ವಿಕೃತ ಮನಸ್ಥಿತಿ ಬದಲಾಗಲಿ – ಜ್ಯೋತಿ ಇರ್ವತ್ತೂರು
ಸಾಮೂಹಿಕ ಅತ್ಯಾಚಾರ ಪ್ರಕರಣಗಳಿಗೆ ಬಲಿಯಾದ ಮುಗ್ಧ ಕಂದಮ್ಮಗಳ ಕರಟಿದ ಮುಖ ನೋಡುವಾಗ,
ಅವರ ಹೃದಯ ಹಿಂಡುವ ಕಥೆ ಕೇಳಿದಾಗ ನಮ್ಮ ಮಕ್ಕಳ ಮುಖವೂ ಅಲ್ಲಿ ಕಾಣುತ್ತದೆ. ಕಳೆದ ವಾರವಷ್ಟೇ ಲೋಕಸಭೆಯಲ್ಲಿ 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲು ಶಿಕ್ಷೆಗೆ ಅವಕಾಶ ಕಲ್ಪಿಸುವ ಮಸೂದೆ ಅಂಗೀಕರಿಸಲಾಗಿದೆ. ಈ ಬಗ್ಗೆ ಇಲ್ಲಿ ವಿಶ್ಲೇಷಿಸಲಾಗಿದೆ.
ಈಗ ನಾನು ಬರೆಯುತ್ತಿರುವಾಗ ದೇಶದ ಎಲ್ಲೋ ಒಂದು ಕಡೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಯುತ್ತಿರಬಹುದು. ಇದನ್ನು ಬರೆಯುವುದು ಇದರ ಬಗ್ಗೆ ಯೋಚಿಸುವುದು ಕೂಡ ಹಿಂಸೆಯೆನಿಸಿದರೂ ವಾಸ್ತವ ಸಂಗತಿಯನ್ನು ಒಪ್ಪಿಕೊಳ್ಳಲೇಬೇಕು. ಸ್ತ್ರೀಯನ್ನು ದೇವತೆಯೆನ್ನುವ, ನಂಬುವ ಪರಂಪರೆ ನಮ್ಮದೆಂದರೂ ದೇವತೆಯಂತೆ ಬೇಡ, ನಾವಾಗಿ ಬದುಕಲು ಬಿಡಿ ಎಂದು ಕೇಳುವ ಪರಿಸ್ಥಿತಿಯಿದೆ.
ಕಾಮವೆಂಬುದರ ಮೇಲೆ ಹಿಡಿತವೇ ಇಲ್ಲದ ವಿಕೃತ ಮನಸ್ಥಿತಿಗಳಿಗೆ ಯಾವುದು ಅರ್ಥವಾಗುವುದಿಲ್ಲ.
ಮುಗ್ಧ ಕಂದಮ್ಮಗಳು ಕಾಮವೆಂಬ ಪದದ ಅರ್ಥ ತಿಳಿಯದ ಹೊತ್ತಿಗೆ ಯಾರದೋ ಆಕ್ರಮಣಕ್ಕೆ ಒಳಗಾಗುತ್ತಾರೆ. ಜೀವವನ್ನು ಕಳೆದುಕೊಳ್ಳುತ್ತಾರೆ. ತಾವ್ಯಾಕೆ ಜೀವ ಕಳೆದುಕೊಳ್ಳುತ್ತೇವೆ ಎಂಬ ಪರಿಜ್ಞಾನವು ಇಲ್ಲದ ಹೊತ್ತಿಗೆ ಸಂವಿಧಾನ ಬದುಕಲು ಉಸಿರಾಡಲು ಕೊಟ್ಟ ಸ್ವಾತಂತ್ರ್ಯದಿಂದ ದೂರ ಸರಿದಿರುತ್ತಾರೆ.
ಇಂತಹ ಘಟನೆಗಳು ನಡೆದಾಗಲೆಲ್ಲಾ ಆ ಪಾಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆನ್ನುತ್ತೇವೆ. ಇಲ್ಲ ಹಿಂಸೆ ಅನುಭವಿಸಿ ಅನುಭವಿಸಿ ಜೀವಂತ ಶವವಾಗಬೇಕು ಎಂದು ಉದ್ಗರಿಸುತ್ತೇವೆ.
ಜಮ್ಮು ಕಾಶ್ಮೀರದ ಕಥುವಾ, ಉತ್ತರಪ್ರದೇಶದ ಉನ್ನಾವೋ ಮತ್ತು ಇತ್ತೀಚೆಗೆ ಗುಜರಾತ್ನಲ್ಲಿ ಬಾಲಕಿಯರ ಮೇಲೆ ನಡೆದ ಭೀಕರ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಮಂಜುಗಡ್ಡೆಯ ತುದಿಯಂತೆ, ಇವೆಲ್ಲ ಮಾಧ್ಯಮದಲ್ಲಿ ವರದಿಯಾದ ಕಾರಣ ದೇಶದೆಲ್ಲೆಡೆ ಸುದ್ದಿಯಾಯಿತು. ಇಂತಹ ಎಷ್ಟೋ ಪ್ರಕರಣಗಳು ಬೆಳಕಿಗೆ ಬಾರದೆ ಮುಚ್ಚಿ ಹೋಗುತ್ತವೆ. ಆದರೆ, ಕಥುವಾ, ಗುಜರಾತ್ ಪ್ರಕರಣಗಳು ಹುಟ್ಟಿ ಹಾಕಿದ ಆಕ್ರೋಶ ದೊಡ್ಡದು. ವಿಕೃತ ಆಕ್ರಮಣ, ಆ ನಂತರ ಜೀವವನ್ನೇ ಕಸಿಯುವ ಅತ್ಯಾಚಾರಗಳಿಗೆ ಕಡಿವಾಣ ಹಾಕಲೇಬೇಕು ಎಂಬ ಆಗ್ರಹ ಕೇಳಿ ಬಂತು. ಈ ನಿಟ್ಟಿನಲ್ಲಿ ಕಾನೂನು ಇನ್ನಷ್ಟು ಬಿಗಿಯಾಗಬೇಕು ಅನ್ನೋ ಒತ್ತಾಯ ಕೂಡ ದೇಶದೆಲ್ಲೆಡೆ ಕೇಳಿ ಬಂತು. ದೇಶದ ಉದ್ದಗಲಕ್ಕೂ ಪ್ರತಿಭಟನೆಗಳು ನಡೆದವು.
ಹೀಗಾಗಿ ಲೋಕಸಭೆಯಲ್ಲಿ ಕಳೆದ ವಾರ, ಹನ್ನೆರೆಡು ವರ್ಷದೊಳಗಿನ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗುವ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ತಿದ್ದುಪಡಿ ಮಸೂದೆ ಅಂಗೀಕರಿಸಲಾಗಿದೆ. ಪ್ರಕರಣದ ತ್ವರಿತ ವಿಚಾರಣೆ ನಡೆಸುವ ಅಂಶವು ಮಸೂದೆಯಲ್ಲಿದೆ. ಅಪರಾಧ ಕಾನೂನು ( ತಿದ್ದುಪಡಿ ) ಮಸೂದೆ 2018 ಕ್ಕೆ ಬಹುತೇಕ ರಾಜಕೀಯ ಪಕ್ಷಗಳ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಅಪ್ರಾಪ್ತ ಬಾಲಕಿಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಈ ಮಸೂದೆ ಮಂಡಿಸಲಾಗಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಇದಲ್ಲದೇ ಅತ್ಯಾಚಾರಕ್ಕೆ ಈ ಹಿಂದೆ ವಿಧಿಸಲಾಗುತ್ತಿದ್ದ 7 ವರ್ಷಗಳ ಸೆರೆವಾಸವನ್ನು ಈಗ 10 ವರ್ಷಕ್ಕೆ ಏರಿಸಲಾಗಿದೆ. 16 ವರ್ಷದೊಳಗಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೆ ನೀಡಲಾಗುತ್ತಿದ್ದ 10 ವರ್ಷಗಳ ಜೈಲು ಶಿಕ್ಷೆಯನ್ನು 20 ವರ್ಷಕ್ಕೆ ಏರಿಸಲಾಗಿದೆ. 12 ವರ್ಷದೊಳಗಿನ ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ಕನಿಷ್ಟ 20 ವರ್ಷ ಜೈಲು ಮತ್ತು ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾದವರಿಗೆ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಲೂ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುವ ಅತ್ಯಾಚಾರಕ್ಕೆ ಐತಿಹಾಸಿಕವೆನ್ನುವ ಮಸೂದೆಯಿಂದ ಬ್ರೇಕ್ ಬೀಳುತ್ತಾ? ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತಾ? ಶಿಕ್ಷೆಯ ಭಯ, ಕುಣಿಕೆಯ ಭಯ ಕಾಮುಕರಲ್ಲಿ ನಡುಕವುಂಟು ಮಾಡಿದೆಯೇ ಅನ್ನೋದು ಪ್ರಶ್ನೆ. ನಿರ್ಭಯಾ ಪ್ರಕರಣ ದೇಶವನ್ನೇ ನಲುಗಿಸುತ್ತಿದ್ದಾಗ ನಮ್ಮ ರಾಜ್ಯದ ಮೂಲೆಯಲ್ಲೆಲ್ಲೋ ಪೊದೆಗಳ ಸಂದಿಯಲ್ಲಿ ಸದ್ದಿಲ್ಲದೆ ಕಾಮುಕರ ಅಟ್ಟಹಾಸ ಮುಂದುವರಿದೇ ಇತ್ತು. ಹೀಗಾಗಿ ಈ ಕುರಿತ ಚರ್ಚೆಗಳನ್ನು, ಕಣ್ಣೀರನ್ನು ನೋಡಿದ ಮೇಲೆ ಮಾನವೀಯತೆ ಮರೆತ ವ್ಯಕ್ತಿಗಳು ಬದಲಾಗುತ್ತಾರೆ ಎಂದು ನಿರೀಕ್ಷಿಸುವುದು ಅಸಾಧ್ಯ.
ಇನ್ನು ಕೆಲವರು ಪಾಪ ಪ್ರಜ್ಞೆಯಿಂದ ಬದಲಾದ ಉದಾಹರಣೆಗಳು ಇರಬಹುದು. ಕಿರಣ್ ಬೇಡಿ ಖೈದಿಗಳ ಮನಪರಿವರ್ತನೆಗೆ ವಿಪಶ್ಶನ ಧ್ಯಾನವನ್ನು ಮಾಧ್ಯಮವಾಗಿ ಬಳಸಿದ ಉದಾಹರಣೆ ಇದೆ. ಈ ಕುರಿತ ಸಾಕ್ಷ್ಯಚಿತ್ರದಲ್ಲಿ ಗಳಗಳನೆ ಅತ್ತು ಬದಲಾದ ಖೈದಿಗಳ ಮಾತು ಕೇಳಿಸಿಕೊಂಡಿದ್ದೇನೆ. ಮನಪರಿವರ್ತನೆಯೇ ಅಂತಿಮ ಪರಿಹಾರ. ಆದರೆ ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬುದು ಮತ್ತೊಂದು ಪ್ರಶ್ನೆ.
ಇನ್ನೊಂದು ಕಡೆ ಬಾಲಕರೇ ಅತ್ಯಾಚಾರ ನಡೆಸಿದರೆ ? ಕುಟುಂಬ ಸದಸ್ಯರೇ ಅತ್ಯಾಚಾರ ಎಸಗಿದರೇ? ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಗಳೂ ಕಡಿಮೆ ಇರುತ್ತವೆ. ಯಾವುದೇ ಬಾಲಕಿಯ
ಕುಟುಂಬ ಸದಸ್ಯರೇ ಅತ್ಯಾಚಾರ ಎಸಗಿದ್ದು ಬೆಳಕಿಗೆ ಬಂದಲ್ಲಿ ಅವರಿಗೆ ಗಲ್ಲುಶಿಕ್ಷೆ ವಿಧಿಸಲು ಕುಟುಂಬದವರು ಒಪ್ಪಿಕೊಳ್ಳುತ್ತಾರಾ? ಎಂಬೆಲ್ಲ ಪ್ರಶ್ನೆಗಳು ಈ ಮಸೂದೆ ಮಂಡನೆಯಿಂದ ಉದ್ಭವಿಸಿವೆ.
ಈ ನಡುವೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮರಣ ದಂಡನೆ ರದ್ದುಪಡಿಸಬೇಕು ಎಂದು ಮಾನವ ಹಕ್ಕು ಹೋರಾಟಗಾರರು ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಇದ್ದಾರೆ. ಹೀನ ಅಪರಾಧಗಳಿಗೆ ಮರಣ ದಂಡನೆ ವಿಧಿಸುತ್ತಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಬಹತೇಕ ಮುಂದುವರೆದ ದೇಶಗಳಲ್ಲಿ ಈಗ ಮರಣ ದಂಡನೆ ರದ್ದು ಪಡಿಸಲಾಗಿದೆ.
ಅಪ್ರಾಪ್ತ ಬಾಲಕಿಯರೇ ಇರಲಿ, ವಯಸ್ಕ ಮಹಿಳೆಯರೇ ಆಗಿರಲಿ ಅತ್ಯಾಚಾರಕ್ಕೆ ಕಡಿವಾಣ ಸಂಪೂರ್ಣ ಬೀಳಬೇಕೆನ್ನುವುದು ಎಲ್ಲರ ಆಶಯ. ಅತ್ಯಾಚಾರ ತಡೆಯಲು ಈ ಕಠಿಣ ಶಿಕ್ಷೆ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗುತ್ತೆ ಅನ್ನೋದು ಕೂಡ ಸೂಕ್ಷ್ಮ ವಿಚಾರವೇ. ಸಂವೇದನೆರಹಿತ ಮನಸ್ಸುಗಳಿಗೆ ಶಿಕ್ಷೆಯ ಭಯ ಬೇಕೇ ಬೇಕು. ಅದಕ್ಕಿಂತ ಹೆಚ್ಚಾಗಿ ಕಾಮದ ಕುರಿತಾಗಿ, ಹೆಣ್ಣಿನ ದೇಹದ ಕುರಿತಾಗಿ ಪುರುಷ ಸಮುದಾಯದ ದೃಷ್ಟಿಕೋನ ಬದಲಾಗಬೇಕು.

ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
thanks for the article