ಲೋಕದ ಕಣ್ಣು / ಕಾವಲು ಕಾಯುವ ಅಜ್ಜಿಯರು!!- ಡಾ.ಕೆ.ಎಸ್.ಚೈತ್ರಾ
ಥಾಯ್ಲೆಂಡ್ ದೇಶದ ಸಾಂಪ್ರದಾಯಿಕ ಸಮಾಜದಲ್ಲಿ ಹೆಣ್ಣು ಮನೆವಾರ್ತೆಗೆ ಸೀಮಿತವಾಗಿದ್ದ ಕಾಲದಲ್ಲಿ ಬರ್ಮಾ ದಾಳಿಯನ್ನು ಯುಕ್ತಿಯಿಂದ ಎದುರಿಸಿ ಸಮುದಾಯವನ್ನು ರಕ್ಷಿಸಿದ ಇಬ್ಬರು ಸೋದರಿಯರ ಸಾಹಸಗಾಥೆಯನ್ನು ಅಲ್ಲಿನ ಜನ ಇಂದಿಗೂ ಸ್ಮರಿಸುತ್ತಾರೆ. ಎರಡು ಶತಮಾನಗಳೇ ಕಳೆದಿದ್ದರೂ ಅವರಿಬ್ಬರನ್ನು ಸದಾ ಸ್ಮರಿಸುವಂತೆ ಅವರ ಪ್ರತಿಮೆಗಳನ್ನು ಅಲ್ಲಲ್ಲಿ ಕಣ್ಣಿಗೆ ಬೀಳುವಂತೆ ಸ್ಥಾಪಿಸಲಾಗಿದೆ. ಎಲ್ಲ ಅಡೆತಡೆಗಳನ್ನು ಧೈರ್ಯದಿಂದ ಎದುರಿಸಿದ ಅವರ ಅವರ ಕಥೆ ಎಂದಿಗೂ ಸ್ಫೂರ್ತಿದಾಯಕ. ಸೋದರಿಯರ ಹೆಸರಿನಲ್ಲಿ ರಾಷ್ಟ್ರೀಯ ದಿನವನ್ನೂ ಸಂಭ್ರಮದಿಂದ ಆಚರಿಸಲಾಗುತ್ತದೆ.
ಥಾಯ್ಲೆಂಡಿನ ಫುಕೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫುಕೆಟ್ ದ್ವೀಪಕ್ಕೆ ಹೆದ್ದಾರಿಯಲ್ಲಿ ನಮ್ಮ ಪಯಣ ನಡೆದಿತ್ತು. ಫುಕೆಟ್, ದೇಶದ ದಕ್ಷಿಣ ಭಾಗದಲ್ಲಿದ್ದು ಪ್ರವಾಸಿಗರ ಸ್ವರ್ಗ ಎನಿಸಿರುವ ಸಂಪದ್ಭರಿತ ದ್ವೀಪ. ಹಿಂದೆ ಇದಕ್ಕೆ ತಲಂಗ್ ಎಂಬ ಹೆಸರಿತ್ತು. ರಾಜಂಕ್ಷನ್ ಎಂಬುದು ಇಲ್ಲಿನ ಅತೀ ಜನದಟ್ಟಣೆಯ ಸಿಗ್ನಲ್. ಅಲ್ಲಿ ನಡುವೆ ಜೋಡಿ ಶಿಲ್ಪವೊಂದು ಕಣ್ಣಿಗೆ ಬಿತ್ತು. ನಮ್ಮ ಡ್ರೈವರ್ ಕಾರಿನ ಹಾರ್ನ್ ಒತ್ತಿ ಸದ್ದು ಮಾಡಿ, ಭಕ್ತಿಯಿಂದ ತಲೆ ಬಗ್ಗಿಸಿದ. ನಗರ ಪ್ರವೇಶಕ್ಕೆ ಮುಂಚೆ ಈ ರೀತಿ ಇವರಿಬ್ಬರ ದರ್ಶನ, ಆಶೀರ್ವಾದ ಪಡೆಯುವುದು ರೂಢಿ ಎಂದು ವಿವರಿಸಿದ. ಕಾರು ನಿಲ್ಲಿಸಿ ಪಕ್ಕದಲ್ಲೇ ಮಾರುತ್ತಿದ್ದ ಚೆಂಡು ಹೂವಿನ ಮಾಲೆ, ಸುಗಂಧ ಕಡ್ಡಿ ಮತ್ತು ತೆಳುವಾದ ಬಂಗಾರದ ಎಲೆಗಳನ್ನು ಕೊಂಡು ತಂದ. ಯಾರು, ಏನು ಎತ್ತ ಗೊತ್ತಿಲ್ಲದ ನಾವು ನೋಡುತ್ತಲೇ ಇದ್ದೆವು. ನಗರದ ಪ್ರಮುಖ ಜಾಗದಲ್ಲಿ ಕೈಯ್ಯಲ್ಲಿ ಕತ್ತಿ ಹಿಡಿದು, ವಿರುದ್ಧ ದಿಕ್ಕುಗಳಲ್ಲಿ ನೋಡುತ್ತಾ ಕಾವಲುಗಾರರಂತೆ ನಿಂತ ಇವರು ಯಾರು ಎಂದು ಯೋಚಿಸುತ್ತಿದ್ದೆ. ಅದಕ್ಕೆ ಉತ್ತರವೆಂಬಂತೆ ನಮ್ಮ ಡ್ರೈವರ್ ‘ ಇವರು ಪುರುಷರಲ್ಲ; ಹಾಗೆ ವೇಷ ಧರಿಸಿದ ಮಹಿಳೆಯರು; ಯಾ ಚಾನ್ ಮತ್ತು ಯಾ ಮೂಕ್ ( ಥಾಯ್ ಭಾಷೆಯಲ್ಲಿ ಯಾ ಅಂದರೆ ಅಜ್ಜಿ ). ಅದೂ ಮಧ್ಯವಯಸ್ಸಿನವರು!
ಸಾಧಾರಣವಾಗಿ ಮಹಿಳೆ ಎಂದರೆ ಮನೆವಾರ್ತೆ ಎಂಬ ನಂಬಿಕೆ ಸಾಂಪ್ರದಾಯಿಕ ಥಾಯ್ ಸಮಾಜದಲ್ಲಿ ಇಂದಿಗೂ ಇದೆ. ಅಜ್ಜಿ ಎಂದರಂತೂ ಮನೆಯಲ್ಲಿದ್ದು, ಮೊಮ್ಮಕ್ಕಳನ್ನು ನೋಡಿಕೊಳ್ಳುವ ಮಮತಾಮಯಿ. ಹೊತ್ತು ಹೊತ್ತಿಗೆ ಊಟ-ತಿಂಡಿ ಮಾಡಿಕೊಟ್ಟು , ಲಾಲನೆ-ಪಾಲನೆ ಮಾಡುವ ಅಕ್ಕರೆಯ ಜೀವ. ಮನೆ-ಮಕ್ಕಳು ಸರಿ; ಆದರೆ ಆರ್ಥಿಕ- ರಾಜಕೀಯ-ಸಾಮಾಜಿಕ ರಂಗಗಳು ಮಹಿಳೆಗೆ ತಕ್ಕದ್ದಲ್ಲ. ಹಾಗಾಗಿಯೇ ಇಂಥ ಹಿರಿಯರನ್ನು ರಕ್ಷಿಸುವ ಜವಾಬ್ದಾರಿ ಪುರುಷರದ್ದು. ಆದರೆ ಇಲ್ಲಿರುವ ಈ ಅಜ್ಜಿಯರು ಬೇರೆ ಥರ! ಇವರು ಮಾಡಿದ ಸಾಹಸದಿಂದ ನಮ್ಮ ಫುಕೆಟ್ ಉಳಿದಿದೆ. ಆದ್ದರಿಂದಲೇ ಮನೆಗೊಂದು ಅಜ್ಜಿ ಇದ್ದರೆ ಹೇಗೆ ನೆಮ್ಮದಿಯೋ ಹಾಗೆ ನಮ್ಮ ದ್ವೀಪಕ್ಕೆ ಈ ಅಜ್ಜಿಯರಿಂದ ಭದ್ರತೆ ಎಂಬುದು ಇಲ್ಲಿನ ಜನರ ಮಾತು. ಅದಕ್ಕೇ ಈ ಶಿಲ್ಪ ಇಲ್ಲಿದೆ ’ಎನ್ನುತ್ತಾ ಇದಕ್ಕೆಕಾರಣವಾದ ಎರಡು ಶತಕಗಳ ಹಿಂದೆ ನಡೆದ ಸ್ವಾರಸ್ಯಕರ ಐತಿಹಾಸಿಕ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ.
ಬಾನ್‍ಕೀನ್ ಹಳ್ಳಿಯ ಮುಖ್ಯಸ್ಥನ ಮಕ್ಕಳಾದ ಚಾನ್ ಮತ್ತು ಮೂಕ್, ಪ್ರೀತಿಯ ಸಹೋದರಿಯರು. ಅಂದಿನ ಪದ್ಧತಿಯಂತೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾದ ಅಕ್ಕ ಚಾನ್‍ಗೆ ಬೇಗನೇ ಪತಿವಿಯೋಗವಾಯಿತು. ಕೆಲಸಮಯದಲ್ಲೇ ತಲಂಗ್ ನಗರದ ರಾಜ್ಯಪಾಲನೊಂದಿಗೆ ಮರುಮದುವೆಯೂ ಆಯಿತು. ಆದರೆ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಆತ ಕೊನೆಯುಸಿರೆಳೆದ. 1785 ರಆರಂಭದಲ್ಲಿ ಈ ದುರ್ಘಟನೆ ನಡೆದಾಗ ಚಾನ್‍ಳ ವಯಸ್ಸು ನಲವತ್ತೈದರ ಆಸು ಪಾಸು. ಗಂಡನನ್ನು ಕಳೆದುಕೊಂಡ ದುಃಖದಲ್ಲಿರುವಾಗಲೇ ಬರ್ಮಾ ಸೈನ್ಯದ ದಾಳಿಯ ಕುರಿತ ಆಘಾತಕರ ಸುದ್ದಿ ! ನಾಯಕನಿಲ್ಲದಿದ್ದಾಗ ಸುಲಭವಾಗಿ ತಲಂಗ್ ತಮ್ಮ ಕೈವಶ ಮಾಡಿಕೊಳ್ಳಬಹುದು ಎಂಬ ಹುನ್ನಾರ ಬರ್ಮಾ ಸೇನೆಯದ್ದು.
ಏಕಾಏಕಿ ಈ ದಾಳಿಯ ಬಗ್ಗೆ ತಿಳಿದು ಚಾನ್ ಗೆ ಗಾಬರಿಯಾಗಿದ್ದು ಸಹಜವೇ. ಆದರೂ ಧೃತಿಗೆಡದೆ ತಂಗಿಯನ್ನು ಕರೆಸಿ ಸಮಾಲೋಚಿಸಿದಳು. ನಂತರ ಪಟ್ಟಣದ ಪ್ರಮುಖರೊಂದಿಗೆ ಸೇನಾ ಬಲ, ಶಸ್ತ್ರಗಳು, ಆಹಾರ ವ್ಯವಸ್ಥೆ , ರಕ್ಷಣಾತಂತ್ರ ಎಲ್ಲದರ ಬಗ್ಗೆ ಚರ್ಚೆ ನಡೆದು ವಸ್ತುಸ್ಥಿತಿಯ ಅರಿವಾಯಿತು. ಇಲ್ಲಿದ್ದದ್ದು ಕೇವಲ ಒಂಬೈನೂರು ಸೈನಿಕರು. ಎದುರಾಳಿಗಳದ್ದು ಸೈನ್ಯದ ಚಿಕ್ಕತುಕಡಿಯಾದರೂ ಇದ್ದವರು ಮೂರೂವರೆ ಸಾವಿರಕ್ಕೂ ಹೆಚ್ಚು ಸೈನಿಕರು. ಜನಬಲ- ಶಸ್ತ್ರಾಸ್ತ್ರ ಸಂಗ್ರಹ ಇಲ್ಲದಿದ್ದಲ್ಲಿ ಯುದ್ಧ ಮಾಡುವುದಾದರೂ ಹೇಗೆ? ಸೈನಿಕರು ಈ ಯುದ್ಧ ಸೋತಂತೆಯೇ ಎಂದು ಕೈಚೆಲ್ಲಿದರು, ಆ ಸಂದರ್ಭದಲ್ಲಿ ಹಾಗೆ ಭಾವಿಸಿದ್ದು ಸರಿಯೂ ಆಗಿತ್ತು. ಆದರೆ ಚಾನ್ ಮತ್ತು ಮೂಕ್ ಅಷ್ಟು ಸುಲಭದಲ್ಲಿ ಸೋಲೊಪ್ಪುವವರಲ್ಲ. ಪುರುಷ ಸೈನಿಕರು ಇಲ್ಲ; ಆದರೆ ತಲಂಗ್ ನಲ್ಲಿ ಮಹಿಳೆಯರೂ ಇರುವರಲ್ಲ; ಸುಮ್ಮನೇ ಸೋಲುವ ಬದಲು ಎಲ್ಲರೂ ಹೋರಾಡಿ ಸೋತರೆ ಗೌರವ ಎಂದು ತೀರ್ಮಾನಿಸಿದರು. ಅಕ್ಕ-ತಂಗಿ ಸೇರಿ ಕೂಡಲೇ ಕಾರ್ಯಪ್ರವತ್ತರಾದರು. ಮೊದಲು ಸ್ಥಳೀಯರನ್ನು ಸೇರಿಸಿ ಕೋಟೆಯ ಸುತ್ತಲೂ ಮಣ್ಣಿನ ಗೋಡೆಯನ್ನು ಎತ್ತರಿಸಿದರು.ಆ ಗೋಡೆಯ ಮೇಲೆ ಒಂಬೆ-ರೆಂಬೆಗಳಿಂದ ಅಲ್ಲಲ್ಲಿ ಅಚ್ಚುಗಳನ್ನು ಮಾಡಿಸಿದರು.ಅವು ಫಿರಂಗಿ ಮತ್ತು ಗುಂಡಿನದಾಳಿಯನ್ನು ಹೋಲುತ್ತಿತ್ತು. ಶತ್ರು ಸೈನಿಕರು ಎಂಥ ಗುಂಡಿನ ದಾಳಿಯನ್ನೂ ಈ ಕೋಟೆ ತಡೆಯುತ್ತದೆ ಎಂದು ಭಾವಿಸಲಿ ಎಂಬುದು ಇದರ ಉದ್ದೇಶ.
ಮಹಿಳೆಯರು ಸೈನಿಕರಾಗಬೇಕು ನಿಜ. ಆದರೆ ಸಾಂಪ್ರದಾಯಿಕ ಮಹಿಳಾ ಉಡುಪು ತೊಟ್ಟರೆ ಶತ್ರುಗಳು ಹೆದರುವುದಿಲ್ಲ. ಹಾಗಾಗಿ ಪುರುಷ ಸೈನಿಕರ ವೇಷ ಧರಿಸಬೇಕು. ಶಿರಸ್ತ್ರಾಣ ಧರಿಸಲು ಉದ್ದ ಕೂದಲು ಅಡ್ಡ ಬರುತ್ತದಲ್ಲ; ಹಾಗಾಗಿ ಎಲ್ಲಾ ಮಹಿಳೆಯರ ಕೂದಲನ್ನು ಗಿಡ್ಡಕ್ಕೆ ಕತ್ತರಿಸಲಾಯಿತು. ನಂತರ ಸೈನಿಕರ ವೇಷ ತೊಡಿಸಿ, ಕೈಯಲ್ಲಿ ಕತ್ತಿ ಹಿಡಿಸಿ ಯುದ್ಧಕ್ಕೆ ಸಜ್ಜುಗೊಳಿಸಲಾಯಿತು. ಕೋಟೆಯ ಒಳಗೆ ಸೈನಿಕರು ಕಡಿಮೆ ಇದ್ದರೂ, ಹೊರಗೆ ಹೆಚ್ಚು ಸಂಖ್ಯೆಯ ಸೈನಿಕರು ಹಗಲು-ರಾತ್ರಿ ಗಸ್ತು ತಿರುಗುವ ಹಾಗೆ ಮಾಡಿದರು. ಹಗಲಿನಲ್ಲಿ ಸೈನಿಕರು ಗಸ್ತು ತಿರುಗುವಾಗ ಮೊದಲ ಮತ್ತು ಕಡೆಯ ಸಾಲುಗಳಲ್ಲಿ ಪುರುಷರು , ನಡುವಿನ ಸಾಲುಗಳಲ್ಲಿ ಮಹಿಳೆಯರನ್ನು ನೇಮಿಸಲಾಗಿತ್ತು. ದೂರದಿಂದ ಕಾಣುತ್ತಿದ್ದದ್ದು ಅಪಾರ ಸಂಖ್ಯೆಯ ಸೈನಿಕರಷ್ಟೇ! ಕೋಟೆಯ ಹೊರಗೇ ಇಷ್ಟು ಸೈನಿಕರಿರುವಾಗ ಒಳಗೆ ಇನ್ನೆಷ್ಟು ಜನರಿದ್ದಾರೋ ಎಂದು ಬರ್ಮಾ ಸೇನೆ ಹೆದರಿತು. ಹಾಗಾಗಿ ಕಾದು ನೋಡುವ ತೀರ್ಮಾನಕ್ಕೆ ಬಂದಿತು. ಈ ಸಹೋದರಿಯರಿಗೆ ಬೇಕಾದದ್ದು ಅದೇ! ರಾತ್ರಿ ವೇಳೆ ದ್ವೀಪದ ಒಳ-ಹೊರಗನ್ನು ಬಲ್ಲ ಪುರುಷ ಸೈನಿಕರು ಶತ್ರು ಪಾಳಯಕ್ಕೆ ನುಗ್ಗಿ ಆಕ್ರಮಣ ಮಾಡಿ ಬರುತ್ತಿದ್ದರು. ಬರ್ಮಾ ಸೇನೆ ಎರಡು ಬಾರಿ ಆಕ್ರಮಣದ ಪ್ರಯತ್ನ ನಡೆಸಿದರೂ ಅದು ವಿಫಲವಾಯಿತು. ಸುಮಾರು ಮೂರುತಿಂಗಳ ಕಾಲ ಕಾದು, ಕೋಟೆ ಆಕ್ರಮಿಸುವಲ್ಲಿ ಶತ್ರುಸೇನೆ ವಿಫಲವಾಯಿತು. ಅವರ ಸೈನಿಕರ ಬಲ ಕ್ಷೀಣಿಸಿತು, ಆಹಾರದ ದಾಸ್ತಾನು ಕುಗ್ಗಿತು. ಸೈನಿಕರು ಹತಾಶರಾದರು. ತಮ್ಮ ನಾಯಕನ ವಿರುದ್ಧ ದಂಗೆದ್ದರು. ಅಂತೂಕಡೆಗೆ 1786, ಮಾರ್ಚ್ 13 ರಂದು ಬರ್ಮಾ ಸೈನ್ಯ, ಯಾವುದೇ ಯಶಸ್ಸು ಕಾಣದೆ, ತಲಂಗ್‍ನ್ನು ಬಿಟ್ಟು ಮರಳಿ ತಾಯ್ನಾಡಿಗೆ ಹೊರಟಿತು. ಹೀಗೆ ಮೂರು ತಿಂಗಳ ಕಾಲ ನಡೆದ ಯುದ್ಧದಲ್ಲಿ ಸೀಮಿತ ಸೈನ್ಯ ಬಲವಿದ್ದರೂ ಯುಕ್ತಿಯಿಂದ ಗೆಲುವು ಸಾಧಿಸಿದ ಕೀರ್ತಿ ಈ ಸಹೋದರಿಯರದ್ದು!
ಸಹೋದರಿಯರ ಯುಕ್ತಿ : ಯುಕ್ತಿಯಿಂದ, ಜನರನ್ನು ಸಂಘಟಿಸಿ ತಮ್ಮ ಪ್ರಾಂತ್ಯವನ್ನು ರಕ್ಷಿಸಿದ ಈ ಸಹೋದರಿಯರಿಗೆ ಚಕ್ರಿ ವಂಶದ ರಾಜ ಮೊದಲನೆಯ ರಾಮ, ಥಾವೋ ಥೆಪ್‍ಕ್ರಸಾತ್ರಿ ಮತ್ತು ಥಾವೋ ಸಿ ಸನ್‍ಥಾನ್ ಎಂಬ ಬಿರುದುಗಳನ್ನಿತ್ತು ಗೌರವಿಸಿದ. ಯುದ್ಧದ ನಂತರವೂ ಮಹಿಳೆಯರು ಸ್ವಂತ ಉದ್ಯೋಗದಲ್ಲಿ ತೊಡಗಿಕೊಳ್ಳಲು ಸಹಾಯ ಮಾರ್ಗದರ್ಶನ ಮಾಡುತ್ತಿದ್ದ ಯಾ ಚಾನ್ 1793 ರಲ್ಲಿ ಮರಣ ಹೊಂದಿದಳು. ಸ್ಥಳೀಯ ಜನತೆ ತಮ್ಮಸ್ವಾತಂತ್ರ್ಯಕ್ಕಾಗಿ ಸೆಣೆಸಾಡಿದ ಈ ಇಬ್ಬರನ್ನೂ ಕತೆ, ಹಾಡಿನ ಮೂಲಕ ಗೌರವಿಸುತ್ತಾ ಬಂದಿತ್ತು.1909 ರಲ್ಲಿ ರಾಜ ಆರನೆಯ ರಾಮ, ಈ ಸಹೋದರಿಯರ ಶಿಲ್ಪ ನಿರ್ಮಿಸುವ ಯೋಜನೆ ಮುಂದಿಟ್ಟ. ಅದುಕಾರ್ಯಗತವಾಗಿ 1967 ರಲ್ಲಿ ರಾಜ ಒಂಬತ್ತನೆಯ ರಾಮನ ಕಾಲದಲ್ಲಿ ಅದ್ದೂರಿಯಾಗಿ ಇಲ್ಲಿ ಸ್ಥಾಪನೆಗೊಂಡಿತು. ಐದೂವರೆ ಅಡಿ ಎತ್ತರದ ಲೋಹದ ಶಿಲ್ಪಗಳ ಕೆಳಗೆ ಪುಟ್ಟ ಪ್ರತಿಕೃತಿಯನ್ನು ಇಡಲಾಗಿದ್ದು ಜನರು ಇದಕ್ಕೆ ಪೂಜೆ ಸಲ್ಲಿಸುತ್ತಾರೆ. ತಮ್ಮ ದ್ವೀಪವನ್ನು ಈ ಯೋಧೆಯರು ರಕ್ಷಿಸುತ್ತಾರೆ ಎಂಬ ಬಲವಾದ ನಂಬಿಕೆ ಜನರದ್ದಾಗಿದೆ. ಹೊರಸಂಚಾರಕ್ಕೆ ಹೋಗುವ ಪ್ರವಾಸಿಗರು, ವಿದ್ಯಾರ್ಥಿಗಳು ಹೀಗೆ ಎಲ್ಲರೂ ಈ ತಮ್ಮ ಸುರಕ್ಷೆ, ಯಶಸ್ಸಿಗಾಗಿ ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ನಾಡಿನ ರಕ್ಷಣೆಗಾಗಿ ದಿಟ್ಟ ಹೆಜ್ಜೆಯಿಟ್ಟ ಈ ಸಹೋದರಿಯರ ಗೌರವಾರ್ಥ ಅಂಚೆ ಚೀಟಿಗಳನ್ನೂ ಸರ್ಕಾರ ಬಿಡುಗಡೆ ಮಾಡಿದೆ.
ಪ್ರತೀ ವರ್ಷ ಮಾರ್ಚ್ ತಿಂಗಳಿನಲ್ಲಿ ಎರಡು ವಾರಗಳ ಕಾಲ ಸಹೋದರಿಯರ ಸ್ಮರಣಾರ್ಥ ಥಾವೋ ಥೆಪ್‍ಕ್ರಸಾತ್ರಿ ಮತ್ತು ಥಾವೋ ಸಿ ಸನ್‍ಥಾನ್ ಉತ್ಸವ ನಡೆಸಲಾಗುತ್ತದೆ. ಸೈಕಲ್ ರೇಸ್, ಥಾಯ್ ಬಾಕ್ಸಿಂಗ್ ಮುಂತಾದ ಆಟೋಟ ಸ್ಪರ್ಧೆಗಳ ಜತೆ ಇವರ ಸಾಹಸ ಕತೆಯನ್ನು ಹಾಡು, ನೃತ್ಯ, ನಾಟಕಗಳ ಮೂಲಕ ಪ್ರದರ್ಶಿಸಲಾಗುತ್ತದೆ. ಆ ಸಮಯದಲ್ಲಿ ಈ ಶಿಲ್ಪಗಳ ವಿಶೇಷ ಅಲಂಕಾರವೂ ನಡೆಯುತ್ತದೆ.
ತಲೆಯೆತ್ತಿ ಆತ್ಮವಿಶ್ವಾಸದಿಂದ ನಿಂತ ಈ ಸಹೋದರಿಯರನ್ನು ನೋಡುತ್ತಿದ್ದೆ. ಶಿಕ್ಷಣ, ಉದ್ಯೋಗ , ಬುದ್ಧಿ-ಶಕ್ತಿ ಎಲ್ಲಾ ಇದ್ದರೂ ಹೆಣ್ಣೆಂದರೆ ಅಬಲೆ; ಕಷ್ಟ ಎದುರಾದಾಗಲೆಲ್ಲಾ ದೈಹಿಕ- ಬೌದ್ಧಿಕ ಸಾಮಥ್ರ್ಯವುಳ್ಳ ಪುರುಷರು ಅದನ್ನು ಪರಿಹರಿಸಲಿ ಎಂಬ ಯೋಚನೆ ಕೇವಲ ಸಮಾಜದ್ದು ಮಾತ್ರವಲ್ಲ, ಸ್ವತಃ ಮಹಿಳೆಯರದ್ದೂ ಕೂಡಾ! ಅದೂ ಮಧ್ಯವಯಸ್ಸಿನ ಮಹಿಳೆಯೆಂದರೆ ಪಾಪ ಎಂಬ ಅನುಕಂಪವೇ ಹೆಚ್ಚು. ಇದು ಈಗಿನ ಅಂದರೆ ಇಪ್ಪತ್ತೊಂದನೇ ಶತಮಾನದ ಕತೆ. ಇನ್ನು ಎರಡು ನೂರು ವರ್ಷಗಳ ಹಿಂದೆ ಹೇಗಿರಬಹುದು? ಆದರೂ ಎಲ್ಲವನ್ನೂ ಎದುರಿಸಿ, ಜನರನ್ನು ಸಂಘಟಿಸಿ, ಸಮಸ್ತರ ಬೆಂಬಲದಿಂದ ತಮ್ಮ ದ್ವೀಪವನ್ನು ರಕ್ಷಿಸಿದ ಈ ಸಹೋದರಿಯರ ಸಾಧನೆ ನಿಜಕ್ಕೂ ಸ್ಮರಣೀಯ ಮತ್ತು ಸ್ಫೂರ್ತಿದಾಯಕ. ಮಕ್ಕಳಿಗೆ ತುತ್ತಿಡುವ ಮಹಿಳೆಯ ಕೈ, ಕತ್ತಿಯನ್ನು ಹಿಡಿಯಬಲ್ಲದು; ಕತೆ ಹೇಳುವ ಅಜ್ಜಿ ಶತ್ರುಗಳ ವಿರುದ್ಧ ಕಾರ್ಯಾಚರಣೆ ನಡೆಸಬಲ್ಲಳು- ಅಲ್ಲವೇ ?
ಡಾ.ಕೆ.ಎಸ್.ಚೈತ್ರಾ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.