Latestಅಂಕಣ

ವಸುಮಾತು/ಮಹಿಳೆ ಮತ್ತು ಮಾಧ್ಯಮ – ವಸುಂಧರಾ ಭೂಪತಿ

ಪತ್ರಿಕಾ ಮಾಧ್ಯಮ ಮತ್ತು ವಿದ್ಯುನ್ಮಾನ  ಮಾಧ್ಯಮಗಳು ಹೆಣ್ಣಿನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.  ಟಿವಿ ಯ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳುವುದು, ಇಲ್ಲವೇ ಅದರ ದುಷ್ಪರಿಣಾಮಕ್ಕೆ ಒಳಗಾಗುವುದು ಹೆಣ್ಣಿನ ಕೈಯಲ್ಲಿದೆ.  ಮಹಿಳೆಯರು ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಂಡು ವೈಜ್ಞಾನಿಕ ಮನೋಭಾವ ರೂಢಿಸಿಕೊಂಡಲ್ಲಿ ಮಾಧ್ಯಮಗಳು ಬಿತ್ತುತ್ತಿರುವ ಅವೈಜ್ಞಾನಿಕತೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. 

ಸುಪ್ರಭಾತದೊಂದಿಗೆ ಆರಂಭವಾದ ನಮ್ಮ ದಿನಚರಿ ರಾತ್ರಿಯ ಕ್ರೈಂ ಸ್ಟೋರಿ ಇಲ್ಲವೇ ಜನ್ಮಾಂತರದ ಕಾರ್ಯಕ್ರಮಗಳೊಂದಿಗೆ ಮುಗಿಯುತ್ತದೆ. ಇಂತಹ ಕಾರ್ಯಕ್ರಮಗಳು ಜನಸಾಮಾನ್ಯರಲ್ಲಿ ಅದರಲ್ಲಿಯೂ ಆತಂಕ, ಖಿನ್ನತೆ, ನಿರಾಸೆ, ಉತ್ಸಾಹ ಮೂಡಿಸುತ್ತವೆ. ಈಗ ಹತ್ತಿಪ್ಪತ್ತು ವರ್ಷಗಳಲ್ಲಿ ಜ್ಯೋತಿಷ್ಯಕೇಂದ್ರಗಳು, ಮಠಗಳು ಸಂಖ್ಯೆಯಲ್ಲಿ ಹೆಚ್ಚಾಗಿವೆ. ಜ್ಯೋತಿಷ್ಯಕೇಂದ್ರಗಳ ಮುಂದೆ ಜನರು ಕ್ಯೂ ನಿಲ್ಲುವುದು ಅಚ್ಚರಿ ಹುಟ್ಟಿಸುತ್ತದೆ. ಜನರಲ್ಲಿ ವೈಚಾರಿಕತೆಯನ್ನು, ವೈಜ್ಞಾನಿಕತೆಯನ್ನು, ವೈಜ್ಞಾನಿಕ ಮನೋಭಾವವನ್ನು ಹತ್ತಿಕ್ಕುತ್ತಿವೆ. ವ್ಯಕ್ತಿಗಳ ಗ್ರಹಗತಿ ಸರಿಯಲ್ಲದ ಕಾರಣ ಜನರು ಕಷ್ಟಗಳಿಗೆ ಈಡಾಗುತ್ತಾರೆಂಬ ಹುಸಿ ಭರವಸೆ ನೀಡಿ ಇವುಗಳನ್ನು ಸರಿಪಡಿಸಿಕೊಂಡರೆ ಎಲ್ಲ ಕಷ್ಟ ನಷ್ಟಗಳು ದೂರಾಗುತ್ತವೆಂಬ ಪ್ರಚಾರಗಳನ್ನು ಮಾಧ್ಯಮಗಳು ಮಾಡುತ್ತಿವೆ. ಟಿ.ವಿ ವಾಹಿನಿಗಳಲ್ಲಿ ವಿವಿಧ ಜ್ಯೋತಿಷಿಗಳು ಹೇಳುವ ದೋಷ ನಿವಾರಣೆಗಾಗಿ ಹರಕೆ ಹೊತ್ತು ಊರಿಂದ ಊರಿಗೆ, ರಾಜ್ಯದಿಂದ ರಾಜ್ಯಕ್ಕೆ ದೇವಸ್ಥಾನಗಳನ್ನು ಹುಡುಕಿಕೊಂಡು ಹೋಗುವ, ಮಠಗಳಿಗೆ ಹೋಗಿ ಪೂಜೆ, ಹರಕೆ ತೀರಿಸುವ, ಯಂತ್ರ-ಮಂತ್ರಕ್ಕೆ ಶರಣಾಗುವ ಮತ್ತು ಹೋಮ, ಹವನಗಳನ್ನು ಮಾಡಿಸಿಕೊಳ್ಳುವ ಜನರ ದಂಡೇ ಇದೆ. ಇದೆಲ್ಲವನ್ನು ನೋಡಿದಾಗ ಜನರು ಹಣೆಬರಹ ನಂಬಿ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆ ಎದುರಾಗುತ್ತದೆ.

ಕೆಲವು ಚಾನೆಲ್‌ನಲ್ಲಿ ವಿವಿಧ ಬಣ್ಣದ ಹರಳುಗಳನ್ನು ತೋರಿಸಿ ಕಾಯಿಲೆ ಸರಿಪಡಿಸುವ, ಸಂಕಟಗಳನ್ನು ಪರಿಹರಿಸುವ ಗುಣವಿದೆಯೆಂದು ಅವನುನು ಧರಿಸಿ ಎಂದು ಜಾಹೀರಾತುಗಳನ್ನು ನೀಡುವುದು ಮತ್ತು ಅಂತಹ ಜಾಹೀರಾತುಗಳನ್ನು ನಂಬಿ ಹಣಕಟ್ಟಿ ಜನರು ಆ ಹರಳುಗಳನ್ನು ತರಿಸಿಕೊಂಡು ಧರಿಸುವುದು ಆಧುನಿಕ ಮೂಢನಂಬಿಕೆ, ಇದಲ್ಲದೆ ತಾಯತ, ಗಾಜಿನ ಪಿರಮಿಡ್ ಮುಂತಾದ ವಸ್ತುಗಳನ್ನು ಅವುಗಳ ನಿಜವಾದ ಬೆಲೆಗಿಂತ ನೂರುಪಟ್ಟು ಹೆಚ್ಚು ಕೊಟ್ಟು ಖರೀದಿಸಿ ಬಳಸುವುದನ್ನು ನೋಡುತ್ತಿದ್ದೇವೆ. ಜನರ ಭಾವನಾತ್ಮಕತೆಯನ್ನು, ಧಾರ್ಮಿಕ ನಂಬಿಕೆಯನ್ನು ವಾಣಿಜ್ಯೀಕರಣಗೊಳಿಸಿ ಮೋಸಗೊಳಿಸುತ್ತಿರುವುದು ಬಹು ಸ್ಪಷ್ಟ.

ವಿಜ್ಞಾನ – ತಂತ್ರಜ್ಞಾನವನ್ನು ಬಳಸಿಕೊಂಡು ಜನ್ಮಾಂತರ, ಪೂರ್ವಜನ್ಮ, ಪುನರ್ಜನ್ಮಗಳಂತಹ ಕಾರ್ಯಕ್ರಮಗಳ ಮೂಲಕ ಜನರ ನಂಬಿಕೆಯೊಂದಿಗೆ ಆಟವಾಡುವವರ ಮಾತಿಗೆ ಮರುಳಾಗಿ ಜೇಬು ಬರಿದಾಗಿಸಿಕೊಳ್ಳುವ ಅಮಾಯಕರಿಗೆ ಏನನ್ನಬೇಕು? ಬೆಲೆಯೇರಿಕೆಯಿಂದ ಬೇಸತ್ತಿರುವ ಜನರಿಗೆ ಇವೆಲ್ಲ ಪರಿಹಾರ ನೀಡಲು ಸಾಧ್ಯವೆ? ಬಾಡಿಗೆ ಕಟ್ಟಲು, ಮಕ್ಕಳ ಫೀಸ್ ಕಟ್ಟಲು ಸಾಧ್ಯವಿಲ್ಲದ ಜನರಿಗೆ ಯಾವ ವಾಸ್ತು ಕೇಂದ್ರಗಳು ಸಹಾಯ ನೀಡಲು ಸಾಧ್ಯ? ಮಕ್ಕಳು ಓದದೇ ಫೇಲಾದರೆ, ವಿವಾಹ ಮುರಿದುಬಿದ್ದರೆ, ಪ್ರೇಮವೈಫಲ್ಯಕ್ಕೆ, ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಯಜ್ಞ-ಹೋಮಗಳು ಉತ್ತರ ನೀಡಬಲ್ಲವೆ? ಜನರ ಜೀವನದ ಮಟ್ಟ ಸುಧಾರಣೆಯಾಗದ ಹೊರತು ಕಷ್ಟ-ನಷ್ಟಗಳಿಗೆ ಪರಿಹಾರವಿಲ್ಲವೆಂಬ ನಂಬಿಕೆಯನ್ನು ಜನರಲ್ಲಿ ಹುಟ್ಟುಹಾಕಬೇಕಾಗುವ ಮಾಧ್ಯಮಗಳು ಅವರನ್ನು ಯೋಚಿಸುವಂತೆ ಬಾಯಿಗೆ ಬೀಗ ಹಾಕಿದೆ.

ಜಾತಿ ತಾರತಮ್ಯ, ಆರ್ಥಿಕ ಸಮಸ್ಯೆ, ನಿರುದ್ಯೋಗ, ಅನಾರೋಗ್ಯ, ವಸತಿ ಸಮಸ್ಯೆ ಮುಂತಾದವುಗಳು ಮನುಷ್ಯ ನಿರ್ಮಿತ ಸಮಸ್ಯೆಗಳು. ಇವುಗಳನ್ನು ನಿವಾರಿಸವ ನಿಟ್ಟಿನಲ್ಲಿ ಸರ್ಕಾರಗಳು ಯೋಜನೆ ರೂಪಿಸಬೇಕಿದೆ. ಇದನ್ನು ಮನವರಿಕೆ ಮಾಡಿಕೊಡುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ.
ಇಂತಹ ಪ್ರಮುಖ ಸಮಸ್ಯೆಗಳಿಂದ ಜನರ ಮನಸ್ಸನ್ನು ತಿರುಗಿಸಲು ಬೇಕಾದ ಅವೈಚಾರಿಕ, ಅವೈಜ್ಞಾನಿಕ ಕಾರ್ಯಕ್ರಮಗಳನ್ನು ರೂಪಿಸಿ ಮಾಧ್ಯಮಗಳು ಟಿ.ಆರ್‌.ಪಿ ಹೆಚ್ಚಿಸಿಕೊಳ್ಳುತ್ತಿವೆ. ಇದರಿಂದ ಜನರ ಅಜ್ಞಾನ, ಮೌಢ್ಯ ಮತ್ತಷ್ಟು ಹೆಚ್ಚಾಗುತ್ತಿದೆ.

ಟಿ.ವಿ ಧಾರವಾಹಿಗಳು ಮನೆ ಮನೆಯಲ್ಲಿ ಅದೆಷ್ಟು ಪ್ರಭಾವ ಬೀರಿವೆಯೆಂದರೆ ಸಂಜೆ ಹೊತ್ತು ಮನೆಗೆ ಬಂದ ಅತಿಥಿಗಳಿಗೆ ’ಕುಳಿತುಕೊಳ್ಳಿ’ ಎಂದು ಹೇಳಲು ಧಾರವಾಹಿ ನೋಡುವವರ ಮನಸ್ಸು ಒಪ್ಪುವುದಿಲ್ಲ. ಧಾರವಾಹಿಯ ಕಥಾವಸ್ತುಗಳಿಗೆ ಮುರಿದ ಪ್ರಣಯದ ಕಥೆಗಳು, ವಿವಾಹೇತರ ಸಂಬಂಧಗಳು, ದೆವ್ವ, ಭೂತ ಪ್ರೇತಗಳ ಕಥೆಗಳು, ಶ್ರೀಮಂತ ಕುಟುಂಬಗಳು ಅನುಭವಿಸುವ ಸಣ್ಣ ಪುಟ್ಟ ಸಮಸ್ಯೆಗಳು, ಮಹಿಳಾ ಖಳನಾಯಕಿಯರು, ಅತ್ತಿಗೆ ನಾದಿನಿಯ ಮೇಲೆ, ಅಕ್ಕ ತಂಗಿಯ ಮೇಲೆ, ಅಮ್ಮ ಮಗಳ ಮೇಲೆ, ಅತ್ತೆ ಸೊಸೆಯ ನಡುವೆ ಜಗಳ, ಪರಸ್ಪರ ದೋಷಾರೋಪಣೆ. ಕೊಲೆಗೈಯುವವರೆಗೆ ಎಳೆದಾಡುವುದು. ಉತ್ತರ ಭಾರತದ ಯಶಸ್ವೀ ಹಿಂದಿ ಧಾರವಾಹಿಗಳನ್ನು ಕನ್ನಡಕ್ಕೆ ಅನುವಾದಿಸಿ ನಮ್ಮದಲ್ಲದ ವಿಷಯಗಳನ್ನು ಮಹಿಳೆಯರ ಮನಸ್ಸಿನಲ್ಲಿ ತುರುಕಿ ಅಸಂತೋಷ, ಅಸಮಧಾನ, ಅಸೂಯೆ ಹೆಡೆಯಾಡುವಂತೆ ಮಾಡುತ್ತಿವೆ. ಆ ಪಾತ್ರಧಾರಿಗಳು ಧರಿಸುವ ಒಡವೆಗಳು, ರೇಷ್ಮೆ ವಸ್ತ್ರಗಳನ್ನು ನೋಡಿ ಗೃಹಿಣಿಯರು ತಮ್ಮ ಪತಿಯಂದಿರ ಬಳಿ ತಮಗೂ ಬೇಕೆಂದು ಪೀಡಿಸಿ ಭ್ರಷ್ಟಾಚಾರದ ಕೂಪಕ್ಕೆ ತಳ್ಳುತ್ತಿರುವುದನ್ನು ಕೂಡ ನೋಡುತ್ತಿದ್ದೇವೆ.

ಜಾಹೀರಾತುಗಳಲ್ಲಿ ಮಹಿಳೆಯರನ್ನು ಭೋಗದ ವಸ್ತುವಿನಂತೆ, ಗ್ಲಾಮರ್ ಬೊಂಬೆಯಂತೆ ಮಾತ್ರ ಬಿಂಬಿಸಲಾಗುತ್ತಿದೆ. ಅಡುಗೆಮನೆಯ ವಸ್ತುವಿನಿಂದ ಹಿಡಿದು ಪುರುಷರು ಬಳಸುವ ಬ್ಲೇಡ್‌, ಶೇವಿಂಗ್ ಕ್ರೀಮ್ ಅಷ್ಟೇಕೆ ಕಾರ್‌ಗೂ ಮಹಿಳೆಯೇ ’ರೂಪದರ್ಶಿ’. ಇನ್ನು ಮಹಿಳೆಯರು ಬಳಸುವ ಪೌಡರ್, ಕ್ರೀಂ, ತುಟಿಯ ರಂಗು, ಸೋಪು, ಶಾಂಪೂ ಇವುಗಳ ವಿಷಯವಂತೂ ಕೇಳುವುದೇ ಬೇಡ ಮಾಧ್ಯಮ ಮಹಿಳೆಯ ಅಂದ-ಚೆಂದವನ್ನೇ ಗುರಿಯಾಗಿಸಿಕೊಂಡು ಮಾರುಕಟ್ಟೆ ಸರಕಾಗಿಸಿಕೊಂಡಿದೆ. ಮಹಿಳೆಯ ಸೌಂದರ್ಯವನ್ನೇ ಮಾರುಕಟ್ಟೆಯಾಗಿಸಿರುವುದು ವಿಪರ್ಯಾಸದ ಸಂಗತಿ.

ಮಹಿಳೆಯ ಸೌಂದರ್ಯದ ಬಗ್ಗೆ ಎಗ್ಗಿಲ್ಲದಷ್ಟು ಹೇಳುವ ಜಾಹೀರಾತುಗಳು ಆಕೆಯ ರಕ್ತಹೀನತೆ, ಗರ್ಭಕೊರಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಅಪೌಷ್ಟಿಕತೆಯ ಬಗ್ಗೆ ಮಾತನಾಡುವುದಿಲ್ಲ. ೨೪ ಗಂಟೆಗಳಲ್ಲಿ ಬೆಳ್ಳಗಾಗಿಸುವ ಕ್ರೀಂಗಳನ್ನು ಬಳಸಿ ಎಂದು ಹೇಳುತ್ತವಲ್ಲದೇ ವರುಷಗಟ್ಟಲೇ ಬಳಸುವುದರಿಂದ ಉಂಟಾಗುವ ಚರ್ಮದ ತೊಂದರೆಗಳ ಬಗ್ಗೆ ತಿಳಿಸುವುದಿಲ್ಲ. ಬೆಳಿಗ್ಗೆ ಒಂದು ಕ್ರೀಂ, ಬಿಸಿಲಿಗೆ ಒಂದು ಕ್ರೀಂ, ರಾತ್ರಿ ಮತ್ತೊಂದು ಕ್ರೀಂ, ಇವುಗಳ ನಡುವೆ ದುಬಾರಿ ಸೋಪು, ಫೇಸ್‌ವಾಶ್‌ಗಳ ಬಗ್ಗೆ ಹೇಳುವ ಜಾಹೀರಾತುಗಳು ನಡಿಗೆ ಇಲ್ಲವೇ ವ್ಯಾಯಾಮದ ಬಗ್ಗೆ ತುಟಿಪಿಟಕ್ಕೆನ್ನುವುದಿಲ್ಲ. ಹೆಣ್ಣು ಭ್ರೂಣಹತ್ಯೆಯ ಬಗ್ಗೆಯೂ ಹೇಳುವುದಿಲ್ಲ.

ಮಹಿಳೆಯ ಬದುಕಿನಲ್ಲಿ ಮಾಧ್ಯಮಗಳು ಆಕೆಯ ಖಾಸಗಿ ಜೀವನದ ಎಲ್ಲವನ್ನೂ ಆಕ್ರಮಿಸಿಕೊಂಡು ನಿಯಂತ್ರಣದಲ್ಲಿರಿಸಿಕೊಂಡಿವೆ. ಪ್ರಗತಿಪರರು. ಚಿಂತಕರು ಹೇಳುವ ಮಾತುಗಳನ್ನು ನಂಬದೇ ಮಾಧ್ಯಮಗಳು ಹೇಳುವುದನ್ನೇ ಮಹಿಳೆ ನಂಬುತ್ತಿದ್ದಾಳೆ. ಅನುಕರಣೆ ಮಾಡುತ್ತಿದ್ದಾಳೆ. ಅದೃಷ್ಟದ ಹರಳಿಗಾಗಿ ಊಟ ಬಿಟ್ಟು, ಕೂಡಿಟ್ಟು ಅದನ್ನು ಶತಾಯ ಗತಾಯ ಪಡೆಯುವುದಕ್ಕೂ ಸಿದ್ಧ ಸಂಜೆ ಮಕ್ಕಳ ಹೋಂ ವರ್ಕ್‌ಗಿಂತ, ಅಡುಗೆ ಮಾಡುವುದಕ್ಕಿಂತ ಧಾರವಾಹಿ ವೀಕ್ಷಣೆಯೇ ಮುದ ನೀಡುತ್ತದೆ. ಮಹಿಳೆಯರು ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಂಡು ವೈಜ್ಞಾನಿಕ ಮನೋಭಾವ ರೂಢಿಸಿಕೊಂಡಲ್ಲಿ ಮಾಧ್ಯಮಗಳು ಬಿತ್ತುತ್ತಿರುವ ಅವೈಜ್ಞಾನಿಕತೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

ವಸುಂಧರಾ ಭೂಪತಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *