Uncategorizedಅಂಕಣ

ಲೋಕದ ಕಣ್ಣು / ಮಹಿಳಾ`ಮಣಿ’ಯರ ಮಾರುಕಟ್ಟೆ – ಡಾ. ಕೆ.ಎಸ್. ಚೈತ್ರಾ

ಮಣಿಪುರದ ಇಮಾ ಕೈತಲ್ - ಜಗತ್ತಿನಲ್ಲಿಯೇ ವಿಶಿಷ್ಟವಾದ ಮಾರುಕಟ್ಟೆಗಳ ರಾಣಿ. ಶ್ರಮಜೀವಿ ಮಹಿಳೆಯರು ಸಂಘಟಿತರಾಗಿ, ಸ್ವಾವಲಂಬಿಗಳಾಗಿ, ಸಮಾನತೆಯನ್ನು ಸಾಧಿಸಿರುವುದನ್ನು ಪ್ರತ್ಯಕ್ಷವಾಗಿ ತೋರಿಸುವ ಸ್ಥಳ. `ಇಮಾ ಕೈತೆಲ್’. ತಾವು ಬೆಳೆದದ್ದನ್ನು ತಾವೇ ಮಾರಿ ಸಂಸಾರ ತೂಗಿಸುವ ಸಲುವಾಗಿ ಶುರುವಾಯಿತು ತಾಯಿಯರ ಪ್ರಯತ್ನ. ಹಾಗೆ ಆರಂಭವಾದದ್ದು ಮಹಿಳಾ ಸಮಾನತೆ, ಸ್ವಾವಲಂಬನೆ ಮತ್ತು ಸಬಲೀಕರಣಕ್ಕೊಂದು ಅತ್ಯುತ್ತಮ ಸಾಕ್ಷಿ.

ಪರ್ವತಗಳ ಹಿಂದೆ ಅಡಗಿ ಕುಳಿತಿರುವ ಸೂರ್ಯ, ಮೈ ನಡುಗಿಸುವ ಕುಳಿರ್ಗಾಳಿ, ಸಣ್ಣಗೆ ಜಿನುಗುವ ಸೋನೆ ಮಳೆ. ಇದ್ಯಾವುದನ್ನೂ ಲೆಕ್ಕಿಸದೇ ತಲೆಗೆ ಇನ್ನಾಫಿ' ಸುತ್ತಿ, ಧರಿಸಿರುವ ಲಂಗದಂಥ ಫಾನೆಕ್' ಎಳೆದುಕೊಳ್ಳುತ್ತಾ ಸರಸರನೇ ಬಸ್ಸು - ಜೀಪು ಕಾಲ್ನಡಿಗೆಯಲ್ಲಿ ತಮ್ಮ ಬುಟ್ಟಿ - ಚೀಲ ಹೊತ್ತು ಸಾವಿರಾರು ಮಹಿಳೆಯರ ಪಯಣ. ಅಗಲ ಹಣೆಗೆ ಲೇಪಿಸಿದ ಗಂಧ, ಅಡಿಕೆ ಅಗಿದು ಕೆಂಪಾದ ಹಲ್ಲು, ಕತ್ತಲಲ್ಲೂ ಆತ್ಮವಿಶ್ವಾಸದಿಂದ ಹೊಳೆವ ಸಣ್ಣ ಕಣ್ಣುಗಳು, ಇವರು ಮಣಿಪುರದ ಮಹಿಳೆಯರು!! ಇವರು ಹೊರಟಿರುವುದು ಜಗತ್ತಿನಲ್ಲಿಯೇ ವಿಶಿಷ್ಟವಾದ ಮಾರುಕಟ್ಟೆಗಳ ರಾಣಿ ಎಂದೇ ಕರೆಯಲ್ಪಡುವ `ಇಮಾ ಕೈತೆಲ್’ನತ್ತ.

ತನ್ನ ಅದ್ಭುತ ಪ್ರಾಕೃತಿಕ ಸೌಂದರ್ಯದಿಂದ ಭಾರತದ ಸ್ವಿಜರ್ಲ್ಯಾಂಡ್'ಭೂದೇವಿಯ ಮಣಿಹಾರ’ ಎಂದೇ ಖ್ಯಾತವಾಗಿರುವ ಈಶಾನ್ಯ ಭಾರತದ ಸಪ್ತ ಸಹೋದರಿ ರಾಜ್ಯಗಳಲ್ಲೊಂದು ಮಣಿಪುರ. ಎತ್ತೆತ್ತರದ ನೀಲಿ ಪರ್ವತ, ಕಡಿದಾದ ಹಸಿರು ಕಣಿವೆ, ಸ್ವಚ್ಛ ಕೊಳಗಳ ನಡುವೆ ಪುಟ್ಟ ಬಟ್ಟಲಿನಂಥಾ ಬಯಲು ಇಲ್ಲಿನ ವೈಶಿಷ್ಟ್ಯ. ಒಂಭತ್ತು ಜಿಲ್ಲೆಗಳ ಸುಮಾರು ಇಪ್ಪತ್ತಾರು ಲಕ್ಷ ಜನಸಂಖ್ಯೆ ಹೊಂದಿರುವ ಈ ರಾಜ್ಯದ ರಾಜಧಾನಿ ಇಂಫಾಲ್. ಇಲ್ಲಿ, ನಗರದ ಹೃzಯಭಾಗದಿಂದ ಕೇವಲ ಎಂಟು ಕಿಲೋಮೀಟರ್ ದೂರದಲ್ಲಿರುವ ಇಮಾ ಕೈತೆಲ್, ಪ್ರವಾಸಿಗರ ಪ್ರಮುಖ ಆಕರ್ಷಣೆ ಮಾತ್ರವಲ್ಲ ಕೇವಲ ಮಹಿಳೆಯರೇ ನಡೆಸುವ ಮಾರುಕಟ್ಟೆ! ಸುಮಾರು ಐದು ನೂರು ವರ್ಷಗಳಷ್ಟು ಹಳೆಯದಾದರೂ ಇಂದಿಗೂ ಅತ್ಯಂತ ಜನಪ್ರಿಯವಾಗಿರುವ ಮಾರುಕಟ್ಟೆಯಿದು.

ಮಣಿಪುರಿ ಭಾಷೆಯಲ್ಲಿ ಇಮಾ ಎಂದರೆ ತಾಯಿ/ಮಾತೆ, ಕೈತೆಲ್ ಅಂದರೆ ಮಾರುಕಟ್ಟೆ. ಹೆಚ್ಚಾಗಿ ನಲವತ್ತರಿಂದ ಅರವತ್ತು ವರ್ಷದ ಮಹಿಳೆಯರೇ ನಡೆಸುವ ಈ ವ್ಯಾಪಾರ ವಹಿವಾಟಿಗೆ ಹಾಗಾಗಿಯೇ ಈ ಹೆಸರು. ಮದುವೆಯಾದ ಮಹಿಳೆಯರು ಮಾತ್ರ ಇಲ್ಲಿ ವ್ಯವಹಾರ ನಡೆಸಬಹುದು. ತಾಯಿಯಂಥ ದೇವಿ `ಇಮಾ'ಳ ಅನುಗ್ರಹ ತಮ್ಮನ್ನು ಕಾಪಾಡುತ್ತದೆ ಎಂಬುದು ಮಹಿಳೆಯರ ನಂಬಿಕೆ. ಇಮಾ ಬಜಾರ್, ನೂಪಿ ಕೈತೆಲ್, ಖ್ವಾïಯ್ರಾಮಾಬಂದ್ ಎಂಬ ಹೆಸರುಗಳೂ ಬಳಕೆಯಲ್ಲಿವೆ. ಕಿರಿದಾದ ಓಣಿಗಳಂತಿರುವ ಜಾಗದಲ್ಲಿ ಪುಟ್ಟ ಮಳಿಗೆಗಳಲ್ಲಿ ಏಕಕಾಲಕ್ಕೆ ಬೇರೆ ಬೇರೆ ಊರು, ಜಾತಿ, ವಯಸ್ಸು, ಧರ್ಮದ ಐದು ಸಾವಿರ ಮಹಿಳೆಯರು ವ್ಯಾಪಾರ ನಡೆಸುವುದು ನಿಜಕ್ಕೂ ಅದ್ಭುತ! ಇಲ್ಲಿ ಪುರುಷರಿಗೆ ಖರೀದಿ ಮಾಡಲಷ್ಟೇ ಅವಕಾಶ, ವ್ಯಾಪಾರಿಗಳಾಗಲು ಸಾಧ್ಯವಿಲ್ಲ!

ಇಮಾ ಕೈತೆಲ್ಗೆ ಒಂದು ಶತಮಾನದಷ್ಟು ಹಳೆಯ ದಾಖಲಾದ ಇತಿಹಾಸವಿದೆ. ಹದಿನಾರನೇ ಶತಮಾನದಲ್ಲಿ, ರಾಜರ ಆಳ್ವಿಕೆಯ ಕಾಲದಲ್ಲಿ ಅಲ್ಲಲ್ಲಿ ಈ ರೀತಿ ವಿನಿಮಯ ಕೇಂದ್ರ ಇತ್ತೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಪುರುಷರೇ ವ್ಯಾಪಾರ-ವಹಿವಾಟು ನಡೆಸುವ ಪುರುಷ ಪ್ರಧಾನ ಸಮಾಜದಿಂದ ಮಣಿಪುರವೂ ಹೊರತಲ್ಲ. ಹಾಗಿದ್ದೂ, ಶತಮಾನದ ಹಿಂದೆಯೇ ಮಹಿಳೆಯರು ವ್ಯಾಪಾರದ ಚುಕ್ಕಾಣಿ ಹಿಡಿಯಲು ಕಾರಣ ಸಮಾನತೆಯಲ್ಲ, ಅನಿವಾರ್ಯತೆ! ರಾಜರ ಆಳ್ವಿಕೆಯ ಹದಿನಾರನೇ ಶತಮಾನದಲ್ಲಿ ಮಣಿಪುರದಲ್ಲಿಲಾಲಪ್ಕಾಪಾ’ ಎಂಬ ಕ್ರೂರ ಪದ್ಧತಿ ಜಾರಿಯಲ್ಲಿತ್ತು. ಇದರ ಪ್ರಕಾರ ಹದಿನೆಂಟರಿಂದ ಅರವತ್ತು ವರ್ಷದ ಪುರುಷರು ನಲವತ್ತು ದಿನಗಳ ಕೆಲಸದ ನಂತರ ಹತ್ತು ದಿನ ಪುಕ್ಕಟೆಯಾಗಿ ದೂರ ದೂರದ ಗದ್ದೆಗಳಲ್ಲಿ ಕೆಲಸ ಮಾಡಬೇಕಾಗುತ್ತಿತ್ತು. ಇದರೊಂದಿಗೇ ಆಯಕಟ್ಟಿನ ಜಾಗದಲ್ಲಿದ್ದು ಬರ್ಮಾ, ಚೀನಾಕ್ಕೆ ಅತ್ಯಂತ ಸಮೀಪವಾಗಿರುವುದರಿಂದ ಯುದ್ಧಗಳು ಸರ್ವೇ ಸಾಮಾನ್ಯ. ಪ್ರತೀ ಬಾರಿ ಮನೆಯ ಪುರುಷರು ಕಡ್ಡಾಯವಾಗಿ ಯುದ್ಧಕ್ಕೆ ಹೋಗಲೇಬೇಕಾದ ಇಲ್ಲಿನ ಗತಿ? ತಮ್ಮ ಪಾಡಿಗೆ ತಾವು ಅಡಿಗೆ, ಗದ್ದೆ ಕೆಲಸ, ಮನೆಯಲ್ಲಿ ಬಟ್ಟೆ ನೇಯುತ್ತಿದ್ದ ಶ್ರಮಿಕ ಮಹಿಳೆಯರಿಗೆ ಸ್ವಂತದ ಗದ್ದೆ – ಹೊಲದ ಪೂರ್ಣ ಹೊಣೆ. ಗೃಹಕೃತ್ಯದ ಜತೆ ಸಂಸಾರ ನಿರ್ವಹಣೆಯ ಭಾರ. ಬೆಳೆದಿದ್ದೇನೋ ಸರಿ, ಆದರೆ ಮಾರುವುದೆಲ್ಲಿ? ನೇಯ್ದ ಬಟ್ಟೆಯನ್ನು ಕೊಳ್ಳುವವರ್ಯಾರು? ಆದಾಯವಿಲ್ಲದೇ ಮನೆ ನಡೆಸುವುದೆಂತು? ಈ ಎಲ್ಲಾ ಪ್ರಶ್ನೆಗಳಿಗೆ ಮಹಿಳೆಯರು ಕಂಡುಕೊಂಡ ದಾರಿ `ಇಮಾ ಕೈತೆಲ್'.

ತಾವು ಬೆಳೆದದ್ದನ್ನು ತಾವೇ ಮಾರಿ ಸಂಸಾರ ತೂಗಿಸುವ ಸಲುವಾಗಿ ಶುರುವಾಯಿತು ತಾಯಿಯರ ಪ್ರಯತ್ನ. ಹಾಗೆ ಆರಂಭವಾದದ್ದು ಮಹಿಳಾ ಸಮಾನತೆ, ಸ್ವಾವಲಂಬನೆ ಮತ್ತು ಸಬಲೀಕರಣಕ್ಕೊಂದು ಅತ್ಯುತ್ತಮ ಸಾಕ್ಷಿ. ಬೆಳಿಗ್ಗೆ ಒಂಭತ್ತರಿಂದ ಸಂಜೆ ಏಳರವರೆಗೆ ತೆರೆದಿರುವ ಇಮಾ ಕೈತೆಲ್ನಲ್ಲಿ ಎಲ್ಲವೂ ಲಭ್ಯ. ತರಕಾರಿ, ಹಣ್ಣು ಆಹಾರ ಪದಾರ್ಥಗಳದ್ದು ಒಂದು ಭಾಗವಾದರೆ ಇನ್ನುಳಿದ ವಸ್ತುಗಳದ್ದು ಬೇರೆಯೇ ವಿಭಾಗ. ಮಣಿಪುರಿ ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಬಟ್ಟೆ, ಉಲ್ಲನ್, ಬಿದಿರಿನ ಅಲಂಕಾರಿಕ ವಸ್ತುಗಳು, ಆಭರಣಗಳು ಹೀಗೆ ತರಹೇವಾರಿ ವಸ್ತುಗಳು. ಆಹಾರ ವಿಭಾಗದಲ್ಲಿ ಚಿತ್ರ-ವಿಚಿತ್ರ ಹಣ್ಣು, ಖಾದ್ಯಗಳು. ಅಲ್ಲಿನ ಜನರ ನೆಚ್ಚಿನ ಖಾದ್ಯ ಒಣಗಿಸಿದ ಮೀನು, ಚಟ್ನಿ, ಕಳಲೆಗಂತೂ (ಎಳೆ ಬಿದಿರು) ಎಲ್ಲಿಲ್ಲದ ಬೇಡಿಕೆ. ಮಧ್ಯ ವಯಸ್ಕ ಮಹಿಳೆಯರೇ ಹೆಚ್ಚಾಗಿರುವ ಇಮಾ ಕೈತೆಲ್ನಲ್ಲಿ ಬಹಳಷ್ಟು ಜನರ ವಿದ್ಯಾಭ್ಯಾಸ ಪ್ರಾಥಮಿಕ ಶಿಕ್ಷಣಕ್ಕೆ ಮೊಟಕು. ಆದರೆ ಮಣಿಪುರಿ ಭಾಷೆಯ ಜತೆ ಇಂಗ್ಲೀಷ್ ಅರ್ಥವಾಗಬಲ್ಲದು. ನಗುನಗುತ್ತಲೇ, ಚೌಕಾಶಿಗೆ ಬಗ್ಗದೇ ಚಕ ಚಕ ವ್ಯಾಪಾರ ನಡೆಸಿ, ಮನೆ-ಮಕ್ಕಳನ್ನು ತಮ್ಮ ಸಂಪಾದನೆಯಲ್ಲಿ ನಿರ್ವಹಿಸುವ ಸ್ವಾವಲಂಬಿ ಸುಂದರಿಯರಿವರು! ಆಶ್ಚರ್ಯವೆಂದರೆ ಸಾವಿರಾರು ಮಹಿಳೆಯರು ಒಟ್ಟಿಗೇ ವ್ಯಾಪಾರ ಮಾಡಿದರೂ ಎಲ್ಲೂ ಜಗಳ-ಗಲಾಟೆಗೆ ಆಸ್ಪದವಿಲ್ಲ. ಎಲ್ಲಾ ಮಹಿಳೆಯರೂ ಕೆಲವೊಂದು ಅಲಿಖಿತ ನಿಯಮಗಳನ್ನು ಪಾಲಿಸಲೇಬೇಕು. ಯಾರಿಗೆ ಏನೇ ತೊಂದರೆಯಾದರೂ ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಲೇಬೇಕು. ಒಂದು ವಿಧದ ವಸ್ತು ಮಾರುವವರು ಇದ್ದಕ್ಕಿದ್ದಂತೆ ಇನ್ನೊಂದನ್ನು ಮಾರುವಂತಿಲ್ಲ. ಹೀಗೆ ಹೆಸರಿಲ್ಲದಿದ್ದರೂ ಅತ್ಯಂತ ಪ್ರಬಲ ಮಹಿಳಾ ಸಂಘಟನೆ ಇವರದ್ದು.

ಇಲ್ಲಿನ ಮಾರುಕಟ್ಟೆಯಿಂದ ಸರ್ಕಾರಕ್ಕೆ ಆದಾಯ ಬರುವುದಂತೂ ಸರಿ, ಜತೆಗೆ ಇದು ಜನಪ್ರಿಯ ಪ್ರವಾಸೀ ಕೇಂದ್ರವೂ ಹೌದು. ಹೀಗಾಗಿ ಎರಡು ಸಾವಿರದ ಹತ್ತರಲ್ಲಿ ಹಳೆಯ ಬಜಾರ್ನ ನವೀಕರಣ ಕಾರ್ಯವನ್ನು ಸರ್ಕಾರ ಕೈಗೊಂಡಿತು. ಇಕ್ಕಟ್ಟು, ಬೇಸಿಗೆಯ ಅತಿ ಬಿಸಿ, ಚಳಿಗಾಲದ ಅತಿ ಚಳಿ ಇವುಗಳಿಂದ ಸ್ವಲ್ಪ ಮಟ್ಟಿಗೆ ಪರಿಹಾರ ದೊರಕಿದೆ. ಆದರೂ ಆಗಾಗ್ಗೆ ನಡೆಯುವ ಬಂದ್, ದೊಂಬಿ ಮತ್ತು ವಾಹನ ದಟ್ಟಣೆ ಇವರ ವ್ಯಾಪಾರಕ್ಕೆ ದೊಡ್ಡ ಅಡ್ಡಿಗಳು. ಎರಡುಸಾವಿರದ ಹದಿನಾರರಲ್ಲಿ ಇಂಫಾಲದಲ್ಲಿ ನಡೆದ ಭೂಕಂಪದಿಂದ ಈ ಬಜಾರ್ನ ಅನೇಕ ಭಾಗ ಹಾನಿಗೊಂಡಿತ್ತು. ಮಾರಲು ಸರಿಯಾದ ಸ್ಥಳ ಇಲ್ಲದೇ ಬೆಳೆದ ವಸ್ತುಗಳು ಹಾಳಾಗುತ್ತಿವೆ, ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಮಹಿಳೆಯರು ಪ್ರತಿಭಟನೆ ಕೈಗೊಂಡಿದ್ದರು. ನಂತರ ಸರ್ಕಾರ ಕ್ರಮ ಕೈಗೊಂಡಿದ್ದರೂ ಇನ್ನೂ ಆಗಬೇಕಾದ ಕೆಲಸಗಳು ಸಾಕಷ್ಟಿವೆ ಎಂಬುದು ಇಲ್ಲಿನ ಮಹಿಳಾ ವ್ಯಾಪಾರಿಗಳ ಅಭಿಪ್ರಾಯ. ದಿನವೂ ಹೊತ್ತು ಮೂಡುವ ಮುನ್ನವೇ ಬಂದಿಳಿಯುವ ಮಹಿಳೆಯರಿಗೆ ಕತ್ತಲಾಗುವ ಮುನ್ನ ತಮ್ಮ ವಸ್ತುಗಳನ್ನು ಮಾರುವ ಮತ್ತು ಮನೆಗೆ ಮರಳುವ ಚಿಂತೆ. ಆದರೂ ಊಟದ ಸಮಯದಲ್ಲೊಂದಿಷ್ಟು ಬಿಡುವು. ಆಗ ಪರಸ್ಪರ ಕ್ಷೇಮ ಸಮಾಚಾರ, ಸಂಸಾರದ ಸುಖ-ದುಃಖ, ವಸ್ತುವಿನ ಧಾರಣೆಯಷ್ಟೇ ಚರ್ಚೆಯಾಗುವ ವಿµಯಗಳಲ್ಲ. ಸುತ್ತಲಿನ ಆಗು-ಹೋಗು, ರಾಜಕೀಯದ ವಿಶ್ಲೇಷಣೆ. ಹಾಗಾಗಿಯೇ ಇದು ಬಜಾರ್ ಆದರೂ ಕೇವಲ ವ್ಯಾಪಾರದ ಸ್ಥಳವಲ್ಲ. ಮಹಿಳೆಯರು ಸಾಮೂಹಿಕವಾಗಿ ಸಂಘಟಿತರಾಗುವ, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಶಕ್ತಿ ಕೇಂದ್ರವೂ ಹೌದು. ಹಾಗೆ ನೋಡಿದರೆ ಸ್ವಾತಂತ್ರ್ಯ ಪೂರ್ವದಿಂದಲೂ ಮಹಿಳೆಯರ ದಂಗೆ ರೂಪುಗೊಂಡ ಜಾಗವಿದು.

ಮಣಿಪುರದ ಮಹಿಳೆಯರು ಆಡಳಿತ, ಬ್ರಿಟಿಷರ ದೌರ್ಜನ್ಯದ ವಿರುದ್ಧ ದನಿ ಎತ್ತುತ್ತಲೇ ಬಂದಿದ್ದಾರೆ. ಸಾವಿರದ ಒಂಭೈನೂರಾ ನಾಲ್ಕರಲ್ಲಿ ಬೆಂಕಿಯಿಂದ ಸುಟ್ಟುಹೋಗಿದ್ದ ಸರ್ಕಾರಿ ಅಧಿಕಾರಿಗಳ ಮನೆ ಕಟ್ಟಲು ಪುರುಷರೆಲ್ಲಾ ಕೆಲಸ ಮಾಡಬೇಕೆಂದು ಬ್ರಿಟಿಷ್ ಪ್ರತಿನಿಧಿಯಿಂದ ಆದೇಶ ಹೊರಡಿಸಲಾಗಿತ್ತು. ಅದನ್ನು ಒಪ್ಪದಿದ್ದವರನ್ನು ತೀವ್ರವಾಗಿ ಶಿಕ್ಷಿಸಲಾಗುತ್ತಿತ್ತು. ಈ ಬಲವಂತದ ಬಿಟ್ಟಿ ಕೂಲಿ ವಿರೋಧಿಸಿ ಸುಮಾರು ಐದು ಸಾವಿರ ಮಹಿಳೆಯರು ಒಂದು ವಾರ ಕಾಲ ತೀವ್ರ ಪ್ರತಿಭಟನೆ ನಡೆಸಿದ್ದರು. ಪುರುಷರ ಪರವಾಗಿ ಹೋರಾಡಿ ಅದನ್ನು ಯಶಸ್ವಿಯಾಗಿ ಸಾಧಿಸಿದವರು ಮಹಿಳೆಯರು!! ಸಾವಿರದ ಒಂಭೈನೂರಾ ಮೂವತ್ತೊಂಭತ್ತು, ಡಿಸೆಂಬರ್ ಹನ್ನೆರಡರಂದು ಮತ್ತೊಂದು ಮಹಿಳಾ ಹೋರಾಟ. ಮಣಿಪುರಿಗಳ ಮುಖ್ಯ ಆಹಾರ ಮತ್ತು ಬೆಳೆ ಅಕ್ಕಿ. ಮಣಿಪುರದಲ್ಲಿ ಬೆಳೆದ ಅಕ್ಕಿಯನ್ನು ಹೊರಗಿನ ವ್ಯಾಪಾರಿಗಳು ಬ್ರಿಟಿಷ್ ಅಧಿಕಾರಿಗಳ ಸಹಾಯದಿಂದ ಭಾರತದ ಇತರ ರಾಜ್ಯಗಳಿಗೆ ರಫ್ತು ಮಾಡುತ್ತಿದ್ದರು. ಇದರಿಂದ ರಾಜ್ಯದಲ್ಲಿ ಅಕ್ಕಿಯ ತೀವ್ರ ಕೊರತೆ ಕಾಡಿತು. ಹೀಗೆ ಮಾಡುವುದರ ವಿರುದ್ಧ ನಿಷೇಧ ಹೇರಬೇಕು ಎಂದು ಒತ್ತಾಯಿಸಿ ಸಾವಿರಾರು ಮಹಿಳೆಯರು ದರ್ಬಾರ್ ಹಾಲ್ನತ್ತ ಸಾಗಿ ಪ್ರತಿಭಟಿಸಿದರು. ಆಗಲೂ ಎಲ್ಲರೂ ಒಟ್ಟಾಗಿ ಸೇರಿ ಸಮಾಲೋಚನೆ ನಡೆಸಿದ್ದು ಇದೇ ಮಾರುಕಟ್ಟೆಯಲ್ಲಿ! ಮಹಿಳೆಯರೇ ಮುಂದಾಗಿದ್ದ ಈ ಎರಡೂ ಐತಿಹಾಸಿಕ ಚಳವಳಿಗಳು ಚರಿತ್ರೆಯಲ್ಲಿ ``ನೂಪಿ ಲಾನ್'' ಎಂದೇ ಪ್ರಖ್ಯಾತಿಯಾಗಿದೆ (ನೂಪಿ - ಮಹಿಳೆ, ಲಾನ್ - ಚಳವಳಿ).

ಈ ಚಳವಳಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಗುಂಡೇಟು, ದಾಳಿಗೆ ಪ್ರಾಣ ತೆತ್ತ ಮಹಿಳೆಯರು ನೂರಾರು. ಇಂಫಾಲಾದಲ್ಲಿ ಅವರ ಸ್ಮರಣಾರ್ಥ ಮೆಮೋರಿಯಲ್ ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ. ಬಿಳಿಯ ಕಟ್ಟಡದ ಮೇಲೆ ಕೆಂಪು ಬಣ್ಣದ ವೇದಿಕೆ ಮೇಲೆ ಬ್ರಿಟಿಷ್ ಸೈನಿಕರನ್ನು ಎದುರಿಸುವ ಮಹಿಳೆಯರ ಕಪ್ಪು ಶಿಲ್ಪಗಳು ಸುರಿದ ನೆತ್ತರು ಮತ್ತು ಬೆವರಿನ ಕತೆ ಹೇಳುತ್ತವೆ. ಶ್ರಮಜೀವಿ ಮಹಿಳೆಯರು ಸಂಘಟಿತರಾಗಿ, ಸ್ವಾವಲಂಬಿಗಳಾಗಿ, ಸಮಾನತೆಯನ್ನು ಸಾಧಿಸಿರುವುದನ್ನು ಪ್ರತ್ಯಕ್ಷವಾಗಿ ತೋರಿಸುವ ಸ್ಥಳ `ಇಮಾ ಕೈತೆಲ್’. ಈಗ ಇಲ್ಲೂ ಕರೋನಾದ ಹೆದರಿಕೆ. ಮಾರ್ಚ್ನಿಂದ ಈ ಮಾರುಕಟ್ಟೆಯನ್ನು ಮುಚ್ಚಲಾಗಿದೆ. ನಿಜ, ಐವತ್ತರಿಂದ ಎಪ್ಪತ್ತರ ಮಹಿಳೆಯರೇ ಹೆಚ್ಚಿರುವ ಇಲ್ಲಿ ಅಂಗಡಿಗಳೂ ತೀರಾ ಹತ್ತಿರವಾಗಿವೆ. ಸೋಂಕು ಹರಡುವ ಸಾಧ್ಯತೆ ಅತೀ ಹೆಚ್ಚು. ಜನರೂ ಖರೀದಿಗೆ ಮುಂದಾಗುತ್ತಿಲ್ಲ.ಇವೆಲ್ಲದರಿಂದ ಈ ಮಾರುಕಟ್ಟೆಯನ್ನೇ ನಂಬಿರುವ ಮಹಿಳೆಯರ ಸ್ಥಿತಿ ಅತಂತ್ರವಾಗಿದೆ. ಸರ್ಕಾರದಿಂದ ಶೇಕಡಾ ಎಪ್ಪತ್ತರಷ್ಟು ಜನರಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ.ಆದರದು ಯಾವುದಕ್ಕೂ ಸಾಲುತ್ತಿಲ್ಲ, ಬದುಕು ದುಸ್ತರವಾಗಿದೆ. ಕರೋನಾ ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ತೆಗೆಯುವ ಬಗ್ಗೆ ಮಹಿಳಾ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಾಗಿತ್ತು. ಆದರೆ ತಮಗೆ ಕಷ್ಟವಾದರೂ ಪರವಾಗಿಲ್ಲ, ಮಾರುಕಟ್ಟೆ ತೆಗೆದು ವ್ಯಾಪಾರ ನಡೆಸಿ ಜರಿಗೆ ಸೋಂಕು ಹರಡಬಾರದು ಎಂಬ ಉದ್ದೇಶದಿಂದ ಇನ್ನೂ ಕೆಲವು ದಿನ ಕಾದು ನೋಡುವ ನಿರ್ಧಾರಕ್ಕೆ ಇಮಾಗಳು ಬಂದಿದ್ದಾರೆ.

‘ವ್ಯಾಪಾರ ಮುಖ್ಯ, ಆದರೆ ಎಲ್ಲರ ಆರೋಗ್ಯ ಇನ್ನೂ ಮುಖ್ಯ’ ಎನ್ನುವ ಈ ಅಮ್ಮಂದಿರ ‘ಇಮಾ ಕೈತಲ್’ ಎಲ್ಲ ಸುರಕ್ಷಿತ ಕ್ರಮಗಳೊಂದಿಗೆ ಬೇಗನೇ ಪುನರಾರಂಭವಾಗಲಿ ಎಂಬ ಆಶಯ ನಮ್ಮದು…

ಡಾ. ಕೆ.ಎಸ್. ಚೈತ್ರಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *