ಲೋಕದ ಕಣ್ಣು / ನಮ್ಮ ಹಿಡಿಂಬೆಗೆ ಇಲ್ಲಿ ದೇವಸ್ಥಾನ! – ಡಾ.ಕೆ.ಎಸ್.ಚೈತ್ರಾ
ಹಿಮಾಚಲದ ಪ್ರಮುಖ ಗಿರಿಧಾಮವಾದ ಮನಾಲಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವೂ ಹೌದು. ಹಡಿಂಬಾ ಇಲ್ಲಿನ ಆರಾಧ್ಯದೈವ. ಕುಲು- ಮನಾಲಿಯ ಅರಸರನ್ನು ಕಾಯುವ ಅಧಿದೇವತೆಯೂ ಹೌದು. ಆಶ್ಚರ್ಯವೆಂದರೆ ದೇವಿಗೆ ಅಧಿಕ ಸಂಖ್ಯೆಯಲ್ಲಿ ಮುಸ್ಲಿಮ್ ಭಕ್ತರಿದ್ದಾರೆ. ನವರಾತ್ರಿಯಲ್ಲಿ ದೇಶದೆಲ್ಲೆಡೆ ದುರ್ಗಾದೇವಿ ಪೂಜೆ ನಡೆದರೆ ಇಲ್ಲಿ ಹಡಿಂಬಾದೇವಿಯದ್ದೇ ಪೂಜೆ. ಪತ್ನಿಯಾಗಿ, ತಾಯಿಯಾಗಿ ವೈಯಕ್ತಿಕ ನೆಲೆಯಲ್ಲಿ ಕಾರ್ಯ ನಿರ್ವಹಿಸುವುದರ ಜತೆ ರಾಣಿಯಾಗಿ ತನ್ನ ಕರ್ತವ್ಯ ನಿರ್ವಹಿಸಿದಳು. ಹೀಗೆ ರಾಕ್ಷಸಿ ಹಡಿಂಬಾ ಜನರ ಪ್ರೀತಿ-ಭಕ್ತಿಗೆ ಪಾತ್ರಳಾದ ಹಡಿಂಬಾದೇವಿಯಾಗಿದ್ದು ನಿಜಕ್ಕೂದೊಡ್ಡ ಸಾಧನೆಯೇ !
ಸೇಬಿನಷ್ಟೇ ಕೆಂಪು ಕೆಂಪಾದ ಕೆನ್ನೆಗಳುಳ್ಳ ಗುಂಡುಮುಖದ ಜನರು, ಕಿರಿದಾದ ಸುತ್ತಿ ಬಳಸುವ ದಾರಿ, ಅಲ್ಲಲ್ಲಿ ಕಾಣುವ ಮರದ ಮನೆಗಳು ಮತ್ತು ಎತ್ತೆತ್ತರದ ಮರಗಳ ನಡುವೆ ನಮ್ಮ ವಾಹನ ಸಾಗುತ್ತಿತ್ತು. ಪಂಜಾಬಿನ ಕಾರುಗಳಲ್ಲಿ ಚಿಳ್ಳೆ ಪಿಳ್ಳೆಗಳನ್ನು ತುಂಬಿಕೊಂಡು ಹಿಮಾಚಲ ಪ್ರದೇಶದ ಮನಾಲಿಗೆ ನಮ್ಮ ಪಯಣ. ದೂರ ಹೆಚ್ಚೇನಿಲ್ಲ, ಆದರೆ ಏರಿನ ಪ್ರದೇಶ ಮತ್ತು ವಾಹನ ದಟ್ಟಣೆಯಿಂದ ಸುಮಾರು ಎಂಟು ತಾಸಿನ ಹಾದಿ. ಟ್ರಾವೆಲ್ ಸಿಕ್ ನೆಸ್ ಇರುವ ನನಗೆ ಮಾತ್ರೆ ನುಂಗಿದ್ದರೂ ಪ್ರತೀ ಗಂಟೆಗೊಮ್ಮೆಕಾರು ನಿಲ್ಲಿಸಿ ವಾಮಿಟಿಂಗ್ ಬ್ಯಾಗ್ ತೆಗೆವ ಅನಿವಾರ್ಯತೆ ! ಖಾಲಿಯಾದ ಹೊಟ್ಟೆ, ಕಿರಿಕಿರಿಯಾಗುವ ವಾಕರಿಕೆ, ಮೇಲೇರಿದಂತೆ ಡಬ್ಬಾದ ಕಿವಿ, ಎಷ್ಟು ಕ್ರಮಿಸಿದರೂ ಮುಗಿಯದ ದಾರಿ ಹೀಗೆ ಸಹನೆಯ ಕಟ್ಟೆ ತುಂಬಿತ್ತು. ಅಷ್ಟರಲ್ಲಿ ಕಾರಿನ ಕಿಟಕಿ ತೆಗೆಯಬೇಕೋ ಬೇಡವೋ ಎಂಬ ಬಗ್ಗೆ ಮಕ್ಕಳ ಜಗಳ ಆರಂಭ. ಧೂಳು ಬೇಡ ಎಂದು ಒಬ್ಬರೆಂದರೆ, ಉಸಿರು ಕಟ್ಟುತ್ತೆ ಬೇಕೇ ಬೇಕು ಇನ್ನೊಬ್ಬರ ಹಠ. ವಯಸ್ಸು, ಸ್ಥಳ, ಪರಿಸ್ಥಿತಿ ಬಗ್ಗೆ ಕಿಂಚಿತ್ತೂ ಗಮನವಿಲ್ಲದೇ ಮಾರಾಮಾರಿ ಆರಂಭ. ತಡೆಯಲಾರದೇ ‘ಮಕ್ಕಳಲ್ಲ ನೀವು ರಾಕ್ಷಸರು’ ಎಂದು ಬೈದಿದ್ದು ನಿಜ.
ಅಷ್ಟಕ್ಕೇ ಕಿಟಕಿ ಯುದ್ಧ ಮುಗಿದು ನನ್ನ ಪ್ರಯೋಗದ ಬಗ್ಗೆ ಭಾರೀ ಆಕ್ಷೇಪ ವ್ಯಕ್ತವಾಯಿತು. ಹಾಗೆಯೇ ‘ನಿನ್ನ ಮನಸ್ಸಿನಲ್ಲಿ ರಾಕ್ಷಸರ ಬಗ್ಗೆ ಕೆಟ್ಟಅಭಿಪ್ರಾಯವಿದೆ. ಅದನ್ನು ಮೊದಲು ತೆಗೆದುಹಾಕು. ಅದನ್ನು ಬೈಗುಳವಾಗಿ ಪ್ರಯೋಗಿಸಬಾರದು. ಉದಾಹರಣೆಗೆ ಬಲಿ ಚಕ್ರವರ್ತಿ, ವಿಭೀಷಣ, ಘಟೋತ್ಕಚ ಇವರೆಲ್ಲಾ ಒಳ್ಳೆಯ ರಾಕ್ಷಸರು. ರಾವಣನಂಥ ಮಹಾ ವಿದ್ವಾಂಸ ಯಾರೂ ಇರಲಿಲ್ಲ. ಲಂಕೆಯಲ್ಲಿ ಅವನೇ ಈಗಲೂ ಹೀರೋ! ಪರಿಸ್ಥಿತಿ ಕಾರಣ ಹಾಗೆ ನಡೆದುಕೊಂಡರು.’ ಹೀಗೆ ನನ್ನ ಮೇಲೆ ವಾಗ್ದಾಳಿ ನಡೆಯಿತು. ಪ್ರತಿಭಟಿಸುವ ಶಕ್ತಿ ನನ್ನಲ್ಲಿರಲಿಲ್ಲ, ಆದರೂ ಸುಮ್ಮನೇ ‘ಒಳ್ಳೆಯ ರಾಕ್ಷಸಿಯರು ಇಲ್ಲವಲ್ಲಾ?’ ಎಂದು ಮಲಗಿಬಿಟ್ಟೆ. ಹುಡುಗರು ಸುಮ್ಮನಾದರೆ ಹುಡುಗಿಯರು ಯೋಚಿಸಲಾರಂಭಿಸಿದರು. ಈ ‘ ರಾಕ್ಷಸಿ ’ ಪ್ರಸಂಗಕ್ಕೆ ಹೊಸ ತಿರುವು ಬಂದದ್ದು ಮನಾಲಿಗೆ ತಲುಪಿದ ಮೇಲೆ!
ಹಿಮಾಚಲದ ಪ್ರಮುಖ ಗಿರಿಧಾಮವಾದ ಮನಾಲಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವೂ ಹೌದು. ಹೀಗಾಗಿ ಊರು ಪುಟ್ಟದಾಗಿದ್ದರೂ ಎಲ್ಲೆಡೆ ಜನದಟ್ಟಣೆ. ಪ್ರವಾಸೋದ್ಯಮ ಪ್ರಮುಖ ಆದಾಯವಾದ್ದರಿಂದ ಒತ್ತೊತ್ತಾಗಿ ಅಂಗಡಿ, ಹೊಟೆಲ್‍ಗಳು. ಇವೆಲ್ಲವನ್ನೂ ನೋಡುತ್ತಲೇ ದುಂಗಾರಿ ದೇವಸ್ಥಾನ ನೋಡಲು ಹೊರಟಿದ್ದಾಯ್ತು. ನಮ್ಮ ಕರ್ನಾಟಕದಲ್ಲಿಲ್ಲದ ದೇವಸ್ಥಾನ ಇಲ್ಲೇನು ಎಂದು ಹೊರಟವಳಿಗೆ ಅಚ್ಚರಿ ಕಾದಿತ್ತು. ಮನಾಲಿಯ ಮಾಲ್‍ರಸ್ತೆಯಿಂದ ಅನತಿದೂರದಲ್ಲೇ ಒಂದೂವರೆ ಕಿಮೀ ದೂರದಲ್ಲಿ ಈ ದೇವಸ್ಥಾನ. ಅಲ್ಲಿಂದಿಲ್ಲಿಗೆ ಅಜಗಜಾಂತರ ವ್ಯತ್ಯಾಸ. ಅಲ್ಲಿ ಬರೀ ಜನ ಇಲ್ಲಿ ವನ! ಅಂದರೆ ಹಿಮಾಲಯದ ತಪ್ಪಲಲ್ಲಿರುವ ಬಿಯಾಸ್ ನದಿ ಕಣಿವೆಯ ದಂಡೆಯ ಮೇಲೆ ಸೂರ್ಯರಶ್ಮಿಯೂ ಸೋಕದಷ್ಟು ಎತ್ತೆತ್ತರದ ದಟ್ಟವಾದ ದೇವದಾರು ಮರಗಳಿಂದ ಆವೃತವಾದ ದುಂಗ್ರಿವನದಲ್ಲಿ ಈ ದೇವಸ್ಥಾನ. ಇಲ್ಲಿ ಪೂಜಿಸಲ್ಪಡುವವಳು ಹಡಿಂಬಾದೇವಿ ಅಂದರೆ ನಮ್ಮ ಹಿಡಿಂಬೆ, ಮಹಾಭಾರತದವಳು!
ಪೌರಾಣಿಕ ಹಿನ್ನೆಲೆ
ರಾಕ್ಷಸ ಕುಲಕ್ಕೆ ಸೇರಿದ ಹಡಿಂಬಾ ತನ್ನ ಅಣ್ಣನಾದ ಹಿಡಿಂಬನೊಡನೆ ಈ ವನದಲ್ಲಿ ವಾಸವಾಗಿದ್ದಳು. ಅಲ್ಲಿಗೆಲ್ಲಾ ಆತನೇ ರಾಜ. ಮಹಾವೀರನಾಗಿದ್ದ, ಆದರೆ ಅಷ್ಟೇ ಕ್ರೂರಿ. ಆತನೆಂದರೆ ಜನರಿಗೆಲ್ಲ ಹೆದರಿಕೆ. ಇಂಥ ಅಣ್ಣನನ್ನು ಸೋಲಿಸಿದವನನ್ನು ತಾನು ಮದುವೆಯಾಗುವುದಾಗಿ ಹಡಿಂಬಾ ಶಪಥ ಮಾಡಿದ್ದಳು. ಅರಗಿನ ಅರಮನೆಯಿಂದ ತಪ್ಪಿಸಿಕೊಂಡ ಪಾಂಡವರು ಈ ದುಂಗ್ರಿವನದಲ್ಲಿ ತಂಗಿದ್ದರು. ಪಾಂಡವರಲ್ಲಿ ಒಬ್ಬನಾದ ಭೀಮನನ್ನು ಕೊಲ್ಲಲು ಅಣ್ಣ, ತಂಗಿ ಹಡಿಂಬಾಳನ್ನು ಕಳುಹಿಸಿದ. ವೀರನೂ ಸುಂದರನೂ ಆಗಿದ್ದ ಭೀಮನನ್ನು ಹಡಿಂಬಾ ಮೋಹಿಸಿದಳು. ತನ್ನ ಅಣ್ಣನ ದುರಾಲೋಚನೆ ಬಗ್ಗೆ ತಿಳಿಸಿದಳು. ಕಾಳಗಕ್ಕೆ ಬಂದ ಹಿಡಿಂಬನನ್ನು ಭೀಮ ಸಂಹರಿಸಿದ. ಭೀಮ ಮತ್ತು ಹಡಿಂಬಾಳ ವಿವಾಹವಾಗಿ ಜನಿಸಿದವನು ಘಟೋತ್ಕಚ. ಇದಿಷ್ಟು ನಮಗೆ ಗೊತ್ತಿರುವ ಕತೆ.
ರಾಕ್ಷಸಿಯಾಗಿದ್ದ ಆಕೆ ದೇವಿಯಾದ ಮುಂದಿನ ಭಾಗವನ್ನು ಸ್ಥಳೀಯರು ಪ್ರೀತಿ ಮತ್ತು ಭಕ್ತಿಯಿಂದ ವರ್ಣಿಸುತ್ತಾರೆ. ಭೀಮ ಹಡಿಂಬಾಳನ್ನು ಮದುವೆಯಾಗುವಾಗಲೇ ಕೇವಲ ಒಂದು ವರ್ಷ ಇರುವೆನೆಂದು ಷರತ್ತು ವಿಧಿಸಿದ್ದ. ಅಂತೆಯೇ ಕೆಲಕಾಲದ ಬಳಿಕ ತನ್ನೂರಿಗೆ ಮರಳಿದ. ತಮ್ಮಿಬ್ಬರ ದಾಂಪತ್ಯದ ಫಲವಾಗಿ ಜನಿಸಿದ ಮಗನನ್ನು ಬೆಳೆಸುತ್ತಾ ಇಲ್ಲೇ ಇದ್ದು ರಾಜ್ಯಭಾರ ಮಾಡಿದಳು ಹಡಿಂಬಾ (ಒಂದೊಮ್ಮೆ ಭೀಮ ಕರೆದಿದ್ದರೂ ಹಡಿಂಬಾ ಆಳುವವರಿಲ್ಲದೇ ಇಲ್ಲಾಗಬಹುದಾದ ಅರಾಜಕತ್ವದ ಜತೆ ಬಹುಶಃ ದ್ರೌಪದಿಯೊಡನೆ ಸಂಘರ್ಷ, ರಾಕ್ಷಸ ಕುಲಕ್ಕೆ ಸೇರಿದ ತನ್ನನ್ನು ಶಿಷ್ಟ ಸಮಾಜ ಸ್ವೀಕರಿಸುವ ಬಗ್ಗೆ ಸಂಶಯ, ಸ್ವಾತಂತ್ರ್ಯ ಕಳೆದುಕೊಳ್ಳುವ ಅಂಜಿಕೆ ಎಲ್ಲವೂ ಸೇರಿ ಇಲ್ಲೇ ಇರುತ್ತಿದ್ದಳೆನೋ ಎಂದು ನಾನು ಯೋಚಿಸಿದೆ!) ಹೀಗೆ ಇಲ್ಲಿನ ರಾಣಿಯಾದ ಹಡಿಂಬಾ ಆಡಳಿತದ ಚುಕ್ಕಾಣಿ ಹಿಡಿದಳು. ತನ್ನ ಅಣ್ಣನಂತಲ್ಲದೇ ವೀರಳಾಗಿದ್ದರೂ ಜನರನ್ನು ಪ್ರೀತಿಯಿಂದ ಕಂಡಳು. ಮಗನನ್ನು ಶಿಸ್ತಿನಲ್ಲಿ ಬೆಳೆಸಿದಳು. ಆತ ಪ್ರಾಯಪ್ರಬುದ್ಧನಾದಾಗ ಅವನಿಗೆ ರಾಜ್ಯಭಾರ ಒಪ್ಪಿಸಿ, ತಾನು ತಪಸ್ಸು ಮಾಡಲು ಕುಳಿತಳು. ತಮಗಾಗಿ ರಾಜವೈಭವ ತೊರೆದು, ದಕ್ಷತೆಯಿಂದ ಆಡಳಿತ ನಡೆಸಿದ ಹಡಿಂಬಾಳನ್ನು ಜನರು ಮಾ ಎಂದು ಕರೆಯತೊಡಗಿದ್ದರು. ತಪಸ್ಸಿಗೆ ಕುಳಿತು ತನ್ನ ತಪ್ಪುಗಳಿಗಾಗಿ ಪ್ರಾಯಶ್ಚಿತ್ತ ಕೈಗೊಂಡಳು. ನಂತರ ತಪೋಬಲದಿಂದ ಆಕೆ ಅಸಾಮಾನ್ಯ ಶಕ್ತಿ ಪಡೆದಳು. ಹೀಗಾಗಿ ಜನರು ಹಡಿಂಬಾದೇವಿ ಎಂದು ಗೌರವಿಸಿದರು, ಪೂಜಿಸಿದರು. ಹಡಿಂಬಾದೇವಿ ತಪಸ್ಸಿಗೆ ಕುಳಿತ ಆ ಗುಹೆ, ಸ್ಥಳವೇ ಈಗಿನ ದೇವಸ್ಥಾನ!
ಐತಿಹಾಸಿಕ ವಿವರಗಳು

ಸುಮಾರು ಇಪ್ಪತ್ತನಾಲ್ಕು ಮೀಟರ್ ಎತ್ತರದ ಪಗೋಡಾ ಮಾದರಿಯ ಮೂರು ಅಂತಸ್ತಿನ ಗುಡಿ ಸುಮಾರು ಐದುನೂರು ವರ್ಷಗಳಷ್ಟು ಹಳೆಯದು. ಕ್ರಿಶ 1553 ರಲ್ಲಿ ಕುಲು ಮನಾಲಿಯ ಮಹಾರಾಜ ಬಹಾದ್ದೂರ್ ಸಿಂಗ್ ಇದನ್ನು ನಿರ್ಮಿಸಿದ್ದರು. ಚೌಕಾಕಾರದ ಛಾವಣಿಯನ್ನು ಕಟ್ಟಿಗೆಯಿಂದ ತಯಾರಿಸಲಾಗಿದ್ದು ಒಂದರ ಮೇಲೊಂದರಂತೆ ಮೂರು ಗೋಪುರಗಳನ್ನು ಕಟ್ಟಲಾಗಿದೆ. ಗೋಡೆಗಳನ್ನು ಮಣ್ಣಿನಿಂದ ಮಾಡಿದ್ದು ಸುಣ್ಣದ ಲೇಪನವಿದೆ. ಮೂರನೇ ಛಾವಣಿಯ ನಂತರ ತುದಿ ಶಂಕುಕೋನಾಕಾರದಲ್ಲಿದ್ದು , ಮಾಡುಗಳೂ ಇಳಿಜಾರಾಗಿವೆ. ಇದು ಹಿಮ ಬೀಳುವಾಗ, ಜಾರಲು ಸುಲಭವಾದ ವಿನ್ಯಾಸವಾಗಿದೆ.
ಗುಡಿಯ ಒಳಹೊಕ್ಕರೆ ಗುಹೆಯಂಥ ಜಾಗ. ಸುಮಾರು ಒಂದು ಮನುಷ್ಯ ಕೂರಬಹುದಾದ ಕಲ್ಲನ್ನು ಕೊರೆದು ಮಾಡಿದಂಥ ತೊಟ್ಟಿಲಿನ ರಚನೆ. ಇದರಲ್ಲಿ ಕುಳಿತು ಹಡಿಂಬಾ ತಪಸ್ಸು ಮಾಡಿದ್ದಳು ಎನ್ನಲಾಗುತ್ತದೆ. ಅದನ್ನು ಪುಷ್ಟೀಕರಿಸಲು ತೊಟ್ಟಿಲ ನಡುವಿನಲ್ಲಿ ಶಿಲಾ ಪಾದಗಳಿದ್ದು ಇದನ್ನು ಹಡಿಂಬಾದೇವಿಯ ಪಾದ ಎಂದು ಪೂಜಿಸುತ್ತಾರೆ. ಅಂದರೆ ಇಲ್ಲೆಲ್ಲೂ ಹಡಿಂಬಾಳ ವಿಗ್ರಹವಿಲ್ಲ. ಆದರೆ ದಟ್ಟ ಅರಣ್ಯದ ನಡುವೆ, ನಾಗಗುಡಿಯಂಥ ವಿಶಿಷ್ಟ ದೇಗುಲ, ಕಲ್ಲಿನ ತೊಟ್ಟಿಲು-ಶಿಲಾ ಪಾದ, ಮೈ ನಡುಗಿಸುವ ಗಾಳಿ ಎಲ್ಲವೂ ಒಂದು ರೀತಿಯ ನಿಗೂಢತೆಯನ್ನು ಸೃಷ್ಟಿಸುತ್ತಲೇ ನೆಲದ ಸಂಸ್ಕøತಿಯನ್ನು ನೆನಪಿಸುತ್ತವೆ.
ಇದೇ ದೇಗುಲದ ಸ್ವಲ್ಪ ಹಿಂದೆ ಬಲಭಾಗದಲ್ಲಿ ದೊಡ್ಡ ದೇವದಾರು ಮರವಿದೆ. ಅದು ಹಡಿಂಬಾಳ ಮಗನಾದ ಘಟೋತ್ಕಚನ ಗುಡಿ. ಕಟ್ಟಡವಿಲ್ಲ, ಕೇವಲ ಮರವಷ್ಟೇ!ಮರದ ಸುತ್ತಲೂ ಮೇಲಿನಿಂದ ಕೆಳಗೆ ಕತ್ತಿ-ಚಾಕುವಿನಂಥ ಆಯುಧಗಳು, ಆಡು, ಜಿಂಕೆ, ಕೋಣ ಮುಂತಾದ ಪ್ರಾಣಿಗಳ ಬುರುಡೆ-ಕೋಡುಗಳನ್ನು ಕಟ್ಟಲಾಗಿದೆ. ಮರದ ಕೆಳಗೆ ವಧಾಸ್ಥಾನವಿದೆ. ಪ್ರಾಣಿಬಲಿ ನೀಡುವುದು ಇಂದಿಗೂ ಜಾರಿಯಲ್ಲಿದೆ. ಬಲಿನೀಡಿದಾಗ ರಕ್ತವನ್ನು ಸಂಗ್ರಹಿಸಿ ಅದನ್ನುಗುಡಿಯ ಒಳಗಿರುವ ರಂಧ್ರದಲ್ಲಿ ಸುರಿಯುತ್ತಾರಂತೆ; ಎಷ್ಟು ಸುರಿದರೂ ಅದು ತುಂಬುವುದೇ ಇಲ್ಲ ಎಂಬ ಸ್ವಾರಸ್ಯಕರ ಮಾಹಿತಿ ದೊರೆಯಿತು. ಪ್ರಾಣಿಬಲಿ ಕಾನೂನಿಗೆ ವಿರುದ್ಧವಾಗಿದ್ದರೂ ಹಡಿಂಬಾದೇವಿ ಪ್ರೀತ್ಯರ್ಥ ಈ ಆಚರಣೆ ಎಂದು ಕೇಳಿದಾಗ ಹಡಿಂಬಾ ಬದಲಾಗಿರಬಹುದು, ಆದರೆ ಜನರ ಆಚರಣೆ-ನಂಬಿಕೆ ಬದಲಾಗಿಲ್ಲ ಎನಿಸಿತು!!

ಹಡಿಂಬಾ ಇಲ್ಲಿನ ಆರಾಧ್ಯದೈವ. ಕುಲು- ಮನಾಲಿಯ ಅರಸರನ್ನು ಕಾಯುವ ಅಧಿದೇವತೆಯೂ ಹೌದು. ಆಶ್ಚರ್ಯವೆಂದರೆ ದೇವಿಗೆ ಅಧಿಕ ಸಂಖ್ಯೆಯಲ್ಲಿ ಮುಸ್ಲಿಮ್ ಭಕ್ತರಿದ್ದಾರೆ. ನವರಾತ್ರಿಯಲ್ಲಿ ದೇಶದೆಲ್ಲೆಡೆ ದುರ್ಗಾದೇವಿ ಪೂಜೆ ನಡೆದರೆ ಇಲ್ಲಿ ಹಡಿಂಬಾದೇವಿಯದ್ದೇ ಪೂಜೆ. ಪ್ರತೀ ವರ್ಷ ಮೇ ತಿಂಗಳಲ್ಲಿ ಇಲ್ಲಿ ದುಂಗ್ರಿಮೇಲಾ ಎಂಬ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಹಡಿಂಬಾಳ ಜನ್ಮದಿನದ ಪ್ರಯುಕ್ತ ನಡೆಯುವ ಮೇಳವದು. ದೇವಿಯ ಉತ್ಸವ ಮೂರ್ತಿಯ ಜತೆ ಇಡೀ ಕುಲು ಮನಾಲಿಯ ಎಲ್ಲಾ ದೇವಸ್ಥಾನಗಳ ಉತ್ಸವಮೂರ್ತಿಗಳು ಇಲ್ಲೇ ಸೇರಿ ಮೆರವಣಿಗೆ ನಡೆಯುತ್ತದೆ. ನೆಲ ಸಂಸ್ಕøತಿಯ ಹಡಿಂಬಾಮಾಗೆ ಅಗ್ರಪೂಜೆ ಸಲ್ಲಿಸಿ ಧಲ್ಪುರ್ ಮೈದಾನಕ್ಕೆ ಒಯ್ಯುತ್ತಾರೆ. ಈ ಸಂಪ್ರದಾಯಕ್ಕೆ ಘೋರ್ ಪೂಜಾ ಎಂದು ಹೆಸರು. ಹಾಡು, ಕುಣಿತ, ಭಜನೆ, ನಾಟಕ ಹೀಗೆ ಮನರಂಜನಾ ಕಾರ್ಯಕ್ರಮ ಜರುಗುತ್ತದೆ. ಈ ಉತ್ಸವದಲ್ಲಿ ಇಲ್ಲಿನ ವಿಶೇಷ ಜಾನಪದ ನೃತ್ಯವಾದ ಕುಲ್ಲುನಾಟಿಯನ್ನು ಮಾಡಲಾಗುತ್ತದೆ. ಈ ದೇವಸ್ಥಾನದ ಹತ್ತಿರದಲ್ಲಿಯೇ ಇರುವ ಪುಟ್ಟ ಸಂಗ್ರಹಾಲಯದಲ್ಲಿ ಹಿಮಾಚಲದ ಜನರ ಸಾಂಪ್ರದಾಯಿಕ ಉಡುಗೆ-ತೊಡುಗೆ, ಪುರಾತನ ವಸ್ತುಗಳು, ಆಯುಧಗಳು, ಸಂಗೀತ ವಾದ್ಯಗಳು, ಪಾತ್ರೆಗಳನ್ನು ಪ್ರದರ್ಶನಕ್ಕೆಇಡಲಾಗಿದೆ.
ರಾಕ್ಷಸ ಕುಲಕ್ಕೆ ಸೇರಿದ್ದ ಹಡಿಂಬಾ ಜನರ ಆರಾಧ್ಯದೈವವಾಗಿದ್ದು ತನ್ನ ಸ್ವಂತ ಶಕ್ತಿಯಿಂದ! ವೀರ ಮತ್ತು ನ್ಯಾಯಪರನಾದ ಭೀಮನನ್ನು ಒಲಿದು ಆತನ ಷರತ್ತು ಒಪ್ಪಿ ನಿಷ್ಠೆಯಿಂದ ಸಂಸಾರ ನಡೆಸಿದಳು. ಅಣ್ಣನನ್ನು ಕಳೆದುಕೊಂಡರೂ ಧೃತಿಗೆಡದೆ ರಾಜ್ಯಭಾರವನ್ನು ಸಮರ್ಥಳಾಗಿ ನಡೆಸಿದಳು. ಮಗನಾದ ಘಟೋತ್ಕಚನನ್ನು ಸರಿಯಾಗಿ ಬೆಳೆಸಿದ್ದಲ್ಲದೇ ಪ್ರಾಪ್ತವಯಸ್ಕನಾದಾಗ ಪಟ್ಟ ಕಟ್ಟಿದಳು. ನಂತರ ಮಹಾಭಾರತ ಯುದ್ಧದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿದಳು. ಮಗ ಯುದ್ಧದಲ್ಲಿ ಮಡಿದರೂ ತನ್ನ ಕರ್ತವ್ಯ ಮುಂದುವರಿಸಿದಳು. ಪತ್ನಿಯಾಗಿ, ತಾಯಿಯಾಗಿ ವೈಯಕ್ತಿಕ ನೆಲೆಯಲ್ಲಿ ಕಾರ್ಯ ನಿರ್ವಹಿಸುವುದರ ಜತೆ ರಾಣಿಯಾಗಿ ತನ್ನ ಕರ್ತವ್ಯ ನಿರ್ವಹಿಸಿದಳು. ಹೀಗೆ ರಾಕ್ಷಸಿ ಹಡಿಂಬಾ ಜನರ ಪ್ರೀತಿ-ಭಕ್ತಿಗೆ ಪಾತ್ರಳಾದ ಹಡಿಂಬಾದೇವಿಯಾಗಿದ್ದು ನಿಜಕ್ಕೂದೊಡ್ಡ ಸಾಧನೆಯೇ !
ದೇವಸ್ಥಾನ ನೋಡಿ ಬರುವಾಗ ಇನ್ನೆಂದೂ ರಾಕ್ಷಸರು ಎಂದು ಬೈಯ್ಯಬಾರದು ಎಂದು ನಾನು ನಿರ್ಧರಿಸಿದ್ದಂತೂ ನಿಜ.

ಡಾ.ಕೆ.ಎಸ್.ಚೈತ್ರಾ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.