ಲೋಕದ ಕಣ್ಣು / ಮಸಾಯಿಗಳ ವಿಚಿತ್ರ ಲೋಕ- ಡಾ. ಕೆ.ಎಸ್. ಚೈತ್ರಾ
ತಾಂಜಾನಿಯಾ – ದನ-ಕರುಗಳ ಆರೈಕೆ, ಮೇವು, ಎಲ್ಲವೂ ಮಹಿಳೆಯರ ಕೆಲಸ; ಬೆಳ್ಳಂಬೆಳಿಗ್ಗೆಯೇ ಹಾಲು ಕರೆದು, ದನ-ಕರುಗಳನ್ನು ಮೇಯಿಸಲು ಕಾಡಿಗೆ ಕರೆದೊಯ್ಯುವ ಕೆಲಸ ಮಹಿಳೆಯರಿಂದ ಶುರು. ಆದರೆ ಅವುಗಳ ಒಡೆತನ ಮಾತ್ರ ಪುರುಷರದ್ದು. ಪುರುಷಪ್ರಧಾನವಾದ ತಾಂಜಾನಿಯಾ ಮಸಾಯಿಗಳಲ್ಲಿ ಮಹಿಳೆಗೆ ನೆಲೆ-ಬೆಲೆ ಎರಡೂ ಇಲ್ಲ ಎಂಬುದೇ ಸರಿ. ಹೆಣ್ಣುಮಕ್ಕಳು ವಿದ್ಯೆ ಕಲಿತರೆ ಮುಂದುವರಿದು ಹಾಳಾಗುತ್ತಾರೆ ಎಂಬ ಹೆದರಿಕೆ. ಏನಿದ್ದರೂ ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕಳಿಸುವುದರತ್ತ ಯೋಚನೆ. ಪರರ ಮನೆಗೆ ಹೋಗುವ ವಸ್ತು ಎಂಬ ಉದ್ದೇಶದಿಂದ ಹುಟ್ಟಿದ ಮನೆಯಲ್ಲಿ ನಿರ್ಲಕ್ಷ್ಯ; ಇರುವುದೇ ಮನೆ ಕಟ್ಟಲು, ಮಕ್ಕಳನ್ನು ಸಾಕಲು ಎಂಬ ಭಾವನೆಯಿಂದ ಗಂಡನ ಮನೆಯಲ್ಲೂ ತಿರಸ್ಕಾರ. ಹೀಗೆ ಕಾಣಲು ಈ ಪ್ರಪಂಚದ ಹುಟ್ಟಿನಲ್ಲಿ ಅವರು ನಡೆದುಕೊಂಡ ರೀತಿ ಎಂಬುದಕ್ಕೆ ಕತೆಯನ್ನೂ ಹೇಳುತ್ತಾರೆ…
ತಾಂಜಾನಿಯಾದ ಉತ್ತರ ಭಾಗದಲ್ಲೊಂದು ಪುಟ್ಟ ಹಳ್ಳಿ. ಹುಲ್ಲು – ಗಿಡ ಸವರಿ ಮಟ್ಟಸವಾದ ನೆಲದಲ್ಲಿ ವೃತ್ತಾಕಾರವಾಗಿ ಕಟ್ಟಲ್ಪಟ್ಟ ಹತ್ತಾರು ಮಣ್ಣು – ಹುಲ್ಲಿನ ಮನೆಗಳು. ಮನೆಯ ಸುತ್ತ ಕಾಡುಪ್ರಾಣಿಗಳು ಬರದಂತೆ ಮುಳ್ಳಿನ ಬೇಲಿ. ಮುಳ್ಳು ಬೇಲಿ ಕಟ್ಟುವ ಕೆಲಸ ಪುರುಷರದ್ದಾದರೆ, ಮನೆ ಕಟ್ಟುವ ಕೆಲಸ ಮಹಿಳೆಯರದ್ದು. ಮಣ್ಣು, ಒಣ ಕಡ್ಡಿ, ಹುಲ್ಲು, ಸೆಗಣಿ, ಗೋಮೂತ್ರ ಎಲ್ಲಾ ಕಲೆಸಿ ಮಹಿಳೆಯರು ಒಟ್ಟಿಗೇ ಕುಳಿತು ಕೈಯ್ಯಿಂದ ತಟ್ಟುತ್ತಾರೆ. ಕಲಸುವ ಹದ ಸರಿ ಇರಬೇಕು, ಏಕೆಂದರೆ ಚಳಿ-ಮಳೆ-ಗಾಳಿ ತಡೆಯುವ ಗಟ್ಟಿ ಮನೆಗಳಾಗಬೇಕು. ಒಂದೋ-ಎರಡೋ ಪುಟ್ಟ ಕೊಠಡಿಯುಳ್ಳ ಮನೆಗಳಿವು. ಈ ಹಳ್ಳಿಗಳಿಗೆ ಮಾನ್ಯಟ್ಟ ಎಂದು ಕರೆಯಲಾಗುತ್ತದೆ. ಹಳ್ಳಿಯಲ್ಲಿ ನೂರರ ಒಳಗೇ ಜನವಸತಿಯಾದರೆ ಜಾನುವಾರುಗಳ ಸಂಖ್ಯೆ ಸಾವಿರಕ್ಕೂ ಹೆಚ್ಚು. ತಾವು `ದನಗಳ ಜನ’ ಎಂದು ಹೆಮ್ಮೆಯಿಂದ ನುಡಿಯುವ ಇವರು ಆಫ್ರಿಕಾದ ಮಸಾಯಿ ಬುಡಕಟ್ಟು ಜನಾಂಗ.
ಮಸಾಯಿಗಳು
ಜಾನುವಾರುಗಳನ್ನು ಸಾಕುತ್ತಾ, ಅವುಗಳ ಮೇವು, ನೀರಿಗಾಗಿ ಕಾಡು-ಹುಲ್ಲುಗಾವಲು ಅಲೆಯುವ ಪಶುಗಾಹಿಗಳು ಕುರುಬಗಾಹಿಗಳು, ಮಸಾಯಿಗಳು. ಕೀನ್ಯಾದ ದಕ್ಷಿಣ ಭಾಗ ಮತ್ತು ತಾಂಜಾನಿಯಾದಲ್ಲಿ ಹೆಚ್ಚಾಗಿರುವ ಇವರ ಸಂಖ್ಯೆ ಸುಮಾರು ಒಂದೂವರೆ ಮಿಲಿಯನ್ ಎಂದು ಅಂದಾಜು ಮಾಡಲಾಗಿದೆ. ಮಾ ಮತ್ತು ಸ್ವಾಹಿಲಿ ಭಾಷೆ ಮಾತನಾಡುವ ಇವರಲ್ಲಿ ಇತ್ತೀಚಿನವರಿಗೆ ಇಂಗ್ಲೀಷ್ ಕೂಡಾ ತಿಳಿದಿದೆ. ಬದಲಾದ ಕಾಲಘಟ್ಟದಲ್ಲಿಯೂ ತಮ್ಮದೇ ಆದ ಪದ್ಧತಿ-ಸಂಸ್ಕøತಿಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸಮುದಾಯವಿದು. ಆಫ್ರಿಕಾದ ಬುಡಕಟ್ಟು ಜನಾಂಗಗಳಲ್ಲೆಲ್ಲಾ ಅತ್ಯಂತ ಪ್ರಸಿದ್ಧಿ ಪಡೆದವರು ಮಸಾಯಿಗಳು. ಸೌಂದರ್ಯ ಮತ್ತು ಸ್ವಭಾವ ಎರಡೂ ಇದಕ್ಕೆ ಕಾರಣ. ಮಹಿಳೆಯರಂತೂ ಹೊಳೆವ ಕಡುಕಪ್ಪಿನ ಸುರಸುಂದರಿಯರು! ಕಡೆದಿಟ್ಟ ಮೈಕಟ್ಟು, ಬೊಜ್ಜಿಲ್ಲದ ನೀಳ ದೇಹ, ಬಿಳಿ ಹಲ್ಲು, ಫಳ ಫಳ ಮಿನುಗುವ ಕಣ್ಣು, ಇವು ಹುಟ್ಟಿನಿಂದಲೇ ಬಂದ ಬಳುವಳಿ. ಅದರ ಜತೆ ಮಾಡಿಕೊಳ್ಳುವ ಅಲಂಕಾರವೂ ವಿಶಿಷ್ಟ. ಕಡು ಕೆಂಪು / ಕಿತ್ತಲೆ ಬಣ್ಣದ ಶುಕ ಎಂಬ ಚೌಕಳಿ ಬಟ್ಟೆ, ವಿಧವಿಧವಾದ ಮಣಿ ಅಲಂಕಾರ, ಕಿವಿ ಜೋಲುವಷ್ಟು ಭಾರದ ಕರ್ಣಾಭರಣ, ತಲೆಗೆ-ಕೈಗೆ ಅಗಲದ ಪಟ್ಟಿ ಹೀಗೆ ಸೌಂದರ್ಯದ ಸಂಪೂರ್ಣ ಸಾಕ್ಷಾತ್ಕಾರ ಇವರಲ್ಲಿ !
ದನಗಳೇ ಸರ್ವಸ್ವ
ಯೋಧ ಜನಾಂಗ ಎಂದೇ ಹೆಸರುವಾಸಿಯಾಗಿರುವ ಮಸಾಯಿಗಳು ಬರೀ ಬಿಲ್ಲು-ಬಾಣದಿಂದಲೇ ಚಿರತೆ, ಹುಲಿ ಕೊಲ್ಲಬಲ್ಲರು. ಹಿಂದಿನ ಕಾಲದಲ್ಲಿ ಮಸಾಯ್ ಯುವಕ ಮದುವೆಯಾಗುವ ಮುನ್ನ ಸಿಂಹವನ್ನು ಕೊಲ್ಲುವುದು ಕಡ್ಡಾಯವಾಗಿತ್ತು. ಈಗ ಬೇಟೆಯ ನಿಷೇಧ ಮತ್ತು ಸಿಂಹಗಳ ಸಂಖ್ಯೆಯಲ್ಲಿ ಇಳಿಕೆಯಾಗಿರುವುದರಿಂದ ಆ ನಿಯಮ ಸಡಿಲಿಸಲಾಗಿದೆ. ರೀತಿ-ರಿವಾಜುಗಳನ್ನು ತಪ್ಪದೇ ಪಾಲಿಸುವ ಮಸಾಯಿಗಳು ಮುಂಗೋಪಿಗಳು. ತಮ್ಮ ಸಂಪ್ರದಾಯಕ್ಕೆ ಯಾರಾದರೂ ಅಡ್ಡ ಬಂದರೆ ಸಹಿಸದವರು, ಪ್ರಾಣ ತೆಗೆಯಲೂ ಹಿಂಜರಿಯುವವರಲ್ಲ. ಇದೆಲ್ಲದರ ಜತೆ ಎಲ್ಲೇ ದನ-ಕರುಗಳಿದ್ದರೂ ಜಗಳವಾಡಿ ಅದನ್ನು ತಮ್ಮದಾಗಿ ಮಾಡಿಕೊಳ್ಳುವ ಪ್ರಯತ್ನ ಇವರದ್ದು! ಮಸಾಯಿಗಳ ಪ್ರಕಾರ ಮಳೆ ದೇವರಾದ ಎಂಗಾ, ಭೂಮಿ ಮತ್ತು ಆಕಾಶ ಬೇರೆಯಾದಾಗ ತನ್ನ ಮೂವರು ಮಕ್ಕಳಿಗೆ ಸಂಪತ್ತನ್ನು ಹಂಚಿದ. ಮಸಾಯಿಗಳಿಗೆ ಜಗತ್ತಿನ ಎಲ್ಲಾ ದನ-ಕರುಗಳ ಜವಾಬ್ದಾರಿ ವಹಿಸಿದ. ಹಾಗಾಗಿ ಈಗಲೂ ಅವುಗಳ ಹೊಣೆ ತಮ್ಮದೇ ಎಂದು ಬಲವಾಗಿ ನಂಬಿರುವ ಮಸಾಯಿಗಳಿಗೆ ದನ -ಕರುಗಳೇ ಸರ್ವಸ್ವ.
ಪ್ರಪಂಚದೆಲ್ಲೆಡೆ ಹಣದಿಂದ ವ್ಯಕ್ತಿಯ ಸ್ಥಾನಮಾನ ನಿರ್ಧರಿಸಲ್ಪಟ್ಟರೆ ಮಸಾಯಿಗಳಲ್ಲಿ ಹಾಗಲ್ಲ. ದನಗಳ ಮತ್ತು ಮಕ್ಕಳ ಸಂಖ್ಯೆ ವ್ಯಕ್ತಿಯ ಪ್ರತಿಷ್ಠೆಯ ಅಳತೆಗೋಲು. ಐವತ್ತಕ್ಕೂ ಕಡಿಮೆ ದನಗಳಿದ್ದರೆ ಬಡವರು, ಸಾವಿರಕ್ಕೂ ಹೆಚ್ಚಿದ್ದರೆ ಶ್ರೀಮಂತರು! ದಿನನಿತ್ಯದ ಇವರ ಪ್ರಾರ್ಥನೆ `ದೇವರು ನಮಗೆ ದನ-ಕರು ಮತ್ತು ಮಕ್ಕಳನ್ನು ಕರುಣಿಸಲಿ’! ಇವರ ಜೀವನಕ್ಕೆ ಬೇಕಾಗುವ ಬಟ್ಟೆ, ಪಾತ್ರೆ, ಕಾಳು, ಮಣಿ ಇವೆಲ್ಲವನ್ನೂ ಕೊಳ್ಳಲು ವಿನಿಮಯವಾಗುವುದು ದನ-ಕರುಗಳೇ! ಆಹಾರ ಪದ್ಧತಿಯಲ್ಲೂ ದನದ ಹಾಲಿಗೆ ಪ್ರಮುಖ ಸ್ಥಾನ. ಹಸಿ ಹಾಲು, ಮೊಸರು, ಬೆಣ್ಣೆ, ಸಿಹಿ ಚಹಾ ಹೀಗೆ ದಿನಕ್ಕೆ ಪ್ರತಿಯೊಬ್ಬ ವ್ಯಕ್ತಿಯ ಸರಾಸರಿ ಹಾಲಿನ ಬಳಕೆ ಮೂರು ಲೀಟರ್. ದನವಿಲ್ಲದೇ ಮಸಾಯಿಗಳ ಜೀವನವಿಲ್ಲ. ಸೆಗಣಿ, ಮನೆ ಕಟ್ಟಲು ಔಷಧಿಗೆ ಬೇಕೇ ಬೇಕು. ದನದ ಮಾಂಸ ಆಹಾರಕ್ಕಾಗಿ, ಕೊಂಬನ್ನು ಪಾತ್ರೆಯಾಗಿ ಗೊರಸು-ಮೂಳೆಯಿಂದ ಆಭರಣ, ಚರ್ಮದಿಂದ ಚಪ್ಪಲಿ, ಬಟ್ಟೆ, ಹಗ್ಗ ಹೀಗೆ ಪ್ರತಿಯೊಂದೂ ಉಪಯುಕ್ತವೇ. ಮಗಳನ್ನು ಮದುವೆ ಮಾಡಿ ಕೊಡುವಾಗ ವಧುದಕ್ಷಿಣೆಯಾಗಿ ದನಗಳನ್ನು ನೀಡಿದಷ್ಟೂ ವಧುವಿನ ತಂದೆಗೆ ಖುಷಿ, ಪ್ರತಿಷ್ಠೆ ಹೆಚ್ಚು.

ದನದ ರಕ್ತ ಹೀರುವಿಕೆ
ಇವೆಲ್ಲದರ ಜತೆ ದನದ ರಕ್ತ ಹೀರುವಿಕೆ ಇವರಲ್ಲಿ ರೂಢಿಯಲ್ಲಿರುವ ವಿಚಿತ್ರ ಪದ್ಧತಿ. ದನದ ಕತ್ತಿಗೆ ಪಟ್ಟಿ ಹಾಕಿ, ಮುಖ್ಯ ರಕ್ತನಾಳಕ್ಕೆ ಬಾಣ ಬಿಡಲಾಗುತ್ತದೆ. ಝಲ್ಲನೆ ಚಿಮ್ಮಿ ಹರಿವ ಬಿಸಿ ನೆತ್ತರಿಗೆ ಬಾಯಿಟ್ಟು ರಕ್ತವನ್ನು ಹೀರಲಾಗುತ್ತದೆ. ಉಳಿದದ್ದು ಉದ್ದನೆಯ ಅಲಂಕೃತ ಸೋರೆಬುರುಡೆಯಲ್ಲಿ ಸಂಗ್ರಹ. ದನದ ರಕ್ತ ಅತ್ಯಂತ ಪೌಷ್ಟಿಕವಾದದ್ದು. ಇದನ್ನು ಕುಡಿದರೆ ದೇಹ ಬಲವಾಗುತ್ತದೆ. ರೋಗ-ರುಜಿನಗಳು ಕಾಡುವುದಿಲ್ಲ. ಹಾಗೆಯೇ ತಣ್ಣಗಿನ ವಾತಾವರಣದಲ್ಲಿ ಬಿಸಿ ನೆತ್ತರು ದೇಹವನ್ನು ಬೆಚ್ಚಗಿರಿಸಿ ಕಾಪಾಡುತ್ತದೆ ಎಂದು ನಂಬಿದ್ದಾರೆ. ಶಕ್ತಿ ವರ್ಧನೆಗಾಗಿ ಮಕ್ಕಳು-ವೃದ್ಧರು ರಕ್ತ ಸೇವಿಸಿದರೆ ಬಾಣಂತಿಯರಿಗೆ ಜನನದ ಸಮಯದಲ್ಲಿ ಉಂಟಾದ ಸುಸ್ತು-ರಕ್ತಸ್ರಾವ ಕಡಿಮೆಯಾಗಲು ಈ ಪೇಯ ನೀಡಲಾಗುತ್ತದೆ. ಮದುವೆಯಂಥ ಸಂಭ್ರಮದ ಆಚರಣೆಯ ಆರಂಭ ರಕ್ತ ಸೇವಿಸುವುದರಿಂದ. ಹಸಿ ರಕ್ತ ಸೇವಿಸುವುದಲ್ಲದೇ, ಅದನ್ನು ಹೆಪ್ಪುಗಟ್ಟಿಸಿ ಕುದಿಸಿ ಅಥವಾ ಹಾಲಿನೊಂದಿಗೆ ಬೆರೆಸಿ ಕುಡಿಯುವುದು ಮಸಾಯಿಗಳ ರೂಢಿ. ಆಶ್ಚರ್ಯವೆಂದರೆ ನೋಡಲು ಹೆದರಿಕೆಯಾದರೂ ಹೀಗೆ ರಕ್ತ ತೆಗೆಯುವುದರಿಂದ ದನಕ್ಕೆ ಪ್ರಾಣಾಪಾಯವಿಲ್ಲ. ಕತ್ತಿನ ಗಾಯ ಆಳವಾಗದಂತೆ ಬಾಣದ ತುದಿಯಲ್ಲಿ ಉಂಗುರವಿರುತ್ತದೆ. ಗಾಯಕ್ಕೆ ಔಷಧ ಲೇಪಿಸಿದ ತಿಂಗಳೊಳಗೆ ಈ ಗಾಯ ಮಾಯುತ್ತದೆ. ಪ್ರತೀ ತಿಂಗಳು ಕೆಲ ದನಗಳ ರಕ್ತವನ್ನು ಸಂಗ್ರಹಿಸಿ ಉಪಯೋಗಿಸಲಾಗುತ್ತದೆ.
ನೆಲೆ-ಬೆಲೆ ಇಲ್ಲದ ಮಹಿಳೆಯರು
ಈ ದನ-ಕರುಗಳ ಆರೈಕೆ, ಅವುಗಳ ಮೇವು, ಪೋಷಣೆ ಎಲ್ಲವೂ ಮಹಿಳೆಯರ ಕೆಲಸ; ಬೆಳ್ಳಂಬೆಳಿಗ್ಗೆಯೇ ಹಾಲು ಕರೆದು, ದನ-ಕರುಗಳನ್ನು ಮೇಯಿಸಲು ಕಾಡಿಗೆ ಕರೆದೊಯ್ಯುವ ಕೆಲಸ ಮಹಿಳೆಯರಿಂದ ಶುರು. ಆದರೆ ಅವುಗಳ ಒಡೆತನ ಮಾತ್ರ ಪುರುಷರದ್ದು. ಹಾಗೆ ನೋಡಿದರೆ ಪುರುಷಪ್ರಧಾನವಾದ ಮಸಾಯಿಗಳಲ್ಲಿ ಮಹಿಳೆಗೆ ನೆಲೆ-ಬೆಲೆ ಎರಡೂ ಇಲ್ಲ ಎಂಬುದೇ ಸರಿ. ಪರರ ಮನೆಗೆ ಹೋಗುವ ವಸ್ತು ಎಂಬ ಉದ್ದೇಶದಿಂದ ಹುಟ್ಟಿದ ಮನೆಯಲ್ಲಿ ನಿರ್ಲಕ್ಷ್ಯ; ಇರುವುದೇ ಮನೆ ಕಟ್ಟಲು, ಮಕ್ಕಳನ್ನು ಸಾಕಲು ಎಂಬ ಭಾವನೆಯಿಂದ ಗಂಡನ ಮನೆಯಲ್ಲೂ ತಿರಸ್ಕಾರ. ಮಹಿಳೆಯರನ್ನು ಹೀಗೆ ಕಾಣಲು ಈ ಪ್ರಪಂಚದ ಹುಟ್ಟಿನಲ್ಲಿ ಅವರು ನಡೆದುಕೊಂಡ ರೀತಿ ಎಂಬುದಕ್ಕೆ ಕತೆಯನ್ನೂ ಹೇಳುತ್ತಾರೆ…

ಮಸಾಯಿಗಳು ಸಮಾನ ಶಕ್ತಿಯ ಒಂದಕ್ಕೊಂದು ಪೂರಕವಾದ ಎರಡು ಪಂಗಡವಾಗಿ ಜನಿಸಿದ್ದರು. ಬರೀ ಮಹಿಳೆಯರ ಮೊರೊಯೊಕ್ ಮತ್ತು ಪುರುಷರದ್ದು ಮೊರ್ವಾಕ್ ಪಂಗಡ. ಮಹಿಳೆಯರು ಜಿಂಕೆ, ಕಡವೆಗಳ ಗುಂಪಿನ ಒಡೆತನ ಹೊಂದಿದ್ದರು. ಜೀಬ್ರಾಗಳು ವಲಸೆಯ ಸಂದರ್ಭದಲ್ಲಿ ಮಹಿಳೆಯರ ವಸ್ತುಗಳನ್ನು ಅಲ್ಲಿಂದಿಲ್ಲಿಗೆ ಹೊತ್ತು ಸಾಗಿಸುತ್ತಿದ್ದವು. ದೈತ್ಯ, ಬಲಿಷ್ಠ ಆನೆಗಳು ಇವರ ಅಧೀನದಲ್ಲಿದ್ದವು. ಮಹಿಳೆಯರು ಮನೆ ಕಟ್ಟುವಾಗ ಆನೆಗಳು ಎತ್ತರದ ಮರಗಳ ದೊಡ್ಡ ರೆಂಬೆಗಳನ್ನು ಮುರಿದು ಸಾಗಿಸಿ ಸಹಾಯ ಮಾಡುತ್ತಿದ್ದವು. ಆನೆಗಳು ಜಿಂಕೆ-ಕಡವೆಗಳ ಕಸ, ಧುಳನ್ನು ಗುಡಿಸಿ ಸ್ವಚ್ಛ ಕೂಡಾ ಮಾಡುತ್ತಿದ್ದವು. ಪುರುಷರಿಗೆ ಸಿಕ್ಕಿದ್ದು ದನ-ಕರು-ಕುರಿಗಳ ಒಡೆತನ. ಮಹಿಳೆಯರು ಪುರುಷರು ಆಗಾಗ್ಗೆ ಕಾಡಿನಲ್ಲಿ ಭೇಟಿಯಾಗುತ್ತಿದ್ದರು. ಅವರ ಕೂಡುವಿಕೆಯಿಂದ ಹುಟ್ಟಿದ ಮಕ್ಕಳು ತಾಯಿಯೊಂದಿಗೇ ವಾಸವಾಗಿರುತ್ತಿದ್ದರು. ಆದರೆ ಪ್ರಾಯ ಪ್ರಬುದ್ಧರಾದ ಕೂಡಲೇ ಗಂಡುಮಕ್ಕಳು ಪುರುಷರ ಪಂಗಡಕ್ಕೆ ಹೋಗುತ್ತಿದ್ದರು.
ಶುರುಶುರುವಿನಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯಿತು. ಕಾಲಕ್ರಮೇಣ ಮಹಿಳೆಯರ ಕಷ್ಟಕರ ಆಜ್ಞೆಗಳನ್ನು ಪಾಲಿಸಿ ಆನೆಗಳಿಗೆ ಸಾಕಾಯಿತು. ಅವು ಹೇಗೋ ತಪ್ಪಿಸಿಕೊಂಡು ಕಾಡಿಗೆ ಹೋದವು. ಜಿಂಕೆ ಕಡವೆಗಳನ್ನು ಮಹಿಳೆಯರು ಸರಿಯಾಗಿ ಸಾಕಲಿಲ್ಲ. ಹರಟೆಯಲ್ಲಿ ತೊಡಗುವುದೇ ಹೆಚ್ಚಾಯಿತು. ಹೀಗಾಗಿ ಅವೂ ಕಾಡು ಸೇರಿದವು. ಕಡೆಗೊಮ್ಮೆ ಮಹಿಳೆಯರು ನೋಡಿದಾಗ ಯಾವ ಪ್ರಾಣಿಯೂ ಅವರ ಬಳಿ ಇರಲಿಲ್ಲ. ಬೇರೆ ದಾರಿ ಕಾಣದೇ ದನ-ಕರು-ಕುರಿಗಳಿದ್ದ ಪುರುಷರ ಬಳಿ ಬಂದರು. ಅವರ ಜತೆ ವಾಸಿಸತೊಡಗಿದರು. ಹೀಗೆ ಸ್ವಾತಂತ್ರ್ಯವಿದ್ದರೂ ಅದನ್ನು ಸರಿಯಾಗಿ ನಿಭಾಯಿಸಲಾರದ ಮಹಿಳೆ ಸಮರ್ಥನಾದ ಪುರುಷರ ಅಧೀನಕ್ಕೆ ಒಳಪಟ್ಟಳು. ಹೀಗಾಗಿ ಮಹಿಳೆಯರಿಗೆ ಆಹಾರ, ವಿದ್ಯೆ, ಹಣ , ಅಧಿಕಾರ, ದನ-ಕರು ಯಾವುದನ್ನೂ ಕೊಡಬಾರದು, ಕೊಟ್ಟರೂ ಪ್ರಯೋಜನವಿಲ್ಲ ಎಂದು ಇಂದಿಗೂ ಮಸಾಯಿಗಳು ನಂಬಿ, ಅದನ್ನು ಪಾಲಿಸುತ್ತಿದ್ದಾರೆ!!!
ಆಹಾರದ ವಿಷಯಕ್ಕೆ ಬಂದರೆ ಮನೆಯ ಪುರುಷರಿಗೆ ಹೆಚ್ಚು ಮತ್ತು ಪೌಷ್ಟಿಕ ಪಾಲು. ಹೆಣ್ಣುಮಕ್ಕಳಿಗೆ ತೆಳ್ಳಗಿನ ಗಂಜಿ ಪರಮಾನ್ನ! ತಂದೆ –ಅಣ್ಣ- ತಮ್ಮಂದಿರು ಊಟ ಮಾಡುವಾಗ ಹೆಣ್ಣುಮಕ್ಕಳು ದೂರವಿರಬೇಕು. ಅಂದರೆ ಅವರು ತಿನ್ನುವುದು ಇವರಿಗೆ ಕಾಣಬಾರದು ಎಂಬ ಕಟ್ಟಲೆಯೂ ಇದೆಯಂತೆ. ವಿದ್ಯೆಯ ಬಗ್ಗೆ ಆಸಕ್ತಿಯೇ ಇಲ್ಲ, ಹೆಣ್ಣುಮಕ್ಕಳು ವಿದ್ಯೆ ಕಲಿತರೆ ಮುಂದುವರಿದು ಹಾಳಾಗುತ್ತಾರೆ ಎಂಬ ಹೆದರಿಕೆ. ಏನಿದ್ದರೂ ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕಳಿಸುವುದರತ್ತ ಯೋಚನೆ. ಹೆಣ್ಣುಮಕ್ಕಳು ಮದುವೆಗೆ ಸಿದ್ಧರಿದ್ದಾರೆ ಎಂದು ತೋರಿಸುವ ಒಂದು ಸಂಭ್ರಮದ ಆಚರಣೆ ‘ಸ್ತ್ರೀ ಜನನಾಂಗ ಊನ’ ಗೊಳಿಸುವುದು. ಎಂಟು ಹತ್ತು ವರ್ಷದ ಹೆಣ್ಣುಮಕ್ಕಳಿಗೆ ಹೀಗೆ ಮಾಡುವುದು ಸಾಮಾನ್ಯ. (ಇದೀಗ ಕಾನೂನು ನಿಷೇಧಿಸಿದ್ದರೂ ಗುಟ್ಟಾಗಿ ಯಾವುದೇ ವೈದ್ಯಕೀಯ ನೆರವಿಲ್ಲದೇ ನಡೆಸಲಾಗುತ್ತದೆ). ತಮ್ಮ ಜನಾಂಗದ ಸಂಪ್ರದಾಯ ಎನ್ನುತ್ತಲೇ ಮಹಿಳೆಯರ ಲೈಂಗಿಕ ತೃಷೆಯನ್ನು ಕಡಿಮೆ ಮಾಡಿ ಆ ಮೂಲಕ ನಿಯಂತ್ರಣ ಸಾಧಿಸುವ ಮಾರ್ಗವೂ ಆಗಿದೆ. ಹೀಗೆ ಆಹಾರವಿಲ್ಲದೇ ಬಳಲುವ, ನೋವಿನಿಂದ ನರಳುವ, ಸಣ್ಣ ವಯಸ್ಸಿನ ಹುಡುಗಿ ಗರ್ಭಿಣಿಯಾದ ಕೂಡಲೇ ಕಡಿಮೆ ಆಹಾರ ತಿಂದು ಹೆಚ್ಚು ಕೆಲಸ ಮಾಡಬೇಕು ಎನ್ನುವ ನಿಯಮವನ್ನು ಪಾಲಿಸಲಾಗುತ್ತದೆ. ಕಾರಣ, ಮಗುವಿನ ಗಾತ್ರ ಚಿಕ್ಕದಾಗಿ ಹೆರಿಗೆ ಬೇಗ ಆಗುತ್ತದೆ ! ಹೀಗೆ ಅನಕ್ಷರತೆ, ಅಪೌಷ್ಟಿಕತೆ, ಅನಾರೋಗ್ಯ, ಅಜ್ಞಾನದ ನಡುವೆ ಮ’ಸಾಯಿ’ ಮಹಿಳೆಯರು!!
ಹೀಗೆ ನೋಡಲೇನೋ ಸುಂದರರು, ಆದರೆ ವಿಚಿತ್ರ ವಿಧಿ-ವಿಧಾನ, ಸಂಪ್ರದಾಯಗಳಿಂದ ಮಸಾಯಿಗಳ ಬದುಕು ವಿಚಿತ್ರ, ಕೆಲವೊಮ್ಮೆ ಭೀಕರ ಎನಿಸುತ್ತದೆ. ಆಫ್ರಿಕಾದಲ್ಲಿ ನಲವತ್ತಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಿವೆ. ಅನಕ್ಷರತೆ, ಬಡತನ, ಸಂಪನ್ಮೂಲಗಳ ಕೊರತೆಯಿಂದ ದಿನೇ ದಿನೇ ಈ ಮೂಲ ನಿವಾಸಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಮಸಾಯಿಗಳ ಅನನ್ಯ ಸಂಸ್ಕøತಿಯನ್ನು ಕಾಪಾಡುವ ಜತೆಗೇ ಅದರಲ್ಲಿರುವ ಅಮಾನವೀಯ ಆಚರಣೆಗಳನ್ನು ತೊಲಗಿಸಿ, ಶಿಕ್ಷಣ, ಸೌಕರ್ಯಗಳನ್ನು ಒದಗಿಸಿ ಸಮಾಜದ ಮುಖ್ಯ ವಾಹಿನಿಗೆ ಸೇರಿಸುವ ಹೊಣೆಯೂ ಸರ್ಕಾರಕ್ಕಿದೆ!

ಡಾ. ಕೆ.ಎಸ್. ಚೈತ್ರಾ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.