ವಿಜ್ಞಾನಮಯಿ/ ಅವನು-ಅವಳು ಒಂದು ವೈಜ್ಞಾನಿಕ ಚಿಂತನೆ – ಸುಮಂಗಲಾ ಎಸ್. ಮುಮ್ಮಿಗಟ್ಟಿ

ನಮ್ಮ ಸುತ್ತ ಮುತ್ತ ಸಮಾಜದಲ್ಲಿ ಇಂದು ನಡೆಯುತ್ತಿರುವ ಸ್ತ್ರೀ ಮತ್ತು ಪುರುಷರ ನಡುವಿನ ಸಂಘರ್ಷವನ್ನು ನೋಡಿದಾಗ, ನಿಜಕ್ಕೂ ಈ ಹೋಮೋಸೆಪಿಯನ್‌ ನ ಬಗ್ಗೆ ಜಿಗುಪ್ಸೆ ಉಂಟಾಗುತ್ತದೆ, ಸೃಷ್ಟಿಯ ಅತ್ಯುನ್ನತ ಮತ್ತು ಮತಿವಂತನಾದ ಈ ಜೀವಿಯನ್ನು ಪ್ರಕೃತಿ ತನ್ನ ಪ್ರಯೋಗಶಾಲೆಯಲ್ಲಿ ನಿರ್ಮಿಸಿದ್ದು ಇದಕ್ಕಾಗಿಯೇ?  ಏಕ ಕೋಶ ಜೀವಿಯಿಂದ ಸಹಸ್ರಾರು ಮಜಲುಗಳನ್ನು ಹಾಯ್ದು ಉದಿಸಿದ ಈ ಜೀವಿ ಈ ಹಾದಿಯಲ್ಲಿ ಕಲಿತದ್ದಾದರೂ ಏನನ್ನು?  ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ

ನಿಜ ನಿಸರ್ಗ ಸೃಷ್ಟಿಸಿದ್ದು ಗಂಡು ಮತ್ತು ಹೆಣ್ಣು ಜೀವಿಗಳನ್ನು ಮಾತ್ರ ಮಹಿಳೆ, ಮತ್ತು ಪುರುಷರನ್ನು ಸ್ರಷ್ಟಿಸಿದ್ದು,  ಸಮಾಜ ಮತ್ತು ಸಂಸ್ಕ್ರತಿ ನಿಸರ್ಗದ ಉದ್ದೇಶ. ಅ ಪ್ರಭೇದದ ತಳಿಯನ್ನು ಭೂಮಿಯ ಮೇಲೆ ಮುಂದುವರಿಸಿಕೊಂಡು ಹೋಗಿ ವಿಕಾಸದ ಕ್ರಿಯೆಯನ್ನು ಚಾಲನೆಯಲ್ಲಿ ಇಡುವುದು ಮಾತ್ರವಾಗಿತ್ತು.  xx ಕ್ರೋಮೋಸೋಮುಗಳಿದ್ದರೆ ಅದು ಹೆಣ್ಣು ಮತ್ತು xy ಕ್ರೋಮೋಸೋಮುಗಳಿದ್ದರೆ ಅದು ಗಂಡು ಜೀವಿಯಾಗುತ್ತದೆ. ಆದರೆ ಸ್ತ್ರೀ ಮತ್ತು ಪುರುಷ ಎಂಬ ವಿಭಜನೆಯ ಹಿಂದೆ ಕುಟುಂಬ ಮತ್ತು ಸಮಾಜವನ್ನು ನಡೆಸಿಕೊಂಡು ಹೋಗುವ ಉದ್ದೇಶವಿತ್ತು. ಅಲ್ಲಿ ಜೀವ ಶಾಸ್ತ್ರೀಯ ಉದ್ದೇಶವಿದ್ದರೆ ಇಲ್ಲಿ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಉದ್ದೇಶವಿತ್ತು. ಎರಡೂ ಸದುದ್ದೇಶಗಳೇ, ಅಂದಾಗ, ಈ ಮೇಲು ಕೀಳಿನ, ಯೋಗ್ಯ ಅಯೋಗ್ಯತೆಯ, ಪ್ರಬಲ ದುರ್ಬಲ, ಮಾನದಂಡಗಳು ನುಸುಳಿದ್ದು ಯಾವಾಗ? ಯಾಕೆ? ಇದಕ್ಕೆ ಉತ್ತರವನ್ನು ಕಂಡು ಕೊಳ್ಳಲು ವಿಕಾಸದ ಹಾದಿಯಲ್ಲಿ ಒಂದಷ್ಟು ದೂರ ಪಯಣಿಸಿ ನೋಡುವುದು ಅನಿವಾರ್ಯ.

ಏಕ ಕೋಶ ಜೀವಿಯಿಂದ ಬಹುಕೋಶ ಜೀವಿಯ ಉದಯವಾದಾಗ ದೇಹದ ಎಲ್ಲ ಜೀವಕೋಶಗಳು ಸಂತಾನೋತ್ಪತ್ತಿಯನ್ನು ಮಾಡುವ ಬದಲಿಗೆ, ಕೆಲವು ಜೀವಕೋಶಗಳು ಮಾತ್ರ ಈ ಕೆಲಸವನ್ನು ಮಾಡಲು ಪ್ರಾರಂಭಿಸಿದವು. ಹಾಗೆಯೇ ಬೇರೆ ಬೇರೆ ಕೆಲಸಗಳನ್ನು ಬೇರೆ ಬೇರೆ ಜೀವಕೋಶಗಳು ಮಾಡಿದವು, ಅಂದರೆ ಕೆಲಸದ ಹಂಚಿಕೆಯಾಯಿತು. ಇಲ್ಲಿಯಾವ ಕೋಶವೂ ಮೇಲಲ್ಲ ಯಾವುದೂ ಕೀಳಲ್ಲ,  ಮುಂದೆ ಇದುವೇ ಅಗಾಂಗ ಹಂತದ ಜೀವಿಗಳ ಉಗಮವಾದಾಗ, ಸಂತಾನಭಿವೃದ್ಧಿಗಾಗಿ ವಿಶೇಷ ಅಂಗಗಳು ರಚನೆಯಾದವು, ಇದು ಲೈಂಗಿಕ ಸಂತಾನಭಿವೃದ್ಧಿಗೆ ಕಾರಣವಾಯಿತು. ಕೆಲವು ಜೀವಿಗಳಲ್ಲಿ ಗಂಡು ಮತ್ತು ಹೆಣ್ಣು ಸಂತಾನಭಿವೃದ್ಧಿಯ ಅಂಗಾಂಗಳೆರೆಡೂ ಒಂದೇ ಜೀವಿಯಲ್ಲಿದ್ದು ಅವುಗಳ ನಡುವೆಯೆ ಗಂಡು ಮತ್ತು ಹೆಣ್ಣು ಲಿಂಗ ಕೋಶಗಳ ಮಿಲನವಾಗುತ್ತಿತ್ತು. ಮತ್ತೂ ಮುಂದುವರಿದ ಜೀವಿಯಲ್ಲಿ ಗಂಡು ಮತ್ತು ಹೆಣ್ಣು ಸಂತಾನಭಿವೃದ್ಧಿಯ ಅಂಗಾಂಗಳೆರೆಡು ಒಂದೇ ಪ್ರಭೇದದ ಬೇರೆ ಬೇರೆ ಜೀವಿಗಳಲ್ಲಿದ್ದು ಅವುಗಳ ನಡುವೆ ಮಿಲನವಾದಾಗ ಹೆಣ್ಣು ಜೀವಕೋಶ ಗಂಡು ಜೀವಕೋಶದೊಡನೆ ಸೇರಿದಾಗ ಫಲಿತಗೊಂಡು ತನ್ನಂತಹದೇ ಮತ್ತೊಂದು ಜೀವಿಯ ಉಗಮಕ್ಕೆ ಕಾರಣವಾಗುತ್ತಿತ್ತು. ಈ ಫಲಿತಗೊಳ್ಳುವ ಕ್ರಿಯೆ ದೇಹದ ಒಳಗೆ ಅಥವಾ ಹೊರಗೆ ನಡೆಯುತ್ತಿತ್ತು. ಇಲ್ಲಿಯೂ ಕೂಡ ಗಂಡು ಅಥವಾ ಹೆಣ್ಣು ಯಾವುದೂ ಮೇಲಾಗಲೀ ಕೀಳಾಗಲಿ ಇರಲಿಲ್ಲ. ಮತ್ತೂ ಮುಂದುವರಿದ (ಜೀವಶಾಸ್ತ್ರೀಯವಾಗಿ) ಜೀವಿಗಳಲ್ಲಿಈ ಕ್ರಿಯೆ ಹೆಣ್ಣು ಜೀವಿಯ ಶರೀರದ ಒಳಗೆ ನಡೆದು ಅದು ಫಲಿತಗೊಂಡ ಅಂಡಾಣು ಅಥವಾ ಮೊಟ್ಟೆಯನ್ನು ಇಡುತಿತ್ತು. ಇದುವರೆಗೆ ತನ್ನ ಲೈಂಗಿಕ ಕೋಶ ಅಥವಾ ವೀರ್ಯಾಣುವನ್ನು ಹೆಣ್ಣಿನ ದೇಹಕ್ಕೆ ಸೇರಿಸುವಲ್ಲಿಗೆ ಗಂಡಿನ ಕೆಲಸ ಮುಗಿದು ಹೋಗುತ್ತಿತ್ತು. ಈಗ ಮೊಟ್ಟೆಯನ್ನು ಕಾಯ್ದು ಮರಿಮಾಡಲು ಕೆಲವು ಪ್ರಭೇದದ ಗಂಡು ಜೀವಿಗಳು ತಮ್ಮ ಸಹಾಯವನ್ನು ನೀಡಲು ಪ್ರಾರಂಭಿಸಿದವು. ಆದರೂ ಈ ಕೆಲಸ ಹೆಣ್ಣಿನ ಪ್ರಾಥಮಿಕ ಕೆಲಸವೇ ಆಗಿತ್ತು ಮತ್ತು ಈ ಕಾರ್ಯ ನಿರ್ವಹಿಸುವಾಗ ಅದು ಎಷ್ಟೋ ಬಾರಿ ತನ್ನ ಜೀವವನ್ನು ಕಳೆದುಕೊಳ್ಳುತ್ತದೆ. ಉದಾಹರಣೆಗೆ ಅಳಿವಿನಂಚಿನಲ್ಲಿರುವ ಮಂಗಟ್ಟೆ ಅಥವಾ ಹಾರ್ನಬಿಲ್ ಅಥವಾ ಓಂಗಿಲೆ ಅಥವಾ ಮಳೆ ಕಾಡು ಹಕ್ಕಿಗಳಲ್ಲಿ ಗಂಡು ಹೆಣ್ಣುಹಕ್ಕಿಗಳೆರೆಡೂ ಸೇರಿ ಎತ್ತರದ ಮರದ ಮೇಲೆ ಪೊಟರೆಯೊಂದನ್ನು ಹುಡುಕಿ ಒಂದಾಗುತ್ತವೆ, ಆನಂತರ ಹೆಣ್ಣು ಹಕ್ಕಿ ತನ್ನ ರೆಕ್ಕೆಯ ಪುಕ್ಕಗಳನ್ನೆಲ್ಲ ಉದುರಿಸಿ ಪೊಟರೆಯೊಳಗೆ ಮೆತ್ತೆಯನ್ನು ಮಾಡಿ ಮೊಟ್ಟೆಯನ್ನಿಡುತ್ತದೆ. ಇದಾದ ನಂತರ ಹೆಣ್ಣು ಹಕ್ಕಿ ಮೊಟ್ಟೆಗಳ ಮೇಲೆ ಕಾವು ಕೂಡತ್ತದೆ, ಈಗ ಗಂಡು ಹಕ್ಕಿ ಆ ಪೊಟರೆಯ ಬಾಯಿಯನ್ನು ತನ್ನ ಹಿಕ್ಕೆ ಮತ್ತು ಜೊಲ್ಲನ್ನು ಸೇರಿಸಿ ಸಿಮೆಂಟಿನಂತಹ ವಸ್ತುವಿನಿಂದ ಮುಚ್ಚುತ್ತದೆ, ಹಾಗೆ ಮಾಡುವಾಗ ಗಂಡು ಹಕ್ಕಿ ಅದರಲ್ಲಿ ತನ್ನಕೊಕ್ಕು ಮಾತ್ರ ಒಳಹೋಗುವಂತಹ ರಂಧ್ರವನ್ನು ಬಿಡುತ್ತದೆ. ಆ ಗಟ್ಟಿಯಾದ ಪದರವನ್ನು ಹೊರಗಿನಿಂದ ಗಂಡು ಹಕ್ಕಿ ತನ್ನ ತಲೆಯ ಮೇಲಿನ ಕೋಡಿನಂತಹ ರಚನೆಯಿಂದ ಒಡೆದು ತೆಗೆದಾಗ ಮಾತ್ರ ಒಳಗಿರುವ ಹೆಣ್ಣು ಮತ್ತು ಮರಿ ಹೊರ ಬರಲು ಸಾಧ್ಯ. ಒಮ್ಮೆ ಒಳಸೇರಿದ ಹೆಣ್ಣು ಹಕ್ಕಿ, ಮೊಟ್ಟೆಗಳು ಮರಿಗಳಾಗಿ ತನ್ನ ಪುಕ್ಕಗಳು ಮತ್ತೆ ಮೂಡುವವರೆಗೆ ಅಹಾರಕ್ಕಾಗಿ ಗಂಡನ್ನು ಅವಲಂಬಿಸುತ್ತದೆ. ಗಂಡು ಹಕ್ಕಿ ಆಹಾರ ತರುತ್ತದೆ, ಆದರೆ ಅದು ಆಹಾರವನ್ನು ತರದಿದ್ದರೆ, ಅಥವಾ ಅದನ್ನು ಯಾರಾದರೂ ಕೊಂದರೆ ಹೆಣ್ಣು ಹಕ್ಕಿ ಆಹಾರವಿಲ್ಲದೆ ಮರಿಗಳೊಂದಿಗೆ ಸತ್ತು ಹೋಗುತ್ತದೆ.

ಇದಕ್ಕಿಂತಲೂ ಮುಂದುವರಿದ ಸಸ್ತನಿಗಳಲ್ಲಿ ಮಾನವನೂ ಸೇರಿದಂತೆ ಬಹುತೇಕ ಜೀವಿಗಳಲ್ಲಿ ಫಲವಂತಿಕೆಯ ಕ್ರಿಯೆ ಹೆಣ್ಣಿನ ದೇಹದ ಒಳಗೆ ನಡೆಯುತ್ತದೆ ಮತ್ತು ಗರ್ಭಾವಸ್ಥೆ ದೀರ್ಘಾವಧಿಯದಾಗಿರುತ್ತದೆ. ಈ ಜೀವಿಗಳಲ್ಲಿ ಗಂಡು ತನ್ನ ವೀರ್ಯಾಣುವನ್ನು ಸೇರಿಸಲು ಸೂಕ್ತ ಹೆಣ್ಣಿಗಾಗಿ ಪೈಪೋಟಿ ನಡೆಸುತ್ತದೆ. ಅದಕ್ಕಾಗಿ ಗಂಡು ತನ್ನ ಕೇಸರ, ಸದೃಢ ಶರೀರದಿಂದ  ಮುಂತಾದ ಕಾಣಿಕೆಗಳನ್ನು ಕೊಟ್ಟು ಹೆಣ್ಣನ್ನು ಆಕರ್ಷಿಸುತ್ತದೆ. ಮಾನವ ಅಲೆಮಾರಿಯಾಗಿದ್ದಾಗಲೂ ಇದು ಜಾರಿಯಲ್ಲಿತ್ತು. ಕೆಲವೊಮ್ಮೆ ಇಂದಿಗೂ ಕಾಣುತ್ತೇವೆ.

ಈಗ ಜೀವಶಾಸ್ತ್ರದೊಂದಿಗೆ ಒಂದಷ್ಟು ಇತಿಹಾಸವನ್ನು ಗಮನಿಸೋಣ. ಮನುಷ್ಯ ಒಂದು ಕಡೆ ನೆಲೆ ನಿಂತು ಕೃಷಿಯನ್ನು ಪ್ರಾಂಭಿಸುವ ಮುನ್ನ ಅಲೆಮಾರಿಯಾಗಿದ್ದ ಆಗ ಗುಂಪಿನ ನಾಯಕರು ಹೆಣ್ಣು ಅಥವಾ ಮಹಿಳೆಯಾಗಿದ್ದ ಉದಾಹರಣೆಗಳು ಇವೆ, ಆ ಗುಂಪುಗಳನ್ನು ಆಕೆಯ ಹೆಸರಿನಲ್ಲಿ ಅಂದರೆ ಗಂಗಾಸೂನುಗಳು, ಯಮುನಾಸೂನುಗಳು ಎಂದು ಗುರುತಿಸುತ್ತಿದ್ದರು ನಾಯಕಿಯ ಸ್ಥಾನಕ್ಕಾಗಿ ಪೈಪೋಟಿ ಇರುತ್ತಿತ್ತು. ಆಗಲೂ ಮಹಿಳೆ ಗರ್ಭ ಧರಿಸುತ್ತಿದ್ದಳು, ಹೆರುತ್ತಿದ್ದಳು, ಆ ಅವಧಿಯಲ್ಲಿ ಆಕೆಗೆ ಅಹಾರಕ್ಕಾಗಿ ಮತ್ತು ಮಗುವನ್ನು ಬೆಳೆಸಲು ಇತರರ ಸಹಾಯ ಬೇಕಾಗುತ್ತಿತ್ತು ಗುಂಪಿನ ಇತರ ಸದಸ್ಯರ ಸಹಾಯ ದೊರೆತು ಇದು ಸಾಧ್ಯವಾಗುತ್ತಿತ್ತು. ಇದೂ ಮತ್ತೂ ಮುಂದುವರೆದು, ಕುಟುಂಬ ವ್ಯವಸ್ಥೆಯ ವಿಕಾಸವಾದಾಗ ಮಹಿಳೆಗೆ ತನ್ನ ಅಸಹಾಯಕ ಪರಿಸ್ಥಿತಿಯ ಸಂದರ್ಭದಲ್ಲಿ ಗಂಡಿನ ಸಹಾಯ ಅನಿವಾರ್ಯವಾಯಿತು, ಈ ಅವಲಂಬನೆ ಪುರುಷನನ್ನು ಪ್ರಬಲನನ್ನಾಗಿಸಿತು. ಪಿತೃ ಪ್ರಧಾನ ಕುಟುಂಬ ಮತ್ತು ಪುರುಷ ಪ್ರಧಾನ ಸಮಾಜಗಳ ನಿರ್ಮಾಣವಾಯಿತು. ಕ್ರಮೇಣ ಮಹಿಳೆಯ ಕೆಲಸ ಮನೆಗೆ ಸೀಮಿತವಾಯಿತು. ಇದಕ್ಕೆ ಆಕೆ ಹೊರಗಿನ ಕೆಲಸಗಳನ್ನು ನಿರ್ವಹಿಸಲು ದೈಹಿಕವಾಗಿ ಅಸಮರ್ಥಳು ಎಂಬ ಕಾರಣ ಹುಟ್ಟಿಕೊಂಡಿತು.

ಪುರುಷ ದೈಹಿಕವಾಗಿ ಮಹಿಳೆಗಿಂತ ಸಮರ್ಥನಾದುದರಿಂದ, ಅವನು ಆಕೆಗೆ ಸಹಾಯ ಮಾಡುತ್ತಿರುವುದರಿಂದ ಆಕೆ ಅವನ ಸ್ವತ್ತು ಎಂಬ ಭಾವನೆ ಬೆಳೆಯಿತು. ಯಾಕೆ ಮಹಿಳೆ ಪುರುಷನ ಮೇಲೆ ಅಷ್ಟೊಂದು ಅವಲಂಬಿತಳಾದಳು? ಸಾಮಾನ್ಯವಾಗಿ ಮಹಿಳೆ ಪುರುಷನಿಗಿಂತ ಒಳ್ಳೆಯ ಆಯೋಜಕಳು, ಸಮಾಧಾನವುಳ್ಳವಳು ಮತ್ತು ಎಲ್ಲರೊಡನೆ ಹೊಂದಿಕೊಂಡು ಹೋಗುವವಳು ಎಂಬ ಬಿರುದನ್ನು ಪಡೆದವಳು. ಆದರೂ ಕೂಡ ಆಕೆ ಯಾಕೆ ಪುರುಷನಿಗಿಂತ ಹಿಂದುಳಿಯಬೇಕಾಯಿತು? ಕೇವಲ ಪುರುಷ ಆಕೆಗಿಂತ ದೈಹಿಕವಾಗಿ ಬಲಾಢ್ಯನೆಂದೇ? ಆದರೆ ವಿಕಾಸದ ಹಾದಿಯಲ್ಲಿ ಹೋಮೋಸೇಪಿಯನ್ ನಿಗಿಂತ   ಹಿಂದಿರುವ ಅನೆಗಳಲ್ಲಿ ಹೆಣ್ಣಾನೆಗೆ ಗುಂಪಿನ ಇತರ ಹೆಣ್ಣಾನೆಗಳು ಸಹಕಾರ ನೀಡಿ ಮರಿಯನ್ನು ಬೆಳೆಸಲು ನೆರವಾಗುತ್ತವೆ. ಬೊನೋಬೋ ಚಿಂಪಾಂಜಿಗಳಲ್ಲಿ ಹೆಣ್ಣು ನಾಯಕಿಯಾಗುವುದು ತನ್ನ ದೈಹಿಕ ಬಲದಿಂದಲ್ಲ, ಬದಲಾಗಿ ತನ್ನ ಸಾಮಾಜಿಕ  ಕೌಶಲ್ಯದಿಂದ ಮತ್ತು ತಂತ್ರಗಾರಿಕೆಯಿಂದ. ಈ ಜೀವಿಗಳು ಸಮುದಾಯದ ಇತರ ಹೆಣ್ಣು ಸದಸ್ಯರೊಂದಿಗೆ ತಮ್ಮದೇ ಆದ ಜಾಲವನ್ನು ನಿರ್ಮಿಸಿಕೊಂಡು ಗಂಡಿಗಿಂತ ಬಲಶಾಲಿಯಾಗುತ್ತವೆ, ಮತ್ತು ತಮ್ಮ ಸಮಾಜದ ನಾಯಕಿಯರಾಗುತ್ತವೆ. ಈ ಪ್ರಾಣಿಗಳಿಗೆ ಸಾಧ್ಯವಾದದ್ದು ಹೋಮೋಸೇಪಿಯನ್ ಮಹಿಳೆಯರಿಗೇಕೆ ಸಾಧ್ಯವಾಗುತ್ತಿಲ್ಲ? ಯೋಚಿಸಬೇಕಾದ ವಿಷಯವಲ್ಲವೇ? ಕೇವಲ ದೈಹಿಕವಾಗಿ ದುರ್ಬಲಳು, ಆಕೆ ರಜಸ್ವಲೆಯಾಗುವುದರಿಂದ ಇದಕ್ಕೆ ಅನರ್ಹಳು ಮುಂತಾದ ನೆಪಗಳನ್ನೊಡ್ಡಿ ಮಹಿಳೆಯನ್ನು ಕೆಲವು ಹಕ್ಕುಗಳಿಂದ ವಂಚಿತಳನ್ನಾಗಿಸುವುದು ಎಷ್ಟರ ಮಟ್ಟಿಗೆ ಸರಿ? ಚಿಂತನೆ ಮಾಡಬೇಕಾದ ವಿಷಯವಲ್ಲವೇ? ವೈಜ್ಞಾನಿಕವಾಗಿ ಅಥವಾ ಜೀವಶಾಸ್ತ್ರೀಯವಾಗಿ ನಿಸರ್ಗ ಒಪ್ಪಿದ್ದನ್ನು ನಾವು ಒಪ್ಪಲು ಅಥವಾ ನಾವು ಸಾಧ್ಯವಾಗಿಸಲು ಯಾಕಾಗುತ್ತಿಲ್ಲ?


ಸುಮಂಗಲಾ ಎಸ್. ಮುಮ್ಮಿಗಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *