ಲೋಕದ ಕಣ್ಣು/ ವಿಯೆಟ್ನಾಂ: ಸೈನ್ಯ ಕಟ್ಟಿದ ಸೋದರಿಯರು -ಡಾ.ಕೆ.ಎಸ್.ಚೈತ್ರಾ

ಶತಶತಮಾನಗಳಿಂದಲೂ ಚೀನೀಯರ ಆಳ್ವಿಕೆಗೆ ಒಳಪಟ್ಟ ದೇಶ ವಿಯೆಟ್ನಾಂ. ಪರರ ಆಡಳಿತದಲ್ಲಿ ಸ್ಥಳೀಯರಿಗೆ ಹೆಚ್ಚು ಕಂದಾಯ, ಕ್ರೂರ ಶಿಕ್ಷೆ ಸಾಮಾನ್ಯವಾಗಿತ್ತು. ಇದರೊಂದಿಗೇ ಚೀನಿ ಜೀವನ ವಿಧಾನ, ಸಂಸ್ಕøತಿಯನ್ನು ಹರಡುವ ಪ್ರಯತ್ನ ಜಾರಿಯಲ್ಲಿತ್ತು. ತಮ್ಮ ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಯಶಸ್ಸನ್ನು ಕಂಡ ವೀರ ನಾರಿಯರು ಟ್ರಂಗ್ ಸೋದರಿಯರು. ವಿಯೆಟ್ನಾಂ ದೇಶದ ಇತಿಹಾಸ ಮತ್ತು ವಿಶ್ವಚರಿತ್ರೆಯಲ್ಲಿ ಇವರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿದೆ.

‘ ನಮ್ಮ ನಾಡು ಸಾಮಾನ್ಯವಾದುದಲ್ಲ; ನಾವು ನೀರು ಮತ್ತು ಪರ್ವತ ಎರಡರ ಪ್ರೀತಿ-ಶಕ್ತಿಯಿಂದ ಜನಿಸಿದ ಮಕ್ಕಳು. ಬಹಳ ಹಿಂದೆ ಸಮುದ್ರದ ಡ್ರಾಗನ್ ದೊರೆ, ಲಾಕ್ ಲಾಂಗ್‍ಕ್ವಾನ್ ಭೂಮಿಯಲ್ಲಿ ಬಹಳ ಜನಪ್ರಿಯನಾಗಿದ್ದ. ಸಮುದ್ರದ ತನ್ನ ನಾಡಿಂದ ಆಗಾಗ್ಗೆ ಭೂಮಿಗೆ ಬಂದು ದುಷ್ಟರನ್ನೆಲ್ಲಾ ಸಂಹರಿಸಿ ಶಾಂತಿ ನೆಲೆಸಲು ಕಾರಣನಾಗಿದ್ದ ಶೂರ-ಧೀರನಾತ. ಒಂದು ದಿನ ಹೀಗೆ ಭೂ ಸಂಚಾರದಲ್ಲಿದ್ದಾಗ ಮುದ್ದಾದ ಕೊಕ್ಕರೆಯೊಂದನ್ನು ದೊಡ್ಡ ದುಷ್ಟ ಪಕ್ಷಿ ಹಿಂಸಿಸುತ್ತಿದ್ದುದು ಕಂಡಿತು. ಕೂಡಲೇ ಪಕ್ಷಿಯ ಜತೆ ಹೋರಾಡಿ, ಅದನ್ನು ಕೊಂದು ಕೊಕ್ಕರೆಯನ್ನು ರಕ್ಷಿಸಿದ. ಏನಾಶ್ಚರ್ಯ! ಅದು ಕೊಕ್ಕರೆಯಲ್ಲ, ಪರ್ವತನಾಡಿನ ಕಿನ್ನರರ ಪುತ್ರಿ, ಔ ಕೋ. ಈ ಕಿನ್ನರಿ, ವಿಶೇಷ ವೈದ್ಯಕೀಯ ಜ್ಞಾನ ಹೊಂದಿದ್ದು ಭೂಮಿಯಲ್ಲಿನ ಜನರ ರೋಗ-ರುಜಿನಗಳಿಗೆ ಮದ್ದು ನೀಡುತ್ತಿದ್ದಳು. ಹಾಗೊಮ್ಮೆ ಬಂದಾಗ ದೈತ್ಯ ಪಕ್ಷಿ ಆಕ್ರಮಣಕ್ಕೆ ಬಂತು. ತಪ್ಪಿಸಿಕೊಳ್ಳಲು ಕೊಕ್ಕರೆ ರೂಪ ತಾಳಿದ್ದಳು. ಅಷ್ಟರಲ್ಲಿ ಡ್ರಾಗನ್ ದೊರೆ ಅದನ್ನು ಸಂಹರಿಸಿ ಆಕೆಯನ್ನು ರಕ್ಷಿಸಿದ್ದ. ಇಬ್ಬರಲ್ಲೂ ಅನುರಾಗ ಬೆಳೆಯಿತು. ಸಮುದ್ರ ಮತ್ತು ಪರ್ವತಗಳ ನಡುವಿನ ಜಾಗದಲ್ಲಿಇಬ್ಬರೂ ಸಂಸಾರ ಹೂಡಿದರು. ಔ ಕೋ, ಕೆಲಸಮಯದ ನಂತರ ನೂರು ಮೊಟ್ಟೆಗಳುಳ್ಳ ಚೀಲವೊಂದನ್ನು ಪ್ರಸವಿಸಿದಳು. ಕೆಲ ಸಮಯದ ನಂತರ ಅದರಿಂದ ನೂರು ಬಲಶಾಲಿ ಮಕ್ಕಳು ಹೊರಬಂದರು. ಸಂಸಾರ ಬೆಳೆಯಿತು.

ಆದರೆ ತಂದೆ-ತಾಯಿಯರಿಗೆ ತಮ್ಮ ತಾಯ್ನಾಡಿನ ಸೆಳೆತ ಬಲವಾಗಿತ್ತು. ಪರಸ್ಪರ ಪ್ರೀತಿಯಿದ್ದರೂ ಇಬ್ಬರೂ ತಂತಮ್ಮ ನಾಡಿಗೆ ಮರಳುವ ನಿರ್ಧಾರಕ್ಕೆ ಬಂದರು. ಇದ್ದ ಆಸ್ತಿ ಮಕ್ಕಳು ಮಾತ್ರ, ಹೀಗಾಗಿ ಐವತ್ತು ಮಕ್ಕಳು ತಂದೆಗೆ ಮತ್ತು ಐವತ್ತು ಮಕ್ಕಳು ತಾಯಿಗೆ! ತಾಯಿಯ ಜತೆ ಹೋದ ಮಕ್ಕಳು ಪರ್ವತಗಳ ಮೇಲೆ ಮನೆ ಕಟ್ಟಿ ಕೃಷಿ ಮಾಡಿಜೀವನ ನಡೆಸಿದರು. ತಂದೆ ಜತೆ ಹೋದ ಮಕ್ಕಳು ಮೀನುಗಾರರಾಗಿ ಸಮುದ್ರದ ತೀರಗಳಲ್ಲಿ ನೆಲೆಸಿದರು. ಆದರೆ ನಮ್ಮ ಮೂಲ ತಂದೆ- ತಾಯಿಯ ಒಪ್ಪಂದದಂತೆ ಯಾರಿಗೆ ಕಷ್ಟವಾದರೂ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಸಹಾಯ ಸದಾ ಸಿದ್ಧವಿರುತ್ತದೆ. ಹಾಗೇ ನಮಗೆ ಅಪ್ಪ -ಅಮ್ಮರ ಸ್ವಭಾವ, ಸ್ಥಳ ಬೇರೆ ಇರಬಹುದು; ಆದರೂ ಇಬ್ಬರೂ ಮುಖ್ಯರೇ. ಅದಕ್ಕೇ ಸಮಾಜಶಾಸ್ತ್ರಜ್ಞರು ನಮ್ಮದು ಮೂಲದಲ್ಲಿ ಮಾತೃಸಂತತಿ ಎನ್ನುತ್ತಾರೆ. ಈಗ ಪರಿಸ್ಥಿತಿ ಬದಲಾಗಿದೆ. ಅದಕ್ಕೆ ಚೀನಿಯರ ಆಕ್ರಮಣ ಮತ್ತು ಆಳ್ವಿಕೆ ಕಾರಣ. ಅದೆಲ್ಲವನ್ನೂ ಎದುರಿಸಿಯೂ ನಮ್ಮ ಮಹಿಳೆಯರು ಸಂಸಾರ ನಡೆಸುವುದರ ಜತೆ ಯುದ್ಧ, ಆಡಳಿತದಲ್ಲೂ ತಮ್ಮದೇ ಆದ ಸ್ಥಾನ ಹೊಂದಿದ್ದಾರೆ’ ಎಂದು ವಿಯೆಟ್ನಾಂನ ಗೈಡ್ ತಮ್ಮ ನಾಡಿನ ಬಗ್ಗೆ ಇರುವ ಜನಪದ ಕತೆಯನ್ನು ವಿವರಿಸುತ್ತಲೇ ಸಾಮಾಜಿಕ ವ್ಯವಸ್ಥೆಯ ಬಗ್ಗೆಯೂ ತಿಳಿಸತೊಡಗಿದ.

ಟ್ರಂಗ್ ಸಹೋದರಿಯರು
ಬೇರೆಲ್ಲಾ ಎಷ್ಯಾದ ದೇಶಗಳಿಗೆ ಹೋಲಿಸಿದರೆ ಇಲ್ಲಿ ಮಹಿಳೆಯರ ಸ್ಥಿತಿ ಉತ್ತಮ ಎನ್ನಬಹುದು.ಅವರ ಕಾರ್ಯಕ್ಷೇತ್ರ ವಿಸ್ತಾರವಾಗಿದೆ. ಸಾಮಾನ್ಯವಾಗಿ ದೈಹಿಕ ಶಕ್ತಿಯನ್ನೇ ಮುಖ್ಯವಾಗಿರಿಸಿಕೊಂಡ ಯುದ್ಧದಲ್ಲೂ ಮಹಿಳೆಯರ ಪಾತ್ರ ಮಹತ್ವದ್ದು. ಟ್ರಂಗ್ ಸೋದರಿಯರು ಇದಕ್ಕೊಂದು ಅತ್ಯುತ್ತಮ ಉದಾಹರಣೆ. ವಿಯೆಟ್ನಾಂನ ಪ್ರತೀ ಪ್ರಮುಖ ನಗರದಲ್ಲೂ ಟ್ರಂಗ್‍ ರಸ್ತೆ ಇದ್ದೇ ಇದೆ. ಮಾತ್ರವಲ್ಲ ನೂರಾರು ದೊಡ್ಡ–ಸಣ್ಣ, ಹೈಬಾ ಟ್ರಂಗ್ (ಟ್ರಂಗ್ ಸೋದರಿಯರು) ದೇವಸ್ಥಾನಗಳಿವೆ. ಪ್ರತೀವರ್ಷ ಫೆಬ್ರವರಿಯಲ್ಲಿ, ದೇಶಕ್ಕಾಗಿ ಪ್ರಾಣತೆತ್ತ ಇವರ ನೆನಪಿನಲ್ಲಿ ‘ಟ್ರಂಗ್ ದಿನ’ ಅದ್ಧೂರಿಯಿಂದ ಆಚರಿಸಲ್ಪಡುತ್ತದೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ತಮ್ಮ ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಯಶಸ್ಸನ್ನು ಕಂಡ ವೀರ ನಾರಿಯರು ಈ ಟ್ರಂಗ್ ಸೋದರಿಯರು. ‘ಯೋಧರೆಲ್ಲಾ ಸೋತು ಶರಣಾಗಿ ತಲೆ ಬಗ್ಗಿಸಿದ್ದರು; ಟ್ರಂಗ್ ಸಹೋದರಿಯರು ಮಾತ್ರ ಹೆಮ್ಮೆಯಿಂದ ದೇಶಕ್ಕಾಗಿ ಎದ್ದು ನಿಂತರು’ ಇದು ವಿಯೆಟ್ನಾಂನ ಹಳ್ಳಿ ಹಳ್ಳಿಗಳಲ್ಲಿ ಕೇಳಿಬರುವ ಹಾಡು. ವಿಯೆಟ್ನಾಂ ದೇಶದ ಇತಿಹಾಸ ಮತ್ತು ವಿಶ್ವಚರಿತ್ರೆಯಲ್ಲಿ ಇವರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿದೆ.

ಮೊದಲನೇ ಶತಮಾನದ ಆರಂಭದಲ್ಲಿ ಉತ್ತರ ವಿಯೆಟ್ನಾಂನ ಶಕ್ತಿಶಾಲಿ ಒಡೆಯನ ಮಕ್ಕಳಾಗಿ ಜನಿಸಿದ ಈ ಸೋದರಿಯರಲ್ಲಿ ಹಿರಿಯವಳು ಟ್ರಂಗ್ ಟ್ರಾಕ್ ಮತ್ತು ಕಿರಿಯವಳು ಟ್ರಂಗ್ ನೀ. ಶತಶತಮಾನಗಳಿಂದಲೂ ಚೀನೀಯರ ಆಳ್ವಿಕೆಗೆ ಒಳಪಟ್ಟ ದೇಶ ಅದಾಗಿತ್ತು. ಪರರ ಆಡಳಿತದಲ್ಲಿ ಸ್ಥಳೀಯರಿಗೆ ಹೆಚ್ಚು ಕಂದಾಯ, ಕ್ರೂರ ಶಿಕ್ಷೆ ಸಾಮಾನ್ಯವಾಗಿತ್ತು. ಇದರೊಂದಿಗೇ ಚೀನಿ ಜೀವನ ವಿಧಾನ, ಸಂಸ್ಕøತಿಯನ್ನು ಹರಡುವ ಪ್ರಯತ್ನ ಜಾರಿಯಲ್ಲಿತ್ತು. ಚೀನೀಯರಲ್ಲಿ ಮಹಿಳೆಯರಿಗೆ ಎರಡನೇ ದರ್ಜೆ ಸ್ಥಾನಮಾನ. ಪುರುಷನ ಅಧೀನಳಾಗಿ ಆತ ಹೇಳಿದ್ದನ್ನು ಪರಿಪಾಲಿಸುವು ಆಕೆಯ ಕರ್ತವ್ಯ. ಆ ಕಾಲದಲ್ಲಿ ಜಗತ್ತಿನ ಬಹುತೇಕ ದೇಶಗಳಲ್ಲಿ ಪರಿಸ್ಥಿತಿ ಹೀಗಿದ್ದರೂ ವಿಯೆಟ್ನಾಂ ಭಿನ್ನವಾಗಿತ್ತು. ಇಲ್ಲಿ ಮಹಿಳೆಯರು ಅಡಿಗೆಮನೆಯಲ್ಲದೆ ಹೊರಗಿನ ಕೆಲಸ ಮಾಡುತ್ತಿದ್ದರು. ಜನ ವಕೀಲರು, ದಾದಿಯರು, ವ್ಯಾಪಾರಿಗಳು, ಸೈನಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಹಿಳೆಯರಿಗೆ ಆಸ್ತಿಯ ಹಕ್ಕೂ ಇತ್ತು.

ಹೀಗೆ ಮಹಿಳೆಯರಿಗೂ ಸಮಾನ ಅವಕಾಶಗಳಿದ್ದ ವಾತಾವರಣದಲ್ಲಿ ಶ್ರೀಮಂತ ಕುಟುಂಬದಲ್ಲಿ ಬೆಳೆದ ಸೋದರಿಯರಿಗೆ ಸಮರಕಲೆಗಳಲ್ಲಿ ಶಿಕ್ಷಣ ತಂದೆಯಿಂದಲೇ ಸಿಕ್ಕಿತ್ತು. ಎಲ್ಲವನ್ನೂ ಕಲಿಯುತ್ತಾ ಸುತ್ತಲಿನ ಸಮಾಜವನ್ನು ನೋಡುತ್ತಾ ಬೆಳೆದ ಅವರಿಗೆ ಚೀನೀಯರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಮೊದಲಿನಿಂದಲೂ ಅಸಮಾಧಾನ. ಆಗ ಜಾರಿಯಲ್ಲಿದ್ದದ್ದು ಹಾನ್ ವಂಶದ ಆಳ್ವಿಕೆ. ಅದರಲ್ಲಿದ್ದ ಕ್ರೂರಿ ಆಡಳಿತಗಾರ ತೋದಿನ್, ತಮ್ಮ ಜನರನ್ನು ಸುಲಿಗೆ ಮಾಡುತ್ತಿರುವ ಬಗ್ಗೆ ಸೋದರಿಯರಿಗೆ ಆಕ್ರೋಶವಿತ್ತು. ಬಾಲ್ಯದಿಂದಲೇ ಶಕ್ತಿಶಾಲಿಗಳಾಗಿ ತಮ್ಮ ಅಭಿಪ್ರಾಯಗಳನ್ನು ಗಟ್ಟಿಯಾಗಿ ವ್ಯಕ್ತಪಡಿಸುತ್ತಿದ್ದ ಸೋದರಿಯರನ್ನು ಕಂಡರೆ ಎಲ್ಲರಿಗೂ ಗೌರವ ಮತ್ತು ಹೆದರಿಕೆ.

ಬದಲಾದ ಬದುಕು
ಪ್ರಾಯಕ್ಕೆ ಬಂದಾಗ ಅಕ್ಕ, ತಿ ಸಾಕ್ ಎಂಬ ರಾಜ ಮನೆತನದ ಯುವಕನನ್ನು ಮದುವೆಯಾದಳು. ಆತನೂ ಯೋಧ, ಮಿಗಿಲಾಗಿ ಚೀನೀಯರ ವಿರುದ್ಧ ಹೋರಾಡುತ್ತಿದ್ದ. ಹಾಲು-ಜೇನು ಸೇರಿದಂಥ ಸಂಸಾರ. ಹೇಗಾದರೂ ಮಾಡಿ ಜನರನ್ನು ಚೀನೀಯರ ಕಪಿಮುಷ್ಟಿಯಿಂದ ಬಿಡಿಸಲು ಯೋಜನೆ ಮಾಡುತ್ತಿರುವಾಗಲೇ ಇದರ ಸುಳಿವು ದೊರೆತು ಆತ ಕೊಲ್ಲಲ್ಪಟ್ಟ. ಗಂಡನೆಂದರೆ ಅಪಾರ ಪ್ರೀತಿಯಿದ್ದ, ಹೊಸದಾಗಿ ಮದುವೆಯಾಗಿದ್ದ ಟ್ರಾಕ್‍ಗೆ ಆದ ಆಘಾತ ದೊಡ್ಡದು. ಆದರೆ ಅದಕ್ಕಾಗಿ ಚೀನೀಯರು ಅಂದುಕೊಂಡಂತೆ ಬರೀ ಶೋಕಿಸುತ್ತಾ ಆಕೆ ಜೀವನದಿಂದ ವಿಮುಖಳಾಗಲಿಲ್ಲ. ಬದಲಾಗಿ ತನ್ನ ದೇಶಕ್ಕಾಗಿ ಹೋರಾಡುವ ಮತ್ತು ಗಂಡನ ಸಾವಿನ ಸೇಡನ್ನು ಯುದ್ಧದ ಮೂಲಕ ತೀರಿಸುವ ಶಪಥ ತೊಟ್ಟಳು. ತಂಗಿಯ ಸಂಪೂರ್ಣ ಬೆಂಬಲ ಅಕ್ಕನಿಗಿತ್ತು.

ಯುದ್ಧ ಮಾಡಲು ಸೈನ್ಯ ಬೇಕು. ಅದಕ್ಕಾಗಿ ಜನರನ್ನು ಸೇರಿಸುವುದು ಹೇಗೆ? ಏನೆಂದರೂ ಹೆಣ್ಣುಮಕ್ಕಳು ಹೋರಾಡುವವರು ಎಂದರೆ ಜನರಿಗೆ ಅಪನಂಬಿಕೆ ಸಹಜವೇ! ತಮ್ಮ ಸಾಮಥ್ರ್ಯ ನಿರೂಪಿಸಲು ಸೋದರಿಯರು ಜನರಿಗೆ ತೊಂದರೆ ಕೊಡುತ್ತಿದ್ದ ಹುಲಿಯನ್ನು ಕೊಂದರು. ಆನಂತರ ಅದರ ಚರ್ಮದ ಮೇಲೆ ಚೀನೀಯರನ್ನು ಓಡಿಸುವ ಬಗ್ಗೆ ಬರೆದು ಅದನ್ನು ಪ್ರದರ್ಶಿಸುತ್ತಾ ಎಲ್ಲೆಡೆ ಸುತ್ತಾಡಿದರು ಎಂದು ಹೇಳಲಾಗುತ್ತದೆ. ಅಂತೂ ಎಂಬತ್ತು ಸಾವಿರ ಜನರ ಸೈನ್ಯ ತಯಾರಾಯಿತು. ಅದರಲ್ಲಿ ಮಹಿಳೆಯರು ಸಾಕಷ್ಟುಜನರಿದ್ದರು. ಸೈನ್ಯವನ್ನು ಸಣ್ಣ ತುಕಡಿಗಳನ್ನಾಗಿ ಮಾಡಿ ಅದಕ್ಕೆ ಮೂವತ್ತಾರು ಮಹಿಳಾ ದಂಡನಾಯಕಿಯರನ್ನು ನೇಮಿಸಿದರು. ಅವರಲ್ಲಿ ಈ ಸೋದರಿಯರ ತಾಯಿಯೂ ಸೇರಿದ್ದಳು. ಆ ಮಹಿಳೆಯರಿಗೆ ಯುದ್ಧ ತರಬೇತಿಯನ್ನು ನೀಡಲಾಯಿತು. ಅಂತೂ ಸಾಕಷ್ಟು ತಯಾರಿಯ ನಂತರದೊಡ್ಡ ಸೈನ್ಯದೊಡನೆ ಸಹೋದರಿಯರು ಸನ್ನದ್ಧರಾಗಿ ಹೊರಟರು. ಹಿಂದೆ ಸೈನ್ಯವಾದರೆ ಮುಂದೆ ಆನೆಗಳನ್ನೇರಿ ಆಯುಧಗಳನ್ನು ಹಿಡಿದ ಸೋದರಿಯರು! ಎರಡೂ ತಂಡಗಳ ಕಾದಾಟ ಶುರುವಾಯಿತು. ಮೊಟ್ಟ ಮೊದಲು ತಮ್ಮ ಪ್ರಾಂತ್ಯವನ್ನು ವಶಕ್ಕೆ ತೆಗೆದುಕೊಂಡರು. ಗೆಲುವಿನಿಂದ ಉತ್ತೇಜಿತರಾಗಿ ಒಟ್ಟು ಅರವತ್ತೈದು ಪ್ರಾಂತ್ಯಗಳಲ್ಲಿ ಹೋರಾಡಿ ಚೀನಿಯರಿಂದ ಅವುಗಳನ್ನು ಮುಕ್ತಗೊಳಿಸಿದರು.ಅಂತೂ ಕ್ರಿ.ಶ ನಲವತ್ತರಲ್ಲಿ ಚೀನೀಯರನ್ನು ದೇಶದಿಂದ ಹೊರದೂಡಿ ತಮ್ಮನ್ನು ತಾವು ರಾಣಿಯರೆಂದು ಘೋಷಿಸಿಕೊಂಡು ಆಡಳಿತ ಕೈಗೆ ತೆಗೆದುಕೊಂಡರು. ಮೂರು ವರ್ಷಗಳ ಕಾಲ ಅವರ ರಾಜ್ಯಭಾರ ನಡೆಯಿತು. ಜನರಿಗೆ ಹೊರೆಯಾಗಿದ್ದ ಸುಂಕ ರದ್ದುಗೊಳಿಸಿದರು. ಆಡಳಿತವನ್ನು ಸರಳಗೊಳಿಸಿ ಹಳೆಯ ಪದ್ಧತಿಗಳನ್ನು ಜಾರಿಗೆ ತಂದರು.

ಟ್ರಂಗ್ ದೇವಾಲಯ

ಇತ್ತ ಸೋತ ಚೀನೀಯರು ಸುಮ್ಮನಿರಲಿಲ್ಲ. ಮತ್ತೆ ದೇಶ ಕ್ರಮಿಸುವ ಸಿದ್ಧತೆಯಲ್ಲಿದ್ದರು . ಹೀಗಾಗಿ ರಾಜ್ಯಭಾರ ಮಾಡುತ್ತಲೇ ಸತತವಾಗಿ ಕಾಳಗಗಳು ನಡೆಯುತ್ತಲೇ ಇದ್ದವು. ಮಹಿಳೆಯರ ನೇತೃತ್ವದಲ್ಲಿ ಯುದ್ಧ ಮಾಡಿ ಜಯ ಗಳಿಸುವ ಬಗ್ಗೆ ಸೈನ್ಯದಲ್ಲಿ ಅನೇಕರಿಗೆ ಅಪನಂಬಿಕೆಯೂ ಇತ್ತು; ಆದರೆ ಸಂಪೂರ್ಣ ನಿμÉ್ಠಯಿಂದ ಇವರಿಗೆ ಬೆನ್ನೆಲುಬಾಗಿ ನಿಂತವಳು ಸೈನ್ಯದ ದಂಡನಾಯಕಿಯಾಗಿದ್ದ ಫುಂಗ್ ತಿ ಚಿನ್. ಅಂತೂ ಹೇಗೋ ಕೆಲಕಾಲ ಚೀನಿಯರನ್ನು ಹೊರಗಿಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಮೂರು ವರ್ಷಗಳ ನಂತರ ಸೈನ್ಯವನ್ನು ಒಗ್ಗೂಡಿಸಿ ಚೀನಿಯರು ಪೂರ್ಣ ಬಲದಿಂದ ದಾಳಿ ನಡೆಸಿದರು. ಫುಂಗ್ ತಿ ಚಿನ್‍ ತುಂಬುಗರ್ಭಿಣಿಯಾಗಿದ್ದರೂ ಲೆಕ್ಕಿಸದೇ ರಣರಂಗಕ್ಕೆ ಧುಮುಕಿದಳು. ಯುದ್ಧ ನಡೆಯುತ್ತಿರುವಾಗಲೇ ನೋವು ಕಾಣಿಸಿಕೊಂಡು ಮಗು ಜನಿಸಿತು. ಅದನ್ನುತನ್ನ ಬೆನ್ನಿಗೆ ಕಟ್ಟಿಕೊಂಡು ಮತ್ತೆ ಹೋರಾಟ ಮುಂದುವರೆಸಿದ ಧೀರೆಯಾಕೆ. ಆದರೆ ನಂತರ ನಡೆದ ಭೀಕರ ಯುದ್ಧದಲ್ಲಿ ಹೆಚ್ಚು ಜನರು- ಶಸ್ತ್ರಗಳಿದ್ದ ಚೀನೀಯರ ಕೈ ಮೇಲಾಯಿತು. ಸೋದರಿಯರ ಸೈನ್ಯಕ್ಕೆ ಸೋಲು. ವೈರಿಗಳಿಗೆ ಸೆರೆ ಸಿಕ್ಕು ನರಕ ಅನುಭವಿಸುವ ಬದಲು ತಮ್ಮ ಆತ್ಮಗೌರವ ಉಳಿಸಿಕೊಳ್ಳುವ ಸಾಂಪ್ರದಾಯಿಕ ವಿಯೆಟ್ನಾಂ ನೀತಿಯನ್ನು ಅನುಸರಿಸಿದರು. ತಮ್ಮ ದಂಡನಾಯಕಿಯೊಂದಿಗೆ ಸೋದರಿಯರಿಬ್ಬರೂ ಹರಿಯುತ್ತಿದ್ದ ನದಿಗೆ ಹಾರಿ ಪ್ರಾಣತ್ಯಾಗ ಮಾಡಿದರು. ಹೀಗೆ ದೇಶಕ್ಕಾಗಿ ಹೋರಾಡಿದ ಜೀವಗಳು ಅಂತ್ಯ ಕಂಡಿದ್ದು ದುರಂತವೇ ಸರಿ.

ಆದರೆ ಎರಡೂವರೆ ಶತಮಾನಗಳ ಕಾಲ ಯಾವುದೇ ಪ್ರತಿರೋಧವಿಲ್ಲದೇ ಜಾರಿಯಲ್ಲಿದ್ದ ಚೀನೀಯರ ಪ್ರಭುತ್ವಕ್ಕೆ ದಿಟ್ಟತನದಿಂದ ಈ ಮಹಿಳೆಯರು ಸವಾಲೊಡ್ಡಿದ್ದು ಸರಿ. ಜತೆಗೆ ಮಹಿಳೆಯರೂ ಸೇರಿದಂತೆ ನಾಡಿನ ಜನರನ್ನು ಒಟ್ಟುಗೂಡಿಸಿ ಸೈನ್ಯಕಟ್ಟಿ ಗೆಲುವು ಪಡೆದು ರಾಣಿಯರಾಗಿ ಸಮರ್ಥ ಆಡಳಿತ ನಡೆಸಿದ್ದು ಅದಕ್ಕಿಂತ ವಿಶೇಷ. ಅಲ್ಪಕಾಲದ ಆಳ್ವಿಕೆ ನಡೆಸಿದರೂ ಜನರ ಮನಸ್ಸಿನಲ್ಲಿ ಇಂದಿಗೂ ರಾಣಿಯರಾಗಿ ರಾರಾಜಿಸುತ್ತಿದ್ದಾರೆ. ಇಡೀ ನಾಡಿನ ಜನರ ಸಾಹಸ, ಧೈರ್ಯ ಮತ್ತು ಸ್ವಾತಂತ್ರ್ಯಪ್ರಿಯತೆಗೆ ಈ ಸೋದರಿಯರು ಸಂಕೇತ ಎಂದು ಭಾವಿಸಲಾಗಿದೆ. ಸರ್ಕಾರ ಅವರನ್ನು ರಾಷ್ಟ್ರೀಯ ವೀರರು ಎಂದು ಘೋಷಿಸಿ ಗೌರವಿಸಿದೆ. ಪುಟ್ಟ ಮಕ್ಕಳಿಗೆ ತಾಯಿಯರು, ಆನೆಯೇರಿದ ಮಹಿಳೆಯರ ಚಿತ್ರ ಮೂರ್ತಿಗಳನ್ನು ತೋರಿಸಿ ನಮ್ಮ ದೇಶ ಸ್ವತಂತ್ರವಾಗಲು ಕಾರಣರಾದ ತಾಯಿಯರು ಎಂದು ಇತಿಹಾಸವನ್ನು ಬಿಚ್ಚಿಡುವಾಗ ನಿಜಕ್ಕೂ ಮೈನವಿರೇಳುತ್ತದೆ.

ಹಾಗೆಂದು ಸಮಸ್ಯೆಗಳು ಇಲ್ಲಿಯೂ ಇವೆ. ಮಹಿಳೆಯರಲ್ಲಿ ಸಾಕ್ಷರತೆ ಹೆಚ್ಚಿದೆ, ಆರ್ಥಿಕವಾಗಿಯೂ ಸಬಲರಾಗಿದ್ದಾರೆ. ಆದರೂ ಕೌಟುಂಬಿಕ ದೌರ್ಜನ್ಯ, ಲೈಂಗಿಕ ಶೋಷಣೆ, ವೇತನ ತಾರತಮ್ಯ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಚೀನಾಕ್ಕೆ ಹೆಣ್ಣುಮಕ್ಕಳ ಮಾರಾಟ – ಸಾಗಾಣಿಕೆ ಇಲ್ಲಿನ ಮಹಿಳೆಯರ ಪ್ರಮುಖ ಸಮಸ್ಯೆಗಳು. ಹೊರಗಿನವರ ಜತೆಗಿನ ಯುದ್ಧವನ್ನು ಹೇಗಾದರೂ ಗೆಲ್ಲಬಹುದು, ಒಳಗಿನವರ ಜತೆಗಿನ ದಿನನಿತ್ಯದ ಯುದ್ಧದಲ್ಲಿ ಸೆಣೆಸಾಡುವುದು ಅತ್ಯಂತ ಕಠಿಣ ಎಂದು ಆ ಕ್ಷಣದಲ್ಲಿ ನನಗನ್ನಿಸಿತು!!


ಡಾ.ಕೆ.ಎಸ್.ಚೈತ್ರಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *