ವಿಜ್ಞಾನಮಯಿ/ ನಾರಿ ಮತ್ತು ನೀರು – ಸುಮಂಗಲಾ ಎಸ್. ಮುಮ್ಮಿಗಟ್ಟಿ

ನೀರಿಗೂ  ನಾಗರಿಕತೆಗೂ ಇರುವ ಸಂಬಂಧದಷ್ಟೇ ಬಲವಾದ  ಸಂಬಂಧ ನೀರಿಗೂ ನಾರಿಗೂ ಇದೆ.

ಬಿರು  ಬೇಸಿಗೆಯ  ಆರಂಭದೊಂದಿಗೆ  ನೀರಿನ ಬವಣೆಯೂ  ಕಾಲಿಟ್ಟಿದೆ.  ನೀರಿಗೂ  ನಾಗರಿಕತೆಗೂ ಇರುವ ಸಂಬಂಧದಷ್ಟೇ ಬಲವಾದ  ಸಂಬಂಧ ನೀರಿಗೂ ನಾರಿಗೂ ಇದೆ. ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ, ಮಾನವ ನಾಗರಿಕತೆಗಳು ನದಿ ತಟಗಳಲ್ಲಿ ನೆಲೆಯೂರಿದಾಗ ನೀರು ಅವನ  ನಿತ್ಯ ಜೀವನದ  ಅವಶ್ಯಕತೆಗಳಲ್ಲದೆ,  ಕೃಷಿಗೂ ಬಳಕೆಯಾಗಲು ಪ್ರಾರಂಭಿಸಿತು. ನದಿ ನೀರು ಉಕ್ಕೇರಿದಾಗ  ಆ ಬಯಲಿನಲ್ಲಿ ಬೆಳೆ ಬೆಳೆಯಲು ಆರಂಭವಾದ ವಿಧಾನ ನಿಧಾನವಾಗಿ ನದಿಯ ನೀರನ್ನೇ ಹೊಲಗಳಿಗೆ ಹರಿಸುವ ಪದ್ಧತಿಯಾಗಿ ಬದಲಾಯಿತು.

ಮಿತಿಯಿಲ್ಲದೆ  ಬೆಳೆದ  ನಗರಗಳಿಗೆ  ಪೈಪು ಗಳಲ್ಲಿ ನೀರಿನ  ಪೂರೈಕೆ ಆರಂಭವಾದಾಗ ನೀರಿನ   ಕೊರತೆಯ ಅನುಭವ ಮೆಲ್ಲಗೆ  ಕಾಲೂರಿತು. ಇತ್ತ ಹಳಿಗಳಲ್ಲಿ ನೀರು,  ಭಾವಿ, ಕೆರೆ,  ಬೋರ್ ವೆಲ್,ಇಲ್ಲವೇ ಸಮೀಪದ  ಯಾವುದಾದರೂ ನದಿಗೆ ಸೀಮಿತವಾಯಿತು.ಈ ಪರಿಸ್ಥಿತಿ  ಹಳ್ಳಿಗಳಲ್ಲಿ ಇಂದಿಗೂ  ಮುಂದುವರಿದಿದೆ. ನಮ್ಮ ದೇಶದ ರಾಜಾಸ್ಥಾನ, ಗುಜರಾತುಗಳಲ್ಲಿ ಗ್ರಾಮೀಣ ಭಾಗದ ಮಹಿಳೆಯರು ಇಂದಿಗೂ ಮೈಲುಗಟ್ಟಲೆ ನಡೆದು ಮನೆಗೆ ನೀರನ್ನು ಹೊತ್ತು ತರುತ್ತಾರೆ. ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ  ನೀರಿಗಾಗಿ  ಹೊಡೆದಾಟ, ಕೊಲೆಗಳು ನಡೆದಿರುವ ಉದಾಹರಣೆಗಳು ನಮ್ಮ ಮುಂದಿವೆ.ಬೇಸಿಗೆಯಲ್ಲಿ ಭಾವಿಗಳಲ್ಲಿಯ ನೀರಿನ ವರತೆಗಳು ಬತ್ತಿದಾಗ ರಾತ್ರಿಯಿಡಿ ನೀರಿಗಾಗಿ ಕಾಯುವ ಮಹಿಳೆಯರು ನಮ್ಮಲ್ಲಿ ಇದ್ದಾರೆ. ಇನ್ನು ನಗರಗಳಲ್ಲಿ ನಾಲ್ಕು, ಐದು ದಿನಗಳಿಗೊಮ್ಮೆ ಬರುವ ನೀರನ್ನು ಸಂಗ್ರಹಿಸಿಟ್ಟುಕೊಂಡು, ಮಿತವಾಗಿ ಬಳಸಿ ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮಹಿಳೆಯದಾಗಿರುತ್ತದೆ.

ಇದು ಕೇವಲ ನಮ್ಮ ರಾಜ್ಯದ ಅಥವಾ ನಮ್ಮ ದೇಶದ ಪರಿಸ್ಥಿತಿ ಎಂದು ಭಾವಿಸಬೇಕಿಲ್ಲ. ಇಡಿಯ ಜಗತ್ತಿನಾದ್ಯಂತ  ಮಹಿಳೆಯರು  ಒಟ್ಟು ಸರಿ ಸುಮಾರು  ಇಪ್ಪತ್ತು ಲಕ್ಷ  ಗಂಟೆಗಳನ್ನು ದಿನವೊಂದಕ್ಕೆ ನೀರು ಸಂಗ್ರಹಿಸಲು ವ್ಯಯಿಸುತ್ತಾರೆ ಎಂದು ಅಧ್ಯಯನದ ವರದಿಯೊಂದು ಹೇಳುತ್ತದೆ. ಇದರಲ್ಲಿ ಮಹಿಳೆ ನೀರಿನ ಮೂಲಗಳನ್ನು ತಲುಪಲು ತೆಗೆದುಕೊಳ್ಳುವ ಸಮಯ ಸೇರಿಲ್ಲ. ಅದಕ್ಕೆ ಮತ್ತೂ ಹೆಚ್ಚಿನ  ಸಮಯ ಬೇಕಾಗುತ್ತದೆ.

ಮಹಿಳೆಯ ಆರೋಗ್ಯ ಮತ್ತು ನೀರಿನ ನಡುವೆ ಸಹ ಬಹಳ ಹತ್ತಿರದ ಸಂಬಂಧವಿದೆ. ಋತುಸ್ರಾವ, ಪ್ರಸವದ ದಿನಗಳಲ್ಲಿ ಆಕೆಯ ವೈಯಕ್ತಿಕ  ಸ್ವಚ್ಚತೆ, ಆಕೆಗೆ ಸಿಗುವ ನೀರಿನ ಸ್ವಚ್ಚತೆ ಮತ್ತು ಪ್ರಮಾಣವನ್ನು ಅವಲಂಭಿಸಿರುತ್ತದೆ. ಇದರ ಕೊರತೆ ಆಕೆಯಲ್ಲಿ ಸೋಂಕನ್ನು ಉಂಟು ಮಾಡಬಹುದು.ನಿತ್ಯ ಕರ್ಮಗಳಿಗೂ ಸಹ ಮಹಿಳೆಯ ನೀರಿನ ಅವಶ್ಯಕತೆ ಹೆಚ್ಚು. ಅಡುಗೆ ಮನೆಯ ಜವಾಬ್ದಾರಿಯನ್ನು ಮಹಿಳೆ ತನ್ನದಾಗಿಸಿಕೊಂಡಾಗಿನಿಂದಲೂ  ಮನೆಯಲ್ಲಿ ನೀರಿನ ಪೂರೈಕೆಯ ಜವಾಬ್ದಾರಿ ಬಹುಪಾಲು ಆಕೆಯದೇ ಆಗಿದೆ.

ನಗರ, ಪಟ್ಟಣ ಇಲ್ಲವೇ ಗ್ರಾಮಗಳ ನೀರು ಪೂರೈಕೆಯ  ಚರ್ಚೆ ಬಂದಾಗ, ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದಾಗ ಮಾತ್ರ ಮಹಿಳೆ ಇರುವುದೇ ಇಲ್ಲ. ಆದರೆ ನೀರು ತರಲು ತಾಯಿಗೆ ಸಹಾಯ ಮಾಡಲೆಂದೇ ಬಹಳಷ್ಟು ಹುಡುಗಿಯರು ಶಾಲೆ ಬಿಟ್ಟಿರುವುದುಂಟು. ಯಾವುದೋ ಊರಿನಲ್ಲಿ ನೀರಿಗೆ ಸಮಸ್ಯೆ ಇದೆ ಎಂದರೆ ತಮ್ಮ ಮಗಳನ್ನು ಆ  ಊರಿಗೆ ಮದುವೆ ಮಾಡಿಕೊಡಲು ತಾಯಿ ತಂದೆಯರು ಯೋಚನೆ ಮಾಡುತ್ತಾರೆ. ಹಾಗೆಯೇ ಇಂದಿಗೂ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮದುವೆ ಮಾಡಿಕೊಳ್ಳುವಾಗ ಆ  ಹುಡುಗಿ ನೀರು ತುಂಬಿದ ಕೊಡಗಳನ್ನು ಹೊರಬಲ್ಲಳೆ?  ಎಂದು ನೋಡುತ್ತಾರೆ.

ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ?

ಪರಿಣತರ ಅಭಿಪ್ರಾಯದ ಪ್ರಕಾರ ಬೀಳುತ್ತಿರುವ ಒಟ್ಟಾರೆ ಸರಾಸರಿ ಮಳೆಯ ಪ್ರಮಾಣದಲ್ಲಿ ಹೆಚ್ಚೇನು  ವ್ಯತ್ಯಾಸವಿಲ್ಲ. ಆದರೆ ಮಳೆ ಹಂಚಿಕೆಯಲ್ಲಿ ಬದಲಾವಣೆಯಾಗಿದೆ. ಮತ್ತು ಬಿದ್ದ ಮಳೆ ನೀರು  ಸಂಗ್ರಹವಾಗದೆ  ಹರಿದು  ಹೋಗಿ  ಸಮುದ್ರವನ್ನು ಸೇರುತ್ತಿದೆ. ಇದನ್ನು ಹಿಡಿದಿಡಬಹುದಾಗಿದ್ದ ಕೆರೆ, ಹಳ್ಳಗಳು ಬತ್ತಿ ಹೋಗಿವೆ .  ಇಲ್ಲವೇ  ಕಾಂಕ್ರೀಟ  ಕಟ್ಟಡಗಳಾಗಿ ಪರಿವರ್ತನೆಯಾಗಿವೆ.  ಜನ ಸಂಖ್ಯೆಯಲ್ಲಿ ಉಂಟಾಗಿರುವ ಹೆಚ್ಚಳ  ಎಲ್ಲವೂ ಸೇರಿ ಸಮಸ್ಯೆ ಮತ್ತೂ ಉಲ್ಬಣಗೊಂಡಿದೆ, ಇವೆಲ್ಲದರ  ಪರಿಣಾಮ  ಮಹಿಳೆಯ ಜೀವನ ಮೌಲ್ಯದ  ಮೇಲೆ ಉಂಟಾಗುತ್ತಿದೆ. ಹಾಗೆಂದು ಮಹಿಳೆಯರೇನು ಸುಮ್ಮನೆ ಕುಳಿತಿಲ್ಲ. ಪರಿಹಾರವನ್ನು ಕಂಡುಕೊಳ್ಳಲು ಸತತವಾಗಿ ಪ್ರಯತ್ನಿಸುತ್ತಲೇ ಬಂದಿದ್ದಾರೆ. ಕೋಲಾರ, ಮಂಡ್ಯ, ಗುಲ್ಬರ್ಗಾ , ಜಿಲ್ಲೆಗಳಲ್ಲಿ ಮಹಿಳೆಯರು ಸ್ವತಃ ತಾವೇ ಕೆರೆಯ ಹೂಳೆತ್ತಲು ಶ್ರಮ ದಾನ ಮಾಡಿ , ಕೆರೆಗೆ ಒಡ್ಡು ಹಾಕಿ ಅಲ್ಲಿ ಮಳೆಯ ನೀರು ನಿಂತು ಕೆರೆಯಲ್ಲಿ ಬೇಸಿಗೆಯಲ್ಲಿ ಕೂಡ  ನೀರಿರುವಂತೆ  ನೋಡಿಕೊಂಡಿರುವ  ಉದಾಹರಣೆಗಳು ಒಂದು ಕಡೆಯಾದರೆ  ಮತ್ತೊಂದು  ಕಡೆ  ಉತ್ತರ ಕನ್ನಡ   ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಏಕಾಂಗಿಯಾಗಿ ನಿಂತು ಭಾವಿ ತೋಡಿದ  ಉದಾಹರಣೆಯಿದೆ.

ರಾಜಾಸ್ಥಾನದಲ್ಲಿ ಮಹಿಳೆಯರು ನೀರ ಸಂದೂಕಗಳನ್ನು ನಿರ್ಮಿಸಿಕೊಂಡು ಅವಕ್ಕೆ ಬೀಗ ಹಾಕಿ ಇಟ್ಟುಕೊಂಡು ಜತನದಿಂದ ಬಳಸುತ್ತಾರೆ. ನೀರು ಕೊರತೆಯಿರುವ ಕಡೆಯಲ್ಲೆಲ್ಲ ನಮ್ಮ ಮಹಿಳೆಯರು ಅಡುಗೆಯಲ್ಲಿ,ತೊಳೆಯುವಲ್ಲಿ, ನಿತ್ಯ ಜೀವನದ ಕೆಲಸಗಳಲ್ಲಿ ನೀರ ಜಾಣ್ಮೆಯನ್ನು ಪ್ರದರ್ಶಿಸುವುದನ್ನು ನೋಡುತ್ತೇವೆ. ಇವರಿಗೆ ಜಲ ಶಿಕ್ಷಣವನ್ನು ಯಾರೂ ಕಲಿಸಬೇಕಿಲ್ಲ. ಆದರೆ ಇತರರಿಗೆ ಅದರ ಅವಶ್ಯಕತೆ ಇದೆ.

ನೀರಿನ  ಕೊರತೆಯನ್ನು ನೀಗಿಸಲು ಇರುವುದೊಂದೇ ದಾರಿ “ ಓಡುವ ನೀರನ್ನು ನಡೆಸುವುದು, ನಡೆವ ನೀರನ್ನುನಿಲ್ಲಿಸುವುದು , ನಿಂತ ನೀರನ್ನು ಇಂಗಿಸುವುದು.”  ಈ ರೀತಿಯಾಗಿ ಭೂಮಿಗೆ ನೀರನ್ನು ಮರು ಪೂರಣೆ ಮಾಡುವ ಕೆಲಸ ಒಂದೆಡೆಯಾದರೆ, ಮಳೆಯ ಪ್ರತಿ ಹನಿಗೂ ಬೊಗಸೆಯೊಡ್ಡಿ ಅದನ್ನು ಹಿಡಿದು ಸಂಗ್ರಹಿಸಿ ಬಳಸುವುದು ಮತ್ತೊಂದು ವಿಧಾನ. ಮಹಿಳೆಯರು ಮನಸ್ಸು ಮಾಡಿದರೆ ಇದೇನೂ ಕಷ್ಟದ ಕೆಲಸವಲ್ಲ. ಅತ್ಯಂತ ಸುಲಭದ ವಿಧಾನವೆಂದರೆ ಮಳೆ ಬರುತ್ತಿರುವಾಗ  ಬಕೆಟ್ ಒಂದನ್ನು ಹೊರಗಿಟ್ಟು ನೀರನ್ನು ಸಂಗ್ರಹಿಸುವುದು. ಹಳೆಯ ಸೀರೆ ಅಥವಾ ಪಂಚೆಯೊಂದನ್ನು ಮಾಳಿಗೆಯಿಂದ ನೀರು ಬೀಳುವಲ್ಲಿ ಕಟ್ಟಿ ಅದರ ಮುಖಾಂತರ ಸೋಸಿ ಬಂದ ನೀರು ಸಂಗ್ರಹವಾಗುಂತೆ ಮಾಡುವುದು. ಹೀಗೆ ಸಂಗ್ರಹಿಸಿದ ನೀರನ್ನು ಕುಡಿಯುವುದನ್ನು ಬಿಟ್ಟು ಇನ್ನೆಲ್ಲ ಕೆಲಸಗಳಿಗೆ ಬಳಸಬಹುದು. ಹೊಸದಾಗಿ ಮನೆ ಕಟ್ಟುವವರಿದ್ದರೆ, ಅಥವಾ ಮನೆಯನ್ನು ನವೀಕರಿಸುವವರಿದ್ದರೆ ಮಳೆ ನೀರು ಸಂಗ್ರಹಣೆಯ ವ್ಯವಸ್ಥೆಯನ್ನುಕಟ್ಟಡಕ್ಕೆ ಅಳವಡಿಸಿದರೆ ಮತ್ತೂ ಚೆನ್ನ.

ಇನ್ನು ನೀರು ಉಳಿಸುವ ಕಡೆಗೂ ಅಷ್ಟೆ ಗಮನವನ್ನು ಕೊಡುವುದು ಅವಶ್ಯಕ. ಶುದ್ಧವಾದ ಕುಡಿಯುವ ನೀರನ್ನು ನೆಲ, ಬಚ್ಚಲು, ವಾಹನ, ಮೆಟ್ಟಿಲುಗಳನ್ನು ತೊಳೆಯಲು ಬಳಸುವುದು ಬೇಡ. ಅದಕ್ಕಾಗಿ ಬಟ್ಟೆ ಜಾಲಿಸಿದ ನೀರು ಇಲ್ಲವೇ, ವಾಷಿಂಗ್ ಮೆಷಿನ್ ನಿಂದ ಬಂದ ನೀರನ್ನು ಹಿಡಿದು ಬಳಸಬಹುದು,  ಗಿಡಗಳಿಗೆ ನೀರುಣಿಸುವಾಗ ಕೂಡ ಅಡುಗೆ ಮನೆಯಲ್ಲಿ ತರಕಾರಿ, ಅಕ್ಕಿ ತೊಳೆದ ನೀರನ್ನು ಬಳಸಬಹುದು. ಮನೆಯ ಆರ್. ಓ ಗಳಿಂದ ಹೊರ ಬಂದ ನೀರನ್ನು ಸಂಗ್ರಹಿಸಿ ಇತರ ಕೆಲಸಗಳಿಗೂ ಸಹ ಬಳಸುವುದು ಉತ್ತಮ. ಇದು ನೋಡಲು ಅತಿ ಕಡಿಮೆ ನೀರನ್ನು ಉಳಿಸುತ್ತಿದ್ದೇವೆ ಎಂದು ಅನಿಸಿದರೂ ಕೂಡ ಉಳಿಸಿದ ಪ್ರತಿ ಹನಿ ನೀರು  ಸಹ ಅತೀ ಅಮೂಲ್ಯ ಎಂಬ ಅರಿವು ನಮಗಿರಬೇಕು. ಆ ಒಂದು ಹನಿ ನೀರು ಭೂಮಿಯಲ್ಲಿ ಶೇಖರವಾಗಲು ಎಷ್ಟು ಕಾಲ ತೆಗೆದು ಕೊಂಡಿರಬಹುದು ಎನ್ನುವ ಅರಿವು ನಮಗಿರುವುದಿಲ್ಲ. ಆದ್ದರಿಂದ  ಈ ಕೆಲಸ ನಮ್ಮೆಲ್ಲರಿಂದ ಆಗಬೇಕಾದದ್ದು ಇದೀಗ ಅನಿವಾರ್ಯವಾಗಿದೆ. ಹಾಗೆಂದು ಇದು ಕೇವಲ ಮಹಿಳೆಯ ಹೊಣೆ ಎಂದು ಭಾವಿಸಬೇಕಿಲ್ಲ ಮನೆಯ ಪ್ರತಿಯೊಬ್ಬ ಸದಸ್ಯರು ಜಲ ಸಾಕ್ಷರರಾಗಬೇಕು  ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಇದನ್ನು ಕಲಿಸಬೇಕು.ಆದರೆ ಇದು ಅಸಾಧ್ಯವಾದ ಕೆಲಸವೇನೂ ಅಲ್ಲ.ಇನ್ನೇನು ಮುಂಗಾರಿಗೆ ಮುಂಚಿನ  ಮಳೆ ಬೀಳುವ ಸಮಯ ಸನ್ನದ್ಧರಾಗೋಣವೇ ಪ್ರತಿ ಹನಿಗೆ ಬೊಗಸೆಯೊಡ್ಡಲು.

ಸುಮಂಗಲಾ ಎಸ್. ಮುಮ್ಮಿಗಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *