ವಿಜ್ಞಾನಮಯಿ/ಆಹಾರ ವೈವಿಧ್ಯ: ಮಹಿಳೆಯ ಕೊಡುಗೆ – ಸುಮಂಗಲಾ ಎಸ್. ಮುಮ್ಮಿಗಟ್ಟಿ
ಲಕ್ಷಾಂತರ ವರ್ಷಗಳಿಂದ ಮಹಿಳೆ ಉಳಿಸಿಕೊಂಡು ಬಂದಿದ್ದ ಆಹಾರ ವೈವಿಧ್ಯ ಇಂದಿನ ಕುರುಕುಲು ಆಹಾರ ಪದ್ಧತಿ, ಆಧುನಿಕ ಆಹಾರ ಸಂಸ್ಕ್ರತಿಯಿಂದ ಮರೆಯಾಗುತ್ತಿದೆ. ಈ ಬಗ್ಗೆ ಇಲ್ಲಿ ವಿಶ್ಲೇಷಿಸಲಾಗಿದೆ.
ವೈವಿಧ್ಯ ಎಂದರೆ ಏನು? ಎನ್ನುವುದು ನಮ್ಮೆಲ್ಲರಿಗೆ ತಿಳಿದಿರುವ ವಿಷಯ. ಅದು ನಮ್ಮಆಹಾರದಲ್ಲಿರಬಹುದು, ಉಡುಗೆ ತೊಡುಗೆ, ಸಂಸ್ಕೃತಿ, ಆಚಾರ, ವಿಚಾರದಲ್ಲಿರಬಹುದು. ಅದು ಯಾವಾಗಲೂ ಸಂತೋಷವನ್ನು ಕೊಡುವ ವಿಚಾರ, ಸಂಭ್ರಮಿಸಿ ಬದುಕಿನ ಏಕತಾನತೆಯನ್ನು ಹೋಗಲಾಡಿಸಿ ಅದಕ್ಕೊಂದು ಅರ್ಥವನ್ನು ಕೊಡುವ ವಿಷಯವೇ. ವೈಜ್ಞಾನಿಕವಾಗಿಯೂ ಇದು ಸತ್ಯ. ಪರಿಸರಕ್ಕೂ ಭೂಮಿಗೂ ಇದು ಅತ್ಯಗತ್ಯ. ಈ ವೈವಿಧ್ಯವನ್ನು ಉಳಿಸುವುದರಲ್ಲಿ ಮಹಿಳೆಯ ಪಾತ್ರ ಮಹತ್ತರವಾದುದು.
ಸುಮಾರು ಹನ್ನೆರೆಡು ಸಾವಿರ ವರ್ಷಗಳ ಹಿಂದೆ ಮಾನವ ಕಾಡು ಮೇಡುಗಳಲ್ಲಿ ಅಲೆಮಾರಿಯಾಗಿ ಅಲೆದಾಡುತ್ತಿದ್ದಾಗ, ಅವನು ಅಹಾರವನ್ನು ಇಂದಿಗೆ, ನಾಳಿಗೆ ಎಂದು ಸಂಗ್ರಹಿಸಿ ಇಡುತ್ತಿರಲಿಲ್ಲ, ಯಾವುದೇ ಒಂದು ಆಹಾರದ ಮೇಲೆ ಅವಲಂಬಿತನಾಗಿರಲಿಲ್ಲ. ಕಾಡಿನ ಯಾವ ಜಾಗದಲ್ಲಿ, ಯಾವ ಋತುವಿನಲ್ಲಿ ಯಾವ ಹಣ್ಣು ದೊರೆಯುತ್ತದೆ, ಯಾವ ಗೆಡ್ಡೆ, ಗೆಣಸು ಬಲಿಯುತ್ತದೆ ಎನ್ನುವುದು ಅವನಿಗೆ ತಿಳಿದಿತ್ತು. ಅವನ ಬೆಳಗಿನ ಆಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟ ವಿಭಿನ್ನವಾಗಿರುತ್ತಿತ್ತು. ಆಗಲೂ ಕೂಡ ಆಹಾರದ ಹಂಚಿಕೆಯ ಜವಾಬ್ದಾರಿ ಮಹಿಳೆಯದೆ ಆಗಿರುತ್ತಿತ್ತು ಎನ್ನುವುದು ಗಮನಿಸಬೇಕಾದ ಅಂಶ.
ಆದರೆ ಹತ್ತು ಸಾವಿರ ವರ್ಷಗಳ ಹಿಂದೆ ಮಾನವ ಒಂದೆಡೆ ನೆಲೆ ನಿಂತು, ಕೃಷಿಯನ್ನು ಆರಂಭಿಸಿದ ಮೇಲೆ ಅವನ ಆಹಾರ ಶೈಲಿ ಬದಲಾಯಿತು. ಬಹು ಪಾಲು ಕೃಷಿ ಗೋಧಿಯೇ ಆದ್ದರಿಂದ ಅವನ ಆಹಾರವೂ ಕೂಡಾ ಮಾಂಸವನ್ನು ಬಿಟ್ಟರೆ, ಗೋಧಿಯದೇ ಆಗಿರುತ್ತಿತ್ತು. ಅವನ ದಿನದ ಬಹಳ ಸಮಯ ಕೃಷಿ ಭೂಮಿಯಲ್ಲಿಯೇ ಕಳೆದು ಹೋಗುತ್ತಿತ್ತು. ಹಾಗಾಗಿ ಗೆಡ್ಡೆ ಗೆಣಸುಗಳ ಬಳಕೆಗೆ ಮಿತಿ ಬಿತ್ತು. ವಿಕಾಸ ಮುಂದುವರಿದಂತೆಲ್ಲ ಮಾನವನ ಬದುಕು ಸಂಕೀರ್ಣತೆಯಿಂದ ಕೂಡಿತು ಹಾಗೂ ಅವನ ಬದುಕಿನಿಂದ, ಊಟದ ತಟ್ಟೆಯಿಂದ ವೈವಿಧ್ಯ ಕಡಿಮೆಯಾಗುತ್ತಾ ಹೋಯಿತು. ಮಹಿಳೆಯ ಶ್ರಮ ಈಗ ಸಂಗ್ರಹದ ಹಂತದಿಂದ ಸಂಗ್ರಹಿಸಿ ಇಡುವ, ಸುರಕ್ಷಿತವಾಗಿ ಕಾಪಾಡುವ ಹಂತವನ್ನುತಲುಪಿತು. ವೈವಿಧ್ಯ ನಯವಾಗಿ ಮರೆಯಾಗುತ್ತ ಬಂತು.
ಈಗ ನಮ್ಮ ಊಟದ ತಟ್ಟೆಯನ್ನೇ ತೆಗೆದುಕೊಳ್ಳೋಣ, ನಾವೆಷ್ಟು ಬಗೆಯ ಧಾನ್ಯಗಳನ್ನು ಬಳಸುತ್ತಿದ್ದೇವೆ? ಅಕ್ಕಿ, ಗೋಧಿ, ಜೋಳ, ರಾಗಿ, ತೊಗರಿ, ಕಡಲೆ, ಹೆಸರು, ಅಲಸಂದೆ, ಉದ್ದು, ಬಟಾಣಿ, ಮೆಕ್ಕೆಜೋಳ, ನೆಲಗಡಲೆ…ಇನ್ನೂ ಹುಡುಕಿದರೆ,ಮತ್ತಾರು ಸಿಗಬಹುದು. ಇನ್ನು ತರಕಾರಿಯ ವಿಷಯವೂ ಹಾಗೆಯೇ, ಬದನೆ, ಅವರೆ, ಸೌತೆ, ಹೀರೆ, ಬೀನ್ಸ್, ಕ್ಯಾರೆಟ್, ದಪ್ಪ ಮೆಣಸಿನಕಾಯಿ, ಕ್ಯಾಬೀಜ್, ಹೂಕೋಸು, ಗಡ್ಡೆಕೋಸು, ನುಗ್ಗೆ, ಟೊಮ್ಯಾಟೊ, ಬೆಂಡೆ, ತೊಂಡೆ, ಆಲೂಗಡ್ಡೆ, ಬೀಟ್ರೂಟ್ ಒಟ್ಟಾರೆ ಇವು ಒಂದಿಪ್ಪತ್ತು ಎನ್ನೋಣ, ಈಗ ನಮ್ಮ ಪೃಕೃತಿಯ ಕಡೆಗೊಮ್ಮೆ ಕಣ್ಣು ಹಾಯಿಸೋಣ ಅಲ್ಲಿ ಸಾವಿರಾರು ಕಾಯಿ, ಹಣ್ಣು, ಕಾಳು, ಬೀಜ, ಎಲೆ, ಸೊಪ್ಪು ಇವೆ. ಅವು ಯಾವುದನ್ನೂ ನಾವು ಬಳಸುತ್ತಿಲ್ಲ. ಒಂದೊಮ್ಮೆ ನಮ್ಮ ಭತ್ತ, ಗೋಧಿ, ಅಕ್ಕಿ, ರಾಗಿ, ಜೋಳ ಈ ಐದು ಧಾನ್ಯಗಳ ಪೈರಿಗೆ ರೋಗ ಬಂದರೆ ಸಾಕು, ಜಗತ್ತಿನ ಬಹು ಪಾಲು ಜನ ಹಸಿವಿನಿಂದ ಸಾಯುತ್ತಾರೆ. ಏಕೆಂದರೆ ನಿಸರ್ಗ ನಮಗಿತ್ತಿರುವ ಸಾವಿರಾರು ಆಹಾರ ವಸ್ತುಗಳಲ್ಲಿ ಜಗತ್ತಿನ ಹೆಚ್ಚಿನ ಜನ ಇವನ್ನು ಮಾತ್ರ ಬಳಸುತ್ತಾರೆ. ಬಹುತೇಕ ಆಹಾರ ಸಂಸ್ಕೃತಿಗಳಲ್ಲಿ, ಆಹಾರದ ಆಯ್ಕೆಯ ಪ್ರಕ್ರಿಯೆಯಿಂದ ಅದನ್ನು ತಯಾರಿಸುವ ಮತ್ತು ಉಣ ಬಡಿಸುವ ಕೆಲಸದವರೆಗೆ ಎಲ್ಲವೂ ಮಹಿಳೆಯ ಜವಾಬ್ದಾರಿಯೇ ಆಗಿರುವುದರಿಂದ ಮಹಿಳೆಗೆ ಇದೊಂದು ದೊಡ್ಡ ಸವಾಲಾಗಿದೆ.
ಆದರೆ ಪ್ರಾಣಿ ಪಕ್ಷಿಗಳ ವಿಷಯದಲ್ಲಿ ಹಾಗಲ್ಲ. ಅವುಗಳ ಆಹಾರ ಕ್ರಮ ಪರಿಸರ ಸ್ನೇಹಿಯಾಗಿದ್ದುಆಯಾ ಋತುಮಾನಕ್ಕೆ ತಕ್ಕಂತಹ ಆಹಾರ ಕ್ರಮವನ್ನು ಅವು ಅನುಸರಿಸುತ್ತವೆ. ನಮ್ಮಂತೆ, ಚಳಿಗಾಲದಲ್ಲಿ ಕಲ್ಲಂಗಡಿ, ಬೇಸಿಗೆಯಲ್ಲಿ ಕಿತ್ತಳೆ, ಎಲ್ಲ ಋತುಮಾನಗಳಲ್ಲಿ ಮಾವನ್ನು ತಿನ್ನುವುದಿಲ್ಲ. ಅವುಗಳ ಆಹಾರ ವೈವಿಧ್ಯ ಹೇಗಿದೆಯೆಂದರೆ ಯಾವುದಾದರೂ ಒಂದು ಪ್ರಭೇದ ಹಾನಿಗೀಡಾದರೆ, ಮತ್ತೊಂದು ಅವುಗಳನ್ನು ಪೋಷಿಸುತ್ತದೆ. ಇದೆಲ್ಲವೂ ನಮಗೆ ಗೊತ್ತಿರುವ ವಿಷಯವೇ ಅದಕ್ಕೆ ಈಗೇನು ಮಾಡೋಣಾ? ಎಂಬ ಪ್ರಶ್ನೆ ಬರುತ್ತದೆ. ಹೌದು ಇನ್ನೂ ಕಾಲ ಮಿಂಚಿಲ್ಲ ಪೃಕೃತಿಗೆ ಪೂರಕವಾದ ಬದುಕಿನ ಶೈಲಿಯನ್ನು ನಾವು ಅಳವಡಿಸಿಕೊಳ್ಳಲೇ ಬೇಕಾಗಿದೆ. ಈ ಭೂಮಿಯ ಮೇಲಿನ ಇತರ ಜೀವಿಗಳ ಮೇಲೆ ನಾವು ಸಂಪೂರ್ಣವಾಗಿ ಅವಲಂಬಿತರಾಗಿದ್ದೀವೆ. ಬರಿದೇ ಬಹಳಷ್ಟು ಸಾಧಿಸಿದ್ದೇವೆ ಎಂದುಕೊಳ್ಳುವ ನಾವು ಕೇವಲ ದುಂಬಿಗಳಿಲ್ಲದಿದ್ದರೆ ಹಸಿವಿನಿಂದ ಕಂಗಾಲಾಗಬೇಕಾಗುತ್ತದೆ.
ಪರಾಗಸ್ಪರ್ಶ ಕ್ರಿಯೆ ನಡೆದು ಹೂವು ಕಾಯಾಗಿ , ಹಣ್ಣು ಬೀಜವಾಗಲು ಇವು ಬೇಕೇ ಬೇಕು, ಆದರೆ ನಾವು ಅತಿಯಾದ ಇಳುವರಿಯ ಆಸೆಗಾಗಿ ಉಪಯೋಗಿಸುತ್ತಿರುವ ಕೀಟನಾಶಕಗಳು ಅವನ್ನು ಕೊಲ್ಲುತ್ತಿವೆ ನಿಜ, ಅದರೊಂದಿಗೆ ನಮಗೆ ಬೇಕಾಗಿರುವ ದುಂಬಿ, ಚಿಟ್ಟೆ ಗಳನ್ನೂ ಸಹ ಕೊಲ್ಲುತ್ತಿವೆ. ಕೃತಕ ಪರಾಗ ಸ್ಪರ್ಶ ಮಾಡಬಹುದಾದರೂ ಎಷ್ಟು ಹೊಲಗಳಿಗೆ ಮಾಡಲು ಸಾಧ್ಯ? ಸಾಲದ ಹೊರೆಯಲ್ಲಿರುವ ರೈತ ಮತ್ತಷ್ಟು ಕೂಲಿಯಾಳುಗಳನ್ನು ನೇಮಿಸಿಕೊಳ್ಳಬಲ್ಲನೇ? ಆಗ ಮತ್ತೆ ಹೆಚ್ಚಾಗುವ ಆಹಾರದ ಧಾನ್ಯಗಳ ಬೆಲೆಯನ್ನು ನಾವು ತೆರಬಲ್ಲೆವೇ? ಯೋಚಿಸಬೇಕಾದ ವಿಷಯ. ನಮ್ಮ ಆಹಾರ ಕ್ರಮದಲ್ಲಿ ನಾವು ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಮಾಡಿಕೊಳ್ಳಲೇ ಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ, ಇದರ ಅರಿವು ಮೂಡುತ್ತಿದೆ. ಪರಿಣಾಮವಾಗಿ, ಹಿಂದೊಮ್ಮೆ ಬಳಸುತ್ತಿದ್ದ ಮರೆತು ಹೋಗಿದ್ದ ತೃಣ ಧಾನ್ಯಗಳೆಂದು ಕರೆಸಿಕೊಳ್ಳುತ್ತಿದ್ದ ಕಿರು ಧಾನ್ಯಗಳು, ಈಗ ಸಿರಿ ಧಾನ್ಯಗಳಾಗಿ ಬಳಕೆಗೆ ಬರುತ್ತಿವೆ. ನವಣೆ, ಸಾಮೆ, ಸಜ್ಜೆ, ಅರ್ಕ್, ಬರಗುಗಳು ಮತ್ತೆ ಬಳಕೆಯಾಗುತ್ತಿವೆ. ಅಗಸೆ, ಗುರೆಳ್ಳು, ಆಳಿವೆ, ಎಳ್ಳು ಗಳ ಪೋಷಕಾಂಶಗಳ ಪರಿಚಯ ಜನರಿಗಾಗುತ್ತಿದೆ. ಇವನ್ನು ಬಳಸುವ ಆಸಕ್ತಿಯನ್ನು ಜನರು ತೋರಿಸುತ್ತಿದ್ದಾರೆ. ಇವುಗಳನ್ನು ಬಳಸಿಕೊಂಡು ನಮ್ಮ ಮಹಿಳೆಯರು ಹೊಸ ಹೊಸ ಅಡುಗೆಯನ್ನು ಮಾಡಿ ಮಕ್ಕಳಿಗೆ ತಿನಿಸುವ ಪ್ರಯತ್ನ ಮಾಡುತ್ತಿದ್ದರೆ
ಆದರೆ ಮತ್ತೆ ಈ ಧಾನ್ಯಗಳು ಸಹ ಮಾಲ್ ಗಳ ಮಳಿಗೆಗಳಲ್ಲಿ ಕಾಣುತ್ತಿರುವುದು ಮಾತ್ರ ಬೇಸರದ ಸಂಗತಿ. ಇವು ಬಹು ರಾಷ್ಟ್ರೀಯ ಕಂಪನಿಗಳ ಲಾಭ ಗಳಿಕೆಯ ಮಾರ್ಗ ದರ್ಶಿಗಳಾಗಬಾರದು. ನಮ್ಮ ಆಹಾರ ಧಾನ್ಯದ ವೈವಿಧ್ಯದ ಲಾಭ ನಮ್ಮ ಜನರಿಗೇ ಆಗ ಬೇಕು. ಬೆಳೆದವರಿಗೆ ಆದರಂತೂ ಮತ್ತಷ್ಟು ಚೆನ್ನ.
ಆಧುನಿಕತೆಯ ಅಂಧ ಅನುಕರಣೆಯಲ್ಲಿ ನಮ್ಮ ಯುವಜನಾಂಗ ಪಿಜ್ಜಾ, ಬರ್ಗರ್, ಹಾಟ್ ಡಾಗ್, ನೂಡಲ್ಸ್, ಎಂಬಿತ್ಯಾದಿ ವಿಪರೀತ ಮಸಾಲೆ, ರಾಸಾಯನಿಕ ಭರಿತ ಆಹಾರಕ್ಕೆ ತಮ್ಮ ನಾಲಿಗೆಯನ್ನು ಹೊಂದಿಸಿಕೊಳ್ಳುತ್ತಿದ್ದಾರೆ. ಹುಗ್ಗಿ, ಹೋಳಿಗೆ, ಪಾಯಸ, ಕಡುಬು, ಜಲೇಬಿ, ಕಜ್ಜಾಯ ಚಿರೋಟಿಗಳ ಸ್ಥಾನವನ್ನು, ಕೇಕ್, ಕುಕಿ, ಪೇಸ್ಟ್ರಿಗಳು ಆಕ್ರಮಿಸಿಕೊಳ್ಳುತ್ತಿವೆ.
ಇವುಗಳ ಮೂಲ ಘಟಕಗಳನ್ನೊಮ್ಮೆ ನೋಡಿ ಎಲ್ಲವೂ ಗೋಧಿ, ಮೈದಾಗಳಿಂದಾದವುಗಳೇ ಅಂದರೆ ನಮ್ಮ ಮಕ್ಕಳು ವೈವಿಧ್ಯಮಯ ಊಟದ ತಟ್ಟೆಯಿಂದ ವಂಚಿತರಾಗುತ್ತಿದ್ದಾರೆ. ಅಜಿನೋಮೋಟೋ ದ ಚುರುಕು ರುಚಿಯನ್ನು ಸವಿದಿರುವ ನಾಲಿಗೆಗಳಿಗೆ ಮನೆ ಅಡುಗೆಯನ್ನು ಉಣ್ಣುವಂತೆ ಮಾಡುವುದು ಇಂದು ತಾಯಂದಿರ ಮುಂದಿರುವ ಅತಿ ದೊಡ್ಡ ಸವಾಲು. ಅದಕ್ಕಾಗಿ ತಾಯಿ ಅದೆಷ್ಟೇ ಕಷ್ಟ ಪಟ್ಟು ಅಡುಗೆ ಮಾಡಿದ್ದರೂ ಕೂಡ “ಮಾಮ್ ನಾನು ಪಿಜ್ಜಾ ಆರ್ಡರ್ ಮಾಡ್ತೀನಿ ನಂಗೆ ಅಕ್ಕಿ ರೊಟ್ಟಿ ಬೇಡಾ” ಎಂದು ಮುಖ ಊದಿಸಿದರೆ ತಾಯಿ ಏನೂ ಮಾಡುವವಂತಿಲ್ಲ.
ನಮ್ಮ ಪರಿಸರದಲ್ಲಿ ವೈವಿಧ್ಯಮಯ ಸಸ್ಯಗಳು, ಪ್ರಾಣಿಗಳು ಇದ್ದಷ್ಟೂ ನಮ್ಮ ಬದುಕೂ ಸುರಕ್ಷಿತ ಹಾಗೂ ಸಮೃದ್ಧವಾಗಿರುತ್ತವೆ. ಇದು ನಾಡಿಗೂ ಕಾಡಿಗೂ ಅನ್ವಯಿಸುತ್ತದೆ. ವೈಜ್ಞಾನಿಕವಾಗಿ ಪ್ರದೇಶವೊಂದರಲ್ಲಿಇರುವ ಜೀವಿಗಳ ಒಟ್ಟು ಮೊತ್ತವನ್ನು ಆ ಪ್ರದೇಶದ ಜೈವಿಕ ವೈವಿಧ್ಯ ಎಂದು ಕರೆಯುತ್ತೇವೆ, ಇದರಂತೆ ಅಹಾರದ ವೈವಿಧ್ಯ, ಜಲಚರಗಳ ವೈವಿಧ್ಯ, ಬೆಳೆ ವೈವಿಧ್ಯ, ಔಷಧೀಯ ಸಸ್ಯಗಳ ವೈವಿಧ್ಯ ಇತ್ಯಾದಿಯಾಗಿ ಸಂಸ್ಕೃತಿಯ ವೈವಿಧ್ಯವೂ ಸೇರಿದಂತೆ ಎಲ್ಲ ವೈವಿಧ್ಯಗಳು ಇದ್ದಾಗ ವೈಜ್ಞಾನಿಕವಾಗಿ ಈ ಹೋಮೋ ಸೇಪಿಯನ್ನನ ಬದುಕು ಸುಗಮಾವಾಗಿರುತ್ತದೆ. ಭೂಮಿಯ ಮೇಲೆ ಯಾವುದೋ ಕಾರಣಕ್ಕಾಗಿ ಭೂಮಿಯ ಮೇಲಿನ ಎಲ್ಲ ಜೀವಿಗಳು ಅಳಿದು ಹೋದವು ಎಂದುಕೊಳ್ಳೋಣ, ಆಗ ಮಾನವ ಬದುಕಿರಲಾರ. ಅದೇ ಅಕಸ್ಮಾತಾಗಿ ಮಾನವ ಅಳಿದು ಹೋದರೆ, ಉಳಿದೆಲ್ಲಾ ಜೀವಿಗಳು ಈಗಿರುವುದಕ್ಕಿಂತ ಹೆಚ್ಚು ಆರಾಮವಾಗಿರುತ್ತವೆ.ಏಕೆಂದರೆ ಅವುಗಳನ್ನು ವಿನಾಶದಂಚಿಗೆ ತಳ್ಳುತ್ತಿರುವ ಮಾನವನ ಕಾಟ ಇರುವುದಿಲ್ಲ. ಆದರೆ ಅಂತಹ ಪರಿಸ್ಥಿತಿ ಆ ಹಂತಕ್ಕೆ ಹೋಗದಂತೆ ಮಹಿಳೆ ಸತತವಾಗಿ ಪ್ರಯತ್ನ ಮಾಡುತ್ತಾ ಬರುತ್ತಿದ್ದಾಳೆ. ಇಂದು ಭೂಮಿಯ ಮೇಲೆ ಏನಾದರೂ ಜೈವಿಕ ವೈವಿಧ್ಯ ಉಳಿದಿದ್ದರೆ, ಅದೂ ಕೂಡಾ ಮಹಿಳೆಯ ಕೊಡುಗೆಯೇ ಎನ್ನುವುದನ್ನು ನಾವಿಲ್ಲಿ ನೆನೆಯಲೇಬೇಕು.
ಸುಮಂಗಲಾ ಎಸ್. ಮುಮ್ಮಿಗಟ್ಟಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.