Latestಅಂಕಣ

ವಿಜ್ಞಾನಮಯಿ/ ಆಹಾರ ಸುರಕ್ಷತೆ ಮತ್ತು ಮಹಿಳೆ- ಸುಮಂಗಲಾ ಎಸ್. ಮುಮ್ಮಿಗಟ್ಟಿ

ಸ್ಥಳೀಯವಾಗಿ ಬೆಳೆಯುವ, ಕಡಿಮೆ ನೀರು ಬಯಸುವ ಧಾನ್ಯಗಳು, ಆಹಾರ ಬೆಳೆಗಳನ್ನು ಬೆಳೆಯುವುದು, ಬಳಸುವುದು ನಮ್ಮ ಆರೋಗ್ಯ ಹಾಗೂ ಭೂಮಿಯ ಆರೋಗ್ಯದ ದೃಷ್ಟಿಯಿಂದ ಹಿತಕಾರಿ. ಆರ್ಥಿಕವಾಗಿಯೂ ಲಾಭಕಾರಿ. ಈ  ನಿಟ್ಟಿನಲ್ಲಿ ಮನೆಯ ಮಹಿಳೆಯರು, ಮಹಿಳಾ ರೈತರ ಜವಾಬ್ದಾರಿಯೂ ದೊಡ್ಡದೇ

ಅದು ಮುಂಜಾವಿನ ಎಂಟು ಗಂಟೆಯ ಸಮಯ ರಾಣೇಬೆನ್ನೂರಿನ ರೈಲು ನಿಲ್ದಾಣ, ಟ್ರೇನು ಇಳಿದು ಗೇಟಿನ ಕಡೆಗೆ ನಡೆದಿದ್ದೆ. ಜನರ ಮಧ್ಯೆ ಸಾಗುತ್ತಿದ್ದಾಗ “ಅಕ್ಕಾ, ಅಕ್ಕಾ, ಆರಾಮಾ….?” ದನಿ ಬಂದ ಕಡೆಗೆ ತಿರುಗಿದೆ. ಪರಿಚಿತ ಮುಖಗಳು ಯಾವುವೂ ಕಾಣಲಿಲ್ಲ. ನನಗಿರಲಿಕ್ಕಿಲ್ಲ ಎಂದುಕೊಂಡು ಮುಂದೆ ನಡೆದೆ. “ಅಕ್ಕೋ, ಬೆಂಗಳೂರಿಂದ ಬಂದ್ರಾ” ಮತ್ತೆ ಅದೇ ದನಿ, ಮತ್ತೆ ಹೊರಳಿದೆ. “ಅರೆ ಯಾರೂ ಇಲ್ಲವಲ್ಲ?” ಎಂದುಕೊಳ್ಳುತ್ತಿದ್ದಂತೆ, ಮುಂದೆ ಬಂದು ನಿಂತಳು ಆಕೆ, ಹೊಳೆವ ಹಳದಿ ಸೀರೆ, ಗುಲಾಬಿ ರವಿಕೆ ಮುಖದ ತುಂಬಾ ನಗೆಯರಳಿಸಿದ್ದಳು ಆಕೆಯ ಮೂಗಿನ ದೊಡ್ಡ ಬಳೆಯಾಕರದ ನತ್ತು ತಟ್ಟನೇ ನೆನಪಾಯಿತು. “ಅರೆ ಲಕ್ಕಿ” ನೀನೇನು ಇಲ್ಲಿ? ಆರಾಮ ಅದಿಯಲ್ಲ” ಎಂದೆ. “ಹೂನಕ್ಕ ಅರಾಮ ಅದೇನಿ” ಎನ್ನುತ್ತಾ ನಾಚುತ್ತಾ ಹಿಂದೆ ತಿರುಗಿದಳು ಮಗುವೊಂದನ್ನು ಎತ್ತಿಕೊಂಡಿದ್ದ ಅತನೂ ಮೆಲ್ಲನೇ ಕೈಜೋಡಿಸಿದ, “ ಓ ಹೋ ನಿನ್ನ ಮನೆಯವರಾ, ಮಗು ಬೇರೆ ಬಾಳಾ ಖುಶಿಯಾಯಿತು.” ಎಂದೆ. ಆಕೆಯನ್ನು ಮತ್ತೊಮ್ಮೆ ನೋಡಿದಾಗ ಪರವಾಗಿಲ್ಲ ಚೆನ್ನಗಿಯೇ ಇರುವಂತಿದೆ, ಕತ್ತು ಕಿವಿಯಲ್ಲಿ ಕೊಂಚ ಬಂಗಾರವೂ ಕಂಡಿತು. “ ನಾವು ಇಲ್ಲೇ ಹಾವೇರಿಗೆ ಮದ್ವಿಗ್ ಹೊಂಟೇವಿ ಇರ್ತಿಯಲ್ಲ ಅಕ್ಕಾ ಮನೀಗ್ ಬಂದು ಭೆಟ್ಟಿ ಆಗ್ತೇನಿ” ಅಂದಳು “ಹೂ ಇನ್ನೂ ಒಂದು ವಾರ ಇರ್ತೇನಿ ಬಾ ತಪ್ಪಿಸಬ್ಯಾಡಾ” ಎಂದು ಹೊರಟೆ. ಸ್ವಲ್ಪ ದೂರ ಬಂದು ತಿರುಗಿನೋಡಿದೆ, ಆಕೆ ನಗುತ್ತ ತನ್ನ ಗಂಡನಿಗೆ ಏನೋ ಹೇಳ್ತಾ ನಗುತ್ತಿದ್ದಳು. ನನ್ನ ಮುಖದ ಮೇಲೂ ನಸು ನಗುವೊಂದು ಮೂಡಿ ಮರೆಯಾಯಿತು.

ಮನೆಗೆ ಹೋಗ್ತಾ , ಲಕ್ಕಿಯ ಬಗೆಗೆ ಯೋಚಿಸಿದೆ, ಆಕೆಯನ್ನು ಎಲ್ಲ ಕರೆಯುತ್ತಿದ್ದದ್ದು, ಲಂಬಾಣಿ ಲಕ್ಕಿ ಎಂದು, ನಮ್ಮ ಮನೆಯ ಕೆಲಸಕ್ಕೆ ಸಮೀಪದ ತಾಂಡಾದಿಂದ ಬರುತ್ತಿದ್ದಳು. ನಾನಾಗ ಇನ್ನೂಕಾಲೇಜಿನಲ್ಲಿ ಉನ್ಯಾಸಕಳಾಗಿ ಕೆಲಸ ಮಾಡುತ್ತಿದ್ದೆ, ನಮ್ಮ ಮನೆಗೆ (ತೌರು ಮನೆ) ಕೆಲಸಕ್ಕೆ ಬಂದಾಗ ನಾನಿದ್ದರೆ “ ಅಕ್ಕ ಅಕ್ಷರ ಕಲಿಸು” ಎಂದು ಸ್ಲೇಟು ಬಳಪ ಹಿಡಿದು ಬರುತ್ತಿದ್ದಳು ಚುರುಕಿನ ಹುಡುಗಿ, ಬೇಗನೇ ಕಲಿತಳು ಓದು ಬರಹ, ಲೆಕ್ಕ ಆಕೆಗೆ ಬರುತ್ತಿತ್ತು. ನಂತರ ಇಂಗ್ಲಿಷ್ ಕೂಡಾ ಕಲಿಯುತ್ತಿದ್ದಾಳೆ ಎಂದು ತಂಗಿ ಹೇಳಿದ ನೆನಪು. ಆಮೇಲೆ ನಾನೂ ಇತ್ತ ಬೆಂಗಳೂರಿಗೆ ಬಂದೆ ಆಕೆಯೂ ಮನೆ ಕೆಲಸ ಬಿಟ್ಟಳು ಹಾಗಾಗಿ ಸಂಪರ್ಕವಿರಲಿಲ್ಲ. ಅದಾದ ಸುಮಾರು ಆರು ವರ್ಷಗಳ ನಂತರ ಈಗ ಸಿಕ್ಕಿದ್ದಳು.

ಮನೆಗೆ ಹೋದ ಮೇಲೆ, ಊಟ ಮಾಡುವಾಗ, ಮತ್ತೆ ಲಕ್ಕಿ ನೆನಪಾದಳು, ತಂಗಿ ಸುಜಾತಾ  “ ಅಕಿ ಮದಿವಿ ಆಯ್ತು, ಅದಕೂ ಮುಂಚೆ ಅಕಿ ಬ್ಯಾರೆ ಏನೋ ಸಾವಯವ ಕೃಷಿ ಅಂತ ಮಾಡಿ ಪ್ರಶಸ್ತಿನೂ ತೊಗೊಂಡ್ಲು, ಈಗ್ ಇಡೀ ಗಂಗಾಜಲ ತಾಂಡಾಕ ಅಕಿ ಲೀಡರ್, ಅಂತ ಗಂಡನೂ ಚೊಲೋ ಅದಾನಂತ ಒಂದ್ ಸಲ ತಾಂಡಾದ ಹುಡುಗಿನ ಕಾಲೇಜಿಗೆ ಅಡ್ಮಿಶನ್ ಮಾಡಾಕ ಬಂದಿದ್ದ್ಲು” ಎಂದಾಗ ಆಕೆಯನ್ನು ಇನ್ನಷ್ಟು ಮಾತಾಡಿಸಬೇಕಿತ್ತು ಮನೆಗೆ ಬಾ ಎಂದು ಒತ್ತಿ ಹೇಳಬೇಕಿತ್ತು ಎಂದುಕೊಂಡೆ.

ಅಲ್ಲಿಂದ ಎರಡನೆಯ ದಿನ ನಾವೆಲ್ಲ ಅಕ್ಕ ತಂಗಿಯರು ಮಾತಾಡ್ತಾ ಕೂತಾಗ ಗಾಡಿಯ ಸಪ್ಪಳವಾಯ್ತು, ಯಾರಿರಬಹದು ಎಂದು ನೋಡಿದರೆ ಲಕ್ಕಿ ಸ್ಕೂಟಿಯೊಂದರಲ್ಲಿ ಬಂದಿದ್ದಳು. ಕೈಯಲ್ಲಿ ದೊಡ್ಡ ಚೀಲ ಬೇರೆ, ಮುಖದಲ್ಲಿ ಅದೇ ದೊಡ್ಡ ನಗು. “ ಬಾ ಲಕ್ಕಿ ಎಂದಳು ಅಕ್ಕ.” “ಅವ್ವಾ! ಎಲ್ಲಾರು ಅಕ್ಕ್ ತಂಗೇರು ಒಟ್ಟಿಗೇ ಸೇರಿರಲ್ಲಾ” ಎನ್ನುತ್ತಾ ಒಳ ಬಂದ ಲಕ್ಕಿ ಸಂಜೆಯವರೆಗೆ ಹೇಳಿದ ಆಕೆಯ ಬದುಕಿನ ಕಥೆ ಹೆಮ್ಮೆ ಪಡುವಂತಿತ್ತು.

ತಾಂಡಾದಲ್ಲಿ ಅಕ್ಷರ ಕಲಿತವರಲ್ಲಿ ಲಕ್ಕಿಯೇ ಮೊದಲಿಗಳು, ಒಮ್ಮೆ ತಾವು ಉಣ್ಣುತ್ತಿದ್ದ ನವಣೆಯ ಕಿಚಡಿಯನ್ನು ತಾನು ಕೆಲಸ ಮಾಡಿತ್ತಿದ್ದ ಸಾವುಕಾರರ ಮನೆಯ ಸೊಸೆ ಅದೂ ಅಮೆರಿಕದಿಂದ ಬಂದವಳು ಉಣ್ಣುತ್ತಿದ್ದದ್ದನ್ನು ನೋಡಿ ಲಕ್ಕಿಗೆ ಅಚ್ಚರಿಯಾಯಿತು. ಸಮಯ ನೋಡಿ ವಿಚಾರಿಸಿದಾಗ ಆಕೆ ಅದು ಆರೋಗ್ಯಕ್ಕೆ ಒಳ್ಳೆಯದು ಎಂದಳಲ್ಲದೇ ತಾನು ವಾಪಸ್ಸು ಹೋಗುವಾಗ ಶುಚಿಗೊಳಿಸಿದ ನವಣೆಯನ್ನು ತಂದು ಕೊಡುವಂತೆ ಲಕ್ಕಿಗೆ ಹೇಳಿದಳು. ಆನಂತರ ತಂದು ಕೊಟ್ಟಾಗ ತಾನು ಖರ್ಚು ಮಾಡಿದ್ದ ಮೂರು ಪಟ್ಟು ಹಣ ಕೊಟ್ಟ ಆಕೆ , ಇದನ್ನು ತಿಂಗಳಿಗೊಮ್ಮೆ ಪೋಸ್ಟ ಮಾಡ್ತೀಯಾ ಎಂದು ಅಡ್ರೆಸ್ ಬರೆದು ಕೊಟ್ಟು, ಮತ್ತಷ್ಟು ಹಣ ಕೊಟ್ಟಳು. ಮೊದಲು ಒಂದೆರೆಡು ಬಾರಿ ಲಕ್ಕಿಗೆ ಕಷ್ಟವಾಯಿತು ಅದರೆ ನಂತರ ನವಣೆ, ಸಾಮೆ, ಕುಸುಬೆ, ಎಲ್ಲವನ್ನೂ ಸಾವುಕಾರರ ಮನೆಯ ಸೊಸೆಗೂ ಅಕೆ ಕಳಿಸಿದ ಬೇರೆ ಬೇರೆ ವಿಳಾಸಗಳಿಗೂ ಕಳಿಸಲು ಪ್ರಾರಂಭಿಸಿದಳು. ಮಾತ್ರವಲ್ಲ, ಸುತ್ತಮುತ್ತಲ ಹಳ್ಳಿಗಳಿಗೆ ಹೋಗಿ ರೈತರಿಗೆ ಅವನ್ನು ಬೆಳೆಯುವಂತೆ ಹೇಳಿ ಕೊಂಡು ತರುತ್ತಿದ್ದಳು, ತಾಂಡಾದ ಇತರ ಮಹಿಳೆಯರನ್ನು ಸೇರಿಸಿಕೊಂಡು ಹಸನು ಮಾಡಿ ಅವರಿಗೂ ಉದ್ಯೋಗ ಕೊಟ್ಟಳು ಈಗ ಸಿರಿ ಧಾನ್ಯಗಳೊಂದಿಗೆ ಮತ್ತೆ ಕೆಲವು ವಸ್ತುಗಳು ಸೇರಿಕೊಂಡಿವೆ.

ಮದುವೆಯಾದ ನಂತರ ಆಕೆಯ ಗಂಡ ಕೂಡ ಆಕೆಯೊಂದಿಗೆ ಕೈ ಜೋಡಿಸಿದ್ದಾನೆ, ಜೊತೆಗೆ ತಾಂಡಾದ ಹಲವರಿಗೆ ಉದ್ಯೋಗ ಲಭ್ಯವಾಗಿದೆ ಮಾತ್ರವಲ್ಲ ರೈತರೂ ಕೂಡ ಈ ಧಾನ್ಯಗಳನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಲಕ್ಕಿ ಇಲ್ಲಿಗೇ ಸುಮ್ಮನಾಗಿಲ್ಲ ನಮ್ಮಲ್ಲಿಯ ಮಹಿಳೆಯರಿಗೂ ಈ ಧಾನ್ಯಗಳ ಉಪಯೋಗವನ್ನು ತಿಳಿಸಿದ್ದಾಳೆ. ಇದು ಇಂದಿನ ಕಥೆಯಲ್ಲ, ಎಂಟು ವರ್ಷಗಳ ಹಿಂದಿನ ಕಥೆ. ಹೌದು ಆಗಿನ್ನೂ ಸಿರಿಧಾನ್ಯಗಳ ಮಹತ್ವ ಹೆಚ್ಚು ಪ್ರಚಾರ ಪಡೆದಿರಲಿಲ್ಲ. ಆ ಪ್ರದೇಶದಲ್ಲಿ ರೈತರು ಮರೆತಿದ್ದ ಧಾನ್ಯಗಳನ್ನು ಮತ್ತೆ ಬೆಳೆಯುತ್ತಿದ್ದಾರೆ. ಮಹಿಳೆಯರು ಬಳಸುತ್ತಿದ್ದಾರೆ, ಹೀಗೆಯೇ ಹಲವು ಉದಾಹರಣೆಗಳನ್ನು ನಾವು ಇಂದು ನೋಡ ಬಹುದಾಗಿದೆ.

ನಶಿಸಿ ಹೋಗುತ್ತಿರುವ ತಿನಿಸುಗಳು, ಅವುಗಳಿಗಾಗಿ ಬಳಸುವ ವಿವಿಧ ಧಾನ್ಯಗಳನ್ನು ಬಳಸುವ ಮೂಲಕ ಉಳಿ ಸಬಹುದು, ಇದು ಆಹಾರ ಭದ್ರತೆಯನ್ನು ಒದಗಿಸುತ್ತದೆ. ಏರುತ್ತಿರುವ ಭೂಮಿಯ ತಾಪಮಾನ, ಬದಲಾಗುತ್ತಿರುವ ಹವಾಮಾನ, ಅಕಾಲಿಕ, ಅನೀರಿಕ್ಷಿತ ಪ್ರಮಾಣದ ಮಳೆ ಎಲ್ಲ ಒಂದಾಗಿ ಆಹಾರದ ಕೊರತೆ ಉಂಟಾಗುವ ಸಂಭವವನ್ನು ತಪ್ಪಿಸಬೇಕು ಎನ್ನುವುದಾದರೆ, ಕಡಿಮೆ ಮಳೆಯಲ್ಲಿ ಬೆಳೆಯುವ ಸ್ಥಳೀಯ ಬೆಳೆಗಳನ್ನು ಪ್ರೋತ್ಸಾಹಿಸುವುದೊಂದೇ ದಾರಿ. ಅಂತಹ ಕೆಲವಾಗುತ್ತಿರುವುದು ಮಹಿಳೆಯರಿಂದ. ಹಪ್ಪಳ, ಉಪ್ಪಿನಕಾಯಿ, ತೊಕ್ಕು, ಚಟ್ನಿಪುಡಿಗಳು ಕೇವಲ ತಿನಿಸುಗಳಲ್ಲ. ಆ ಎಲ್ಲ ಬೆಳೆಗಳನ್ನುರಕ್ಷಿಸುವ ವಿಧಾನಗಳು. ಮಹಿಳೆಯರು ಅದರಲ್ಲೂ ಗ್ರಾಮೀಣ ಪ್ರದೇಶದ ಮಹಿಳೆಯರು ಇದರಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಾವು ಆಚರಿಸುವ ಸಂಕ್ರಾತಿಯ ವಿಶೇಷ ಅಹಾರಗಳು ಕೂಡ ಇದರ ಒಂದು ಭಾಗ ಎನ್ನುವುದನ್ನು ನಾವು ಮರೆಯಬಾರದು. ಕೇವಲ ಗೋಧಿ, ಮೆಕ್ಕೆಜೋಳ , ಮತ್ತೊಂದೆರೆಡು ಧಾನ್ಯದ ಪದಾರ್ಥಗಳನ್ನು ಬಳಸುವವರಿಗೂ ನಮಗೂ ಇರುವ ವ್ಯತ್ಯಾಸ ಇದು. ಮಹಿಳೆ ಮನಸ್ಸು ಮಾಡಿದರೆ ಜಾಗತಿಕ ಸಮಸ್ಯೆಗಳಿಗೆ ಸ್ಥಳಿಯವಾಗಿ ಉತ್ತರವನ್ನು ಕಂಡುಕೊಳ್ಳುವ ವಿಧಾನವಿದು.


ಸುಮಂಗಲಾ ಎಸ್. ಮುಮ್ಮಿಗಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *