ಲೋಕದ ಕಣ್ಣು / ಕಾರ್ನಿ ಮಾತೆ ಮತ್ತು ಕಬ್ಬಾಗಳು – ಡಾ. ಕೆ.ಎಸ್. ಚೈತ್ರಾ


ದನಕರುಗಳು ಮತ್ತು ಕೃಷ್ಣಮೃಗಗಳ ರಕ್ಷಣೆಗೆ ಬದ್ಧಳಾಗಿದ್ದ ಕಾರಣಿ ಮಾತೆಯ ಆರಾಧನೆಗೆ ರಾಜಸ್ತಾನದ ಹಲವೆಡೆ ದೇವಾಲಯಗಳಿವೆ. ಕುಟುಂಬಗಳ ವೈಷಮ್ಯವನ್ನು ಬಗೆಹರಿಸಲು, ಜಗಳ ಮತ್ತು ಯುದ್ಧಗಳನ್ನು ನಿಲ್ಲಿಸಲು ಶ್ರಮಿಸುತ್ತಿದ್ದ ಅವಳ ಮಾನವೀಯ ದೃಷ್ಟಿಕೋನ ಜನರಿಗೆ ಮೆಚ್ಚುಗೆಯಾಗಿತ್ತು. ಅಂದಿನ ಮಹಾರಾಜರು ಕಾರ್ನಿ ಮಾತೆಯಿಂದಲೇ ತಮ್ಮ ಕೋಟೆಗಳಿಗೆ ಶಂಕುಸ್ಥಾಪನೆ ಮಾಡಿಸಿದ್ದರು.

ದೀದಿ, ಈ ದೇವಸ್ಥಾನದ ಒಳಗೆ ಹೋಗ್ತೀರಲ್ಲ! ಆಗ ಅಕಸ್ಮಾತ್ ನಿಮ್ಮ ಕಾಲ ಮೇಲೆ ಇಲಿ ಓಡಾಡಿದ್ರೆ ನಿಮ್ಮ ಪುಣ್ಯ ಅಂತ ತಿಳೀರಿ. ಯಾಕೆ ಅಂದ್ರೆ ಇಲ್ಲಿ ಇಲಿಗಳು ಅಂದ್ರೆ ದೇವರ ಸಮಾನ' ಎಂದ ನಮ್ಮ ಚಾಲಕ ಜಯಸಿಂಗ್.ಅಯ್ಯಬ್ಬಾ! ಇಲಿ ಎಂದರೆ ನನಗೆ ಸಿಕ್ಕಾಪಟ್ಟೆ ಹೆದರಿಕೆ. ನೆನೆಸಿಕೊಂಡ್ರೇ ಮೈಯೆಲ್ಲಾ ನಡುಗುತ್ತೆ. ಇನ್ನು ಕಂಡರೆ, ಕೂಗಿ ಓಡೋದೇ ಸೈ, ಓಡಾಡಿದ್ರೇ ಪ್ರಾಣನೇ ಹೋಗಬಹುದು’ ಎಂದೆ ನಾನು. ಇಲಿ ಕುರಿತಾದ ಈ ಸಂಭಾಷಣೆ ಆರಂಭವಾದದ್ದು ರಾಜಸ್ತಾನ ಪ್ರವಾಸದಲ್ಲಿ. ಇಲ್ಲಿಯ ವೈಶಿಷ್ಟ್ಯಗಳನ್ನು ವಿವರಿಸುತ್ತಾ ಜಯಸಿಂಗ್ ಹೇಳಿದ ಮಾತು, ನಮ್ಮನ್ನು ಬೆಚ್ಚಿ ಬೀಳಿಸಿತು. ದೇವಸ್ಥಾನದಲ್ಲಿ ಇಲಿಗಳಿಗೆ ಪೂಜೆ, ನೈವೇದ್ಯ! ನಮ್ಮಲ್ಲಿ ಮೂಷಿಕ ವಾಹನನಾಗಿ ಗಣಪನನ್ನು ಪೂಜಿಸಿದ್ದು ಸರಿ, ನೃತ್ಯದಲ್ಲಿ ಇಲಿಯನ್ನು ಅಭಿನಯಿಸಿದ್ದೂ ಹೌದು. ಆದರೆ ಅದು ಜೀವಂತ ಇಲಿಯಲ್ಲ. ಹೀಗಿರುವಾಗ ಜೀವಂತ ಇಲಿಗಳ ಪೂಜೆ ಎಂದರೆ? ಹೆದರಿಕೆ ಇದ್ದರೂ ಕುತೂಹಲವೇ ಹೆಚ್ಚಾಗಿ ಇಲಿಗಳ ದೇವಾಲಯಕ್ಕೆ ಪ್ರಯಾಣ ಬೆಳೆಸಿದೆವು.

ರಾಜಸ್ತಾನದ ಬಿಕನೇರ್‍ನಿಂದ ದಕ್ಷಿಣಕ್ಕೆ ರಾಷ್ಟ್ರೀಯ ಹೆದ್ದಾರಿ ಎಂಭತ್ತೊಂಭತ್ತರಲ್ಲಿ ಮೂವತ್ತು ಕಿ.ಮೀ. ಸಾಗಿದರೆ ದೇಶ್ನೋಕ್ ಎಂಬ ಪುಟ್ಟ ಊರಿದೆ. ಅಲ್ಲಿದೆ ಈ ವಿಚಿತ್ರ ದೇವಾಲಯ. ಬಿಳಿ ಅಮೃತಶಿಲೆಯಲ್ಲಿ ಕಟ್ಟಿದ ಮೊಘಲ್ ಶೈಲಿಯ ಭವ್ಯ ದೇಗುಲ, ಇಪ್ಪತ್ತನೇ ಶತಮಾನದ ಆರಂಭದಲ್ಲಿ ಮಹಾರಾಜ ಗಂಗಾಸಿಂಗ್‍ನಿಂದ ಕಟ್ಟಲ್ಪಟ್ಟಿದೆ. ಒಳ ಪ್ರವೇಶಿಸುವಾಗ ದೊಡ್ಡ ಬೆಳ್ಳಿಯ ದ್ವಾರಗಳಿದ್ದು ಇಲಿಯ ಚಿತ್ರಗಳನ್ನು ಕೆತ್ತಲಾಗಿದೆ. ಬದುಕನ್ನು ಪ್ರತಿನಿಧಿಸುವ ವೃಕ್ಷದ ಕೆತ್ತನೆ ಅರ್ಥಗರ್ಭಿತವಾಗಿದೆ. ಹಾವು, ಅಳಿಲು, ಹಲ್ಲಿ, ಇಲಿ ಇವೆಲ್ಲವನ್ನೂ ಮರದ ಕೊಂಬೆಗಳ ಜತೆಯಲ್ಲಿ ಮೂಡಿಸಲಾಗಿದೆ. ಸಹಜೀವನದ ಮಹತ್ವ ಇಲ್ಲಿಯ ಪೂಜೆ- ಕೆತ್ತನೆಗಳ ಮುಖ್ಯ ಉದ್ದೇಶ ಎಂದು ನನಗನ್ನಿಸಿತು. ನೆಲವೂ ಅಮೃತ ಶಿಲೆಯದ್ದೇ ಆಗಿದ್ದು ಒಳಗಿನ ಪ್ರಾಂಗಣದಲ್ಲಿ ದೇವಿಯ ಮಹಿಮೆ ವರ್ಣಿಸುವ ಕೆತ್ತನೆಗಳಿವೆ. ಗರ್ಭಗುಡಿಯ ಒಳಗಿರುವುದು ಕಾರ್ನಿ ಮಾತೆಯ ಒಂದೂವರೆ ಅಡಿ ಎತ್ತರದ ವಿಗ್ರಹ. ತಲೆಗೆ ಮುಕುಟ ಧರಿಸಿ ಕೈಯ್ಯಲ್ಲಿ ತ್ರಿಶೂಲ ಹಿಡಿದ ಸಿಂಹವಾಹನೆಯಾದ ಕಾರ್ನಿ ಮಾತೆ ಇಲಿಗಳ ಪೂಜೆಗೆ ಕಾರಣಳು.

ಯಾರೀ ಕಾರ್ನಿ (ಕಾರಣಿ) ಮಾತೆ?

ಕಾರ್ನಿ ಮಾತೆ ಹದಿನೈದನೇ ಶತಮಾನದಲ್ಲಿ ರಾಜಸ್ತಾನದಲ್ಲಿದ್ದ ಚರನ್ ಕುಲಕ್ಕೆ ಸೇರಿದ ಯೋಗಿನಿ. ಇಪ್ಪತ್ತೊಂದು ತಿಂಗಳು ಗರ್ಭದಲ್ಲಿದ್ದು, ನೂರಾಐವತ್ತು ವರ್ಷ ಬದುಕಿ ಹಲವಾರು ಪವಾಡಗಳನ್ನು ಮಾಡಿದ ಅತಿಮಾನುಷ ಶಕ್ತಿದೇವತೆ. ಈಕೆ ಯುದ್ಧದೇವತೆ ಹಿಂಗ್ಲಾಜಾ ದೇವಿಯ ಅವತಾರ, ದುರ್ಗಾದೇವಿಯ ಪ್ರತಿರೂಪ ಎಂದು ಸ್ಥಳೀಯರು ನಂಬುತ್ತಾರೆ. ಜೋಧ್‍ಪುರ ಮತ್ತು ಬಿಕ್‍ನೇರ್ ರಾಜವಂಶಸ್ಥರಿಂದ ಪೂಜಿಸಲ್ಪಡುವ ದೇವಿ ಆಕೆ. ಆಕೆಗೆ ದಾಢಿವಾಲಿ ಡೋಕ್ರಿ/ ದಾಡಿಲಿ ( ಗಡ್ಡ ಇರುವ ಹಿರಿಯ ಮಹಿಳೆ) ಎಂಬ ಹೆಸರೂ ಇದೆ. ಅಕ್ಟೋಬರ್ ಎರಡು, 1387 ರಂದು ರಾಜಸ್ತಾನದ ಸುವಾಪ್ ಹಳ್ಳಿಯಲ್ಲಿ ಮೆಹಾಜಿ ಚರನ್ ಮತ್ತು ದೇವಲ್ ಬಾಯಿಯ ಪುತ್ರಿ ರಿದ್ಧಿಬಾಯಿ ಆಗಿ, ಜನಿಸಿದ್ದಳು. ಬಾಲ್ಯದಿಂದಲೇ ಅತಿಮಾನುಷ ಶಕ್ತಿ ಹೊಂದಿದ್ದ ಈಕೆಗೆ ಯಾವುದೂ ಅಸಾಧ್ಯವಾಗಿರಲಿಲ್ಲ. ಹೀಗಾಗಿ ಕಾರಣಿ, ಕಾರ್ನಿ (ಮಾಡುವವಳು) ಎಂದು ಕರೆಯಲಾಯಿತು.

ಪ್ರಾಪ್ತ ವಯಸ್ಕಳಾದಾಗ ಸತಿಕಾ ಗ್ರಾಮದ ದೆಪಾಜಿ ಚರನ್ ಜತೆ ವಿವಾಹವಾಯಿತು. ಮದುವೆಯ ನಂತರ ದೈಹಿಕ ಸಂಬಂಧವನ್ನು ಆಕೆ ನಿರಾಕರಿಸಿದಳು. ಮೊದಲಿಗೆ ಪತಿ ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ರಿದ್ಧಿಬಾಯಿಯದ್ದು ದೃಢ ನಿರ್ಧಾರ. ಮಾತ್ರವಲ್ಲ, ತನ್ನಿಂದ ಪತಿಯ ಇಚ್ಛೆಗೆ ತೊಡಕಾಗಬಾರದು ಎಂದು ತನ್ನ ತಂಗಿ ಗುಲಾಬ್‍ಳನ್ನೇ ಮದುವೆ ಮಾಡಿಸಿದಳು. ಹೀಗೆ ಗಂಡ ತಂಗಿಯರ ಜತೆಗಿದ್ದೂ ಇಲ್ಲದ ಜೀವನ ಅವಳದ್ದು. ಪತಿಯ ಮರಣದ ನಂತರ ದನಕರುಗಳ ಹಿಂಡಿನೊಂದಿಗೆ ಅಲೆಮಾರಿ ಜೀವನ ನಡೆಸಿದ ರಿದ್ಧಿಬಾಯಿ ಕಡೆಗೆ ನೆಲೆಸಿದ್ದು ಬಿಕನೇರ್ ಸಮೀಪದ ದೇಶ್ನೋಕ್‍ನಲ್ಲಿ. ಅಷ್ಟರಲ್ಲಾಗಲೇ ಜನಸಾಮಾನ್ಯರಿಗೆ ಮಾಡಿದ ಹಲವು ಸಹಾಯ, ನಡೆಸಿದ ಪವಾಡಗಳಿಂದ ಆಕೆ ಪ್ರಸಿದ್ಧಳಾಗಿದ್ದಳು.

ಕಾರ್ನಿ ಮಾತೆಯ ಮಲಮಕ್ಕಳಲ್ಲಿ (ಸೋದರಿ ಗುಲಾಬ್‍ಳ ಮಗ) ಒಬ್ಬನಾದ ಲಕ್ಷ್ಮಣ ಕಾರ್ತಿಕದಲ್ಲಿ ನಡೆಯುವ ಜಾತ್ರೆಯಲ್ಲಿ ಭಾಗವಹಿಸಿದ್ದ. ಆಗ ನೀರು ಕುಡಿಯಲು ಬಿಕನೇರ್‍ನ ಸರೋವರದಲ್ಲಿ ಬಗ್ಗಿದಾಗ ಬಿದ್ದು ಅಸುನೀಗಿದ. ತಾಯಿ ಗುಲಾಬ್ ಶೋಕಿಸತೊಡಗಿದಳು. ಆತನನ್ನು ಬದುಕಿಸಲು ಕಾರ್ನಿಮಾತೆ ಲಕ್ಷ್ಮಣನ ಶವವನ್ನು ತೆಗೆದುಕೊಂಡು ತನ್ನ ಕೋಣೆಯಲ್ಲಿ ಒಬ್ಬಳೇ ಗಂಟೆಗಟ್ಟಲೇ ಕುಳಿತಳು. ಕೋಣೆಯಲ್ಲಿ ಆಕೆ ಮತ್ತು ಯಮನ ಮಾತುಕತೆ ನಡೆಯಿತು ಎನ್ನಲಾಗುತ್ತದೆ. ಆತನನ್ನು ಬದುಕಿಸುವುದು ಸೃಷ್ಟಿನಿಯಮಕ್ಕೆ ವಿರುದ್ಧವಾದುದು ಎಂದು ಯಮ ವಾದಿಸಿದ. ಅಷ್ಟರಲ್ಲಾಗಲೇ ಲಕ್ಷ್ಮಣ ಇಲಿಯಾಗಿ ಮರು ಜನ್ಮವೆತ್ತಿದ್ದ. ಅಂದಿನಿಂದ ಯಮ ಮತ್ತು ಕಾರ್ನಿ ಮಾತೆಯ ನಡುವೆ ಒಪ್ಪಂದ ಏರ್ಪಟ್ಟಿತ್ತು. ಕಾರ್ನಿ ಮಾತೆಯ ವಂಶಸ್ಥರು ಇಲಿಗಳಾಗಿ ಜನ್ಮ ತಾಳಿ ಮತ್ತೆ ಮಾನವ ಜನ್ಮ ತಾಳುತ್ತಾರೆ ಎಂದು ನಂಬಲಾಗಿದೆ.

ಹಾಗಾಗಿಯೇ ಕಾರ್ನಿ ಮಾತೆಯ ರಕ್ಷಣೆಯುಳ್ಳ ಇಲ್ಲಿನ ಇಲಿಗಳಿಗೆ ಪೂಜೆ ಸಲ್ಲುತ್ತದೆ. ಪವಾಡಗಳ ಜತೆ ಅನೇಕ ಯುದ್ಧ-ಜಗಳಗಳನ್ನು ನಿಲ್ಲಿಸಿದ ಕೀರ್ತಿಯೂ ಈಕೆಗಿದೆ. ರಾತೋರ್ ಮತ್ತು ಭಾಟಿ ಕುಟುಂಬಗಳ ನಡುವಿನ ವೈಷಮ್ಯ ಪರಿಹರಿಸಲು ಆ ಎರಡೂ ಕುಟುಂಬಗಳ ನಡುವೆ ವಿವಾಹವನ್ನು ಈಕೆ ಏರ್ಪಡಿಸಿದ್ದಳು. ಆಕೆಯ ಅಪಾರ ಶಕ್ತಿ ಮನಗಂಡಿದ್ದ ದೊರೆಗಳು ಬಿಕನೇರ್ ಮತ್ತು ಮೆಹ್ರಾನ್ ಘರ್ ಕೋಟೆಗಳ ಶಂಕುಸ್ಥಾಪನೆಯನ್ನು ಆಕೆಯಿಂದಲೇ ಮಾಡಿಸಿದ್ದರು. ಇಡೀ ರಾಜಸ್ತಾನವನ್ನೆಲ್ಲಾ ತನ್ನ ಅನುಯಾಯಿಗಳೊಂದಿಗೆ ಸಂಚಾರ ಮಾಡುತ್ತಿದ್ದ ಕಾರ್ನಿಮಾತೆ, 1538 ರಲ್ಲಿ ಜೈಸಲ್ಮೇರಿನ ಮಹಾರಾಜರನ್ನು ಭೇಟಿಯಾಗಿದ್ದಳು. ಅದೇ ಮಾರ್ಚ್‍ನಲ್ಲಿ ಮರಳಿ ದೇಶ್ನೋಕ್‍ಗೆ ಮಲಮಗನಾದ ಪೂಂಜಾರ್ ಜತೆ ಪ್ರಯಾಣ ಬೆಳೆಸಿದ್ದಳು. ಗಡಿಯಾಲಾ ಮತ್ತು ಗಿರಿರಾಜಸಾಗರದ ಹತ್ತಿರದಲ್ಲಿದ್ದರು. ದಾಹ ಪರಿಹಾರಕ್ಕೆ ಗಾಡಿಗಳನ್ನು ನಿಲ್ಲಿಸುವ ಆದೇಶ ನೀಡಿದಳು. ಅದೇ ಕಡೆ ಆಕೆಯನ್ನು ಜನರು ನೋಡಿದ್ದು. ಕಾರ್ನಿಮಾತಾ ಅದೇ ಸ್ಥಳದಲ್ಲಿ ತನ್ನ ನೂರಾಐವತ್ತನೇ ವರ್ಷದಲ್ಲಿ ಕಣ್ಮರೆಯಾದಳು ಎನ್ನಲಾಗುತ್ತದೆ. ತಮ್ಮ ಕಷ್ಟ ಪರಿಹಾರದ ಜತೆ ವಿಶೇಷವಾಗಿ ದನಕರುಗಳು ಮತ್ತು ಕೃಷ್ಣಮೃಗಗಳ ರಕ್ಷಣೆ ಮಾಡುವ ಕಾರ್ನಿ ಮಾತೆ ಎಂದರೆ ಇಲ್ಲಿನ ಜನರಿಗೆ ಪೂಜ್ಯ ಭಾವವಿದೆ. ಮತಾನಿಯಾ, ಉದಯಪುರ್ ಮತ್ತು ಆಲ್ವಾರ್‍ಗಳಲ್ಲಿ ಕಾರ್ನಿ ಮಾತೆಯ ದೇಗುಲಗಳಿದ್ದರೂ ದೇಶ್ನೋಕ್‍ನಲ್ಲಿರುವ ಈ ದೇಗುಲ ಅತ್ಯಂತ ವಿಶಿಷ್ಟ ಮತ್ತು ಪ್ರಸಿದ್ಧ.

ಕಬ್ಬಾಗಳು

ಇಲಿಗಳ ದೇವಸ್ಥಾನ ಎಂದೇ ಪ್ರಖ್ಯಾತವಾಗಿರುವ ಇಲ್ಲಿ ಒಟ್ಟು ಇಪ್ಪತ್ತು ಸಾವಿರ ಇಲಿಗಳಿವೆ. ಹೊರಗಿನ ಅಂಗಳದಲ್ಲಿ ಅಲ್ಲಲ್ಲಿ ಸುರಂಗ -ಬಿಲಗಳನ್ನು ಕಾಣಬಹುದು. ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತರವರೆಗೆ ದೇವಸ್ಥಾನ ತೆರೆದಿರುತ್ತದೆ. ಸಾಮಾನ್ಯವಾಗಿ ಮನುಷ್ಯರನ್ನು ಕಂಡರೆ ಇಲಿಗಳು ಓಡುತ್ತವೆ. ಇಲ್ಲಿ ಹಾಗಲ್ಲ, ಹೆದರಿಕೆ ಇಲ್ಲದೆ ಸಂಚರಿಸುತ್ತವೆ. ಇವುಗಳಿಗಿಲ್ಲಿ ರಾಜಮರ್ಯಾದೆ. `ಕಬ್ಬಾ’ (ಪುಟ್ಟ ಮಕ್ಕಳು) ಎಂದು ಕರೆಯುವುದಷ್ಟೇ ಅಲ್ಲ ಹಾಗೇ ಪ್ರೀತಿಯಿಂದ ಕಾಣುತ್ತಾರೆ. ಭಕ್ತಾದಿಗಳು ದೊಡ್ಡ ದೊಡ್ಡ ಬಟ್ಟಲುಗಳಲ್ಲಿ ಹಾಲು, ಲಡ್ಡು, ಕಾಳುಗಳನ್ನು ನೈವೇದ್ಯವಾಗಿ ಇಡುತ್ತಾರೆ. ಗುಂಪುಗುಂಪಾಗಿ ಇಲಿಗಳು ಇದನ್ನು ಕುಡಿದು-ತಿನ್ನುತ್ತವೆ. ಅವು ತಿಂದು ಬಿಟ್ಟ ತಿಂಡಿ-ಹಾಲನ್ನು ಪ್ರಸಾದ ಎಂದು ಭಕ್ತಿಯಿಂದ ಭಕ್ತರು ಸ್ವೀಕರಿಸುತ್ತಾರೆ. ಅಕಸ್ಮಾತ್ ಕಾಲಿನ ಮೇಲೆ ಇಲಿ ಓಡಾಡಿದರೆ ಅದು ಆಶೀರ್ವಾದ ಎಂದು ಹರ್ಷಿಸುತ್ತಾರೆ. ಸಾವಿರಾರು ಕಂದು-ಕಪ್ಪು ಬಣ್ಣದ ಇಲಿಗಳಲ್ಲಿ ಬಿಳಿ ಇಲಿಗಳು ಐದಾರು ಅಷ್ಟೇ. ಇವಂತೂ ಕಣ್ಣಿಗೆ ಬಿದ್ದರೇ ಅದೃಷ್ಟ ಎಂಬುದು ದೃಢ ನಂಬಿಕೆ.

ಇಪ್ಪತ್ತು ಸಾವಿರ ಇಲಿಗಳಿದ್ದರೂ ಮರಿ ಇಲಿಗಳು ಇಲ್ಲವೇ ಇಲ್ಲ! ಶೀಘ್ರ ಸಂತಾನೋತ್ಪತ್ತಿಗೆ ಹೆಸರುವಾಸಿಯಾದ ಇಲಿಗಳಲ್ಲಿ ಹೀಗಿರುವುದಕ್ಕೆ ಅವು ವಿಶೇಷ ಇಲಿಗಳು ಎಂದು ಹೇಳಲಾಗುತ್ತದೆ. ಆಹಾರ ಸಮೃದ್ಧಿಯಾಗಿ ಸಿಕ್ಕರೂ ಒಂದೇ ಗಾತ್ರ, ರೂಪ ಹಾಗೂ ನಿರ್ದಿಷ್ಟ ಸಂಖ್ಯೆಯ ಇಲಿಗಳು ಐದು ನೂರು ವರ್ಷಗಳಿಂದ ಹಾಗೇ ಇವೆ ಎಂದು ಹಿರಿಯರು ಹೇಳುವುದು ಅಚ್ಚರಿ ಮೂಡಿಸುತ್ತದೆ. ಇಲಿಯೊಂದು ಸತ್ತರೆ ಸುತ್ತಲಿರುವ ಕಾರ್ನಿ ಮಾತೆ ವಂಶಸ್ಥರಲ್ಲಿ ಮಗುವೊಂದು ಜನಿಸುವುದು ಕಾಕತಾಳೀಯವೋ, ಪವಾಡವೋ ಗೊತ್ತಿಲ್ಲ! ಇಲಿಗಳು ಎಂದರೆ ಸಾಮಾನ್ಯವಾಗಿ ಪ್ಲೇಗ್ ಮಾರಿಯ ಜತೆ ತಳುಕು ಹಾಕಲಾಗುತ್ತದೆ. ಆದರೆ ಇಷ್ಟು ವರ್ಷಗಳ ಇತಿಹಾಸದಲ್ಲಿ ಈ ಪ್ರದೇಶದಲ್ಲಿ ಒಮ್ಮೆಯೂ ಪ್ಲೇಗ್ ಬಂದಿಲ್ಲ. ಬದಲಾಗಿ ಬೇರೆ ಕಡೆ ಬಂದಾಗಲೂ ಇಲ್ಲಿನ ಜನ ಮಾತ್ರ ಸುರಕ್ಷಿತವಾಗಿದ್ದಾರೆ! ಇಲಿಗಳು ಬಿಟ್ಟ ಪ್ರಸಾದ ಸೇವಿಸಿದ ಜನರು, ಆಟವಾಡಿದ ಮಕ್ಕಳು ಯಾರಿಗೂ ಏನೂ ತೊಂದರೆಯಾಗಿಲ್ಲ! ತಮ್ಮನ್ನು ಕಾಪಾಡುವ ಕಾರ್ನಿಮಾತೆಯ ಅಂಶವುಳ್ಳ ಈ ಇಲಿಗಳೆಂದರೆ ಜನರಿಗೆ ಎಲ್ಲಿಲ್ಲದ ಭಯ-ಭಕ್ತಿ. ಅವುಗಳಿಗೆ ತೊಂದರೆಯಾಗದಂತೆ ಆಹಾರ ನೀರಂತೂ ಸರಿ, ರಕ್ಷಣೆಗಾಗಿ ಇಡೀ ದೇವಸ್ಥಾನದ ಸುತ್ತ ಕಂಬಿ, ಜಾಲರಿಯ ವ್ಯವಸ್ಥೆ ಮಾಡಲಾಗಿದೆ.ಹಾಗೆಯೇ ಇಷ್ಟೊಂದು ಇಲಿಗಳನ್ನು ಕಂಡು ಹೆದರಿ ಓಡಿ ಅವೇನಾದರೂ ಸತ್ತರೆ ಅಷ್ಟೇ ತೂಕದ ಬೆಳ್ಳಿ / ಬಂಗಾರದ ಇಲಿಯನ್ನು ಪ್ರಾಯಶ್ಚಿತ್ತವಾಗಿ ತೆರಬೇಕು. ಹಾಗಾಗಿ ನಿಧಾನವೇ ಪ್ರಧಾನ!

ವರ್ಷಕ್ಕೆ ಎರಡು ಬಾರಿ ಏಪ್ರಿಲ್ ಹಾಗೂ ನವೆಂಬರ್‍ನಲ್ಲಿ ಕಾರ್ನಿ ಮಾತೆಯ ಜಾತ್ರೆ ನಡೆದಾಗ ಇಲ್ಲಿ ಎಲ್ಲೆಡೆಯಿಂದ ಜನ ಸೇರುತ್ತಾರೆ. ಸಾಮಾನ್ಯವಾಗಿ ತಿರಸ್ಕಾರ-ದೂಷಣೆಗೆ ಒಳಗಾಗುವ ಇಲಿಗಳಿಗೆ ಪೂಜೆ ಸಲ್ಲುವ ಪರಿ ಅಚ್ಚರಿ ಮೂಡಿಸುತ್ತದೆ. ಮಗನನ್ನು ಬದುಕಿಸಲು ಹಠ ಹಿಡಿದು ಆನೆಮೊಗದವನನ್ನು ಮಾಡಿದ ಜಗನ್ಮಾತೆ, ತನ್ನ ಮಕ್ಕಳನ್ನು ಇಲಿಗಳನ್ನಾಗಿ ಕಾಯ್ದ ಕಾರ್ನಿ ಮಾತೆ ಹೀಗೆ ತಾಯಿಗಿರುವ ಶಕ್ತಿಯ ಜತೆಗೇ ‘ಯಾ ದೇವಿ ಸರ್ವ ಭೂತೇಷು ಮಾತೃರೂಪೇಣ ಸಂಸ್ಥಿತ’ ಎನ್ನುವ ದೇವಿಸ್ತುತಿ ನೆನಪಾಗಿತ್ತು. ಅಂತೂ ಜಗತ್ತಿನಲ್ಲೇ ವಿಶಿಷ್ಟವಾದ ಈ ದೇವಾಲಯ ನೋಡಿ ಬರುವಾಗ ಪ್ರೀತಿ ಮತ್ತು ಭಕ್ತಿಗಿರುವ ಶಕ್ತಿಯ ಬಗ್ಗೆ ಮನಸ್ಸಿನ ಒಳಗೆಲ್ಲಾ ಬೆರಗು!

ಡಾ. ಕೆ.ಎಸ್. ಚೈತ್ರಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *