ಲೋಕದ ಕಣ್ಣು/ ಕಾಶ್ಮೀರದ ರಾಣಿ ದಿದ್ದಾ!- ಡಾ.ಕೆ.ಎಸ್. ಚೈತ್ರಾ

ಕಾಶ್ಮೀರದ ಇತಿಹಾಸದಲ್ಲಿ ದಿದ್ದಾ ರಾಣಿಯ ಹೆಸರು ಅನನ್ಯ ರೀತಿಯಲ್ಲಿ ಹೆಣೆದುಕೊಂಡಿದೆ. ಪಟ್ಟದರಾಣಿಯಾಗಿ, ನಂತರ ರಾಜಮಾತೆಯಾಗಿ ಅವಳು ಸುಮಾರು ನಾಲ್ಕು ದಶಕಗಳ ಕಾಲ ಆಡಳಿತ ನಡೆಸಿರುವುದು ಬಹಳ ವಿಶೇಷ. ಅಂದಿನ ಕಾಲದ ನಾಣ್ಯಗಳ ಮೇಲೆ ರಾಜನ ಜೊತೆ ದಿದ್ದಾಳ ಹೆಸರು ಕೂಡ ಇರುವುದು ಅವಳ ಪ್ರಾಬಲ್ಯ ಮತ್ತು ಯೋಗ್ಯತೆಯನ್ನು ಸಾರುತ್ತದೆ. ಪತಿ ತೀರಿಕೊಂಡಾಗ ಅವನೊಂದಿಗೆ ಸಹಗಮನ ಮಾಡಲು ನಿರಾಕರಿಸಿದ್ದು ಅವಳ ದಿಟ್ಟತನಕ್ಕೆ ಸಾಕ್ಷಿಯಾಗಿದೆ.

ಹಿಮಹಾಸಿದ ಗಿರಿ ಪರ್ವತಗಳು, ಗುಂಪುಗುಂಪಾಗಿ ಉದ್ದುದ್ದ ಬೆಳೆದು ನಿಂತ ಚಿನಾರ್ ವೃಕ್ಷಗಳು, ನಯನ ಮನೋಹರ ಸರೋವರಗಳು, ಕಣ್ಣು ಹಾಯಿಸುವಷ್ಟು ದೂರ ಹಬ್ಬಿರುವ ಹಸಿರು ಹುಲ್ಲುಗಾವಲುಗಳು ಇವನ್ನೆಲ್ಲಾ ನೋಡುತ್ತಾ ಭೂಮಿಯ ಮೇಲಿನ ಸ್ವರ್ಗ ಅನ್ನಿಸಿದ್ದು ನಿಜ. ಅದು ಕಾಶ್ಮೀರ! ಇಲ್ಲಿಯ ಜನರೂ ಅಷ್ಟೇ ಚೆಂದ; ಸೇಬಿನಷ್ಟು ಕೆಂಪು ಕೆನ್ನೆ, ನೀಳ ಮೂಗು, ಎತ್ತರದ ನಿಲುವು. ನಗು ಮಾತ್ರ ಸ್ವಲ್ಪ ಕಡಿಮೆಯೇ…. ಕೊರೆವ ಚಳಿಗೆ ಮೈತುಂಬಾ ಬಟ್ಟೆ ಧರಿಸಿದ್ದ, ಅಲ್ಲಲ್ಲಿ ಕಾಣುತ್ತಿದ್ದ ಮಹಿಳೆಯರ ಮುಖದಲ್ಲೂ ಏನೋ ದುಗುಡ. ನಮ್ಮ ಜತೆಗಿದ್ದ ಅಮಾರ್ ‘ನಾವು ಸದಾ ಏನಾಗುತ್ತೋ ಎಂಬ ಆತಂಕದಲ್ಲಿಯೇ ಬದುಕುತ್ತೇವೆ; ಅದಕ್ಕೇ ಹೀಗೆ . ಈಗಲ್ಲ, ಭಾರತದ ಮುಕುಟ ಮಣಿ ಎನಿಸಿಕೊಂಡ ನಮ್ಮ ಕಾಶ್ಮೀರದಲ್ಲಿ ಯಾವಾಗಲೂ ಒಳಗೆ-ಹೊರಗೆ ಗಲಾಟೆ ಇದ್ದದ್ದೇ. ಆದರೆ ಇಂಥ ರಾಜ್ಯವನ್ನು ರಾಣಿಯೊಬ್ಬಳು ನಲವತ್ತು ವರ್ಷಗಳಿಗೂ ಹೆಚ್ಚುಕಾಲ ಆಳಿದ್ದು ಆಶ್ಚರ್ಯವಲ್ಲವೇ?’ ಎಂದ. ಆತ ಹೇಳಿದ್ದು ರಾಣಿ ಡಿದ್ದಾಳ ಬಗ್ಗೆ! ದಾಲ್ ಸರೋವರದಲ್ಲಿ ದೋಣಿಯಲ್ಲಿ ಕುಳಿತು ಆಕೆಯ ಕಥೆ ಕೇಳಿದೆವು.

ಕ್ರಿ.ಶ 924ರಲ್ಲಿ ಹುಟ್ಟಿ ಎಪ್ಪತೊಂಬತ್ತು ವರ್ಷಗಳ ಕಾಲ ಬದುಕಿ, ರಾಣಿಯಾಗಿ ಮತ್ತು ರಾಜಮಾತೆಯಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅಧಿಕಾರ ನಡೆಸಿದ ಕೀರ್ತಿ ರಾಣಿ ದಿದ್ದಾಳದ್ದು! ಆದರೆÉ ಮಾಟಗಾತಿ ರಾಣಿ ಎಂಬ ಬಿರುದು ಆಕೆಗೆ ಸಿಕ್ಕಿದ್ದ್ದಾದ್ದರೂ ಹೇಗೆ ಎಂಬುದು ಕುತೂಹಲಕಾರಿ ವಿಷಯ. ಕಾಶ್ಮೀರದ ಇತಿಹಾಸವನ್ನು ಗಮನಿಸಿದಾಗ ರಾಣಿಯರ ಆಳ್ವಿಕೆ ಹೊಸದಲ್ಲ. ಹನ್ನೆರಡನೆಯ ಶತಮಾನದಲ್ಲಿ ಕವಿ ಕಲ್ಹಣ ರಚಿಸಿದ ರಾಜತರಂಗಿಣಿಯಲ್ಲಿ ಕಾಶ್ಮೀರವನ್ನಾಳಿದ ರಾಜವಂಶಗಳು, ಯುದ್ಧ, ಮೋಸದಾಟ ಎಲ್ಲದರ ಸಂಪೂರ್ಣ ವಿವರಗಳಿವೆ. ಇದರಲ್ಲಿ ಕಲ್ಹಣ ಕಾಶ್ಮೀರವನ್ನಾಳಿದ ರಾಣಿಯರಾದ ಯಶೋಮತಿ (ಪೌರಾಣಿಕ ಪಾತ್ರ) ಸುಗಂಧಾದೇವಿ ಮತ್ತು ದಿದ್ದಾಳ ಬಗ್ಗೆ ದಾಖಲಿಸಿದ್ದಾನೆ. ಇದರಿಂದಾಗಿ ಆಕೆಯ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ.

ಮಮತೆ ಕಾಣದ ಮಗಳು

ಪೀರ್‍ಪಂಜಾರ್ ಪರ್ವತಶ್ರೇಣಿಗಳ ನಡುವೆ ಕಾಶ್ಮೀರ ಮತ್ತು ಪಂಜಾಬಿನ ನಡುವೆ ಇದ್ದ ರಾಜ್ಯ ಲೋಹಾರಾ. ಅಲ್ಲಿನ ದೊರೆ ಸಿಂಹರಾಜನ ಮಗಳು ದಿದ್ದಾ. ರೂಪವತಿಯಾಗಿದ್ದರೂ ಹುಟ್ಟುವಾಗಲೇ ಕಾಲಿನಲ್ಲಿ ದೋಷವಿದ್ದು ಚಲನೆ ಸರಿಯಿಲ್ಲದ ಕಾರಣ ಆಕೆಯನ್ನು ಕುಂಟಿ ಎಂಬ ಅಡ್ಡಹೆಸರಿನಿಂದ ಗುರುತಿಸುತ್ತಿದ್ದರು. (ಕಲ್ಹಣ ಆಕೆಯನ್ನು ಚರಣಹೀನ ಎಂದು ವರ್ಣಿಸಿದ್ದಾನೆ). ಆಕೆಯನ್ನು ಹೊತ್ತು ಓಡಾಡಲು ವಾಲ್ಗಾ ಎಂಬ ದೂತೆಯಿದ್ದಳು. ಆಕೆಯನ್ನು ಕಂಡರೆ ದಿದ್ದಾಳಿಗೆ ಪ್ರೀತಿಯಿತ್ತು. ಆಕೆಯ ಸಲುವಾಗಿ ಕಾಶ್ಮೀರದಲ್ಲಿ ವಾಲ್ಗಾಮಠ ಕಟ್ಟಿಸಿದ್ದಳು ಎನ್ನಲಾಗುತ್ತದೆ. ದೊರೆಗೆ, ದೈಹಿಕ ದೋಷವಿದ್ದ ಮಗಳನ್ನು ಕಂಡರೆ ಅಸಹನೆ. ಪ್ರಾಚೀನ ಕಾಶ್ಮೀರದಲ್ಲಿ ಮಹಿಳೆಯರ ಸ್ಥಾನಮಾನ ಉತ್ತಮವಾಗಿದ್ದು ಆಡಳಿತದಲ್ಲಿ ಸಕ್ರಿಯರಾಗಿದ್ದರು. ಆದರೆ ಬುದ್ಧಿವಂತೆಯಾಗಿದ್ದು ರಾಜನ ಹಿರಿಯ ಮಗಳಾಗಿದ್ದರೂ ದಿದ್ದಾಳನ್ನು ಪಟ್ಟ ಯೋಗ್ಯ ಎಂದು ತಂದೆ ಪರಿಗಣಿಸಲೇ ಇಲ್ಲ. ಅಧಿಕಾರ ದೂರದ ಮಾತು, ತಂದೆಯ ಪ್ರೀತಿಯೂ ಸಿಗದೆ ನೊಂದ ಜೀವವದು.

ಮಗಳ ಬಗ್ಗೆ ಪ್ರೀತಿ-ಆಸಕ್ತಿ ಇಲ್ಲದ ತಂದೆ, ದೈಹಿಕ ದೋಷ ಎರಡೂ ಸೇರಿ ದಿದ್ದಾಳ ಮದುವೆ ನಡೆದಿದ್ದು ತಡವಾಗಿ ಅಂದರೆ ಇಪ್ಪತ್ತಾರನೆಯ ವಯಸ್ಸಿನಲ್ಲಿ. ಬಹುಶಃ ರಾಜಕೀಯ ಸಂಬಂಧಗಳನ್ನು ಬಲಪಡಿಸುವ ಸಲುವಾಗಿ ದಿದ್ದಾಳ ಮದುವೆ ನಡೆಯಿತು ಎಂದು ಊಹಿಸಲಾಗುತ್ತದೆ. ಝೇಲಂ ನದಿಯ ತೀರದಲ್ಲಿದ್ದ ಕಾಶ್ಮೀರದಲ್ಲಿ ದಮಾರಾಸ್, ಜಮೀನ್ದಾರರು, ಸೈನಿಕರು ಹೀಗೆ ಅಲ್ಲಲ್ಲಿ ದಂಗೆಗಳಾಗುತ್ತಿದ್ದವು. ಪ್ರಜೆಗಳು ಸರಿಯಾದ ರಾಜನೇ ಇಲ್ಲದೆ ಅಧಿಕಾರಿಗಳ ಕೈಗೆ ಸಿಕ್ಕಿ ನರಳುತ್ತಿದ್ದರು. ಮಂತ್ರಿಗಳಲ್ಲಿ ಪ್ರಬಲನಾಗಿದ್ದ ಪರ್ವಗುಪ್ತ ಎಲ್ಲರನ್ನೂ ಸೋಲಿಸಿ ರಾಜನೆಂದು ಘೋಷಿಸಿಕೊಂಡ. ಹೀಗೆ ಕಾಶ್ಮೀರದ ಸಿಂಹಾಸನವನ್ನೇರಿದ್ದ ಮಹತ್ವಾಕಾಂಕ್ಷಿ ಅರಸ ಪರ್ವಗುಪ್ತನ ಮಗ, ಕ್ಷೇಮಗುಪ್ತ ದಿದ್ದಾಳ ಪತಿಯಾದ. ತನ್ನ ರಾಜ್ಯಕ್ಕೆ ಬೆಂಬಲ ಮತ್ತು ಭದ್ರತೆ ಸಿಗಲಿ ದೃಷ್ಟಿಯಿಂದ ಕಾಶ್ಮೀರದ ದೊರೆ ಒಪ್ಪಿಕೊಂಡ ಮದುವೆಯಿದು. ಮದುವೆಯಾದ ಕೆಲವೇ ದಿನಗಳಲ್ಲಿ ತಂದೆಯ ಮರಣದ ನಂತರ ಕ್ಷೇಮಗುಪ್ತ ಪಟ್ಟಕ್ಕೇರಿದ. ಆದರವನು ಆಡಳಿತ ನಡೆಸಲು ಸಮರ್ಥನಿರಲಿಲ್ಲ. ಬೇಟೆ, ಕುಡಿತ, ಜೂಜು ಇವಿಷ್ಟೇ ಆತನ ಆಸಕ್ತಿಯ ವಿಷಯಗಳು. ರಾಜ ಹೀಗಾದರೆ ರಾಜ್ಯದ ಕತೆಯೇನು? ಕುಶಾಗ್ರಮತಿಯಾಗಿದ್ದ ದಿದ್ದಾ ಪತಿಯ ಗೌರವದ ಜತೆ ರಾಜ್ಯವನ್ನು ರಕ್ಷಿಸಲು ಆಡಳಿತಸೂತ್ರವನ್ನು ತನ್ನ ಕೈಗೆ ತೆಗೆದುಕೊಂಡಳು.

ದಿದ್ದಾ-ಕ್ಷೇಮ

ಕಲ್ಹಣನ ಪ್ರಕಾರ ದಿದ್ದಾ, ಪತಿಯನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿ ಇಟ್ಟಿದ್ದಳು. ಎಷ್ಟರ ಮಟ್ಟಿಗೆಂದರೆ ಹೆಂಡತಿಗೆ ಹೆದರುವ ಗಂಡ ಎನ್ನುವುದನ್ನು “ದಿದ್ದ-ಕ್ಷೇಮ” ಎಂಬ ಶಬ್ದದ ಮೂಲಕ ಹೇಳಲಾಗುತ್ತಿತ್ತು. ಆಕೆಯ ಪ್ರಭಾವ-ಪ್ರಾಬಲ್ಯ ಎಷ್ಟಿತ್ತೆಂದರೆ ಆ ಕಾಲದಲ್ಲಿ ಟಂಕಿಸಲಾದ ನಾಣ್ಯಗಳಲ್ಲಿ ದಿದ್ದ-ಕ್ಷೇಮಗುಪ್ತ (ದಿ-ಕ್ಷೇಮ) ಎಂಬ ಇಬ್ಬರ ಹೆಸರನ್ನು ಒಳಗೊಂಡ ಮುದ್ರೆಯನ್ನು ಕಾಣಬಹುದು. (ಆಗ ಟಂಕಿಸಿದ್ದ ನಾಣ್ಯಗಳು ಈಗಲೂ ಲಭ್ಯವಿದ್ದು ನಾಣ್ಯಪ್ರಿಯರ ಪಾಲಿಗೆ ಅಮೂಲ್ಯವೆನಿಸಿವೆ. ನಾಣ್ಯಗಳಲ್ಲಿ ಲಲಿತಾಸನದಲ್ಲಿ ಕುಳಿತ ದೇವಿಲಕ್ಷ್ಮಿ ಬಲಗೈಯಲ್ಲಿ ಮುಕುಟ ಎಡಗೈಯಲ್ಲಿ ಕಮಲವನ್ನು ಹಿಡಿದಿದ್ದಾಳೆ. ಶಾರದಾ ಲಿಪಿಯಲ್ಲಿ ಶ್ರೀ ಮತ್ತು ದಿದ್ದ ಎಂದು ಬರೆಯಲಾಗಿದೆ. ನಾಣ್ಯದ ಇನ್ನೊಂದು ಬದಿಯಲ್ಲಿ ರಾಜನು ನಿಂತಿರುವ ಚಿತ್ರವಿದ್ದು ‘ದೆ’ ಎಂದು ಬರೆಯಲಾಗಿದೆ. ಚಿನ್ನ, ಬೆಳ್ಳಿ ಸೇರಿದ್ದ/ ತಾಮ್ರದಿಂದ ಮಾಡಿದ್ದ ಲೋಹದ ದೊಡ್ಡ ನಾಣ್ಯಗಳು ಇವಾಗಿವೆ.) ರಾಜನಾಗಲೀ, ಸಾಮಾನ್ಯ ಮನುಷ್ಯನಾಗಲೀ ಯಜಮಾನ ಪತಿಯೇ ಹೊರತು ಮಹಿಳೆಯಾದರೆ ಸಮಾಜ ಸಹಿಸುವುದು ಸುಲಭವೇ? ಬಹಳಷ್ಟು ಜನರ ಕೆಂಗಣ್ಣಿಗೆ ದಿದ್ದಾ ಗುರಿಯಾದಳು. ಅದರಲ್ಲಿ ಕ್ಷೇಮಗುಪ್ತನ ಪ್ರಧಾನ ಮಂತ್ರಿ ಫಲ್ಗುಣನೂ ಸೇರಿದ್ದ. (ಈತನ ಮಗಳು ಚಂದ್ರಲೇಖ ದೊರೆಯ ಎರಡನೇ ಪತ್ನಿಯಾಗಿದ್ದಳು. ಹೀಗಾಗಿ ಮಗಳ ಭವಿಷ್ಯದ ಯೋಚನೆಯೂ ಸೇರಿತ್ತು).ಈ ಎಲ್ಲಾ ವಿರೋಧದ ನಡುವೆ ರಾಜ್ಯವನ್ನು ಸಮರ್ಥವಾಗಿಯೇ ನಡೆಸುತ್ತಿದ್ದ ದಿದ್ದಾಳಿಗೆ ಮಗ ಜನಿಸಿದ. ಅಭಿಮನ್ಯು ಎಂದು ಅವನಿಗೆ ಹೆಸರಿಡಲಾಯಿತು. ದಿದ್ದಾಳ ಅಜ್ಜ ಭೀಮ ಶಾಹಿ ತಮ್ಮ ಮೊಮ್ಮಗನನ್ನು ಕಾಣಲು ಕಾಶ್ಮೀರಕ್ಕೆ ಆಗಮಿಸಿದ. ಆಗ ಮಾರ್ತಾಂಡದಲ್ಲಿ ಕಟ್ಟಿಸಿದ್ದು ಭೀಮಕೇಶವ ದೇವಸ್ಥಾನ.

ಸತಿಯಾಗಲು ನಿರಾಕರಣ

958 ರಲ್ಲಿ ಬೇಟೆಗೆ ಹೋಗಿದ್ದ ಕ್ಷೇಮಗುಪ್ತ ತೀವ್ರವಾದ ಜ್ವರಕ್ಕೆ ತುತ್ತಾದ. ಚಿಕಿತ್ಸೆ ಫಲಕಾರಿಯಾಗದೇ ವರಾಹಮೂಲ (ಬಾರಾಮುಲ್ಲಾ) ಎಂಬಲ್ಲಿ ನಿಧನನಾದ. ಈ ಸುದ್ದಿ ತಿಳಿಯುತ್ತಿದ್ದಂತೆ ದಿದ್ದಾ ತನ್ನ ಮಗನನ್ನು ರಹಸ್ಯ ಸ್ಥಾನಕ್ಕೆ ಕಳಿಸಿದಳು. ರಾಜನಿಲ್ಲದೇ ರಾಜ್ಯ ಮಾತ್ರವಲ್ಲ ರಾಣಿ ಮತ್ತು ಯುವರಾಜನಿಗೂ ಅಪಾಯವಿತ್ತು. ರಾಜನ ಅಂತ್ಯಕ್ರಿಯೆಯ ವೇಳೆ ಸಭಾಸದರು ನೆರೆದಿದ್ದರು. ಅಂದಿನ ಪದ್ಧತಿಯಂತೆ ಕ್ಷೇಮಗುಪ್ತನ ರಾಣಿಯರೆಲ್ಲಾ ಸತಿ ಪದ್ಧತಿಗೆ ಸಿದ್ಧರಾದರು. ಪಟ್ಟದ ರಾಣಿ ದಿದ್ದಾಳೂ ಹಾಗೆ ಸತಿಯಾಗಬೇಕೆಂಬ ಅಪೇಕ್ಷೆ ಮಾತ್ರವಲ್ಲ ಒತ್ತಡ ಎಲ್ಲರದ್ದು! ಧೈರ್ಯವಾಗಿ ಅದನ್ನು ನಿರಾಕರಿಸಿದ ದಿದ್ದಾ ತನ್ನ ಮಗನ ರಕ್ಷಣೆಗಾಗಿ ತಾನು ಬದುಕಬೇಕು ಎಂಬ ವಾದ ಮುಂದಿಟ್ಟಳು. ಅರೆ ಮನಸ್ಸಿನಿಂದಲೇ ಎಲ್ಲರೂ ಒಪ್ಪಿದರು. ಅಂತೂ ಅಭಿಮನ್ಯುವಿಗೆ ಪಟ್ಟ ಕಟ್ಟಲಾಯಿತು; ದಿದ್ದಾ ರಾಜಮಾತೆಯಾದಳು; ಅಧಿಕಾರ ನಿರ್ವಹಿಸಿದಳು! ಆದರದು ಬಹಳ ಕಠಿಣ ಹಾದಿಯಾಗಿತ್ತು. ಮೊದಲಿನಿಂದಲೂ ಪ್ರಮುಖ ಸ್ಥಾನಗಳಲ್ಲಿದ್ದು ದುರಾಡಳಿತ ನಡೆಸುತ್ತಿದ್ದ ಮಂತ್ರಿಗಳು- ಗಣ್ಯರನ್ನು ಅಧಿಕಾರದಿಂದ ತೆಗೆದಳು. ಅಧಿಕಾರದ ರುಚಿ ಕಂಡವರು ಸುಮ್ಮನಿರುವರೇ? ರಾಜಮಾತೆ ವಿರುದ್ಧ ದಂಗೆ ಎದ್ದರು. ಪದಚ್ಯುತಳಾಗುವ ಭೀತಿಯಲ್ಲಿದ್ದಾಗ ದಿದ್ದಾ ಸಾಮ, ದಾನ, ದಂಡ, ಭೇದ ಹೀಗೆ ನಾನಾ ತಂತ್ರ ಬಳಸಿ ಅವರನ್ನು ಹತ್ತಿಕ್ಕಿದಳು. ತನಗೆ ವಿರೋಧ ವ್ಯಕ್ತಪಡಿಸಿದವರನ್ನು ಮಾತ್ರವಲ್ಲ ಅವರ ಕುಟುಂಬ ವರ್ಗದವರನ್ನೂ ನಿರ್ದಯಳಾಗಿ ಕೊಲ್ಲಿಸಿದಳು.

ದಿದ್ದಾ ದುರಾದೃಷ್ಟಕ್ಕೆ ಮಗ ಅಭಿಮನ್ಯು ಕ್ರಿ.ಶ 972 ರಲ್ಲಿ ಮರಣ ಹೊಂದಿದ. ಆತನ ಮಗ, ನಂದಿಗುಪ್ತನನ್ನು ಪಟ್ಟಕ್ಕೇರಿಸಿ ಮತ್ತೆ ದಿದ್ದಾ ತಾನೇ ಅಧಿಕಾರ ನಡೆಸಬೇಕಾಯಿತು. ಮಗನನ್ನು ಕಳೆದುಕೊಂಡ ದುಃಖ ಮರೆಯಲು ಆತನ ನೆನಪನ್ನು ಶಾಶ್ವತವಾಗಿರಿಸಲು ಹಲವು ದೇಗುಲಗಳನ್ನು ಒಂದು ವರ್ಷದಲ್ಲಿ ಕಟ್ಟಿಸಿದಳು. ಅವುಗಳಲ್ಲಿ ಅಭಿಮನ್ಯು ನಗರದ ( ಈಗಿನ ಬಿಮ್ಯಾನ್) ಅಭಿಮನ್ಯು ಸ್ವಾಮಿನ್ ದೇಗುಲ ಮುಖ್ಯವಾದುದು. ಆಕೆ ಶ್ರೀನಗರದಲ್ಲಿ ಕಟ್ಟಿಸಿದ್ದ ದಿದ್ದ ಮಠ ಈಗ ನಾಶವಾಗಿದೆ. ಆದರೂ ಆ ಪ್ರದೇಶವನ್ನು ದಿದ್ದಾಮರ್‍ ಎಂದು ಗುರುತಿಸಲಾಗುತ್ತದೆ. ನಂದಿಗುಪ್ತನೂ ವರ್ಷವಾಗುವಷ್ಟರಲ್ಲಿ ತೀರಿಕೊಂಡ. ನಂತರ ಪಟ್ಟಕ್ಕೇರಿದ ತ್ರಿಭುವನ ಗುಪ್ತನೂ ಅಲ್ಪಕಾಲದಲ್ಲೇ ಸಾವನ್ನಪ್ಪಿದ. ಕ್ರಿ.ಶ 975 ರಲ್ಲಿ ಮೂರನೇ ಮೊಮ್ಮಗ ಭೀಮಗುಪ್ತ ಪಟ್ಟಾಭಿಷಿಕ್ತನಾದ. ಈ ಸಂದರ್ಭದಲ್ಲಿ ಆಕೆಯ ಪ್ರಧಾನಮಂತ್ರಿ ಫಲ್ಗುಣ ಮರಣ ಹೊಂದಿದ್ದು ಆಕೆಗೆ ದೊಡ್ಡ ಪೆಟ್ಟಾಯಿತು. (ಕ್ಷೇಮಗುಪ್ತನ ಮಂತ್ರಿಯಾಗಿದ್ದ ಈತ, ಆತನ ಮರಣದ ನಂತರ ದಿದ್ದಾಳಿಗೆ ಹೆದರಿ ಬೇರೆ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದ. ಆದರೆ ಆತನ ಜಾಣ್ಮೆ ಅರಿತ ದಿದ್ದಾ ಮರಳಿ ಕರೆಸಿಕೊಂಡು ಆತನನ್ನು ತನ್ನ ಪ್ರಧಾನಮಂತ್ರಿಯಾಗಿ ನೇಮಿಸಿಕೊಂಡಿದ್ದಳು).

ಪ್ರಣಯ ಪ್ರಸಂಗ

ಮಾನಸಿಕವಾಗಿ ಕುಗ್ಗಿದ್ದ ದಿದ್ದಾಳಿಗೆ ಆಸರೆಯಾಗಿ ಬಂದವನು ತುಂಗ ಎಂಬ ಪೂಂಛ್‍ನ ಎಮ್ಮೆ ಕಾಯುವ ಯುವಕ. ಭವಿಷ್ಯ ಅರಸಿಕೊಂಡು ಕಾಶ್ಮೀರಕ್ಕೆ ಬಂದ ಆತ ಅಂಚೆಯವನಾಗಿ ಕೆಲಸ ಆರಂಭಿಸಿದ. ಅವನ ಕಾರ್ಯಕ್ಷಮತೆ, ಗುಣಗಳನ್ನು ಗುರುತಿಸಿ ಬಡ್ತಿ ನೀಡುತ್ತಾ ಬಂದ ದಿದ್ದಾ ಕಡೆಗೆ ಆತನನ್ನು ಪ್ರಧಾನಮಂತ್ರಿ ಮತ್ತು ಸೈನ್ಯಾಧಿಕಾರಿಯನ್ನಾಗಿ ನೇಮಿಸಿದಳು. ಯುವಕ ತುಂಗ ಮಧ್ಯವಯಸ್ಸಿನ ರಾಣಿಯ ಪ್ರೇಮಿ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಅಷ್ಟರಲ್ಲಿ ಯೌವ್ವನಕ್ಕೆ ಬರುತ್ತಿದ್ದ ಭೀಮಗುಪ್ತ ನಿಗೂಢವಾಗಿ ಸಾವನ್ನಪ್ಪಿದ. ದಿದ್ದಾಳ ಮೂವರೂ ಮೊಮ್ಮಕ್ಕಳು ತೀರಿಕೊಂಡು ಆಕೆಯೇ ಪಟ್ಟವನ್ನೇರಿದಳು. ಸತತ ಇಪ್ಪತ್ತೆರಡು ವರ್ಷಗಳ ಕಾಲ ರಾಜ್ಯವನ್ನಾಳಿದಳು.

ಹೀಗೆ ಕಡೆಗೆ ರಾಜನೀತಿ ಚಾಣಾಕ್ಷಳಾಗಿದ್ದ ದಿದ್ದಾ ತನ್ನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದ ಬಗ್ಗೆ ಸ್ವಾರಸ್ಯಕರ ಕತೆಯಿದೆ. ತನ್ನ ತಾಯಿಯ ಪರಿವಾರದ ಹುಡುಗರನ್ನು ಒಂದೆಡೆ ಸೇರಿಸಿದ್ದಳು. ಅವರ ಮುಂದೆ ದೊಡ್ಡ ಹಣ್ಣಿನ ರಾಶಿ ಹಾಕಿ ಯಾರು ಅತಿ ಹೆಚ್ಚು ಹಣ್ಣು ಸೇರಿಸುವರೋ ಅವರೇ ವಿಜೇತರು ಎಂದು ಘೋಷಿಸಿದ್ದಳು. ಹುಡುಗರು ತಮ್ಮಲ್ಲೇ ಜಗಳವಾಡುತ್ತಾ ಒಬ್ಬರಿಗೊಬ್ಬರು ಹೊಡೆದಾಡುತ್ತಾ ಹಣ್ಣು ಶೇಖರಿಸತೊಡಗಿದರು. ಕಡೆಯಲ್ಲಿ ದಿದ್ದಾಳ ಸಹೋದರನ ಮಗ ಸಂಗ್ರಾಮರಾಜನ ಬಳಿ ಅತಿ ಹೆಚ್ಚು ಹಣ್ಣು ಸಂಗ್ರಹವಾಗಿತ್ತು. ಆತ ಯಾರೊಂದಿಗೂ ಹೊಡೆದಾಟ ಮಾಡಲಿಲ್ಲ. ಆದರೆ ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿಕಟ್ಟಿ ಅವರು ಜಗಳ ಮಾಡುವಾಗ ತಾನು ಹಣ್ಣು ಸಂಗ್ರಹಿಸುವುದರಲ್ಲಿ ನಿರತನಾಗಿದ್ದ. ಆಕೆಯ ಆಯ್ಕೆ ಸರಿಯಾಗಿಯೇ ಇತ್ತು. ದಿದ್ದಾಳ ನಂತರ ಸಂಗ್ರಾಮರಾಜ ಎರಡು ದಶಕಗಳ ಕಾಲ ಸಮರ್ಥ ಆಡಳಿತ ನಡೆಸಿದ!!

ಇತಿಹಾಸದಲ್ಲಿ ಅಮರ

ರಾಣಿ ದಿದ್ದಾಳ ಆಳ್ವಿಕೆಯಲ್ಲಿ ಕಾಶ್ಮೀರ ಶಾಂತಿಯಿಂದ ಕೂಡಿ ಸುಭದ್ರವಾಗಿತ್ತು. ಶತ್ರು ಸೈನ್ಯವನ್ನು ಎದುರಿಸಿ ಗೆಲ್ಲುವಷ್ಟು ಬಲಿಷ್ಠವಾಗಿತ್ತು. ನೆಮ್ಮದಿಯ ಬಾಳು ಸಾಮಾನ್ಯ ಜನರದ್ದಾಗಿತ್ತು. ಹೀಗಾಗಿಯೇ ‘ದನದ ಹೆಜ್ಜೆಗಳನ್ನು ದಾಟಲಾರದವಳು ಎಂದು ಭಾವಿಸಿದ್ದ ಕುಂಟರಾಣಿ, ಹನುಮಂತ ಸಾಗರೋಲ್ಲಂಘನ ಮಾಡಿದಂತೆ ಶತ್ರುಗಳನ್ನು ಎದುರಿಸಿದಳು’ ಎಂದು ರಾಣಿ ದಿದ್ದಾಳನ್ನು ಕಲ್ಹಣ ಪ್ರಶಂಸಿಸುತ್ತಾನೆ. ಆದರೆ ಕಲ್ಹಣನೂ ಸೇರಿದಂತೆ ಚರಿತ್ರ್ರಕಾರರು ತಂದೆಯ ಪ್ರೀತಿ- ರಾಜ್ಯವಾಳುವ ಹಕ್ಕು ಸಿಗದ ರಾಜಕುವರಿಗಾದ ಅನ್ಯಾಯ, ಗಂಡ- ಮಗ- ಮೂವರು ಮೊಮ್ಮಕ್ಕಳನ್ನು ಕಳೆದುಕೊಂಡ ರಾಣಿ ದಿದ್ದಾಳ ಪರವಾಗಿ ಮರುಕ ಸೂಚಿಸಲಿಲ್ಲ. ತನ್ನ ವೈಯಕ್ತಿಕ ದುಃಖ ಮರೆತು ಆಕೆ ಕಾಶ್ಮೀರವನ್ನು ಸಮರ್ಥವಾಗಿ ಆಳಿದ್ದನ್ನು ಹೊಗಳಿದ್ದು ಕಡಿಮೆಯೇ! ಬದಲಿಗೆ ಅಧಿಕಾರ ಲಾಲಸೆಯಿಂದ ಆಕೆಯೇ ಮಾಟ ಮಾಡಿಸಿ ಎಲ್ಲರೂ ಕೊಂದಿದ್ದಾಳೆ ಎಂಬ ಸಂಶಯ- ಆರೋಪ. ಜತೆಗೆ ಆಕೆಯ ಚಾರಿತ್ರ್ಯದ ಬಗ್ಗೆ ಕತೆಗಳು. ಮಾಟಗಾತಿ, ಜಾರಿಣಿ, ಕ್ರೂರಿ, ನಿರ್ದಯಿ ಎಂಬ ಬಿರುದುಗಳು!!

ದಿದ್ದಾ ಬಾಲ್ಯ, ಯೌವ್ವನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಎಲ್ಲೋ ಪ್ರೀತಿಗಾಗಿ ಹಂಬಲಿಸುವ, ದೈಹಿಕದೋಷ ಮೆಟ್ಟಿ ತನ್ನನ್ನು ತಾನು ಗುರುತಿಸಿಕೊಳ್ಳುವ ಬಯಕೆ ಅವಳಲ್ಲಿತ್ತು ಎನಿಸುತ್ತದೆ. ಅಸಮರ್ಥನಾದ ಪತಿಯ ಕಾರಣದಿಂದ ಹೆಗಲಿಗೇರಿದ ಜವಾಬ್ದಾರಿಯಿಂದ ಆಕೆ ವಿಮುಖಳಾಗಲಿಲ್ಲ. ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣೊಬ್ಬಳು ರಾಣಿಯಾಗುವುದು ಸುಲಭವಲ್ಲ. ಮಾತ್ರವಲ್ಲ ಹಾಗೇ ನಾಲ್ಕು ದಶಕಗಳ ಕಾಲ ಅಧಿಕಾರ ನಡೆಸುವುದಂತೂ ಅತ್ಯಂತ ಕಠಿಣ. ಹೀಗಿರುವಾಗ ಆಕೆ ಕೆಲವು ಕಠಿಣ ನಿರ್ಣಯ ಕೈಗೊಂಡಿರುವ ಸಾಧ್ಯತೆ ಇದೆ. ಆದರೆ ರಾಜನಾಗಿದ್ದರೆ ಮರೆಯಬಹುದಾದ ಅಥವಾ ಮೆರೆಸಬಹುದಾದ ಎಲ್ಲಾ ಗುಣಗಳು ದಿದ್ದಾಳ ವಿಷಯದಲ್ಲಿ ಅವಗುಣಗಳಾಗುತ್ತವೆ!

ರಾಣಿ ದಿದ್ದಾಳ ಬದುಕಿನ ಕಥೆ-ವ್ಯಥೆಗಳ ಬಗ್ಗೆ ನಮಗೆ ತಿಳಿದಿರುವುದು ಈ ಗ್ರಂಥಗಳಿಂದ ಮಾತ್ರ. ಅದರಲ್ಲಿ ಸತ್ಯಾಸತ್ಯತೆ ಬಗ್ಗೆ ಉತ್ತರಿಸುವವರು ಯಾರು? ಏನೇ ಇರಲಿ ರಾಣಿ ದಿದ್ದಾ ಸಮರ್ಥ ಆಡಳಿತ ನಡೆಸಿ ಚರಿತ್ರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವುದು ಎಲ್ಲರೂ ಒಪ್ಪುವ ಸತ್ಯ. ಚರಣಹೀನ ಎನಿಸಿಕೊಂಡವಳು ರಾಣಿಯಾಗಿ ಜನಮಾನಸದಲ್ಲಿ ನೆಲೆಯಾಗಿದ್ದು ದೊಡ್ಡ ಸಾಧನೆಯೇ!

ಡಾ.ಕೆ.ಎಸ್.ಚೈತ್ರಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *