ಲೋಕದ ಕಣ್ಣು/ ಬ್ಯಾಂಕಾಕಿನ ಜೀವನದಿ ಮೇ ನಾಮ್! – ಡಾ.ಕೆ.ಎಸ್. ಚೈತ್ರಾ

ನಮ್ಮ ದೇಶದ ಹಾಗಿ ಹಲವು ದೇಶಗಳಲ್ಲಿ ಹರಿವ ನದಿಗಳು ತಮ್ಮ ಒಡಲಿನಲ್ಲಿ ಹೆಣ್ಣಿನ ಕಥೆಗಳು ಇಟ್ಟುಕೊಂಡು ಹರಿಯುತ್ತವೆ. ಬ್ಯಾಂಕಾಕಿನ ಜೀವನದಿ ಮೇ ನಾಮ್ ಹದಿಹರೆಯದ ರಾಜಕುಮಾರಿ ಮತ್ತು ಅವಳ ಒಡಲ ಕುಡಿಗಳ ಅಳುವನ್ನು ಅನುರಣಿಸುತ್ತದೆ. ಪ್ರವಾಸಿಗಳ ಅಚ್ಚುಮೆಚ್ಚಿನ ದೇಶದಲ್ಲಿ ಈಗ ಮೇ ನಾಮ್ ಹಲವು ಬಡವರ ಹೊಟ್ಟೆ ತುಂಬಿಸುವ ಜೀವನದಿಯೂ ಆಗಿದೆ.

ಎತ್ತೆತ್ತರದ ಭವ್ಯಅರಮನೆಗಳು – ಒತ್ತೊತ್ತಾದ ಮುರುಕಲು ಮನೆಗಳು, ಕಾವಿ ನಿಲುವಂಗಿಯ ಬೌದ್ಧ ಭಿಕ್ಕುಗಳು- ತುಂಡು ಬಟ್ಟೆಯ ಪಡ್ಡೆಗಳು, ಐಷಾರಾಮಿ ಹೋಟೆಲ್- ತಿಂಡಿಬೀದಿಗಳು, ಅತ್ಯಾಧುನಿಕ ಕಾರು- ಹಳೇ ಸೈಕಲ್… ವೈರುಧ್ಯಗಳ ನಡುವೆಯೇ ಪ್ರವಾಸಿಗರನ್ನು ಆಕರ್ಷಿಸುವ ಥೈಲ್ಯಾಂಡಿನ ರಾಜಧಾನಿ ಬ್ಯಾಂಕಾಕಿನಲ್ಲಿ ನಮ್ಮ ಪ್ರವಾಸ ನಡೆದಿತ್ತು. ಟಾಕ್ಸಿ, ಮೆಟ್ರೋ ಇದ್ದರೂ ಟುಕ್‍ಟುಕ್‍ನಲ್ಲಿ ಈ ಮಾಯಾನಗರಿಯ ವಿವಿಧ ಮುಖಗಳನ್ನು ನೋಡುವುದೇ ವಿಶಿಷ್ಟ ಅನುಭವ. ಅಲ್ಲಿಂದಲ್ಲಿಗೆ ಸುತ್ತಾಡುವಾಗಲೆಲ್ಲಾ ಕಣ್ಣಿಗೆ ಬಿದ್ದದ್ದು ನದಿ. ಬ್ಯಾಂಕಾಕಿನ ಜೀವನಾಡಿ ಎಂದೇ ಕರೆಯಲಾಗುವ ಮೇ ನಾಮ್ ಚಾವೋ ಫ್ರಾಯಾ. ಥಾಯ್ ಭಾಷೆಯಲ್ಲಿ ಇದರರ್ಥ, ತಾಯಿ ನೀರು ಮಹಾ ದಳಪತಿ ಎಂದಾಗುತ್ತದೆ. ಅಂದರೆ ತಾಯಿಯಂತಿರುವ ನದಿಗೆ, ರಾಜ ಪದವಿ ಕೊಟ್ಟು ಗೌರವಿಸಿರುವುದು ಅದರ ಮಹತ್ವವನ್ನು ಸಾರುತ್ತದೆ.

ಹದಿನೈದನೇ ಶತಮಾನದಲ್ಲಿ ಪುಟ್ಟ ಹಳ್ಳಿಯಾಗಿದ್ದ ಬ್ಯಾಂಕಾಕ್, ಸಿಯಾಮ್‍ನ ಆಡಳಿತಕ್ಕೆ ಸೇರಿತ್ತು. ನದಿತೀರದಲ್ಲಿದ್ದ ಕಾರಣ ಫಲವತ್ತಾದ ಮಣ್ಣು, ಸಮೃದ್ಧ ಮೀನು. ಹೀಗಾಗಿ ಇಲ್ಲಿ ನೆಲೆಸುವವರ ಸಂಖ್ಯೆ ಹೆಚ್ಚಿತು. ಆಯಕಟ್ಟಿನ ಸ್ಥಳದಲ್ಲಿದ್ದುದ್ದರಿಂದ ವ್ಯಾಪಾರದ ಮುಖ್ಯಕೇಂದ್ರವೂ ಆಯಿತು.1767 ರಲ್ಲಿ ದೊರೆ ತಕ್ಷಿನ್ ಈ ನದಿಯ ಪಶ್ಚಿಮ ತೀರಕ್ಕೆ ರಾಜಧಾನಿಯನ್ನು ವರ್ಗಾಯಿಸಿದ.1782 ರಲ್ಲಿ ದೊರೆ ಒಂದನೇ ರಾಮ ಈ ನದಿಯ ಪೂರ್ವಕ್ಕೆ ಅಂದರೆ ಇಂದಿನ ಬ್ಯಾಂಕಾಕ್ ನಿರ್ಮಾಣಕ್ಕೆ ಕಾರಣನಾದ. ಜನವಸತಿ ಹೆಚ್ಚಿದಂತೆ ಸಾರಿಗೆ ವ್ಯವಸ್ಥೆಯೂ ಹೆಚ್ಚಬೇಕಲ್ಲವೇ? ಪುಟ್ಟಊರಿನಲ್ಲಿ ಕಿರಿದಾದ ರಸ್ತೆಗಳು ನಿರ್ಮಾಣವಾದವು. ಆದರೂ ಹೆಚ್ಚುತ್ತಿರುವ ಜನಸಂಖ್ಯೆಯ ಸಂಚಾರಕ್ಕೆಅದು ಸಾಲಲಿಲ್ಲ. ಆಗ ಕಣ್ಣಿಗೆ ಬಿದ್ದದ್ದು ಊರ ನಡುವೆ ಹರಿಯುತ್ತಿದ್ದ ನದಿ. ವಿಶಾಲವಾದ ನದಿಯಲ್ಲಿದ್ದ ಸಹಜ ಕಾಲುವೆಗಳ ಜತೆ ಮತ್ತೆ ಹಲವನ್ನು ನಿರ್ಮಿಸಲಾಯಿತು. ಹೀಗೆ ನೀರಿನ ಕಾಲುವೆಗಳ ಸಣ್ಣ ದೋಣಿಗಳು ಜನರ ಸಂಚಾರಕ್ಕೆ ಮುಖ್ಯ ಸಾಧನಗಳಾದವು. ಮಾತ್ರವಲ್ಲ ತೇಲುವ ಮಾರುಕಟ್ಟೆಗಳ ಮೂಲಕ ವ್ಯಾಪಾರಕ್ಕೂ!!

ಈಗ ಟಾಕ್ಸಿ, ಟುಕ್‍ಟುಕ್, ಬಸ್ ಎಲ್ಲವೂ ಇದ್ದರೂ ಕಾಲುವೆಗಳ ಮೂಲಕ ಸಾಗುವ ಜಲಸಾರಿಗೆ ಬ್ಯಾಂಕಾಕಿನಲ್ಲಿ ಅತ್ಯಂತ ಜನಪ್ರಿಯ ಮತ್ತು ಪ್ರವಾಸಿಗರಿಗೆ ದೊಡ್ಡ ಆಕರ್ಷಣೆ. ಈ ನಗರಕ್ಕೆ ಪೂರ್ವದ ವೆನಿಸ್ ಎಂಬ ಹೆ¸ರು ಬರಲುಕಾರಣ ಈ ಜಲಸಾರಿಗೆ ವ್ಯವಸ್ಥೆ.
ಈ ಎಲ್ಲಾ ಮಾಹಿತಿಯನ್ನು ಕಲೆ ಹಾಕಿ, ತೇಲುವ ಮಾರುಕಟ್ಟೆ ನೋಡುತ್ತಾ ದೋಣಿಯಲ್ಲಿ ಕುಳಿತಿದ್ದೆವು. ಅದೊಂದು ಬೇರೆಯೇ ಲೋಕ. ಅಗಲವಾದ ಟೋಪಿ ಧರಿಸಿ ಕೈಯ್ಯಲ್ಲಿ ಹುಟ್ಟು ಹಾಕುತ್ತಾ ಕಿರಿದಾದ ಕಾಲುವೆಯಲ್ಲಿ ಹೋಯ್‍ ಎನ್ನುತ್ತಾ ಮರದ ದೋಣಿ ನಡೆಸುವವರು, ತೀರದಲ್ಲಿ ಒಂದೆಡೆ ದೋಣಿ ನಿಲ್ಲಿಸಿ ಅಲ್ಲೇ ಪುಟ್ಟ ಸ್ಟೌ ಇಟ್ಟು ನಾನಾ ಬಗೆಯ ಖಾದ್ಯ ಮಾಡುವವರು, ದೋಣಿ ತುಂಬಾ ಬಣ್ಣ ಬಣ್ಣದ ಹೂವು ಮಾರುವವರು, ಗಾಜಿನ ಸೀಸೆಯಲ್ಲಿ ಎಣ್ಣೆತುಂಬಿ ಮಸಾಜ್‍ಗೆ ಆಹ್ವಾನಿಸುವವರು -ಶಬ್ದ, ನೋಟ, ವಾಸನೆ, ರುಚಿ ಮತ್ತು ಸ್ಪರ್ಶ ಹೀಗೆ ಪಂಚೇಂದ್ರಿಯಗಳಿಗೆ ಹಬ್ಬವೇ ಸರಿ. ನೂಡಲ್ಸ್, ಕಾನೋಮ್‍ ಜೀನ್ (ತಣ್ಣಗಿನ ಅಕ್ಕಿ ಶ್ಯಾವಿಗೆ), ಹುರಿದ ಏಡಿ, ತೋತಾಪುರಿ ಮಾವಿನಕಾಯಿ, ಪೇರಲೆ ಹಣ್ಣು ಎಲ್ಲವೂ ಕಂಡರೂ ಕಡೆಗೆ ಬಿಸಿಲಿಗೆ ಬಾಯಾರಿ ಐಸ್‍ನಲ್ಲಿಟ್ಟ ಎಳನೀರು ಕುಡಿವಾಗ ಮಾತಿಗೆ ಸಿಕ್ಕಿದ್ದು, ದೋಣಿಯೊಡತಿ ಕೋಸುಮ್. ಮಧ್ಯಾಹ್ನದ ಹೊತ್ತು, ಆಕೆಗೂ ಸಮಯವಿತ್ತು. ಸುಮ್ಮನೇ ಮಾತಿಗೆಳೆದೆ. ಆಕೆ ಹೇಳತೊಡಗಿದಳು-

‘ ಇದು ನದಿಯಲ್ಲ, ನಮ್ಮಮ್ಮ! ನಮಗೆ ಅನ್ನವನ್ನು ನೀಡುವ ಮಹಾಮಾತೆ. ನಮ್ಮಲ್ಲಿ ಹುಡುಗಿಯರಿಗೆ ಅಂತಲ್ಲ ಹುಡುಗರಿಗೂ ಶಿಕ್ಷಣ ಕಡಿಮೆಯೇ. ಹುಡುಗಿಯರಿಗೆ ಬೇಗ ಮದುವೆಯೂ ಆಗುತ್ತದೆ ಮತ್ತು ಮಕ್ಕಳೂ. ಅಲ್ಲಿಗೆ ಗಂಡಸರ ಕೆಲಸ ಮುಗಿಯಿತು. ಮೊದಲೆಲ್ಲಾ ಫಿಶಿಂಗ್ ಮಾಡುತ್ತಿದ್ದರು.ಈಗ ಅದೂ ಕಡಿಮೆಯಾಗಿದೆ. ಹೆಚ್ಚಿನವರು ಡ್ರಗ್ಸ್ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಬ್ಯಾಂಕಾಕಿಗೆ ಬರುವ ಟೂರಿಸ್ಟ್‍ಗಳ ಮೇಲೆ ನಮ್ಮ ಬದುಕು ನಿಂತಿದೆ. ಮನೆ ನಡೆಸುವವರು ನಾವೇ, ಅಂದ್ರೆ ಲೇಡೀಸ್. ವಿದ್ಯೆಇಲ್ಲ, ಕೆಲಸ ಸಿಗಲ್ಲ. ಜೀವನ ನಡೆಸೋದು ಹೇಗೆ? ದೂರದೂರ ಹೋಗಿ ಕೆಲಸ ಮಾಡಬಹುದು ,ಆದರೆ ಮನೆಯ ಸಮಸ್ತ ಜವಾಬ್ದಾರಿ ನಮ್ಮದೇ. ಕಡೆಗೆ ಕೈಹಿಡಿದಿದ್ದು ಈ ನದಿ. ಮನೆಯ ಮುಂದೆ ಇರುವ ಪುಟ್ಟಜಾಗದಲ್ಲಿ ಪಪಾಯ, ಪೇರಲೇಗಿಡ ನೆಟ್ಟೆ. ಮಣ್ಣು ಚೆನ್ನಾಗಿದೆ , ಹಾಗಾಗಿ ರುಚಿಯಾದ ಹಣ್ಣು ಸಿಗುತ್ತೆ. ಹಿತ್ತಲಲ್ಲಿ ಇದ್ದ ತೆಂಗಿನ ಮರದಿಂದ ಎಳನೀರು ಬರುತ್ತೆ. ನದಿತೀರದಲ್ಲೇ ಬೆಳೆದವರು ನಾವು, ಹಾಗಾಗಿ ದೋಣಿ ನಡೆಸುವುದು ಗೊತ್ತು. ದೋಣಿಯಲ್ಲಿ ಹಣ್ಣು- ಎಳನೀರು ಮಾರ್ರ್ತೀನಿ. ಈ ಮಾರ್ಕೆಟ್ ವಾರಕ್ಕೆ ಮೂರು ದಿನ ವೀಕೆಂಡ್ ಮತ್ತು ಬೆಳಿಗ್ಗೆ ಇರೋದ್ರಿಂದ ಉಳಿದ ಸಮಯ ಸಂಸಾರ ಹೇಗೋ ನಿಭಾಯಿಸಬಹುದು. ದೊಡ್ಡಮಗಳು ಮನೆ ಹತ್ತಿರ ದೋಣಿ ಇಟ್ಟು ಕರಿದ ತಿಂಡಿ ಮಾಡಿಕೊಡ್ತಾಳೆ. ಇರುವ ಮೂರು ಮಕ್ಕಳಿಗೆ ಒಂದಷ್ಟು ವಿದ್ಯೆ ಕಲಿಸಿ ಏನಾದರೂ ಕೆಲಸ ಸಿಕ್ಕರೆ ಸಾಕು. ಕಳೆದ ಹತ್ತು ವರ್ಷಗಳಿಂದ ಇದೇ ನಮ್ಮ ಜೀವನಕ್ಕೆ ಆಧಾರ. ಇದು ನನ್ನಂಥ ನೂರಾರು ಹೆಂಗಸರ ಬದುಕು. ನಮ್ಮ ದೊರೆ ಒಂದನೇ ರಾಮ ಈ ನದಿಯನ್ನು ದೊರೆಗಳ ನದಿ ಎಂದು ಕರೆದರೂ ಇದು ನಮ್ಮೆಲ್ಲರ ಜೀವನದಿ. ಹಾಗಾಗಿಯೇ ನಾವೆಲ್ಲರೂ ಪ್ರತಿವರ್ಷ ಲೋಯ್‍ಕ್ರತಂಗ್‍ನ್ನು ತಪ್ಪದೇ ಆಚರಿಸುತ್ತೇವೆ (ನವೆಂಬರ್ ತಿಂಗಳಿನಲ್ಲಿ ನೀರಿನದೇವತೆ ಗೌರವ ಸೂಚಿಸುವ ಹಬ್ಬ. ಬಾಳೆ ದಿಂಡಿನಲ್ಲಿ, ಬಾಳೆ ಎಲೆ ಮೇಲೆ ಕಮಲ, ಚೆಂಡು ಹೂವು, ದೀಪ, ಊದಿನ ಕಡ್ಡಿ ಇಟ್ಟು ತೇಲಿ ಬಿಡಲಾಗುತ್ತದೆ. ಕೆಲವು ಬಾರಿ ತಲೆಕೂದಲಿನ ಎಳೆ, ಉಗುರನ್ನೂ ಇಡಲಾಗುತ್ತದೆ. ಕೆಟ್ಟ ಶಕ್ತಿಗಳನ್ನು ದೂರವಿಡುವ ಸಂಕೇತವಿದು. ತಮ್ಮನ್ನು ಪೊರೆಯುವ ನದಿಗೆ ವಂದನೆ ಸಲ್ಲಿಸುತ್ತಲೇ, ಈವರೆಗೆ ಮಾಡಿದ ತಪ್ಪು, ಉಂಟಾದ ಮಾಲಿನ್ಯಕ್ಕೆ ಕ್ಷಮೆ ಯಾಚಿಸುವ ಆಚರಣೆ ಇದಾಗಿದೆ)’ ಎಂದವಳ ಕಣ್ಣಲ್ಲಿ ನದಿಯ ಬಗ್ಗೆ ಪ್ರೀತಿಯ ಜತೆ ಬದುಕು ಮುಳುಗದಂತೆ ಅದು ಕೊಟ್ಟ ಆತ್ಮವಿಶ್ವಾಸದ ಬೆಳಕಿತ್ತು.

ಮರುದಿನ ಇದೇ ನದಿ ತೀರದಲ್ಲಿರುವ ರಾಜರ ಬೇಸಿಗೆ ಅರಮನೆ ಬಾಂಗ್ ಪಾ ಇನ್‍ ಅರಮನೆಯಲ್ಲಿ ಸುತ್ತಾಡುತ್ತಿದ್ದೆವು. ಅರಮನೆ ಹಿಂಭಾಗದ ಉದ್ಯಾನವನದಲ್ಲಿ ಕಂಡಿತ್ತು ಅಮೃತಶಿಲೆಯ ಸ್ಮಾರಕ ಮತ್ತು ಫಲಕ. ನದಿಗೆ ಬಲಿಯಾದ ರಾಣಿಯ ಬಗ್ಗೆ ಅದು ಎಂದರು ಸ್ಥಳೀಯರು. ಕೇಳುವ ಕಿವಿಯಿದ್ದರೆ ಕಲ್ಲೂ ಕತೆ ಹೇಳುತ್ತದಂತೆ… ಇದಂತೂ ದುರಂತ ಕತೆಯ ಕಲ್ಲೇ! ಕೇವಲ ಹತ್ತೊಂಬತ್ತು ವರ್ಷ ಬದುಕಿದ (1860-1880) ಅ ರಾಣಿಯ ಹೆಸರು ಸುನಂದಕುಮಾರಿ ರತನ, ರಾಜ ನಾಲ್ಕನೇ ರಾಮ ಮತ್ತು ರಾಜಕುವರಿ ಪಿಯಾಮ್ ಸುಚರಿತಕುಲ್‍ರ ಐದನೇ ಮಗಳು. ರಾಜರಲ್ಲಿ ಬಹುಪತ್ನಿತ್ವ ಪ್ರತಿಷ್ಠೆಯ ವಿಷಯವಾಗಿದ್ದ ಕಾಲವದು. ಅದೂ ಅಲ್ಲದೇ ಒಬ್ಬನೇ ರಾಜನ ಬೇರೆ ಪತ್ನಿಯರ ಮಕ್ಕಳ ನಡುವೆ ವಿವಾಹವೂ (ಶುದ್ಧರಕ್ತ, ಒಗ್ಗಟ್ಟು..ಇನ್ನಿತರ ಕಾರಣಗಳು) ಸಾಮಾನ್ಯವಾಗಿತ್ತು. ಹಾಗಾಗಿ ರಾಜನ ಎಂಭತ್ತೆರಡು ಮಕ್ಕಳ ಪೈಕಿ ತನ್ನ ಮಲಸಹೋದರ ಐದನೇರಾಮನನ್ನು ಷೋಡಶ ವರ್ಷದ ಕನ್ಯೆಯಾಗಿ ವರಿಸಿ, ಪತ್ನಿ ಮತ್ತು ಪಟ್ಟದ ರಾಣಿಯಾದಳು ಸುನಂದಾ. ಅವಳ ಹಿಂದೆಯೇ ಅವಳ ಇಬ್ಬರು ತಂಗಿಯರನ್ನೂರಾಜ ವಿವಾಹವಾಗಿದ್ದ.

ಮದುವೆಯ ನಂತರ ಕನ್ನಭೋರ್ನ್ ಭೆಚರತನ ಎಂಬ ರಾಜಕುಮಾರಿಯ ಜನನವೂ ಆಗಿ ಮಗುವಿಗೆ ಒಂದು ವರ್ಷ ತುಂಬುವ ಮೊದಲೇ ಮತ್ತೊಮ್ಮೆ ಗರ್ಭ ಧರಿಸಿದ್ದಳು ರಾಣಿ ಸುನಂದಾ. ರಾಜನಿಗೆ ಅನೇಕ ಪತ್ನಿಯರಿದ್ದರೂ ಈಕೆಯೆ ಪ್ರೀತಿಪಾತ್ರಳು ಎಂದು ಹೇಳಲಾಗುತ್ತಿತ್ತು, ಜತೆಗೇ ಎರಡನೇ ಬಾರಿ ಗಂಡು ಮಗು ಜನಿಸುವ ಸಾಧ್ಯತೆ ಹೆಚ್ಚಾಗಿದ್ದು ಉತ್ತಾರಾಧಿಕಾರಿಯ ನಿರೀಕ್ಷೆಯಲ್ಲಿದ್ದರು. ವಿಧಿ ಬೇರೆಯೇ ಬರೆದಿತ್ತು. ವಿಹಾರಕ್ಕಾಗಿ ತನ್ನ ಅರಮನೆಯಿಂದ ಬೇಸಿಗೆ ಅರಮನೆಗೆ ಹೋಗಬಯಸಿದ್ದಳು ರಾಣಿ. ಸರಿ, ರಾಣಿ ಮತ್ತು ರಾಜಕುಮಾರಿಯನ್ನು ವಿಶೇಷ ದೋಣಿಯಲ್ಲಿ ಕೂರಿಸಿ ನದಿಯಲ್ಲಿ ಅದನ್ನುದೊಡ್ಡ ದೋಣಿಯ ಸಹಾಯದಿಂದ ಎಳೆದೊಯ್ಯುವ ವ್ಯವಸ್ಥೆ ಮಾಡಲಾಗಿತ್ತು. ರಾಜಪರಿವಾರದವರ ಜತೆ ಇತರರಿಗೆ ಸ್ಥಾನವಿಲ್ಲವಾದ್ದರಿಂದ ಈ ಏರ್ಪಾಟು. ಆದರೆ ಈ ನದಿಯಲ್ಲಿ ಪ್ರಬಲ ಸುಳಿಗಳು ಸಾಮಾನ್ಯ. ಅಂಥದ್ದೇ ಅನಿರೀಕ್ಷಿತ ಸುಳಿಗೆ ಸಿಕ್ಕು ಸಣ್ಣದೋಣಿ ತಲೆಕೆಳಗಾಯಿತು.ರಾಣಿ ಮತ್ತು ರಾಜಕುಮಾರಿ ನೀರುಪಾಲಾದರು. ದೊಡ್ಡ ದೋಣಿಯಲ್ಲಿ ಸಾಕಷ್ಟು ಅಂಗರಕ್ಷಕರು, ತೀರದಲ್ಲಿದ್ದ ಜನಸಾಮಾನ್ಯರ ಕಣ್ಣೆದುರು ನಡೆದ ಘಟನೆಇದು. ಈಜು ಬರದ ತಾಯಿ-ಮಗಳನ್ನು ರಕ್ಷಿಸುವುದು ಕಷ್ಟವಾಗಿರಲಿಲ್ಲ. ಆದರೆ ಯಾರೂ ಮುಂದಾಗಲಿಲ್ಲ !!

ಕಾರಣಎರಡು; ಮೊದಲನೆಯದ್ದು ರಾಜಪರಿವಾರದವರನ್ನು ಜನಸಾಮಾನ್ಯರು ಸ್ಪರ್ಶಿಸುವಂತಿಲ್ಲ, ಎಂಥದ್ದೇ ಸಂದರ್ಭದಲ್ಲೂ!ಅಕಸ್ಮಾತ್ ಮುಟ್ಟಿದರೆ ಮರಣದಂಡನೆಯೇ ಶಿಕ್ಷೆ. ಇದು ಅನಾದಿಕಾಲದಿಂದ ನಡೆದು ಬಂದ ನಿಯಮ.(ರಾಜನೆಂದರೆ ಪ್ರತ್ಯಕ್ಷ ದೇವರು ಎಂದು ಜನ ಈಗಲೂ ನಂಬಿದ್ದಾರೆ. ಹಾಗಾಗಿ ಈ ಮುಟ್ಟುವುದರ, ಪ್ರಶ್ನಿಸುವುದರ ವಿರುದ್ಧ ನಿಯಮಗಳು. ಪ್ರಸ್ತುತ ಕೋವಿಡ್‍ನಂಥ ಕಠಿಣ ಪರಿಸ್ಥಿತಿಯಲ್ಲಿ ಈಗಿನ ದೊರೆ ತನ್ನ ದೇಶ ಬಿಟ್ಟು ವಿಶೇಷ ಅನುಮತಿ ಮೇರೆಗೆ ಜರ್ಮನಿಯ ಐಷಾರಾಮಿ ಹೊಟೆಲ್‍ನಲ್ಲಿ ಇಪ್ಪತ್ತು ಉಪಪತ್ನಿಯರೊಂದಿಗೆ ದಿಗ್ಭಂಧನದಲ್ಲಿ ಇದ್ದ ಬಗ್ಗೆ ದೊಡ್ಡಚರ್ಚೆಯಾಗಿದೆ. ಆದರೂ ಅಲ್ಲಿನ ನಿಯಮಗಳ ಪ್ರಕಾರ ಜನಸಾಮಾನ್ಯರು ರಾಜನ ಬಗ್ಗೆ ದನಿ ಎತ್ತುವಂತಿಲ್ಲ. ಅದು ತಪ್ಪು ಎಂಬ ಭಾವನೆಯಿಂದ ಜನರು ಸುಮ್ಮನಿದ್ದಾರೆ).

ಎರಡನೆಯದ್ದು ನದಿಯಲ್ಲಿರುವ ಅತೃಪ್ತ ಚೇತನಗಳು ಮುಳುಗುತ್ತಿರುವ ವ್ಯಕ್ತಿಯನ್ನು ಬದುಕಿಸಿದರೆ, ಆ ಪ್ರಯತ್ನ ಮಾಡಿದವರನ್ನು ಬಲಿ ತೆಗೆದುಕೊಳ್ಳುತ್ತವೆ ಎಂಬ ಜನರ ಬಲವಾದ ಮೂಢ ನಂಬಿಕೆ. ನಂಬಲು ಕಷ್ಟವಾದರೂ ಆ ದಿನ ನೂರಾರು ಜನರ ಕಣ್ಣೆದುರು ಹರೆಯದ ರಾಣಿ ಮತ್ತು ಮುದ್ದುಮಗು ನೀರಿನಲ್ಲಿ ಮುಳುಗಿದರೂ, ಯಾರೊಬ್ಬರೂ ಅವರನ್ನು ಉಳಿಸುವ ಪ್ರಯತ್ನ ಮಾಡಲಿಲ್ಲ. ಅಮೂಲ್ಯ ಮೂರು ಜೀವಗಳು ನೀರುಪಾಲಾದವು! ಈ ಘಟನೆ ತಿಳಿದ ದೊರೆ, ಅಂಗರಕ್ಷಕರ ಈ ಕೃತ್ಯದಿಂದ ಕುಪಿತನಾದ, ಅವರಿಗೆ ಶಿಕ್ಷೆ ವಿಧಿಸಿದ. ದುಃಖತಪ್ತನಾಗಿ ಏಳು ತಿಂಗಳ ಕಾಲ ತನ್ನ ಮೆಚ್ಚಿನರಾಣಿ, ಮಕ್ಕಳ ದೇಹ ಹಾಗೇ ಕಾಪಿಟ್ಟು, ಹೊಸ ಕಟ್ಟಡ ಕಟ್ಟಿಸಿ ನಂತರ ಅತ್ಯಂತ ವೈಭವದಿಂದ ಅಂತ್ಯಸಂಸ್ಕಾರ ಮತ್ತು ಮೆರವಣಿಗೆಯನ್ನು ನಡೆಸಿದ. ತಗುಲಿದ ಖರ್ಚು ಸುಮಾರು ಮೂವತ್ಮೂರುಕೋಟಿ ರೂಪಾಯಿಗಳು! ಏನಾದರೇನು, ಜೀವ ಮರಳಿ ಬರಲಿಲ್ಲ !!ಆದರೆ ಈ ಘಟನೆಯಿಂದ ರಾಜ ಪರಿವಾರದವನ್ನು ಸಾಮಾನ್ಯರು ಮುಟ್ಟುವಂತಿಲ್ಲ ಎಂಬ ನಿಯಮದಲ್ಲಿ ತಿದ್ದುಪಡಿಯಾಗಿದ್ದು ಸಮಾಧಾನದ ವಿಷಯ. ಒಟ್ಟಿನಲ್ಲಿ ರಾಜಇತಿಹಾಸzಲ್ಲಿ ಇದೊಂದು ದುರಂತ ಅಧ್ಯಾಯ.

ಹೀಗೆ ನದಿಯ ಬಗ್ಗೆ ಬಾಳು ನೀಡಿತು ಎಂದು ಪ್ರೀತಿ, ಅತೃಪ್ತ ಚೇತನಗಳಿವೆ ಎಂದು ಭಕ್ತಿ, ಬಲಿ ತೆಗೆದುಕೊಳ್ಳುತ್ತದೆ ಎಂದು ಭಯ ಹೀಗೆ ಅವರವರ ಭಾವಕ್ಕೆ ತಕ್ಕದಾಗಿ ವಿಭಿನ್ನ ದೃಷ್ಟಿ ಜನರಲ್ಲಿವೆ. ಆದರೆ ಮೇ ನಾಮ್ ಚಾವೋ ಫ್ರಾಯಾ ಮಾತ್ರ ಎಲ್ಲವನ್ನೂ ಒಡಲಲ್ಲಿಟ್ಟು ಹರಿಯುತ್ತಲೇ ಇದೆ–ಶತಶತಮಾನಗಳಿಂದ!!


Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *