ಲೋಕದ ಕಣ್ಣು/ ಶಾಪಗ್ರಸ್ತ ದ್ವೀಪ ಲಂಕಾವಿ!- ಡಾ.ಕೆ.ಎಸ್. ಚೈತ್ರಾ
ದೇಶ ದೊಡ್ಡದಿರಲಿ ಸಣ್ಣದಿರಲಿ, ಸಾಮ್ರಾಜ್ಯ ಬಲಿಷ್ಠವಾಗಿರಲಿ ದುರ್ಬಲವಾಗಿರಲಿ, ಅದರ ಇತಿಹಾಸದಲ್ಲಿ ನಿರಪರಾಧಿ ಹೆಣ್ಣುಗಳ ನಿಟ್ಟುಸಿರು ನೇಯ್ದುಕೊಂಡಿರುತ್ತದೆ. ತನ್ನ ಮುಗ್ಧತೆಯನ್ನು ಸಾಬೀತು ಮಾಡಲಾಗದ ಮಾಸುರಿ ಎಂಬ ಹೆಣ್ಣಿನ ರಕ್ತ ಲಂಕಾವಿಯ ನೆಲವನ್ನು ತೋಯಿಸಿರುವ ಕತೆ ಅಲ್ಲಿನ ಪ್ರವಾಸದಲ್ಲಿ ಕಿವಿಗೆ ಅಪ್ಪಳಿಸುತ್ತದೆ.
ಸಿಂಗಾಪುರದ ಅತ್ಯಾಧುನಿಕ ವಿಮಾನ ನಿಲ್ದಾಣದಿಂದ ಹೊರಟ ನಾವು ಪುಟ್ಟ ವಿಮಾನದಲ್ಲಿ ಚಿಕ್ಕ ವಿಮಾನ ನಿಲ್ದಾಣದಲ್ಲಿ ಬಂದಿಳಿದೆವು. ಕಾರಿನಲ್ಲಿ ಕುಳಿತು ಹೊರಗೆ ರಸ್ತೆಯಲ್ಲಿ ಹೊರಟಾಗ ಒಂದು ಕ್ಷಣ ನಮ್ಮ ಮಲೆನಾಡಿಗೆ ಬಂದ ಅನುಭವ. ಹಸಿರು ಭತ್ತದ ಗದ್ದೆಗಳು, ಕಾಯಿ ಹೊತ್ತ ತೆಂಗಿನ ಮರಗಳು ಮತ್ತು ಹೆಂಚಿನ ಮನೆಗಳು. ನಮ್ಮ ಪಯಣ ಮಲೇಶಿಯಾದ ಲಂಕಾವಿಗೆ. ಇದು, ಮಲೇಶಿಯಾದ ವಾಯವ್ಯ ಭಾಗದಲ್ಲಿ ಮುಖ್ಯಭೂಮಿಯಿಂದ ಮೂವತ್ತು ಕಿಮೀ ದೂರದಲ್ಲಿ ಅಂಡಮಾನ್ ಸಮುದ್ರದಲ್ಲಿರುವ ದ್ವೀಪ. ಕರಾವಳಿಯಲ್ಲಿರುವ ತೊಂಬತ್ತೊಂಬತ್ತು ದ್ವೀಪ ಸಮೂಹಗಳಲ್ಲಿಇದೂ ಒಂದು. ಈ ದ್ವೀಪಗಳು ಥಾಯ್ಲೆಂಡಿನ ಗಡಿಗೆ ಪಕ್ಕದಲ್ಲಿರುವ ಕೆಡಾಹ್ ರಾಜ್ಯದ ಭಾಗವಾಗಿವೆ.
ಲಂಕಾವಿ ಮಲೇಶಿಯಾದ ಪ್ರಮುಖ ಪ್ರವಾಸಿ ತಾಣವಾಗಿದ್ದು ಶುಭ್ರ ಸಮುದ್ರತೀರ, ಸಾಹಸ ಜಲಕ್ರೀಡೆಗಳು, ದಟ್ಟ ಅಭಯಾರಣ್ಯಗಳು, ಜಲಪಾತಗಳು, ಸುಂದರ ಉದ್ಯಾನಗಳು ಹೀಗೆ ಪ್ರವಾಸಿಗರಿಗೆ ಎಲ್ಲ ರೀತಿಯಲ್ಲೂ ಮನರಂಜನೆ ನೀಡುತ್ತದೆ. ತೆರಿಗೆ ಮುಕ್ತ ದ್ವೀಪ ಇದಾಗಿರುವುದರಿಂದ ಶಾಪಿಂಗ್ ಕೂಡಾ ಮುಖ್ಯ ಆಕರ್ಷಣೆ. ಲಂಕಾವಿ ದ್ವೀಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹದ್ದುಗಳು ಇದ್ದವಂತೆ. ಹದ್ದಿಗೆ ಮಲಯ್ ಭಾಷೆಯಲ್ಲಿ ಹೆಲಾಂಗ್ ಮತ್ತು ಕಾವಿ ಎಂದರೆ ಕೆಂಪು ಬಣ್ಣದ ಕಲ್ಲು. ಕೆಂಪು ಕಂದು ಬಣ್ಣದ ಈ ಹದ್ದುಗಳನ್ನು ಜನರು ಹೆಲಾಂಗ್ ಕಾವಿ ಎಂದು ಗುರುತಿಸಿ ಕಾಲಕ್ರಮೇಣ ಇದೇ ಲಂಕಾವಿಯಾಯಿತು ಎಂದು ಊಹಿಸಲಾಗಿದೆ. ಇದನ್ನೇ ಪ್ರತಿನಿಧಿಸುವ ದೊಡ್ಡ ಕೆಂಪು ಬಣ್ಣದ ಹದ್ದಿನ ಶಿಲ್ಪವನ್ನು ದತಾರನ್ ಹೆಲಾಂಗ್ (ಹದ್ದಿನ ಚೌಕ) ದಲ್ಲಿ ಸ್ಥಾಪಿಸಲಾಗಿದೆ.
ಆಸಕ್ತಿಯಿಂದ ಅದನ್ನು ನೋಡುತ್ತಿದ್ದ ಹಾಗೆಯೇ ‘ನಮ್ಮಲ್ಲಿ ಎಲ್ಲವೂ ಇದ್ದರೂ, ಶಾಂತಿ-ಸಂಪತ್ತು ಎರಡೂ ಇರಲಿಲ್ಲ. ಕಳೆದೆರಡು ದಶಕಗಳಿಂದ ಸ್ಥಿತಿ ಸುಧಾರಿಸಿದೆ. ಶಾಪಗ್ರಸ್ತ ದ್ವೀಪ ಇದಾಗಿರಲು ಕಾರಣ ನಮ್ಮ ಪೂರ್ವಜರೇ!’ ಎಂದ ನಮ್ಮ ಗೈಡ್. ದೊಡ್ಡ ಹದ್ದಿನ ಮೂರ್ತಿಯನ್ನೇ ಆಸಕ್ತಿಯಿಂದ ಗಮನಿಸುತ್ತಿದ್ದ ನಾನು ಹೂಂ ಎಂದೆ ಅಷ್ಟೇ. ಆತನೇ ಮುಂದುವರಿಸಿ ‘ಮಾಸುರಿಯ ಶಾಪ ನಮ್ಮ ಮೇಲಿತ್ತು. ಕೆಲವರು ಅದನ್ನೆಲ್ಲಾ ನಂಬುವುದಿಲ್ಲ. ಆದರೆ ಮುಗ್ಧೆಯೊಬ್ಬಳಿಗೆ ಅನ್ಯಾಯವಾಗಿದ್ದು, ಅದರ ಫಲ ಇಲ್ಲಿಯವರೆಗೆ ಅನುಭವಿಸಿದ್ದು ಸುಳ್ಳಲ್ಲ’ ಎಂದಾಗ ಕಿವಿ ನಿಮಿರಿತ್ತು. ನಮ್ಮ ಗೈಡ್ ಹೇಳಿದ ಕತೆಯನ್ನು ಇಲ್ಲಿ ದಾಖಲಿಸಿದ್ದೇನೆ, ಆದರೆ ಇದಕ್ಕೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಇದರಲ್ಲೇ ಹಲವು ಬದಲಾವಣೆಗಳಿವೆ.
ಮಾಸುರಿ ಎಂಬ ಸುಂದರಿ
ಥಾಯ್ಲೆಂಡಿನ ಫುಕೆಟ್‍ನಲ್ಲಿ ಸುಮಾರು ಹದಿನೆಂಟನೇ ಶತಮಾನದಲ್ಲಿ ಪಾಂದಾಕ್ ಮಾಯಾ ಮತ್ತು ಮಾಕ್ ಅಂದಾಮ್ ಎಂಬ ರೈತ ದಂಪತಿ ವಾಸವಾಗಿದ್ದರು. ಉತ್ತಮ ಭವಿಷ್ಯವನ್ನು ಅರಸಿ ಲಂಕಾವಿಗೆ ಬಂದು ನೆಲೆಸಿದರು. ಜೀವನ ಹೇಗೋ ಸಾಗುತ್ತಿತ್ತು, ಆದರೆ ಅವರಿಗೆ ಮಕ್ಕಳಿರಲಿಲ್ಲ. ದಿನವೂ ಮಗುವಿಗಾಗಿ ಹಂಬಲಿಸುತ್ತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಕಡೆಗೊಮ್ಮೆ ಅವರ ಪ್ರಾರ್ಥನೆ ಫಲಿಸಿ ಮುದ್ದಾದ ಹೆಣ್ಣುಮಗು ಜನಿಸಿತು. ಆಕೆಗೆ ಮಾಸುರಿ ಎಂದು ಹೆಸರಿಟ್ಟು ಪ್ರೀತಿಯಿಂದ ಬೆಳೆಸಿದರು. ಮಾಸುರಿ ಅದ್ವಿತೀಯ ಸುಂದರಿ, ಜಾಣೆ. ಆಕೆ ಪ್ರಾಪ್ತವಯಸ್ಕಳಾದಾಗ ಮದುವೆಯಾಗಲು ಅನೇಕ ಯುವಕರು ಬಯಸಿದರು. ಆಕೆ ತನ್ನ ಊರಿನಲ್ಲಿದ್ದ ಯೋಧ ವಾನ್‍ದಾರಸ್‍ನನ್ನು ಮೆಚ್ಚಿ ವರಿಸಿದಳು. ಇಬ್ಬರ ವೈವಾಹಿಕ ಬದುಕು ಸುಖವಾಗಿ ಆ ಪುಟ್ಟ ಹಳ್ಳಿಯಲ್ಲಿ ನಡೆಯುತ್ತಿತ್ತು. ಸುಖೀ ದಾಂಪತ್ಯದ ಫಲವಾಗಿ ಮಗನೂ ಜನಿಸಿದ.
ಅಷ್ಟರಲ್ಲಿ ತಮ್ಮ ಪ್ರಾಂತ್ಯದ ಮೇಲೆ ಆಗಾಗ್ಗೆ ದಾಳಿ ಮಾಡುತ್ತಿದ್ದ ಸಯಾಮಿ ಆಕ್ರಮಣಕಾರರ ವಿರುದ್ಧ ಹೋರಾಡಲು ಗಂಡ ಹಳ್ಳಿ ಬಿಟ್ಟು ಹೋಗಬೇಕಾಯಿತು. ಮನೆಯಲ್ಲಿ ಮಾಸುರಿ ತನ್ನ ಪುಟ್ಟ ಮಗುವಿನೊಡನೆ ಒಬ್ಬಳೇ ಇರಬೇಕಾಯಿತು. ಸುಂದರಿ ಹೆಣ್ಣೊಬ್ಬಳು ಒಬ್ಬಳೇ ಇದ್ದಾಳೆಂದರೆ ಸಮಾಜ ಸುಮ್ಮನಿದ್ದೀತೇ? ನಿರೀಕ್ಷೆಯಂತೆಯೇ ಅನೇಕರು ಆಕೆಯನ್ನು ಪೀಡಿಸತೊಡಗಿದರು. ಅವರಲ್ಲೊಬ್ಬ ಹಳ್ಳಿಯ ಮುಖ್ಯಸ್ಥ. ಮಾಸುರಿ ಯಾವುದೇ ಆಮಿಷಗಳಿಗೆ ಬಗ್ಗಲಿಲ್ಲ. ಆದರೂ ಮುಖ್ಯಸ್ಥ ಪ್ರಭಾವಿ ವ್ಯಕ್ತಿಯಾದ್ದರಿಂದ ಬಹಿರಂಗವಾಗಿ ಎದುರು ಹಾಕಿಕೊಳ್ಳಲಿಲ್ಲ. ಮುಖ್ಯಸ್ಥನ ಪತ್ನಿಗೆ ಈ ವಿಷಯ ತಿಳಿಯಿತು. ತನ್ನ ಗಂಡನನ್ನು ಮರುಳು ಮಾಡಿದ ಮಾಸುರಿಯ ಮೇಲೆ ದ್ವೇಷ ಹುಟ್ಟಿತು. ಹೇಗಾದರೂ ಆಕೆಯನ್ನು ಇಲ್ಲವಾಗಿಸುವ ಉಪಾಯ ಹುಡುಕುತ್ತಿದ್ದಳು.
ಮುಗ್ಧೆಯ ಹತ್ಯೆ
ಇದೆಲ್ಲದರ ನಡುವೆ ಆ ಹಳ್ಳಿಗೆ ಅಲೆಮಾರಿ ಕವಿಯಾಗಿದ್ದ ದೆರಾಮನ್ ಬಂದ. ತರುಣನಾಗಿದ್ದ ಆತನ ಹಾಡುಗಳನ್ನು, ಸ್ನೇಹ ಸ್ವಭಾವವನ್ನು ಎಲ್ಲರಂತೆ ಮಾಸುರಿ ಮೆಚ್ಚಿದಳು. ಮಾತ್ರವಲ್ಲ ರಾತ್ರಿ ತಂಗಲು ಆಶ್ರಯ ಕೋರಿದಾಗ ವ್ಯವಸ್ಥೆ ಮಾಡಿದಳು. ಪ್ರಯಾಣಿಕರಿಗೆ ಆತಿಥ್ಯ- ಆಶ್ರಯ ಹೊಸದೇನೂ ಅಲ್ಲ. ಆದರೆ ಮಾಸುರಿಯನ್ನು ದ್ವೇಷಿಸುತ್ತಿದ್ದವರಿಗೆ ಇದೊಂದು ಒಳ್ಳೆಯ ಅವಕಾಶವಾಗಿತ್ತು. ಅಲೆಮಾರಿ ಕವಿ ಬೇರೆ ಊರಿಗೆ ಹೋಗಿದ್ದೇ ತಡ ಮಾಸುರಿಯ ಮೇಲೆ ಜಾರಿಣಿ ಎಂಬ ಅಪವಾದ. ನಡತೆಗೆಟ್ಟವರಿಗೆ (ಮಹಿಳೆಯರಿಗೆ!) ಮರಣದಂಡನೆ ಆ ಕಾಲದಲ್ಲಿದ್ದ ಶಿಕ್ಷೆ. ಮಾಸುರಿಯನ್ನು ಎಳೆದು ತಂದು ಮರಕ್ಕೆ ಕಟ್ಟಲಾಯಿತು. ಅಳುತ್ತಲೇ ತಾನು ನಿರ್ದೋಷಿ ಎಂದು ಸಾಬೀತು ಪಡಿಸಲು ಮಾಸುರಿ ಹೆಣಗಾಡಿದಳು, ಬೇಡಿದಳು. ನ್ಯಾಯ ಒದಗಿಸಿರಿ ಎಂದು ಬೇಡಿದಳು. ಆಕೆಯ ಮಗು ತಾಯಿಯ ಬಟ್ಟೆ ಹಿಡಿದು ಕಂಗಾಲಾಗಿತ್ತು.
ಹಳ್ಳಿಯ ಮುಖ್ಯಸ್ಥನಿಗೆ ನ್ಯಾಯ ನಿರ್ಧರಿಸುವ ಅಧಿಕಾರವಿತ್ತು. ಆತನಿಗೆ ಮಾಸುರಿ ಕಂಡರೆ ಸಿಟ್ಟು. ಮುಖ್ಯಸ್ಥನ ಹೆಂಡತಿಗೆ ತನ್ನ ಗಂಡನ ಮೇಲಲ್ಲ ಮಾಸುರಿಯ ಸೌಂದರ್ಯದ ಕುರಿತು ಅಸೂಯೆ. ಹಳ್ಳಿಯ ಜನರಿಗೆ ತಮಗೆ ಸಿಗಲಿಲ್ಲವಲ್ಲಾ ಎಂಬ ಬೇಸರ. ವೃದ್ಧರಾಗಿದ್ದ ತಂದೆ-ತಾಯಿ ಅಳುವುದನ್ನು ಬಿಟ್ಟರೆ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಒಟ್ಟಿನಲ್ಲಿ ಯಾರೂ ಆಕೆಯ ನೆರವಿಗೆ ಬರಲಿಲ್ಲ. ಅವಳನ್ನು ಮರಕ್ಕೆ ಕಟ್ಟಿ ಅಂದಿನ ಪದ್ಧತಿಯಂತೆ ದೂರದಿಂದ ಈಟಿಗಳನ್ನು ಗುರಿ ಇಟ್ಟು ಎಸೆಯಲಾಯಿತು. ವಿಚಿತ್ರವೆಂದರೆ ಈಟಿಗಳು ಗುರಿ ತಾಕಿದರೂ ಆಕೆಗೆ ಚುಚ್ಚದೇ ಕೆಳಗೆ ಬಿದ್ದವು. ನೆರೆದವರಿಗೆ ನಿಜಕ್ಕೂ ಇದು ಆಶ್ಚರ್ಯ ಎನಿಸಿದರೂ ಮಾಸುರಿ ನಿರ್ದೋಷಿ ಎಂದು ಒಪ್ಪಲು ಸಿದ್ಧರಿರಲಿಲ್ಲ. ಏನೇ ಆದರೂ ಆಕೆಯನ್ನು ಕೊಲ್ಲುವುದೇ ಎಂಬ ದೃಢನಿಶ್ಚಯ ಮಾಡಿದ್ದರು.
ಮೊದಮೊದಲು ಎಲ್ಲವನ್ನೂ ಪ್ರತಿಭಟಿಸಿ, ದೈನ್ಯದಿಂದ ಬೇಡಿ ಅತ್ತ ಮಾಸುರಿ ಕಡೆಗೆ ಈ ರೀತಿ ಒದ್ದಾಡುವುದಕ್ಕಿಂತ ಸಾಯುವುದೇ ಮೇಲು ಎಂದು ತಾನೇ ನಿರ್ಧರಿಸಿದಳು. ಹಾಗಾಗಿಯೇ ತನ್ನನ್ನು ಕೊಲ್ಲುವ ವಿಧಾನವಾದ ಮನೆಯಲ್ಲಿರುವ ಕೆರಿ (ವಿಧ್ಯುಕ್ತ ಕತ್ತಿ) ಯ ಅಲಗಿನಿಂದ ತಿವಿದರೆ ಸಾವು ಎಂಬುದನ್ನೂ ತಿಳಿಸಿದಳು. ಕೂಡಲೇ ಕೆರಿ ತರಲು ಜನ ಓಡಿದರು. ದಂತಕತೆಗಳ ಪ್ರಕಾರ ಕೂಡಲೇ ಆಕಾಶದಲಿ ್ಲಕಪ್ಪು ಮೋಡ ಕವಿದವು ಮತ್ತು ಆ ಕೆರಿಯ ಅಲಗು ಮಾಸುರಿಯನ್ನು ತಾಕಿದೊಡನೆ ಗುಡುಗು-ಸಿಡಿಲುಗಳ ಆರ್ಭಟ. ಅದರೊಂದಿಗೇ ಮಾಸುರಿಯನ್ನು ತಿವಿದಾಗ ಬಂದದ್ದು ಬಿಳಿ ಬಣ್ಣದ ರಕ್ತ. ಪರಿಶುದ್ಧತೆ ಮುಗ್ಧತೆಯನ್ನು ಬಿಳಿ ರಕ್ತ ಪ್ರತಿನಿಧಿಸುತ್ತದೆ. ಸೇರಿದ್ದ ಜನರಿಗೆ ತಮ್ಮ ತಪ್ಪು ಅರಿವಾಗಿತ್ತು, ಆದರೇನು ಕಾಲ ಮಿಂಚಿತ್ತು. ನೆಲಕ್ಕೆ ಬಿದ್ದ ಮಾಸುರಿ ಕೊನೆಯುಸಿರು ಬಿಡುವ ಮುನ್ನ ಶಾಪ ನೀಡಿದಳು ‘ಯಾವುದೇ ತಪ್ಪು ಮಾಡಿಲ್ಲದ ನನ್ನನ್ನು ಕೊಂದ ಈ ಲಂಕಾವಿ ದ್ವೀಪ ಮತ್ತು ಇಲ್ಲಿನ ಜನ ಇನ್ನು ಏಳು ತಲೆಮಾರುಗಳ ತನಕ ಯಾವುದೇ ಪ್ರಗತಿ, ಕಾಣದಿರಲಿ. ಸಂಪತ್ತು- ಶಾಂತಿ ಸಿಗದಿರಲಿ’. ಅಲ್ಲಿಗೆ ಮಾಸುರಿಯ ಜೀವನ ಮುಗಿಯಿತು. ಆದರೆ ಕಾಕತಾಳೀಯವೋ ಎಂಬಂತೆ ಸಯಾಮಿ ಸೈನ್ಯ ಲಂಕಾವಿಯ ಮೇಲೆ ಸತತ ಆಕ್ರಮಣ ನಡೆಸಿತು. ಇದೇ ದಾಳಿಯಲ್ಲಿ ಹಳ್ಳಿಯ ಮುಖ್ಯಸ್ಥ ಆತನ ಪತ್ನಿ ಸಾವನ್ನಪ್ಪಿದರು. ಮಾಸುರಿಯ ತಂದೆತಾಯಿ, ಪತಿ- ಮಗು ಲಂಕಾವಿಯನ್ನು ಬಿಟ್ಟು ನೆರೆಯ ಥಾಯ್ಲೆಂಡಿನ ಫುಕೆಟ್‍ನಲ್ಲಿ ನೆಲೆಸಿದರು.
ಬೆರಾಸ್ ತರ್ಬಾಕರ್ (ಸುಟ್ಟ ಅಕ್ಕಿಯ ಗದ್ದೆ)
ಸಯಾಮಿ ಸೈನ್ಯ ಅನೇಕ ಬಾರಿ ಲಂಕಾವಿ ಮೇಲೆ ಆಕ್ರಮಣ ನಡೆಸಿದ್ದರೂ 1821ರಲ್ಲಿ ಪ್ರಬಲವಾಗಿತ್ತು. ಡಟೋ ಕಂಬೋಜ ಸಯಾಮಿಗಳ ಕೈ ಮೇಲಾಗುವುದನ್ನು ಮನಗಂಡ ಲಂಕಾವಿಯ ಸೇನಾ ಮುಖ್ಯಸ್ಥ ಅದನ್ನು ತಪ್ಪಿಸಲು ಉಪಾಯ ಮಾಡಿದ. ಪಾಡಂಗ್ ಮಾಸಿರಾಟ್ ಈ ದ್ವೀಪದಲ್ಲಿ ಭತ್ತದ ಗದ್ದೆಗಳಿದ್ದ ಮುಖ್ಯ ಪ್ರದೇಶ. ದ್ವೀಪದ ಜನರಿಗೆ ಜೀವನಾಧಾರ ಈ ಭತ್ತವೇ. ಶತ್ರುಗಳು ಇಲ್ಲಿ ಆಕ್ರಮಿಸಿದರೆ ಆಹಾರವಾದ ಭತ್ತವಿಲ್ಲದೇ ಉಳಿಯಲು ಸಾಧ್ಯವಿಲ್ಲ. ಹಾಗಾಗಿ ದ್ವೀಪದ ಜನರಿಗೆ ತಮ್ಮೆಲ್ಲ ಬೆಳೆಯನ್ನು ಒಟ್ಟುಗೂಡಿಸಿ ಕಂಪುಂಗ್‍ರಾಜಾ ಎಂಬ ಜಾಗದಲ್ಲಿದ್ದ ವಿಶಾಲ ಗದ್ದೆಯಲ್ಲಿ ಸೇರುವಂತೆ ಆದೇಶ ಹೊರಡಿಸಿದ. ಅಂತೆಯೇ ಜನರೆಲ್ಲಾ ತಮ್ಮ ಫಸಲಿನೊಂದಿಗೆ ಒಟ್ಟುಗೂಡಿದರು. ಅಲ್ಲಿ ಗದ್ದೆಯ ಮಧ್ಯದಲ್ಲಿ ದೊಡ್ಡ ಹೊಂಡ ತೋಡಲಾಯಿತು. ಅಲ್ಲಿ ಭತ್ತದ ಫಸಲನ್ನೆಲ್ಲಾ ರಾಶಿ ಮಾಡಿ ಬೆಂಕಿ ಹಾಕಿದರು. ಮಾತ್ರವಲ್ಲ ಕುಡಿಯುವ ನೀರು ಸಿಗದಂತೆ ಬಾವಿಗಳಿಗೆ ವಿಷ ಸುರಿದರು.
ಮಾಕಮ್ ಮಾಸುರಿ
ಇವೆಲ್ಲವನ್ನು ಮಾಡಿದ್ದೇನೋ ಸರಿ, ಆದರೆ ಮಾಸುರಿಯ ಶಾಪದ ಪ್ರಭಾವದಿಂದ ಸಯಾಮಿ ಸೈನ್ಯಜಯ ಗಳಿಸಿತು, ಮಾತ್ರವಲ್ಲ, ಇಲ್ಲಿಯೇ ನೆಲೆಸಿ ಜನರಿಗೆ ಶಾಂತಿ, ಸಂಪತ್ತು ಎರಡೂ ಇಲ್ಲವಾಯಿತು! ಈಗ ಬೆರಾಸ್ ತರ್ಬಾಕರ್ ಪ್ರವಾಸೀ ಸ್ಥಳ. ಎಂದೋ ತೋಡಿದ್ದ ಬೃಹತ್ ಹೊಂಡ ಮುಚ್ಚಿಹೋಗಿದೆ, ಆದರೆ ಅದನ್ನು ಸೂಚಿಸುವ ಫಲಕವಿದೆ. ಈಗಲೂ ಭಾರಿ ಮಳೆಯಾದಾಗ ನೆಲದ ಆಳಕ್ಕೆ ಸೇರಿದ ಸುಟ್ಟ ಅಕ್ಕಿ ಕಾಳುಗಳು ಮೇಲಕ್ಕೆ ಬಂದು ಅನೇಕರಿಗೆ ಸಿಕ್ಕಿವೆ ಎಂದು ಅನೇಕರು ಹೇಳುತ್ತಾರೆ. ಚಿಕ್ಕಗಾಜಿನ ಪೆಟ್ಟಿಗೆಯಲ್ಲಿ ಹಾಗೆ ದೊರಕಿದ ಕೆಲವು ಸುಟ್ಟ ಅಕ್ಕಿಕಾಳುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಲಂಕಾವಿ ವಿಮಾನನಿಲ್ದಾಣದಿಂದ ಪೂರ್ವಕ್ಕೆ ಹದಿನೇಳು ಕಿಮೀ, ಸುಮಾರು ಇಪ್ಪತ್ತು ನಿಮಿಷದ ಹಾದಿ ಕ್ರಮಿಸಿದರೆ ಮಾಸುರಿಯ ಸಮಾಧಿ ಸ್ಥಳವಿದೆ (ಮಾಕಮ್ ಮಾಸುರಿ). ಮಾಸುರಿಯ ಕಲಶದ ಸುತ್ತಲೂ ಬಿಳಿ ಅಮೃತಶಿಲೆಯ ಕಲ್ಲಿನ ಹಾಸಿದೆ. ಮುಂದಿರುವ ಕರಿಕಲ್ಲಿನ ಫಲಕದಲ್ಲಿ ಆಕೆಗಾದ ಅನ್ಯಾಯ ಮತ್ತು ಶಾಪವನ್ನು ಬರೆಯಲಾಗಿದೆ. ಅದೇ ಪ್ರಾಂಗಣದಲ್ಲಿ ಗ್ರಾಮೀಣ ಮಲಯ್ ಶೈಲಿಯ ಮನೆಗಳನ್ನು ಕಾಣಬಹುದು. ಇದಲ್ಲದೇ ಮಾಸುರಿಯ ಕೆಲವು ಆಭರಣಗಳು ಮತ್ತು ಆಕೆಯನ್ನು ಕೊಲ್ಲಲು ಬಳಸಿದ ಕೆರಿಯನ್ನು ಪ್ರದರ್ಶಿಸಲಾಗಿದೆ. ಮಾಸುರಿಯ ಕತೆ ಓದುತ್ತಾ ತಲಕಾಡಿನ ಅಲಮೇಲಮ್ಮ, ತಮಿಳುನಾಡಿನ ಕನ್ನಗಿ ಮನದಲ್ಲಿ ಸುಳಿದರು. ನಿಜಕ್ಕೂ ಇವರೆಲ್ಲಾ ಪರಿಸ್ಥಿತಿಯ ಸಂಚಿಗೆ ಬಲಿಯಾಗಿ ಪ್ರಾಣತೆತ್ತವರು; ಹಾಗೆಂದು ಅವರು ಶಾಪ ನೀಡಿರಬಹುದೇ? ಒಂದೊಮ್ಮೆ ಶಪಿಸಿದ್ದರೂ ಅದು ನಿಜವಾಗಲು ಸಾಧ್ಯವೇ? ಕೂಡಲೇ ಅಜ್ಜ ಹೇಳುತ್ತಿದ್ದ ‘ಉಂಡವರು ಹರಸೋದು ಬೇಡ, ನೊಂದವರು ಶಪಿಸೋದು ಬೇಡ’ ಗಾದೆ ನೆನಪಾಯಿತು. ಅಂದರೆ ಹಾರೈಕೆ ಶಾಪ ಎರಡೂ ಬಾಯಿ ಬಿಟ್ಟು ನುಡಿಯಬೇಕೆಂದಿಲ್ಲ. ಅದಕ್ಕೆ ಶಕ್ತಿ ಇದೆ!
ಅಷ್ಟರಲ್ಲಿ ನಮ್ಮ ಗೈಡ್ ‘ಎರಡು ಸಾವಿರದ ಇಸವಿಯಲ್ಲಿ ಮಾಸುರಿಯ ವಂಶಸ್ಥರನ್ನು ಮಲೇಶಿಯಾ ಸರ್ಕಾರ ಪತ್ತೆಹಚ್ಚಿತು. ಆಕೆಯನ್ನೇ ಹೋಲುವ ಎಂಟನೇ ತಲೆಮಾರಿನ ವಾನ್‍ಆಯೇಶಾ ನವಾವಿ ಫುಕೆಟ್‍ನಿಂದ ಲಂಕಾವಿಗೆ ಭೇಟಿ ನೀಡಿದಳು. ಆಕೆ ಇಲ್ಲಿಗೆ ಬಂದ ದಿನ ಭಾರೀ ಮಳೆ ಗುಡುಗು. ಅಂದು ಲಂಕಾವಿ, ಮಾಸುರಿಯ ಶಾಪದಿಂದ ಮುಕ್ತವಾಯಿತು ಎಂಬುದು ನಮ್ಮೆಲ್ಲರ ನಂಬಿಕೆ. ಅದಕ್ಕೆ ಸರಿಯಾಗಿ ಪ್ರಮುಖ ಪ್ರವಾಸೀ ತಾಣವಾಗಿ ಲಂಕಾವಿ ಬೆಳೆಯುತ್ತಿದೆ. 2007 ರಲ್ಲಿ ಯುನೆಸ್ಕೋದಿಂದ ವಿಶ್ವಜಿಯೋ ಪಾರ್ಕ್ ಮಾನ್ಯತೆ ದೊರೆತಿದೆ ಎಂದ. ಮಾಸುರಿ ಮಾತ್ರವಲ್ಲ ಎಲ್ಲಾ ನಿರಪರಾಧಿಗಳ ಕೂಗಿಗೆ ಮಾನ್ಯತೆ ಇನ್ನಾದರೂ ಸಿಕ್ಕರೆ ಜಗತ್ತಿನಲ್ಲಿ ಶಾಂತಿ ನೆಲೆಸಬಹುದೇನೋ ಎನಿಸಿತು ನನಗೆ.
ಡಾ.ಕೆ.ಎಸ್. ಚೈತ್ರಾ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.