ವಸು ಮಾತು/ಜನನಾಂಗ ಛೇದನ : ಕ್ರೌರ್ಯದ ಪರಮಾವಧಿ – ಡಾ. ವಸುಂಧರಾ ಭೂಪತಿ

ಧರ್ಮದ ಹೆಸರಿನಲ್ಲಿ ಅನೇಕ ಅಮಾನವೀಯ ಆಚರಣೆಗಳು ವಿಶ್ವದಾದ್ಯಂತ ಇಂದಿಗೂ ಚಾಲ್ತಿಯಲ್ಲಿವೆ. ಹಲವು ಸಮುದಾಯಗಳಲ್ಲಿ ಹುಡುಗಿಯರಲ್ಲಿ ಲೈಂಗಿಕ ತುಡಿತವನ್ನು ಕಡಿಮೆ ಮಾಡಲು ಜನನಾಂಗವನ್ನು ಛೇದವನ್ನು (Female Genital Mutilation) ) ಹಲವು ಶತಮಾನಗಳಿಂದಲೂ ಮಾಡಲಾಗುತ್ತಿದೆ. ಆಶ್ಚರ್ಯವೆಂದರೆ ಈ ಕ್ರೂರ ಪದ್ಧತಿಯು ಭಾರತದಲ್ಲಿಯೂ ಇದೆ ಎಂಬುದು. ಧಾರ್ಮಿಕತೆಯ ಹೆಸರಿನಿಂದ ಇದನ್ನು ತಲೆತಲಾಂತರದಿಂದ ಮಾಡಿಕೊಂಡು ಬರಲಾಗುತ್ತಿದೆ. ಏನೂ ಅರಿಯದ ಹುಡುಗಿಯರ ಜನನಾಂಗದ ಭಾಗವೊಂದನ್ನು (ಯೋನಿದುಟಿ, ಭಗಾಂಕುರ) ತೆಗೆದುಹಾಕಲಾಗುತ್ತಿದೆ. ಧರ್ಮ ಮತ್ತು ಸಂಪ್ರದಾಯದ ಹೆಸರಿನಲ್ಲಿ ಹೆಣ್ಣುಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯದ ಪರಮಾವಧಿ ಇದು. ಸಾಮಾನ್ಯ ಅರಿವಳಿಕೆಯನ್ನು ನೀಡದೇ ಜನನಾಂಗ ಛೇದನ ಮಾಡಲಾಗುತ್ತಿದೆ ಮತ್ತು ಇದನ್ನು ಯಾವುದೇ ವೈದ್ಯಕೀಯ ರೀತಿನೀತಿಗಳಿಲ್ಲದೇ ಹೆಂಗಸರೇ ಮಾಡುತ್ತಾರೆ ಎಂಬುದು ಇನ್ನೂ ಆಘಾತಕಾರಿ ವಿಷಯವಾಗಿದೆ.

ಯೋನಿಯ ಮತ್ತು ಲೈಂಗಿಕ ತೃಪ್ತಿ ನೀಡುವ ಭಗಾಂಕುರದ (Clitorus) ಸ್ವಲ್ಪ ಭಾಗವನ್ನು ಯಾವುದೇ ವೈದ್ಯಕೀಯ ಕಾರಣವಿಲ್ಲದೇ ಉದ್ದೇಶಪೂರ್ವಕವಾಗಿಯೇ ಕತ್ತರಿಸಿ ಹಾಕುವುದು ಅಥವಾ ಅದರಲ್ಲಿ ಬದಲಾವಣೆ ಅಥವಾ ಅದಕ್ಕೆ ಗಾಯವನ್ನುಂಟು ಮಾಡುವುದು ಸ್ತ್ರೀ ಜನನಾಂಗ ಛೇದವಾಗಿದೆ. ಶಿಶುವಿನಿಂದ ಹಿಡಿದು 15 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಇದನ್ನು ಮಾಡಲಾಗುತ್ತಿದೆ. ಇದನ್ನು ಮಾಡುವ ಬಹುತೇಕ ಮಹಿಳೆಯರು ತರಬೇತಿ ಹೊಂದಿದ ದಾದಿಯರಲ್ಲವಾದರೂ ಇತ್ತೀಚೆಗೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಇದನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕೃತ ವಿವರಗಳಿಲ್ಲ. ಆದರೆ ಸ್ತ್ರೀ ಜನನಾಂಗವನ್ನು ಊನಗೊಳಿಸುವುದು ಆಫ್ರಿಕಾದ ಜನಾಂಗೀಯ ಗುಂಪುಗಳಲ್ಲಿ ಚಾಲ್ತಿಯಲ್ಲಿದೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಇದು ಈಜಿಪ್ಟಿನಲ್ಲಿ ಆರಂಭವಾಯಿತು ಎಂದು ಹೇಳುತ್ತಾರೆ.
ಈ ಛೇದದ ಹೆಸರಿನಲ್ಲಿ ಕೆಲವು ಹುಡುಗಿಯರಿಗೆ ಯೋನಿದುಟಿಗಳನ್ನು ಮತ್ತು ಭಗಾಂಕುರವನ್ನು ಸ್ವಲ್ಪವಾಗಿ ಅಥವಾ ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ. ಮುಖ್ಯವಾಗಿ ಹೊರಗಿನ ಜನನಾಂಗಕ್ಕೆ ತೊಂದರೆಯನ್ನು ಉಂಟುಮಾಡಿ ಸ್ತ್ರೀಯರಲ್ಲಿ ಲೈಂಗಿಕ ಆಸೆಯನ್ನು ಅದುಮಿಡುವ ಪ್ರಯತ್ನ ಇದಾಗಿದೆ. ಹೀಗೆ ಮಾಡುವುದರಿಂದ ಯುವತಿಯರು ಮತ್ತು ಸ್ತ್ರೀಯರು ಪುರುಷರೊಂದಿಗೆ ವಿವಾಹಪೂರ್ವ/ವಿವಾಹೇತರ ಸಂಬಂಧ ಬೆಳೆಸುವುದಿಲ್ಲ ಎಂದು ನಂಬಲಾಗಿದೆ. ಯಾವುದೇ ಧರ್ಮಗ್ರಂಥಗಳಲ್ಲಿ ಇದರ ಉಲ್ಲೇಖವಿಲ್ಲ. ಆದರೆ ಇದನ್ನು ಧರ್ಮ ಮತ್ತು ಸಂಪ್ರದಾಯದ ಹೆಸರಿನಲ್ಲಿ ಮಾಡಿಕೊಂಡು ಬರಲಾಗುತ್ತಿರುವುದು ವಿಪರ್ಯಾಸ. ಅನೇಕ ಸಮುದಾಯಗಳಲ್ಲಿ ಇದು ಸಾಮಾಜಿಕ ಮತ್ತು ಸಾಂಸ್ಕøತಿಕ ಆಚರಣೆಯಾಗಿದೆ. ಒಪ್ಪದವರಿಗೆ ಒತ್ತಡ ಹೇರಿ ಅಥವಾ ಸಮುದಾಯದಿಂದ ಬಹಿಷ್ಕಾರ ಹಾಕುವ ಬೆದರಿಕೆಯನ್ನೊಡ್ಡಿ ಜನನಾಂಗ ಛೇದನ ಅನಿವಾರ್ಯವೆನ್ನುವಂತೆ ಮಾಡಲಾಗಿದೆ. ಸಂಪ್ರದಾಯದ ಹೆಸರು ತಳುಕು ಹಾಕಿಕೊಂಡಿರುವುದರಿಂದ ಯಾವುದೇ ವಿರೋಧವಿಲ್ಲದೇ ಇದನ್ನು ನಿರಾಂತಕವಾಗಿ ಸಾಗಿದೆ. ಹೀಗೆ ಮಾಡುವುದರಿಂದ ಅತೀವ ರಕ್ತಸ್ರಾವ, ಮೂತ್ರನಾಳದ ಸೋಂಕು, ಬಂಜೆತನ, ಹೆರಿಗೆಯ ಸಮಯದಲ್ಲಿ ತೊಂದರೆಗಳು ಮತ್ತು ಮಕ್ಕಳು ಸತ್ತು ಹುಟ್ಟುವುದು ಆಗುತ್ತಲೇ ಇದೆ. ಹೀಗಾದಾಗ ಯೋನಿಯನ್ನು ಮತ್ತೆ ಮತ್ತೆ ಹೊಲಿದು ಹೆಚ್ಚು ತೊಂದರೆಗಳಾಗುತ್ತವೆ.

ಜನನಾಂಗ ಛೇದನ ಮಾಡಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಸಂಪ್ರದಾಯಬದ್ಧವಾದದ್ದು ಎಂದು ಹೇಳಿ ಹುಡುಗಿಯರಿಗೆ ಇದನ್ನು ಮಾಡಿಸಿಕೊಳ್ಳಲಾಗುತ್ತಿದೆ. ಭಾರತದಲ್ಲಿ ದಾವೂದಿ ಬೊಹ್ರಾ ಸಮುದಾಯದಲ್ಲಿ ಇದು ಚಾಲ್ತಿಯಲ್ಲಿದೆ. ಹೆಣ್ಣುಮಕ್ಕಳು ಚಿಕ್ಕವರಾಗಿದ್ದರೆ ಅವರಿಗೆ ಚಾಕೋಲೇಟ್ ಅಥವಾ ಐಸ್‍ಕ್ರೀಮಿನ ಆಸೆ ತೋರಿಸಿ ನೋವುಂಟುಮಾಡಿ ಅವರ ಜನನಾಂಗವನ್ನು ಕತ್ತರಿಸಲಾಗುತ್ತಿದೆ. ವಿಶ್ವಸಂಸ್ಥೆಯ ಮಕ್ಕಳ ತುರ್ತು ನಿಧಿಯ (ಯೂನಿಸೆಫ್) ಪ್ರಕಾರ ವಿಶ್ವದ 29 ದೇಶಗಳಲ್ಲಿ 130 ದಶಲಕ್ಕಕ್ಕೂ ಹೆಚ್ಚು ಸ್ತ್ರೀಯರ ಜನನಾಂಗವನ್ನು ಛೇದನ ಮಾಡಲಾಗಿದೆ. ಆಫ್ರಿಕಾ, ಪಾಕಿಸ್ತಾನ, ಇಂಡೋನೇಷಿಯಾ, ಮಲೇಷಿಯಾ ಮತ್ತು ಮಧ್ಯ ಪ್ರಾಚ್ಯದ ಅನೇಕ ದೇಶಗಳಲ್ಲಿ ಇದು ಚಾಲ್ತಿಯಾಗಿದೆ. ಈ ಪದ್ಧತಿ ಹೀಗೆಯೇ ಮುಂದುವರೆದರೆ ಇನ್ನು 30 ದಶ¯ಕ್ಷ ಹೆಣ್ಣುಮಕ್ಕಳು ಇದಕ್ಕೆ ಬಲಿಯಾಗುವ ಸಾಧ್ಯತೆಯಿದೆ. ಲೈಂಗಿಕತೆ ಮತ್ತು ಅದರಿಂದ ದೊರಕುವ ಸುಖ ಏನೆಂದು ತಿಳಿಯುವ ಮೊದಲೇ ಅವರ ಜನನಾಂಗ ಛೇದನ ಮಾಡಲಾಗುತ್ತದೆ.
ಜನನಾಂಗ ಛೇದನದಲ್ಲಿ ನಾಲ್ಕು ಬಗೆಗಳಿವೆ. ಭಾರತದಲ್ಲಿ ಚಾಲ್ತಿಂiÀiಲ್ಲಿರುವುದು ಒಂದನೇ ಬಗೆಯದು ಅಂದರೆ ಯೋನಿಯ ಅಥವಾ ಭಗಾಂಕುರದ ಆಂಶಿಕ ಛೇದನ. ಇತರ ಬಗೆಗಳೆಂದರೆ ಯೋನಿದುಟಿಗಳ/ಭಗಾಂಕುರದ ಸಂಪೂರ್ಣ ಛೇದನ, ಯೋನಿಯ ರಂಧ್ರವನ್ನು ಕಿರಿದಾಗಿ ಮಾಡುವುದು, ಜನನಾಂಗ ಸ್ಥಳಕ್ಕೆ ಚುಚ್ಚುವುದು, ಛೇದನ, ಹಾನಿಮಾಡುವುದು ಮತ್ತು ಸುಟ್ಟುಹಾಕುವುದು. ಜನನಾಂಗ ಛೇದನ ಒಂದು ಗಂಭೀರ ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂದು ಕೂಗೆದ್ದಿದೆ.

ಭಾರತದಲ್ಲಿ ದಾವೂದಿ ಬೊಹ್ರಾ ಇಸ್ಮಾಯಿಲಿ ಶಿಯಾಗಳ ಉಪಸಮುದಾಯವಾಗಿದ್ದು ಇದರಲ್ಲಿ ಅನೇಕರು ಸುಶಿಕ್ಷಿತ ಶ್ರೀಮಂತರಾಗಿದ್ದಾರೆ. ವಿಶ್ವದಲ್ಲಿ ಇವರ ಒಟ್ಟು ಸಂಖ್ಯೆ 10 ಲಕ್ಷ ಇದೆ. ಭಾರತದಲ್ಲಿಯೇ ಇವರ ಜನಸಂಖ್ಯೆ ಐದು ಲಕ್ಷದಷ್ಟಿದ್ದು ಇವರು ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಹರಡಿಕೊಂಡಿದ್ದಾರೆ. ಇವರಲ್ಲಿ ಸುಮಾರು ಶೇಕಡಾ 90 ರಷ್ಟು ಮಹಿಳೆಯರು ಜನನಾಂಗ ಛೇದನಕ್ಕೆ ಒಳಗಾಗುತ್ತಾರೆ. ಇದನ್ನು ಇವರು ಖತ್ನಾ ಎಂದು ಕರೆಯುತ್ತಾರೆ. ಸ್ತ್ರೀಯರಿಗೆ ಅತಿ ಕಾಮ ಸಲ್ಲದು, ಅವರಿಗೆ ಲೈಂಗಿಕ ಆಸೆಗಳು ಮಧ್ಯಮ ಮಟ್ಟದಲ್ಲಿ ಇರಬೇಕು ಎಂದು ಹೀಗೆ ಮಾಡಲಾಗುತ್ತದೆ ಎಂದು ಅವರ ಬ್ರೈನ್‍ವಾಷ್ ಮಾಡಲಾಗುತ್ತದೆ. ಹೆಣ್ಣುಮಕ್ಕಳಿಗೆ ಹೀಗೆ ಮಾಡುವುದರಿಂದ ಅವರು ವಿವಾಹಪೂರ್ವ ಅಥವಾ ವಿವಾಹೇತರ ಸಂಬಂಧ ಹೊಂದುವುದಿಲ್ಲ ಎಂದು ವ್ಯಾಪಕವಾಗಿ ನಂಬಲಾಗಿದೆ. ಖತ್ನಾ ಮಾಡುವವರು ಸಾಮಾನ್ಯವಾಗಿ ಸಮುದಾಯದ ಹಿರಿಯ ಮಹಿಳೆಯರು. ಅವರಿಗೆ ಆರೋಗ್ಯ ವಿಷಯಗಳ ಗಂಧಗಾಳಿಯೂ ಇಲ್ಲ. ಅನುವಂಶೀಯವಾಗಿ ಮಹಿಳೆಯರು ಇದನ್ನು ಕಲಿಯುತ್ತಾರೆ. ಇದನ್ನು ಐದು ಆರು ವಯಸ್ಸಿನ ಹೆಣ್ಣುಮಕ್ಕಳಿಗೆ ಮಾಡಲಾಗುತ್ತದೆ. ಆಗ ಅವರು ಇದನ್ನು ಮೌನವಾಗಿ ಸಹಿಸಿಕೊಳ್ಳುತ್ತಾರೆ ಮತ್ತು ಪ್ರಶ್ನಿಸುವುದಿಲ್ಲ ಎಂದು ಈ ಬಗ್ಗೆ ‘ಎ ಪಿಂಚ್ ಆಫ್ ಸಿನ್’ ಎಂಬ ಸಾಕ್ಷ್ಯಚಿತ್ರ ತಯಾರಿಸಿರುವ ಪ್ರಿಯಾ ಗೋಸ್ವಾಮಿ ಹೇಳುತ್ತಾರೆ. ಈ ಸಾಕ್ಷ್ಯಚಿತ್ರ ವಿಶೇಷ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಂದಿದೆ. ಮುಂದುವರೆದ ದೇಶಗಳಲ್ಲಿರುವ ಅನೇಕ ಬೊಹ್ರಾಗಳು ಭಾರತಕ್ಕೆ ತಮ್ಮ ಹೆಣ್ಣುಮಕ್ಕಳನ್ನು ಕಳಿಸಿ ಅವರಿಗೆ ಖತ್ನಾ ಮಾಡಿಸುತ್ತಾರೆ. ಹೀಗೆ ಮಾಡುವುದು ಒಳ್ಳೆಯದು ಎಂದು ಅವರಿಗೆ ಅನ್ನಿಸಿರುವುದರಿಂದಲೇ ಇದರಲ್ಲಿ ಅವರು ತೊಡಗಿದ್ದಾರೆ ಎಂದು ಪ್ರಿಯಾ ನುಡಿಯುತ್ತಾರೆ. ಸಾಂಪ್ರದಾಯಿಕವಾಗಿ ಬ್ಲೇಡ್, ಹತ್ತಿ ಮತ್ತು ಬಟ್ಟೆಯನ್ನು ಉಪಯೋಗಿಸಿ ಖತ್ನಾ ಮಾಡಲಾಗುತ್ತದೆ.

ಮುಂಬೈನಲ್ಲಿ ಇತ್ತೀಚೆಗೆ ಕೆಲವು ಅತ್ಯಾಧುನಿಕ ಆಸ್ಪತ್ರೆಗಳು ಸ್ತ್ರೀ ಜನನಾಂಗ ಛೇದನದಲ್ಲಿ ತೊಡಗಿವೆ. ಖ್ಯಾತ ಇಂಗ್ಲೀಷ್ ಪತ್ರಿಕೆಯೊಂದು ಇತ್ತೀಚೆಗೆ ಪ್ರಕಟಿಸಿರುವ ತನಿಖಾ ವರದಿಯ ಪ್ರಕಾರ ಇದಕ್ಕೆ 15,000 ರೂಪಾಯಿಗಳು ಖರ್ಚಾಗುತ್ತವೆ. ಆಸ್ಪತ್ರೆಯಲ್ಲಿ ನಾಲ್ಕಾರು ಗಂಟೆಗಳಿದ್ದರೆ ಸಾಕು, ಖತ್ನಾ ಆಗುತ್ತದೆ. ಖತ್ನಾ ಮಾಡಲು ಧಾರ್ಮಿಕ ಮುಖ್ಯಸ್ಥರ ಅನುಮತಿ ಬೇಕೇ ಬೇಕು. ಖತ್ನಾ ಮಾಡಬೇಕಾಗಿರುವ ಬಾಲಕಿಯರ ಪಟ್ಟಿಯನ್ನು ಧಾರ್ಮಿಕ ಮುಖ್ಯಸ್ಥರು ನೇರವಾಗಿ ವೈದ್ಯರಿಗೇ ನೀಡುತ್ತಾರೆ. ಈ ಜಾಲ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದೇ ರಹಸ್ಯವಾಗಿದೆ. ಸುಶಿಕ್ಷಿತರೂ ಇದರ ಬೆಂಬಲಕ್ಕಿರುವುದು ವ್ಯಂಗ್ಯವೇ ಸರಿ. ಬೊಹ್ರಾ ಸಮುದಾಯದವರು ಇಸ್ಲಾಂಗೆ ಮತಾಂತರ ಹೊಂದಿದ ನಂತರ ಈ ಆಚರಣೆ ಜಾರಿಗೆ ಬಂದಿದೆ. ಮುಸ್ಲಿಂ ಸಮುದಾಯದಲ್ಲಿ ಗಂಡು ಮಕ್ಕಳಿಗೆ ಸುನ್ನತಿ (ಶಿಶ್ನದ ಮುಂದಿನ ಚರ್ಮವನ್ನು ತೆಗೆಯುವುದು) ಮಾಡುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಖತ್ನಾ ಮಾತ್ರ ಗುಟ್ಟುಗುಟ್ಟಾಗಿಯೇ ನಡೆಯುತ್ತದೆ.

ಖತ್ನಾದಿಂದ ಹೆಣ್ಣುಮಕ್ಕಳಿಗೆ ಆಘಾತ, ರಕ್ತಸ್ರಾವ ಮತ್ತು ಸೋಂಕುಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಸಾವಿಗೂ ಕಾರಣವಾಗುತ್ತದೆ ಎಂದು ಸ್ತ್ರೀರೋಗತಜ್ಞರು ಹೇಳುತ್ತಾರೆ. ಲೈಂಗಿಕಾಂಗಗಳ ಸಾಮಥ್ರ್ಯದಲ್ಲಿ ಕೊರತೆ, ಬಂಜೆತನ, ಮೂತ್ರದ ಸಮಸ್ಯೆ, ಮಿಲನದ ವೇಳೆ ನೋವು ಮತ್ತು ಹೆರಿಗೆಯಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಹೆರಿಗೆ ಸಮಯದಲ್ಲಿ ಮಹಿಳೆಯರು ಸಾಯುತ್ತಾರೆ. ಹಾಗೆಯೆ ಅವರು ಸತ್ತ ಮಕ್ಕಳಿಗೆ ಜನ್ಮ ನೀಡುವುದೂ ಉಂಟು ಎಂದು ವಿವರಿಸುತ್ತಾರೆ.

ಖತ್ನಾ ಅಗಿರುವ ಯುವತಿಯರು ಬೇರೆ ಯುವತಿಯರಂತೆ ಯುವಕರೆಡೆಗೆ ಆಕರ್ಷಿತರಾಗುವುದಿಲ್ಲ. ಲೈಂಗಿಕವಾಗಿ ಸಕ್ರಿಯರಾದಾಗ ಇತರರಿಗೆ ಸಿಗುವ ಸಹಜ ಆನಂದ ತಮಗೆ ದೊರಕುವುದಿಲ್ಲ ಎಂದು ಅವರು ಹೇಳುತ್ತಾರೆ. ತಾವೇ ಹಸ್ತಮೈಥುನ ಮಾಡಿಕೊಳ್ಳುವುದು ಅವರಿಗೆ ಸಾಧ್ಯವಾಗುವುದಿಲ್ಲ ಏಕೆಂದರೆ ಭಗಾಂಕುರ ತೀರಾ ಸಂವೇದನಾಶೀಲವಾಗಿರುತ್ತದೆ ಎಂಬುದು ಅವರ ಅಂಬೋಣ. ಭಗಾಂಕುರವೇ ಲೈಂಗಿಕ ಆನಂದಕ್ಕೆ ಮೂಲ. ಅದಕ್ಕೆ ಹಾನಿಯಾಗಿದ್ದಲ್ಲಿ ಹೇಗೆ ಆನಂದ ಹೊಂದಲು ಸಾಧ್ಯ ಎಂಬುದು ಅವರ ಪ್ರಶ್ನೆ. ಲೈಂಗಿಕ ತಜ್ಞರ ಪ್ರಕಾರ ಖತ್ನಾದಿಂದ ಮಹಿಳೆಯರ ಲೈಂಗಿಕ ಜೀವನಕ್ಕೆ ತೊಂದರೆಯಿಲ್ಲ, ಇದೆಲ್ಲಾ ಮಾನಸಿಕ ಯಾತನೆ ಅಷ್ಟೇ. ಹೀಗೆ ಮಾಡುವುದರಿಂದ ಯೋನಿಗೆ ತೊಂದರೆಯಾಗುತ್ತದೆ. ಸ್ತ್ರೀ ಲೈಂಗಿಕತೆಯು ಹಾರ್ಮೋನುಗಳನ್ನು ಅವಲಂಬಿಸಿದೆ. ಅಂಗಗಳನ್ನಲ್ಲ ಎಂದು ಅವರು ಹೇಳುತ್ತಾರೆ.
ಭಾರತದಲ್ಲಿ ಜನನಾಂಗ ಛೇದವನ್ನು ಸರಿ ಮಾಡಲು ಶಸ್ತಚಿಕಿತ್ಸೆ ಲಭ್ಯವಿದೆ. ಭಗಾಂಕುರವನ್ನು ಸುರೂಪಿ ಶಸ್ತ್ರಚಿಕಿತ್ಸೆಯ ಮೂಲಕ ಪುನರ್ರಚಿಸಬಹುದು. ಆದರೆ ಅದರ ಕಾರ್ಯವನ್ನು ಸರಿಪಡಿಸಲಾಗದು. ಮಿಲನದ ವೇಳೆ ಸಂತೃಪ್ತಿ ನೀಡುವ ಭಗಾಂಕುರದ ನರಗಳ ತುದಿಗಳನ್ನು ಮತ್ತೆ ಸರಿಪಡಿಸಲಾಗುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ.

ಧರ್ಮಕ್ಕೂ ಜನನಾಂಗ ಛೇದಕ್ಕೂ ಸಂಬಂಧವಿಲ್ಲ. ಆಫ್ರಿಕಾದ ಕೆಲವು ಪ್ರದೇಶಗಳಲ್ಲಿನ ಸಾಂಪ್ರದಾಯಿಕ ಸಮುದಾಯಗಳ ಅನಿಷ್ಟ ಪದ್ಧತಿಯಿದು. ಅಲ್ಲಿ ಮುಸ್ಲಿಮರು ಸೇರಿದಂತೆ ಅನೇಕ ಸಮುದಾಯಗಳ ಸ್ತ್ರೀಯರ ಜನನಾಂಗವನ್ನು ಛೇದ ಮಾಡಲಾಗುತ್ತಿತ್ತು. ಇದೇ ಇಂದಿಗೂ ಮುಂದುವರೆದಿದೆ ಎಂದು ಇಸ್ಲಾಮ್ ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಈ ನಡುವೆ ಬೊಹ್ರಾ ಸಮುದಾಯದಲ್ಲಿ ಖತ್ನಾದ ವಿರುದ್ಧ ಕೂಗೆದ್ದಿದೆ. ಕೆಲವು ಸುಶಿಕ್ಷಿತ ಮಹಿಳೆಯರು ಇದರ ವಿರುದ್ಧ ಟೊಂಕ ಕಟ್ಟಿ ನಿಂತಿದ್ದು ಮೌನ ಬಂಡಾಯವೊಂದು ತಲೆ ಎತ್ತಿದೆ. ತಸ್ಲೀಮ್ ಎಂಬಾಕೆ 2011ರಲ್ಲಿ ಖತ್ನಾವನ್ನು ಕೊನೆಗಾಣಿಸಲು ಅಂತರ್ಜಾಲದಲ್ಲಿ ಹರಿಬಿಟ್ಟ ಆನ್‍ಲೈನ್ ಮನವಿಗೆ ಸಾವಿರಾರು ಜನರು ಸ್ಪಂದಿಸಿದರು. ಆಕೆ ಅದನ್ನು ಬೊಹ್ರಾ ಸಮುದಾಯದ ಧಾರ್ಮಿಕ ನಾಯಕರಿಗೆ ಕಳಿಸಿಕೊಟ್ಟಳು. ಅವರು ಅದಕ್ಕೆ ಯಾವ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಆದರೆ ಈ ವಿಷಯ ಸಾಕಷ್ಟು ಜನರ ಗಮನ ಸೆಳೆದಿದ್ದಂತೂ ನಿಜ. ನಾಗರಿಕ ಪ್ರಪಂಚದಲ್ಲಿ ಈ ಕ್ರೂರ ಪದ್ಧತಿಗೆ ಯಾವ ಸ್ಥಾನವೂ ಇಲ್ಲ. ಇದು ಇಸ್ಲಾಮಿನ ಪದ್ಧತಿಯೂ ಅಲ್ಲ, ಆಫ್ರಿಕಾದ ಬರ್ಬರ ಪದ್ಧತಿಯಾಗಿದ್ದು ಹೇಗೋ ಪ್ರಗತಿಪರ ಸಮಾಜಕ್ಕೆ ನುಸುಳಿದೆ. ಇದನ್ನು ಬೇರುಸಮೇತ ಕಿತ್ತುಹಾಕಬೇಕು ಎಂದು ತಸ್ಲೀಮ್ ನುಡಿಯುತ್ತಾರೆ. ಅನೇಕ ಮಹಿಳೆಯರು ಮಹಿಳೆಯರಲ್ಲಿಯೇ ಇದರ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಅವರು ಗುಂಪೊಂದನ್ನು ಕಟ್ಟಿಕೊಂಡಿದ್ದು ಒಟ್ಟಾಗಿ ಇದರ ನಿರ್ಮೂಲನೆಗೆ ದುಡಿಯುತ್ತಿದ್ದಾರೆ.
ಪೂರ್ವ ಆಫ್ರಿಕಾದ ದೇಶಗಳಲ್ಲಿ ಅಂದರೆ ಸೋಮಾಲಿಯಾ, ಜಿಬೌಟಿ, ಎರಿಟ್ರಿಯಾ ಮತ್ತು ಸೋಮಾಲಿಲ್ಯಾಂಡ್‍ಗಳಲ್ಲಿ ಈ ಪದ್ಧತಿಯ ವ್ಯಾಪಕವಾಗಿದೆ ಮತ್ತು ಇದನ್ನು ತೊಡೆದುಹಾಕಲು ಬೇರುಮಟ್ಟದಲ್ಲಿ ಮಹಿಳೆಯರಲ್ಲಿ ಅರಿವು ಮೂಡಿಸಬೇಕಾಗುತ್ತದೆ. ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಇದು ಹಾನಿಕಾರಿ, ಉಪಯೋಗವಿಲ್ಲದ ಆಚರಣೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ವ್ಯಾಲೆಂಟಿನ ಅಕಾವಾ ಮ್ಮಾಕಾ ಹೇಳುತ್ತಾರೆ. ಹಾಗೆಯೇ ಧಾರ್ಮಿಕ ನಾಯಕರು ಮತ್ತು ಸಮಾಜದ ಮುಖಂಡರಿಗೂ ಇದರ ಬಗ್ಗೆ ತಿಳಿಯಹೇಳಬೇಕು. ಇದರ ನಿರ್ಮೂಲನೆಯಿಂದ ಸಂಸ್ಕøತಿಗೇನೂ ಧಕ್ಕೆಯಾಗುವುದಿಲ್ಲ ಬದಲಿಗೆ ಅನಿಷ್ಟ ಪದ್ಧತಿಯೊಂದನ್ನು ನಿಲ್ಲಿಸಲಾಗುತ್ತದೆ ಎಂದು ಜನರಿಗೆ ಅರ್ಥಮಾಡಿಸಬೇಕು ಎಂದು ನುಡಿಯುತ್ತಾರೆ.

ನಿಷೇಧದ ನಡುವೆಯೂ ಜೀವಂತ

ವಿಶ್ವಸಂಸ್ಥೆಯ ಮಕ್ಕಳ ತುರ್ತು ನಿಧಿಯ (ಯೂನಿಸೆಫ್) ಪ್ರಕಾರ ವಿಶ್ವದ 29 ದೇಶಗಳಲ್ಲಿ 130 ದಶಲಕ್ಷಕ್ಕೂ ಹೆಚ್ಚು ಸ್ತ್ರೀಯರ ಜನನಾಂಗವನ್ನು ಛೇದನ ಮಾಡಲಾಗಿದೆ. ಆಫ್ರಿಕಾ, ಪಾಕಿಸ್ತಾನ, ಇಂಡೋನೇಷಿಯಾ, ಮಲೇಷಿಯಾ ಮತ್ತು ಮಧ್ಯ ಪ್ರಾಚ್ಯದ ಅನೇಕ ದೇಶಗಳಲ್ಲಿ ಇದು ಚಾಲ್ತಿಯಾಗಿದೆ. ಇಂಡೋನೇಷಿಯಾದಲ್ಲಿ ಇದು ಶೇಕಡಾ 100ರಷ್ಟು ಚಾಲ್ತಿಯಲ್ಲಿದ್ದರೆ. ಸೋಮಾಲಿಯಾ, ಜಿಬೌಟಿ ಮತ್ತು ಗಿನಿಯಾ ದೇಶಗಳಲ್ಲಿ ಶೇಕಡಾ 98ರಷ್ಟು ಇದೆ. ಈ ಪೈಕಿ ಸುಮಾರು 21 ದೇಶಗಳಲ್ಲಿ ಇದರ ವಿರುದ್ಧ ಕಾನೂನಿದ್ದರೂ ಕೇವಲ ಎಂಟರಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಡಿಸೆಂಬರ್ 2012ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸ್ತ್ರೀ ಜನನಾಂಗ ಛೇದನವನ್ನು ನಿಷೇಧಿಸಿದೆ. ಹೀಗಿದ್ದರೂ ಈ ಬರ್ಬರ ಆಚರಣೆ ಇನ್ನು ಚಾಲ್ತಿಯಲ್ಲಿದೆ.
ಭಾರತದಲ್ಲಿ ಈ ಬಗ್ಗೆ ಯಾವುದೇ ಕಾನೂನಿಲ್ಲ. ಆದರೆ ಹೀಗೆ ಮಾಡುವುದು ಭಾರತೀಯ ದಂಡ ಸಂಹಿತೆಯಡಿ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯಿದೆಯಡಿ ಅಪರಾಧವಾಗುತ್ತದೆ. ಭಾರತೀಯ ದಂಡ ಸಂಹಿತೆಯಡಿ ಈ ಅಪರಾಧದಲ್ಲಿ ತೊಡಗುವ ಪೋಷಕರು ಸೇರಿದಂತೆ ಎಲ್ಲರೂ ಅಪರಾಧಿಗಳಾಗಿರುತ್ತಾರೆ ಎಂದು ವಕೀಲರು ಹೇಳುತ್ತಾರೆ.

ವಾರಿಸ್ ಡಿರಿ – ಮರುಭೂಮಿಯ ಹೂವು

ಸೋಮಾಲಿಯಾದ ವಾರಿಸ್ ಡಿರಿ ಇಂದು ಸ್ತ್ರೀ ಜನನಾಂಗ ಛೇದದ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಒಂಟೆ ಮತ್ತು ಆಡು ಸಾಕುವ ಅಲೆಮಾರಿ ಜನಾಂಗದ ಕುಟುಂಬವೊಂದರಲ್ಲಿ ಜನಿಸಿದ ಈಕೆಗೆ ಐದನೇ ವಯಸ್ಸಿನಲ್ಲಿಯೇ ಜನನಾಂಗ ಛೇದನ ಮಾಡಲಾಯಿತು. ಈಗ ಈಕೆಗೆ 49 ವರ್ಷ. “ಹೆಂಗಸನ್ನು ಕೊಳಕು, ಅತಿಕಾಮಿ, ಯೋನಿದುಟಿ ಮತ್ತು ಭಗಾಂಕುರಗಳನ್ನು ಛೇದನ ಮಾಡದಿದ್ದರೆ ಆಕೆಯು ವಿವಾಹವಾಗಲು ಅನರ್ಹೆ ಎಂದು ಭಾವಿಸಿ ಹೀಗೆ ಮಾಡಲಾಗುತ್ತದೆ. ಜನನಾಂಗವನ್ನು ಕತ್ತರಿಸಿ ಹೊಲಿಗೆ ಹಾಕಲಾಗುತ್ತದೆ. ಇದೊಂದ ಅಮಾನವೀಯ ಕೆಲಸ” ಎಂದು ಡಿರಿ ಹೇಳುತ್ತಾಳೆ. ಈಕೆಯ ಹಿರಿಯ ಸಹೋದರಿಯೊಬ್ಬಳು ಈ ಕ್ರೂರ ಪದ್ಧತಿಗೆ ಬಲಿಯಾಗಿ ಸತ್ತಳು. ದಾಯಾದಿಯೊಬ್ಬಳು ರಕ್ತಸ್ರಾವದಿಂದ ಸತ್ತಳು. ಇದನ್ನೆಲ್ಲಾ ಕಣ್ಣಾರೆ ಕಂಡ ಡಿರಿ ಇದರ ವಿರುದ್ಧ ಹೋರಾಟವನ್ನೇ ಸಾರಿದ್ದಾಳೆ. ಚಿಕ್ಕಂದಿನಲ್ಲಿದ್ದಾಗ ಆದ ಜನನಾಂಗ ಛೇದನದಿಂದ ಈಕೆ ಮೂತ್ರವಿಸರ್ಜನೆ ಮಾಡಲೂ ಕಷ್ಟವಾಗುತ್ತಿತ್ತು ಮತ್ತು ಮುಟ್ಟಿನ ವೇಳೆ ನೋವು ತಾಳಲಾಗದೇ ಸಾಯಬೇಕು ಅನ್ನಿಸುತ್ತಿತ್ತು ಎಂದು ಹೇಳುತ್ತಾಳೆ. ಖ್ಯಾತ ರೂಪದರ್ಶಿಯಾಗಿ ಹೆಸರು ಮಾಡಿರುವ ಈಕೆ ‘ಡೆಸರ್ಟ್ ಫ್ಲವರ್ ‘ (ಮರುಭೂಮಿಯ ಹೂವು) ಎಂಬ ಆತ್ಮಕತೆಯಲ್ಲಿ ಈ ಕ್ರೂರ ಪದ್ಧತಿಯನ್ನು ವಿವರಿಸಿದ್ದಾಳೆ. ಇದರ ವಿರುದ್ಧ ಹೋರಾಡಲು ಡೆಸರ್ಟ್ ಫ್ಲವರ್ ಫೌಂಡೇಷನ್ ಎಂಬ ಪ್ರತಿಷ್ಠಾನವನ್ನು ಸ್ಥಾಪಿಸಿದ್ದಾಳೆ. 1997ರಿಂದ 2003ರವರೆಗೆ ಸ್ತ್ರೀ ಜನನಾಂಗ ಛೇದದ ನಿರ್ಮೂಲನೆಗಾಗಿ ವಿಶ್ವ ಸಂಸ್ಥೆಯ ವಿಶೇಷ ರಾಯಭಾರಿಯಾಗಿ ಕೆಲಸ ಮಾಡಿದ್ದಾಳೆ.

ಎಫುವಾ ಡೊರ್ಕೆನೂ ಎಂಬಾಕೆಯೂ ಈ ಅನಿಷ್ಟ ಪದ್ಧತಿಯ ವಿರುದ್ಧ ದನಿಯೆತ್ತಿದ್ದಳು. ಘಾನಾ ಮೂಲ ಡೊರ್ಕೆನೂ 1960ರ ದಶಕದಲ್ಲಿ ಇಂಗ್ಲೆಂಡಿಗೆ ಬಂದು ನರ್ಸ್ ಆಗಿ ಕೆಲಸ ಮಾಡುತ್ತಾ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಳು. ಮಹಿಳಾ ಆರೋಗ್ಯ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಸ್ಥಾಪಿಸಿ ಹೋರಾಟ ನಡೆಸಿದಳು. ಇಂಗ್ಲೆಂಡಿನಲ್ಲಿ ಸ್ತ್ರೀ ಜನನಾಂಗ ಛೇದವನ್ನು ನಿಷೇಧಿಸುವ ಕಾಯಿದೆಯ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು. ಆ ಹೋರಾಟವನ್ನು ಗುರುತಿಸಿ ಅಲ್ಲಿನ ಸರ್ಕಾರ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್ ಪದವಿ ನೀಡಿ ಗೌರವಿಸಿತ್ತು. ‘ಕಟಿಂಗ್ ದಿ ರೋಸ್: ಫೀಮೇಲ್ ಜನೈಟಲ್ ಮ್ಯುಟಿಲೇಷನ್’ ಎಂಬ ಪುಸ್ತಕವನ್ನು ಈಕೆ ಬರೆದಿದ್ದಳು. ಅನೇಕ ಸಂಪ್ರದಾಯವಾದಿ ಸಂಘಟನೆಗಳ ಕಣ್ಣುಗಳನ್ನು ಈಕೆ ಕೆಂಪಗಾಗಿಸಿದ್ದಳು. ಕ್ಯಾನ್ಸರ್‍ನಿಂದ ಇತ್ತೀಚೆಗೆ ಅಕ್ಟೋಬರ್ 18ರಂದು ತೀರಿಕೊಂಡಳು.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ವಸು ಮಾತು/ಜನನಾಂಗ ಛೇದನ : ಕ್ರೌರ್ಯದ ಪರಮಾವಧಿ – ಡಾ. ವಸುಂಧರಾ ಭೂಪತಿ

  • July 31, 2018 at 2:16 pm
    Permalink

    amanaveeyathe karya

    Reply

Leave a Reply

Your email address will not be published. Required fields are marked *