ಲೋಕದ ಕಣ್ಣು/ ಪ್ರೀತಿಗೊಲಿದ ಹೆಣ್ಣು ಸೋಹ್ನಿ!- ಡಾ.ಕೆ.ಎಸ್. ಚೈತ್ರಾ


ಚೆಂದದ ಚಿತ್ತಾರ ಬರೆದು ಮಡಕೆ ಮಾರುತ್ತಿದ್ದ ಹೆಣ್ಣು ಸೋಹ್ನಿ ಪ್ರವಾಸಿ ವ್ಯಾಪಾರಿಯನ್ನು ಮೋಹಿಸಿದ ಪ್ರಸಂಗ, ಬರೀ ಹೆಣ್ಣು ಗಂಡುಗಳ ಪ್ರೇಮಕಥೆಯಾಗಿ ಉಳಿಯಲಿಲ್ಲ. ಸಮಾಜದ ಜಾತಿ, ಧರ್ಮ, ಅನೀತಿ, ಅಕ್ರಮಗಳ ಬಣ್ಣಗಳು ಅದಕ್ಕೆ ಅಂಟಿಕೊಂಡವು. ಈ ಮೋಹಪಾಶದ ಕಥೆ ದುರಂತದಲ್ಲಿ ಕೊನೆಯಾದರೂ ಸೋಹ್ನಿಯ ಧೈರ್ಯ, ಛಲ ಮತ್ತು ಪ್ರೀತಿನಿಷ್ಠೆ ಜಾನಪದದಲ್ಲಿ ಉಳಿಯಿತು. ಸೋಹ್ನಿ- ಮಹಿವಾಲ್ ಪ್ರೀತಿಪ್ರೇಮ ಚೆನಾಬ್ ನದಿಯ ಉದ್ದಕ್ಕೂ ಇಂದಿಗೂ ಹರಿಯುತ್ತಿದೆ.

ಕಾಶ್ಮೀರ ಪ್ರವಾಸದಲ್ಲಿ ಹಿಮ ಹೊದ್ದ ಸೂಚೀಪರ್ಣ ಮರಗಳನ್ನು ನೋಡುತ್ತಾ ಬೇಸರ ಬಂದಿತ್ತು. ಹಿಮ ನೋಡುವ ಆಸೆ ಎರಡೇ ದಿನಕ್ಕೆ ಮುಗಿದಿತ್ತು. ಮೈ ಕೊರೆವ ಚಳಿ, ನೋಡಿದಷ್ಟೂ ಬರೀ ಬಿಳಿ! ಅದರ ಜತೆ ತೆವಳುವ ವಾಹನ, ಅಲ್ಲಲ್ಲಿ ರಸ್ತೆ ತಡೆ. ನನ್ನ ಅಸಮಾಧಾನ ಗುರುತಿಸಿದ ನಮ್ಮ ಸಾರಥಿ ದೀಪು ಸಿಂಗ್, ಜಮ್ಮು ಕಾಶ್ಮೀರದ ಉತ್ತರ ಭಾಗದ ಚೆನಾಬ್ ನದಿ ದಡದ ಮೇಲೆ ರೈಲ್ವೆ ಸೇತುವೆ ನಿರ್ಮಾಣವಾಗುತ್ತಿದೆ. ಅದಕ್ಕಾಗಿ ಕೆಲಸ ಪ್ರಗತಿಯಲ್ಲಿದೆ, ಹೀಗಾಗಿ ವಾಹನಗಳ ಓಡಾಟ ಹೆಚ್ಚು. ಜಮ್ಮುವಿನ ಬಕ್ಕಾಲ್ ಮತ್ತು ಶ್ರೀನಗರದ ಕೌರಿ ಪ್ರದೇಶಕ್ಕೆ ಸಂಪರ್ಕ ಸಾಧಿಸಲಿರುವ ಈ ಮೂವತ್ತೈದು ಮೀಟರ್ ಕಮಾನಿನಾಕಾರದ ಸೇತುವೆ, ಕಾಮಗಾರಿ ಪೂರ್ಣಗೊಂಡ ಬಳಿಕ ಜಗತ್ತಿನ ಅತಿ ಎತ್ತರದ ಸೇತುವೆ ಎಂಬ ಹಿರಿಮೆಗೆ ಪಾತ್ರವಾಗಲಿದೆ ಎಂದು ಹೇಳುತ್ತಾ ಇದರಿಂದ ಬಹಳ ಅನುಕೂಲವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ. (2019 ರಲ್ಲಿ ಮುಗಿಯಬೇಕಿದ್ದ ಈ ಕಾರ್ಯ ಇದೀಗ ಕೊನೆಯ ಹಂತದಲ್ಲಿದೆ).

ಚಂದ್ರಭಾಗಾ

ಚೆನಾಬ್ ನದಿಯನ್ನು ಋಗ್ವೇದದಲ್ಲಿ ಅಸ್ಕಿನಿ (ಗಾಢ ವರ್ಣದ ನೀರು) ಎಂದು ಬಣ್ಣಿಸಲಾಗಿದ್ದರೆ ಅಥರ್ವ ವೇದದಲ್ಲಿ ಕೃಷ್ಣಾ ಎಂದು ಕರೆಯಲಾಗಿದೆ. ಮಹಾಭರತದಲ್ಲಿ ಚಂದ್ರಾ ಮತ್ತು ಭಾಗಾ ಎಂಬ ನದಿಗಳ ಸಂಗಮದಿಂದ ಉಂಟಾದ ಇದನ್ನು ಚಂದ್ರಭಾಗಾ ಎಂದು ಹೆಸರಿಸಲಾಗಿದೆ. ಕ್ರಮೇಣ ಗ್ರೀಕ್ ಮತ್ತು ಪರ್ಷಿಯನ್ ಪ್ರಭಾವದಿಂದ ಚೆನಾಬ್ ಆಗಿ ರೂಢಿಯಲ್ಲಿದೆ. ಈ ನದಿಯನ್ನು ಕುರಿತು ‘ನೀವು ದಕ್ಷಿಣದಿಂದ ಬಂದವರು, ನದಿಗಳು ನಿಮ್ಮಲ್ಲೂ ಇವೆ. ಆದರೆ ಪಂಚನದಿಗಳ ನಾಡು ನಮ್ಮ ಪಂಜಾಬ್ ! ಅದರಲ್ಲೊಂದು ಈ ಚೆನಾಬ್, ಪಾಕಿಸ್ತಾನ- ಭಾರತಗಳಲ್ಲಿ ಹರಿವ ದೊಡ್ಡ ನದಿ. ಬಹಳ ಪ್ರಸಿದ್ಧವಾದ ಗಂಗಾ ಯಮುನೆಯರು ದೇವ-ದೇವಿಯರನ್ನು ಸೃಷ್ಟಿಸುತ್ತಾರೆ. ಆದರೆ ಚೆನಾಬ್‍ನ ನೀರು ಮಾತ್ರ ಪ್ರೇಮಿಯನ್ನು ಸೃಷ್ಟಿಸಬಲ್ಲದು; ಇದು ನಮ್ಮಲ್ಲಿ ರೂಢಿಯಲ್ಲಿರುವ ಮಾತು. ಅದು ನಿಜವೂ ಹೌದು. ನಮ್ಮ ಪಂಜಾಬ್‍ನ ಅದ್ಭುತ ಪ್ರೇಮ ಕತೆಗಳು ಇದೇ ನದಿಯ ತೀರದಲ್ಲಿ ಜನ್ಮತಾಳಿವೆ, ಕೊನೆಗೊಂಡಿವೆ.

ನಿಜಕ್ಕೂ ನಡೆದಿತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಹದಿನೇಳು-ಹದಿನೆಂಟನೇ ಶತಮಾನದಲ್ಲಿ ಬರೆದ, ಹಾಡಿದ ಈ ದುರಂತ ಪ್ರೇಮ ಪ್ರಸಂಗಗಳು ಇಂದಿಗೂ ಪ್ರೇಮಿಗಳಿಗೆ, ಕಲಾವಿದರಿಗೆ, ಚಲನಚಿತ್ರಗಳಿಗೆ ಸ್ಫೂರ್ತಿಎನ್ನುವುದು ಅವುಗಳ ಮಹತ್ವ ಮತ್ತು ಚೆನಾಬ್‍ನ ವೈಶಿಷ್ಟ್ಯವನ್ನು ತೋರುತ್ತದೆ. ಪಂಜಾಬ್‍ನ ಮನೆಮನೆಗಳಲ್ಲಿಯೂ ಈ ಕತೆಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಹಾಡಲಾಗುತ್ತದೆ. ಕಿಸ್ಸಾ ಎಂದು ಕರೆಯಲಾಗುವ ಇವು ನಮ್ಮ ಸಂಸ್ಕøತಿಯ ಮುಖ್ಯ ಅಂಗ’ಎಂದ ನಮ್ಮ ಸಾರಥಿಯ ಮುಖದಲ್ಲಿ ಹೆಮ್ಮೆ ನಲಿಯುತ್ತಿತ್ತು.

ಸುಂದರಿ ಸೋಹ್ನಿ

ಹದಿನೆಂಟನೇ ಶತಮಾನದಲ್ಲಿ ತೂಲ್ಹಾ ಎಂಬ ಮಡಕೆ ಮಾಡುವ ಕುಂಬಾರನಿಗೆ ಸೋಹ್ನಿ ಎಂಬ ಮುದ್ದಾದ ಮಗಳಿದ್ದಳು. ಅವರಿದ್ದ ಪಂಜಾಬ್‍ನ ಗುಜರಾತ್ (ಈಗ ಪಾಕಿಸ್ತಾನದಲ್ಲಿದೆ) ಆಗ ದೆಹಲಿ ಮತ್ತು ಬುಖಾರಾದ (ಉಜ್ಬೆಕಿಸ್ತಾನ್) ನಡುವಿನ ವ್ಯವಹಾರಕ್ಕೆ ಬಳಸುವ ಮುಖ್ಯಮಾರ್ಗದಲ್ಲಿತ್ತು. ಪುಟ್ಟ ಸೋಹ್ನಿ ತನ್ನ ತಂದೆಗೆ ಬಾಲ್ಯದಿಂದಲೇ ಮಡಕೆ ಮಾಡುವುದರಲ್ಲಿ ಸಹಾಯ ಮಾಡುತ್ತಿದ್ದಳು. ನದಿಯ ತೀರದಲ್ಲಿದ್ದ ರಾಮ್ ಪ್ಯಾರಿ ಮಹಲ್‍ನ ಬಳಿ ಅವರ ಚಿಕ್ಕ ಅಂಗಡಿಯಿತ್ತು. ನೀರಿನ ಹೂಜಿ, ಸುರಾಹಿಗಳು ಸಿದ್ಧವಾದೊಡನೆ ಸೋಹ್ನಿ ಅವುಗಳ ಮೇಲೆ ಚೆಂದದ ಚಿತ್ತಾರ ಬರೆದು ಅವುಗಳನ್ನು ಮಾರಾಟಕ್ಕೆ ಅಣಿಮಾಡುತ್ತಿದ್ದಳು.

ಹೀಗಿರುವಾಗ ಒಮ್ಮೆ ಬುಖಾರಾದ ಶ್ರೀಮಂತ ವರ್ತಕ ಇಜ್ಜತ್ ಬೇಗ್ ಪಂಜಾಬಿಗೆ ವ್ಯಾಪಾರಕ್ಕಾಗಿ ದೊಡ್ಡ ತಂಡದೊಂದಿಗೆ ಬಂದವನು ಇವರಿದ್ದ ಹಳ್ಳಿ ಗುಜರಾತ್‍ನಲ್ಲಿ ತಂಗಿದ. ಆಗ ಅವನ ಕಣ್ಣಿಗೆ ಬಿದ್ದವಳು ಸುಂದರಿ ಸೋಹ್ನಿ. ಮೊದಲ ನೋಟದಲ್ಲೇ ಸಂಪೂರ್ಣ ಮರುಳಾದ ಆತ ಆಕೆಯನ್ನು ಕಾಣಲು ದಿನವೂ ಅಂಗಡಿಗೆ ಬಂದು ಪ್ರತಿನಿತ್ಯ ನೀರಿನ ಹೂಜಿ-ಮಡಕೆ ಖರೀದಿಸಲಾರಂಭಿಸಿದ; ಇದ್ದಬದ್ದ ಹಣವೆಲ್ಲ ಖಾಲಿಯಾಯಿತು! ಪ್ರಾಯದ ಸೋಹ್ನಿಗೆ ಅಂಗಡಿಯಲ್ಲಾದ ಪರಿಚಯ- ಸ್ನೇಹ, ಪ್ರೇಮಕ್ಕೆ ತಿರುಗಲು ಹೆಚ್ಚು ಸಮಯ ಬೇಕಾಗಲಿಲ್ಲ.

ಒಂದೆರಡು ದಿನ ವಾರದ ಕ್ಷಣಿಕ ಪ್ರೇಮ ಅದಾಗಿರಲಿಲ್ಲ. ಏಕೆಂದರೆ ಇಜ್ಜತ್ ಬೇಗ್ ಜತೆಗೆ ಬಂದಿದ್ದ ಇತರ ವರ್ತಕರು ವ್ಯಾಪಾರ ಮುಗಿಸಿ ಮರಳಿ ಹೊರಟಾಗ ಇಜ್ಜತ್ ಬೇಗ್ ಇಲ್ಲಿಯೇ ಉಳಿದ. ಉತ್ತಮ ಕುಲಕ್ಕೆ ಸೇರಿದ್ದ ಆತ ಪ್ರೇಮ ಪಾಶಕ್ಕೆ ಸಿಲುಕಿ, ದಿವಾಳಿಯಾಗಿ ತೂಲ್ಹಾನ ಮನೆಯಲ್ಲಿ ಸೇವಕನಾಗಿ ಕೆಲಸಕ್ಕೆ ಸೇರಿದ. ಮನೆಯ ಕೆಲಸ ಮಾಡುವುದಷ್ಟೇ ಅಲ್ಲ ಹೆಚ್ಚು ದುಡ್ಡು ಸಂಪಾದಿಸಲು ಹಳ್ಳಿಯ ಜನರ ಎಮ್ಮೆಗಳನ್ನೂ ಮೇಯಿಸಲು ಕರೆದೊಯ್ಯುತ್ತಿದ್ದ. ಹೀಗಾಗಿಯೇ ಅವನ್ನು ಮಹಿವಾಲ್ (ಎಮ್ಮೆ ಮೇಯಿಸುವವನು) ಎಂದು ಜನ ಕರೆಯತೊಡಗಿದರು.

ಸೋಹ್ನಿ-ಮಹಿವಾಲ್ ಗುಟ್ಟಾಗಿ ಭೇಟಿಯಾಗುತ್ತಿದ್ದರು, ತಂತಮ್ಮ ಪ್ರಪಂಚದಲ್ಲಿ ಮುಳುಗಿದ್ದರು. ಆದರೆ ಪ್ರೇಮವನ್ನು ಎಷ್ಟು ದಿನ ಮುಚ್ಚಿಡಲು ಸಾಧ್ಯ. ಕುಂಬಾರರ ಸಮುದಾಯದಲ್ಲಿ ಈ ಪ್ರೇಮ ಪ್ರಕರಣ ದೊಡ್ಡ ವಿವಾದವನ್ನೇ ಹುಟ್ಟುಹಾಕಿತು. ಕುಂಬಾರರ ಹುಡುಗಿ ಎಲ್ಲೋ ಹೊರಗಿನಿಂದ ಬಂದ ಬೇರೆ ಸಮುದಾಯದ ಹುಡುಗನನ್ನು ಮದುವೆಯಾಗುವುದು ಸಮಾಜದ ರೀತಿ ನೀತಿಗೆ ವಿರುದ್ಧವಾಗಿತ್ತು. ಕೂಡಲೇ ಆಕೆಗೆ ಯಾವ ಸುಳಿವನ್ನೂ ಕೊಡದೇ ಅವಳ ತಂದೆ-ತಾಯಿ ತಮ್ಮದೇ ಸಮುದಾಯದ ಹುಡುಗನೊಂದಿಗೆ ಸೋಹ್ನಿಯ ಮದುವೆ ನಿಶ್ಚಯಿಸಿದರು. ಇದ್ದಕ್ಕಿದ್ದಂತೆ ಮದುವೆಯ ದಿಬ್ಬಣ ಬಾರಾತ್ ಮನೆಯ ಮುಂದೆ ಬಂದಾಗ ಸೋಹ್ನಿಗೆ ಮದುವೆಯಾಗದೇ ಬೇರೆ ದಾರಿಯೇ ಇರಲಿಲ್ಲ. ಮದುವೆಯಾಗಿ ಡೋಲಿ ಹತ್ತಿ ಹಮಿರ್‍ಪುರದಲ್ಲಿದ್ದ ಪತಿಗೃಹಕ್ಕೆ ಹೋದಳು ಸೋಹ್ನಿ.

ಫಕೀರನಾದ ಪ್ರಿಯಕರ

ತನ್ನ ಪ್ರೇಯಸಿಯ ಮದುವೆ, ಅಗಲುವಿಕೆಯಿಂದ ನೊಂದ ಮಹಿವಾಲ್ ಜಗತ್ತನ್ನೇ ತಿರಸ್ಕರಿಸಿದ. ಎಲ್ಲಾ ಐಹಿಕ ಸುಖ ತ್ಯಜಿಸಿ ಫಕೀರನಂತೆ ವಾಸಿಸತೊಡಗಿದ. ಅಲ್ಲಿಲ್ಲಿ ಸುತ್ತಿ ಕಡೆಗೆಚೆನಾಬ್ ನದಿಯ ತೀರದಲ್ಲಿದ್ದ ಗುಡಿಸಿಲಲ್ಲಿ ವಾಸಿಸಲಾರಂಭಿಸಿದ. ಹಾಗೊಮ್ಮೆ ತಿರುತಿರುಗಿ ಭಿಕ್ಷೆ ಬೇಡುವಾಗ ಸೋಹ್ನಿಯಿದ್ದ ಮನೆಗೆ ಬಂದ. ಪ್ರೇಮಿಗಳಿಗೆ ಗುರುತು ಸಿಕ್ಕಿತು. ಸೋಹ್ನಿಯಿದ್ದ ಹಮಿರ್‍ಪುರ್ ಮತ್ತು ಅವನ ಗುಡಿಸಲಿನ ನಡುವೆ ಚೆನಾಬ್ ಹರಿಯುತ್ತಿತ್ತು. ಪ್ರೇಮದಲ್ಲಿ ಮುಳುಗಿದವರಿಗೆ ಅಲೆಗಳೇನು ಲೆಕ್ಕ? ಸೋಹ್ನಿ ರಾತ್ರಿ ಎಲ್ಲರೂ ಮಲಗಿದ ಬಳಿಕ ಚೆನಾಬ್ ನದಿ ಈಜಿ ಮಹಿವಾಲ್ ಇದ್ದಲ್ಲಿ ತಲುಪಿದಳು. ಪ್ರೇಮಿಗಳ ಪುನರ್ಮಿಲನ ಚೆನಾಬ್ ತೀರದಲ್ಲಿ ನಡೆಯಿತು. ಅಂದಿನಿಂದ ನಿತ್ಯವೂ ರಾತ್ರಿ ಅವರಿಬ್ಬರೂ ಭೇಟಿಯಾಗುತ್ತಿದ್ದರು. ಈಜುವಾಗ ಮುಳುಗದಿರಲು ಸೋಹ್ನಿ ಚೆನ್ನಾಗಿ ಒಣಗಿಸಿ, ಬೇಯಿಸಿದ ಮಡಕೆಯನ್ನು ಬೋರಲಾಗಿಟ್ಟು ಬಳಸುತ್ತಿದ್ದಳು. ಅದನ್ನು ಮನೆಯಿಂದ ಸ್ವಲ್ಪ ದೂರದಲ್ಲಿ ಬಚ್ಚಿಡುತ್ತಿದ್ದಳು.

ನಿಧಾನವಾಗಿ ಈ ವಿಷಯದ ಕುರಿತು ಊರಿನಲ್ಲೆಲ್ಲಾ ಗುಸುಗುಸು ಆರಂಭವಾಯಿತು. ಮನೆಯಲ್ಲಿದ್ದ ಆಕೆಯ ಅತ್ತೆ ಮತ್ತು ನಾದಿನಿಯ ಕಿವಿಗೂ ಇದು ಬಿತ್ತು. ಅನುಮಾನ ಬಂದು ನಾದಿನಿ, ಸೋಹ್ನಿಯನ್ನು ಹಿಂಬಾಲಿಸಿದಳು. ಸೋಹ್ನಿ ನದಿ ಈಜಿದ್ದನ್ನು ನೋಡಿದಳಲ್ಲದೇ ಆಕೆ ಮಡಕೆಯನ್ನು ಬಚ್ಚಿಟ್ಟ ಸ್ಥಳವನ್ನು ಕಂಡಳು. ಮನೆಗೆ ಬಂದು ಅತ್ತೆ-ನಾದಿನಿಯ ಸಮಾಲೋಚನೆ ನಡೆಯಿತು. ಸೋಹ್ನಿಯ ಗಂಡ ಕಾರ್ಯನಿಮಿತ್ತ ಪರಸ್ಥಳದಲ್ಲಿದ್ದ ಕಾರಣ ಮನೆಯ ಮರ್ಯಾದೆ ಕಾಪಾಡುವ ಹೊಣೆ ಅವರದ್ದಾಗಿತ್ತು! ಮರುದಿನ ಬೆಳಿಗ್ಗೆ ಅವರಿಬ್ಬರೂ ಸೇರಿ ಸೋಹ್ನಿಯ ಮಡಕೆಯ ಬದಲು ಅರ್ಧ ಒಣಗಿ-ಬೆಂದ, ಗಟ್ಟಿ ಇಲ್ಲದ ಮಡಕೆಯನ್ನು ಅಲ್ಲಿಟ್ಟರು.

ಎಂದಿನಂತೆ ರಾತ್ರಿ ಪ್ರಿಯಕರನನ್ನು ಭೇಟಿಯಾಗಲು ಹೊರಟ ಸೋಹ್ನಿ ನದಿಯನ್ನು ದಾಟುವ ಯತ್ನದಲ್ಲಿದ್ದಾಗಲೇ ಮಡಕೆ ಕರಗಿತು, ಆಕೆ ಮುಳುಗಲಾರಂಭಿಸಿದಳು. ನದಿಯ ಇನ್ನೊಂದು ತೀರದಲ್ಲಿ ಪ್ರೇಮಿಯ ಆಗಮನದ ನಿರೀಕ್ಷೆಯಲ್ಲಿದ್ದ ಮಹಿವಾಲ್ ಇದನ್ನು ಕಂಡ. ಕೂಡಲೇ ಗಾಬರಿಯಿಂದ ಅವಳನ್ನು ಉಳಿಸಲು ತಾನೂ ನೀರಿಗೆ ಜಿಗಿದ. ಇಬ್ಬರೂ ಪ್ರೇಮಿಗಳು ಕಡೆಗೂ ಒಂದಾದರು, ಚೆನಾಬ್‍ನ ಒಡಲಲ್ಲಿ, ಸಾವಿನ ಮೂಲಕ!! ಪಾಕಿಸ್ತಾನದ ಹೈದರಾಬಾದಿನಿಂದ ನಲವತ್ತೇಳು ಮೈಲಿ ದೂರದಲ್ಲಿರುವ ಶಾಹ್ದಾಪುರ್‍ನಲ್ಲಿ ಸೋಹ್ನಿಯ ಗೋರಿಯಿದ್ದು ಸಾವಿರಾರು ಪ್ರೇಮಿಗಳು ತಮ್ಮ ಪ್ರೇಮ ಸಫಲವಾಗಲು ಇಲ್ಲಿಗೆ ಭೇಟಿ ನೀಡುತ್ತಾರೆ.

ಭಾರತ ಮತ್ತು ಪಾಕಿಸ್ತಾನದ ಜನಪದರಲ್ಲಿ ಪ್ರಸಿದ್ಧವಾಗಿರುವ ಈ ಪ್ರೇಮಕತೆಗಿರುವ ವಿವಿಧ ಆಯಾಮಗಳು ನಿಜಕ್ಕೂ ಬೆರಗು ಮೂಡಿಸುತ್ತವೆ. ಸಿಂಧ್‍ನ ಪ್ರಸಿದ್ಧ ಸೂಫಿ ಸಂತ ಕವಿ ಶಾಅಬ್ದುಲ್ ಲತೀಫ್ ಭಿಟ್ಟಾಯಿಯ ಕೃತಿಯಲ್ಲಿ ಸುರ್ ಸೋಹ್ನಿ ಎಂಬ ಅಧ್ಯಾಯವಾಗಿದೆ. ಸೂಫಿ ಆಧ್ಯಾತ್ಮಿಕತೆಯಲ್ಲಿ ಕಡೆಯ ಪಯಣದಲ್ಲಿ ಸೋಹ್ನಿ, ಮಹಿವಾಲ್ ಮತ್ತು ಮಡಕೆ ವಿಶಿಷ್ಟ ಸಂಕೇತಗಳಾಗಿವೆ. ಸೋಹ್ನಿಗೆ ಮಹಿವಾಲನತ್ತ ಆಕರ್ಷಣೆ ಆತ್ಮ ಪರಮಾತ್ಮರ ನಡುವಿನದ್ದು. ದೈವವನ್ನು ತಲುಪಲು ತನ್ನ ಆಧ್ಯಾತ್ಮಿಕ ಪಯಣ ಕೈಗೊಳ್ಳುವ ಸೋಹ್ನಿಗೆ ಮಡಕೆಯ ಅಗತ್ಯವಿತ್ತು; ಅಂದರೆ ಸರಿಯಾದ ಗುರುವಿನ ಅವಶ್ಯಕತೆಯಿತ್ತು. ಆಕೆಯ ಬಳಿ ಇದ್ದದ್ದು ಅರ್ಧ ಬೆಂದ ಮಡಕೆ ( ಗುರುವಾಗಲು ಅನರ್ಹ). ಗುರಿ ಸರಿ ಇದ್ದರೂ ಗುರುವನ್ನು ಆರಿಸುವಲ್ಲಿ ಆಕೆಯ ತಯಾರಿ ಪೂರ್ಣವಾಗಿರಲಿಲ್ಲ. ಮಡಕೆ ಕರಗುತ್ತಾ ನದಿಯ ಮಧ್ಯದಲ್ಲಿ ದಡದಲ್ಲಿದ್ದ ಮಹಿವಾಲವನ್ನು ಆರ್ತಳಾಗಿ ನೋಡುವ ಸೋಹ್ನಿಯ ಇಚ್ಛೆ ಅವನನ್ನು ಸೇರುವುದು (ಪರಮಾತ್ಮನಲ್ಲಿ ಒಂದಾಗುವುದು). ಹಾಗೆ ಅವರಿಬ್ಬರೂ ಒಂದಾಗಲು ಕಾರಣವಾದ ಸಾಧನ ಸಾವು. ಹೀಗೆ ಸರಳ ಪ್ರೇಮಕತೆ ಸಂಕೀರ್ಣವಾಗುತ್ತಾ ಹೋಗುತ್ತದೆ.

(ಇಲ್ಲಿ ತೋರಿಸಿರುವ ಚಿತ್ರ ಸೋಹ್ನಿ ಮಹಿವಾಲರ ವರ್ಣಚಿತ್ರ, 18ನೇ ಶತಮಾನದಲ್ಲಿ ಅಜ್ಞಾತ ಕಲಾವಿದ ಚಿತ್ರಿಸಿದ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ದೊರೆತ ಪಹಾರಿ ಶೈಲಿಯದ್ದು. ಇದೀಗ ಕ್ಯಾನ್‍ಬೆರ್ರಾದ ನ್ಯಾಶನಲ್ ಗ್ಯಾಲರಿ ಆಫ್ ಆಸ್ಟ್ರೇಲಿಯಾದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.)

ಇದರೊಂದಿಗೇ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಸೋಹ್ನಿಯ ವ್ಯಕ್ತಿತ್ವ. ಇಲ್ಲಿ ಸೋಹ್ನಿ ಚೆಲುವೆ ಮಾತ್ರವಲ್ಲ, ತಂದೆಗೆ ಸರಿಸಮಾನವಾಗಿ ಕೆಲಸವನ್ನು ಮಾಡಬಲ್ಲ ನಿಪುಣೆ. ಪ್ರೀತಿಗೆ ಒಲಿದವಳು, ಕಾರಣಾಂತರದಿಂದ ಇನ್ನೊಬ್ಬನನ್ನು ಮದುವೆಯಾಗಬೇಕಾಯಿತು. ಆದರೆ ಪ್ರೀತಿಯೇ ಇಲ್ಲದಿದ್ದ ಮೇಲೆ ಅಂಥ ಮದುವೆಗೆ ಅರ್ಥವಿಲ್ಲ ಎಂದು ಆ ಮದುವೆಯಲ್ಲಿ ಆಸಕ್ತಿ ತೋರಲಿಲ್ಲ. ಮದುವೆಯ ನಂತರವೂ ಮಹಿವಾಲನನ್ನೇ ನೆನೆಯುತ್ತಾಳೆ, ಪ್ರೀತಿಸುತ್ತಾಳೆ. ಪ್ರೇಮಿಗಳ ಮರುಭೆಟ್ಟಿಯಾದಾಗ ದಿನಾ ರಾತ್ರಿ ರಭಸವಾಗಿ ಹರಿಯುವ ಚೆನಾಬ್ ಈಜಿ ಪ್ರಿಯಕರನನ್ನು ಭೇಟಿ ಮಾಡುವವಳು ಅವಳೇ.

ಶೌರ್ಯ, ಸಾಹಸ, ಪರಾಕ್ರಮ ಇವೆಲ್ಲವೂ ಪುರುಷರಿಗೆ ಸೀಮಿತ; ಮಹಿಳೆ ಕೋಮಲೆ, ಅಬಲೆ ಎನ್ನುವ ಸಿದ್ಧಸೂತ್ರಕ್ಕೆ ಸೋಹ್ನಿ ವಿರುದ್ಧ. ಮಹಿವಾಲ್ ಅತ್ತಕಾಯುತ್ತಿದ್ದರೆ ಇತ್ತ ಎಲ್ಲರ ಕಣ್ಣು ತಪ್ಪಿಸಿ ಅಪಾಯಗಳನ್ನು ಲೆಕ್ಕಿಸದೇ ಮೊಸಳೆಗಳಿದ್ದ ನದಿಯನ್ನು ಈಜಿದ ಧೀರೆ. ಜಾತಿ, ನೀತಿ, ಲೋಕದ ಪದ್ಧತಿ ಯಾವುದೂ ಆಕೆಗೆ ಮುಖ್ಯವೆನಿಸಲಿಲ್ಲ, ಬೇಕಾಗಿದ್ದು ಪ್ರೀತಿಯೊಂದೇ! ಆದರದು ದುರಂತದಲ್ಲಿ ಕೊನೆಗೊಂಡಿದ್ದು ವಿಷಾದ ಮೂಡಿಸುತ್ತದೆ. ಸೋಹ್ನಿ-ಮಹಿವಾಲ ಕತೆ ಕೇಳಿ ಮರುಗುವಂತೆಯೇ, ಅವರಿಬ್ಬರದ್ದೂ ಅಂತರ್ಜಾತೀಯ, ಅನೈತಿಕ ಸಂಬಂಧವಾದ್ದರಿಂದ ಅದು ಸಾವಿನಲ್ಲಿ ಕೊನೆಗೊಂಡಿತು. ಆದ್ದರಿಂದಲೇ ರೂಢಿ ತಪ್ಪಬಾರದು ಎಂದು ಬುದ್ಧಿ ಹೇಳುವ ಹಿರಿಯರೂ ಸಾಕಷ್ಟಿದ್ದಾರೆ!!

ಇತಿಹಾಸದ ಪುಟಗಳನ್ನು ತಿರುವು ಹಾಕಿದಾಗ ಸಮಾಜದ ಕಟ್ಟುಪಾಡುಗಳನ್ನು ಮೀರಿ ಪ್ರೇಮ ಅಂಕುರವಾಗುವುದೂ, ಅದು ಫಲಿಸುವ ಮುನ್ನವೇ ಹೊಸಕಿಹಾಕಿ, ದುರಂತ ಅಂತ್ಯ ಕಾಣುವುದೂ ಹೊಸದಲ್ಲ. ಹೀಗಿದ್ದೂ ತನ್ನ ಪ್ರೀತಿಗಾಗಿ ತಾನೇ ದೈಹಿಕ ಸಾಹಸ ಕೈಗೊಂಡು ಮಾನಸಿಕವಾಗಿ ಸ್ಥೈರ್ಯ ಹೊಂದಿ ಜೀವವನ್ನೇ ಪಣವಾಗಿಟ್ಟ ಸೋಹ್ನಿಯನ್ನು ‘ಪ್ರೀತಿಗೊಲಿದ ಹೆಣ್ಣು’ ಎನ್ನುವುದೇ ಸರಿ!!

ಡಾ.ಕೆ.ಎಸ್.ಚೈತ್ರಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *