ಲೋಕದ ಕಣ್ಣು/ ಮೇಘಾಲಯದಲ್ಲಿ ಮಾತೃಸಂತತಿ- ಡಾ. ಕೆ.ಎಸ್. ಚೈತ್ರಾ
ಮೇಘಾಲಯದ ಮಾತೃಪ್ರಧಾನ ಸಂಸ್ಕøತಿಯ ಆಯಾಮಗಳು ಕುತೂಹಲಕರ. ಸ್ವಚ್ಛತೆ ಅವರ ಜೀವನದ ಮೂಲ ಮಂತ್ರ ಆಗಿರುವುದರಿಂದಲೇ ಅಲ್ಲಿನ ಮಾವ್ಲಿನ್ನಾಂಗ್ ಎಂಬ ಹಳ್ಳಿ ಏಷ್ಯಾದ ಅತಿ ಸ್ವಚ್ಛ ಹಳ್ಳಿ ಎಂಬ ಮನ್ನಣೆ ಪಡೆದಿದೆ. ಸಂಸಾರ, ವ್ಯಾಪಾರ, ವ್ಯವಹಾರ ಎಲ್ಲದರಲ್ಲೂ ಅಲ್ಲಿ ಮಹಿಳೆಯರದೇ ಮೇಲುಗೈ; ಅದರ ಸಾಮಾಜಿಕ ಪರಿಣಾಮಗಳೂ ಅಲ್ಲಿ ಬಹುಚರ್ಚಿತ.
ಮೇಘಾಲಯದ ಹೆಸರು ಕೇಳಿದಾಗಲೆಲ್ಲಾ ಮನಸ್ಸಿನಲ್ಲಿ ಮೂಡುತ್ತಿದ್ದ ಚಿತ್ರ ಮೋಡದ ನಡುವೆ ಅಲ್ಲಲ್ಲಿ ಇಣುಕುವ ಬೆಟ್ಟ-ಗುಡ್ಡ, ನೀರ ಝರಿಗಳು. ಅಲ್ಲಿಗೆ ಹೋಗುವ ಕನಸು ನನಸಾಗಿ ಶಿಲ್ಲಾಂಗ್‍ನಲ್ಲಿ ಇಳಿದಾಗ ಸ್ವಲ್ಪ ನಿರಾಸೆಯೇ. ಆದರೆ ಜನನಿಬಿಡ ಶಿಲ್ಲಾಂಗ್ ಬಿಟ್ಟು ನೂರು ಕಿಮೀ ದೂರದಲ್ಲಿರುವ (ಮೂರು ತಾಸು) ಮಾವ್ಲಿನ್ನಾಂಗ್ ಎಂಬ ಹಳ್ಳಿಗೆ ಹೊರಟಾಗ ನನ್ನ ಮನಸ್ಸಿನಲ್ಲಿದ್ದ ಮೇಘಾಲಯಕ್ಕೆ ಜೀವ ಬರತೊಡಗಿತ್ತು. ಮಂಜಿನತೆರೆಯಲ್ಲಿ ಹಸಿರು ಗುಡ್ಡಗಳ ನಡುವೆ ಬೆಳ್ಳಿರೇಖೆಗಳಂತೆ ಜಲಪಾತಗಳು ಕಣ್ಣೆಗೆ ತಂಪೆರದರೂ ಹಾವಿನಂಥ ಅಂಕುಡೊಂಕಿನ ಹಾದಿಯಿಂದ ಹೊಟ್ಟೆ ತೊಳೆಸುತ್ತಿತ್ತು. ನಿಧಾನಕ್ಕೆ ಮೋಡದ ಸಾಮ್ರಾಜ್ಯ ಕರಗುತ್ತಾ ಹಸಿರಿದ್ದರೂ ಸೆಖೆ ಆರಂಭವಾಗಿತ್ತು. ಹಾಗೇ ಗಡಿ ಪೋಸ್ಟ್ ಡಾವ್‍ಕಿದಾಟಿ ಪಿನರ್ಸುಲಾ ಎಂಬ ಪುಟ್ಟ ಪಟ್ಟಣದ ನಂತರ ಚಿಕ್ಕ ತಿರುವು. ಅಲ್ಲಿಂದ ದಾರಿಯ ಇಕ್ಕೆಲಗಳಲ್ಲಿ ಬಾಳೆಗಿಡ,ಅಡಿಕೆಮರ ಮತ್ತು ವೀಳ್ಯೆದೆಲೆ ಬಳ್ಳಿಗಳು. ಥೇಟ್ ನಮ್ಮ ಸಾಗರ, ಸಿರ್ಸಿ ಕಡೆಯ ವಾತಾವರಣ. ಎಲ್ಲಿಂದೆಲ್ಲಿಯ ಹೋಲಿಕೆ ಎನ್ನುವಂತಿಲ್ಲ, ಅದು ಮಳೆನಾಡು, ನಮ್ಮದು ಮಲೆನಾಡು!
ಅಲ್ಲಿ ಹಸಿರು ಮತು ್ತಹೂಗಳ ವರ್ಣವೈಭವದ ನಡುವೆ ಪವಡಿಸಿದೆ ಮಾವ್ಲಿನ್ನಾಂಗ್ (ಮಾವ್ – ಕಲ್ಲು, ಲಿನ್ನಾಂಗ್- ಚೆಲ್ಲಾಪಿಲ್ಲಿ). ನದಿಪಾತ್ರದಲ್ಲಿ ನೀರು ಹರಿದು ಬಂಡೆಗಳನ್ನು ಕೊರೆದು ಪೊಳ್ಳಾದ ದೊಡ್ಡ ಕಲ್ಲುಗಳು ಈ ಪ್ರದೇಶದಲ್ಲಿ ಚೆಲ್ಲಾಪಿಲ್ಲಿಯಾದ್ದರಿಂದ ಖಾಸಿ ಭಾಷೆಯಲ್ಲಿ ಈ ಹೆಸರು! ಎಲ್ಲೋ ಮೂಲೆಯಲ್ಲಿ ತನ್ನ ಪಾಡಿಗೆ ತಾನಿದ್ದ ಈ ಹಳ್ಳಿ 2003 ರಿಂದ ಪ್ರಪಂಚದಲ್ಲೇ ಪ್ರಸಿದ್ಧಿ ಪಡೆಯಲು ಕಾರಣ, ಡಿಸ್ಕವರ್ ಇಂಡಿಯಾ ಪತ್ರಿಕೆಯಿಂದ ಏಷ್ಯಾದ ಅತಿ ಸ್ವಚ್ಛ ಹಳ್ಳಿ ಎಂದು ಗುರುತಿಸಲ್ಪಟ್ಟಿದ್ದು! ಇದಲ್ಲದೇ ಶೇಕಡಾ ನೂರರಷ್ಟು ಸಾಕ್ಷರತೆ ಮತ್ತು ಸ್ತ್ರೀಸಬಲೀಕರಣ ಇಲ್ಲಿನ ಪ್ರಮುಖ ಅಂಶ. ಹೀಗಾಗಿ ಈ ಪುಟ್ಟ ಹಳ್ಳಿಯನ್ನು, ಸ್ಥಳೀಯರು ‘ದೇವರ ಸ್ವಂತ ಉದ್ಯಾನವನ’ಎಂದು ಪ್ರೀತಿಯಿಂದ ಬಣ್ಣಿಸುವುದರಲ್ಲಿ ಅತಿಶಯೋಕ್ತಿ ಏನಿಲ್ಲ!! ಇಲ್ಲಿನ ಜನರ ಬಗ್ಗೆ ನಮ್ಮ ಚಾಲಕ ಲಿಂಕನ್ ‘ಇಲ್ಲಿ ಎಲ್ಲರÀ ಕೈಯ್ಯಲ್ಲಿ ಸದಾ ಪೊರಕೆ ಮತ್ತು ಬೆನ್ನಿಗೆ ಬಿದಿರಿನ ಬುಟ್ಟಿ ಇದ್ದೇ ಇರುತ್ತದೆ’ ಎಂದು ಸ್ವಲ್ಪ ತಮಾಷೆ ಮತ್ತು ಹೆಮ್ಮೆಯಿಂದ ಹೇಳಿದ; ಅಂದರೆ ಸ್ವಚ್ಛತೆ ಇಲ್ಲಿನ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ! ಇದಕ್ಕೇನಾದರೂ ವಿಶೇಷ ಕಾರಣವಿದೆಯೇ ಎಂದು ಕುತೂಹಲದಿಂದ ವಿಚಾರಿಸಿದಾಗ ನುಡಿದಿದ್ದು `ಮದರ್ಸ್’ ಎಂಬ ಒಂದೇ ಪದ.
ಆಶ್ಚರ್ಯವಾಗಿ ಮತ್ತಷ್ಟು ಕೆದಕಿದಾಗ ತಿಳಿದ ವಿಷಯ ; ಶತಮಾನಕ್ಕೂ ಹಿಂದೆ ಇಲ್ಲಿ ಕಾಲರಾ ಸಾಂಕ್ರಾಮಿಕವಾಗಿ ಹರಡಿ ಅನೇಕರನ್ನು ಬಲಿ ತೆಗೆದುಕೊಂಡಿತ್ತು. ಕಸ, ನೈರ್ಮಲ್ಯದ ಕೊರತೆ ಈ ರೋಗ ಹರಡುವಿಕೆಯನ್ನು ಹೆಚ್ಚಿಸುತ್ತದೆ ಎಂದು ಆಗ ಇದ್ದಂಥ ಬ್ರಿಟಿಷ್ ವೈದ್ಯರು ಮನಗಂಡರು. ಸ್ವಚ್ಛತೆಯ ಬಗ್ಗೆ ಹೆಚ್ಚಿನ ಒತ್ತು ನೀಡಲು ತಿಳಿಹೇಳಿದರು. ಮನೆ-ಮಕ್ಕಳ ಸಂಪೂರ್ಣ ಜವಾಬ್ದಾರಿ ಮಹಿಳೆಯರದ್ದೇ ಆಗಿದ್ದರಿಂದ ವಿಶೇಷವಾಗಿ ಮಹಿಳೆಯರಿಗೆ ಸ್ವಚ್ಛತೆಯ ಮಹತ್ವ ತಿಳಿಸಿದರು. ತಮ್ಮ ಮಕ್ಕಳ ಸಲುವಾಗಿ ಮಹಿಳೆಯರು ಸ್ವಚ್ಛತೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮ ಅನುಸರಿಸಲು ಆರಂಭಿಸಿದರು ಮತು ್ತಅದನ್ನೇ ಮುಂದುವರಿಸಿದರು. ಇದಿಷ್ಟು ವಿವರ ನೀಡಿ ನಮ್ಮಲಿ ಮಹಿಳೆಯರು ಮನಸ್ಸು ಮಾಡಿದ ನಂತರ ಮುಗಿಯಿತು ಎಂಬ ಟಿಪ್ಪಣಿ ನೀಡಿದ ಚಾಲಕ. ಆತ ಹೇಳಿದ್ದು ಭಾಗಶಃ ನಿಜವೇ. ಏಕೆಂದರೆ ಮೇಘಾಲಯದಲ್ಲಿ ಮಾತೃಸಂತತಿ ಜಾರಿಯಲ್ಲಿದೆ.
ಮಾತೃಸಂತತಿ: ಸ್ಥಳೀಯರಾದ ಖಾಸಿ ಮತ್ತು ಗಾರೋ ಜನಾಂಗದವರಲ್ಲಿ ತಾಯಿಯಿಂದ ಹೆಣ್ಣುಮಕ್ಕಳು ತಮ್ಮ ಮನೆತನದ ಹೆಸರನ್ನು ಪಡೆಯುವುದಲ್ಲದೇ, ಎಲ್ಲರಿಗಿಂತ ಕಿರಿಯ ಮಗಳು ಆಸ್ತಿಯ ಹಕ್ಕನ್ನು ಪಡೆಯುತ್ತಾಳೆ! ತಂದೆ-ತಾಯಿಯನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳುವ ಹೊಣೆ ಆಕೆಯದ್ದೇ. ಹೆಣ್ಣುಮಕ್ಕಳಿಗೆ ಇಷ್ಟಪಟ್ಟವರನ್ನು ಮದುವೆಯಾಗುವ ಅಥವಾ ಆಗದೆಯೂ ಇರುವ ಸ್ವಾತಂತ್ರ್ಯವಿದೆ. ವರದಕ್ಷಿಣೆ, ಕೌಟುಂಬಿಕ ಹಿಂಸೆಯ ಪ್ರಕರಣ ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು. ಮದುವೆಯ ನಂತರ ಪತಿ, ಪತ್ನಿಯ ಮನೆಗೆ ಬಂದು ನೆಲೆಸುತ್ತಾನೆ. ಕೃಷಿ, ಇಲ್ಲಿನವರ ಪ್ರಮುಖ ಉದ್ಯೋಗ. ಅಡಿಕೆ, ವೀಳ್ಯದೆಲೆ, ತರಕಾರಿ, ಸಣ್ಣಕಿತ್ತಲೆ, ಮತ್ತು ಅಕ್ಕಿ ಇಲ್ಲಿನ ಮುಖ್ಯ ಬೆಳೆ. ಹೊಲ, ತೋಟಗಳಲ್ಲಿ ಪುರುಷರು ದುಡಿದರೂ ಅಂಗಡಿ-ವ್ಯಾಪಾರಗಳಲ್ಲಿ ಮಹಿಳೆಯರದ್ದೇ ಮೇಲುಗೈ. ಮನೆಯ ವ್ಯವಹಾರದ ಸಂಪೂರ್ಣ ಜವಾಬ್ದಾರಿ ತಾಯಿಯದ್ದು. ಇಲ್ಲಿನ ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆಯಲ್ಲಿ ತಾಯಿಯ ಅಣ್ಣ/ ತಮ್ಮ ಅಂದರೆ ಸೋದರಮಾವನಿಗೆ ಅತ್ಯಂತ ಮಹತ್ವದ ಸ್ಥಾನ ನೀಡಲಾಗುತ್ತದೆ. ಈ ಮಾತೃಸಂತತಿ ಪದ್ಧತಿ ರೂಢಿಯಲ್ಲಿರಲು ಪ್ರಮುಖ ಕಾರಣ ಹಿಂದಿನ ಕಾಲದಲ್ಲಿ ಪುರುಷರು ಯುದ್ಧಕ್ಕಾಗಿ ದೂರದೂರದ ಪ್ರದೇಶಕ್ಕೆ ತೆರಳುತ್ತಿದ್ದರು. ವರ್ಷದಲ್ಲಿ ಹಲವಾರು ತಿಂಗಳುಗಳ ಕಾಲ ಪ್ರಯಾಣ, ತಯಾರಿ, ಯುದ್ಧ ಇವುಗಳಲ್ಲಿಯೇ ಕಳೆಯುತ್ತಿತ್ತು. ಅಲ್ಲಿಯವರೆಗೆ ಊರಿನಲ್ಲಿದ್ದ ತೋಟ, ಕೃಷಿಯ ಕಡೆ ಗಮನ ಹರಿಸುವವರು ಯಾರು? ಮಹಿಳೆಯರು ಮನೆವಾರ್ತೆಯ ಜತೆ ಹೊರಗಿನ ವ್ಯವಹಾರವನ್ನೂ ನಿಭಾಯಿಸುವುದು ಅನಿವಾರ್ಯವಾಗಿತ್ತು. ಅದೇ ರೀತಿ ಪುರುಷರು ಸದಾ ಸಂಚಾರದಲ್ಲಿದ್ದ ಕಾರಣ ಮಹಿಳೆಯರು ಪತಿಯಲ್ಲದೆ ಇತರ ಪುರುಷರೊಂದಿಗೆ ಮಕ್ಕಳನ್ನು ಪಡೆಯುವ ಕ್ರಮವೂ ಇತ್ತು. ಹೀಗಾಗಿ ತಾಯಿಯ ಹೆಸರಿನಿಂದ ಮಕ್ಕಳನ್ನು ಗುರುತಿಸುವ ಕ್ರಮ ಜಾರಿಗೆ ಬಂದಿರಬಹುದು ಎನ್ನಲಾಗಿದೆ. ಇಂದಿಗೂ ಖಾಸಿ-ಗಾರೋಗಳಲ್ಲಿ ಹೆಣ್ಣು ಮಗು ಹುಟ್ಟಿದಾಗ ಸಡಗರ ಸಂಭ್ರಮದಿಂದ ಸಿಹಿ ಹಂಚಲಾಗುತ್ತದೆ ; ಸಂತೋಷಕೂಟ ಜರುಗುತ್ತದೆ. ಗಂಡು ಹುಟ್ಟಿದರೆ ‘ಇರುವುದರಲ್ಲಿ ತೃಪ್ತಿ ಪಟ್ಟುಕೊಳ್ಳಬೇಕು’ ಎಂಬ ಸಮಾಧಾನದ ಮಾತುಗಳು!
ಅರೆ, ನಮ್ಮ ದೇಶದಲ್ಲಂತೂ ಸರಿ ! ನೆರೆ ಹೊರೆಯ ರಾಷ್ಟ್ರಗಳಾದ ಬಾಂಗ್ಲಾ, ಪಾಕಿಸ್ತಾನ, ಚೀನಾ ಇವೆಲ್ಲಕ್ಕಿಂತ ಭಿನ್ನ ಪರಿಸ್ಥಿತಿ ಇದು ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಅಷ್ಟರಲ್ಲಿ ಲಿಂಕನ್ ‘ಈ ರೀತಿ ಹುಟ್ಟಿನಿಂದ ಮಾಡಿ ಮಾಡಿ ಗಂಡುಮಕ್ಕಳಿಗೆ ಆತ್ಮವಿಶ್ವಾಸವೇ ಇಲ್ಲದಂತಾಗಿದೆ. ಮದುವೆಯಾಗುವಾಗಲೂ ಹೆದರಿಕೆಯೇ. ನಮ್ಮವರನ್ನು ಬಿಟ್ಟು ಹೆಂಡತಿ ಮನೆಗೆ ಹೋಗಬೇಕು. ಅಲ್ಲಿಯೂ ಮಹಿಳೆಯರದ್ದೇ ಆಳ್ವಿಕೆ. ಈ ಥರ ಲೇಡಿಸ್ ರೂಲ್ ಆಗಿ ಗಂಡಸರು ಡಿಪ್ರೆಶನ್‍ಗೆ ಒಳಗಾಗಿದ್ದಾರೆ. ಅದಕ್ಕೆ ಕೆಲಸ ಮಾಡಲೂ ಇಂಟ್ರೆಸ್ಟ್ ಇಲ್ಲ. ಬೇಸರ ಕಳೆಯಲು ಸುಮ್ಮನೇ ಮಂಕಾಗಿ ಕುಳಿತು ಡ್ರಗ್ಸ್, ಡ್ರಿಂಕ್ಸ್ ಎಲ್ಲಾ ಮಾಡ್ತಾರೆ. ಇಲ್ಲಿಯೂ ಬೇರೆ ಕಡೆ ಇರುವಂತೆಯೇ ಇರಬೇಕಿತ್ತು’ ಎಂದ. ಈ ರೀತಿ ನೊಂದು, ಮಾತೃಸಂತತಿಯಲ್ಲಿ ಬದಲಾವಣೆ ಬಯಸುವ ಸಿಂಗ್ಖೋಂಗ್ ರಿಂಪೆಥೈಮಾಯ್' ಎಂಬ ಸಂಘಟನೆ ತೊಂಬತ್ತರದಶಕದಿಂದ ಕ್ರಿಯಾಶೀಲವಾಗಿದೆ.
ಹುಟ್ಟಿದ ಮನೆಗೂ ಸಲ್ಲದೆ, ಮದುವೆಯಾದ ಮನೆಯಲ್ಲೂ ಸೇರದೇ ತಮ್ಮದು ಎಲ್ಲೂ ಇಲ್ಲದ ಅತಂತ್ರ ಪರಿಸ್ಥಿತಿ. ಶಿಕ್ಷಣವನ್ನೂ ಪಡೆಯಲಾಗದೇ, ಕುಡಿದು, ಮಾದಕ ದ್ರವ್ಯ ವ್ಯಸನಿಗಳಾಗಿ, ಬೇಸರ ಕಳೆಯಲು ಗಿಟಾರ್ ನುಡಿಸಿ ನಲವತ್ತಕ್ಕೆ ಸಾಯುವುದು ಇಲ್ಲಿನ ಪುರುಷರ ಹಣೆಬರಹ. ಇದಕ್ಕೆ ಮಾತೃಸಂತತಿಯ ವೈಭವೀಕರಣವೇ ಕಾರಣ. ಇದು ಬದಲಾಗಬೇಕು, ಮಹಿಳೆಯರನ್ನು ಗೌರವಿಸುವುದರಲ್ಲಿ ತಪ್ಪಿಲ್ಲ. ಹಾಗೆಂದು ಪುರುಷರಿಗೂ ಸಮಾನ ಹಕ್ಕು-ಗೌರವ ಸಿಗಲಿ’ ಎಂದು ಅವರ ಹೋರಾಟ.
ಆದರಿಲಿ ್ಒಂದು ಅಂಶವನ್ನು ಗಮನಿಸಬೇಕು. ಮಾತೃಸಂತತಿ ಜಾರಿಯಲ್ಲಿದ್ದರೂ ಮಾತೃಪ್ರಧಾನ ಸಮಾಜವಲ್ಲ. ಅಂದರೆ ಆಡಳಿತದ ಅಧಿಕಾರ ಪುರುಷರದ್ದೇ. ಸೋದರಮಾವನಿಗೆ ಎಲ್ಲಿಲ್ಲದ ಮನ್ನಣೆ. ಆತನ ಒಪ್ಪಿಗೆ ಎಲ್ಲದಕ್ಕೂ ಬೇಕು. ರಾಜಕೀಯದಲ್ಲೂ ಮಹಿಳೆಯರ ಪ್ರಾತಿನಿಧ್ಯ ಶೇಕಡಾ ಹತ್ತಕ್ಕೂ ಕಡಿಮೆ. ಹೀಗಾಗಿ ದೈನಂದಿನ ವ್ಯವಹಾರ ಮಹಿಳೆಯರ ಕೈಯ್ಯಲಿದ್ದರೂ ಅಧಿಕಾರ ಅಷ್ಟಕಷ್ಟೇ! ಒಟ್ಟಿನಲ್ಲಿ ಕಣ್ಣಿಗೆ ಕಂಡಷ್ಟು ಮಹಿಳೆಯರ ಬದುಕು ಸುಖವಲ್ಲ.
ಸ್ವಚ್ಛತೆ ಇಲ್ಲಿ ಜೀವನಕ್ರಮ! : ಇವೆಲ್ಲವನ್ನೂ ಯೋಚಿಸುತ್ತಾ ಹಳ್ಳಿಯನ್ನು ಪ್ರವೇಶಿಸಿದ್ದಾಯ್ತು. ಸುಮಾರು ನೂರು ಮನೆಗಳಿರುವ ಈ ಹಳ್ಳಿಯ ಜನಸಂಖ್ಯೆ ಐದು ನೂರು. ತೆರೆದ ಬಯಲಿನಲ್ಲಿ ಶೌಚಕ್ಕೆ ಹೋಗುವುದು ಇಲ್ಲೆಲ್ಲೂಇಲ್ಲ. ಮನೆ ಎಷ್ಟೇ ಸಣ್ಣದಾದರೂ ಪ್ರತೀ ಮನೆಗೂ ಶೌಚಾಲಯವಿದೆ. ಇದಲ್ಲದೇ ಪ್ರವಾಸಿಗರಿಗೆ ಸಾರ್ವಜನಿಕರಿಗೆ ಪ್ರತ್ಯೇಕ ಶೌಚಾಲಯಗಳಿವೆ. ಪ್ರತಿ ಮನೆಗೆ ಮಾತ್ರವಲ್ಲ, ಬೀದಿ ಬೀದಿಗೆ ಬಿದಿರಿನ ಕಸದ ಬುಟ್ಟಿಗಳಿವೆ. (ಕೋನಾಕೃತಿಯಲ್ಲಿ ಕಲಾತ್ಮಕವಾಗಿ ಹೆಣೆದ ಈ ಬುಟ್ಟಿ ಖೋಹ್ ನೋಡಿದರೆ ಅಲಂಕಾರಿಕ ವಸ್ತುವೇನೋ ಅನ್ನಿಸುವಷ್ಟು ಚೆಂದ!). ಹೀಗೆ ಸಂಗ್ರಹಿಸಿದ ತ್ಯಾಜ್ಯವನ್ನು ದೊಡ್ಡದಾದ ಹೊಂಡಕ್ಕೆ ಹಾಕಿ ನಂತರ ಗೊಬ್ಬರವಾಗಿ ಬಳಸಲಾಗುತ್ತದೆ. ಧೂಮಪಾನ ಮತ್ತು ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ದಿನವೂ ಬೆಳಿಗ್ಗೆ ಅಥವಾ ಸಂಜೆ ಪ್ರತೀಮನೆಯವರು ತಮ್ಮ ಅಂಗಳವನ್ನಂತೂ ಸರಿ, ಅಕ್ಕಪಕ್ಕದ ಜಾಗ ಮಾತ್ರವಲ್ಲ, ರಸ್ತೆಯನ್ನೂ ಗುಡಿಸುವುದು ಕಡ್ಡಾಯವಾಗಿ ಪಾಲಿಸಿಕೊಂಡು ಬಂದಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಮರಗಳಿದ್ದು ಈ ಉದುರಿದ ಎಲೆಗಳನ್ನು ನೇರವಾಗಿ ಅಲ್ಲಲ್ಲೇ ಕಟ್ಟಿದ ಬಿದಿರಿನ ಬುಟ್ಟಿಗೆ ಬೀಳುವ ವ್ಯವಸ್ಥೆ ಮಾಡಲಾಗಿದೆ. ದಿನವೂ ಶಾಲೆಗೆ ಹೋಗುವ ಮುನ್ನ ಬೀದಿ ಗುಡಿಸಿ, ಕಸವನ್ನು ಬುಟ್ಟಿಯಿಂದ ಖಾಲಿಮಾಡುವುದು ಹಳ್ಳಿಯ ಮಕ್ಕಳ ದಿನಚರಿ! ತಾಯಂದಿರ ಮೇಲ್ವಿಚಾರಣೆಯಲ್ಲಿ ಇದೆಲ್ಲಾ ಕಟ್ಟುನಿಟ್ಟಾಗಿ ನಡೆಯುತ್ತದೆ.

ಇಲ್ಲಿ ಹೆಚ್ಚಿನವು ಮೆಟ್ಟುಗೋಲಿನ ಮೇಲೆ ಬಿದಿರನ್ನು ಬಳಸಿ ಹುಲ್ಲುಮಾಡಿನ ಮನೆಗಳು .ಮನೆ ದೊಡ್ಡ ಸಣ್ಣ ಹೇಗಿದ್ದರೂ ಅಂಗಳ, ಹಿತ್ತಲು ಎಲ್ಲೆಡೆ ಗಿಡಮರಗಳಿವೆ. ಬಳಸಿದ ನೀರು ವ್ಯರ್ಥವಾಗದಂತೆ ಗಿಡಗಳಿಗೆ ಬಳಸಲಾಗುತ್ತದೆ. ಮರಗಳ ಮೇಲಿಂದ ಅಲ್ಲಲ್ಲಿ ಚೆಂದದ ಆರ್ಕಿಡ್ ಹೂಗಳು ಮನಸೆಳೆಯುತ್ತವೆ. ಎಲ್ಲೂ ಕಸ -ಕಡ್ಡಿಇಲ್ಲದೇ ಇರುವುದರಿಂದ ನೀಟಾದ ರಸ್ತೆಯ ಪಕ್ಕದಲ್ಲಿ ಹರಿಯುವ ನೀರೂ ಶುದ್ಧವಾಗಿಯೇಕಾಣುತ್ತದೆ!! ಪ್ರವಾಸಿಗರಿಗಾಗಿ ಎತ್ತರದ ಮರದ ಮೇಲೆ ಟ್ರೀಹೌಸ್ ಮಾಡಲಾಗಿದ್ದು ಬಿದಿರಿನಏಣಿ ಹತ್ತಿ ಎತ್ತರದಲ್ಲಿರುವ ಪ್ರವೇಶಿಸಬೇಕು. ಅಲ್ಲಿರುವ ಪುಟ್ಟ ಅಟ್ಟದಲ್ಲಿ ಕುಳಿತು ಬಿಡಿಸಿದ ಚಿತ್ರದಂತಿರು ಇಡೀ ಹಳ್ಳಿ ಮತ್ತು ದೂರದ ಬಾಂಗ್ಲಾ ದೇಶದ ಗದ್ದೆ-ಹಳ್ಳಿಗಳನ್ನು ಕಾಣಬಹುದು. ಹಾಗೆಯೇ ನೂರು ವರ್ಷ ಹಳೆಯದಾದ ಎಪಿಫನಿ ಚರ್ಚ್ ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳ. ಹಳ್ಳಿಯನ್ನು ಸುತ್ತುವಾಗ ಗಮನಿಸಿದ ಪ್ರಮುಖ ವಿಷಯವೆಂ ಪ್ರವಾಸಿಗರಿಗೆ ಟೀ, ತಿಂಡಿ, ಊಟ ಕೊಡುವ ಪುಟ್ಟ ಹೊಟೆಲ್‍ಅಥವಾ ವಸತಿಗಾಗಿ ಇರುª ಗೆಸ್ಟ್ ಹೌಸ್‍ಗಳಲ್ಲಿ ಮಹಿಳೆಯರೇ ಹೆಚ್ಚು. ಮಾತ್ರವಲ್ಲ, ಎಳೆನೀರು, ಮಾವಿನಕಾಯಿ, ಸೌತೆಕಾಯಿ ಚಕಚಕನೆ ಹೆಚ್ಚಿ- ಕೊಚ್ಚಿ ವ್ಯಾಪಾರ ಕುದುರಿಸುವವರೂ ಇವರೇ. ಪಟಪಟ ಇಂಗ್ಲೀಷ್/ ಹಿಂದಿ ಮಾತನಾಡುವ ಇವರು ಚೆಲುವೆಯರು, ವ್ಯವಹಾರ ಚತುರೆಯರು!!
ಸ್ಥಳೀಯರಿಗೆ ತಮ್ಮ ಹಳ್ಳಿ ಬಗ್ಗೆ, ಅದಕ್ಕೆ ಸಿಕ್ಕಿರುವ ಪ್ರಚಾರ ಮತ್ತು ಬರುತ್ತಿರುವ ಆದಾಯದ ಕುರಿತು ಸಂತೋಷವಿದೆ. ಏಕೆಂದರೆ ಇದೀಗ ಮೇಘಾಲಯದ ಶ್ರೀಮಂತ ಹಳ್ಳಿ! ಆದರೆ ಅದರ ನಡುವೆಯೇ ದುಡ್ಡು ಮತ್ತು ಪ್ರವಾಸಿಗರು ಹೆಚ್ಚಾಗಿ, ತಮ್ಮ ಹಳ್ಳಿ ಮತ್ತು ಜೀವನಶೈಲಿ ಬದಲಾದರೆ ಎಂಬ ಸಣ್ಣ ಆತಂಕವೂಇದೆ. ಈ ಚೆಂದದ ಹಳ್ಳಿ ನೋಡಿ, ಅಲ್ಲಿನ ಸಾಮಾಜಿಕ ವ್ಯವಸ್ಥೆಯ ವಿವಿಧ ಆಯಾಮಗಳ ಬಗ್ಗೆ ಕೇಳಿ ಮರಳುವಾಗ ದೇವರ ಸ್ವಂತ ಉದ್ಯಾನವನ, ದುಷ್ಟ ಮನುಷ್ಯರ ಕೈಗೆ ಸಿಕ್ಕು ನರಕವಾಗದಿರಲಿ; ಹಾಗೇ ಯಾರೂ ಯಾರನ್ನೂ ಶೋಷಿಸದ, ಪರಸ್ಪರಗೌರವಿಸುವ ಸುಂದರ ಬದುಕು ನಮ್ಮೆಲ್ಲರದ್ದಾಗಲಿ ಎಂಬ ಹಾರೈಕೆ ಮನದಲ್ಲಿ ಮೂಡಿತ್ತು!

ಡಾ.ಕೆ.ಎಸ್.ಚೈತ್ರಾ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.