ಲೋಕದ ಕಣ್ಣು/ ಸಮರಕಲೆಯ ಸಾಹಸಿ ಉನ್ನಿಯಾರ್ಚ- ಡಾ. ಕೆ.ಎಸ್. ಚೈತ್ರಾ

ಸೋದರರ ಜೊತೆ ತಾನೂ ಸಮರಕಲೆಯನ್ನು ಕಲಿತ, ಗಂಡನನ್ನು ಯುದ್ಧಕ್ಕೆ ಹುರಿದುಂಬಿಸುವ ಉನ್ನಿಯಾರ್ಚ ನಮ್ಮ ದೇಶದ ಇತಿಹಾಸದಲ್ಲಿ ಕಾಣುವ ಅಪರೂಪದ ವೀರವನಿತೆ. ಮಹಿಳೆಯರಿಗೆ ಹಿಂಸೆ ಕೊಡುತ್ತಿದ್ದ ವಿದೇಶಿ ವ್ಯಾಪಾರಿಗಳ ಜೊತೆ ಹೋರಾಡಲು ಹಿಂಜರಿಯದ ಅವಳು, ಕುಟುಂಬಗಳ ನಡುವಿನ ಮನಸ್ತಾಪದಲ್ಲೂ ಕತ್ತಿ ಯುದ್ಧಕ್ಕೆ ಹೆದರಲಿಲ್ಲ. ಕೇರಳದ ಸಮರಕಲೆಯಲ್ಲಿ ಅವಳ ಹೆಣ್ಣು ಹೊಡೆತಗಳಿಗೆ ವಿಶೇಷ ಮೌಲ್ಯವಿದೆ.

ಸುತ್ತಿ ಸುಳಿವ ಕಿರಿದಾದ ರಸ್ತೆಗಳು, ಅಲ್ಲಲ್ಲಿ ತಲೆದೂಗುವ ತೆಂಗಿನ ಮರಗಳು, ಲುಂಗಿಯುಟ್ಟು ತಿರುಗಾಡುವ ಗಂಡಸರು, ಬಿಚ್ಚಿದ ಕಪ್ಪು ಕೂದಲ ಸುಂದರಿಯರು, ಪ್ರತಿಭಟನೆ ನಡೆಸುವ ಯುವಕರು ಇವೆಲ್ಲವನ್ನೂ ದಾಟಿ ಕೇರಳದ ಕಣ್ಣೂರಿನಿಂದ ವಟಕಾರ ಎಂಬ ಊರಿಗೆ ನಮ್ಮ ಗಾಡಿ ಓಡುತ್ತಿತ್ತು. ಅತ್ಯಧಿಕ ಸಾಕ್ಷರತೆ ಪ್ರಮಾಣ, ಹೆಣ್ಣುಗಂಡಿನ ಅನುಪಾತ ಮತ್ತು ಬಂಗಾರದ ಬಳಕೆ ಎಲ್ಲವೂ ಹೆಚ್ಚಿರುವ ಕೇರಳದಲ್ಲಿ ಮದ್ಯಪಾನವೂ ಅತಿ ಹೆಚ್ಚು. ದಾರಿಯುದ್ದಕ್ಕೂ ಕಂಡ ಮದ್ಯದಂಗಡಿಗಳು ಮತ್ತು ಅವುಗಳ ಮುಂದಿದ್ದ ಸಾಲು ಅದಕ್ಕೆ ಸಾಕ್ಷಿಯಾಗಿತ್ತು. ‘ನಾವು ಮಲೆಯಾಳಿಗಳು ಒಂಥರಾ ಜೀವನ ವ್ಯಾಮೋಹಿಗಳು; ಮಸಾಲೆ ಊಟ, ಕುಡಿತ, ಕುಣಿತ, ಹಬ್ಬ, ಪೂಜೆ, ಅಲಂಕಾರ, ಓದು, ಹೊಡೆದಾಟ, ಪ್ರತಿಭಟನೆ ಹೀಗೆ ಎಲ್ಲವೂ ನಮ್ಮಲ್ಲಿ ಹೆಚ್ಚು ’ ಎಂದು ಪಕ್ಕದಲ್ಲಿದ್ದ ಗೆಳೆಯ ಬಲರಾಜ್ ನಗುತ್ತಾ ವಿವರಿಸಿದ.

ಲೋಕರ್ನಕಾವು ದೇಗುಲ

ವಟಕಾರದಲ್ಲಿರುವ ಲೋಕರ್ನಕಾವು ದೇವಸ್ಥಾನ ಬಹಳ ಪ್ರಸಿದ್ಧವಾದುದು. ಪರ್ವತ, ನದಿ ಮತ್ತು ಸಣ್ಣಕೊಲ್ಲಿಗಳಿಂದ ಮಾಡಿದ ಲೋಕ ‘ ಲೋಕಮಲರ್ಯಕಾವು’ ಎಂಬ ಶಬ್ದದ ಸಂಕ್ಷಿಪ್ತರೂಪ ಲೋಕರ್ನಕಾವು. ಕೇರಳ ಶೈಲಿಯಲಿ ್ಲಕಟ್ಟಲಾಗಿರುವ ಇದು ಸುಮಾರು ಸಾವಿರದೈನೂರು ವರ್ಷ ಪ್ರಾಚೀನವಾದ ದೇಗುಲ ಎಂದು ಹೇಳಲಾಗುತ್ತದೆ. ದುರ್ಗಾದೇವಿ ಇಲ್ಲಿನ ಪ್ರಧಾನದೇವತೆ. ದೇಗಲದ ಒಳಗೆ ದುರ್ಗೆ, ಶಿವ, ವಿಷ್ಣುವಿನ ಪೂಜೆ ನಡೆಯುತ್ತದೆ. ಹೊರಾವರಣದಲ್ಲಿ ಆಲ, ಮಾವು ಮತ್ತು ಹಲಸಿನ ಮರಗಳು ಒಂದನ್ನೊಂದು ಹೆಣೆದು ಬೆಳೆದಿವೆ. ಮಂಡಲ ಉತ್ಸವಂ ಮತ್ತು ಪೂರಮ್ ಇಲ್ಲಿ ಪ್ರತಿವರ್ಷ ನಡೆಯುವ ಮುಖ್ಯ ಉತ್ಸವಗಳು. ಪೂರಕ್ಕಲಿ ಎಂಬ ವಿಶೇಷ ಜನಪದ ನೃತ್ಯವನ್ನು ಇಲ್ಲಿ ಮಾತ್ರ ಉತ್ಸವಗಳಲ್ಲಿ ನರ್ತಿಸಲಾಗುತ್ತದೆ. ಇದು ಕೇರಳದ ಸಮರಕಲೆ ಕಲರಿಪಯಟ್ಟನ್ನು ಕೆಲಮಟ್ಟಿಗೆ ಹೋಲುತ್ತದೆ. ಕಲರಿಪಯಟ್‍ನ ಕಲಾವಿದರಲ್ಲಿ ಬಹುಮಾನ್ಯನಾದ ತಚೋಲಿ ಒಥೆನಾನ್ ಇಲ್ಲಿ ದಿನವೂ ಪ್ರಾರ್ಥನೆ ಸಲ್ಲಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ಇಂದಿಗೂ ಕಲರಿಪಯಟ್ ಕಲಾವಿದರು ತಮ್ಮ ಪ್ರಥಮ ಪ್ರದರ್ಶನದ ಮುಂಚೆ ಇಲ್ಲಿಗೆ ಬಂದು ದೇವಿಯ ಆಶೀರ್ವಾದ ಪಡೆಯುವುದು ರೂಢಿಯಲ್ಲಿದೆ. ಮಾತ್ರವಲ್ಲ ಕಲರಿಯಲ್ಲಿ ದಂತಕತೆಗಳಾದ ಉನ್ನಿಯಾರ್ಚ ಮತ್ತು ಅರೋಮಲ್ ಚೇಕವರರ ನಾಡೂ ಇದು.

ಕಲರಿಪಯಟ್

ಜಗತ್ತಿನ ಸಮರಕಲೆಗಳ ತಾಯಿ ಎಂದೇ ಬಣ್ಣಿಸಲಾಗುವ ಕಲರಿಪಯಟ್ ಮೂರುಸಾವಿರ ವರ್ಷಗಳಷ್ಟು ಪ್ರಾಚೀನವಾದದ್ದು. ಧನುರ್ವೇದ ಮತ್ತು ಆಯರ್ವೇದದ ಅಂಶ- ಸೂತ್ರಗಳ ಮೇಲೆ ರಚಿತವಾದ ಕಲರಿ, ಸಮರತಂತ್ರ ಮತ್ತು ಕಲಾಪ್ರಕಾರ ಎರಡೂ ಸಮನ್ವಯಗೊಂಡ ಸಮರಕಲೆಯಾಗಿದೆ. ಕಲರಿ (ಯುದ್ಧಭೂಮಿ) ಪಯಟ್ (ಸಮರಕಲೆಯ ತರಬೇತಿ)ನ್ನು ವಿಷ್ಣುವಿನ ಅವತಾರವಾದ ಪರಶುರಾಮ ಶಿವನಿಂದ ಕಲಿತನು. ತನ್ನ ಸೃಷ್ಟಿಯಾದ ಕೇರಳದಲ್ಲಿ ಶತ್ರುಗಳನ್ನು ಸೋಲಿಸಲು ನೂರೆಂಟು ವಿಧದ ಕಲರಿಗಳನ್ನು ಇಪ್ಪತ್ತೊಂದು ಗುರುಗಳನ್ನೂ ಕೇರಳದ ತುಂಬೆಲ್ಲಾ ಆಯೋಜಿಸಿದ ಎಂದು ಮಲೆಯಾಳದ ಸಾಹಿತ್ಯದಲ್ಲಿ ವಿವರಿಸಲಾಗಿದೆ. ಸಾಂಪ್ರದಾಯಿಕ ಕಲರಿಯಲ್ಲಿ ಎರಡು ಮುಖ್ಯ ಶೈಲಿಗಳಿವೆ; ಉತ್ತರ (ವಡಕ್ಕನ್) ಮತ್ತು ದಕ್ಷಿಣ (ತೇಕ್ಕನ್) ಶೈಲಿಗಳು.

ಉತ್ತರ ಮಲಬಾರಿನ ಲಾವಣಿಗಳಲ್ಲಿ ಪ್ರಮುಖವಾದ ವಡಕ್ಕನ್ ಪಾಟ್ಟುಕಲ್ ಸ್ಥಳೀಯ ವೀರರ ಸಾಹಸಗಾಥೆಯನ್ನು ವರ್ಣಿಸುತ್ತದೆ. ಮೌಖಿಕವಾಗಿ ಒಂದು ತಲೆಮಾರಿನಿಂದ ಇನ್ನೊಂದಕ್ಕೆ ಹರಿದುಬಂದ ಈ ಕಥನ ಕಲೆ ಚರಿತ್ರೆಯನ್ನು ಅಚ್ಚಳಿಯದೆ ಜನಮಾನಸದಲ್ಲಿ ಕಾಪಿಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಕಲರಿಪಯಟ್ ಇಂದಿಗೂ ಜನಪ್ರಿಯವಾಗಿರಲು ಇದೂ ಒಂದು ಕಾರಣ. ಕಲರಿಪಯಟ್‍ಗೆ ಭದ್ರಕಾಳಿ ಅಥವಾ ಭಗವತಿ ಅಧಿದೈವ. ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿ ದೇವ-ದೇವಿಯರ ಆರಾಧನೆ ಸಹಜವೇ. ದೇವಿ ಮಹಾತ್ಮೆ ಇಲ್ಲಿ ಬಹುವಾಗಿ ಪ್ರಚಲಿತವಾಗಿದೆ. ದೇವಿಯನ್ನು ಶಕ್ತಿ ಎಂದು ಭಕ್ತಿಯಿಂದ ಪೂಜಿಸಲಾಗುತ್ತದೆ. ಇಲ್ಲಿನ ದೇವಿಯರು ಕೇವಲ ಶಾಂತ- ಪ್ರಸನ್ನ- ಮಂದಸ್ಮಿತೆಯರಲ್ಲ. ಬಿಲ್ಲು ಬಾಣ ಶಸ್ತ್ರಾಸ್ತ್ರ ಧರಿಸಿ ಹೋರಾಡುವ ಧೀರೆಯರು. ಲೋಕಕಂಟಕರಾದ ರಾಕ್ಷಸರನ್ನು ಸಂಹರಿಸಲು ದೇವತೆಗಳು ಅಸಮರ್ಥರಾದಾಗ ದೇವಿ ಉಗ್ರರೂಪ ತಾಳಿ ಲೋಕರಕ್ಷಣೆ ಕೈಗೊಳ್ಳುತ್ತಾಳೆ. ಪೂಜಿಸುವುದಷ್ಟೇ ಅಲ್ಲ, ಈ ಸಮರಕಲೆಯನ್ನು ಹಿಂದಿನಿಂದಲೂ ಹೆಣ್ಣು-ಗಂಡು ಮಕ್ಕಳಿಗೆ ಸಮಾನವಾಗಿ ಕಲಿಸಲಾಗುತ್ತಿತ್ತು ಎಂಬುದು ಮಹತ್ವದ ಅಂಶ!

ಪುತೂರಮ್ ಪುತ್ರಿ

ಕಡತನಾಡು ಪ್ರಾಂತ್ಯ, ಅಂದರೆ ವಡಕರ ಸೇರಿದ ಕೇರಳದ ಉತ್ತರಭಾಗ, ವೀರ-ಶೂರರಾದ ಚೇಕವರ ಬೀಡು. ಉನ್ನಿಯಾರ್ಚ ಹದಿನಾರನೇ ಶತಮಾನದವಳು. ಕಡತನಾಡಿನಲ್ಲೇ ಪ್ರಸಿದ್ಧ ಕಲರಿಗುರು, ಪುತೂರಮ್ ವೀಟಿಲ್ ಕಣ್ಣಪ್ಪ ಚೇಕವರ್. ಅವರ ಮಗಳಾಗಿ ಜನಿಸಿದ್ದರಿಂದ ಉನ್ನಿಯಾರ್ಚ ಪುತೂರಮ್ ಪುತ್ರಿ ಎಂದೂ ಪ್ರಚಲಿತವಾಗಿದ್ದಳು. ಏಳನೇ ವಯಸ್ಸಿನಲ್ಲಿ ತನ್ನ ಸಹೋದರರಾದ ಅರೋಮಲ್ ಮತ್ತು ಉನ್ನಿಕಣ್ಣನ್ ಹಾಗೂ ಸಂಬಂಧಿ ಚಂದುರೊಡನೆ ಆಕೆಯ ಕಲರಿ ಅಭ್ಯಾಸ ನಡೆದಿತ್ತು. ಅವರೊಂದಿಗೆ ಸರಿಸಮವಾಗಿ ಆಕೆ ಸ್ಪರ್ಧಿಸುತ್ತಿದ್ದಳು. ನಂತರ ಯೌವ್ವನದಲ್ಲಿ, ಜೊನಾಕ ಮಾಪಿಳ್ಳೆಗಳ ಜತೆ ಆಕೆಯ ಹೋರಾಟ ದಂತಕತೆಯಾಗಿ ನಾನಾ ರೂಪಗಳನ್ನು ಪಡೆದಿದೆ. ಮಲಬಾರ್ ತೀರಕ್ಕೆ ವ್ಯಾಪಾರ-ವಹಿವಾಟಿಗಾಗಿ ವಿದೇಶಿಯರು ಆಗಮಿಸುತ್ತಿದ್ದರು. ಮಾಪಿಳ್ಳೆ ಎಂಬುದು ಅವರಿಗೆ ಗೌರವ ಸೂಚಿಸುವ ಸಂಬೋಧನೆಯಾಗಿತ್ತು. ಯಹೂದಿ- ಜುಡಾ ಮಾಪಿಳ್ಳೆ, ಕ್ರಿಶ್ಚಿಯನ್- ನಸ್ರಾನಿ ಮಾಪಿಳ್ಳೆ, ಮುಸ್ಲಿಮ್/ ಯವನಕ-ಜೊನಾಕ ಮಾಪಿಳ್ಳೆ ಹೀಗೆ ಧರ್ಮದಿಂದ ಅವರನ್ನು ಗುರುತಿಸಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ತಮ್ಮವರನ್ನಾಗಿ ಸ್ವೀಕರಿಸಿದ್ದರು. ಆದರೆ ನಾದಪುರದಲ್ಲಿದ್ದ ಜೊನಾಕ ಮಾಪಿಳ್ಳೆಗಳೆಂದರೆ ಜನರು ಭಯಪಡುತ್ತಿದ್ದರು. ಅರೇಬಿಯಾದ ಗುಲಾಮ ವ್ಯಾಪಾರಕ್ಕೆ ಅವರು ಇಲ್ಲಿಂದ ಜನರನ್ನು ಸಾಗಾಣಿಕೆ, ಹೆಣ್ಣುಮಕ್ಕಳ ಅಪಹರಣ-ದೌರ್ಜನ್ಯ ಇವೆಲ್ಲಾ ಅದಕ್ಕೆ ಮುಖ್ಯ ಕಾರಣ.

ಅಳುಕದ ಧೀರೆ

ಕಲರಿ ಆಸನ್ ಕುನ್ಹಿರಾಮನ್ ಜತೆ ಮದುವೆಯ ನಂತರ ಉನ್ನಿಯಾರ್ಚ ಅಟ್ಟುಮ್ ಮನಾಮೆಲ್‍ನಲ್ಲಿ ನೆಲೆಸಿದ್ದಳು. ಉನ್ನಿಯಾರ್ಚ ಅಲ್ಲಿ ಮಲರ್ಕಾವಿನ ಕೂತು, ಅಯ್ಯಪ್ಪನ್ ಕಾವಿನ ವಿಲ್ಲಕ್ಕು ಮತ್ತು ಅಂಜನಕಾವಿನ ವೇಲಾಪುರಮ್ ದೇಗುಲಗಳನ್ನು ಸಂದರ್ಶಿಸಲು ನಿಶ್ಚಯಿಸಿದಳು. ಕುಟುಂಬವರ್ಗದವರು ಹೆದರಿದರು; ಅದು ಸಕಾರಣವಾಗಿತ್ತು, ಏಕೆಂದರೆ ಈ ದೇಗುಲಗಳಿಗೆ ಹೋಗುವ ಮಾರ್ಗ, ಜೊನಾಕ ಮಾಪಿಳ್ಳೆಗಳಿಂದ ಆಗಾಗ್ಗೆ ತೊಂದರೆಯಾಗುವ ಸ್ಥಳವಾಗಿತ್ತು. ಆಕೆಯ ಅತ್ತೆ, ಅವರಿಂದ ಹೆಣ್ಣುಮಕ್ಕಳಿಗಾದ ತೊಂದರೆಗಳನ್ನು ಉದಾಹರಣೆ ಸಹಿತ ವಿವರಿಸಿದರು. ಆದರೆ ಇದ್ಯಾವುದೂ ಉನ್ನಿಯಾರ್ಚಳನ್ನು ತನ್ನ ನಿರ್ಧಾರದಿಂದ ವಿಮುಖಳಾಗಿಸಲಿಲ್ಲ. ಬದಲಿಗೆ ಇನ್ನಷ್ಟು ಗಟ್ಟಿಯಾಗಿಸಿತು. ‘ಪ್ರಸಿದ್ಧ ಪುತೂರಮ್ ಕುಟುಂಬದಲ್ಲಿ ಜನಿಸಿ, ಕಣ್ಣಪ್ಪನ್‍ರ ದಿಟ್ಟ ಮಗಳಾಗಿ, ಹುಟ್ಟಿನಿಂದಲೇ ಸಾಹಸಿಯಾದ ನಾನು ಹೇಡಿಯಂತೆ ಹಿಂದೆ ಸರಿಯಲಾರೆ’ ಎಂಬುದು ಆಕೆಯ ಮಾತಾಗಿತ್ತು.

ಹೇಳಿದ್ದು ಮಾತ್ರವಲ್ಲ, ಉರುಮಿ (ಶ್ರೀಲಂಕಾ ಮೂಲದ ಚಾಟಿಯ ಥರದ ಉದ್ದ ಕತ್ತಿ) ಯನ್ನು ಸೊಂಟಕ್ಕೆ ಪಟ್ಟಿಯಂತೆ ಬಿಗಿದು ಆಕೆ ದೇಗುಲಕ್ಕೆ ಹೊರಟಳು. ಗಂಡ ಕುನ್ಹಿರಾಮನಿಗೆ ಹೆದರಿಕೆ ಇದ್ದರೂ ಹೆಂಡತಿಯ ಜತೆ ಹೊರಡುವುದು ಅನಿವಾರ್ಯವಾಯಿತು. ಪ್ರಯಾಣದಲ್ಲಿ ನಾದಪುರಮ್ ಬಜಾರಿನಲ್ಲಿ ಜೊನಾಕ ಮಾಪಿಳ್ಳೆ ರೌಡಿಗಳು ಉನ್ನಿಯಾರ್ಚಳನ್ನು ಕಂಡರು. ಆಕೆಯನ್ನು ಅಪಹರಿಸಲು ಪ್ರಯತ್ನಿಸಿದರು. ಕುನ್ಹಿರಾಮ ರೌಡಿಗಳನ್ನು ಕಂಡು ಅಧೀರನಾದ. ಉನ್ನಿಯಾರ್ಚ ಒಂದಿಷ್ಟೂ ಅಳುಕದೇ ಹೆದರಿದ್ದ ಗಂಡನನ್ನು ಚುಡಾಯಿಸಿದಳು.

‘ಹೆಣ್ಣಾಗಿ ನಾನೇ ನಡುಗುತ್ತಿಲ್ಲ
ಗಂಡಾಗಿ ನಿನಗೇಕೆ ಕಂಪನ?
ಸಾವಿರಾರು ಜನ ಬಂದರೂ ಲೆಕ್ಕಕ್ಕಿಲ್ಲ
ನಾನು ಪುತೂರಮ್ ಕುಟುಂಬದವಳು
ಈ ಕುಟುಂಬದ ಮಹಿಳೆಯರು
ತಮ್ಮ ಪುರುಷರನ್ನು ಸಾಯಲು ಕಳಿಸಿದ್ದು ಕೇಳಿದ್ದುಂಟೇ?’

ನಂತರ ನಡೆದ ಕಾದಾಟದಲ್ಲಿ ಕುನ್ಹಿರಾಮ ಹೋರಾಡಿದರೂ ಸೋಲುಂಡ. ಆದರೆ ಉನ್ನಿಯಾರ್ಚ ತನ್ನ ಉರುಮಿ ಬೀಸುತ್ತಾ ಸಮರಕಲೆ ಕಲರಿಯ ವಿಶಿಷ್ಟ ಪ್ರಯೋಗದಿಂದ ಅನೇಕರನ್ನು ಗಾಯಗೊಳಿಸಿದಳು. ತನ್ನನ್ನು ತಾನು ವೀರ ಅರೋಮಲ್ ಚೇಕರ್‍ನ ಸಹೋದರಿ ಎಂದು ಗುರುತಿಸಿಕೊಂಡು ಹೀಗೇ ಮುಂದುವರಿದರೆ ಎಲ್ಲರನ್ನೂ ನಾಶಗೊಳಿಸುವುದಾಗಿ ಎಚ್ಚರಿಕೆ ನೀಡಿದಳು. ಗುಂಪಿನ ನಾಯಕನಿಗೆ ಈ ರೀತಿಯ ಪ್ರತಿಭಟನೆ ಹೊಸತು. ಹೆದರಿ ಆಕೆಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ. ಆದರೆ ಉನ್ನಿಯಾರ್ಚ ಮಣಿಯದೇ ಆ ಪ್ರಾಂತ್ಯದಲ್ಲಿ ಮಹಿಳೆಯರನ್ನು ಹಿಂಸಿಸು ವಂತಿಲ್ಲ ಎಂಬ ವಾಗ್ದಾನ ಪಡೆದಳು. ನಾಯಕ ಮತ್ತು ಸಂಗಡಿಗರು ಆಕೆಗೆ ಮಣಿದು ಕ್ಷಮೆ ಯಾಚಿಸಿ ಅನೇಕ ಕಾಣಿಕೆ ನೀಡಿದರು. ಅಂದಿನಿಂದ ಉನ್ನಿಯಾರ್ಚ ವೀರನಾರಿ, ಶಕ್ತಿಸ್ವರೂಪಿ ಎಂದು ಪ್ರಸಿದ್ಧಿ ಪಡೆದಳು. ಅಷ್ಟೇ ಅಲ,್ಲ ಉನ್ನಿಯಾರ್ಚಳ ಈ ಹೋರಾಟ ಅರಬ್ ರಾಷ್ಟ್ರಗಳಿಗೆ ಇಲ್ಲಿಂದ ನಡೆಯುತ್ತಿದ್ದ ಗುಲಾಮ ವ್ಯವಹಾರದ ವಿರುದ್ಧ ಸ್ಥಳೀಯರ ಪ್ರತಿಭಟನೆಗೆ ಸ್ಫೂರ್ತಿಯಾಯಿತು. ಇದು ಉನ್ನಿಯಾರ್ಚ ಗಂಡನನ್ನು ಹುರಿದುಂಬಿಸಿದ್ದಲ್ಲದೇ ತಾನೇ ಹೋರಾಡಿ ಗೆದ್ದ ಕತೆ.

ಸಹೋದರ ಪ್ರೇಮ

ಸಮರಕಲೆಯಲಿ ್ಲಆಕೆಗಿದ್ದ ಪರಿಣತಿಯ ಜತೆ ಸಹೋದರನ ಮೇಲಿದ್ದ ಪ್ರೇಮವನ್ನು ಇನ್ನೊಂದು ಪ್ರಸಂಗ ತಿಳಿಸುತ್ತದೆ. ಮಧ್ಯಯುಗದಲ್ಲಿ ಕೇರಳದ ಪ್ರತಿಷ್ಠಿತ ಕುಟುಂಬಗಳ ನಡುವೆ ಮನಸ್ತಾಪವಾದಾಗ ಅದನ್ನು ಪರಿಹರಿಸಲು ಅಂಕಮ್ (ಕತ್ತಿ ಯುದ್ಧ) ಸಾಮಾನ್ಯವಾಗಿತ್ತು. ಉನ್ನಿಯಾರ್ಚಳ ಸಹೋದರ ಅರೋಮಲ್‍ನನ್ನು ಅರಿಂಗೊದಾರ್ ಕತ್ತಿ ಯುದ್ಧಕ್ಕೆ ಆಹ್ವಾನಿಸಿದ್ದ. ಆಗ ಈಕೆ ಸಹೋದರನ ಜತೆಗೆ ಸೆಣೆಸಲು ಹೊರಟ ಸಂಬಂಧಿ ಚಂದುವಿಗೆ ವೈರಿಯನ್ನು ಎದುರಿಸುವ ಕುರಿತು ಕತ್ತಿ ಹೇಗೆ ಬಳಸಬೇಕು ಎಂಬ ಬಹುಮೂಲ್ಯ ಸಲಹೆ ನೀಡುತ್ತಾಳೆ. ಆದರೆ ಕುತಂತ್ರಿ ಚಂದ್ರು, ಗೆಳೆಯನಿಗೆ ದೋಷವಿದ್ದ ಕತ್ತಿ ನೀಡುತ್ತಾನೆ. ವೀರ ಅರೋಮಲ್ ಎದುರಾಳಿಯನ್ನು ಸೋಲಿಸಿದರೂ ಪೆಟ್ಟುಗಳಿಂದ ಜರ್ಜರಿತನಾಗುತ್ತಾನೆ. ಸಮಯ ಸಾಧಿಸಿ ಚಂದು ಅರೋಮಲ್‍ನನ್ನು ಕೊಲ್ಲುತ್ತಾನೆ. ಸಹೋದರನನ್ನು ಕಳೆದುಕೊಂಡು, ಚಂದುವಿನ ದುಷ್ಕøತ್ಯ ತಿಳಿದ ಉನ್ನಿಯಾರ್ಚ ಸುಮ್ಮನಿರುವುದಿಲ್ಲ. ಅಂದೇ ತನ್ನ ಸೇಡು ತೀರಿಸಿಕೊಳ್ಳುವ ಪಣ ತೊಟ್ಟು ತನ್ನ ಮಗ ಅರೋಮಾಲುನ್ನಿ ಮತ್ತು ಸೋದರಳಿಯ ಕಣ್ಣಪ್ಪಾನ್ನುನ್ನಿಯರಿಗೆ ಯುದ್ಧ ಶಿಕ್ಷಣ ನೀಡುತ್ತಾಳೆ.

ಅನೇಕ ವರ್ಷಗಳ ನಂತರ ಮಕ್ಕಳಿಗೆ ದ್ರೋಹಿ ಚಂದುವಿನೊಡನೆ ಸೆಣೆಸುವ ಅವಕಾಶ ದೊರಕುತ್ತದೆ. ಏಕಮಾತ್ರ ಮಗನನ್ನು ಯುದ್ಧಕ್ಕೆ ಕಳಿಸುವಾಗ ಉನ್ನಿಯಾರ್ಚ ಹೇಳಿದ ಮಾತು ಗಮನಾರ್ಹ ‘ಯುದ್ಧದಲ್ಲಿ ಸೆಣೆಸುತ್ತಾ ಮಡಿದರೆ ನಿನ್ನ ದೇಹವನ್ನು ರೇಷ್ಮೆ ಬಟ್ಟೆಯಲ್ಲಿ ಸುತ್ತಿ ಗೌರವಯುತ ಅಂತ್ಯಕ್ರಿಯೆ ನಡೆಸುತ್ತೇನೆ. ಆದರೆ ಗೊತ್ತಾಗದೇ, ಎಲ್ಲೋ ಅಡಗಿದ ಶತ್ರುವಿನ ಬಾಣದಿಂದ ಸತ್ತರೆ ಹಸಿರು ಎಲೆ ಸುತ್ತುವುದಷ್ಟೇ… ಅಂತ್ಯಕ್ರಿಯೆ ನಡೆಸುವುದಿಲ್ಲ’. ಸದ್ಯ, ಆಕೆಯ ಗರಡಿಯಲ್ಲಿ ಪಳಗಿದ ಮಕ್ಕಳು ಚಂದುವನ್ನು ಕೊಂದು ಅವನ ತಲೆಯನ್ನು ತಾಯಿಗೆ ಒಪ್ಪಿಸಿ ಸೇಡು ತೀರಿಸುತ್ತಾರೆ. ತನ್ನ ಕಡೆ ದಿನಗಳಲ್ಲಿ ಒಮಲೂರಿನ ದೇಗಲದಲ್ಲಿ ದೇವರ ಸೇವೆ ಕೈಗೊಳ್ಳಲು ಬಯಸುವ ತಾಯಿಗೆ, ಮಗ ಜತೆಯಲ್ಲಿ ತಾನಿರಲೇ ಎನ್ನುತ್ತಾನೆ. ನಯವಾಗಿಯೇ ವೃದ್ಧೆ ಉನ್ನಿಯಾರ್ಚ ‘ನಿನ್ನ ತಾಯಿಗೆ ಪ್ರಾಯದಲ್ಲಿಯೂ ರಕ್ಷಣೆ ಬೇಕಿರಲಿಲ್ಲ’ ಎಂದು ನಿರಾಕರಿಸಿ ಏಳು ದಿನಗಳ ನಂತರ ದೇಗುಲಕ್ಕೆ ಬರಲು ತಿಳಿಸುತ್ತಾಳೆ. ವಾರದ ನಂತರ ಮಗ ಬಂದಾಗ ಉನ್ನಿಯಾರ್ಚ ಅಲ್ಲಿಯೇ ಮರಣ ಹೊಂದಿರುತ್ತಾಳೆ.

ಯೋಚಿಸುತ್ತಾ ಹೋದಂತೆ ಉನ್ನಿಯಾರ್ಚಳ ವ್ಯಕ್ತಿತ್ವ ನಿಜಕ್ಕೂ ಬೆರಗು ಮೂಡಿಸುತ್ತದೆ. ಬಾಲ್ಯದಲ್ಲಿ ತಂದೆ, ಯೌವ್ವನದಲ್ಲಿ ಪತಿ, ವೃದ್ಧಾಪ್ಯದಲ್ಲಿ ಮಗ ಹೀಗೆ ಸದಾ ರಕ್ಷಣೆಯಲ್ಲಿ ಇರಬೇಕಾದ ಅಬಲೆ ಎಂದು ನಂಬಿದ ಸಮಾಜ ನಮ್ಮದು. ಹೀಗಿರುವಾಗ ಹದಿನಾರನೇ ಶತಮಾನದಲ್ಲಿ ಸಹೋದರರ ಸಮಾನವಾಗಿ ಸೆಣೆಸಿ, ಗಂಡನಿಗಿಂತ ಪರಾಕ್ರಮಿಯಾಗಿ ಆತನನ್ನು ರಕ್ಷಿಸಿದಳು. ಸಹೋದರನ ಸಾವಿಗೆ ಪ್ರತೀಕಾರದ ಪಣತೊಟ್ಟು ಯಶಸ್ವಿಯಾದಳು. ಮಗನಿಗೆ ಶಿಕ್ಷಣ ನೀಡಿದರೂ ಆತನ ಆಸರೆ ಬಯಸಲಿಲ್ಲ. ಇದಕ್ಕೆಲ್ಲಾ ಕಾರಣ; ಆಕೆಯ ಪರಿಶ್ರಮ, ಪ್ರತಿಭೆ ಜತೆ ಸಮರಕಲೆ ಕಲಿಯುವ ಸಮಾನ ಅವಕಾಶ ಸಿಕ್ಕಿದ್ದು! ಸ್ವಾವಲಂಬಿ, ಸ್ವಾಭಿಮಾನಿ ಉನ್ನಿಯಾರ್ಚ ಕ್ರಮಿಸಿದ ಸಾಹಸ ಮತ್ತು ಸಾಧನೆಯ ಹಾದಿ ಕಂಡಾಗ ಅಭಿಮಾನ ಮೂಡುವುದರ ಜತೆ ಶಿಕ್ಷಣಕ್ಕಿರುವ ಮಹತ್ವವೂ ಅರಿವಾಗುತ್ತದೆ.

ಡಾ. ಕೆ.ಎಸ್.ಚೈತ್ರಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *