ಲೋಕದ ಕಣ್ಣು/ ನೃತ್ಯಪ್ರಿಯ ಜಗನ್ನಾಥ ಮತ್ತು ಮಹಾನಾರಿಯರು!- ಡಾ. ಕೆ.ಎಸ್. ಚೈತ್ರಾ


ದೇವಾಲಯಗಳಿಗೂ ಸಂಗೀತ ಮತ್ತು ನೃತ್ಯಕಲೆಗೂ ಇರುವ ಸಂಬಂಧ ಕೇವಲ ಕಲಾತ್ಮಕ ನೆಲೆಯಲ್ಲಿ ಇರುವುದಿಲ್ಲ; ಅದರ ಸಾಮಾಜಿಕ ನೆಲೆಯಲ್ಲಿ ಮಕ್ಕಳ ಮತ್ತು ತಳಸಮುದಾಯದ ಶೋಷಣೆಯ ಪದರಗಳು ಕಾಣುತ್ತವೆ. ಒಡಿಶಾದ ಜಗನ್ನಾಥ ದೇವಾಲಯದ ಇತಿಹಾಸದಲ್ಲಿ ಕೂಡ ಇಂಥ ಉದಾಹರಣೆಗಳು ಹೇರಳವಾಗಿವೆ. ಪ್ರಭುತ್ವ ಮತ್ತು ಪಿತೃಪ್ರಧಾನ ವ್ಯವಸ್ಥೆಯು ದೇವರ ಸೇವೆಯ ಹೆಸರಿನಲ್ಲಿ ಬೆಳೆಸಿದ ದೇವದಾಸಿ ಪದ್ಧತಿ ಇಲ್ಲಿ ಮತ್ತು ದೇಶದ ಇನ್ನೂ ಅನೇಕ ಕಡೆ ಬೇರೂರಿತ್ತು.

ರಾಷ್ಟ್ರಗೀತೆಯನ್ನು ಹಾಡುವಾಗಲೆಲ್ಲಾ ‘ಉತ್ಕಲಾ’ ಎಷ್ಟು ಚಂದದ ಹೆಸರು ಎಂದುಕೊಂಡ ನನಗೆ ಒರಿಸ್ಸಾ ಸುತ್ತುವಾಗಲೆಲ್ಲಾ ಕಂಡಿದ್ದು ಕಲ್ಲಿನಲ್ಲಿ ಕೊರೆದ ಸೂಕ್ಷ್ಮ ಚಿತ್ತಾರ, ಕಸೂತಿಯ ಸಂಭಲ್ ಪುರಿ ಸೀರೆ, ನಾಜೂಕಾದ ಬೆಳ್ಳಿಯ ಆಭರಣ, ಶಂಖ- ಕಪ್ಪೆಚಿಪ್ಪಿನ ಕರಕುಶಲ ವಸ್ತುಗಳು, ಪಟ ಚಿತ್ರಗಳು, ಒಡಿಸ್ಸಿ ನೃತ್ಯ, ಜಯದೇವನ ಗೀತಗೋವಿಂದ … ಹೀಗೆ ಎಲ್ಲೆಲ್ಲೂ ಕಲೆಯೇ!

ಕಲೆಯ ಉತ್ಕರ್ಷಕ್ಕೆ ಕಾರಣವಾದ ಉತ್ಕಲಾ ಎಂಬ ಒಡಿಶಾದ ಪ್ರಾಚೀನ ಹೆಸರು ನಿಜಕ್ಕೂ ಅನ್ವರ್ಥಕ ಅನ್ನಿಸಿತ್ತು. ಅದಕ್ಕೆ ಸರಿಯಾಗಿ ರಾಜಧಾನಿ ಭುಬನೇಶ್ವರ್‍ನಿಂದ ಅರವತ್ತು ಕಿಮೀ ದೂರದ ಪುರಿಗೆ ತೆರಳುವಾಗ ಜತೆಯಲ್ಲಿದ್ದ ರಂಜಿತ್ ಖುಷಿ ಮತ್ತು ಭಕ್ತಿಯಿಂದ ನುಡಿದಿದ್ದ ‘ಪುರಿ ಎಂದರೆ ಸಾಮಾನ್ಯವಲ್ಲ! ಶ್ರೀಜಗನ್ನಾಥಧಾಮ; ನಮ್ಮ ಜಗನ್ನಾಥನೂ ನೃತ್ಯಪ್ರಿಯ’.

ಕಾಲು – ಕಿವಿಯಿಲ್ಲದ ದೇವರು!

ಪುರಿಯ ಜಗನ್ನಾಥ, ಒಡಿಯಾ ಜನರ ಆರಾಧ್ಯದೈವ ಮಾತ್ರವಲ್ಲ, ಆತ್ಮ ಬಂಧು. ಅಲ್ಲಿ ಪತ್ನಿ ಲಕ್ಷ್ಮಿಯೊಡನೆÉ ಅಲ್ಲ ಬದಲಿಗೆ ಅಣ್ಣ ಬಲರಾಮ, ತಂಗಿ ಸುಭದ್ರೆಯೊಡನೆ ಜಗನ್ನಾಥ ಪ್ರತಿಷ್ಠಾಪಿತನಾಗಿದ್ದಾನೆ. ದೇವಸ್ಥಾನ ಎಂದೊಡನೆ ಕರಿಕಲ್ಲಿನ / ಅಮೃತಶಿಲೆಯ ಮೂರ್ತಿ ನನ್ನ ಮನಸ್ಸಿನಲ್ಲಿತ್ತು. ಅಲ್ಲಿದ್ದದ್ದು ಮರದಿಂದ ಮಾಡಿದ ಕಿವಿ – ಕಾಲಿಲ್ಲದ, ಕಣ್ಣಿನ ಜಾಗದಲ್ಲಿ ದೊಡ್ಡ ವರ್ತುಲ ಮತ್ತು ಮುರಿದ ಕೈಗಳ ಬೇರೆ ಬೇರೆ ಬಣ್ಣದ ಮೂರ್ತಿಗಳಿವು. ಆದರೆ ಜನರಿಗೆ ತಮ್ಮ ಕರೆ ಕೇಳಿದೊಡನೆ ಕಾಲಿಲ್ಲದಿದ್ದರೂ ಓಡಿಬರುವ, ಕಿವಿಯಿಲ್ಲದಿದ್ದರೂ ಆಲಿಸುವ, ಮುರಿದ ಕೈಯಿಂದಲೇ ಅಭಯ ನೀಡುವ, ಸಖ- ಜಗನ್ನಾಥನೆಂದರೆ ಎಲ್ಲಿಲ್ಲದ ಭಕ್ತಿ- ಪ್ರೀತಿ.

ಈ ಅಣ್ಣ-ತಮ್ಮ- ತಂಗಿಯರ ಬಣ್ಣ, ಸ್ವಭಾವ ಮತ್ತು ತಿನ್ನುವ ಆಹಾರದಲ್ಲಿ ವ್ಯತ್ಯಾಸಗಳಿವೆ. ಅವು ಸಮಾಜದ ವಿವಿಧ ವರ್ಗಗಳನ್ನು ಪ್ರತಿನಿಧಿಸುವ ಸಂಕೇತವೂ ಆಗಿದೆ. ಅಣ್ಣ ಬಲರಾಮನದ್ದು ರಾಜಮನೆತನ, ಅಧಿಕಾರವನ್ನು ಸೂಚಿಸುವ ನೀಲಿರಕ್ತ. ಹಾಗಾಗಿಯೇ ಮುಖದಲ್ಲಿ ಕಾಂತಿಯಿದೆ. ಆತನಿಗೆ ಸಲ್ಲುವ ನೈವೇದ್ಯ ಕನಿಕಾ; ತುಪ್ಪ, ಒಣಹಣ್ಣು, ಪರಿಮಳದ ಅಕ್ಕಿಯ ಅನ್ನ. ಮಧ್ಯದಲ್ಲಿರುವ ತಂಗಿ ಸುಭದ್ರೆಯದ್ದು ಅಡಿಗೆಮನೆಯಲ್ಲಿ ಒಲೆಯ ಮುಂದೆ ಹೆಚ್ಚಿನ ಹೊತ್ತು ಕಳೆಯುವ ಹೆಣ್ಣನ್ನು ಸೂಚಿಸುವ ಹಳದಿ ಬಣ್ಣ. ಆಕೆ ಮೆಣಸು ಮತ್ತು ಮಸಾಲೆಯುಕ್ತ ಆಹಾರ ಸೇವಿಸುತ್ತಾಳೆ. ಜಗನ್ನಾಥನ ಬಣ್ಣ ಬಿಸಿಲಲ್ಲಿ ದುಡಿವ ಶ್ರಮಿಕ ರೈತರಂ ಕಪ್ಪು. ರೈತಾಪಿ ಜನ ತಿನ್ನುವ ದಪ್ಪ ಅಕ್ಕಿ, ಬೇಳೆ, ಸಪ್ಪೆ ತರಕಾರಿ ಅನ್ನವೇ ಪ್ರಮುಖ. ಸಪ್ಪೆ ಏಕೆಂದರೆ ರೈತರಂತೆ ಆತನಿಗೂ ಉಷ್ಣಕ್ಕೆ ಹೊಟ್ಟೆಉರಿ, ನೋವು ಬರಬಾರದೆಂದು! ಅದಕ್ಕಾಗಿಯೇ ರಾತ್ರಿ ಮಲಗುವ ಮುನ್ನ ದಹಿ ಪಖಲಾ (ಮೊಸರು ಸೇರಿಸಿದ ಅನ್ನ) ತಿಂದು ಹೊಟ್ಟೆ ತಂಪಾಗಿಸಿಕೊಂಡು ಮಲಗುತ್ತಾನೆ. ಅಂದರೆ ಜಗನ್ನಾಥ ಬರೀ ಪರಮಾತ್ಮನಲ್ಲ, ಪರಮಾಪ್ತ! ಹೀಗೆ ಅಲ್ಲಿನ ಸಂಸ್ಕøತಿಯ ಜತೆ ಜನರ ದೈನಂದಿನ ಜೀವನದಲ್ಲೂ ಹಾಸುಹೊಕ್ಕಾಗಿದ್ದಾನೆ ಜಗನ್ನಾಥ.

ಮಹಾನಾರಿಯರು

ಹೀಗಿದ್ದೂ ಜಗತ್ತಿಗೇ ಒಡೆಯ ಅಂದರೆ ರಾಜನಾದ ಜಗನ್ನಾಥನಿಗೆ ಇಲ್ಲಿ ಸಲ್ಲುವ ವೈಭವ ಅಷ್ಟಿಷ್ಟಲ್ಲ. ಅನ್ನ ನೈವೇದ್ಯದ ಐವತ್ತಾರು ಬಗೆ ಛಪ್ಪನ್ ಭೋಗ್ , ಸೋನಾ ಬೇಷ್ (ಸ್ವರ್ಣ ವೇಷ), ನೃತ್ಯ ಸೇವೆ- ಹೀಗೆ ಪಟ್ಟಿ ದೊಡ್ಡದು. ಮಹಾರಾಜರಿಗೆ ಇರುವಂತೆ ಜಗನ್ನಾಥನಿಗೂ ಹಗಲು-ಇರುಳಿಡೀ ಸೇವೆ ಸಲ್ಲಿಸಲು ಸೇವಕರನ್ನು ನೇಮಿಸಲಾಗುತ್ತದೆ. ಅವರಲ್ಲಿ ನೃತ್ಯಸೇವೆ ಸಲ್ಲಿಸುವ, ಜಗನ್ನಾಥನಿಗೆ ಪ್ರಿಯರಾದ ಮಹಾನಾರಿಯರು- ಮಹಾರಿಯರು ಪ್ರಮುಖರಾಗಿದ್ದರು. ಮಲಗುವ ಮುನ್ನ ಸುಂದರಿಯರ ನೃತ್ಯ ನೋಡುವುದು ಜಗನ್ನಾಥನಿಗೆ ಪ್ರೀತಿಯಾದ ಕಾರಣ ದಿನವೂ ನೃತ್ಯಸೇವೆ ಸಲ್ಲಿಸುವ ದೇವದಾಸಿಯರು ಇವರು. ಸಾಧಾರಣವಾಗಿ ಒಂಬತ್ತನೇ ವರ್ಷದಲ್ಲಿ ಒಳ್ಳೆಯ ಲಕ್ಷಣಗಳಿರುವ ಹುಡುಗಿಯನ್ನು ಆರಿಸಿ ಜಗನ್ನಾಥನೊಡನೆ ಆಕೆಯ ವಿವಾಹ ಸತಿಬಂಧನ್ ನಡೆಸಲಾಗುತ್ತಿತ್ತು. ನಂತರ ಆಕೆಯ ಪೂರ್ತಿ ಜವಾಬ್ದಾರಿ ರಾಜ ಮತ್ತು ಅರಮನೆಯದ್ದು. ನೃತ್ಯ-ಸಂಗೀತದಲ್ಲಿ ರಾಜಗುರುಗಳಿಂದ ಶಿಕ್ಷಣ ಪಡೆದ ಆಕೆ ದೇವರ ಪರಿಚಾರಿಕೆಯಾಗಿ ಸೇವೆ ಸಲ್ಲಿಸುತ್ತಿದ್ದಳು. ಈ ಹುಡುಗಿಯರ ಆಯ್ಕೆ ಬೇರೆ ಬೇರೆ ಜಾತಿಗಳಿಂದ ನಡೆಯುತ್ತಿದ್ದರೂ ಸತಿಬಂಧನ್ ಆದ ನಂತರ ಆಕೆಗೆ ಜಾತಿಯಿಲ್ಲ; ಸ್ತ್ರೀ ಜಾತಿ ಮಾತ್ರ! ರಾಣಿಗೆ ಸಲ್ಲುವ ಗೌರವ ಇವರಿಗೂ ಸಲ್ಲುತ್ತಿತ್ತು. ಉತ್ಕಲದಲ್ಲಿ ನೃತ್ಯ ಕ್ರಿ.ಪೂ ಎರಡನೇ ಶತಮಾನದಲ್ಲಿ ಇತ್ತೆಂದು ದಾಖಲೆಗಳು ಹೇಳುತ್ತವೆ. ಆದರೆ ಒಡಿಶಾವನ್ನಾಳಿದ ಗಂಗ ಅರಸರ ಕಾಲದಿಂದ ದೇವರಿಗೆ ಈ ನೃತ್ಯಸೇವೆ ಸಲ್ಲಿಸಲಾಗುತ್ತಿತ್ತು. ದೇವದಾಸಿಯರಿಗೆ ಸಮಾಜದಲ್ಲಿ ಉನ್ನತ ಸ್ಥಾನವಿತ್ತು. ಅವರ ನೃತ್ಯ ಪವಿತ್ರ ಆಚರಣೆಯಾಗಿತ್ತು.

ಭಾರತದ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಒಂದಾಗಿರುವ ಒಡಿಸ್ಸಿಯ ಮೂಲ ಮಹಾರಿ ನೃತ್ಯ ಎನ್ನಲಾಗುತ್ತದೆ. ಎಲ್ಲಾ ನೃತ್ಯ-ನಾಟಕಗಳ ಆಕರಗ್ರಂಥ ನಾಟ್ಯಶಾಸ್ತ್ರದಲಿ ್ಲಓದ್ರಾ ಮಾಗದಿ üಎಂದು ಉಲ್ಲೇಖವಾಗಿರುವುದು ಈಗಿನ ಒಡಿಸ್ಸಿ ನೃತ್ಯ ಎಂದು ಹೇಳಲಾಗಿದೆ. ಹನ್ನೆರಡನೇ ಶತಮಾನದಲ್ಲಿ ಚೋಡ ಗಂಗದೇವ ಮಹಾರಿಗಳಿಗೆ ವಾಸಿಸಲು ಪ್ರತ್ಯೇಕ ಸ್ಥಳ ವ್ಯವಸ್ಥೆ ಕಲ್ಪಿಸಿದ, ದೇವರಿಗೆ ಹೊಸ ಆಚರಣೆಗಳನ್ನು ರೂಢಿಗೆ ತಂದ. ಮಹಾರಿಗಳನ್ನು ಆರು ವಿಧವಾಗಿ ವಿಂಗಡಿಸಲಾಗಿತ್ತು. ಭಿಟಾರಾ ಗೌನಿ (ರಾತ್ರಿದೇವನಿಗೆ ಬಡಾಸಿಂಗಾರ ಬೇಷ ಹಾಕುವಾಗ ಗರ್ಭಗುಡಿಯಲ್ಲಿ ಹಾಡುವವಳು) , ಬಹಾರಾ ಗೌನಿ (ಗರ್ಭಗುಡಿ ಮಾತ್ರವಲ್ಲದೇ ಬೆಳಿಗ್ಗೆ ಉಪಾಹಾರದ ಸಮಯ ಮತ್ತು ಹಬ್ಬ-ಹರಿದಿನಗಳಲ್ಲಿ ಸೇವೆ ಸಲ್ಲಿಸುವವಳು, ನಾಚೌನಿ (ನೃತ್ಯಗಾತಿಯರು), ಪತ್ವಾರಿ (ದೇವರಿಗೆ ಉಡುಪು ಹಾಕಿ ತೆಗೆಯುವವರು), ರಾಜ ಅಂಗಿಲಾ ( ಮಹಾರಾಜರ ಸೇವಕಿ), ಗಹನ ಮಹಾರಿ (ವಿಶೇಷ ಸಂದರ್ಭಗಳಲ್ಲಿ ಗುಂಪಾಗಿ ಸೇವೆ ಸಲ್ಲಿಸುವವರು) ಮತ್ತು ರುದ್ರಗಣಿಕಾ (ರಾಜನ ಖುಷಿಗಾಗಿ ಮೀಸಲಾದ ಗಣಿಕೆಯರು, ದೇವರ ಸೇವೆ ಮಾಡುವಂತಿಲ್ಲ). ಆರಂಭದಲ್ಲಿ ಮಹಾರಿಗಳು ಶ್ಲೋಕಗಳನ್ನು ನರ್ತಿಸುತ್ತಿದ್ದರು. ಆದರೆ ಹನ್ನೆರಡನೆಯ ಶತಮಾನದಲ್ಲಿ ಜಯದೇವನ ಗೀತಗೋವಿಂದವನ್ನು ನರ್ತಿಸುವ ಪದ್ಧತಿ ಆರಂಭವಾಯಿತು. ಜಯದೇವನ ಪತ್ನಿ ಪದ್ಮಾವತಿ ಜಗನ್ನಾಥನ ದೇವದಾಸಿಯಾಗಿದ್ದಳು, ಮತ್ತು ಜಗನ್ನಾಥನ ಅಪ್ಪಣೆ ಮೇರೆಗೆ ಜಯದೇವ ಆಕೆಯನ್ನು ವಿವಾಹವಾದ ಎನ್ನಲಾಗುತ್ತದೆ. ಪ್ರೀತಿ-ವಿರಹ ಹೀಗೆ ಶೃಂಗಾರವನ್ನು ಪ್ರಮುಖವಾಗಿ ಒಳಗೊಂಡ ಗೀತಗೋವಿಂದವನ್ನು ಮಹಾರಿಗಳು ನರ್ತಿಸುವುದು ಸಂಪ್ರದಾಯವಾಗಿತ್ತು. ಹೀಗೆ ಜಗನ್ನಾಥ ದೇಗುಲ ಭಕ್ತಿಯ ಮಾತ್ರವಲ್ಲ, ಸಂಗೀತ, ನೃತ್ಯ, ಕಲೆಗಳ ಕೇಂದ್ರಸ್ಥಾನವೂ ಆಗಿತ್ತು.
(ಚಿತ್ರ ; ಮಹಾರಿ ನೃತ್ಯ ಪ್ರಸ್ತುತ ಪಡಿಸುತ್ತಿರುವ ಗುರು ರೂಪಶ್ರ್ರೀ ಮಹಾಪಾತ್ರ)

ಗೊತಿಪುವಾ

ಮಹಾರಿ ನೃತ್ಯದ ಅಂಶಗಳ ಜತೆ ಒಳಗೊಂಡು ಸಾಹಸ- ದೈಹಿಕ ಕಸರತ್ತನ್ನು ಒಳಗೊಂಡು ಬಾಲಕರು ಬಾಲಕಿಯರಂತೆ ಅಲಂಕೃತರಾಗಿ ರಾಧಾ-ಕೃಷ್ಣರ ಕತೆಯನ್ನು ನಿರೂಪಿಸುವ ವಿಶಿಷ್ಟ ನೃತ್ಯ ಗೊತಿಪುವಾ. ಹದಿನಾರನೇ ಶತಮಾನದಲ್ಲಿ ಒಡಿಶಾದ ರಘುರಾಜಪುರದಲ್ಲಿ ಆರಂಭವಾದ ಈ ನೃತ್ಯಶೈಲಿಯ ಹುಟ್ಟಿಗೆ ಮೂರು ಮುಖ್ಯ ಕಾರಣಗಳನ್ನು ಊಹಿಸಲಾಗುತ್ತದೆ.

• ಚಾರ್ ಧಾಮಗಳಲ್ಲಿ ಒಂದಾದ ಜಗನ್ನಾಥ ದೇಗುಲದ ಮೇಲೆ ಆಗಾಗ್ಗೆ ದಾಳಿಗಳು ನಡೆದಾಗ ಅಲ್ಲಿ ನಡೆಯುತ್ತಿದ್ದ ರೂಢಿ ರಿವಾಜುಗಳನ್ನು ದೀರ್ಘ ಕಾಲ ಸ್ಥಗಿತಗೊಳಿಸುವ ಅನಿವಾರ್ಯತೆ ಇತ್ತು. ಒಡಿಶಾವನ್ನಾಳುತ್ತಿದ್ದ ದೊರೆಯ ಪಟ್ಟಕ್ಕೇ ಕುತ್ತು ಬಂದಾಗ ಮಹಾರಿಯರಿಗೆ ರಾಜಾಶ್ರಯ ನೀಡುವುದು ಹೇಗೆ? ಹೇಗಾದರೂ ಜೀವನ ನಡೆಸಬೇಕಾದ ಪರಿಸ್ಥಿತಿ ಮತು ್ತಅಸಹಾಯಕತೆಯನ್ನು ಸ್ವಹಿತಕ್ಕೆ ಬಳಸಿಕೊಳ್ಳುವ ಸಮಾಜದ ಗಣ್ಯ ಒತ್ತಡದಿಂದ ಮಹಾರಿಗಳಲ್ಲಿ ಹಲವರು ಉಪಪತ್ನಿ, ಗಣಿಕೆಯರಾದರು. ಇದರಿಂದಾಗಿ ಸಮಾಜದಲ್ಲಿ ಅವರ ಪ್ರತಿಷ್ಠೆ -ಗೌರವಕ್ಕೆ ಕುಂದುಂಟಾಯಿತು. ಗೌರವಸ್ಥ ಮನೆಯ ಹುಡುಗಿಯರು ಮಹಾರಿಗಳಾಗಲು ಆರ್ಥಿಕ, ಸಾಮಾಜಿಕ ಕಾರಣಗಳಿಗಾಗಿ ಹಿಂಜರಿದರು. ಮಹಾರಿಯರ ಸಂಖ್ಯೆ ಕಡಿಮೆಯಾಯಿತು, ಆದರೆ ದೇವರಿಗೆ ನೃತ್ಯ ಸೇವೆ ನಡೆಸುವುದು ಬಿಡುವಂತಿಲ್ಲ. ಆಗ ಶುರುವಾಗಿದ್ದು ಬಡ ಕುಟುಂಬಗಳ ಹುಡುಗರನ್ನು ಈ ರೀತಿ ಸೇವೆಗೆ ಬಳಸಿಕೊಳ್ಳುವ ರೀತಿ.

• ಮುಸ್ಲಿಮರ ಆಳ್ವಿಕೆಯ ಕಾಲದಲ್ಲಿ ಪರ್ದಾ ಪದ್ಧತಿಯಿತ್ತು. ಇದರಿಂದಾಗಿ ಗೌರವಸ್ಥ ಕುಟುಂಬದ ಹುಡುಗಿಯರು ಸಾರ್ವಜನಿಕವಾಗಿ ನರ್ತಿಸುವುದು ವಿರುದ್ಧವಾಗಿತ್ತು. ಆದರೂ ಧಾರ್ಮಿಕವಾಗಿ ಜಗನ್ನಾಥನ ಸೇವೆ ಸಲ್ಲಿಸುವುದg Àಜತೆ ಸಾಮಾಜಿಕ ಸಂದರ್ಭಗಳಲ್ಲಿ ಮುಸ್ಲಿಮ್ ದೊರೆ ಮತ್ತು ಸುಬೇದಾರ್‍ಗಳ ಮನರಂಜನೆಗಾಗಿ ಈ ರೀತಿ ಹುಡುಗಿಯರ ವೇಷಧಾರಿ ಹುಡುಗರ ನೃತ್ಯ ಪ್ರಸ್ತುತಪಡಿಸುವುದನ್ನು ಜಾರಿಗೆ ತರಲಾಯಿತು.

• ಭಕ್ತಿಪಂಥದ ಪ್ರಮುಖರಾದ ಚೈತನ್ಯ ಮಹಾಪ್ರಭು, ಜಗನ್ನಾಥನ ರಥಯಾತ್ರಾದ ಸಂದರ್ಭದಲ್ಲಿ ಗುಂಪು ಗುಂಪಾಗಿ ನರ್ತನ ಸೇವೆ ಮಹಾರಿಗಳಿಂದ ಸಲ್ಲಲಿ ಎಂಬ ಆಶಯ ವ್ಯಕ್ತಪಡಿಸಿದ್ದರು. ಆದರೆ ದೇಗುಲದ ಅರ್ಚಕರು ಮಾಸಿಕ ಋತುಸ್ರಾವ ಇಡೀ ಆಚರಣೆಯನ್ನು ಅಪವಿತ್ರಗೊಳಿಸುತ್ತದೆ ಎಂಬ ಕಾರಣ ನೀಡಿ ಅದನ್ನು ತಿರಸ್ಕರಿಸಿದರು. ಆಗ ಆರಂಭವಾಗಿದ್ದು ಈ ಗೊತಿಪುವಾ ನೃತ್ಯ.

ಗೊತಿ-ಒಬ್ಬ ಪುವಾ -ಹುಡುಗ ಎಂದಾದರೂ ಇದು ಸಮೂಹ ನೃತ್ಯ.ಐದು ವರ್ಷದವರಿದ್ದಾಗಲೇ ಬಾಲಕರಿಗೆ ತರಬೇತಿ ನೀಡಲಾಗುತ್ತದೆ. ದೃಷ್ಟಿ ಭೇದ (ಕಣ್ಣಿನ ಚಲನೆ), ಶಿರೋಭೇದ (ತಲೆಯ ಚಲನೆ), ಮುದ್ರೆ (ಹಸ್ತ) ಭಂಗಿ (ದೇಹದ ಸ್ಥಾನಗಳು) ಮತ್ತು ಸಂಗೀತದಲ್ಲಿ ಸತತ ಅಭ್ಯಾಸ ನಡೆಸುತ್ತಾರೆ. ಗೊತಿಪುವಾ ನೃತ್ಯದಲ್ಲಿ ಹಾಡುಗಳನ್ನು ಹಾಡುತ್ತಾ ನೃತ್ಯ ಮಾಡುವುದು ವಿಶೇಷ. ಭಂಗಿಗಳಲ್ಲಿ ತ್ರಿಭಂಗಿ (ತಲೆ-ನಡು-ಮಂಡಿಗಳ ಬಾಗುವಿಕೆ) ಮತ್ತು ಚೌಕ (ಚೌಕವಾಗಿ ಜಗನ್ನಾಥನನ್ನು ಪ್ರತಿನಿಧಿಸುವ ಭಂಗಿ) ಮುಖ್ಯವಾದುದು. ನೃತ್ಯಕಾರ್ಯಕ್ರಮದಲ್ಲಿ ನಾಲ್ಕು ಮುಖ್ಯ ಭಾಗಗಳು:

o ವಂದನಾ (ಜಗನ್ನಾಥ, ಭೂಮಿ, ಗುರು ಮತ್ತು ಸಭಿಕರಿಗೆ ವಂದನೆ)
o ಸರಿಗಮಾ (ಅಂಗಾಂಗಗಳ ಚಲನೆ)
o ಅಭಿನಯ (ಗೀತಗೋವಿಂದದ ಅಭಿನಯ)
o ಬಂಧನೃತ್ಯ (ಕಸರತ್ತು, ಗೋಪುರಗಳ ರಚನೆ)

ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಆರಂಭವಾಗಿ ಈ ನೃತ್ಯಕಲೆಗೆ ರಾಜಾಶ್ರಯ ತಪ್ಪಿತು. ದೇವಸ್ಥಾನಗಳಲ್ಲಿ ಸೇವೆ ನಡೆದರೂ ಹೊಟ್ಟೆಪಾಡಿಗಾಗಿ ಈ ನೃತ್ಯಗಾರರು ಸಾರ್ವಜನಿಕ ಪ್ರದರ್ಶನ ನೀಡಲು ಆರಂಭಿಸಿದರು. ಆಗ ಮನರಂಜನೆ ನೀಡಲು, ಜನರನ್ನು ಆಕರ್ಷಿಸಲು ಈ ಬಂಧನೃತ್ಯವನ್ನು ಅಳವಡಿಸಲಾಯಿತು ಎನ್ನಲಾಗುತ್ತದೆ. ಇದರಲ್ಲಿ ಪದ್ಮಾಸನ, ಹಂಸ, ಮಯೂರ, ಗರುಡ, ನೌಕಾ ಹೀಗೆ ವಿವಿಧ ಸಮೂಹ ಕ್ಲಿಷ್ಟ ಭಂಗಿಗಳನ್ನು ಪ್ರದರ್ಶಿಸಲಾಗುತ್ತದೆ.

ಗೊತಿಪುವಾ ಕಲಾವಿದರು ಕೂದಲನ್ನು ಕತ್ತರಿಸದೇ ಬೆಳೆಸುತ್ತಾರೆ. ಪ್ರದರ್ಶನ ನೀಡುವಾಗ ಇದನ್ನು ಬಾಚಿ ಗಂಟು ಹಾಕಿ ಹೂವು ಮುಡಿಯುತ್ತಾರೆ. ಕೆಂಪು-ಬಿಳಿ ಪುಡಿಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚುತ್ತಾರೆ. ಕಣ್ಣಿಗೆ ಕಾಡಿಗೆ, ಹಣೆಗೆ ಕೆಂಪು ಬಿಂದಿ, ಕೈ-ಕಾಲಿಗೆ ಅಲ್ತಾ ಎಂಬ ಕೆಂಪು ಬಣ್ಣ ಬಳಸುತ್ತಾರೆ. ಕಂಚುಲಾ ಎಂಬ ರವಿಕೆ, ಪಟ್ಟಸಿರಿ ಎಂಬ ಸೀರೆ ಉಟ್ಟು, ಸೊಂಟದ ಸುತ್ತ ದಾವಣಿಯ ಥರದ ನಿಬಿಬಂಧ ಎಂಬ ರೇಷ್ಮೆ ವಸ್ತ್ರ ಧರಿಸುತ್ತಾರೆ. ಬಟ್ಟೆಯ ಜತೆ ಇವರು ಹಾಕುವ ಮಣಿಗಳಿಂದ ಮಾಡಿದ ಸರ, ಕಡಗ, ಬಳೆ, ಓಲೆ ಎಲ್ಲವೂ ಪವಿತ್ರ ಎಂದು ಪರಿಗಣಿಸುತ್ತಾರೆ. ಈ ಬಾಲಕರು ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಗೊತಿಪುವಾ ಮಾಡುವಂತಿಲ್ಲ. ಒಡಿಸ್ಸಿ ನೃತ್ಯದಲ್ಲಿಇ ದರ ಪ್ರಭಾವ ಬಹಳಷ್ಟಿದೆ ಎನ್ನಲಾಗುತ್ತದೆ. ಒಡಿಸ್ಸಿಯ ಪ್ರಖ್ಯಾತ ಗುರು ಕೇಳುಚರಣ್ ಮಹಾಪಾತ್ರ ಬಾಲ್ಯದಲ್ಲಿ ಗೊತಿಪುವಾ ನರ್ತಕರಾಗಿದ್ದರು! ರಾಧಾತಾನು ಎಂಬ ಸಖೀಭಾವ ಅವರ ಅಭಿನಯದಲ್ಲಿ ಅದ್ಭುತವಾಗಿ ಮೂಡಿಬರಲು ಗೊತಿಪುವಾ ನೃತ್ಯದ ಹಿನ್ನೆಲೆಯೇ ಕಾರಣ ಎನ್ನಲಾಗುತ್ತದೆ.

ಮಹಾರಿ ನೃತ್ಯ, ಕಳಂಕವನ್ನು ಹೊತ್ತು ಅವಸಾನದ ಅಂಚಿನಲ್ಲಿದೆ. ಗೊತಿಪುವಾ ಎಂಬ ವಿಶಿಷ್ಟ ನೃತ್ಯವನ್ನು ಉಳಿಸಲು, ಕಲಾವಿದರನ್ನು ಬೆಳೆಸಲು ಸರ್ಕಾರ ಮತ್ತು ಕಲಾಭಿಮಾನಿಗಳು ಸಾಕಷ್ಟು ಶ್ರಮಿಸುತ್ತಿದ್ದಾರೆ. ಇವೆರಡರ ಸಾಮ್ಯತೆ ಹೊಂದಿದ ಒಡಿಸ್ಸಿ ನೃತ್ಯ ಶಾಸ್ರ್ತೀಯ ಶೈಲಿಯಾಗಿ ಮಾನ್ಯತೆ ಪಡೆದಿದೆ ಎಂಬುದುಖುಷಿಯ ವಿಷಯ. ಹೀಗೆ ದೇವರ ಹೆಸರಿನಲ್ಲಿ ಬಹುಮಾನ್ಯವಾಗಿದ್ದ ವಿಶಿಷ್ಟ ಕಲೆ ಮತ್ತು ಕಲಾವಿದರು, ಕಾಲಕ್ರಮೇಣ ಹೇಗೆ ಅವನತಿ ಹೊಂದಬಹುದು ಎಂಬುದಕ್ಕೆ ಮಹಾರಿಗಳು ಅತ್ಯುತ್ತಮ ನಿದರ್ಶನ. ಭಕ್ತಿಯಿಂದ ಮೈದುಂಬಿ `ಜಯ ಜಗದೀಶ ಹರೇ’ ಎಂದು ರಾಧೆಯರಾಗಿ ನರ್ತಿಸುವ ಕಲಾವಿದರನ್ನು ಕಂಡಾಗ ಭಕ್ತಿ- ಬೆರಗು ಮೂಡುತ್ತದೆ. ಹಾಗೆಯೇ ಸಂಪ್ರದಾಯದ ಹೆಸರಿನಲ್ಲಿ ಸೇರಿಸಲಾದ ದೌರ್ಜನ್ಯ -ಶೋಷಣೆಯನ್ನು ತೊಡೆದು ಮಹಾರಿ ನೃತ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಹೋದದ್ದು ಕಲಾರಂಗಕ್ಕಾದ ನಷ್ಟವೇ ಅನ್ನಿಸುತ್ತದೆ.

ಡಾ. ಕೆ.ಎಸ್.ಚೈತ್ರಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *