FEATUREDಅಂಕಣ

ಲೋಕದ ಕಣ್ಣು / ಮನಮೋಹಕ ಶೈಲಿಯ ‘ಅಪ್ಸರಾ ನೃತ್ಯ’ – ಡಾ.ಕೆ.ಎಸ್. ಚೈತ್ರಾ

ಅಪ್ಸರೆಯರು ಮೋಡ ಮತ್ತು ನೀರಿನ ಚೇತನ ಎಂದು ಭಾವಿಸಲಾಗುತ್ತದೆ. ಖ್ಮೇರ್ ಸಂಸ್ಕøತಿಯಲ್ಲಿ ಹಾಸುಹೊಕ್ಕಾಗಿರುವ ಅಪ್ಸರೆಯರ ಕತೆಯನ್ನು ಅಂಗೋರ್ ವಾಟ್ ದೇವಸ್ಥಾನದ ಗೋಡೆಯಲ್ಲಿ ನಲವತ್ತೊಂಬತ್ತು ಮೀಟರ್ ಉದ್ದದ ಕೆತ್ತನೆಯಲ್ಲಿ ಕಾಣಬಹುದು. ದೇವಲೋಕದ ಅಪ್ಸರೆಯರ ನೃತ್ಯವನ್ನು ಅನುಕರಿಸಿ ಮಾಡಲಾಗುವ ಕಂಬೋಡಿಯಾದ ಸಾಂಪ್ರದಾಯಿಕ ನೃತ್ಯ ಅಪ್ಸರಾ ನೃತ್ಯ. ಏಳನೇ ಶತಮಾನದಿಂದಲೂ ಇದು ರೂಢಿಯಲ್ಲಿದೆ ಎನ್ನುವುದನ್ನು ನಿರೂಪಿಸುವ ಅನೇಕ ಕೆತ್ತನೆಗಳು ದೇಗುಲಗಳಲ್ಲಿವೆ. ಒಟ್ಟಿನಲ್ಲಿ ಅಪ್ಸರಾ ನರ್ತಕಿಯರಾಗಲು ದೊಡ್ಡ ತಪಸ್ಸೇ ಮಾಡಬೇಕು!!


ಕಂಬೋಡಿಯಾದ ಬೆಳಿಗ್ಗೆಯಿಂದ ಬಿರು ಬಿಸಿಲಲ್ಲಿ ತಿರುಗಿ, ಹತ್ತಾರು ದೇಗುಲ ಸುತ್ತಿ ಸುಸ್ತಾಗಿತ್ತು. ರೂಮಿಗೆ ಬಂದು ಏನನ್ನೋ ತಿಂದು ಹಾಸಿಗೆ ಕಂಡರೆ ಸಾಕು ಎನ್ನುವ ಧಾವಂತ. ಆದರೆ ಗೆಳೆಯ ಕಿರಿ, ತಮ್ಮ ಊಟದ ರುಚಿ ನೋಡಲೇಬೇಕು ಎಂದು ಒತ್ತಾಯಿಸಿದ್ದ. ಅರ್ಧ ಮುಚ್ಚಿದ ಕಣ್ಣುಗಳಿಂದ, ಪದ ಹೇಳುವ ಕಾಲುಗಳನ್ನು ಹೇಗೋ ಎಳೆದುಕೊಂಡು ದೊಡ್ಡ ಮರಗಳಿಂದ ಸುತ್ತುವರಿದ ಹೋಟೆಲ್‍ನ ಹೊರಾಂಗಣದ ್ಊಟಕ್ಕೆ ಕುಳಿತಿದ್ದೆವು. ಇದ್ದಕ್ಕಿದ್ದಂತೆ ವಾದ್ಯ ಸಂಗೀತ ಕೇಳಿತು. ವೇದಿಕೆ ಮೇಲೆ ಎಲ್ಲಿಂದಲೋ ದೇವಕನ್ಯೆಯರಂತೆ ಐವರು ಬಂದಿಳಿದರು! ಸಂಜೆಗತ್ತಲು, ಸುತ್ತಲೂ ಮಿನುಗುತ್ತಿದ್ದ ಪುಟ್ಟ ದೀಪಗಳು, ಕಣಗಿಲೆ ಹೂವಿನ ಮಾದಕ ಪರಿಮಳ, ಸುಮಧುರ ಸಂಗೀತ ಮತ್ತು ವಿಚಿತ್ರ ಕಿರೀಟ, ಕಣ್ಣು ಕೋರೈಸುವ ಆಭರಣ, ಆಕರ್ಷಕ ಉಡುಪು ಧರಿಸಿದ್ದ ಗೊಂಬೆಗಳಂಥ ಹುಡುಗಿಯರು. ನನಗಂತೂ ಎಲ್ಲವೂ ಕನಸೇನೋ ಅನಿಸಿ ‘ಇದು ದೇವಲೋಕ, ಇವರು ಅಪ್ಸರೆಯರು’ ಎಂದಿದ್ದೆ ಜೋರಾಗಿ. ಕೂಡಲೇ ನಮ್ಮ ಗೈಡ್ ‘ಹೌದೌದು! ಇದುಅಪ್ಸರಾ ನೃತ್ಯ’ ಎಂದ ಖುಷಿಯಿಂದ. ನೃತ್ಯ ಎಂದೊಡನೆ ನಿದ್ದೆ ಹಾರಿಹೋಯಿತು!

ಅಂದ ಹಾಗೆ ಅಪ್ಸರಾ ನೃತ್ಯ ಕಂಬೋಡಿಯಾದ ಸಾಂಸ್ಕøತಿಕ ವೈಭವವನ್ನು ಬಿಂಬಿಸುವ ಕುರುಹು. ಎಂಟು ದಿನಗಳ ನಮ್ಮ ಕಂಬೋಡಿಯಾ ಪ್ರವಾಸದಲ್ಲಿ ನೋಡಿದ ದೇಗಲಗಳಲ್ಲಿ ಅಲ್ಲಲ್ಲಿ ಅಪ್ಸರೆಯರ ಕೆತ್ತನೆಗಳನ್ನು ಕಂಡಿದ್ದೆವು. ಆದರೆ ಅಪ್ಸರಾ ನೃತ್ಯದ ಬಗ್ಗೆ ಗೊತ್ತಿರಲಿಲ್ಲ. ಕಂಬೋಡಿಯಾದ (ಕಂಪೂಚಿಯಾ) ಉಗಮ, ಮೆರು ಎಂಬ ಅಪ್ಸರೆ ಕಂಪು ಋಷಿಯನ್ನು ಮೋಹಿಸಿ ಕಾಮಿಸಿದ್ದರಿಂದ ಎನ್ನು ಕತೆ ಇಲ್ಲಿ ಜನಪ್ರಿಯ. ಹಾಗಾಗಿಯೇ ಅಪ್ಸರೆಯರಿಗೆ ಇಲ್ಲಿ ವಿಶೇಷ ಮನ್ನಣೆ. ಹಿಂದೂ ಪುರಾಣಗಳ ಪ್ರಕಾರ ಅಮೃತಮಂಥನದ ಸಮಯದಲ್ಲಿ ಕ್ಷೀರ ಸಾಗರದಿಂದ ಉದ್ಭವಿಸಿದವರು ಅಪ್ಸರೆಯರು. ದೇವತೆಗಳ ರಾಜ, ಇಂದ್ರನ ಆಸ್ಥಾನದಲ್ಲಿ ಇವರ ವಾಸ. ಸ್ವರ್ಗದಿಂದ ಭೂಮಿಗೆ ಬರುವ ಅಪ್ಸರೆಯರು ರಾಜರು ಮತ್ತು ದೇವರನ್ನು ತಮ್ಮ ನೃತ್ಯದಿಂದ ಸಂತುಷ್ಟಗೊಳಿಸುತ್ತಾರೆ. ಅನೇಕ ಬಾರಿ ದೇವತೆಗಳನ್ನು ಮೀರಿಸುವ ಸಾಮಥ್ರ್ಯವಿರುವ ಮಾನವರ ದಿಕ್ಕು ತಪ್ಪಿಸುವ ಕೆಲಸವೂ ಇವರದ್ದೇ. ಈ ಅಪ್ಸರೆಯರು ಮೋಡ ಮತ್ತು ನೀರಿನ ಚೇತನ ಎಂದು ಭಾವಿಸಲಾಗುತ್ತದೆ. ಖ್ಮೇರ್ ಸಂಸ್ಕøತಿಯಲ್ಲಿ ಹಾಸುಹೊಕ್ಕಾಗಿರುವ ಅಪ್ಸರೆಯರ ಕತೆಯನ್ನು ಅಂಗೋರ್ ವಾಟ್ ದೇವಸ್ಥಾನದ ಗೋಡೆಯಲ್ಲಿ ನಲವತ್ತೊಂಬತ್ತು ಮೀಟರ್ ಉದ್ದದ ಕೆತ್ತನೆಯಲ್ಲಿ ಕಾಣಬಹುದು. ದೇವಲೋಕದ ಅಪ್ಸರೆಯರ ನೃತ್ಯವನ್ನು ಅನುಕರಿಸಿ ಮಾಡಲಾಗುವ ಕಂಬೋಡಿಯಾದ ಸಾಂಪ್ರದಾಯಿಕ ನೃತ್ಯ ಅಪ್ಸರಾ ನೃತ್ಯ. ಏಳನೇ ಶತಮಾನದಿಂದಲೂ ಇದು ರೂಢಿಯಲ್ಲಿದೆ ಎನ್ನುವುದನ್ನು ನಿರೂಪಿಸುವ ಅನೇಕ ಕೆತ್ತನೆಗಳು ದೇಗುಲಗಳಲ್ಲಿವೆ.

ಹನ್ನೆರಡನೇ ಶತಮಾನದಲ್ಲಿ ಈ ಕಲೆ ಉಚ್ಛ್ರಾಯ ಸ್ಥಿತಿ ತಲುಪಿತ್ತು. ದೊರೆ ಏಳನೇ ಜಯವರ್ಮನ್ ಆಸ್ಥಾನದಲ್ಲಿ ಮೂರು ಸಾವಿರ ಅಪ್ಸರಾ ನೃತ್ಯ ಕಲಾವಿದರಿದ್ದರು ಎನ್ನಲಾಗುತ್ತದೆ. ಧಾರ್ಮಿಕ ವಿಧಾನ, ದೇವರ/ ಗಣ್ಯ ಅತಿಥಿಗಳ ಸತ್ಕಾರಕ್ಕಾಗಿ ಅರಮನೆಗಳಲ್ಲಿ ಮಾತ್ರ ಪ್ರಚಲಿತವಾಗಿದ್ದ ಈ ನೃತ್ಯ ಹೊರಜಗತ್ತಿಗೆ ಪರಿಚಯವಾದುದು ್ದ ್ದತಡವಾಗಿ, ಅಂದರೆ 1950 ರಲ್ಲಿ. ರಾಣಿ ಕೊಸ್ಸಾಮಾಕ್ ತನ್ನ ಮೊಮ್ಮಗಳು ಐದು ವರ್ಷದ ರಾಜಕುಮಾರಿ ನೊರೊಡಮ್ ಬುಪ್ಫಾದೇವಿಗೆ ಈ ನೃತ್ಯದಲ್ಲಿ ತರಬೇತಿ ನೀಡಲಾರಂಭಿಸಿದರು. ಅನೇಕ ವರ್ಷಗಳ ಕಠಿಣ ತರಬೇತಿ ನಂತರ ಹದಿನೆಂಟು ವರ್ಷದ ರಾಜಕುಮಾರಿ ಬುಪ್ಫಾದೇವಿಗೆ ‘ಪ್ರಧಾನ ನರ್ತಕಿ’ ಎಂಬ ಬಿರುದು ನೀಡಿ ಗೌರವಿಸಲಾಯಿತು. ರಾಜಕುಮಾರಿ ಕಂಬೋಡಿಯನ್ ರಾಯಲ್ ಬ್ಯಾಲೆಟ್ ತಂಡ ಸ್ಥಾಪಿಸಿ ಖ್ಮೇರ್ ಸಂಸ್ಕøತಿಯನು ್ನಜಗತ್ತಿನೆಲ್ಲೆಡೆ ಪ್ರಚುರ ಪಡಿಸಲು ವಿಶ್ವದೆಲ್ಲೆಡೆ ಪ್ರವಾಸ ಕೈಗೊಂಡರು, ಪ್ರದರ್ಶನ ನೀಡಿದರು. ಅದೇ ಮೊದಲ ಬಾರಿಗೆ, ಅರಮನೆಯಿಂದ ಅಪ್ಸರಾ ನೃತ್ಯಹೊರಗೆ ಪ್ರದರ್ಶನವಾದದ್ದು!! ಮನಮೋಹಕ ಶೈಲಿಯ ಈ ನೃತ್ಯ ಜನಪ್ರಿಯತೆ ಗಳಿಸುತ್ತಿದ್ದ ಹೊತ್ತಿನಲ್ಲೇ ಖ್ಮೇರ್ ದಂಗೆ ನಡೆಯಿತು (1975-79). ಆಗ ಅರಮನೆಯ ಶೇಕಡಾ ತೊಂಬತ್ತರಷ್ಟು ಕಲಾವಿದರು ಬಂಧನ/ಹಿಂಸೆ/ ಮರಣಕೆ ತುತ್ತಾದರು. ರಾಜಕುಮಾರಿ ಬುಪ್ಫಾದೇವಿಯೂ ಸೇರಿದಂತೆ ಕೆಲವೇ ಕೆಲವರು ಮಾತ್ರ ಬೇರೆಡೆ ರಕ್ಷಣೆ ಪಡೆದು ಪ್ರಾಣ ಉಳಿಸಿಕೊಂqರು.

ಅಪೂರ್ವ ಕೊಡುಗೆ : 1991 ರಲ್ಲಿ ದೇಶದಲ್ಲಿ ಶಾಂತಿ ನೆಲೆಸಿದಾಗ ರಾಜಕುಮಾರಿ ಬುಪ್ಫಾದೇವಿ, ಹೊಸಬರನ್ನು ಹುಡುಕಿ-ತರಬೇತಿ ನೀಡಿ ತಮ್ಮ ಪರಂಪರೆಯನ್ನು ಮುಂದುವರಿಸಿದರು. ಅವರ ನಿರ್ದೇಶನದ ‘ಲೆಜೆಂಡ್ ಆಫ್ ಅಪ್ಸರಾ ಮೆರ ’ ಕಲಾಕ್ಷೇತ್ರಕ್ಕೊಂದು ಅಪೂರ್ವ ಕೊಡುಗೆ. ಈ ನೃತ್ಯ ಪದ್ಧತಿಯ ಮರುಹುಟ್ಟಿಗೆ ಕಾರಣರಾದ ರಾಜಕುಮಾರಿ ಬುಪ್ಫಾದೇವಿ 2019, ನವೆಂಬರ್‍ನಲ್ಲಿ ನಿಧನರಾದಾಗ ಕಲಾವಿದರಷ್ಟೇ ಅಲ್ಲ ಕಂಬೋಡಿಯಾದ ಜನರೆಲ್ಲರೂ ಕಂಬನಿಗರೆದರು. ಅಪ್ಸರಾ ನೃತ್ಯವನ್ನು ಕಂಬೋಡಿಯಾದ ಸಾಂಸ್ಕøತಿಕ ಹೆಗ್ಗುರುತಾಗಿಸಿದ ಕೀರ್ತಿ ರಾಜಕುಮಾರಿ ಬುಪ್ಫಾದೇವಿಗೆ ಸಲ್ಲುತ್ತದೆ.

ಅಷ್ಟಕ್ಕೂ ಈ ನೃತ್ಯದಲ್ಲಿ ಏನಿದೆ ಎಂಬುದು ಪ್ರೇಕ್ಷಕಳಾಗಿ ಮತ್ತು ನೃತ್ಯ ಕಲಾವಿದೆಯಾಗಿ ನನ್ನ ಕುತೂಹಲ ಕೆರಳಿಸಿತ್ತು. ಸಂಕೀರ್ಣ ಹಸ್ತಮುದ್ರೆಗಳು ಈ ನೃತ್ಯದ ವೈಶಿಷ್ಟ್ಯ. ಮೊದಲ ನೋಟಕ್ಕೆ ನಮ್ಮ ಭರತನಾಟ್ಯದ ಮುದ್ರೆಗಳೇ ಕಂಡವು. ಉದಾಹರಣೆಗೆ ನಮ್ಮ ಅಸಂಯುತ ಹಸ್ತ ಹಂಸಾಸ್ಯದಂತೆ ಅವರ ಜೀಬ್.

ಹೀಗೆ ಭರತನ ನಾಟ್ಯಶಾಸ್ತ್ರವೇ ಆಧಾರವಾದರೂ ಇಲ್ಲಿ 1500 ಮುದ್ರೆಗಳಿವೆ. ಒಂದರ ನಂತರ ಒಂದನ್ನು ತೋರಿಸುತ್ತಾ ಹೋದರೆ ಎರಡು ತಾಸು ಸಮಯ ಬೇಕಂತೆ! ನಮ್ಮ ನೃತ್ಯ ಭಂಗಿಗಳ ಹಾಗೆ ಇರುವ ಅವರ ಕಬಾಚ್ 3000 ನಿರ್ದಿಷ್ಟ ಚಲನೆ, ಬಾಗು- ಬಳುಕುಗ¼ನ್ನು ಹೊಂದಿದೆ. ನಮ್ಮ ಭರತನಾಟ್ಯದಂತೆ ಅಡವುಗಳ ಪ್ರಯೋಗವಿಲ್ಲ, ಬದಲಿಗೆ ಲಾಸ್ಯವೇ ಪ್ರಧಾನ; ಚಲನೆಗಳೂ ಬಹಳ ನಿಧಾನ. ಹಾಗೆ ನೋಡಿದರೆ ವೈಯಕ್ತಿಕವಾಗಿ ನನಗೆ, ಮೋಡಗಳ ನಡುವೆ ತೇಲುತ್ತಾ ನರ್ತಿಸುತ್ತಿದ್ದಾರೇನೋ ಎನಿಸಿತು. ಈ ನೃತ್ಯದಲ್ಲಿ ಹೂವು, ಹಣ್ಣು, ಎಲೆ ಹೀಗೆ ನಿಸರ್ಗದ ಚಿತ್ರಣವೇ ಮುಖ್ಯ ವಸ್ತು. ನಮ್ಮ ರಾಮಾಯಣ ಹೋಲುವ ರಾಮಕರ್ (ರಾಮಕೀರ್ತಿ)ಎನ್ನುವ ಕಥನ, ಹಿಂದೂ-ಬೌದ್ಧ ದೇವತೆಗಳ ಸ್ತುತಿಗಳನ್ನೂ ಕಾಣಬಹುದು. ಸ್ತ್ರೀ, ಪುರುಷ, ದೈತ್ಯ ಮತ್ತು ಮಂಗ ಎಂಬ ನಾಲ್ಕು ಮುಖ್ಯ ಪಾತ್ರಗಳು ಕಥನಗಳಲ್ಲಿ ಇರುತ್ತವೆ. ಮಹಿಳಾ ಪ್ರಧಾನ ನೃತ್ಯವಾದರೂ ಮಂಗನ ಪಾತ್ರವನ್ನು ಪುರುಷರೇ ನಿರ್ವಹಿಸುತ್ತಾರೆ. ಇದಲ್ಲದೇ ಮಾನವ ಜೀವನದ ನಾಲ್ಕು ಪ್ರಮುಖ ಹಂತಗಳನ್ನು ಚಿತ್ರಿಸಲಾಗುತ್ತದೆ.

ಆಹಾರ್ಯದಲ್ಲಿ (ವೇಷಭೂಷಣ-ಪ್ರಸಾದನ) ವಿಶಿಷ್ಟವಾದದ್ದು ತಲೆಯ ಮೇಲಿನ ಚೂಪಾದ ಕಿರೀಟಗಳು. ಸಂಪೊಟ್ ಸರಬಾಪ್ ಎಂಬ ರೇಷ್ಮೆಯ ಬಟ್ಟೆಯನ್ನು ಮುಂದೆ ನೆರಿಗೆ ಬರುವಂತೆ ಸೊಂಟಕ್ಕೆ ಸುತ್ತಲಾಗುತ್ತದೆ.ಈ ನೆರಿಗೆಗಳು ಹಾವಿನ ಬಿಚ್ಚಿದ ಹೆಡೆಯಂತೆ ಕಾಣುವುದರಿಂದ ಇದನ್ನು ನಾಗಾ ಶೈಲಿ ಎಂದು ಕರೆಯುತ್ತಾರೆ. ಮೇಲುಡುಗೆ ಚರ್ಮದ ಬಣ್ಣದಾಗಿದ್ದು ಬಿಗಿಯಾಗಿರುತ್ತದೆ. ಕತ್ತಿಗೆ ಬಂಗಾರ/ ಕೆಂಪು ಬಣ್ಣದ ಪಟ್ಟಿಯನ್ನು ಧರಿಸುತ್ತಾರೆ. ಪ್ರಧಾನ ನರ್ತಕಿ ಬಿಳಿ ಉಡುಪನ್ನು ಧರಿಸಿದರೆ ಉಳಿದವರು ಬಣ್ಣದ ಉಡುಪನ್ನು ಧರಿಸುತ್ತಾರೆ. ಎಲ್ಲಕ್ಕಿಂತ ವಿಶಿಷ್ಟವಾದದ್ದು ತಲೆಯ ಮೇಲಿನ ಚೂಪಾದ ಕಿರೀಟಗಳು. ಮೂರು ಅಥವಾ ಐದು ತ್ರಿಕೋನಾಕೃತಿಯ ಸರಳುಗಳಿದ್ದು ಚಕ್ರಗಳಿರುತ್ತವೆ. ಪ್ರಧಾನ ನರ್ತಕಿಯ ಸರಳುಗಳಲ್ಲಿ ಎರಡು ಪಂಕ್ತಿ ಚಕ್ರಗಳಿದ್ದರೆ, ಉಳಿದವರಲ್ಲಿ ಒಂದೇ ಪಂಕ್ತಿ. ಲೋಹದಿಂದ ಮಾಡಲಾದ ಈ ಕಿರೀಟಗಳು 3-4 ಕೇಜಿ ತೂಕವಾಗಿರುತ್ತವೆ. ತುಟಿಗೆ ಗಾಢ ಬಣ್ಣ, ತಿದ್ದಿತೀಡಿದ ಕಣ್ಣುಗಳು ಮತು ್ತಕೆನ್ನೆ ಕೆಂಪು ಇವಿಷ್ಟು ಮುಖಾಲಂಕಾರ. ನಿಜವಾದ ದೇವಕಣಗಿಲೆ ಹೂವುಗಳನ್ನು ಮುಡಿಗೇರಿಸಿ, ಅಲೆದಾಡುವ ಕರ್ಣಾಭರಣ, ಕೈ-ಕಾಲುಗಳಿಗೆ ಕಡಗ ಧರಿಸಿದರೆ ಎಲ್ಲಾ ತಯಾರಿ ಪೂರ್ಣವಾದಂತೆ. ಒಟ್ಟು ನೃತ್ಯಕ್ಕೆ ತಯಾರಾಗಲು ಬೇಕಾಗುವ ಸಮಯ ಮೂರು ತಾಸು. ಅಂತೂ ಸಕಲ ಸಿದ್ಧತೆಯೊಂದಿಗೆ ನರ್ತಕಿಯರು ವೇದಿಕೆ ಏರಿದಾಗ ದೇವಲೋಕ ಧರೆಗಿಳಿದಂತೆ ಅನ್ನಿಸುವುದು ಸಹಜ.

ಹಸ್ತ ಮತ್ತು ಚಲನೆಗಳು ನಿರ್ದಿಷ್ಟ ಮತ್ತು ನಿಖರವಾಗಿರುವುದು ಈ ನೃತ್ಯಕ್ಕೆ ಅವಶ್ಯಕ. ಹಾಗಾಗಿಯೇ ಕನಿಷ್ಠ ಹತ್ತು ವರ್ಷಗಳ ತರಬೇತಿ ಕಡ್ಡಾಯ. ಹುಡುಗಿಯರನ್ನು ಏಳೆಂಟು ವರ್ಷದವರಿದ್ದಾಗಲೇ ಆಯ್ಕೆ ಮಾಡಿ ಶಿಕ್ಷಣ ನೀಡಲಾಗುತ್ತದೆ. ಮೃದುವಾದ ಹಸ್ತ- ದೇಹವನ್ನು ಬೇಕಾದಂತೆ ತಿರುಗಿಸಬಹುದು, ಹಾಗಾಗಿ ಎಚ್ಚರಿಕೆಯಿಂದ ಹಂತಹಂತವಾಗಿ ಅವುಗಳನ್ನು ಬೇಕಾದ ಸ್ಥಾನಕ್ಕೆ ತರುವುದು ಸುಲಭ. ಹೆಚ್ಚಿನವರು ಗುರುವಿನ ಬಳಿಯೇ ಇದ್ದು ಸತತ ಅಭ್ಯಾಸ ನಡೆಸುತ್ತಾರೆ. ಒಟ್ಟಿನಲ್ಲಿ ಅಪ್ಸರಾ ನರ್ತಕಿಯರಾಗಲು ದೊಡ್ಡತಪಸ್ಸೇ ಮಾಡಬೇಕು!!

ಅಪ್ಸರಾ ನೃತ್ಯ ಕುರಿತು ಇಲ್ಲಿಯ ಜನರಿಗೆ ಅಪಾರ ಅಭಿಮಾನವಿದೆ. ದೇವರು ಮತ್ತು ಮಾನವರ ನಡುವೆ ಕೊಂಡಿಯಾಗಿರುವ ಈ ಅಪ್ಸರಾ ನೃತ್ಯದ ಬಗ್ಗೆ ಪೂಜ್ಯ ಭಾವನೆಯೂ ಇದೆ. ಆದರೆ ನುರಿತ ಕಲಾವಿದ ರ ಕೊರತೆ, ಇತರ ಸುಲಭ ಕಲಾ ಪ್ರಕಾರಗಳ ಆಕರ್ಷಣೆ ಎದುರಿಸಿ ಈ ಕಲೆ ಉಳಿಯಬಲ್ಲದೇ? ಪ್ರವಾಸಿಗರ ಎದುರು ಪ್ರದರ್ಶನಕ್ಕೆ ಮಾತ್ರ ಮೀಸಲಾಗದೇ ತನ್ನ ಅಂತಸತ್ವ ಉಳಿಸಿಕೊಳ್ಳಬಲ್ಲದೇ? ಒಂದೊಮ್ಮೆ ಈ ಕಲೆಯನ್ನೇ ನಂಬಿದರೆ ಕಲಾವಿದರು ಉತ್ತಮ ಬದುಕು ನಡೆಸಲು ಸಾಧ್ಯವೇ ಎಂಬ ನನ್ನ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಲಿಲ್ಲ.

ಡಾ.ಕೆ.ಎಸ್.ಚೈತ್ರಾ


Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

2 thoughts on “ಲೋಕದ ಕಣ್ಣು / ಮನಮೋಹಕ ಶೈಲಿಯ ‘ಅಪ್ಸರಾ ನೃತ್ಯ’ – ಡಾ.ಕೆ.ಎಸ್. ಚೈತ್ರಾ

  • DR.RADHIKARANJINI

    ಸೂಪರ್ ಚೈತ್ರ ಅತ್ಯುತ್ತಮ ಮಾಹಿತಿ. ತುಂಬಾ ಆಸಕ್ತಿದಾಯಕವಾಗಿದೆ. ನಮ್ಮ ಅಪ್ಸರೆಯರ ಹಿನ್ನೆಲೆಗೂ ಅವರ ಅಪ್ಸರೆಯರ ಹಿನ್ನೆಲೆಗೂ ವ್ಯತ್ಯಾಸಗಳಿವೆ. ಆದರೆ ಹಸ್ತಮುದ್ರೆಗಳು 1500,ಹಾಗೂ ಚಲನೆಗಳು 3000 ಸೂಪರ್. ಅವರ ಆಹಾರ್ಯ ಆಕರ್ಷಣೀಯ. ಧನ್ಯವಾದಗಳು ಚೈತ್ರ ಅತ್ಯುತ್ತಮ ಮಾಹಿತಿ.

    Reply
  • ಡಾ.ರಾಧಿಕಾರಂಜಿನಿ

    ಸೂಪರ್ ಚೈತ್ರ ಅತ್ಯುತ್ತಮ ಮಾಹಿತಿ. ತುಂಬಾ ಆಸಕ್ತಿದಾಯಕವಾಗಿದೆ. ನಮ್ಮ ಅಪ್ಸರೆಯರ ಹಿನ್ನೆಲೆಗೂ ಅವರ ಅಪ್ಸರೆಯರ ಹಿನ್ನೆಲೆಗೂ ವ್ಯತ್ಯಾಸಗಳಿವೆ. ಆದರೆ ಹಸ್ತಮುದ್ರೆಗಳು 1500,ಹಾಗೂ ಚಲನೆಗಳು 3000 ಸೂಪರ್. ಅವರ ಆಹಾರ್ಯ ಆಕರ್ಷಣೀಯ. ಧನ್ಯವಾದಗಳು ಚೈತ್ರ ಅತ್ಯುತ್ತಮ ಮಾಹಿತಿ.

    Reply

Leave a Reply

Your email address will not be published. Required fields are marked *