ವಿಜ್ಞಾನಮಯಿ/ ಪ್ಯಾಡ್‌ ವಿಲೇವಾರಿ ಸುರಕ್ಷಿತವಾಗಿರಲಿ – ಸುಮಂಗಲಾ ಎಸ್. ಮುಮ್ಮಿಗಟ್ಟಿ

 

ಸ್ಯಾನಿಟರಿ ಪ್ಯಾಡ್‌ಗಳ ಬಳಕೆ ಮಹಿಳೆಯ ಬದುಕನ್ನು ಹಗುರವಾಗಿಸಿದರೂ ಅವುಗಳ ವಿಲೇವಾರಿಯೇ ಈಗ ದೊಡ್ಡ ಸಮಸ್ಯೆಯಾಗಿದೆ. ಪರಿಸರಕ್ಕೆ ಹಾನಿಯಾಗದಂತೆ ಪ್ಯಾಡ್‌ಗಳನ್ನು ವಿಲೇವಾರಿ ಮಾಡುವುದು ಕಡ್ಡಾಯವಾಗಬೇಕು

 

ವಿಜ್ಞಾನ ಮಹಿಳೆಯ ಬದುಕನ್ನು ತನ್ನ ಆವಿಷ್ಕಾರಗಳ ಮುಖಾಂತರ ಸದಾ ಹಸನಾಗಿಸುತ್ತಲೇ ಬಂದಿದೆ. ಆದರೆ, ಒಮ್ಮೊಮ್ಮೆ ಒಂದಕ್ಕೆ ಕಂಡುಕೊಂಡ ಪರಿಹಾರ ಮತ್ತೊಂದು ಸಮಸ್ಯೆಯಾಗಿ ಪರಿಣಮಿಸುವುದುಂಟು. ಅಂತಹದೇ ಪರಿಣಾಮ ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್‌ನ ವಿಷಯದಲ್ಲಿಯೂ ಆಯಿತು, ಪ್ಯಾಡ್‌ಗಳು ಮಹಿಳೆಗೆ ಹೊಸ ಬಗೆಯ ಸ್ವಾತಂತ್ರ್ಯವನ್ನು ಕೊಟ್ಟಿರುವುದೇನೋ ನಿಜ, ಆದರೆ ಬಳಸಿದ ನಂತರ ಅವುಗಳ ವೈಜ್ಞಾನಿಕ ವಿಲೇವಾರಿಯೂ ಅಷ್ಟೇ ಮುಖ್ಯ, ಇದು ಇಡಿಯ ಜಗತ್ತಿನ ಸಮಸ್ಯೆಯಾದರು ಸಹ ಭಾರತದ ಜನ ಸಂಖ್ಯೆ ಹಾಗೂ ಇಲ್ಲಿಯ ಮುನಿಸಿಪಲ್ ವೇಸ್ಟ್ ನ ನಿರ್ವಹಣಾ ವಿಧಾನದಿಂದಾಗಿ ದೊಡ್ಡದೊಂದು ಸಮಸ್ಯೆಯಾಗಿದೆ.

ಅಧ್ಯಯನ ಒಂದರ ಪ್ರಕಾರ ಭಾರತದಲ್ಲಿ ಪ್ರತಿದಿನ 113000 ಟನ್ ಸ್ಯಾನಿಟರಿ ಕಸ ಅಂದರೆ ಸುಮಾರು 43.20 ಕೋಟಿ ಪ್ಯಾಡ್‌ಗಳು ಪ್ರತಿ ವರ್ಷ ಉತ್ಪಾದನೆಯಾಗುತ್ತಿವೆ. ಇವುಗಳಲ್ಲಿ80%  ಫ್ಲಶ್ ಗಳನ್ನು ಸೇರುತ್ತವೆ ಅಥವಾ ಹೂಳು ಗುಂಡಿಗಳಲ್ಲಿ(ಲ್ಯಾಂಡ್ ಫಿಲ್) ತುಂಬುತ್ತವೆ. ಒಮ್ಮೆ ಬಳಸಿದ ನಂತರ ಕಸದ ತೊಟ್ಟಿಯನ್ನು ಸೇರುವ ಈ  ಪ್ಯಾಡ್‌ಗಳು ಸುತ್ತಲಿನವರ ಆರೋಗ್ಯ ಮತ್ತು ಪರಿಸರ ಎರಡಕ್ಕೂ ಹಾನಿಕರ.

ಮಹಿಳೆಯ ಋತುಸ್ರಾವದ ದಿನಗಳನ್ನು ಗುಟ್ಟಾಗಿ ನಿರ್ವಹಿಸುವ ನಮ್ಮಲ್ಲಿ ಪ್ಯಾಡ್‌ ನ ವಿಲೇವಾರಿಯೂ ಕೂಡ ಒಂದು ಸಂಕೋಚದ ವಿಷಯವೇ, ಪರಿಸ್ಥಿತಿ ಹೀಗಿರುವಾಗ ಸಾಮಾನ್ಯವಾಗಿ ಮಹಿಳೆಯರು ಬಳಸಿದ ಪ್ಯಾಡ್‌ಗಳನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿ ಹಾಕಿ ಮನೆಯ ಇತರ ಕಸದೊಂದಿಗೆ ಎಸೆದು ಬಿಡುತ್ತಾರೆ. ಇಲ್ಲವೇ ತಮ್ಮ ಶೌಚಾಲಯದಲ್ಲಿ ಫ್ಲಶ್ ಮಾಡುತ್ತಾರೆ. ಎರಡೂ ಅನಾರೋಗ್ಯಕರ ಅಭ್ಯಾಸಗಳೇ. ಕಸದ ತೊಟ್ಟಿಯನ್ನು ಸೇರಿದ ಪ್ಯಾಡ್ ಗಳು ಅಲ್ಲಿ ಮೈಕ್ರೋಬ್ ಗಳು ಸಾಲ್ಮೊನೆಲ್ಲಾ,ಇ.ಕೊಲೈ, ಸ್ಟಾಫಿಲೋಕಾಕಸ್, ಎಚ್.ಐ.ವಿ ಹಾಗೂ ಹೆಪಟೈಟಿಸ್ ಉಂಟು ಮಾಡುವಮಾಡುವ ರೋಗಾಣುಗಳು  ಸುತ್ತಲಿನ ಪರಿಸರದಲ್ಲಿಹರಡಲು ಪ್ರಾರಂಭವಾಗುತ್ತವೆ. ಕಸದ  ವಿಂಗಡಣೆ ಮಾಡುವ ಹುಡುಗರು ತಮ್ಮ ಕೈಯಿಂದ ಈ ಕಸವನ್ನುವಿಂಗಡಣೆ ಮಾಡುವಾಗ ಈ ರೋಗಗಳ ಸೋಂಕಿಗೆ ಒಳಗಾಗುತ್ತಾರೆ. ಸೋಂಕು ಅಲ್ಲಿರುವ ಕಸಕ್ಕೆಲ್ಲಾ ಹರಡಿ ಕಸ ರೋಗದ ಕೂಪವಾಗುತ್ತದೆ. ಇದು ಸುತ್ತಲಿನ ಪರಿಸರದ ಮೇಲೆಯೂ ಪರಿಣಾಮ ಬೀರುತ್ತದೆ.

ಇದಾದ ನಂತರ ಡಂಪ್ ಯಾರ್ಡ್‌ಗಳನ್ನು ಸೇರಿದ ಕಸವನ್ನು ಸುಡುತ್ತಾರೆ, ಇಲ್ಲವೇ ಕಾಂಪೋಸ್ಟ್ ಮಾಡುತ್ತಾರೆ. ಆದರೆ ಬಯೋಮೆಡಿಕಲ್ ತ್ಯಾಜ್ಯದ  ಗುಂಪಿಗೆ ಸೇರುವ ಪ್ಯಾಡ್‌ಗಳಿಗೆ ಈ ಎರಡೂ ವಿಧಾನದ ಸಂಸ್ಕರಣೆ ಸಾಧ್ಯವಿಲ್ಲ. ಆದ್ದರಿಂದ ಇವುಗಳನ್ನು ಇನ್ಸಿನೇಟರುಗಳಲ್ಲಿ ಅಧಿಕ ತಾಪಮಾನದಲ್ಲಿ ಸುಡಬೇಕು. ಅದೂ ಕೂಡಾ ವೈಜ್ಞಾನಿಕವಾಗಿ ಸರಿಯಾಗಿದ್ದರೆ ಮಾತ್ರ ಸುರಕ್ಷಿತ. ಇಲ್ಲವಾದಲ್ಲಿ ಮತ್ತೆ ಅಪಾಯ ಕಟ್ಟಿಟ್ಟದ್ದು. ಇನ್ಸಿರನೇಟರಗಳು ಎಲ್ಲೆಡೆ ಇರುವುದಿಲ್ಲ ಹಾಗಾಗಿ, ತೆರೆದ ವಾತಾವರಣದಲ್ಲಿಇದನ್ನು ಸುಟ್ಟಾಗ ಇದರಲ್ಲಿರುವ  ಪ್ಲಾಸ್ಟಿಕ್  ಸುಡುತ್ತದೆ. ಪ್ಯಾಡ್ ನ 90% ಪ್ಲಾಸ್ಟಿಕ್‌ನಿಂದಾಗಿದೆ. ಅದರ ಮೇಲಿನ ತೆಳುವಾದ ಪ್ಲಾಸ್ಟಿಕ್‌ನ  ಪದರ ಪಾಲಿಪ್ರೊಪಿಲೀನ್‌ನಿಂದ ಆಗಿದ್ದು, ಹೀರುವ ವಸ್ತುವಿನಲ್ಲಿ ಪಾಲಿಮರ್‌ಗಳು  ಇರುತ್ತವೆ ಮತ್ತೆ ಕೆಳ ಪದರವೂ ಪ್ಲಾಸ್ಟಿಕ್‌ನಿಂದಾಗಿದೆ.  ಇವುಗಳನ್ನು ಮಣ್ಣಿನಲ್ಲಿ ಹೂತಾಗ ಇವು ಜೈವಿಕವಾಗಿ ವಿಘಟನೆಗೊಳ್ಳದೇ ಸುಮಾರು ೮೦೦ ವರ್ಷಗಳ ಕಾಲ ಹಾಗೆಯೇ ಉಳಿಯುತ್ತವೆ. ತೆರೆದ ವಾತಾವರಣದಲ್ಲಿ ಸುಟ್ಟಾಗ ಹಾನಿಕಾರಕ ರಾಸಾಯನಿಕ ವಸ್ತುಗಳು ವಾತಾವರಣವನ್ನು ಸೇರುತ್ತವೆ. ಇವುಗಳಲ್ಲಿ ಡೈಯಾಕ್ಸಿನ್‌ಗಳು ಮತ್ತು ಫ್ಯುರಾನ್‌ಗಳು ಪ್ರಮುಖವಾಗಿವೆ.

ಸಮಸ್ಯೆಯನ್ನುಅರಿತ ವಿಜ್ಞಾನ  ಮತ್ತೆ ಪರಿಹಾರಕ್ಕೆ ಮುಂದಾಗಿದೆ. ಪರಿಸರ ಪ್ರಿಯವೂ ಆಗಿದ್ದು, ಮಹಿಳೆಯ ಆರೋಗ್ಯಕ್ಕೆ ಸೂಕ್ತವೂ ಆಗಿರುವ ಪ್ಯಾಡ್‌ಗಳನ್ನುತಯಾರಿಸುವ ಪ್ರಯತ್ನನಡೆಯುತ್ತಿದೆ. ಆ ನಿಟ್ಟಿನಲ್ಲಿ ನಡೆದಿರುವ ಕೆಲವನ್ನು ತಿಳಿಯೋಣ.

ಮೆನಸ್ಟ್ರುವಲ್  ಕಪ್‌ಗಳು: ಇವು ಇತ್ತೀಚೆಗೆ ಮಾರುಕಟ್ಟೆಯನ್ನು ಪ್ರವೇಶಿಸಿದ ವಸ್ತುಗಳಾಗಿವೆ. ಇವುಗಳ ತಂತ್ರಜ್ಞಾನವೂ ಹೊಸದು. ಸದ್ಯಕ್ಕೆ ದುಬಾರಿಯೆನಿಸಿರುವ ಇವುಗಳ ಉತ್ಪನ್ನ ಹೆಚ್ಚಾದಾಗ ಬೆಲೆಯೂ ಕಡಿಮೆಯಾಗಿ ಮಹಿಳೆ ಮತ್ತುಪರಿಸರ ಎರಡೂ ಸುರಕ್ಷಿತವಾಗಲಿವೆ.

ಮೆನಸ್ಟ್ರುವಲ್  ಕಪ್‌ಗಳು ಮೃದುವಾದ ರಬ್ಬರಿನಿಂದಾದ ಕಪ್‌ ಆಕಾರದ ರಚನೆಗಳು. ಇವನ್ನು ಸುಲಭವಾಗಿ ಮಡಿಚಿ ಯೋನಿಯೊಳಗೆ ಸೇರಿಸಬಹುದಾಗಿದೆ. ಇದು ಋತುಸ್ರಾವವನ್ನು ಸಂಗ್ರಹಿಸುತ್ತದೆ. 6 ರಿಂದ 12 ಗಂಟೆಗಳವರೆಗೆ ಇವನ್ನು ಧರಿಸಬಹುದು. ಅವಶ್ಯಕತೆ ಕಂಡು ಬಂದಾಗ ಅದನ್ನು ಹೊರತೆಗೆದು ಖಾಲಿಮಾಡಿ ಮತ್ತೆ ಧರಿಸಬಹುದು. ಇದಕ್ಕಾಗಿ ಮಹಿಳೆಗೆ ಶೌಚಾಲಯ  ಸಾಕು, ಹಾಗಾಗಿ ಇದು ಆಕೆಗೆ ಯಾವುದೇ ಮುಜುಗುರವನ್ನುಂಟು ಮಾಡುವುದಿಲ್ಲ. ಸ್ವಚ್ಚವಾಗಿ ತೊಳೆದಿಟ್ಟ ಕಪ್ಪನ್ನು ಮುಂದಿನ ತಿಂಗಳು ಮತ್ತೆ ಮರುಬಳಸಬಹುದಾಗಿದೆ. ಇದರಿಂದಾಗಿ ಇದು ಪರಿಸರಸ್ನೇಹಿಯೂ ಹೌದು. ಬಳಕೆ ಹೆಚ್ಚಾಗಬೇಕಾದರೆ, ಬೆಲೆಯೂ ತಗ್ಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.

ಬಿದಿರಿನ ಫೈಬರಿನ ಪ್ಯಾಡ್‌ಗಳು; ಈ ರೀತಿಯ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಹೀರು ವಸ್ತುಗಳಾಗಿ ಬಿದಿರಿನ ಪಲ್ಪ್ ಬಳಸುತ್ತಾರೆ. ಇದರ ಹೀರುವ ಸಾಮರ್ಥ್ಯ ಅಧಿಕವಾಗಿರುವುದರಿಂದ, ಹಾಗು ಆಂಟಿಬ್ಯಾಕ್ಟೀರಿಯ ಗುಣವೂ ಇರುವುದರಿಂದ  ಜನಪ್ರಿಯವಾಗಿವೆ. ಇದರ ಜೊತೆಗೆ ಬಿದಿರಿನ ಇದ್ದಿಲು ಬಳಸಿದ ಪ್ಯಾಡ್ ಗಳು ಮಾರುಕಟ್ಟೆಯಲ್ಲಿವೆ. ಇವು ಮರು ಬಳಕೆ ಮಾಡಬಹುದಾಗಿವೆ.

ಬಾಳೆ ನಾರಿನ ಪ್ಯಾಡಗಳು; ”ಸಾಥಿ” ಎಂಬ ಹೆಸರಿನಿಂದ ಮಾರುಕಟ್ಟೆಯಲ್ಲಿ ಇವು ಲಭ್ಯ. ಇವುಗಳಲ್ಲಿ ಹೀರುವಸ್ತುವಾಗಿ ಬಾಳೆಯ ನಾರನ್ನುಬಳಸುತ್ತಾರೆ. ಇವು ಜೈವಿಕವಾಗಿ ವಿಘಟನೆಗೊಳ್ಳುವ ಪ್ಯಾಡ್ಗಳಾಗಿದ್ದು ಬಳಸಿದ ಆರು ತಿಂಗಳಿನಲ್ಲಿ ವಿಘಟನೆಯಾಗಿ ಮಣ್ಣು ಸೇರುತ್ತವೆ. ಬೆಲೆಯೂ ಕಡಿಮೆ ಆದ್ದರಿಂದ ಭಾರತದ ಗ್ರಾಮಾಂತರ ಪ್ರದೇಶದಲ್ಲಿ ಜನಪ್ರಿಯವಾಗಿವೆ.ಇದರ ಜೊತೆಗೆ ಮಹಿಳೆಯರು ಸಾಮಾನ್ಯವಾಗಿ ಅನುಭವಿಸುವ ತುರಿಕೆ, ಮೂತ್ರನಾಳದ ಸೋಂಕುಗಳು ಕೂಡ ಇದರಿಂದ ಆಗುವುದಿಲ್ಲ. ಯಾವುದೆ ರಾಸಾಯನಿಕ ವಸ್ತುವಿನ ಬಳಕೆ ಇದರಲ್ಲಿ ಆಗಿಲ್ಲ.

ಇದೇ ರೀತಿಯಲ್ಲಿ ಹಲವಾರು ನೈಸರ್ಗಿಕ ವಸ್ತುಗಳನ್ನು ಬಳಸಿ ಜೈವಿಕವಾಗಿ ವಿಘಟನೆಗೊಳ್ಳುವ ಸ್ಯಾನಿಟರಿ ಪ್ಯಾಡ್‌ ತಯಾರಿಕೆಯ ಪ್ರಯತ್ನಗಳು ಜಾರಿಯಲ್ಲಿವೆ. ಭಾರತದ ಎಲ್ಲ ಮಹಿಳೆಯರು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಬೇಕು ಎನ್ನುವುದಾದರೆ ಅವುಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಇಲ್ಲವೇ ಉಚಿತವಾಗಿ ದೊರೆಯಬೇಕು. ಇಂದು ಸುವಿಧಾ ಯೋಜನೆಯಲ್ಲಿ ಬಾಲಕಿಯರಿಗೆ ಪ್ಯಾಡ್‌ಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತಿವೆ.  ಆದರೆ, ಅವು ಜೈವಿಕವಾಗಿ ವಿಘಟನೆಗೊಳ್ಳುವ ಪ್ಯಾಡ್‌ಗಳಾದರೆ ಮತ್ತೂ ಉತ್ತಮ.

ಈ ಎಲ್ಲ ಪ್ರಯತ್ನಗಳಿಗೆ ವಿಜ್ಞಾನ ತಂತ್ರಜ್ಞಾನದ ಸಹಕಾರ ಅವಶ್ಯವಾಗಿದೆ. ಇದಕ್ಕಾಗಿ ಸಂಶೋಧನೆಗಳು ನಡೆಯುತ್ತಿವೆ.

ನಾವೇನು ಮಾಡಬೇಕು?

ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್‌ಗಳು ಪರಿಸರಕ್ಕೆ ಹಾನಿಕರ ಎಂದು ತಿಳಿದಿರುವ ನಾವೇನು ಮಾಡಬೇಕು, ಹೌದು ನಮ್ಮಲ್ಲಿ ಬಹಳಷ್ಟು ಸ್ತ್ರೀಯರು ವಾಣಿಜ್ಯಾತ್ಮಕವಾಗಿ ದೊರೆಯುವ ಪ್ಯಾಡ್‌ಗಳನ್ನು  ಬಳಸುತ್ತಾರೆ. ಅವುಗಳ ವಿಲೇವಾರಿಯನ್ನು ಸರಿಯಾದ ರೀತಿಯಲ್ಲಿ ಮಾಡಿದಲ್ಲಿ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಹಾಗಾದರೆ ವೈಜ್ಞಾನಿಕ ವಿಲೇವಾರಿ ಹೇಗಿರಬೇಕು?

ಬಳಸಿದ ಸ್ಯಾನಿಟರಿಪ್ಯಾಡ್‌ಗಳನ್ನು ಒಂದು ಕಾಗದದಲ್ಲಿ ಸುತ್ತಿ ಅದರ ಮೇಲೆ ಕೆಂಪು

ಇಂಕಿನಿಂದ ಕ್ರಾಸ್ ಎಳೆಯಿರಿ ಇದನ್ನು ಲೀಕ್‌ಫ್ರೂಫ್  ಫ್ಲಾಸ್ಟಿಕ್‌ನ ಚೀಲದಲ್ಲಿ ಇಟ್ಟು ಒಣಕಸದೊಂದಿಗೆ ಇರಿಸಿ. ಇದನ್ನು ಮನೆಯ ಹಸಿಕಸಕ್ಕೆ ಸೇರಿಸುವುದು ಬೇಡ.

ಇದು ಕಸ ವಿಲೇವಾರಿ ಮಾಡುವವರಿಗೆ ಸಹಾಯಕವಾಗುತ್ತದೆ. ನಂತರ ಅದರ ನಿರ್ವಹಣೆಗೂ ಅನುಕೂಲ.

ಈ ರೀತಿಯಾಗಿ ಸರಿಯಾದ ತಿಳಿವಳಿಕೆ ಹಾಗು ವೈಜ್ಞಾನಿಕ ಮನೋಭಾವದಿಂದ ಪ್ಯಾಡ್‌ ಗಳ ಬಳಕೆಯನ್ನು ಮಾಡಿದಲ್ಲಿ ಆರೋಗ್ಯ ಮತ್ತು ಪರಿಸರ ಎರಡು ಸುರಕ್ಷಿತ.

ಸುಮಂಗಲಾ ಎಸ್. ಮುಮ್ಮಿಗಟ್ಟಿ

 

 

 

 

 

 

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *