Uncategorizedಅಂಕಣ

ಲೋಕದ ಕಣ್ಣು / ಕಾಮಾಖ್ಯ : ಮುಟ್ಟು ಇಲ್ಲಿ ಮಾನ್ಯ – ಡಾ. ಕೆ.ಎಸ್. ಚೈತ್ರಾ


ಭಾರತದಲ್ಲಿರುವ ಐವತ್ತೊಂದು ಶಕ್ತಿ ಪೀಠಗಳಲ್ಲಿ ಅಸ್ಸಾಮಿನ ರಾಜಧಾನಿ ಗುವಾಹತಿಯ ಪಶ್ಚಿಮದಲ್ಲಿರುವ ಕಾಮಾಖ್ಯ ದೇವಸ್ಥಾನ ಅತ್ಯಂತ ಪ್ರಮುಖವಾಗಿದೆ. ಭಕ್ತರೆಲ್ಲರೂ ಈ ದೇವಿಯ ಮುಟ್ಟು ಪವಿತ್ರ ಎಂದು ನಮಿಸುವಾಗ ಅಲ್ಲಿ ನಡೆಯುವುದು ಮಾತೃತ್ವದ ಆರಾಧನೆ. ಜೀವ ಸೃಷ್ಟಿಗೆ ನೆರವಾಗುವ ಸಹಜಕ್ರಿಯೆ ಮತ್ತು ಅಂಗಕ್ಕೆ ಪೂಜೆ! ಆದರೆ ದೇಗುಲದ ಕಲ್ಲಿನ ದೇವಿಯ ಮುಟ್ಟು ಪವಿತ್ರ, ಆಕೆಯ ಅಂಶವೇ ಆಗಿರುವ ರಕ್ತ ಮಾಂಸಗಳಿಂದ ಕೂಡಿದ ಜೀವಂತ ದೇವಿಯರ ಸ್ಥಿತಿ? ಅಸ್ಸಾಮಿನಲ್ಲಿ ಋತುಸ್ರಾವಕ್ಕೆ ಅನೇಕ ಕಟ್ಟುಪಾಡುಗಳಿದ್ದು ಅವುಗಳನ್ನು ಈಗಲೂ ಪಾಲಿಸಲಾಗುತ್ತದೆ.


ಹಸಿರಿನ ನಡುವೆ ಅಂಕುಡೊಂಕಿನ ಕಿರಿದಾದ ದಾರಿಯಲ್ಲಿ ನಮ್ಮಕಾರು ಬುಸು ಬುಸು ಎನ್ನುತ್ತಾ ನಿಧಾನವಾಗಿ ಚಲಿಸುತ್ತಿತ್ತು. ದೇಗುಲ ಎಲ್ಲಿದೆಎಂದು ಹುಡುಕುವಾಗ ಕಣ್ಣಿಗೆ ಬಿದ್ದದ್ದು ಒತ್ತಾಗಿ ಅಂಟಿಕೊಂಡಂತಿರುವ ಸಾಲು ಸಾಲು ಅಂಗಡಿಗಳು. ಕವಳ ತಿನ್ನುತ್ತಾ ಅಲ್ಲಲ್ಲೇ ಉಗುಳುತ್ತಾ ಅಗಲ ಮುಖ, ಕೆಂಪು ತುಟಿ-ಕಪ್ಪು ಹಲ್ಲಿನ ಅಸ್ಸಾಮಿಗಳು ಯಾವುದೇ ಗಡಿಬಿಡಿಯಿಲ್ಲದೇ ವ್ಯಾಪಾರಕ್ಕೆ ಸಿದ್ಧರಾಗುತ್ತಿದ್ದರು. ಚೆಂದದ ಕಾಟನ್‍ ಸೀರೆ ( ಮೇಖಲಾ ಛದ್ದರ್) ಹಣೆಯಲ್ಲಿ ದೊಡ್ಡ ಕಡುಕೆಂಪು ಬಣ್ಣದ ಕುಂಕುಮ ಧರಿಸಿ ಅತ್ತಿತ್ತ ಸುಳಿದಾಡುತ್ತಿದ್ದ ಅಸ್ಸಾಮಿ ಚೆಲುವೆಯರನ್ನು ನೋಡುತ್ತಾ ‘ನಮ್ಮಲ್ಲಿಯೂಶಾರದೆ, ಚಾಮುಂಡಿ, ಮೂಕಾಂಬಿಕೆ– ಹೀಗೆ ಸಾಕಷ್ಟು ದೇವಿ ಮಂದಿರಗಳಿವೆ’ ಎಂದೆ ನಾನು. ‘ನಿಮ್ಮಲ್ಲಿ ಮಾತ್ರವಲ್ಲ, ದೇವಿಮಾ ಎಲ್ಲೆಡೆ ಇದ್ದಾಳೆ; ಆದರೆ ಈ ಬೆಟ್ಟದ ಮೇಲಿರುವ ನಮ್ಮ ಕಾಮಾಖ್ಯ ಬಹಳ ವಿಶೇಷ. ಬೇರೆಲ್ಲೂ ಇರದ ಯೋನಿ ಮುದ್ರಾರೂಪದ ದೇವಿಯ ಪೀಠಇದು.ಇಲ್ಲಿ ಮುಟ್ಟು ಮೈಲಿಗೆಯಲ್ಲ; ಬದಲಿಗೆ ಜೀವಿಗಳ ಹುಟ್ಟಿಗೆ ಕಾರಣವಾಗುವ ಯೋನಿ, ಋತುಚಕ್ರ, ಸ್ರಾವ ಎಲ್ಲವೂ ಪರಮಪವಿತ್ರ’ ಎಂದು ತರುಣ್ ವಿವರಿಸುತ್ತಿದ್ದರೆ ನಮಗೆ ಎಲ್ಲಿಲ್ಲದ ಆಶ್ಚರ್ಯ. ಏಕೆಂದರೆ ಮುಟ್ಟು ಎಂದೊಡನೆ ಮೈಲಿಗೆ, ದೇವಸ್ಥಾನ ಪ್ರವೇಶಿಸುವಂತಿಲ್ಲ ಎಂಬೆಲ್ಲಾ ಕಟ್ಟುಪಾಡು ಕೇಳಿ, ನೋಡಿ, ಅನುಭವಿಸಿದವರು ನಾವು. ಹೀಗಿರುವಾಗ ಒಳಗಿರುವ ದೇವಿಗೇ ಮುಟ್ಟು ! ಹೋಗಲಿ ದೇವಿಯೂ ಹೆಣ್ಣು, ಮುಟ್ಟು ಸರಿ… ಅದನ್ನು ಪೂಜಿಸುವುದು !! ಇದುವರೆಗೆ ಕೇಳದ ವಿಷಯವಲ್ಲವೇ?

ಅಸ್ಸಾಮಿನ ರಾಜಧಾನಿ ಗುವಾಹತಿಯ ಪಶ್ಚಿಮದಲ್ಲಿರುವ ಕಾಮಾಖ್ಯ ದೇವಸ್ಥಾನ, ಪ್ರಸಿದ್ಧ ಪ್ರವಾಸಿ ತಾಣ ಮತ್ತು ಪ್ರಮುಖ ಧಾರ್ಮಿಕ ಕೇಂದ್ರವೂ ಹೌದು. ತಾಂತ್ರಿಕ ದೇವತೆಯಾದ ಕಾಮಾಖ್ಯದೇವಿಯನ್ನು ಕಾಳಿ, ಮಹಾಮಾಯಾ ಎಂದೂ ಕರೆಯಲಾಗುತ್ತದೆ. ಕಾಳಿಕಾ ಪುರಾಣ ಮತ್ತು ಯೋಗಿನಿ ತಂತ್ರಕ್ಕೆ ಬದ್ಧವಾಗಿ ಈ ದೇವಸ್ಥಾನದಲ್ಲಿ ಪೂಜೆಯನ್ನು ನಡೆಸಲಾಗುತ್ತದೆ. ಗಾರೋ ಬೆಟ್ಟದ ಮೇಲಿದ್ದ ಪ್ರಾಚೀನ ದೇವಸ್ಥಾನ ನಾಶವಾದಾಗ ಅಲ್ಲಿಂದ ದೇವಿಯ ವಿಗ್ರಹವನ್ನು ಅರ್ಚಕರು ಕಾಶ್ಮೀರಕ್ಕೆ ಒಯ್ದು ನಂತರ ಹಿಮಾಚಲದಲ್ಲಿ ಪ್ರತಿಷ್ಠಾಪಿಸಿದರು ಎನ್ನಲಾಗುತ್ತದೆ. ಈಗಿರುವ ದೇವಸ್ಥಾನವನ್ನು 1645 ರಲ್ಲಿಕ ಟ್ಟಿಸಲಾಗಿದೆ. ಅಸ್ಸಾಮನ್ನು ಆಳಿದ ಅಹೋಂ ರಾಜವಂಶಸ್ಥರು ಮತ್ತು ಇತರರು ಈ ದೇವಿಯ ಭಕ್ತರಾಗಿದ್ದ ಕಾರಣ ದೇವಿಗೆ ಎಲ್ಲಿಲ್ಲದ ಮಹತ್ವ ದೊರೆಯಿತು.

ಪುರಾಣಕಥೆ

ಭಾರತದಲ್ಲಿರುವ ಐವತ್ತೊಂದು ಶಕ್ತಿ ಪೀಠಗಳಲ್ಲಿ ಇದು ಅತ್ಯಂತ ಪ್ರಮುಖವಾಗಿದೆ. ಇದಕ್ಕೆ ಕಾರಣ ಪುರಾಣ ಕಥೆ. ದಕ್ಷ ಮಹಾರಾಜನ ಪ್ರೀತಿಯ ಮಗಳು ಸತಿ. ಆಕೆ ತಂದೆಯ ಇಷ್ಟಕ್ಕೆ ವಿರುದ್ಧವಾಗಿ ಸ್ಮಶಾನವಾಸಿ ಶಿವನನ್ನು ಮೆಚ್ಚಿ ಮದುವೆಯಾಗುತ್ತಾಳೆ. ಹೀಗಾಗಿ ದಕ್ಷ ಮಹಾಯಜ್ಞ ನಡೆಸಿದಾಗ ಅವರಿಬ್ಬರಿಗೆ ಆಮಂತ್ರಣ ನೀಡುವುದಿಲ್ಲ. ಆದರೂ ತಂದೆಯ ಮೇಲಿನ ಪ್ರೀತಿಯಿಂದ ಸತಿ ಶಿವನ ಇಚ್ಛೆ ಮೀರಿ ತಾನೊಬ್ಬಳೇ ಯಜ್ಞದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಾಳೆ. ಸತಿಯನ್ನು ಆದರಿಸದ ದಕ್ಷ, ಆಕೆಯೆದುರು ಶಿವನನ್ನೂ ಮೂದಲಿಸುತ್ತಾನೆ. ಪತಿಯ ಅಪಮಾನ ಸಹಿಸಲಾರದ ಸತಿ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಇದರಿಂದ ಕ್ರೋಧಿತನಾದ ಶಿವ ಅಲ್ಲಿಗೆ ಬಂದು ಸತಿಯ ದೇಹ ಹೊತ್ತು ರೌದ್ರತಾಂಡವವನ್ನು ಮಾಡುತ್ತಾನೆ. ಇದನ್ನು ನಿಲ್ಲಿಸಲು ವಿಷ್ಣು ತನ್ನ ಸುದರ್ಶನ ಚಕ್ರವನ್ನು ಬೀಸಿ ಸತಿಯ ದೇಹವನ್ನು ತುಂಡರಿಸುತ್ತಾನೆ. ಸತಿಯ ದೇಹ ಐವತ್ತೊಂದು ತುಂಡುಗಳಾಗಿ ಭೂಮಿಯ ವಿವಿಧೆಡೆ ಬೀಳುತ್ತದೆ. ಆಕೆಯ ಯೋನಿ ಬಿದ್ದ ಸ್ಥಳ ಪರ್ವತವಾಗಿದ್ದು ನೀಲ ಬಣ್ಣಕ್ಕೆ ತಿರುಗುತ್ತದೆ. ಅದೇ ಅಸ್ಸಾಮಿನ ನೀಲಾಚಲ ಪರ್ವತ.

ಬಲಿ ನೀಡುವಿಕೆ

ಮೂಲ ದೇಗುಲ ಕಲ್ಲಿನಲ್ಲಿ ಕಟ್ಟಿರುವಂಥದ್ದು. ಆದರೆ ಸುತ್ತಲೂ ಇತರ ರಾಜರು ಕಟ್ಟಿಸಿದ ಅನೇಕ ದೇಗುಲಗಳ ಸಮುಚ್ಚಯವಿದೆ. ದೇವಾಲಯವನ್ನು ಅರ್ಧಗೋಳ ಗುಮ್ಮಟಾಕಾರವಾಗಿದ್ದು ನಾಲ್ಕು ಭಾಗಗಳನ್ನು (ಗರ್ಭಗೃಹ, ಮೂರು ಮಂಟಪಗಳಿಂದ ಕೂಡಿದ ಕಲಂತ, ಪಂಚರತ್ನ ಮತ್ತು ನಟಮಂದಿರ) ಹೊಂದಿದೆ. ತಾಂತ್ರಿಕ ವಿದ್ಯೆಯ ಮಹಾ ಕೇಂದ್ರವಾದ್ದರಿಂದ ದೇವಸ್ಥಾನದ ಹೊರ ಆವರಣದಲ್ಲಿ ಬಲಿ ಆಚರಣೆ ರೂಢಿಯಲ್ಲಿದೆ. ಅದರಲ್ಲಿಯೂ ದೇವಿಗೆ ಕಪ್ಪು ಬಣ್ಣ ಇಷ್ಟವಾದ್ದರಿಂದ ಕಪ್ಪು ಬಣ್ಣದ ಗಂಡು ಪ್ರಾಣಿಗಳನ್ನು ಹೆಚ್ಚಾಗಿ ಬಲಿ ನೀಡಲಾಗುತ್ತದೆ. ಪಾರಿವಾಳ, ಮೇಕೆ, ಆಡುಗಳ ಬಲಿ ದಿನವೂ ನಡೆದರೆ ವಿಶೇಷ ಸಂದರ್ಭಗಳಲ್ಲಿ ಹೋರಿಯನ್ನೂ ಬಲಿ ನೀಡಲಾಗುತ್ತದೆ. ಹೀಗೆ ಬಲಿಯಾದ ಪ್ರಾಣಿಗಳ ಮಾಂಸವನ್ನು ಪ್ರಸಾದ ಎಂದು ಸೇವಿಸಲಾಗುತ್ತದೆ.

ಮೂರ್ತಿಯೇ ಇಲ್ಲದ ಗರ್ಭಗುಡಿ!

ಪುರಾಣಗಳ ಪ್ರಕಾರ ಕಾಮಾಖ್ಯದೇವಿ ಷೋಡಶಿ. ಆರು ತಲೆ, ಹನ್ನೆರಡು ಕೈಗಳಿರುವ ಆಕೆ, ಸಿಂಹದ ಮೇಲೆ ಮಲಗಿದ ಶಿವನ ಹೊಕ್ಕುಳಿನಿಂದ ಅರಳಿದ ಕಮಲದ ಹೂವಿನಲ್ಲಿ ಕುಳಿತಿರುತ್ತಾಳೆ. ಆದರೆ ಇದಕ್ಕೆ ಅನುಗುಣವಾದ ದೇವಿಯ ವಿಗ್ರಹ ಗರ್ಭಗುಡಿಯಲ್ಲಿಲ್ಲ. ಅಲ್ಲಿರುವುದು ದೇವಿಯ ಯೋನಿಯನ್ನು ಸಂಕೇತಿಸುವ ಶಿಲಾಪೀಠ ಮಾತ್ರ. ಶಿಲೆಯ ಒಳಗಿನಿಂದ ಹರಿಯುವ ನೈಸರ್ಗಿಕ ನೀರಿನ ಬುಗ್ಗೆ ಸದಾ ಈ ಪೀಠವನ್ನು ತೇವವಾಗಿರಿಸುತ್ತದೆ. ರೇಷ್ಮೆ ವಸ್ತ್ರದಿಂದ ಮುಚ್ಚಿದ ಈ ಪೀಠವನ್ನು ಭಕ್ತರು ಮುಟ್ಟಿ ಹೂವು, ಕುಂಕುಮ, ಬಿಲ್ಪತ್ರೆಗಳಿಂದ ಪೂಜಿಸುತ್ತಾರೆ. ಕಾಮಾಖ್ಯದೇವಿಯ ಜತೆ ಲಿಂಗ ಸ್ವರೂಪಿಯಾದ ಉಮಾನಂದ (ಶಿವನ) ದರ್ಶನ ಪಡೆದರೆ ಮಾತ್ರ ಸಂಪೂರ್ಣ ಫಲ ಪ್ರಾಪ್ತಿ ಎಂಬುದು ರೂಢಿಯಲ್ಲಿರುವ ಮಾತು. ಭಕ್ತರೆಲ್ಲರೂ ಈ ಯೋನಿಮುದ್ರೆಗೆ ನಮಿಸುವಾಗ ಅಲ್ಲಿ ನಡೆಯುವುದು ಮಾತೃತ್ವದ ಆರಾಧನೆ. ಜೀವ ಸೃಷ್ಟಿಗೆ ನೆರವಾಗುವ ಸಹಜಕ್ರಿಯೆ ಮತ್ತು ಅಂಗಕ್ಕೆ ಪೂಜೆ! ಹಾಗೆಯೇ ಪ್ರಕೃತಿ ಪುರುಷರಿಬ್ಬರೂ ಭಿನ್ನರಾದರೂ, ಮುಖ್ಯವೇ. ಇಬ್ಬರ ಮಿಲನದಿಂದ ಸೃಷ್ಟಿ , ಪೂರ್ಣ ಫಲ ಎಂಬುದನ್ನು ವಿವರಿಸುತ್ತದೆ.

ಅಪೂರ್ಣ ಮೆಟ್ಟಿಲುಗಳು

ನೀಲಾಚಲ ಪರ್ವತಕ್ಕೆ ಬರುವ ಹಾದಿಯಲ್ಲಿ ಅಪೂರ್ಣವಾದ ಮೆಟ್ಟಿಲುಗಳನ್ನು ಕಾಣಬಹುದು. ಇದರ ಹಿಂದೆ ನರಕಾಸುರನ ಕಥೆಯಿದೆ. ನರಕಾಸುರನೆಂಬ ರಾಕ್ಷಸ, ಕಾಮಾಖ್ಯ ದೇವಿಯ ಅಪ್ರತಿಮ ಸೌಂದರ್ಯಕ್ಕೆ ಮರುಳಾಗಿ ತನ್ನನ್ನು ಮದುವೆಯಾಗು ಎಂದು ಕೋರಿದ. ದೇವಿ ಸುಮ್ಮನೇ ಹುಡುಗಾಟಕ್ಕಾಗಿ ದೇವಸ್ಥಾನವಿರುವ ನೀಲಾಚಲ ಪರ್ವತಕ್ಕೆ ಕೆಳಗಿನಿಂದ ತುದಿಯವರೆಗೆ ಒಂದೇ ರಾತ್ರಿಯಲ್ಲಿ ಮೆಟ್ಟಿಲುಗಳನ್ನು ಕಟ್ಟಿದರೆ ಮದುವೆಯಾಗುವ ಶರತ್ತು ಒಡ್ಡುತ್ತಾಳೆ. ಇದಕ್ಕೊಪ್ಪಿದ ನರಕಾಸುರ ಕೂಡಲೇ ಅತ್ಯುತ್ಸಾಹದಿಂದ ಮೆಟ್ಟಿಲುಗಳ ನಿರ್ಮಾಣದಲ್ಲಿ ತೊಡಗುತ್ತಾನೆ. ನಸುಕು ಹರಿಯುವ ಮುನ್ನ ದೇವಿ ಅಸಾಧ್ಯವಾದ ಕೆಲಸ ಎಂದು ಸುಮ್ಮನೇ ನೋಡಿದರೆ ನರಕಾಸುರ ಮೆಟ್ಟಿಲುಗಳನ್ನು ಮುಗಿಸುವ ಹಂತದಲ್ಲಿರುತ್ತಾನೆ. ಮುಂದಾಗಬಹುದಾದ ಅನಾಹುತ ಗ್ರಹಿಸಿ ದೇವಿ, ನಸುಕು ಹರಿಯುವ ಮುನ್ನವೇ ಕೋಳಿಯೊಂದನ್ನು ಕಳಿಸಿ ಕೂಗಿಸುತ್ತಾಳೆ. ಬೆಳಗಾಯಿತು, ತನ್ನ ಕೆಲಸ ಪೂರ್ಣವಾಗಲಿಲ್ಲ ಎಂದು ನರಕಾಸುರ ಹತಾಶನಾಗಿ ಕೈ ಚೆಲ್ಲುವಷ್ಟರಲ್ಲಿ ಬೆಳಕಾಗುತ್ತದೆ. ಶರತ್ತು ಸೋತ ನರಕಾಸುರನನ್ನು ದೇವಿ ತಿರಸ್ಕರಿಸುತ್ತಾಳೆ. ಈ ಅಪೂರ್ಣ ಮೆಟ್ಟಿಲುಗಳನ್ನು ಮೇಖೆಲೌಜಾ ಎಂದು ಕರೆಯಲಾಗುತ್ತದೆ. ಸಿಟ್ಟಿನಿಂದ ನರಕಾಸುರ ಕೋಳಿಯನ್ನು ಹುಡುಕಿ ಕೊಲ್ಲುತ್ತಾನೆ. ಈ ಸ್ಥಳ ಕುಕುರಾಕಟ ಎಂದು ಕರೆಯಲ್ಪಡುತ್ತದೆ.

ಅಂಬಾಬುಚಿ ಮೇಳ

ವರ್ಷಕ್ಕೊಮ್ಮೆ ಆಷಾಡದಲ್ಲಿ ನಡೆಯುವ ಈ ಮೇಳಕ್ಕೆ ಪೂರ್ವದ ಮಹಾಕುಂಭಮೇಳ ಎನ್ನುವ ಹೆಸರಿದೆ. ನಾಲ್ಕು ದಿನಗಳ ಕಾಲ ನಡೆಯುವ ಈ ಉತ್ಸವ ಕಾಮಾಖ್ಯ ದೇವಿ ವಾರ್ಷಿಕ ರಜಸ್ವಲೆಯಾಗುವುದನ್ನು ಸೂಚಿಸುತ್ತದೆ. ಮೂರು ದಿನಗಳ ಕಾಲ ದೇವಸ್ಥಾನ ಮುಚ್ಚಿದ್ದು ನಾಲ್ಕನೇ ದಿನ ತೆರೆಯಲಾಗುತ್ತದೆ. ಈ ನಾಲ್ಕೂ ದಿನಗಳು ದೇವಸ್ಥಾನದಲ್ಲೆಲ್ಲಾ ಕೆಂಪು ದಾಸವಾಳ, ಬಟ್ಟೆ, ಕುಂಕುಮದ ಅಲಂಕಾರ. ಅಂಗಬಸ್ತ್ರ ಮತ್ತು ಅಂಗೋದಕವನ್ನು ದೇವಿಯ ಪ್ರಸಾದವಾಗಿ ನೀಡಲಾಗುತ್ತದೆ. ಗರ್ಭಗುಡಿಯ ಯೋನಿಮುದ್ರೆಯ ಮೇಲಿನ ವಸ್ತ್ರ ಕೆಂಪುಬಣ್ಣದಾಗಿದ್ದು ದೇವಿಯ ಋತುಸ್ರಾವವನ್ನು ಸಂಕೇತಿಸುತ್ತದೆ. ಈ ಅಂಗಬಸ್ತ್ರದ ತುಂಡು ಸಿಕ್ಕರೆ ಮಹಾಪುಣ್ಯಎಂದು ಭಾವಿಸಿ ಮನೆಯಲ್ಲಿಟ್ಟು ಪೂಜಿಸಲಾಗುತ್ತದೆ. ಹಾಗೆಯೇ ದೇವಿಯ ದೇಹದ ದ್ರವ ಅಂಗೋದಕವೂ ಅತ್ಯಂತ ಶ್ರೇಷ್ಠ ಎಂದು ಭಕ್ತಿಯಿಂದ ಸೇವಿಸಲಾಗುತ್ತದೆ. ಈ ನಾಲ್ಕು ದಿನಗಳ ಸಮಯದಲ್ಲಿ ದೇವಿ ಅತ್ಯಂತ ಶಕ್ತಿಯುತಳಾಗಿರುತ್ತಾಳೆ ಎಂಬ ನಂಬಿಕೆ ಇರುವುದರಿಂದ ತಾಂತ್ರಿಕರು, ಸಿದ್ಧರು, ಸನ್ಯಾಸಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ವಿವಿಧ ಸಾಧನೆಗಳಲ್ಲಿ ತೊಡಗಿರುತ್ತಾರೆ. ಕಾಮಾಖ್ಯದೇವಿ ಮಾತ್ರವಲ್ಲ ಭೂಮಿತಾಯಿಯೂ ಹೆಣ್ಣು; ನಮ್ಮನ್ನೆಲ್ಲಾ ಪೊರೆಯುವ ಜೀವದಾಯಿನಿ. ಆಕೆಯ ಕ್ಷೇತ್ರವನ್ನು ಸೃಷ್ಟಿಕ್ರಿಯೆಗೆ ಅನುವು ಮಾಡುವ ಈ ಮೂರು ದಿನಗಳು ಪವಿತ್ರ ದಿನ ಎಂದು ಬೊಡೋ ಜನರು ನಂಬುವುದರಿಂದ ಆ ದಿನಗಳಲ್ಲಿ ಭೂಮಿಯನ್ನು ಅಗಿಯುವ, ಬಿತ್ತುವ ಕೆಲಸ ಮಾಡುವುದಿಲ್ಲ.

ಹೀಗೆ ಯೋನಿಮುದ್ರಾರೂಪದ ಕಾಮಾಖ್ಯ ದೇವಿಯನ್ನು ಪೂಜಿಸುವ ಅಸ್ಸಾಮಿನ ಕಾಮಾಖ್ಯ ದೇವಸ್ಥಾನ, ಅತ್ಯಂತ ಅಪರೂಪದ ಶಕ್ತಿಪೀಠ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ದೇಗುಲದ ಕಲ್ಲಿನ ದೇವಿಯ ಮುಟ್ಟು ಪವಿತ್ರ; ಆಕೆಯ ಅಂಶವೇ ಆಗಿರುವ ರಕ್ತ ಮಾಂಸಗಳಿಂದ ಕೂಡಿದ ಜೀವಂತ ದೇವಿಯರ ಸ್ಥಿತಿ? ಅಸ್ಸಾಮಿಯಲ್ಲಿ ಋತುಸ್ರಾವಕ್ಕೆ, ನುವಾರಾ (ಮಾಡುವಂತಿಲ್ಲ) ಸುವಾ (ಮುಟ್ಟುವಂತಿಲ್ಲ) ಮಹೆಕಿಯ (ಮಾಸಿಕ) ಎಂದೇ ಕರೆಯಲಾಗುತ್ತದೆ. ಅಡಿಗೆ ಮನೆ, ದೇವಸ್ಥಾನಗಳಿಗೆ ಹೋಗುವಂತಿಲ್ಲ. ಹಿರಿಯರಿಗೆ, ಅತಿಥಿಗಳಿಗೆ ಊಟ ಬಡಿಸುವಂತಿಲ್ಲ, ಪುರುಷರನ್ನು ನೋಡುವಂತಿಲ್ಲ. ಪ್ರತ್ಯೇಕ ಹಾಸಿಗೆ ಮೇಲೆ ಮಲಗಬೇಕು, ತುಳಸಿ ಗಿಡವನ್ನು ಮುಟ್ಟಬಾರದು… ಹೀಗೆ ಅನೇಕ ಕಟ್ಟುಪಾಡುಗಳಿದ್ದು ಅವುಗಳನ್ನು ಈಗಲೂ ಪಾಲಿಸಲಾಗುತ್ತದೆ. ನಗರಗಳಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದರೂ ಬಹಳ ಭಿನ್ನವಾಗಿಲ್ಲ. ಹದಿಹರೆಯದ ಮಕ್ಕಳಿಗೆ ಶಾಲೆಗೆ ಹೋಗದಂತೆ ಅಥವಾ ಹೋದರೂ ಬೇರೆ ಇರುವ ಒತ್ತಡಇದೆ. ಈಎಲ್ಲಾ ಕಾರಣಗಳಿಂದ ಅಸ್ಸಾಮಿನಲ್ಲಿ ಖಿನ್ನತೆಯಿಂದ ಬಳಲುವ ಮಹಿಳೆಯರ ಸಂಖ್ಯೆಅತಿ ಹೆಚ್ಚು. ಕಟ್ಟುಪಾಡು ಹೆಚ್ಚಿದಂತೆ ಮನಸ್ಸು-ದೇಹವಿರುವ ದೇವಿ, ಒಂದೋ ಮನಸ್ಸನ್ನು ಕಳೆದುಕೊಂಡು ಕಲ್ಲಿನ ದೇವಿಯಾಗುತ್ತಾಳೆ ಇಲ್ಲವೇ ಗುಡಿಯಲ್ಲಿರುವ ದೇವಿಯನ್ನೇ ತನ್ನ ಮೇಲೆ ಆವಾಹಿಸಿಕೊಂಡು ಪರಿಹಾರ ಕಂಡುಕೊಳ್ಳುತ್ತಾಳೆ!! ಅಂತೂ ಬೆಟ್ಟ ಇಳಿಯುವಾಗ ಮುಟ್ಟನ್ನೂ ಮಾನ್ಯಗೊಳಿಸಿದ ದೇವಿಯ ಶಕ್ತಿಯ ಬಗ್ಗೆ ಬೆರಗಿನ ಜತೆ, ಮನೆಯಲ್ಲಿರುವ ದೇವಿಯರ ಬಗ್ಗೆ ಮನಸ್ಸು ಮರುಗುತ್ತಿತ್ತು.

ಡಾ. ಕೆ.ಎಸ್.ಚೈತ್ರಾ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *