ವಿಜ್ಞಾನಿಗಳ ಪ್ರಕಾರ ಈ ಹಂತದಲ್ಲಿ ಮಗುವಿನ ಕಲಿಕೆ ವೇಗವಾಗಿರುತ್ತದೆ. ಮಾತ್ರವಲ್ಲ, ಮಗುವಿನ ಕುತೂಹಲವೂ ಹೆಚ್ಚಾಗಿರುತ್ತದೆ. ಆದುದರಿಂದ ಮಗು ಇರುವ ವಾತಾವರಣ, ಮಗು ಏನನ್ನು ನೋಡುತ್ತದೆ ಹಾಗೂ ಏನನ್ನು ಕೇಳುತ್ತದೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಮಗುವಿಗೇನೂ ಗೊತ್ತಾಗುವುದಿಲ್ಲ ಎಂದುಕೊಂಡು ನಾವು ಮಾಡುವ ಕೆಲಸಗಳು ಮಾತಾಡುವ ವಿಷಯಗಳು ಅದರ ಮೇಲೆ ಬಹಳ ಪ್ರಭಾವ ಬೀರುತ್ತವೆ.
ಮಗುವಿಗೆ ಈ ಹಂತದಲ್ಲಿ ನಾವೇನು ಕಲಿಸುತ್ತೇವೆ ಅದು ಬಹಳ ಕಾಲ ಕೆಲವೊಮ್ಮೆ ಜೀವನದಾದ್ಯಂತ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ನಾವು ಭಾರತೀಯ ಮಧ್ಯಮ ವರ್ಗದ ಕುಟುಂಬಗಳಲ್ಲಿ ಕಾಣುವ ಅಂಶ ಮೇಲೆ ಹೇಳಿದ ಉದಾಹರಣೆಯಂತೆ ಇರುತ್ತದೆ. ತಾಯಿ ಮಗುವಿಗೆ ಶಿಸ್ತನ್ನು ಕಲಿಸಲು ಪ್ರಯತ್ನಿಸಿದಾಗ ಮನೆಯ ಇತರ ಸದಸ್ಯರು ಆಕೆಯನ್ನು ಅಲ್ಲಗಳೆದು ಮಗುವನ್ನು ಮುದ್ದುಗರೆಯುತ್ತಾರೆ. ಮಗುವಿನ ಮಿದುಳು ತನಗೆ ಹಿತವಾದುದನ್ನು ಆಯ್ದು ಕೊಳ್ಳುತ್ತದೆ ಮತ್ತು ಅದನ್ನು ಮಾಡುವುದು ತಪ್ಪು ಎಂದು ಮಗುವಿಗೆ ತಿಳಿಯುವುದೇ ಇಲ್ಲ. ಇದು ನಿರಂತರವಾಗಿ ನಡೆದಾಗ ಮಗು ಅದಕ್ಕೇ ಹೊಂದಿಕೊಳ್ಳುತ್ತದೆ ಹಾಗೂ ಅದಕ್ಕೆ ವಿರುದ್ಧವಾಗಿ ಏನನ್ನಾದರೂ ಹೇಳಿದಾಗ ಮಿದುಳು ಅದನ್ನು ಒಪ್ಪುವುದಿಲ್ಲ. ಮಗು ದೊಡ್ಡಾವನಾದ ಮೇಲೆ ಇದನ್ನು ತಿದ್ದಲು ಪ್ರಯತ್ನಿಸಿದರೆ,ಅದನ್ನು ಪ್ರತಿರೋಧಿಸುತ್ತಾರೆ ಆಗ ಘರ್ಷಣೆ ಆರಂಭವಾಗುತ್ತದೆ.
ಆಗಲೂ ಮಕ್ಕಳನ್ನು ಸರಿಯಾಗಿ ಬೆಳಸಲಿಲ್ಲ ಎಂಬ ಅಪವಾದ ತಾಯಿಯ ಮೇಲೇ ಬರುತ್ತದೆ. ಹಾಗಾದರೆ ಈಗೇನು ಮಾಡಬೇಕು? ತಾಯಿ ಮಾತ್ರ ಮಗುವನ್ನು ಶಿಸ್ತಿನಿಂದ ಬೆಳೆಸಬೇಕು, ಉಳಿದ ಸದಸ್ಯರು ಮಗುವಿನ ಆಟದ ಮಜವನ್ನು ಮಾತ್ರ ತೆಗೆದುಕೊಳ್ಳಬೇಕು ಎನ್ನುವ ಅಭಿಪ್ರಾಯವನ್ನು ಬದಲಿಸಬೇಕು. ಪೋಷಕತ್ವವೆಂದರೆ, ಕೇವಲ ಮಗುವಿಗೆ ಬೇಕಾದುದನ್ನು ಕೊಡುವುದಲ್ಲ. ಬದಲಾಗಿ ಮಗುವಿಗೆ ಸರಿಯಾದುದನ್ನು ಕೊಡುವುದು.
ಈಗ ಮಾತ್ರ ಯಾಕೀ ಸಮಸ್ಯೆ?
ಮನೆಯಲ್ಲಿಯ ಹಿರಿಯರು ಅಥವಾ ಒಂದೆರೆಡು ತಲೆಮಾರಿನ ಹಿಂದಿನವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಮಕ್ಕಳನ್ನು ಬೆಳೆಸುವ ಕೆಲಸ ನಿಜಕ್ಕೂ ಇಷ್ಟೊಂದು ಕಷ್ಟವೇ, ನಾವೆಲ್ಲ ಮಕ್ಕಳನ್ನು ಬೆಳಸಲಿಲ್ಲವೇ ಎನ್ನುತ್ತಾರೆ. ಹೌದು ಅವರು ಹೇಳುವುದೂ ಸರಿಯೇ ಒಂಅದಲ್ಲ ಮೂರು, ನಾಲ್ಕು ಮಕ್ಕಳನ್ನು ಅವರೆಲ್ಲ ಬೆಳಸಿದ್ದಾರೆ. ಆದರೆ ಅಂದಿಗೂ ಇಂದಿಗೂ ಪರಿಸ್ಥಿತಿ ಬದಲಾಗಿದೆ, ಇಂದು ಇರುವ ಒಂದು ಅಥವಾ ಎರಡು ಮಕ್ಕಳಿಗೆ ಮನೆಯ ಎಲ್ಲ ಸದಸ್ಯರ, ಗಮನ ಪ್ರೀತಿ ದೊರೆಯುತ್ತಿರುತ್ತದೆ ಹೀಗಾಗಿ ಮಕ್ಕಳ ಮಿದುಳು ಸದಾ ಅದಕ್ಕೆ ಹೊಂದಿಕೊಂಡಿರುತ್ತದೆ ಯಾವುದೇ ಚಿಕ್ಕ ಕಾರಣಕ್ಕೂ ಅದಕ್ಕೆ ಚ್ಯುತಿ ಬಂದಾಗ ಅದನ್ನು ಒಪ್ಪಿಕೊಳ್ಳಲು ಅದು ಸಿದ್ಧವಿರುವುದಿಲ್ಲ ಹಾಗೂ ಅದು ಋಣಾತ್ಮಕ ಗುಣವಾಗಿ ಪರಿವರ್ತನೆ ಹೊಂದುತ್ತದೆ ಎನ್ನುತ್ತಾರೆ ಮನೋವಿಜ್ಞಾನಿಗಳು.
ಇಂದು ಮಕ್ಕಳಿಗೆ ಬಾಲ್ಯದಲ್ಲಿಯೇ ದೊರಕುವ ವಿವಿಧ ಮಾಹಿತಿಗಳು, ಮಾಧ್ಯಮಗಳು ಅವರನ್ನು ಆಕರ್ಷಿಸುತ್ತಿರುವಾಗ ತಾಯಿಯಾದವಳು ಮಾತ್ರ ಮಗುವಿಗೆ ಸರಿ ತಪ್ಪನ್ನು ಕಲಿಸುವುದು ಸಾಧ್ಯವಿಲ್ಲ. ಅದರಲ್ಲೂ ಮನೆಯ ಇತರ ಸದಸ್ಯರು ಮಗುವಿನೆದುರೇ ಆಕೆಯನ್ನು ಹಾಗೆ ಮಾಡುವುದು ತಪ್ಪು ಎಂದಾಗ. ಕೆಲೆವೆಡೆ ಮಕ್ಕಳು ತಾಯಿಗೆ ಗೌರವ ಕೊಡುವುದನ್ನೂ ಬಿಡುತ್ತಾರೆ. ಇದು ತಂದೆಯ ವಿಷಯದಲ್ಲಿಯೂ ಸತ್ಯ ಎನ್ನುವುದನ್ನು ಮರೆಯಬಾರದು.
ಇದು ಮಕ್ಕಳಿಗೆ ಸೋಲನ್ನು ಒಪ್ಪಿಕೊಳ್ಳುವುದನ್ನು ತಡೆಯುತ್ತದೆ. ಹಾಗಾಗಿ ದೊಡ್ಡವರಾದ ಮಕ್ಕಳಿಗೆ ಅಂದುಕೊಂಡ ಯಶಸ್ಸು ದೊರೆಯದಿದ್ದಾಗ ಆತ್ಮಹತ್ಯೆಗೆ ಶರಣಾಗುತ್ತಾರೆ. ಇಂತಹ ಅವಘಡಗಳು ಸಂಭವಿಸಬಾರದು ಎನ್ನುವುದಾದರೆ ಮನೆಯ ಎಲ್ಲ ಸದಸ್ಯರು ಒಬ್ಬರು ಮತ್ತೊಬ್ಬರಿಗಿಂತ ಮಗುವಿಗೆ ಒಳ್ಳೆಯವರಾಗಲು ಪ್ರ್ಯತ್ನಿಸದೆ , ಕೇವಲ ತಾಯಿಯ ಮೇಲೆ ಮಗುವಿನ ಜವಾಬ್ದಾರಿಯನ್ನು ಬಿಡದೆ, ಒಂದಾಗಿ ಒಳ್ಳೆಯತನವನ್ನು ಕಲಿಸಬೇಕು ಅದು ಮಕ್ಕಳಿಗೆ, ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಒಳಿತನ್ನುಂಟು ಮಾಡುತ್ತದೆ.
ಸುಮಂಗಲಾ ಎಸ್. ಮುಮ್ಮಿಗಟ್ಟಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.