ಲೋಕದ ಕಣ್ಣು / ನೆತ್ತರು ಚಿಮ್ಮಿತು, ಹಸಿರು ಹೊಮ್ಮಿತು!- ಡಾ. ಕೆ.ಎಸ್. ಚೈತ್ರಾ
ಮರಳು ಭೂಮಿಯನ್ನೇ ಹೆಚ್ಚಾಗಿ ಹೊಂದಿರುವ ರಾಜಸ್ತಾನದಲ್ಲಿ ಒಣ ಹವೆ- ಕಡಿಮೆ ಮಳೆಯಲ್ಲೂ ಬೆಳೆಯುವ ಬನ್ನಿ ಮರಗಳ ಉಪಯೋಗ ಬಹಳಷ್ಟು.ಅಮೃತಾ ಬಾಲ್ಯದಿಂದಲೂ ಈ ನಂಬಿಕೆಗಳಲ್ಲಿಯೇ ಬೆಳೆದು ತನ್ನ ಅರಣ್ಯ ರಕ್ಷಕ ಸಮುದಾಯದ ಬಗ್ಗೆ ಹೆಮ್ಮೆ ಹೊಂದಿದ್ದಳು. ಸೈನ್ಯದವರು ಮರ ಕಡಿಯಲು ಬಿಡುವುದಿಲ್ಲ ಎಂಬ ಗಟ್ಟಿ ನಿರ್ಧಾರ ಕೈಗೊಂಡು ಬನ್ನಿ ಮರವನ್ನು ಅಪ್ಪಿ ನಿಂತಳು. ಮರ ಉರುಳುವ ಮುನ್ನ ಅಮೃತಾದೇವಿಯ ತಲೆ ಉರುಳಿತು. ಆಕೆ ನುಡಿದ ಕಡೆಯ ಮಾತು `ಬಿದ್ದ ಮರಕ್ಕಿಂತ ಕತ್ತರಿಸಿದ ತಲೆ ಅಗ್ಗ'. ಆಧುನಿಕ `ಅಪ್ಪಿಕೋ' ಚಳವಳಿಗೆ ಅಮೃತಾದೇವಿಯೇ ಪ್ರೇರಣೆ ಎಂದೂ ಹೇಳಲಾಗುತ್ತದೆ.
ರಾಜ-ಮಹಾರಾಜರ ನಾಡು ಎಂದೇ ಪ್ರಖ್ಯಾತವಾದ ರಾಜಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದೆವು. ತಲೆಯಮೇಲೆ ಸೂರ್ಯ ನಿಗಿನಿಗಿ ಉರಿಯುತ್ತಿದ್ದರೆ, ಮುಖಕ್ಕೆ ಬಿಸಿಯಾದ ವಾಯುದೇವ ಅಪ್ಪಳಿಸುತ್ತಿದ್ದ. ಇವೆಲ್ಲವನ್ನೂ ಮೀರಿಸುವಂತೆ ಕೆಂಪು, ಹಳದಿ, ಹಸಿರು ಹೀಗೆ ಗಾಢ ರಂಗಿನ ಪೇಟ, ಉಡುಪು ತೊಟ್ಟ ಜನರು! ಪುರುಷರ ರಾಜಾಮೀಸೆ ಪೇಟದೊಂದಿಗೆ ಚೆನ್ನಾಗಿ ಹೊಂದಿಕೊಂಡರೆ, ಮಹಿಳೆಯರ ಗೂಂಗಟ್ ಒಳಗೆ ಅಸ್ಪಷ್ಟ ಮುಖವಷ್ಟೇ ಕಾಣುತ್ತಿತ್ತು.
‘ಬೇಟಿ- ಮಗಳು ಅಂದರೆ ಈಗಲೂ ನಮಗೆ ಹೆದರಿಕೆ. ಹಾಗಂತ ಪ್ರೀತಿ ಇಲ್ಲ ಎಂದಲ್ಲ. ಆದರೆ ಅವರನ್ನು ಜೋಪಾನ ಮಾಡುವುದು ಬಹಳ ಕಷ್ಟ. ಹಾಗಾಗಿಯೇ ಹೆಣ್ಣುಮಕ್ಕಳಿಗೆ ಮಾಫಿ (ಕ್ಷಮಿಸಿ) ಮತ್ತು ಧಾಪು (ಸಾಕು) ಎನ್ನುವ ಹೆಸರನ್ನು ಇಡಲಾಗುತ್ತದೆ. ಹೆಣ್ಣು, ಕೈಯ್ಯಲ್ಲಿ ಇಟ್ಟುಕೊಂಡ ಕೆಂಡದಂತೆ. ಬೇಗ ಇನ್ನೊಬ್ಬರಿಗೆ ದಾಟಿಸಿಬಿಡಬೇಕು. ಇಲ್ಲದಿದ್ದರೆ ಮೊದಲು ಕೈ ನಂತರ ದೇಹವನ್ನೇ ಸುಡುತ್ತದೆ. ಸಣ್ಣವರಿರುವಾಗಲೇ ಅಂದರೆ ದೊಡ್ಡವರಾಗುವ ಮುಂಚೆ ಮದುವೆ ಮಾಡಿಬಿಟ್ಟರೆ ನಾವು ಗೆದ್ದಂತೆ. ಇಲ್ಲದೇ ಅವರು ದಾರಿ ತಪ್ಪಿದರೆ ಖೂನ್ ಬಹೇಗಾ (ರಕ್ತ ಹರಿಯುತ್ತದೆ)’ ಎಂದ ನಮ್ಮ ಚಾಲಕ.
ಅತಿಹೆಚ್ಚು ಬಾಲ್ಯವಿವಾಹ, (ಹತ್ತರಿಂದ ಹದಿನಾಲ್ಕು ವರ್ಷದ ಹೆಣ್ಣುಮಕ್ಕಳು ಮದುವೆಯಾಗುವ), ಮಗುವಿನ ಜನನದ ನಂತರ ಅತ್ಯಧಿಕ ಸಂಖ್ಯೆಯ ತಾಯಿಯ ಮರಣ, ಲಿಂಗಾನುಪಾತದಲ್ಲಿ ಅತಿಕಡಿಮೆ ಹೆಣ್ಣುಮಕ್ಕಳ ಸಂಖ್ಯೆಯಿರುವ ರಾಜ್ಯ ರಾಜಸ್ತಾನ. ಅಂದರೆ ಇಲ್ಲಿ ರಾಜಕುವರಿಯರಿಗೆ ನೆಲೆ-ಬೆಲೆ ಎರಡೂ ಇಲ್ಲ! ಬಹುಶಃ ಇದೇ ಕಾರಣದಿಂದಲೋ ಏನೋ ಅಲ್ಲಿರುವ ಅದ್ಭುತ ಅರಮನೆಗಳನ್ನು ನೋಡುವಾಗಲೆಲ್ಲಾ ನನಗೆ ರಾಣಿವಾಸ ಎಲ್ಲಿತ್ತು ಎಂಬ ಕುತೂಹಲ. ಆಗ ತೋರಿಸಿದ ಭವ್ಯ ಮಹಲುಗಳ ಜಾಲಂಧ್ರಗಳ ಹಿಂದೆ ನೋವು ತುಂಬಿದ ದೃಷ್ಟಿ, ಹತಾಶೆಯ ಬಿಸಿಯುಸಿರು ತಾಕಿದ ಅನುಭವ. ಹಾಗೆಯೇ ಮೇವಾಡದ ರಾಜಧಾನಿಯಾಗಿದ್ದ ಚಿತ್ತೂರಿನ ಕೋಟೆ ನೋಡುವಾಗ ‘ಮಾನಧನ’ ಕಾಪಾಡಿಕೊಳ್ಳುವ ಸಲುವಾಗಿ ದಹದಹಿಸುವ ಅಗ್ನಿಕುಂಡಕ್ಕೆ ಕೈಮುಗಿದು ಹಾರಿದ ಜೌಹರ್ ಕೈಗೊಂಡ ರಾಣಿ ಪದ್ಮಾವತಿ ಮತ್ತು ಸಾವಿರಾರು ಮಹಿಳೆಯರ ನೆನಪಾಗಿ ಮೈ ನಡುಕ. ಕತ್ತಲಿನ ಕಿರಿದಾದ ಸುರಂಗ, ಬಾವಿಯಂಥ ಕುಂಡಗಳಲ್ಲಿ ಹಸಿ ಮೈ-ಮನ ಉರಿವ ಚಟಪಟ ಸದ್ದು ಕಿವಿಯಲ್ಲಿ! ದಾರಿಯಲ್ಲಿ ಗೂಂಗಟ್ ಧರಿಸಿ ಕೊಡ ಹೊತ್ತ ಪೋರಿಯರ ಕಂಡಾಗ ಕಣ್ಣೀರಿನಿಂದಲೇ ಕೊಡ ತುಂಬಬಹುದು ಎಂಬ ಅನಿಸಿಕೆ. ಏಕೋ ಇಲ್ಲಿ ಶತಶತಮಾನಗಳಿಂದ ಹರಿದ/ ಯುತ್ತಿರುವ ನೆತ್ತರು-ಕಣ್ಣೀರು ಹೊಳೆಗೆ ಸಾಕ್ಷಿಯಾಗಿರುವುದಕ್ಕೇ ವಾಯು-ಸೂರ್ಯರಿಗಿಷ್ಟು ಸಿಟ್ಟೇನೋ ಎಂಬ ಅನುಮಾನ. ಒಂದು ಬಗೆಯ ವಿಸ್ಮøತಿಯಲ್ಲಿ ಕಳೆದುಹೋಗಿದ್ದವಳಿಗೆ ಎಚ್ಚರವಾದದ್ದು ಖೇಜ್ರಾಲಿಯಲ್ಲಿ!
ರಾಜಸ್ತಾನದ ಜೋಧ್ಪುರದಿಂದ ದಕ್ಷಿಣಕ್ಕೆ ಸುಮಾರು ಇಪ್ಪತ್ತಾರು ಕಿ.ಮೀ. ದೂರದಲ್ಲಿ ಪುಟ್ಟ ಹಳ್ಳಿ ಖೇಜ್ರಾಲಿ. ಹಿಂದಿಯಲ್ಲಿ ಹಾಗೆಂದರೆ ನಮ್ಮ ಬನ್ನಿ ಮರ. ಹಳ್ಳಿಯ ಸುತ್ತ ಮುತ್ತಲಿನಲ್ಲಿ ಹೇರಳವಾಗಿದ್ದ ಬನ್ನಿ ಮರಗಳಿಂದ ಹಳ್ಳಿಗೆ ಅದೇ ಹೆಸರಾಗಿತ್ತು. ಅಲ್ಲಿ ವಾಸವಾಗಿದ್ದ ಬಹುತೇಕರು ಬಿಷ್ಣೋಯ್ ಸಮುದಾಯಕ್ಕೆ ಸೇರಿದವರು. ಮೂರು ಶತಮಾನಗಳ ಹಿಂದೆ ಅಲ್ಲಿದ್ದಳು ಪುಟ್ಟ ಅಮೃತಾ!
`ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕು ಮತ್ತ ಸಂಪನ್ಮೂಲಗಳನ್ನು ಬಳಸುವ ಅಧಿಕಾರವಿದೆ' ಎಂಬ ತತ್ವ ಬಿಷ್ಣೋಯ್ಗಳದ್ದು. ಬಿಷ್ಣೋಯ್ ಸಮುದಾಯದ ಜನರಿಗೆ ಮೂಲ ಪುರುಷ ಗುರು ಜಂಭೋಜಿ. ಹದಿನೈದನೇ ಶತಮಾನದಲ್ಲಿದ್ದ ಜಂಭೋಜಿ ಇಪ್ಪತ್ತೊಂಬತ್ತು ನಿಯಮಗಳನ್ನು ರೂಪಿಸಿದ್ದರು (ಬಿಸ್- ಇಪ್ಪತ್ತು, ನೋಯಿ- ಒಂಬತ್ತು). ಅವುಗಳಲ್ಲಿ ಹತ್ತು ನಿಯಮಗಳು ವೈಯಕ್ತಿಕ ನೈರ್ಮಲ್ಯ- ಆರೋಗ್ಯ, ಏಳು- ಸಾಮಾಜಿಕ ನಡತೆ, ನಾಲ್ಕು- ನಿತ್ಯದ ಪ್ರಾರ್ಥನೆ ಕುರಿತದ್ದು. ಆಕೆ ಬಿಷ್ಣೋಯ್ ಸಮುದಾಯಕ್ಕೆ ಸೇರಿದವಳು. ಉಳಿದ ಎಂಟು ನಿಯಮಗಳು ಪರಿಸರ ರಕ್ಷಣೆ ಮತ್ತು ಸಹಬಾಳ್ವೆಯ ಕುರಿತಾದದ್ದು. ಜಾಣ ಜಂಭೋಜಿ ಗಿಡ-ಮರ-ಪಶು-ಪಕ್ಷಿಗಳು ಮನುಷ್ಯನ ಜೀವನದ ಅವಿಭಾಜ್ಯ ಅಂಗ ಎಂಬುದನ್ನು ಮನಗಂಡಿದ್ದರು. ಅವುಗಳಿಲ್ಲದೇ ಮನುಷ್ಯರ ಬದುಕಿಲ್ಲ ಎಂದು ಅರಿತು ಸುತ್ತಲಿದ್ದ ಹಸಿರು ಬನ್ನಿ ಮರಗಳನ್ನು ಕಡಿಯುವ ವಿರುದ್ಧ ನಿಯಮ ರೂಪಿಸಿದ್ದರು.
ಮರಳು ಭೂಮಿಯನ್ನೇ ಹೆಚ್ಚಾಗಿ ಹೊಂದಿರುವ ರಾಜಸ್ತಾನದಲ್ಲಿ ಒಣ ಹವೆ- ಕಡಿಮೆ ಮಳೆಯಲ್ಲೂ ಬೆಳೆಯುವ ಬನ್ನಿ ಮರಗಳ ಉಪಯೋಗ ಬಹಳಷ್ಟು. ಹರಡಿನಿಂತ ಮರ ನೆರಳನ್ನು ನೀಡಿದರೆ, ಅದರ ಎಲೆಗಳು ಒಂಟೆ, ದನ-ಕರು, ಕುರಿಗಳಿಗೆ ಮೇವು. ಒಣಗಿನ ಕೊಂಬೆಗಳನ್ನು ಉರುವಲಾಗಿ ಬಳಸಲಾಗುತ್ತದೆ. ಈ ಮರದ ಬೇರು ನೆಲದ ಆಳಕ್ಕಿಳಿದು ಮಣ್ಣಿನ ಸಾರವನ್ನು ಹೆಚ್ಚಿಸುತ್ತದೆ. ಹಾಗಾಗಿಯೇ ಅದಕ್ಕೊಂದು ಪೂಜ್ಯ ಸ್ಥಾನ ನೀಡಿ ಜಂಭೋಜಿ ಗೌರವಿಸಿದ್ದರು. ಅವರು ಹಾಕಿಕೊಟ್ಟ ಇಪ್ಪತ್ತೊಂಭತ್ತು ನಿಯಮಗಳನ್ನು ಚಾಚೂತಪ್ಪದೇ ಪಾಲಿಸುವ ಶ್ರದ್ಧಾವಂತ ಜನರು ಬಿಷ್ಣೋಯ್ಗಳು. ತಮ್ಮ ಗುರು ಹಾಕಿಕೊಟ್ಟ ದಾರಿಯಲ್ಲೇ ನಡೆಯುತ್ತಿದ್ದ ಬಿಷ್ಣೋಯಿಗಳಿಗೆ ನಿಸರ್ಗ ರಕ್ಷಣೆಯೇ ಪರಮ ಧರ್ಮ. ಎಷ್ಟರಮಟ್ಟಿಗೆ ಎಂದರೆ ಕಟ್ಟಿಗೆ ಬೇಕಾಗುತ್ತದೆ ಎಂಬ ಕಾರಣಕ್ಕೆ ಹೆಣ ಸುಡುವಂತಿಲ್ಲ; ಬಟ್ಟೆಗೆ ನೀಲಿ ಬಣ್ಣ ಕೊಡಲು ಹೆಚ್ಚಿನ ಎಲೆಗಳನ್ನು ಉಪಯೋಗಿಸಬೇಕಾಗುತ್ತದೆ ಎಂದು ನೀಲಿ ಬಣ್ಣದ ಬಟ್ಟೆ ತೊಡುವಂತಿಲ್ಲ... ಹೀಗೆ ಅನೇಕ ಕಟ್ಟುಪಾಡುಗಳು.
ಅಮೃತಾ ಬಾಲ್ಯದಿಂದಲೂ ಈ ನಂಬಿಕೆಗಳಲ್ಲಿಯೇ ಬೆಳೆದಿದ್ದಳು. ತನ್ನ ಅರಣ್ಯ ರಕ್ಷಕ ಸಮುದಾಯದ ಬಗ್ಗೆ ತೀವ್ರ ಹೆಮ್ಮೆ ಹೊಂದಿದ್ದಳು. ಕಾಲ ಕಳೆದಂತೆ ಬೆಳೆದು ದೊಡ್ಡವಳಾಗಿ ಮದುವೆಯ ನಂತರ ಅಮೃತಾದೇವಿಯಾದಳು. ಅಸು, ರತ್ನಿ, ಭಾಗು ಎಂಬ ಚೆಂದದ ಮೂರು ಹೆಣ್ಣು ಮಕ್ಕಳ ತಾಯಿ ಆಕೆ. ಹೀಗೆ ತನ್ನ ಪಾಡಿಗೆ ತಾನು ಸುಖವಾಗಿ ಇದ್ದ ಅಮೃತಾದೇವಿಯ ತ್ಯಾಗಕ್ಕೆ ಕಾರಣ ಜೋಧ್ಪುರದ ರಾಜ ಅಭಯಸಿಂಗ್.
1730ನೇ ಇಸವಿಯಲ್ಲಿ ರಾಜಾ ಅಭಯಸಿಂಗ್ ಹೊಸ ಅರಮನೆಯನ್ನು ಕಟ್ಟಲು ನಿರ್ಧರಿಸಿದ. ನಿರ್ಮಾಣಕ್ಕೆ ಅಗತ್ಯವಾದ ಗಾರೆಯನ್ನು ತಯಾರಿಸಲು ಒಲೆಯಲ್ಲಿ ಸುಣ್ಣವನ್ನು ಅತಿ ಹೆಚ್ಚಿನ ಉಷ್ಣತೆಯಲ್ಲಿ ಸುಡಲಾಗುತ್ತಿತ್ತು. ಬಿಸಿ ಸುಣ್ಣವನ್ನು ಮರಳು ಮತ್ತು ನೀರಿನೊಂದಿಗೆ ಮಿಶ್ರ ಮಾಡಿದಾಗ ಅದು ಕಲ್ಲು ಮತ್ತು ಇಟ್ಟಿಗೆಯನ್ನು ಸೇರಿಸುವ ಗಾರೆಯಾಗುತ್ತಿತ್ತು. ಈ ಬಿಸಿ ಸುಣ್ಣದ ತಯಾರಿಕೆಗೆ ಒಲೆ ಸತತವಾಗಿ ಉರಿಯಲು ಅಪಾರ ಪ್ರಮಾಣದ ಉರುವಲಿನ ಅವಶ್ಯಕತೆ ಇತ್ತು. ಮರಳು ಭೂಮಿಯಲ್ಲಿ ಮರ ಸಿಗುವುದು ಸುಲಭದ ಮಾತೇ? ಮಂತ್ರಿ ಗಿರಿಧರ್ ಭಂಡಾರಿಗೆ ಉರುವಲು ತರುವ ಜವಾಬ್ದಾರಿ ವಹಿಸಲಾಯ್ತು. ಮರುಭೂಮಿಯಲ್ಲೂ ಬನ್ನಿ ಮರಗಳು ಸೊಂಪಾಗಿ ಬೆಳೆದು ನಿಂತಿದ್ದ ಖೇಜ್ರಾಲಿ ಹಳ್ಳಿಯ ಮೇಲೆ ಮಂತ್ರಿಯ ಕಣ್ಣು ಬಿತ್ತು. ಸೈನಿಕರನ್ನು ಕರೆದುಕೊಂಡು ಕುದುರೆಯೇರಿ ಅಲ್ಲಿಗೆ ಪಯಣ ಬೆಳೆಸಿದ.
1730 ಸೆಪ್ಟೆಂಬರ್ ಹನ್ನೊಂದು, ಮಂಗಳವಾರ; ಮಧ್ಯಾಹ್ನದ ಹೊತ್ತು, ರಣ ಬಿಸಿಲು ಸುಡುತ್ತಿದ್ದರೂ ಪುಟ್ಟ ಹಳ್ಳಿ ಗಿಡ-ಮರಗಳಿಂದ ತಂಪಾಗಿಯೇ ಇತ್ತು. ಪುರುಷರು, ಹೊಲಗಳಲ್ಲಿ ಕೆಲಸ ಮಾಡಲು ತೆರಳಿದ್ದರು. ಮಹಿಳೆಯರು ಗೃಹಕೃತ್ಯದಲ್ಲಿ ಮುಳುಗಿದ್ದರು. ತನ್ನ ಮಕ್ಕಳೊಂದಿಗೆ ಬೆಣ್ಣೆ ಕಡೆಯುತ್ತಾ ಕುಳಿತಿದ್ದಳು ಅಮೃತಾದೇವಿ. ಇದ್ದಕ್ಕಿದ್ದಂತೆ ಕಿವಿಗೆ ಬಿತ್ತು ಎಲ್ಲೋ ಸನಿಹದಲ್ಲಿ ಮರ ಕಡಿವ ಶಬ್ದ. ಓಡಿ ಹೋಗಿ ನೋಡಿದರೆ ಮಂತ್ರಿಯ ಮುಂದಾಳತ್ವದಲ್ಲಿ ಮರ ಕಡಿಯಲು ಆರಂಭಿಸಿರುವ ಸೈನಿಕರು.
ಬಲಿದಾನ : ಗಾಬರಿಯಾದ ಅಮೃತಾದೇವಿ ಮೊದಲು ಮಂತ್ರಿಯನ್ನು ಬೇಡಿದಳು. ಸೈನ್ಯದವರು, ಹೆಂಗಸಿನ ಮಾತು ಕೇಳಲು ಸಾಧ್ಯವೇ? ಅಪಹಾಸ್ಯ ಮಾಡಿದರು. ಕಡೆಗೆ ಮರ ಕಡಿಯದೇ ಇರಲು ಲಂಚ ಕೊಟ್ಟರೆ ಸರಿ ಎಂಬ ಷರತ್ತು ವಿಧಿಸಿದರು. ಲಂಚ ಕೊಡುವುದಿಲ್ಲ, ಮರ ಕಡಿಯಲು ಬಿಡುವುದೂ ಇಲ್ಲ ಎಂಬ ಗಟ್ಟಿ ನಿರ್ಧಾರ ಕೈಗೊಂಡು ಬನ್ನಿ ಮರವನ್ನು ಅಪ್ಪಿ ನಿಂತಳು ಅಮೃತಾದೇವಿ. ಒಡೆಯನ ಆದೇಶ ಪಾಲಿಸಲು ಸಿದ್ಧರಾಗಿ ನಿಂತವರಿಗೆ ಇದೆಲ್ಲಾ ಯಾವ ಲೆಕ್ಕ? ಮರ ಉರುಳುವ ಮುನ್ನ ಅಮೃತಾದೇವಿಯ ತಲೆ ಉರುಳಿತು. ಆಕೆ ನುಡಿದ ಕಡೆಯ ಮಾತು `ಬಿದ್ದ ಮರಕ್ಕಿಂತ ಕತ್ತರಿಸಲ್ಪಟ್ಟ ತಲೆ ಅಗ್ಗವಾದುದು'. ಅಮೃತಾದೇವಿಯ ನಂತರ ಆಕೆಯ ಮೂರು ಮಕ್ಕಳು, ಕೊಡಲಿಗೆ ತಲೆಯೊಡ್ಡಿದರು. ಅಷ್ಟರಲ್ಲಾಗಲೇ ಹಳ್ಳಿಯ ಜನ ಸೇರಿದ್ದರು. ಕಣ್ಣೆದುರೇ ನಡೆದ ಈ ಬಲಿದಾನ ಜನರಲ್ಲಿ ಆವೇಶ ಮೂಡಿಸಿತು. ಹಳ್ಳಿಯ ಹಿರಿಯರು, ವೃದ್ಧರು ಸ್ವಯಂಪ್ರೇರಿತರಾಗಿ ಒಂದೊಂದು ಮರವನ್ನು ಅಪ್ಪಿ ನಿಂತರು. ನಿರ್ದಯೆಯಿಂದ ಅವರ ತಲೆಗಳನ್ನು ಕತ್ತರಿಸಿದ್ದಂತೂ ಸರಿ, ಜತೆಗೇ ಕೆಲಸಕ್ಕೆ ಬಾರದ ವಯಸ್ಸಾದವರು ಸತ್ತರೇನು ಎಂಬಂರ್ಥದ ಮಾತುಗಳನ್ನು ಮಂತ್ರಿ ಆಡಿದ. ಖೆಜ್ರಿಯಲ್ಲಿ ನಡೆದ ಸುದ್ದಿ ಕೂಡಲೇ ಕಾಳ್ಗಿಚ್ಚಿನಂತೆ ಎಲ್ಲೆಡೆ ಹರಡಿತು. ಸುತ್ತಮುತ್ತಲಿನ ಎಂಬತ್ಮೂರು ಹಳ್ಳಿಗಳಿಂದ ಜನರು ಸೇರಿದರು. ಸಂಜೆಯಾಗುವುದರೊಳಗಾಗಿ ಸುತ್ತಮುತ್ತಲಿನ ಮುನ್ನೂರಾ ಅರವತ್ಮೂರು ಜನರ ತಲೆ ಕತ್ತರಿಸಲ್ಪಟ್ಟಿತು. ಅವರಲ್ಲಿ ವೃದ್ಧರು ಮಾತ್ರವಲ್ಲ, ಯುವಕ/ತಿಯರು, ಮಕ್ಕಳು ಎಲ್ಲರೂ ಸೇರಿದ್ದರು. ರಕ್ತದ ಹೊಳೆ, ರುಂಡಗಳ ಮಾಲೆ ಆ ಹಳ್ಳಿಯಲ್ಲಿ ಆ ದಿನ.
ಅಷ್ಟರಲ್ಲಿ ಸುದ್ದಿ ರಾಜನಿಗೆ ತಲುಪಿ ಆತ ಮಾರಣಹೋಮದಿಂದ ದುಃಖಿಸಿದ. ಈ ಕೃತ್ಯ ನಿಲ್ಲಿಸುವಂತೆ ಆದೇಶ ನೀಡಿ ಸ್ವತಃ ತಾನೇ ಬಂದು ಹಳ್ಳಿಗರಲ್ಲಿ ಕ್ಷಮೆ ಯಾಚಿಸಿದ. ಮಾತ್ರವಲ್ಲ, ಆ ಹಳ್ಳಿಯಲ್ಲಿ ಮರ ಕಡಿಯುವುದು/ ಬೇಟೆ ಆಡುವುದರ ವಿರುದ್ಧ ರಾಜಾಜ್ಞೆ ಹೊರಡಿಸಿದ. ಮಡಿದವರ ಗೌರವಾರ್ಥ ಅಷ್ಟೇ ಸಂಖ್ಯೆಯ ಬನ್ನಿ ಗಿಡಗಳನ್ನು ನೆಡಲಾಯ್ತು. ಈಗಲೂ ಈ ಹಳ್ಳಿಯಲ್ಲಿ ರಾಜನ ಆದೇಶವಿರುವ ಲೋಹದ ಫಲಕವನ್ನು ಅಮೃತಾದೇವಿ ನೆನಪಲ್ಲಿ ನಿರ್ಮಿಸಲಾಗಿರುವ ಪುಟ್ಟ ಮಂದಿರದಲ್ಲಿ ಕಾಣಬಹುದು.ಜನರು ಅಲ್ಲಿ ಸೇರಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ರಾಜಸ್ತಾನದ ಬರಡುಭೂಮಿ ಇಂದು ಹಸಿರಿನಿಂದ ಕಂಗೊಳಿಸುವುದಕ್ಕೆ ಬಿಷ್ಣೋಯಿ ಜನರ ನಿಸರ್ಗ ಪ್ರೀತಿ ಮತ್ತು ಕಾಳಜಿ ಕಾರಣ. ಅರಣ್ಯ ನಾಶ-ಪ್ರಾಣಿ ಬೇಟೆ ವಿರುದ್ಧ ತೀವ್ರ ಹೋರಾಟ ನಡೆಸುವವರಿಗೆ ಅಮೃತಾದೇವಿ ಸದಾ ಸ್ಫೂರ್ತಿ. ಭಾರತ ಸರ್ಕಾರವು `ಅಮೃತಾದೇವಿ ಬಿಷ್ಣೋಯ್ ವನ್ಯಜೀವಿ ರಕ್ಷಣಾ ಪ್ರಶಸ್ತಿ' ಸ್ಥಾಪಿಸಿ ಆಕೆಯನ್ನು ಗೌರವಿಸಿದೆ. ಆಧುನಿಕ `ಅಪ್ಪಿಕೋ' ಚಳವಳಿಗೆ ಅಮೃತಾದೇವಿಯೇ ಪ್ರೇರಣೆ ಎಂದೂ ಹೇಳಲಾಗುತ್ತದೆ. ಒಂದಂತೂ ನಿಜ, ಲಂಚ ಕೊಡಲು ಒಪ್ಪದೇ, ತಾನು ನಂಬಿದ `ನಿಸರ್ಗ' ಉಳಿಸುವ ಸಲುವಾಗಿ ಪ್ರಾಣ ತೆತ್ತ ಅಮೃತಾದೇವಿ ಅ`ಮರ'ಳು.
ತನ್ನ ನೆತ್ತರು ಹರಿಸಿಯಾದರೂ ಹಸಿರು ಉಕ್ಕಿಸುವ ಶಕ್ತಿ ಬರೀ ಅಮೃತಾಳದ್ದು ಮಾತ್ರವಲ್ಲ, ಎಲ್ಲಾ ಮಹಿಳೆಯರದ್ದು! ಅದನ್ನು ಪೂಜಿಸಿದರಷ್ಟೇ ಸಾಲದು; ಗುರುತಿಸಿ ಗೌರವಿಸಬೇಕು ಎಂಬ ಅರಿವು ಮೂಡುವುದೆಂದಿಗೋ??

ಡಾ. ಕೆ.ಎಸ್. ಚೈತ್ರಾ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.