ಲೋಕದ ಕಣ್ಣು/ ಪಾದರಕ್ಷೆ ಎಂಬ ಶಿಕ್ಷೆ! – ಡಾ. ಕೆ.ಎಸ್. ಚೈತ್ರಾ

ಹೆಣ್ಣಿನ ತಲೆಯನ್ನು ಮಾತ್ರವಲ್ಲ ಕಾಲನ್ನು ಕೂಡ ತನಗೆ ಇಷ್ಟವಾಗುವಂತೆ, ಇಷ್ಟಕ್ಕೆ ಹೊಂದಿಕೊಳ್ಳುವಂತೆ ವಿರೂಪ ಮಾಡುವ ಪದ್ಧತಿ ಚೀನೀ ನಾಗರಿಕತೆಯಲ್ಲಿ ಇತ್ತು. ಹಾಗೆ ಮೊಗ್ಗಿನಂಥ ಕಾಲಿನ ಹುಡುಗಿಯೊಬ್ಬಳು ಅರಮನೆಯ ಮಹಾಗಂಟೆಯ ನಿರ್ಮಾಣವನ್ನು ಯಶಸ್ವಿಗೊಳಿಸಲು ಕುದಿವ ಲೋಹದ ಎರಕಕ್ಕೆ ಹಾರಿದ ಕಥೆ, ನಮ್ಮ ದೇಶದಲ್ಲಿ ಕೆರೆಬಾವಿ ದೇಗುಲಗಳ ರಕ್ಷಣೆಗೆ ಹೆಣ್ಣು ಪ್ರಾಣತ್ಯಾಗ ಮಾಡುವ ಬಲಿದಾನಗಳನ್ನು ನೆನಪಿಸುತ್ತದೆ.

ಚೀನಾಕ್ಕೆ ಸೇರಿದ್ದರೂ ವಿಶೇಷ ಆಡಳಿತಾತ್ಮಕ ಪ್ರದೇಶ ಎಂದು ಗುರುತಿಸಲಾಗುವ ಹಾಂಗ್‍ಕಾಂಗ್‍ನಲ್ಲಿ ಶೇಕಡಾ ತೊಂಬತ್ತರಷ್ಟು ಜನರು ಚೀನೀಯರು. ಬ್ರಿಟಿಷ್ ವಸಾಹತು ಸ್ಥಳವಾದ್ದರಿಂದ ಆ ಪ್ರಭಾವವನ್ನೂ ಅಲ್ಲಲ್ಲಿ ಕಾಣಬಹುದು. ಸಾಕಷ್ಟು ವಿಶಾಲವಾದ ಹಾಂಗ್‍ಕಾಂಗ್ ಮ್ಯೂಸಿಯಮ್ ಆಫ್ ಹಿಸ್ಟರಿ ನೋಡುತ್ತಾ ನನಗೆ ಕಾಲುನೋವು; ಕಾರಣ ಪ್ರವಾಸ ಹೋಗುವಾಗ ಹಾಕಿದ್ದ ಹೊಸ ಚಪ್ಪಲಿ ಕಾಲಿಗೆ ಕಚ್ಚಿತ್ತು. ಒಂದಿಷ್ಟೂ ಬೊಜ್ಜಿಲ್ಲದ, ಮಧ್ಯಮ ಎತ್ತರದ ಈ ಚೀನೀಯರಿಗೆ ಪುಟ ಪುಟ ನಡೆಯುವುದು ತುಂಬಾ ಸುಲಭ ಮತ್ತು ಪ್ರೀತಿ. ನನಗಂತೂ ಅವರು ನಡೆಯುವುದಲ್ಲ ಸದಾ ಓಡಿದಂತೆಯೇ ಕಾಣುತ್ತಿತ್ತು. ನೀವೆಲ್ಲಾ ತಿರುಗಾಡಿ ಬನ್ನಿ ನಾನು ಇಲ್ಲೇ ಇರುತ್ತೇನೆ ಎಂದಿದ್ದೇ ನಮ್ಮ ಗೈಡ್ ಲೀಜುನ್ ‘ಇಷ್ಟು ದೊಡ್ಡಚಪ್ಪಲಿ ಹಾಕಿ ನೀವು ಕಾಲುನೋವು ಎನ್ನುತ್ತೀರಿ. ಇನ್ನು ನಮ್ಮಲ್ಲಿ ಹಾಕುತ್ತಿದ್ದ ಲೋಟಸ್ ಶೂ ಹಾಕಿದ್ದರೆ ಏನಾಗುತ್ತಿತ್ತು?’ ಎಂದ. ಅಷ್ಟೇ ಕಾಲುನೋವು ಮರೆತು ಇತಿಹಾಸದ ಕ್ರೂರ ಪದ್ಧತಿಯ (ಈಗ ನಿಷೇಧಿಸಲಾದ) ಬಗ್ಗೆ ಒಂದಿಷ್ಟು ವಿವರ, ನಂತರ ಚರ್ಚೆ ನಡೆಯಿತು.

ಲೋಟಸ್ ಶೂ ಮಹಿಳೆಯರ ವಿಶೇಷವಾದ ಪಾದರಕ್ಷೆ. ಕಮಲದ ಮೊಗ್ಗಿನ ಆಕಾರದಲ್ಲಿರುವುದರಿಂದ ಈ ಹೆಸರು. ಪಾದರಕ್ಷೆ ಹಾಗಿದ್ದರೆ ಸರಿ, ಆದರೆ ಒಳಗಿರುವ ಪಾದ? ಅದನ್ನು ಈ ಕಮಲದ ಮೊಗ್ಗಿನಂತೆ ಮಾಡಲು ಅಮಾನುಷವಾದ ಪದ್ಧತಿ ಅನುಸರಿಸಲಾಗುತ್ತಿತ್ತು. ಅದೇ ಪಾದಕಟ್ಟುವಿಕೆ! ಸ್ತ್ರೀಸೌಂದರ್ಯದ ಕಲ್ಪನೆಯು ಕಾಲದಿಂದ ಕಾಲಕ್ಕೆ, ದೇಶದಿಂದ ದೇಶಕ್ಕೆ ಬದಲಾಗುತ್ತಲೇ ಬಂದಿದೆ. ನಿರ್ದಿಷ್ಟ ಮಾನದಂಡಕ್ಕೆ ಅನುಗುಣವಾಗಿ ದೇಹದ ಆಕಾರ ಹಿಗ್ಗಿಸಿ-ಕುಗ್ಗಿಸುವ ಪ್ರಯತ್ನಗಳನ್ನು ಮಾಡುತ್ತಲೇ ಬರಲಾಗಿದೆ. ಉದ್ದ ಕತ್ತು, ಜೋಲುವ ಕಿವಿ, ಕಿರಿದಾದ ಸೊಂಟ ಇವು ಜಗತ್ತಿನ ನಾನಾ ಕಡೆಗಳಲ್ಲಿ ಸೌಂದರ್ಯ ಹೆಚ್ಚಿಸಲು ಬಳೆ, ಲೋಹ ಬಳಸಿ ದೈಹಿಕವಾಗಿ ನೋವನನ್ನುಭವಿಸಿ ಮಾಡುವ ವಿಧಾನಗಳು. ಅಂಥದ್ದೇ ಮತ್ತೊಂದು ಪದ್ಧತಿ ಚೀನಾದಲ್ಲಿ ಸುಮಾರು ಸಾವಿರ ವರ್ಷಗಳ ಕಾಲ ಜಾರಿಯಲ್ಲಿದ್ದದ್ದು ‘ಪಾದಕಟ್ಟುವಿಕೆ’.

ಸಾಧಾರಣವಾಗಿ ಮನುಷ್ಯರ ಪಾದದ ಉದ್ದ ಎಂಟರಿಂದ ಹತ್ತು ಇಂಚು. ಗಂಡಸರದಕ್ಕಿಂತ ಹೆಂಗಸರದ್ದು ಪುಟ್ಟ ನಾಜೂಕು ಪಾದಗಳು. ಆದರೆ ಚೀನಾದಲ್ಲಿ ಮೂರು ಇಂಚಿನಷ್ಟೇ ಮಹಿಳೆಯರ ಪುಟ್ಟ ಪಾದಗಳು ಸೌಂದರ್ಯ ಮತ್ತು ಪ್ರತಿಷ್ಠೆಯ ಸಂಕೇತವಾಗಿತ್ತು. ಹತ್ತನೇ ಶತಮಾನದಲ್ಲಿ ಸಾಂಗ್ ರಾಜವಂಶದವರ ಕಾಲದಲ್ಲಿ ರಾಜನರ್ತಕಿ ಯಾವೋನಿ ಯಾಂಗ್ ತನ್ನ ಪಾದಗಳನ್ನು ಅರ್ಧಚಂದ್ರಾಕೃತಿಯಲ್ಲಿ ಕಟ್ಟಿ ಬಂಗಾರದ ಕಮಲದ ಮೇಲೆ ನರ್ತಿಸಿದ್ದಳಂತೆ. ಚಕ್ರವರ್ತಿ ಅದನ್ನು ಮೆಚ್ಚಿದ ನಂತರ ಶ್ರೀಮಂತ ಮಹಿಳೆಯರ ಷೋಕಿಗಾಗಿ ಆರಂಭವಾಗಿದ್ದು ನಂತರ ಸಾಮಾನ್ಯ ಜನರಲ್ಲೂ ಆಕರ್ಷಣೆ ಮೂಡಿಸಿದವು. ಯೌವನಕ್ಕೆ ಬಂದ ನಂತರ ಪಾದ ಕಿರಿದಾಗಿಸುವುದು ಕಷ್ಟಸಾಧ್ಯವಾದ್ದರಿಂದ ಬಾಲ್ಯದಿಂದಲೇ ಹೆಣ್ಣು ಮಕ್ಕಳಿಗೆ ಪಾದಕಟ್ಟುವಿಕೆ ಆರಂಭವಾಯಿತು. ಪುರುಷ ಪ್ರಧಾನವಾದ ಅಲ್ಲಿನ ಸಮಾಜದಲ್ಲಿ ಮದುವೆ ತುಂಬಾ ಮುಖ್ಯ ಮತ್ತು ಈ ಪದ್ಮಚರಣಗಳು ಒಳ್ಳೆಯ ಗಂಡನನ್ನು ಪಡೆಯಲು ಉತ್ತಮ ಮಾರ್ಗವಾಗಿತ್ತು.

ಮೊಗ್ಗಿನಾಕಾರದ ಪಾದ : ಕಮಲದ ಮೊಗ್ಗಿನಂಥ ಪಾದ ಪಡೆಯಲು ಬೆಳವಣಿಗೆಯ ಹಂತದಲ್ಲಿರುವ ಐದಾರು ವರ್ಷದ ಹುಡುಗಿಯರಿಗೆ ಮನೆಯ ಹಿರಿಯ ಸದಸ್ಯೆಯಿಂದ ಈ ವಿಧಿ ಶುರು. ಚಳಿಗಾಲದಲ್ಲಿ ಪಾದಗಳು ಜೋಮುಗುಟ್ಟುವುದರಿಂದ ತೀವ್ರ ನೋವು ಕಾಡುವುದಿಲ್ಲ ಎಂಬ ಕಾರಣಕ್ಕೆ ಆ ಕಾಲವೇ ಪ್ರಶಸ್ತ. ಬಿಸಿ ನೀರಲ್ಲಿ ಪಾದ ಮುಳುಗಿಸಿ, ಉಗುರುಗಳನ್ನು ಸಣ್ಣದಾಗಿ ಕತ್ತರಿಸಲಾಗುತ್ತದೆ. ನಂತರ ಎಣ್ಣೆಯಿಂದ ಮಸಾಜ್ ಮಾಡಿ ಹೆಬ್ಬೆರಳು ಬಿಟ್ಟು ಉಳಿದೆಲ್ಲಾ ಬೆರಳುಗಳನ್ನು ಹಿಂದಕ್ಕೆ ಬಾಗಿಸಿ ಮುರಿಯಲಾಗುತ್ತದೆ. ಆ ಮೂಲಕ ಇಡೀ ಪಾದಕ್ಕೆ ತ್ರಿಕೋನಾಕೃತಿ ಬರುತ್ತದೆ. ಹೀಗೆ ಮಾಡಿದ ನಂತರ ಪಾದವನ್ನು ಹತ್ತು ಅಡಿ ಉದ್ದದ ರೇಷ್ಮೆ ಬಟ್ಟೆಯಲ್ಲಿ ಎಂಟರ ಆಕಾರದಲ್ಲಿ ಬಿಗಿಯಾಗಿ ಕಟ್ಟಲಾಗುತ್ತದೆ. ಪ್ರತೀ ಎರಡು ದಿನಕ್ಕೊಮ್ಮೆ ಸುತ್ತಿದ್ದನ್ನು ತೆಗೆದು ರಕ್ತಸ್ರಾವ, ಕೀವು, ಕೊಳೆತ ಮಾಂಸವನ್ನು ಸ್ವಚ್ಛಗೊಳಿಸಲಾಗುತ್ತದೆ. ಪಾದದ ಕಮಾನಿನ ಮೂಳೆ ಮುರಿಯಲೆಂಬ ಉದ್ದೇಶದಿಂದ ಪುಟ್ಟ ಹುಡುಗಿಯರನ್ನು ಎಷ್ಟೇ ನೋವಿದ್ದರೂ ಬಲವಂತವಾಗಿ ದೂರ ನಡೆಸಲಾಗುತ್ತದೆ. ಪ್ರತೀ ಬಾರಿ ಕಟ್ಟುವಿಕೆ ಬಿಗಿಯಾಗುತ್ತಾ ಹೋಗುತ್ತದೆ. ಹೀಗೆ ಎರಡು ವರ್ಷಗಳ ಕಟ್ಟುವಿಕೆ ನಂತರ ಬೆರಳುಗಳು ಮುರಿದು ಮೊಗ್ಗಿನಾಕಾರದ ಪಾದ ಸಿದ್ಧ!

ಈ ರೀತಿ ಪಾದಕಟ್ಟುವಿಕೆಯಿಂದ ಇಡೀ ಪಾದದ ಆಕಾರ ಬದಲಾಗುತ್ತಿತ್ತು. ದೇಹದ ಭಾರ ಹೊರುವ ಪಾದದ ವಿಭಿನ್ನ ರಚನೆಯಿಂದಾಗಿ ತೊಡೆ ಮತ್ತು ನಿತಂಬಗಳ ಮೇಲೆ ಅವಲಂಬನೆ ಹೆಚ್ಚುತ್ತಿತ್ತು. ಚಿಕ್ಕಚಿಕ್ಕ ಹೆಜ್ಜೆಗಳನ್ನು ಇಡುತ್ತಾ ನಡೆಯಲು ವಾಲಾಡುತ್ತಾ ಸಮತೋಲನ ಸಾಧಿಸಬೇಕಾಗುತ್ತಿತ್ತು. ಈ ನಡಿಗೆ ಅತ್ಯಂತ ಮಾದಕವಾದದ್ದು ಎಂದು ಸಮಾಜ ಪರಿಗಣಿಸಿತ್ತು! ಹಾಗಾಗಿಯೇ ಇಂಥ ಹೆಣ್ಣು ಮಕ್ಕಳಿಗೆ ವಿಶೇಷ ಬೇಡಿಕೆ. ಈ ಹೆಣ್ಣುಮಕ್ಕಳಿಗೆ ಧರಿಸಲೆಂದೇ ವಿಶೇಷ ರೀತಿಯ ಪಾದರಕ್ಷೆಗಳನ್ನೂ ಹತ್ತಿ/ರೇಷ್ಮೆ ಬಟ್ಟೆಯಿಂದ ಮಾಡಿ ಕಸೂತಿಯಿಂದ ಸಿಂಗರಿಸಲಾಗುತ್ತಿತ್ತು. ಪಾದದ ಅಳತೆ ಮೂರು ಇಂಚಿದ್ದರೆ ಸ್ವರ್ಣಪದ್ಮ, ನಾಲ್ಕು ಇಂಚಿದ್ದರೆ ರಜತ ಪದ್ಮ, ಐದು ಇಂಚಿಗಿಂತ ಹೆಚ್ಚಿದ್ದರೆ ಬೇಡಿಕೆಯೇ ಇರದ ಕಬ್ಬಿಣ ಪದ್ಮ! ಉತ್ತಮ ಪತ್ನಿ – ಸೊಸೆಗಾಗಿ ಅತ್ಯುತ್ತಮ ಆಯ್ಕೆ ಸ್ವರ್ಣ ಪದ್ಮಚರಣೆ. ಚೆಂದದ ಜತೆಯೇ ವಿಧೇಯಳಾಗಿ ಮನೆಯಲ್ಲೇ ಓಡಾಡಿಕೊಂಡು ಇರುತ್ತಾಳೆ ಎಂಬ ವಿಶ್ವಾಸ.

ಹೊಸ ಚಪ್ಪಲಿ ಕಚ್ಚಿದ ನೋವಿಗೆ ಎಗರಾಡಿದ ನಾನು ಈ ಪದ್ಮಚರಣೆಯರ ನೋವು ಊಹಿಸಲೂ ಆಗದೆ ದಿಗ್ಭಾಂತಳಾಗಿದ್ದೆ. ಅಂತೂ 1999ರಲ್ಲಿ ಈ ಲೋಟಸ್ ಶೂ ತಯಾರಿಸುವ ಸಂಸ್ಥೆ ಮುಚ್ಚಿತು ಮತ್ತು ಅವುಗಳು ಇಂದು ಬರೀ ಷೋಪೀಸ್ ಗಳಾಗಿವೆ ಎಂಬುದನ್ನು ಕೇಳಿ ನಿಟ್ಟುಸಿರು ಬಿಟ್ಟೆ.. ಅಷ್ಟರಲ್ಲಿ ಲೀಜುನ್ ಮಾತು ಮುಂದುವರಿಸಿದ- ‘ಚೀನಿ ಹೆಣ್ಣುಮಕ್ಕಳಿಗೆ ಚಪ್ಪಲಿ ಎಂದರೆ ಎಲ್ಲಿಲ್ಲದ ಪ್ರೀತಿ ಮತ್ತು ಪ್ರತಿಷ್ಠೆಯ ಸಂಕೇತ. ಬೀಜಿಂಗ್‍ನಲ್ಲಿ ಇರುವ ನಲವತ್ತಾರು ಟನ್ ಭಾರ ಏಳು ಮೀಟರ್ ಎತ್ತರದ ಮಹಾಗಂಟೆ ಒಮ್ಮೆ ಮೊಳಗಿದರೆ ಅದರ ನಾದ ಹದಿನೈದು ಕಿಮೀ ದೂರ ಕೇಳುತ್ತದೆ. ಆದರದು ಠಣ್ ಎನ್ನುವುದಿಲ್ಲ ಬದಲಿಗೆ ಕೋಐ ಎಂಬ ನಾದದ ನಡುವೆ ಹಾಸ್ಸೆ ಎಂಬ ಮರ್ಮರ ಕೇಳುತ್ತದೆ. ಹಾಸ್ಸೆ ಎಂದರೆ ಚೀನಿ ಭಾಷೆಯಲ್ಲಿ ಚಪ್ಪಲಿ ಎಂದರ್ಥ.’ ನನಗೆ ಈ ಗಂಟೆ, ಚಪ್ಪಲಿ ಯಾಕೋ ಎಲ್ಲವೂ ವಿಚಿತ್ರ
ಅನ್ನಿಸಿತು. ಕೇಳುತ್ತಾ ಕುಳಿತವರಿಗೆ ದಕ್ಕಿದ್ದು ಕಣ್ಣೀರು ತರಿಸುವ ದುರಂತ ಕತೆಯೇ!

ಹದಿನಾಲ್ಕನೇ ಶತಮಾನದಲ್ಲಿ ಮಿಂಗ್ ವಂಶದ ದೊರೆ ಯೊಂಗಲ್‍ಗೆ ಜನರು ತನ್ನನ್ನು ಸದಾ ನೆನಪಿನಲ್ಲಿಡುವ ಹಾಗೆ ಏನನ್ನಾದರೂ ಮಾಡುವ ಬಯಕೆ. ಅಂತೂ ಎಲ್ಲರ ಅಭಿಪ್ರಾಯದ ಮೇರೆಗೆ ಜನರಿಗೆ ಸಮಯ ತಿಳಿಯುವ ಹಾಗೆ ದೊಡ್ಡ ಗಂಟೆಯನ್ನು ನಿರ್ಮಿಸುವ ನಿರ್ಣಯಕ್ಕೆ ಬರಲಾಯಿತು. ಸೈನ್ಯದಲ್ಲಿ ತೋಪು ತಯಾರಿಸುತ್ತಿದ್ದ ಕ್ವಾನ್‍ಯುಗೆ ಇದರ ಹೊಣೆ ಒಪ್ಪಿಸಲಾಯಿತು. ಇದು ಮಹಾಗಂಟೆ; ಹಾಗಾಗಿ ಚಿನ್ನ, ಬೆಳ್ಳಿ, ತಾಮ್ರ, ಕಂಚು ಎಲ್ಲವನ್ನೂ ಬಳಸಿ ತಯಾರಿಸಲಾಗುವ ವಿಶಿಷ್ಟ, ವಿನೂತನ ಗಂಟೆಯಾಗಬೇಕು ಎಂಬುದು ದೊರೆಯ ಅಪ್ಪಣೆ. ಗಂಟೆ ಮಾಡಲು ಅಚ್ಚು ಸಿದ್ಧವಾಯಿತು, ಅದರಲ್ಲಿ ಲೋಹದ ಮಿಶ್ರಣ ಎರಕ ಹಾಕಬೇಕಿತ್ತು. ಕ್ವಾನ್‍ಯು ಹೇಗೋ ಲೆಕ್ಕ ಹಾಕಿ ಸೂತ್ರ ಮಾಡಿ ಎರಕ ತಯಾರಿಸಿದ್ದ. ದೊರೆಯ ಎದುರಿಗೆ ಕೆಲಸಗಾರರು ಬಿಸಿ ಎರಕವನ್ನು ಅಚ್ಚಿಗೆ ಹೊಯ್ದರು. ಅದು ತಣ್ಣಗಾಗುವವರೆಗೆ ಎಲ್ಲರಿಗೂ ಕಾತುರ. ಕಡೆಗೊಮ್ಮೆ ಅಚ್ಚು ಬಿಡಿಸಿದರೆ ಎರಕ ಗಟ್ಟಿಯಾಗಿತ್ತು; ಕೆಲವು ಭಾಗಗಳಲ್ಲಿ ಮಾತ್ರ! ದೊರೆಗಾದ ನಿರಾಶೆ ಅಷ್ಟಿಷ್ಟಲ್ಲ. ಆದರೂ ಮುಂದಿನ ಸಲ ಕೆಲಸ ಸರಿಯಾಗಿರಲಿ ಎಂದವನೇ ನಡೆದುಬಿಟ್ಟ. ಕ್ವಾನ್‍ಯುಗೆ ಜೀವ ಬಂದಂತಾಯಿತು. ಇನ್ನಷ್ಟು ಶ್ರಮ ವಹಿಸಿ ಪ್ರಯತ್ನ ಮಾಡಿದ. ಎರಡನೇ ಬಾರಿ ಮತ್ತೆ ಅದೇ ಕತೆ. ಸಿಟ್ಟಿಗೆದ್ದ ದೊರೆ ಇನ್ನೊಂದೇ ಅವಕಾಶ, ಮಹಾಗಂಟೆ ಸಿದ್ಧವಾಗದಿದ್ದಲ್ಲಿ ನೀನೂ ಇರುವುದಿಲ್ಲ ನೆನಪಿರಲಿ ಎಂದವನೇ ನಡೆದುಬಿಟ್ಟ. ಕ್ವಾನ್‍ಯುಗೆ ದಿಕ್ಕೇ ತೋಚಲಿಲ್ಲ. ಸಮಸ್ಯೆ ಏನೆಂದೇ ತಿಳಿಯಲಿಲ್ಲ. ಮೂರನೇ ಸಲ ಹೀಗಾದರೆ ತನ್ನ ಸಾವು ಖಚಿತ ಎಂದು ತಿಳಿದರೂ ಮತ್ತೆ ಕೆಲಸಕ್ಕೆ ಸಿದ್ಧನಾದ. ಬೇರೆ ದಾರಿಯಾದರೂ ಏನಿತ್ತು?

ಕಂಗೆಟ್ಟ ಮಗಳು : ಈ ಎಲ್ಲಾ ಘಟನೆಗಳಿಗೆ ಪ್ರತ್ಯಕ್ಷ ಸಾಕ್ಷಿಯಾದವಳು ಕೋಐ, ಕ್ವಾನ್‍ಯುನ ಹದಿನಾರು ವರ್ಷದ ಮಗಳು… ತಾಯಿಯನ್ನು ಕಳೆದುಕೊಂಡಿದ್ದ ಅವಳಿಗೆ ಅಪ್ಪನೆಂದರೆ ಎಲ್ಲಿಲ್ಲದ ಪ್ರೀತಿ. ತಂದೆಯ ಎಲ್ಲಾ ಪ್ರಯತ್ನಗಳೂ ವಿಫಲವಾಗುವುದರ ಜತೆ ರಾಜನ ಮಾತು ಆಕೆಯನ್ನು ಕಂಗೆಡಿಸಿತು. ಬಹಳ ಯೋಚಿಸಿ ತನ್ನಲ್ಲಿದ್ದ ಅಮೂಲ್ಯ ಒಡವೆ ಮಾರಿ ನಗರದ ಪ್ರಸಿದ್ಧ ಜ್ಯೋತಿಷಿಯ ಬಳಿ ನಡೆದಳು. ಆತ ಧ್ಯಾನಿಸಿ, ಲೆಕ್ಕಾಚಾರ ಹಾಕಿ ‘ಎರಕ ಸರಿಯಾಗಿಯೇ ಇದೆ. ಆದರೆ ಅಮೂಲ್ಯ ಲೋಹಗಳಾದ ಚಿನ್ನ, ಬೆಳ್ಳಿ ಸಾÀಧಾರಣ ಲೋಹಗಳಾದ ತಾಮ್ರ- ಕಂಚಿನ ಜತೆ ಬೆರೆಯಲು ಸಾಧ್ಯವಿಲ್ಲ. ಮಿಶ್ರಣ ಕುದಿಯುವಾಗ ಕನ್ಯೆಯ ರಕ್ತ ಸೇರಿದರೆ ಎಲ್ಲವೂ ಬೆರೆಯುತ್ತದೆ’ ಎಂದ. ತಂದೆಯ ಸಮಸ್ಯೆಗೆ ಕಾರಣ- ಪರಿಹಾರಎರಡನ್ನೂ ತಿಳಿದ ಕೋಐ ಮನೆಗೆ ಹಿಂದಿರುಗಿದಳು.

ಆ ದಿನವೂ ಬಂತು, ಅಂದರೆ ಕಡೆಯ ಅವಕಾಶ ಕ್ವಾನ್‍ಯುಗೆ. ಅಚ್ಚು- ಎರಕ ಸಿದ್ಧವಾಗಿತ್ತು. ದೊರೆ ಅಪ್ಪಣೆ ನೀಡಿದೊಡನೆ ಕ್ವಾನ್‍ಯು ನಡುಗುವ ಕೈಗಳಿಂದ ಮಿಶ್ರಣ ಬೆರೆಸಿ ಎರಕ ಹೊಯ್ಯಲು ಆರಂಭಿಸಿದ. ಎರಕ ಕುದಿಯ ತೊಡಗಿತ್ತು ಕೂಡಲೇ ತಂದೆಯ ಬಳಿ ನಿಂತಿದ್ದ ಕೋಐ ಓಡಿದಳು. ಎಲ್ಲರೂ ನೋಡುತ್ತಿದ್ದಂತೆಯೇ ಮಿಂಚಿನಂತೆ ಆ ದೊಡ್ಡ ಪಾತ್ರೆಗೆ ಹಾರಿದಳು. ಎಲ್ಲೆಡೆ ಹಾಹಾಕಾರ. ದಿಗ್ಭಾಂತನಾದ ಕ್ವಾನ್‍ಯು ಆಕೆಯನ್ನು ಎಳೆಯಲು ಓಡಿದ. ಕೊತಕೊತ ಕುದಿಯುತ್ತಿದ್ದ ಎರಕ ಅವಳನ್ನಾಗಲೇ ನುಂಗಿತ್ತು. ದುಃಖಿತಂದೆಯ ಕೈಗೆ ಸಿಕ್ಕಿದ್ದು ಕೋಐಳ ರೇಷ್ಮೆ ಚಪ್ಪಲಿ ಮಾತ್ರ. ಇತ್ತ ಎರಕವನ್ನು ಅಚ್ಚಿನಲ್ಲಿ ಹೊಯ್ದು ತಣ್ಣಗಾದ ಬಳಿಕ ತೆರೆದರೆ ಅಲ್ಲಿತ್ತು ಮಹಾಗಂಟೆ. ಎಲ್ಲಾ ಲೋಹಗಳು ಹದವಾಗಿ ಬೆರೆತು ಬಂಗಾರ ವರ್ಣದಿಂದ ಥಳಥಳಿಸುತ್ತಿತ್ತು. ಕ್ವಾನ್‍ಯು ಬದುಕಿದ, ದೊರೆ ಅಮರನಾದ ; ಕೋಐಳಿಂದ!!

ಭವ್ಯವಾದ ಮಹಾಗಂಟೆಯ ಆತ್ಮ, ಕೋಐ ಎಂದು ಈ ಘಟನೆಯನ್ನು ಹೇಳಲಾಗುತ್ತದೆ. ಆಕೆಯ ತ್ಯಾಗವನ್ನು ಸಾರುತ್ತಲೇ ಹಾಸ್ಸೆ ಎಂಬ ಮರ್ಮರ ಆಕೆಗಿದ್ದ ಬದುಕಿನ ಪ್ರೀತಿ ಉಸುರುವ ನಿಟ್ಟುಸಿರು ಇರಬಹುದೇ? ಕತೆ ಕೇಳುತ್ತಾ ಯಾಕೋ ಕೆರೆಗೆ ಹಾರದ ಭಾಗೀರತಿ, ಕೆಂಪೇಗೌಡರ ಸೊಸೆ ಲಕ್ಷ್ಮೀದೇವಮ್ಮರ ನೆನಪಾಗಿತ್ತು. ಮಗಳು, ಸೊಸೆ, ಪತ್ನಿ ಹೀಗೆ ಕಾಲ, ದೇಶ ಎಲ್ಲವನ್ನೂ ಮೀರಿ ಮಹಿಳೆಯರು ಕುಟುಂಬ ಮತ್ತು ಸಮಾಜದ ಹಿತಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಸಾವಿರಾರು ಕತೆಗಳಿವೆ. ಅವರ ತ್ಯಾಗವನ್ನು ಕತೆ-ಕಾವ್ಯದ ಮೂಲಕ ಹೊಗಳುತ್ತಲೇ ಆತ್ಮ ಎಂದು ಬಣ್ಣಿಸುತ್ತಲೇ ಇತ್ತ ದೇಹ ಕಿರಿದಾಗಿಸುವ, ಮನಸ್ಸು ಕುಗ್ಗಿಸುವÀ ಸಮಾಜ ಎಷ್ಟು ಕ್ರೂರಿ ಮತ್ತು ಸ್ವಾರ್ಥಿಯಲ್ಲವೇ ಅನ್ನಿಸಿತು. ಚಪ್ಪಲಿ ನೋವು ಕಾಲಿಗಲ್ಲ, ಮನಸ್ಸಿಗೂ ತಾಗಿತ್ತು!!

ಡಾ. ಕೆ.ಎಸ್.ಚೈತ್ರಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *