ವಿಜ್ಞಾನಮಯಿ/ಉಳಿಸಿದ್ದು ಗಳಿಸಿದಂತೆ – ಸುಮಂಗಲಾ. ಎಸ್. ಮುಮ್ಮಿಗಟ್ಟಿ

ಇದು ಇಡಿ ಭೂಮಿಯ ಹಿತದೃಷ್ಟಿಯಿಂದ, ಮಾನವನೂ ಸೇರಿದಂತೆ ಭೂಮಿಯ ಮೇಲಿನ ಎಲ್ಲ ಜೀವಿಗಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅವಶ್ಯಕ ಕೆಲಸವಾಗಿದೆ. ಕ್ಷಮಯಾ ಧರಿತ್ರಿ ಎನ್ನುವ ಸ್ಲೋಗನ್ ಹಿಡಿದು ನಾವು ಇದುವರೆಗೆ ಮಾಡಿದ ಚಟುವಟಿಕೆಗಳಿಗೆ, ಈ ಭೂಮಿ ಸರಿಯಾದ ಉತ್ತರವನ್ನು ಕೊಡಲು ಪ್ರಾರಂಭಿಸಿದೆ ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಕಾಲ ಮಿಂಚಿ ಕೈಮೀರಿ ಹೋಗಬಹುದು.

ನಾನವರ ಮನೆಯೊಳಗೆ ಕಾಲಿಡುತ್ತಿದ್ದಂತೆ ತಬ್ಬಿಬ್ಬಾದೆ. ಹಾಲ್‌ನ ತುಂಬೆಲ್ಲಾ ಹರಡಿದ ವಸ್ತುಗಳ ನಡುವೆ ನನ್ನ ಗೆಳತಿ ಮತ್ತು ಆಕೆಯ ಮಗಳು ಕುಳಿತ್ತಿದ್ದರು. ಅವರ ಸುತ್ತಲೂ ಪೆನ್ನುಗಳು, ಪೆನ್ಸಿಲ್ಲುಗಳು, ಬಣ್ಣದ ಬ್ರಷ್ ಗಳೂ, ವಿವಿಧ ಬಗೆಯ ಜಾಮಿಟ್ರಿ ಬಾಕ್ಸಗಳು, ಎರೇಸರ್ ಗಳು, ರೋಂಬಿಕ್ ಕ್ಯೂಬ್‌ಗಳು, ವಿವಿಧ ಬಗೆಯ ಕತ್ತರಿಗಳು ಹರಡಿದ್ದವು “ಅರೆ ಇದೇನು ಮಾಡ್ತಿದೀರಿ?” ಎನ್ನುತ್ತ ಆವರ ಮಧ್ಯೆ ಜಾಗ ಮಾಡಿಕೊಂಡು ಹೋಗಿ ಕುಳಿತೆ. ಏಳನೆಯ ಕ್ಲಾಸ್ ಓದುತ್ತಿರುವ “ಶ್ವೇತಾ, ಅಯ್ಯೋ ಆಂಟಿ, ನನ್ನ ಶೆಲ್ಫ್ ಕ್ಲೀನ್ ಮಾಡ್ತಾ ಇದೀವಿ ಇದೆಲ್ಲಾ ಬೇಡದ ಸಾಮಾನುಗಳು” ಎಂದಳು. ನಾನೊಮ್ಮೆ ಅವುಗಳತ್ತ ಕಣ್ಣು ಹಾಯಿಸುತ್ತಿದ್ದಾಗ ಗೆಳತಿ ವಿಜಯ “ಇಲ್ನೋಡಿ, ಇಷ್ಟೊಂದು ಸ್ಕೆಚ್ ಪೆನ್ ಪ್ಯಾಕೆಟ್ ಗಳು ಹೊಸಾದು ಹಾಗೆಯೇ ಇವೆ, ಯೂಸ್ ಮಾಡಿಯೇ ಇಲ್ಲ ಹಾಗೇ ಡ್ರೈ ಆಗಿವೆ, ಬೇಕಾದಾಗೆಲ್ಲ ಹೊಸಾದೇ ತರೋದು” ಎನ್ನುತ್ತ ಐದಾರು ಪ್ಯಾಕೆಟ್ ಗಳನ್ನೂ ಹಿಡಿ ತುಂಬಾ ಸ್ಕೆಚ್ ಪೆನ್ನುಗಳನ್ನೂ ತೋರಿಸಿದರು. ಇದು ಅಲ್ಲಿದ್ದ ಎಲ್ಲ ಸಾಮಾನುಗಳಿಗೂ ಅನ್ವಯಿಸುತ್ತಿತ್ತು. ನಿಜಕ್ಕೂ ಹತ್ತು ಹಲವು ಬಗೆಯ ಸಾಮಾನುಗಳು ವ್ಯರ್ಥವಾಗಿದ್ದವು. ಕ್ರೆಯಾನುಗಳು, ಬಣ್ಣದ ಡಬ್ಬಿಗಳು ಬಳಸದೆ ಒಣಗಿದ್ದವು. ನೋಟು ಪುಸ್ತಕಗಳ ಬಹಳ ಪುಟಗಳು ಖಾಲಿಯಾಗಿದ್ದವು, ಬಣ್ಣದ ಹಾಳೆಗಳು ಮುದುರಿ ಕುಳಿತಿದ್ದವು “ ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಪೆನ್ಸಿಲ್ ಹಿಡಿಯಲು ಚಿಕ್ಕದಾಗುವವರೆಗೆ ಬರೆಯುತ್ತಿದ್ದೆವು ಈ ಮಕ್ಕಳು ನೋಡಿ ಹೇಗೆ ವೇಸ್ಟ್ ಮಾಡ್ತಾರೆ ಎಂದರು ವಿಜಯ.” “ಅಮ್ಮಾ ಆಫ್ಟರ್ ಆಲ್ ಫೈವ್‌ ರುಪೀಸ್” ಎಂದು ಆಕೆಯ ಮುದ್ದಿನ ಮಗಳು ರಾಗ ಎಳೆದಾಗ ಅಲ್ಲಿಂದ ಎದ್ದು ನಾನು ಕುಳಿತಲ್ಲಿಗೆ ಬಂದರು. ಶ್ವೇತಾ ತನ್ನ ಕ್ಲೀನಿಂಗ್ ಕೆಲಸವನ್ನು ಮುಂದುವರಿಸಿದಳು.

ನಾವು ಅದೇ ವಿಷಯವನ್ನು ಮಾತಾಡುತ್ತ ಕುಳಿತೆವು. ಇದ್ದಕ್ಕಿದ್ದಂತೆ ಶ್ವೇತಾ “ಅಮ್ಮಾಇಲ್ನೋಡೂ,”ಎಂದು ಚೆಂದದ ರೈಲು ಗಾಡಿಯ ಆಕಾರದ ಡಬ್ಬಿಯನ್ನು ತೋರಿಸಿದಳು. ಅದೊಂದು ಹುಂಡಿಯಾಗಿತ್ತು, ಅದರ ಪ್ರತಿ ಡಬ್ಬಿಯ ತಲೆಯ ಮೇಲಿನ ರಂಧ್ರದಲ್ಲಿ ಕಾಯಿನ್ ಹಾಕಬಹುದಿತ್ತು. ಆಕೆಗೀಗ ಅದರಲ್ಲಿ ಹಣ ಕೂಡಿ ಹಾಕುವ ಉತ್ಸಾಹ ಬಂದಿತ್ತು, ಅಮ್ಮನ ಹತ್ತಿರ ಒಂದೆರೆಡು ರೂಪಾಯಿ ಪಡೆದು ಹಾಕಿಯೇ ಬಿಟ್ಟಳು.” ನಾನಿನ್ನು ಮೇಲೆ ಸೇವ್ ಮಾಡ್ತೀನಿ” ಎನ್ನುತ್ತಾ ಮನೆತುಂಬಾ ಓಡಾಡಿದಳು. ನಾವು ಮತ್ತೆ ನಮ್ಮ ಮಾತು ಮುಂದುವರಿಸಿದೆವು. ಎಲ್ಲವೂ ಇದ್ದಾಗ ಅಥವಾ ಕೊರತೆ ಇರದಿದ್ದಾಗ ನಮ್ಮ ಮಕ್ಕಳಿಗೆ ಹಣದ ಅಥವಾ ವಸ್ತುವಿನ ಬೆಲೆಯನ್ನು ಕಲಿಸುವುದು ಹೇಗೆ? ಎನ್ನುವುದು ನಮ್ಮ ಮಾತಿನ ವಿಷಯವಾಗಿತ್ತು. ಆಗ ನನಗೆ ಇದ್ದಕ್ಕಿದ್ದ ಹಾಗೆ ಅವಳ ಹುಂಡಿಯ ಉಪಾಯವನ್ನೇ ಯಾಕೆ ಬಳಸಬಾರದು? ಎನಿಸಿತು.

“ಶ್ವೇತಾ , ನೀನು ಬಿಸಾಕಲು ಹಾಕಿರೋ ಇದರಲ್ಲಿ ಯಾವ್ಯಾವುದನ್ನ ಉಪಯೋಗಿಸಬಹುದು ನೋಡು ಅದರಷ್ಟು ಹಣವನ್ನ ಅಮ್ಮ ನಿನಗೆ ಹುಂಡಿಗೆ ಹಾಕಲು ಕೊಡ್ತಾರೆ” ಎಂದೆ “ಓ..ಕೆ ಎಂದ ಆಕೆ ತಾನು ತೆಗೆದಿಟ್ಟಿದ್ದ ಸಾಮಾನುಗಳನ್ನು ಮತ್ತೊಮ್ಮೆ ಹುಡುಕಲು ಪ್ರಾರಂಭಿಸಿದಳು. ಅಲ್ಲಿಂದ ಬಂದ ನಂತರವೂ ಈ ವಿಷಯ ನನ್ನ ತಲೆಯಲ್ಲಿ ಕೊರೆಯುತ್ತಲೇ ಇತ್ತು. ಇಂದು ಭೂಮಿಯ ಎಲ್ಲ ಸಮಸ್ಯೆಗಳ ಮೂಲವಾಗಿರುವ, ಕೊಳ್ಳು ಬಾಕುತನ, ಐಷರಾಮಿ ಜೀವನದ ಹುಚ್ಚನ್ನು ಬಿಡಿಸಲು, ಈ ವಿಧಾನವನ್ನೇಕೆ ಹೆಚ್ಚೆಚ್ಚು ಪ್ರಚಾರ ಪಡಿಸಬಾರದು ? ಎನಿಸಿತು.

ಏರುತ್ತಿರುವ ತೈಲಗಳ ಬೆಲೆ, ಪ್ರತಿ ತಿಂಗಳು ಹೆಚ್ಚಾಗುತ್ತಿರುವ ಗ್ಯಾಸ್ ಸಿಲಿಂಡರಿನ ಬೆಲೆ, ನೀರು ವಿದ್ಯುತ್ ಬಿಲ್ ನ ಹೆಚ್ಚಳ ಇವೆಲ್ಲದರಿಂದ ಪಾರಾಗಲು ಇರುವುದು ಒಂದೇ ದಾರಿ ಅರ್ಥವರಿತ, ವೈಜ್ಞಾನಿಕ ಉಪಯೋಗ, ಹಾಗು ಇವುಗಳೆಲ್ಲವು ಉಳಿತಾಯ. ಆದರೆ ನಮ್ಮ ಹತ್ತಿರ ಸಾಕಷ್ಟು ಹಣವಿರುವಾಗಲೂ ಕೂಡ ನಾವೇಕೆ ಉಳಿಸಬೇಕು? ಎಂದು ಪ್ರಶ್ನಿಸುವುವವರೂ ಉಂಟು. ನಿಜ ಹಣವೇನೋ ಇಂದು ಎಲ್ಲವನ್ನು ಕೊಡಬಹುದು. ಆದರೆ, ಅದು ಬರುವುದು ಎಲ್ಲಿಂದ? ಅಲ್ಲಿ ಅವು ಅಕ್ಷಯವೇ? ಎಂದು ನಾವು ವಿಚಾರ ಮಾಡುವುದೇ ಇಲ್ಲ. ಈ ನಿಸರ್ಗದಲ್ಲಿ ಇರುವುದೆಲ್ಲವೂ ನಮಗಾಗಿಯೆ ಇರುವುದು ಎಂಬಂತೆ ಬಳಸುತ್ತ ಬಂದಿರುವ ಮಾನವ ಅವೆಲ್ಲವನ್ನು ಬರಿದಾಗಿಸುವ ಹಂತಕ್ಕೆ ತಂದು ನಿಲ್ಲಿಸಿದ್ದಾನೆ. ಒಂದು ವೇಳೆ ಅವು ಬರಿದಾದರೆ ನಮ್ಮಲ್ಲಿರುವ ಹಣ ಯಾವುದಕ್ಕೂ ಪ್ರಯೋಜನವಿಲ್ಲ. ಹಾಗಾದರೆ, ನಾವೇನು ಮಾಡಬೇಕು? ಎನ್ನುವ ಮತ್ತೊಂದು ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ನಾವೂ ನಮ್ಮ ಮುಂದಿನ ಜನಾಂಗವೂ ಸುರಕ್ಷಿತವಾಗಿರಬೇಕಾದರೆ ನಾವು ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಉಳಿಸಬೇಕು ಹಾಗೂ ರಕ್ಷಿಸಬೇಕು. ಅದಕ್ಕಿರುವ ಒಂದೇ ದಾರಿ ಸುಸ್ಥಿರ ಅಭಿವೃದ್ಧಿ ಮತ್ತು ಸುಸ್ಥಿರ ಬಳಕೆ. ಇದೇನೂ ಹೊಸ ವಿಷಯವಲ್ಲ. ನಮ್ಮಲ್ಲಿ ಬಹಳ ಹಿಂದಿನಿಂದಲೂ ಸುಸ್ಥಿರ ಅಭಿವೃಧ್ಧಿಯ ಅಭ್ಯಾಸ ಬಳಕೆಯಲ್ಲಿತ್ತು. ಮಿತವಾಗಿ ಬಳಸುವ, ಮರು ಬಳಸುವ, ಮತ್ತೊಮ್ಮೆ ಮಗದೊಮ್ಮೆ ಬಳಸುವ ವಿಧಾನ ಜೀವನ ಕ್ರಮವಾಗಿತ್ತು. ಆದರೆ, ಕ್ರಮೇಣ ನಮ್ಮ ಜೀವನ ಶೈಲಿ ಬದಲಾಗಿದೆ. ಕಂಡದ್ದನೆಲ್ಲ ಕೊಳ್ಳುವ, ಕೊಂಡುದುದರ ಪೂರ್ತಿಯಾಗಿ ಬಳಕೆ ಮಾಡದ, ಮರು ಬಳಕೆ ಮಾಡದ ನಮ್ಮ ಜೀವನ ಶೈಲಿ ಇಂದು ಸಂಪನ್ಮೂಲಗಳನ್ನು ಹಾಳು ಮಾಡುತ್ತಿದೆ ಮಾತ್ರವಲ್ಲ ನಮ್ಮ ಸುತ್ತಲಿನ ಪರಿಸರವನ್ನು ಹಾಳುಗೆಡುವುತ್ತಿದೆ. ಬಹಳ ಕಟಿಣವಾದ ವಿಷಯಗಳು ಬೇಡ ಉದಾಹರಣೆಗಾಗಿ ನೀರನ್ನೇ ತೆಗೆದುಕೊಳ್ಳೋಣ, ಬೇಸಿಗೆಯ ಬಿಸಿಲಿನ ಝಳವಿನ್ನು ಹೆಚ್ಚಿರುವುದಿಲ್ಲ. ಆಗಲೇ ರಾಜ್ಯದ ಬಹಳ ಕಡೆ ನೀರಿನ ಅಭಾವ ತಾಂಡವವಾಡಲು ಪ್ರಾರಂಭಿಸುತ್ತದೆ, ಮೂರು, ನಾಲ್ಕು ದಿನಗಳಿಗೊಮ್ಮೆ ಕುಡಿಯುವ ನೀರಿನ ಪೂರೈಕೆಯಾಗುತ್ತದೆ. ನೀರಿನ ಪೂರೈಕೆ ಸರಿಯಾಗಿದ್ದಾಗ ಅಥವಾ ನೀರು ಸರಿಯಾಗಿ ದೊರೆಯುವ ನಗರಗಳಲ್ಲಿ ನೀರಿನ ಬಳಕೆ ಹೇಗೆ ಆಗುತ್ತಿದೆ? ಶುದ್ಧ ಕುಡಿಯುವ ನೀರನ್ನು ನಾವು ಅಮೂಲ್ಯ ಎಂಬಂತೆ ಬಳಸುತ್ತಿದ್ದೇವೆಯೆ? ಅದೇ ನೀರನ್ನು ನೆಲ ತೊಳೆಯಲು ಟಾಯೆಲೆಟ ಫ್ಲಶ್ ಮಾಡಲು, ನಮ್ಮ ವಾಹನಗಳನ್ನು ತೊಳೆಯಲು ಬಳಸುತ್ತೇವೆ. ನಮ್ಮ ವಾಷಿಂಗ್ ಮೆಷಿನ್ ನಿಂದ ಹರಿದು ಚರಂಡಿ ಸೇರುವ ನೀರೂ ಕೂಡ ಇದಕ್ಕೆ ಬಳಕೆಯಾಗಬಹುದು. ಆದರೆ, ನಾವದನ್ನು ಯೋಚಿಸುವುದೇ ಇಲ್ಲ, ಯಾಕೆಂದರೆ ಸಮೃದ್ಧಿ ಉಳಿತಾಯವನ್ನು ಕಲಿಸುವುದಿಲ್ಲ. ಕೊರತೆಯಾದಾಗ ಮಾತ್ರ ನಾವು ಉಳಿಸಲು ನೋಡುತ್ತೇವೆ.

ಇದು ಎಲ್ಲ ವಿಷಯಗಳಿಗೆ ಅನ್ವಯಿಸುತ್ತದೆ, ಅದು ನಾವು ಬಳಸುವ ವಿದ್ಯುತ್ ಶಕ್ತಿ, ನಾವು ಬಳಸುವ ಆಹಾರ ಧಾನ್ಯ, ವಸ್ತುಗಳು ಇತ್ಯಾದಿ. ಇವೆಲ್ಲವನ್ನು ನಾವು, ನಾವು ಗಳಿಸಿದ ಹಣದಿಂದಲೇ ಕೊಳ್ಳುತ್ತೇವೆ, ನಿಜ ಆದರೆ, ಹಣ ಅವೆಲ್ಲವನ್ನೂ ಸೃಷ್ಟಿಸಲಾರದು. ಆದರೆ, ಹಾಗೆ ಹೇಳಿದ್ದು ಪ್ರಯೊಜನವಾಗುತ್ತಿಲ್ಲ ಎಂದಾಗ, ನಾವು ಉಳಿಸುವುದನ್ನು ಲೆಕ್ಕಾಚಾರ ಮಾಡಲು ಹೇಳಿ ಕೊಡಬೇಕಾಗಿದೆ. ವಿಷೇಷವಾಗಿ ನಮ್ಮ ಮಕ್ಕಳಿಗೆ, ಯಾಕೆಂದರೆ ಅವರು ಈ ಭೂಮಿಯ ಮೇಲೆ ಮುಂದೆ ಇರಬೇಕಾದವರು. ಹಾಗೂ ಇದರ ಭವಿಷ್ಯವನ್ನು ರಕ್ಷಿಸಬೇಕಾದವರು.

ಇದರಿಂದ ಎರಡು ಲಾಭಗಳುಂಟು. ಒಂದು ಸಂಪನ್ಮೂಲಗಳು ಉಳಿಯುತ್ತವೆ ಮತ್ತೊಂದು ಪರಿಸರವೂ ಶುದ್ಧವಾಗಿರುತ್ತದೆ. ನಮ್ಮ ನಮ್ಮ ಮನೆಗಳು ಇದಕ್ಕೆ ಮೊದಲ ಪಾಠ ಶಾಲೆಗಳಾಗಬೇಕು. ನಾವು ಮೊದಲು ಇದನ್ನು ಮಾಡಿ ತೋರಿಸಬೇಕು. ಯಾವುದೇ ವಸ್ತುವನ್ನು ಕೊಂಡು ತರುವ ಮುನ್ನ ಇದು ನಮಗೆ ಅವಶ್ಯಕವೇ ಎಂದು ಯೋಚಿಸಬೇಕು. ಅದಿಲ್ಲದೆ ನಡೆಯುತ್ತದೆ ಎನ್ನುವುದಾದರೆ ತರುವುದು ಬೇಡ ಮತ್ತೊಂದು ತರುವ ಮುನ್ನ ಹಳೆಯದನ್ನು ಮರುಬಳಕೆ ಮಾಡುವುದರಿಂದ ನಾನೆಷ್ಟು ಉಳಿಸಿದೆ? ಅದು ಹಣದ ರೂಪದಲ್ಲಿ ನಮಗೆ ಕಾಣಬಹುದು, ಆದರೆ, ಆ ಒಂದು ವಸ್ತುವಿನ ತಯಾರಿಕೆಯಲ್ಲಿ ನಿಸರ್ಗದ ಎಷ್ಟು ಸಂಪನ್ಮೂಲಗಳು ಬಳಕೆಯಾಗಿವೆ? ಆ ಸಂಪನ್ಮೂಲಗಳು ರೂಪುಗೊಳ್ಳಲು ತೆಗೆದುಕೊಂಡ ಅವಧಿ, ಇವೆಲ್ಲವನ್ನು ನಾವು ಗೌರವಿಸಿದಂತಾಗುತ್ತದೆ.

ಇದು ಇಡಿ ಭೂಮಿಯ ಹಿತದೃಷ್ಟಿಯಿಂದ, ಮಾನವನೂ ಸೇರಿದಂತೆ ಭೂಮಿಯ ಮೇಲಿನ ಎಲ್ಲ ಜೀವಿಗಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅವಶ್ಯಕ ಕೆಲಸವಾಗಿದೆ. ಕ್ಷಮಯಾ ಧರಿತ್ರಿ ಎನ್ನುವ ಸ್ಲೋಗನ್ ಹಿಡಿದು ನಾವು ಇದುವರೆಗೆ ಮಾಡಿದ ಚಟುವಟಿಕೆಗಳಿಗೆ, ಈ ಭೂಮಿ ಸರಿಯಾದ ಉತ್ತರವನ್ನು ಕೊಡಲು ಪ್ರಾರಂಭಿಸಿದೆ ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಕಾಲ ಮಿಂಚಿ ಕೈಮೀರಿ ಹೋಗಬಹುದು.

ಸುಮಂಗಲಾ.ಎಸ್. ಮುಮ್ಮಿಗಟ್ಟಿ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *