Uncategorizedಅಂಕಣ

ಲೋಕದ ಕಣ್ಣು/ ಪ್ರಪಂಚಕ್ಕೊಬ್ಬಳೇ ಪದ್ಮಾವತಿ! ಡಾ.ಕೆ.ಎಸ್. ಚೈತ್ರಾ


ಮಹಾರಾಜರು, ಸಾಮ್ರಾಜ್ಯಗಳ ರಾಜಕೀಯದಾಟಗಳಿಗೆ ಅರಮನೆಯ ರಾಣಿಯರ ಪ್ರಾಣವೇ ಪಣ. ಉರಿವ ಬೆಂಕಿಯಲ್ಲಿ ನವವಧುವಿನ ವೇಷ ಧರಿಸಿ ಸಾಲಂಕೃತರಾಗಿ ಜೌಹರ್ ಕೈಗೊಳ್ಳುವ ಮಹಿಳೆಯರ ಮನಸ್ಥಿತಿ ಹೇಗಿದ್ದಿರಬಹುದು? ಹೇಳಿಕೊಳ್ಳುವ ಅವಕಾಶ ಎಲ್ಲಿತ್ತು, ಒಂದೊಮ್ಮೆ ಕೂಗಿದರೂ ಕೇಳುವವರಾರು? ಕಾಲಗರ್ಭದಲ್ಲಿ ಅಡಗಿಹೋದ ಕರಾಳ ಸತ್ಯವದು. ಆದರೆ ಯುದ್ಧ, ಕ್ರೌರ್ಯ, ಕಾಮದ ಬೆಂಕಿಯಲ್ಲಿ ಬೆಂದ- ನೊಂದ ಸಾವಿರಾರು ಪದ್ಮಾವತಿಯರಿಗೆ ಇದ್ದ ಪರ್ಯಾಯ ಮಾರ್ಗವಾದರೂ ಏನು?

ರಾಜಸ್ತಾನದ ರಾಜಧಾನಿ ಜೈಪುರದಿಂದ ಸುಮಾರು ಐದೂವರೆ ತಾಸಿನ ಪಯಣದ (310 ಕಿಮೀ) ನಂತರ ಚಿತ್ತೂರನ್ನು ತಲುಪಿದ್ದೆವು. ಚಿತ್ತೂರಿನ ಕೋಟೆಯ ದಕ್ಷಿಣ ಭಾಗದಲ್ಲಿರುವ ಕೆರೆಯ ಮಧ್ಯದಲ್ಲೊಂದು ಮೂರು ಅಂತಸ್ತಿನ ಬಿಳಿಯ ಪುಟ್ಟ ಅರಮನೆ. ಇದೇ ಪದ್ಮಾವತಿ ಮಹಲ್ ! ರಾಜಸ್ತಾನದಲ್ಲಿ ಕಟ್ಟಲಾದ ಈ ರೀತಿಯ ನೀರಿನ ಮಧ್ಯದ ಇತರ ಅರಮನೆಗಳಿಗೆ ಪದ್ಮಾವತಿ ಮಹಲ್ ಸ್ಫೂರ್ತಿ ಎನ್ನಲಾಗಿದೆ. ಅಲ್ಲೊಬ್ಬ ಲಾವಣಿಕಾರ ‘ಸಾರೇ ಸಂಸಾರ್ ಮೆ ಹಮಾರೀ ಪದ್ಮಾವತಿ ಜೈಸೀ ರಾನಿ ಕೋಯೀ ನಹೀ’ ಎಂದು ಪರವಶನಾಗಿ ಹಾಡುತ್ತಿದ್ದ. ಬಣ್ಣದ ಪಗಡಿ ತೊಟ್ಟ ಆತನ ಹಾಡಿನಲ್ಲಿ ಹೆಮ್ಮೆ ಮತ್ತು ವಿಷಾದದ ಮಿಳಿತವಾಗಿತ್ತು. ಅರಮನೆಯ ಎದುರಿಗೇ ಬಿರುಬಿಸಿಲಲ್ಲೂ ನಗುವ ಗುಲಾಬಿ ಉದ್ಯಾನವನ. ಅಲ್ಲಿ ಕುಳಿತು ಹಾಡಿನ ಹಿನ್ನೆಲೆಯಲ್ಲೇ ಮಹಲಿನ ರಾಣಿ ಪದ್ಮಾವತಿಯ ಚರಿತ್ರೆಯನ್ನು ಮಾಧವ್‍ಜೀ ವಿವರಿಸತೊಡಗಿದರು.

ರಾಜಸ್ತಾನದ ಮೇವಾಡದ ರಾಜಧಾನಿಯಾಗಿದ್ದ ಚಿತ್ತೂರು, ಅಭೇದ್ಯವಾದ ಕೋಟೆಯಿಂದ ಅಜೇಯವಾಗಿತ್ತು. ಹದಿಮೂರು- ಹದಿನಾಲ್ಕನೇ ಶತಮಾನದಲ್ಲಿ ಮೇವಾಡದ ರಾಜನಾಗಿದ್ದ ರಾಣಾ ರತ್ನಸಿಂಹನ ರಾಣಿ ಪದ್ಮಾವತಿ ಅಥವಾ ಪದ್ಮಿನಿ ಎಂದು ಹೇಳಲಾಗುತ್ತದೆ. ಪದ್ಮಾವತಿ ಎಲ್ಲಿಯವಳು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಒಂದು ವಾದದ ಪ್ರಕಾರ ಆಕೆ ಸಿಂಹಳ ಅಂದರೆ ಈಗಿನ ಶ್ರೀಲಂಕಾದವಳು. ಚಿತ್ತೂರಿನ ಸುಂದರಾಂಗ ಮತ್ತು ಸಿಂಹಳದ ಸುರಸುಂದರಿಗೆ ಪ್ರೇಮ ಹುಟ್ಟಿದ್ದಾದರೂ ಹೇಗೆ ಎಂಬ ನಮ್ಮ ಸಂದೇಹಕ್ಕೆ ಸ್ವಾರಸ್ಯಕರ ಕತೆಯನ್ನು ಹೇಳಿದರು.

ಬೆಳದಿಂಗಳ ಸುಂದರಿಗೆ ಶುಕ ಸಾರಥ್ಯ

ಸಿಂಹಳದ ರಾಜ ಗಂಧರ್ವಸೇನನ ಮಗಳೆಂದು ಹೇಳಲಾಗಿರುವ ಪದ್ಮಾವತಿ ಅಪೂರ್ವ ಸುಂದರಿ, ರಾಜಕುಮಾರಿ ಪದ್ಮಾವತಿಯ ಸೌಂದರ್ಯ ದೇವಲೋಕದ ಅಪ್ಸರೆಯರೂ ನಾಚುವಂತಿತ್ತು. ಆಕೆ ಎಷ್ಟು ಬೆಳ್ಳಗಿದ್ದಳೆಂದರೆ ನೀರು ಕುಡಿದಾಗ ಅದು ಗಂಟಲ ಮೂಲಕ ಚಲಿಸುವುದು ಮತ್ತು ಊಟದ ನಂತರ ಪಾನ್ ತಿಂದರೆ ಆ ರಸದಿಂದ ಕತ್ತು ಇಡೀ ಕೆಂಪಾಗುತ್ತಿತ್ತು ಎಂದು ಹಾಡಿನಲ್ಲಿದೆಯಂತೆ! ಇಂಥಾ ಚೆಲುವೆಯ ಹತ್ತಿರದ ಸಂಗಾತಿ ಹಿರಾಮನ್ ಎಂಬ ಗಿಳಿಯಾಗಿತ್ತು. ಮುದ್ದಾಗಿ ಮಾತನಾಡುವ ಬುದ್ಧಿವಂತ ಗಿಳಿಯನ್ನು ಕಂಡರೆ ಆಕೆಗೆ ಬಹು ಪ್ರೀತಿ. ಇದರಿಂದ ಕುಪಿತನಾದ ತಂದೆ ಅದನ್ನು ಕೊಲ್ಲಲು ಆಜ್ಞಾಪಿಸಿದ. ಪ್ರಾಣ ಉಳಿಸಿಕೊಳ್ಳಲು ಹಾರಿದ ಗಿಳಿ ಸಿಕ್ಕಿಬಿದ್ದದ್ದು ಬೇಟೆಗಾರನ ಕೈಗೆ! ಆತ ಚಿತ್ತೂರಿನ ಬ್ರಾಹ್ಮಣನೊಬ್ಬನಿಗೆ ಅದನ್ನು ಮಾರಿದ. ಅಲ್ಲಿನ ರಾಜ ರತ್ನಸಿಂಹ ಈ ವಿಶೇಷ ಗಿಳಿಯಿಂದ ಆಕರ್ಷಿತನಾಗಿ ಅದನ್ನು ಕೊಂಡುಕೊಂಡ. ಗಿಳಿಯಿಂದ ಪದ್ಮಾವತಿಯ ಸೌಂದರ್ಯ ವರ್ಣನೆ ಕೇಳಿ ಪದ್ಮಾವತಿಯಲ್ಲಿ ಮೋಹಿತನಾದ. ಗಿಳಿಯ ಮಾರ್ಗದರ್ಶನದಂತೆ ಏಳು ಸಾಗರದಾಟಿ ಸಿಂಹಳ ತಲುಪಿ ಯುದ್ಧಮಾಡಿ ಪದ್ಮಾವತಿಯನ್ನು ವರಿಸಿದ. ಅಂತೂ ಪದ್ಮಾವತಿ ಪರಿಣಯದ ಪೌರೋಹಿತ್ಯ ಗಿಳಿಯದ್ದು!

ಪದ್ಮಾವತಿಗೆ ಸವತಿ ನಾಗಮತಿ ಇದ್ದರೂ ರಾಜನ ಪ್ರೀತಿಯಲ್ಲಿ ಸುಖವಾಗಿದ್ದಳು. ಆದರೆ ತೊಂದರೆ ಬಂದದ್ದು ಆಸ್ಥಾನದಲ್ಲಿದ್ದ ರಾಘವ ಚೇತನ ಎಂಬ ಕಲಾವಿದನಿಂದ. ಒಮ್ಮೆ ಆತ ಮಾಟ-ಮಂತ್ರ ಮಾಡಿರುವ ವಿಷಯ ರಾಜನಿಗೆ ಗೊತ್ತಾಗಿ ಆತನನ್ನು ಗಡೀಪಾರು ಮಾಡಿದ. ಅಪಮಾನಿತನಾದ ರಾಘವ ಸೇಡು ತೀರಿಸಿಕೊಳ್ಳಲು ಕಾಮುಕನಾಗಿದ್ದ ದಿಲ್ಲಿಯ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿಯ ಬಳಿ ಹೋಗಿ ಆತನೆದುರು ರಾಣಿ ಪದ್ಮಾವತಿಯನ್ನು ವರ್ಣಿಸಿದ. ಕೂಡಲೇ ಸುಲ್ತಾನ ಮೇವಾಡಕ್ಕೆ ಮುತ್ತಿಗೆ ಹಾಕಿದ. ಆದರದು ಸುಲಭಸಾಧ್ಯವಾಗಿರಲಿಲ್ಲ. ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಉದ್ದೇಶದಿಂದ ಕುತಂತ್ರಿಯಾದ ಸುಲ್ತಾನ, ತಂಗಿ ಪದ್ಮಾವತಿಯನ್ನು ಅರಮನೆಯಲ್ಲಿ ಭೇಟಿಯಾಗಬಹುದೇ ಎಂಬ ಸಂದೇಶ ಕಳುಹಿಸಿದ. ವೀರ ರಜಪೂತ, ರತ್ನಸಿಂಹ ತಂಗಿಯ ಭೇಟಿಗೆ ಅಣ್ಣನಿಗೆ ಅನುಮತಿಯ ಅಗತ್ಯವಿಲ್ಲ ಎಂಬ ಉತ್ತರ ಕಳಿಸಿದ. ಅದೇ ಚಿತ್ತೂರಿಗೆ- ಪದ್ಮಾವತಿಗೆ ಮುಳುವಾಯಿತು.

ಕನ್ನಡಿಯಲ್ಲಿ ಕಂಡ ಮುಖ

ಅಣ್ಣನಂತೆ ನಾಟಕವಾಡಿ ತಂಗಿಯ ಭೇಟಿಯ ನೆಪ ಮಾಡಿ ತನ್ನ ಸೈನಿಕರೊಂದಿಗೆ ಒಳಹೊಕ್ಕ ಸುಲ್ತಾನ ಕೋಟೆಯ ರಹಸ್ಯ ಮಾರ್ಗಗಳನ್ನು ಅರಿತುಕೊಂಡ. ಆದರೆ ಸುಲ್ತಾನನ ಸ್ವಭಾವದ ಬಗ್ಗೆ ಸಂಶಯವಿದ್ದ ಪದ್ಮಾವತಿ ಆತನನ್ನು ಖುದ್ದಾಗಿ ಭೇಟಿಯಾಗಲು ಒಪ್ಪಲಿಲ್ಲ; ಕೇವಲ ಕನ್ನಡಿಯಲ್ಲಿ ಮುಖ ತೋರಿಸುವುದಾಗಿ ತಿಳಿಸಿದಳು. ಕನ್ನಡಿಯಲ್ಲಿ ಕಂಡ ಪದ್ಮಾವತಿಯ ಕ್ಷಣ ಮಾತ್ರದ ದರ್ಶನದಿಂದ ಸುಲ್ತಾನನಿಗೆ ಕಾಮದಾಸೆ ಕೆರಳಿತು. ಮರಳಿ ಬರುವಾಗ ಬಿಡಲು ಬಂದ ಮುಗ್ಧ ರತ್ನಸಿಂಹನನ್ನು ಸೆರೆಹಿಡಿದ. ರಾಜನನ್ನು ಬಿಡುಗಡೆ ಮಾಡಲು ಪದ್ಮಾವತಿ ತನಗೆ ಸಿಗಬೇಕು ಇಲ್ಲದಿದ್ದಲ್ಲಿ ಆತನನ್ನು ಕೊಲ್ಲಿಸುವುದಾಗಿ ಷರತ್ತು ವಿಧಿಸಿದ. ಬುದ್ಧಿವಂತೆ ಪದ್ಮಾವತಿ ಸುಲ್ತಾನನ ಷರತ್ತಿಗೆ ಒಪ್ಪಿಗೆ ಸೂಚಿಸಿದಳು. ನಿಗದಿತ ದಿನದಂದು ರಾಣಿ ತನ್ನ ಐದುನೂರು ಸಖಿಯರೊಂದಿಗೆ ಪಲ್ಲಕ್ಕಿಯಲ್ಲಿ ಕುಳಿತು ಬರುವುದಾಗಿ ತಿಳಿಸಿದಳು. ವಾಸ್ತವದಲ್ಲಿ ಪಲ್ಲಕ್ಕಿಯಲ್ಲಿದ್ದದ್ದು ಮಾರುವೇಷದ ಸೈನಿಕರು. ಸುಲ್ತಾನನ ಶಿಬಿರ ತಲುಪಿದೊಡನೆ ಸೈನಿಕರು ಆಕ್ರಮಣ ನಡೆಸಿದರು. ಸಾವು-ನೋವು ಸಂಭವಿಸಿದರೂ ರತ್ನಸಿಂಹ ಸುರಕ್ಷಿತವಾಗಿ ಪಾರಾಗಿ ಅರಮನೆ ಸೇರಿದ.

ಜೌಹರ್

ಅನಿರೀಕ್ಷಿತವಾದ ಈ ಘಟನೆಯಿಂದ ಕ್ರೋಧಿತನಾದ ಸುಲ್ತಾನ ಅತಿದೊಡ್ಡ ಸೈನ್ಯದೊಡನೆ ಮೇವಾಡದ ಮೇಲೆ ದಾಳಿ ನಡೆಸಿದ. ಏಳು ತಿಂಗಳ ಕಾಲ ಸತತ ದಾಳಿ ನಡೆಯಿತು. ಚಿತ್ತೋರಿನ ಕೋಟೆಯೊಳಗೆ ಆಹಾರದ ಸರಬರಾಜು ಕಡಿಮೆಯಾಗುತ್ತಾ ಬಂತು, ಸೈನಿಕರ ಸಂಖ್ಯೆಯೂ ಕ್ಷಣಿಸಿತು. ಸೋಲಿಗೆ ಸನಿಹದಲ್ಲಿತ್ತು. ಸೋಲು- ಗೆಲುವಿಗೆ ಹೆದರುವವರಲ್ಲ ರಜಪೂತರು, ಆದರೆ ಮಾನಹಾನಿ? ಕೂಡಲೇ ರಾಣಿ ಪದ್ಮಾವತಿ ಜೌಹರ್ ಕೈಗೊಳ್ಳುವ ನಿರ್ಣಯಕ್ಕೆ ಬಂದಳು. ಅರಮನೆಯೊಳಗೆ ಉರಿಯುವ ದೊಡ್ಡ ಕುಂಡ ಸಿದ್ಧವಾಯಿತು. ನವವಧುವಿನ ರೀತಿಯಲ್ಲಿ ಸಾಲಂಕೃತಳಾಗಿ ಗಂಭೀರವದನೆ ರಾಣಿ ಪದ್ಮಾವತಿ ದಿಟ್ಟವಾಗಿ ನಡೆದುಬಂದಳು. ಧಗಧಗಿಸುವ ಅಗ್ನಿಕುಂಡಕ್ಕೆ ಕೈಮುಗಿದು ಹಾರಿದಳು. ಅವಳೊಂದಿಗೇ ಹದಿನಾರು ಸಾವಿರ ಮಹಿಳೆಯರು ಜೌಹರ್ ಕೈಗೊಂಡರು.

ಇತ್ತ ಪ್ರಾಣದ ಹಂಗು ತೊರೆದ ರಜಪೂತ ಯೋಧರು ತಮ್ಮ ಪತ್ನಿಯರ ಅಸ್ಥಿಯ ಬೂದಿಯನ್ನು ಹಣೆಗಿಟ್ಟು ಬಾಯಲ್ಲಿ ತುಳಸಿದಳ ಹಾಕಿ ‘ಸಕ’ರಾದರು. ಅಂದರೆ ರಣರಂಗದಲ್ಲಿ ಕಡೆಯ ಉಸಿರಿರುವವರೆಗೂ ಹೋರಾಡಿ ವೀರಮರಣವನ್ನಪ್ಪಿದರು. ವಿಜಯೋತ್ಸಾಹದ ಉನ್ಮಾದದಲ್ಲಿ ಕೋಟೆ ಪ್ರವೇಶಿಸಿದ ಸುಲ್ತಾನ ಮತ್ತು ಸೈನಿಕರನ್ನು ಸ್ವಾಗತಿಸಿದ್ದು ಉರಿವ ಬೆಂಕಿ ಮತ್ತು ಬಿಸಿಯಿದ್ದ ಬೂದಿ…… ಮಾನಧನ ಕಾಪಾಡಿಕೊಳ್ಳುವ ಸಲುವಾಗಿ ಸ್ವತಃ ಅಗ್ನಿಗೆ ಆಹುತಿಯಾಗುವ ಕಠಿಣ ನಿರ್ಧಾರ ಕೈಗೊಂಡ ಧೀರೆ ಪದ್ಮಾವತಿಯ ದೇಹ ದಹಿಸಿತು, ಹೆಸರು ಚಿರಸ್ಥಾಯಿಯಾಯಿತು. ನಿರ್ಜನವಾದ, ಪದ್ಮಾವತಿಯಿಲ್ಲದ ಚಿತ್ತೋರಿನ ಕೋಟೆ 1303ರ ಆಗಸ್ಟ್ 26ರಂದು ದಿಲ್ಲಿ ಸುಲ್ತಾನನ ಕೈವಶವಾಯಿತು. ಇದಲ್ಲದೇ ಚರಿತ್ರೆಯಲ್ಲಿ ಮೂರು ಸಾಮೂಹಿಕ ಜೌಹರ್ ಗಳು ನಡೆದು ಕೆಂಪಾದ ಭೂಮಿ ಇದು. ರಾಣಿ ಪದ್ಮಾವತಿಯ ನೇತೃತ್ವದಲ್ಲಿ ನಡೆದದ್ದು ಮೊದಲನೆಯದ್ದು—ಎನ್ನುತ್ತಾ ಹನಿಗಣ್ಣಾದರು ಮಾಧವ್‍ಜೀ.

(ರಾಜಸ್ತಾನದ ಹಳ್ಳಿ ಹಳ್ಳಿಯಲ್ಲೂ ಪದ್ಮಾವತಿ ಕುರಿತ ಕತೆ-ಹಾಡುಗಳಿವೆ. ಪ್ರತಿಯೊಂದರಲ್ಲೂ ವ್ಯತ್ಯಾಸಗಳಿವೆ.ಆದರೆ ಪದ್ಮಾವತಿ ಖಂಡಿತವಾಗಿ ಇದ್ದಳು, ಈಗಲೂ ನಮ್ಮೆಲ್ಲರ ಹೃದಯದಲ್ಲಿ ಇದ್ದಾಳೆ ಎನ್ನುತ್ತಲೇ ಕೆಲವು ಊಹಾಪೆಹಗಳನ್ನು ಮಾಧವ್‍ಜೀ ವಿವರಿಸಿದರು.
• ಪದ್ಮಾವತಿ ಸಿಂಹಳದವಳಲ್ಲ, ರಾಜಸ್ತಾನದ ಜೈಸಲ್‍ಮೇರ್ ಪ್ರದೇಶದವಳು. ಇಲ್ಲಿನ ಮಹಿಳೆಯರು ಪದ್ಮಾವತಿಯಂತೆ ಎತ್ತರದ ನಿಲುವು, ಬಿಳಿಬಣ್ಣ, ಉದ್ದ ಮೂಗಿನ ಚತುರೆಯರು.
• ಪದ್ಮಿನಿ ಮತ್ತು ಪದ್ಮಾವತಿ ಇಬ್ಬರೂ ಬೇರೆಯೇ. ಉತ್ತರಪ್ರದೇಶದಲ್ಲೂ ಈ ಹೆಸರಿನ ರಾಣಿ ಇದ್ದಿರುವ ಸಾಧ್ಯತೆ ಇದೆ.
• ಪದ್ಮಾವತಿ ವಾಸ್ತವದಲ್ಲಿ ತನ್ನ ಮುಖ ಸುಲ್ತಾನನಿಗೆ ತೋರಿಸಲಿಲ್ಲ. ತನ್ನಂತೆಯೇ ಇದ್ದ ಸಹೋದರನಿಗೆ ಹೆಣ್ಣು ವೇಷ ತೊಡಿಸಿ ಕಳಿಸಿದ್ದಳು. ಆತನನ್ನೇ ರಾಣಿ ಎಂದು ಸುಲ್ತಾನ ಭಾವಿಸಿದ್ದ.
• ಆ ಸಮಯದಲ್ಲಿ ಕನ್ನಡಿಯ ಬಳಕೆ ಇರಲಿಲ್ಲ. ಮಹಲಿನ ಮೆಟ್ಟಿಲ ಮೇಲೆ ಕುಳಿತ ಪದ್ಮಾವತಿಯ ಪ್ರತಿಫಲನವನ್ನು ಕೆರೆಯಲ್ಲಿ ನೋಡಿ ಸುಲ್ತಾನ ಮೋಹಿತನಾಗಿದ್ದ.)

ಕಲ್ಪನೆ-ವಾಸ್ತವ

ಪದ್ಮಾವತಿಯ ಮೊದಲ ಪ್ರಸ್ತಾಪ ಬರುವುದು ಸೂಫಿ ಕವಿ ಮಲ್ಲಿಕ್ ಮುಹಮದ್ ಜಯಾಸಿಯ 1540 ಪದ್ಮಾವತ ಎಂಬ ಅವಧಿ ಭಾಷೆಯ ಕಥನಕಾವ್ಯದಲ್ಲಿ. ಅದಕ್ಕೆ ಮೊದಲು ಎಲ್ಲೂ ಪದ್ಮಾವತಿಯ ಉಲ್ಲೇಖವಿಲ್ಲ. ಹೀಗಾಗಿ ಪದ್ಮಾವತಿ ಕಾಲ್ಪನಿಕ ವ್ಯಕ್ತಿ ಎಂದು ಅನೇಕ ಚರಿತ್ರ್ರಕಾರರು ಅಭಿಪ್ರಾಯ ಪಟ್ಟರೆ, ಮತ್ತೆ ಕೆಲವರು ಅರಮನೆ, ಆಕೆ ಮುಖ ತೋರಿದ ಸ್ಥಳ ಎಲ್ಲವೂ ಸುಳ್ಳಾಗಲು ಸಾಧ್ಯವಿಲ್ಲ ಎಂದು ವಾದಿಸುತ್ತಾರೆ. ಹೆಚ್ಚಿನ ಇತಿಹಾಸತಜ್ಞರು ‘ಪದ್ಮಾವತಿ, ಇತಿಹಾಸ ಮತ್ತು ಕಲ್ಪನೆ ಎರಡೂ ಮೇಳೈಸಿದ ವ್ಯಕ್ತಿ. ಆದರೆ ಅಲ್ಲಾವುದ್ದೀನ್ ಖಿಲ್ಜಿಯ ಆಕ್ರಮಣದ ಉದ್ದೇಶ ಕೇವಲ ಪದ್ಮಾವತಿಯನ್ನು ಹೊಂದುವುದಾಗಿರಲಿಲ್ಲ. ನಿಜ ಘಟನೆಗೆ, ಕಲ್ಪನೆ ಬೆರೆಸಿ ರಜಪೂತರ ದೇಶಪ್ರೇಮ-ಸಾಹಸ ಬಿಂಬಿಸಲು ಇದನ್ನು ಬಳಸಿಕೊಳ್ಳಲಾಗಿದೆ’ ಎಂದು ಅಭಿಪ್ರಾಯ ಪಡುತ್ತಾರೆ.

ವೀರರ ಭೂಮಿಯೆಂದೇ ಪ್ರಖ್ಯಾತವಾದ ರಾಜಸ್ತಾನದಲ್ಲಿ ಮಹಿಳೆಯರು ಮಾನಧನಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಲೂ ಹಿಂಜರಿಯದವರು. ಚಿತ್ತೋರಿನ ನೆಲದಲ್ಲೇ ಮೂರು ಜೌಹರ್‍ಗಳು ನಡೆದಿವೆ. ಹಿಂದೂಧರ್ಮದಲ್ಲಿ ಪ್ರಚಲಿತವಿದ್ದ ಉರಿಯುವ ಚಿತೆಗೆ ಮಹಿಳೆಯರು ತಮ್ಮ ಮಕ್ಕಳೊಡನೆ ಸ್ವಇಚ್ಛೆಯಿಂದ ಹಾರುವ ಸಾಮೂಹಿಕ ಪ್ರಾಣತ್ಯಾಗವನ್ನು ಜೌಹರ್, ಜುಹಾರ್ ಎಂದು ಕರೆಯಲಾಗುತ್ತದೆ. ಆಕ್ರಮಣಕಾರರ ವಿಜಯದ ನಂತರ ದಾಳಿಯಲ್ಲಿ ಸೆರೆ ಸಿಕ್ಕು, ಗುಲಾಮರಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಸಂದರ್ಭ ತಪ್ಪಿಸಲು ಈ ಪದ್ಧತಿ ಜಾರಿಯಲ್ಲಿತ್ತು. ಶವಗಳನ್ನೂ ತಮ್ಮ ಲಾಲಸೆಗೆ ಬಳಸಿಕೊಳ್ಳುವ ಅಮಾನವೀಯ ಕೃತ್ಯದಿಂದ ಪಾರಾಗಲು ಚಿತೆಗೆ ಹಾರಿ ಆತ್ಮಾರ್ಪಣೆ ಮಾಡಿಕೊಳ್ಳುವುದು ಅಂದಿನ ಮಹಿಳೆಯರಿಗೆ ಸುಲಭವೆನಿಸಿರಬೇಕು!

• ಚಿತ್ತೋರಿನ ಮೊದಲ ಜೌಹರ್ ಪದ್ಮಾವತಿಯ ಕತೆಯೊಂದಿಗೆ ಬೆಸೆದಿದೆ. ಇತಿಹಾಸತಜ್ಞರ ಪ್ರಕಾರ 1303 ರಲಿ ್ಲರಾವಲ್‍ರತನ್ ಸಿಂಗ್ ಮತ್ತು ಅಲ್ಲಾದ್ದೀನ್ ಖಿಲ್ಜಿ ಮಧ್ಯೆ ಸುಮಾರು ಎಂಟು ತಿಂಗಳಷ್ಟು ದೀರ್ಘ ಕಾಲ ಯುದ್ಧ ನಡೆದಿತ್ತು. ರಜಪೂತರ ಬಲ ಕ್ಷೀಣಿಸಿ ಕಡೆಗೊಮ್ಮೆ ಸೋಲುವ ಪರಿಸ್ಥಿತಿ ಖಚಿತವಾದಾಗ ಕೋಟೆಯ ಬಾಗಿಲು ತೆರೆದು ಶತ್ರುಗಳನ್ನು ಎದುರಿಸುವ ನಿರ್ಧಾರಕ್ಕೆ ಬಂದರು. ಆಗ ಒಳಗಿದ್ದ ಮಹಿಳೆಯರು ಜೌಹರ್ ಕೈಗೊಳ್ಳುವ ತೀರ್ಮಾನಕ್ಕೆ ಬಂದರು. ಒಟ್ಟು ಈ ಯುದ್ಧದಲ್ಲಿ ಮೂವತ್ತು ಸಾವಿರ ಹಿಂದೂಗಳು ಒಣ ಹುಲ್ಲಿನ ಹಾಗೆ ಕತ್ತರಿಸಲ್ಪಟ್ಟರು ಎಂದು ಅಮೀರ್‍ಖುಸ್ರು ದಾಖಲಿಸಿದ್ದಾನೆ.
• ಎರಡನೆಯ ಜೌಹರ್ ರಾಣಿ ಕರ್ಣಾವತಿಯದ್ದು. ಆಕೆ, ಚಿತ್ತೋರಿನ ಸಿಸೋಡಿಯಾ ರಾಜವಂಶಕ್ಕೆ ಸೇರಿದ ರಾಣಾ ಸಂಗ್ರಾಮ್ ಸಿಂಗ್‍ನ ಪತ್ನಿ. 1527 ರಲ್ಲಿ ಕನುವಾದಲ್ಲಿ ಮೊಗಲ್ ಸಾಮ್ರಾಟ ಬಾಬರ್ ಮತ್ತು ರಾಣಾರ ನಡುವಿನ ಭೀಕರ ಕಾಳಗದಲ್ಲಿ ರಾಣಾ ಗಾಯಗಳಿಂದ ಮರಣವನ್ನಪ್ಪಿದ. ರಾಣಿ ಕರ್ಣಾವತಿ ತನ್ನ ಮಗನ ಹೆಸರಿನಲ್ಲಿ ರಾಜ್ಯಭಾರ ನಡೆಸುತ್ತಿದ್ದಳು. ಈ ಸಂದರ್ಭ ನೋಡಿ ಗುಜರಾತಿನ ಸುಲ್ತಾನ ಬಹಾದುರ್ ಶಾ ಮೇವಾಡದ ಮೇಲೆ ಆಕ್ರಮಣ ನಡೆಸಿದ. ಪುಟ್ಟ ರಜಪೂತ ಸೈನ್ಯಕ್ಕೆ ಸಕಲ ಶಸ್ತ್ರಾಸ್ತ್ರ ಸನ್ನದ್ಧರಾಗಿದ್ದ ಅಪಾರ ಶತ್ರು ಸೈನ್ಯದ ಎದುರು ಸೋಲು ಖಚಿತವಾಗಿತ್ತು. ಆದರೂ ಹಿಂಜರಿಯದೇ ರಜಪೂತರು ‘ಸಕ’ ರಾಗಿ ಮುನ್ನುಗ್ಗಿದರು. ರಾಣಿ ಕರ್ಣಾವತಿಯ ನೇತೃತ್ವದಲ್ಲಿ ಮಹಿಳೆಯರು ಜೌಹರ್ ಕೈಗೊಂಡರು.
• ಮೂರನೆಯದ್ದು ಅಕ್ಬರ್‍ನ ಆಳ್ವಿಕೆಯಲ್ಲಿ 1568 ರಲ್ಲಿ ನಡೆದದ್ದು. ರಾಜಾ ಉದಯ್‍ಸಿಂಗ್‍ನ ಮೇಲೆ ಆಕ್ರಮಣ ನಡೆದಾಗ ತನ್ನ ಮಂತ್ರಿಗಳ ಸಲಹೆಯಂತೆ ಉದಯಪುರಕ್ಕೆ ಹೊರಟ. ಆತನ ಸೇನಾಧಿಪತಿಗಳಾದ ಜೈಮ್ ಮತ್ತು ಪಟ್ಟಾಚಿತ್ತೋರಿನ ಕೋಟೆ ರಕ್ಷಿಸಲು ಎಂಟುಸಾವಿರ ಸೈನಿಕರೊಂದಿಗೆ ಸಜ್ಜಾಗಿದ್ದರು. ತಮ್ಮ ಶಕ್ತಿ ಮೀರಿ ರಜಪೂತರು ಹೋರಾಡಿದರೂ ಅಪಜಯ ನಿಶ್ಚಿತವಾಗಿತ್ತು. ಹೀಗಾಗಿ ಫೆಬ್ರವರಿ 22 ರ ರಾತ್ರಿ ಸೇನಾಧಿಪತಿಗಳ ಆಣತಿಯಂತೆ ಸುಮಾರು ಎಂಟು ಸಾವಿರ ಮಹಿಳೆಯರು ತಮ್ಮನ್ನು ತಾವು ಜೌಹರ್ ಮೂಲಕ ಅಗ್ನಿಗೆ ಸಮರ್ಪಿಸಿಕೊಂಡರು. ಯೋಧರು ಸಕರಾಗಿ ವೀರ ಮರಣ ಹೊಂದಿದರು.

ಹಾಡು-ಕತೆ ಮುಗಿದಿತ್ತು; ಕತೆಯನ್ನು ನೆನಪಿಸಿಕೊಳ್ಳುತ್ತಾ ಅರಮನೆಯನ್ನು ನೋಡತೊಡಗಿದೆವು. ಮೆಟ್ಟಿಲು ಹತ್ತಿ ಮೊದಲ ಮಹಡಿ ಪ್ರವೇಶಿಸಿದರೆ ಅಲ್ಲಿರುವುದು ಅತಿಥಿಗಳ ಕೋಣೆ. ಅಲ್ಲೊಂದು ದೊಡ್ಡ ಹಳೆಯ ಕನ್ನಡಿಯನ್ನು ಇಡಲಾಗಿದ್ದು ಇದು ಅಲ್ಲಾಉದ್ದೀನ್ ಖಿಲ್ಜಿ ಪದ್ಮಾವತಿಯನ್ನು ಕಂಡ ಜಾಗ ಎಂದು ತೋರಿಸಲಾಗುತ್ತದೆ. ಅರಮನೆಯ ಸುತ್ತ ಇರುವ ಕೊಳ ಕಮಲಗಳಿಂದ ತುಂಬಿತ್ತು ಎಂದು ಕೇಳಿದ್ದ ಈಗ ಪಾಚಿಗಟ್ಟಿ ಹಸಿರಾಗಿತ್ತು. ಆಕರ್ಷಕ ಕೆತ್ತನೆ, ಕುಸುರಿ ಕೆಲಸ ಅಲ್ಲಲ್ಲಿ ಕಂಡುಬಂದವು. ನೀರ ಮಧ್ಯೆ ಚೆಂದದ ಅರಮನೆ ಕಣ್ಣಿಗೆ ಕಾಣಿಸುತ್ತಿತ್ತು. ಜೌಹರ್ ಪದ್ಧತಿಯ ಬಗ್ಗೆ ಅತೀವ ಹೆಮ್ಮೆ, ಭಕ್ತಿ ಸ್ಥಳೀಯರಿಗಿದೆ. ವರ್ಷಕ್ಕೊಮ್ಮೆ ಜೌಹರ್ ಮೇಳವನ್ನೂ ನಡೆಸಲಾಗುತ್ತದೆ. ಉರಿವ ಬೆಂಕಿಯಲ್ಲಿ ನವವಧುವಿನ ವೇಷ ಧರಿಸಿ ಸಾಲಂಕೃತರಾಗಿ ಜೌಹರ್ ಕೈಗೊಳ್ಳುವ ಮಹಿಳೆಯರ ಮನಸ್ಥಿತಿ ಹೇಗಿದ್ದಿರಬಹುದು? ಹೇಳಿಕೊಳ್ಳುವ ಅವಕಾಶ ಎಲ್ಲಿತ್ತು? ಒಂದೊಮ್ಮೆ ಕೂಗಿದರೂ ಕೇಳುವವರಾರು? ಕಾಲಗರ್ಭದಲ್ಲಿ ಅಡಗಿಹೋದ ಕರಾಳ ಸತ್ಯವದು. ಆದರೆ ಯುದ್ಧ, ಕ್ರೌರ್ಯ, ಕಾಮದ ಬೆಂಕಿಯಲ್ಲಿ ಬೆಂದ- ನೊಂದ ಸಾವಿರಾರು ಪದ್ಮಾವತಿಯರಿಗೆ ಇದ್ದ ಪರ್ಯಾಯ ಮಾರ್ಗವಾದರೂ ಏನು? ತಲೆತುಂಬಾ ಗೊಂದಲ- ಪ್ರಶ್ನೆಗಳು. ಭವ್ಯ ಅರಮನೆಯ ಜಾಲಂಧ್ರಗಳ ಹಿಂದೆ ಬಿಕ್ಕುವ ಸದ್ದು, ಕಿರಿದಾದ ಸುರಂಗಗಳಲ್ಲಿ ದೀರ್ಘ ನಿಟ್ಟುಸಿರು, ಬಾವಿಯಂಥ ಕುಂಡಗಳಲ್ಲಿ ಹಸಿ ಮೈ-ಮನ ಉರಿವ ಚಟಪಟ ಸದ್ದು ಮಾತ್ರ ಕಿವಿಗೆ ಅಪ್ಪಳಿಸುತ್ತಿತ್ತು.

ಡಾ.ಕೆ.ಎಸ್.ಚೈತ್ರಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *