ಲೋಕದ ಕಣ್ಣು/ ಅವಳು ಮಣ್ಣಾದಳು, ಲೋಕದ ಅನ್ನವಾದಳು! – ಡಾ. ಕೆ.ಎಸ್. ಚೈತ್ರಾ
ಬಾಲಿಯ ಅನ್ನಪೂರ್ಣೆ ದೇವಿಶ್ರೀ- ಬಾಲಿ ದ್ವೀಪದ ಜನರ ಮುಖ್ಯ ಆಹಾರವಾದ ಅಕ್ಕಿಗೆ ಪೂಜ್ಯ ಸ್ಥಾನ. ಕೈಯಲ್ಲಿ ಭತ್ತದ ತೆನೆ ಹಿಡಿದ ದೇವತೆಯೇ ದೇವಿಶ್ರೀ. ಬಾಲಿಯಲ್ಲಿ ಎಲ್ಲೆಲ್ಲೂ ಕೇಳುವ ಹೆಸರು, ಕಾಣುವ ಮೂರ್ತಿ, ನಡೆಯುವ ಪೂಜೆ ದೇವಿಶ್ರೀಯದೇ. ಬಾಲಿ ಜನರ ಹೊಟ್ಟೆ ತುಂಬಿಸಿ ಅವರನ್ನು ಪೊರೆವ ದೇವಿಯನ್ನು ಸದಾ ಸ್ಮರಿಸುವುದು ಅವರ ಜೀವನ ಕ್ರಮ. ಆದರೆ ಆ ದೇವಿಶ್ರೀ ಜನನ ಮತ್ತು ಮರಣದ ದುರಂತ ಕಥೆ, ದೇಶ ಯಾವುದಾದರೇನು ಹೆಣ್ಣಿನ ಪಾಲಿಗೊದಗುವ ಅದೇ ವ್ಯಥೆ!
ದೀಪಾವಳಿಯ ಸಮಯದಲ್ಲಿ ಲಕ್ಷ್ಮಿಪೂಜೆ ಮಾಡುವ ಪದ್ಧತಿ ಭಾರತೀಯರಾದ ನಮ್ಮಲ್ಲಿದೆ. ಅದನ್ನು ನೆನಪಿಸಿಕೊಳ್ಳುತ್ತಿರುವಾಗ ಇದ್ದಕ್ಕಿದ್ದಂತೆ ನೆನಪಾಗಿದ್ದು ಬಾಲಿಯ ದೇವಿಶ್ರೀ. ಇಂಡೋನೇμÁ್ಯದಲ್ಲಿ ಸಾವಿರ ದೇಗುಲಗಳ ದ್ವೀಪ ಎಂದೇ ಹೆಸರಾದ ಬಾಲಿಗೆ ಪ್ರವಾಸ ಹೋಗಿದ್ದೆವು. ಅಲ್ಲಿನ ಭತ್ತದ ಗದ್ದೆಗಳನ್ನು ನೋಡುವುದು ಒಂದು ದಿನದ ಮುಖ್ಯ ಕಾರ್ಯಕ್ರಮವಾಗಿತ್ತು. ಗದ್ದೆಗಳಲ್ಲಿ ನೋಡುವಂಥದ್ದು ಏನಿರುತ್ತದೆ ಎಂದು ನನಗೆ ಆಶ್ಚರ್ಯ, ಏಕೆಂದರೆ ಮೂಲತಃ ಕೃಷಿಕರಾದ ಅಜ್ಜನ ಮನೆಯಲ್ಲಿ ಅವೆಲ್ಲವನ್ನೂ ನೋಡುತ್ತಲೇ ಬೆಳೆದವರು ನಾವು. ಆದರೂ ಬೇರೆ ದೇಶದಲ್ಲಿ ಹೇಗಿದೆ ಎಂಬ ಕುತೂಹಲಕ್ಕೆ ಹೊರಟಿದ್ದಾಯ್ತು. ಬಾಲಿಯಲ್ಲಿ ಶತಶತಮಾನಗಳಿಂದ ಅಕ್ಕಿ ಬೆಳೆಯಲು ಸೆಬಾಕ್ ಎಂಬ ಸಾಂಪ್ರದಾಯಿಕ, ವೈಜ್ಞಾನಿಕ ನೀರಾವರಿ ವ್ಯವಸ್ಥೆಯನ್ನುಅನುಸರಿಸಲಾಗುತ್ತಿದೆ. ಇಲ್ಲಿನ ಜನರ ಮುಖ್ಯ ಆಹಾರ ಅಕ್ಕಿ. ಅಕ್ಕಿಗೆ ಇಲ್ಲಿ ಪೂಜ್ಯ ಸ್ಥಾನ. ಧಾರ್ಮಿಕ ಕಾರ್ಯಗಳು, ಶುಭ ಸಮಾರಂಭಗಳು, ನಿತ್ಯದ ಪೂಜೆ ಎಲ್ಲದಕ್ಕೂ ಅಕ್ಕಿ ಬೇಕೇ ಬೇಕು. ಭತ್ತದ ಗದ್ದೆಗಳಲ್ಲಿ ತಿಳಿ ಹಸಿರಿನ ಭತ್ತದ ಕದಿರುಗಳು ಮೆಟ್ಟಿಲು ಕೃಷಿ ಪದ್ಧತಿಯಲ್ಲಿ ನಳನಳಿಸುತ್ತಿದ್ದವು. ಎಳೆ ಬಿಸಿಲು ಅವುಗಳಿಗೆ ಚಿನ್ನದ ಬಣ್ಣ ತುಂಬಿತ್ತು. ಈ ಮೆಟ್ಟಿಲುಗಳನ್ನು ಇಲ್ಲಿಯ ಜನ ಸ್ವರ್ಗದ ಮೆಟ್ಟಿಲು ಎನ್ನುತ್ತಾರೆ!
ಅಂಥಾ ಭತ್ತದ ಗದ್ದೆಯ ನಡುವಲ್ಲಿ ಬಿದಿರಿನ ಚಿಕ್ಕಗೋಪುರ ಕಂಡಾಗಆಶ್ಚರ್ಯವಾಗಿತ್ತು. ಕೃಷಿಕರು ಗದ್ದೆ ಕೆಲಸಕ್ಕೆ ಇಳಿಯುವ ಮುನ್ನ ಅಲ್ಲಿ ಹೋಗಿ ನಮಸ್ಕರಿಸಿದಾಗ ಏನಿರಬಹುದು ಎಂಬ ಕುತೂಹಲ. ನೋಡಿದರೆ ಅಲ್ಲಿದ್ದದ್ದು ಎಳೆ ತೆಂಗಿನಗರಿ, ಹಳೆಯ ನಾಣ್ಯ ಮತ್ತು ಬಣ್ಣದ ಅಕ್ಕಿಯನ್ನು ಬಳಸಿ ಘಳಿಗೆ ಬಟ್ಟಲಿನಂತೆ ಎರಡು ತ್ರಿಕೋನಗಳಲ್ಲಿ ಹೆಣೆದ ಮನು ಕಾರ, ತಲೆಯ ಸುತ್ತ ಪ್ರಭಾವಳಿ ಮತ್ತು ಕೊರೆದಿಟ್ಟ ಕಣ್ಣು ಹುಬ್ಬು ಬಾಯಿ. ಎದುರಿನಲ್ಲಿ ಅಕ್ಕಿ ಕಾಳು, ಹೂವುಗಳು. ಇದನ್ನು ಸಿಲಿ ಎಂದುಕರೆಯುತ್ತಾರೆ. ಅದು ದೇವಿಶ್ರೀ ಆರಾಧನೆಯ ದೇಗುಲ. ದೇವಿಶ್ರೀ ಎಂಬ ಹೆಸರನ್ನು ಬಾಲಿಗೆ ಬಂದಾಗಲಿಂದ ಅನೇಕ ಬಾರಿ ಕೇಳಿದ್ದೆವು.
ಹಾಗೆ ನೋಡಿದರೆ ಬಾಲಿಯಲ್ಲಿ ದೇಗುಲಗಳು ಇಲ್ಲದ ಸ್ಥಳವಿಲ್ಲ. ನಮ್ಮಲ್ಲಿಯಂತೆ ಊರಿಗೊಂದು ಅಥವಾ ಬೀದಿಗೊಂದು ದೇಗುಲವಲ್ಲ, ಪ್ರತೀ ಮನೆಯಲ್ಲೂ ಪುಟ್ಟದೇಗುಲ!ಅದರ ಜತೆ ಪ್ರತೀ ಊರಿನಲ್ಲೂ ಪುರಾತನ, ಭವ್ಯ ದೇಗುಲಗಳು… ಸಾವಿರವಲ್ಲ, ಲೆಕ್ಕ ಮಾಡಿದರೆ ಕೋಟಿಯೇ ಇರಬಹುದು ಅನ್ನಿಸಿದ್ದು ಸುಳ್ಳಲ್ಲ. ಹಾಗೆ ತಿರುಗುವಾಗ ಕಂಡ ಒಂದು ದೊಡ್ಡ ದೇವಾಲಯದ ಹೆಸರು ಪುರ ಸೆಬಾಕ್, ಅಲ್ಲಿದ್ದದ್ದು ದೇವಿಶ್ರೀ. ಅಲ್ಲಿಂದ ಮುಂದೆ ಕಲಾವಿದರ ನೆಲೆ ಎಂದೇ ಪ್ರಸಿದ್ಧವಾದ ಉಬುಡ್ ಗ್ರಾಮದಲ್ಲಿ ಓಡಾಡುವಾಗ ಮನಸೆಳೆದದ್ದು ಆಭರಣ ಭೂಷಿತೆಯಾದ ಚೆಂದದೊಂದು ಸ್ತ್ರೀ ಶಿಲ್ಪ. ಸುಂದರ ತರುಣಿಯಾಗಿದ್ದ ಆಕೆ ಅವನತಮುಖಿಯಾಗಿದ್ದಳು. ಮುಖದಲ್ಲಿ ಶಾಂತ ಕಳೆಯಿತ್ತು. ವಿಶೇಷವೆನಿಸಿದ್ದು ಆಕೆ ಎಡಗೈಯಲ್ಲಿ ಹಿಡಿದ ಭತ್ತದ ತೆನೆ. ಯಾರೆಂದು ವಿಚಾರಿಸಿದಾಗ ಗೊತ್ತಾಗಿದ್ದು, ಆಕೆ ದೇವಿಶ್ರೀ!
ಅಕ್ಕಿಯೇ ದೇವಿ : ಬಾಲಿಯಲ್ಲಿ ಎಲ್ಲೆಲ್ಲೂ ಕೇಳಿಸುವ ಹೆಸರು, ಕಾಣುವ ಮೂರ್ತಿ, ನಡೆಯುವ ಪೂಜೆ ದೇವಿಶ್ರೀಯದು. ದಿನವೂ ಬೆಳಿಗ್ಗೆ ಎದ್ದೊಡನೆ ‘ಅಮ್ಮಾ, ನನ್ನ ಮನೆಯಲ್ಲಿ ಅಕ್ಕಿ ಸದಾ ತುಂಬಿರುವಂತೆ ಕೃಪೆ ಮಾಡು’ ಎಂದು ಕೈಮುಗಿದೇ ಜನರು ತಮ್ಮ ದಿನದ ಶುಭಾರಂಭ ಮಾಡುತ್ತಾರೆ. ಬಾಲಿಯ ಜನರ ಗದ್ದೆ, ಮನೆ, ಮನಗಳಲ್ಲಿ ನೆಲೆಯೂರಿರುವ ಈ ದೇವಿಶ್ರೀ ಯಾರು? ಆಕೆಗೂ ಅಕ್ಕಿಗೂ ಸಂಬಂಧವೇನು? ಈ ಕುರಿತು ಅಲ್ಲಿರುವ ಎರಡು ಕತೆಗಳು ಹೀಗಿವೆ. ಮೊದಲನೆಯದು ಜಗತ್ತಿನ ತಂದೆ-ತಾಯಿಯರ ಮಿಲನದಿಂದ ಜನಿಸಿದ ಪುತ್ರಿ ದೇವಿಶ್ರೀ ಅಕ್ಕಿಯ ಅಧಿದೇವತೆ. ಜಲದೇವನಾದ ವಿಷ್ಣು ತನ್ನ ಮಕ್ಕಳಾದ ಮಾನವರಿಗೆ ಒಳ್ಳೆಯ ಆಹಾರವನು ್ನಕೊಡಲು ಬಯಸಿದ. ಭೂಮಿತಾಯಿ (ಸಾಂಗ್ ಹ್ಯಾಂಗ್ ಪೃಥ್ವಿ) ಯ ಜತೆ ವಿಷ್ಣುವಿನ ವಿವಾಹದ ನಂತರ ಭೂಮಿಯಿಂದ ಅಕ್ಕಿ ಹುಟ್ಟಿತು. ಇಂದ್ರ ಅದನ್ನು ಮನುಷ್ಯರಿಗೆ ಉತ್ತು-ಬಿತ್ತುವ ವಿಧಾನ ಕಲಿಸಿದ. ಇಲ್ಲಿ ಜಲ ಮತ್ತು ನೆಲದ ಅವಿನಾಭಾವ ಸಂಬಂಧ ಹೇಗೆ ಅಭಿವೃದ್ಧಿ ಮತ್ತು ಸಮೃದ್ಧಿಗೆ ಕಾರಣ ಎಂಬುದನ್ನು ತಿಳಿಸಲಾಗಿದೆ. ಬರೀ ನೀರಿದ್ದರೆ ಪ್ರಳಯ, ಬರೀ ನೆಲವಿದ್ದರೆ ಬರಡು- ಎರಡೂ ಸೇರಿದರೆ ಫಲ ಎಂಬುದಕ್ಕೆ ಚೆಂದದ ಕತೆ ಅಲ್ಲವೇ?
ಎರಡನೆಯದು ಶ್ರೀ ಎಂಬ ಸ್ತ್ರೀಯ ದುರಂತ ಕಥೆ. ಬಹಳ ಹಿಂದೆ ಬಾಲಿಯಲ್ಲಿ ಬರೀ ಕಬ್ಬು ಬೆಳೆಯಲಾಗುತ್ತಿತ್ತು, ಅಕ್ಕಿ ಇರಲಿಲ್ಲ. ಅಕ್ಕಿ ಬಂದದ್ದು ಸ್ತ್ರೀಯ ಬಲಿದಾನದಿಂದ!ದೇವಲೋಕದ ಬತರಗುರು (ಶಿವ) ಹೊಸದೊಂದು ಅರಮನೆ ಕಟ್ಟಿಸಲು ಎಲ್ಲರೂ ಶ್ರಮದಾನ ಕಾಣಿಕೆ ನೀಡಲು ಆದೇಶಿಸಿದ. ಸರ್ಪರೂಪದಲ್ಲಿದ್ದ ಅಂತ (ಅನಂತ) ಎಂಬ ದೇವನಿಗೆ ಕೈ ಕಾಲುಗಳಿಲ್ಲದ ಕಾರಣ ಆತನಿಗೆ ಕೆಲಸ ಮಾಡಲಾಗುತ್ತಿರಲಿಲ್ಲ. ತನ್ನನ್ನು ಎಲ್ಲರೂ ಸೋಮಾರಿ ಎಂದು ತಿಳಿಯುತ್ತಾರೆ; ಏನು ಮಾಡಲಿ ಎಂದು ಆತ ನಾರದನ ಸಲಹೆ ಕೇಳಿದ. ನಾರದ ಅದು ನಿನ್ನ ದುರಾದೃಷ್ಟ, ನಾನು ಸಹಾಯ ಮಾಡಲು ಅಸಹಾಯಕ ಎಂದು ಬಿಟ್ಟ. ತನ್ನ ವಿಧಿಯನ್ನು ನೆನೆದು ಅಂತ ದುಃಖಿಸುತ್ತಿದ್ದಾಗ ಆತನ ಕಣ್ಣಿಂದ ಫಳ ಫಳ ಹೊಳೆವ ಮೂರು ಹನಿಗಳು ಉದುರಿದವು. ನೆಲವನ್ನು ಸೋಕಿದೊಡನೆ ಅವು ಮೂರು ಮೊಟ್ಟೆಗಳಾದವು. ತನ್ನ ಬಾಯಲ್ಲಿ ಇಟ್ಟುಕೊಂಡು ಅವುಗಳನ್ನು ದೇವಗುರುವಿಗೆ ಕೊಡಲು ಸರಸರ ಹೋಗುತ್ತಿದ್ದಾಗ ಕಪ್ಪು ಬಣ್ಣದ ಹಕ್ಕಿ ಆತನ ಮೇಲೆ ಆಕ್ರಮಣ ಮಾಡಿತು. ಆ ಗಲಾಟೆಯಲ್ಲಿ ಎರಡು ಮೊಟ್ಟೆ ಒಡೆದು, ಉಳಿದದ್ದು ಒಂದೇಒಂದು. ಅದನ್ನೇ ತನ್ನ ಕಾಣಿಕೆಯಾಗಿ ದೇವಗುರುವಿಗೆ ಅರ್ಪಿಸಿದ ಅಂತ. ಸಂತುಷ್ಟನಾದ ದೇವಗುರು ಮತು ಆತನ ಪತ್ನಿ ಆ ಮೊಟ್ಟೆಯನ್ನು ಜೋಪಾನ ಮಾಡಿದರು. ಕೆಲ ಕಾಲದ ನಂತರ ಮೊಟ್ಟೆಯೊಡೆದು ಸುಂದರವಾದ ಹೆಣ್ಣು ಮಗು ಜನಿಸಿತು. ಮುದ್ದಾದ ಮಗುವಿಗೆ ಸಾಂಗ್ ಹ್ಯಾಂಗ್ ಶ್ರೀ ಎಂದು ಹೆಸರಿಡಲಾಯಿತು.
ದಿನದಿನಕ್ಕೆ ಸುಂದರಿಯಾಗಿ ಬೆಳೆದ ಶ್ರೀ, ತಾರುಣ್ಯಕ್ಕೆ ಬಂದಾಗ ಅಪೂರ್ವ ಸೌಂದರ್ಯದಿಂದ ಕಂಗೊಳಿಸಿದಳು. ಆಕೆಯನ್ನು ಕಂಡು ಮರುಳಾಗದವರೇ ಇಲ್ಲ. ದೇವಾನುದೇವತೆಗಳಂತೂ ಸರಿ, ಸ್ವತಃ ಸಾಕಿ ಸಲಹಿದ, ಸಾಕು ತಂದೆ ಬತರಗುರುವೇ ಆಕೆಯಲ್ಲಿ ಅನುರಕ್ತನಾದ. ಇದು ದೇವಗಣದಲ್ಲಿ ಸಾಕಷ್ಟು ಕಳವಳ ಉಂಟುಮಾಡಿತು. ಯುವತಿಯ ಕಾರಣದಿಂದ ಶಾಂತಿ-ಸುವ್ಯವಸ್ಥೆಗೆ ಯಾವುದೇ ಅಡ್ಡಿಯಾಗಬಾರದು. ಪರಿಹಾರಕ್ಕೆ ಯೋಚಿಸಲಾಯಿತು. ಎಲ್ಲಾ ದೇವರು ಒಟ್ಟಾಗಿ ಸುಂದರಿ ಶ್ರೀಯನ್ನು ಕೊಲ್ಲುವುದೇ ಸರಿ ಎಂಬ ನಿರ್ಧಾರಕ್ಕೆ ಬಂದರು. ಆಕೆಗೆ ವಿಷವನ್ನು ನೀಡಿ ಸಾಯಿಸಿದರು. ತಮ್ಮ ಅಪರಾಧ ಗೊತ್ತಾಗದಂತೆ ಆಕೆಯ ದೇಹವನ್ನು ಭೂಮಿಯೊಳಗೆ ದೂರದ ಜಾಗದಲ್ಲಿ ಹುಗಿದಿಟ್ಟರು. ಆದರೆ ಯಾವುದೇ ತಪ್ಪು ಮಾಡದ, ಸೌಂದರ್ಯವೇ ಶತ್ರುವಾಗಿದ್ದ ಶುದ್ಧ -ಮುಗ್ಧ ಶ್ರೀಗೆ ವಿಶೇಷ ಶಕ್ತಿಯಿತ್ತು. ಅದರ ಫಲವಾಗಿ ಆಕೆಯ ದೇಹ ಹುಗಿದಿಟ್ಟ ಜಾಗದಲ್ಲಿ ನಾನಾ ರೀತಿಯ ಉಪಯುಕ್ತ ಗಿಡಗಳು ಬೆಳೆದವು. ಕೂದಲಿನಿಂದ ಹುಲ್ಲು, ತಲೆಯಿಂದ ತೆಂಗಿನಕಾಯಿ, ತೋಳುಗಳಿಂದ ಮರ, ಎದೆಯಿಂದ ಹಣ್ಣು ಮತ್ತು ಕಣ್ಣುಗಳಿಂದ ಅಕ್ಕಿ! ಅಲ್ಲಿಯವರೆಗೆ ಬರೀ ಕಬ್ಬಿನಿಂದ ಕೂಡಿದ್ದ ಭೂಮಿಯಲ್ಲಿ ವೈವಿಧ್ಯತೆ ಮೂಡಿತು, ಜನರ ಹಸಿವು ಇಂಗಿತು. ಹೀಗೆ ಜಗತ್ತನ್ನು ಸುಂದರಗೊಳಿಸಿದ, ಮಾನವರಿಗೆ ಆಹಾರ ನೀಡಿದ ದೇವಿಶ್ರೀಯನ್ನು ಜನರು ಅಂದಿನಿಂದ ಪೂಜಿಸತೊಡಗಿದರು, ಅನ್ನಪೂರ್ಣೆಎಂದು ಗೌರವಿಸಿದರು.
ಬಹುಮುಖೀ ಅಂತಃಸತ್ವ : ಗಮನಿಸಬೇಕಾದ ಅಂಶವೆಂದರೆ ಸಾಕು ಮಗಳಾದ ಶ್ರೀಯನ್ನು ಮೋಹಿಸುವುದು ತಪ್ಪು ಎಂದು ಯಾರೂ ಬತರಗುರುವಿನ ವಿರುದ್ಧ ದನಿ ಎತ್ತಲಿಲ್ಲ. ಬದಲಿಗೆ ಏನೂ ಅರಿಯದ ಶ್ರೀಯನ್ನು ಕೊಲ್ಲುವ ಒಮ್ಮತದ ನಿರ್ಣಯಕ್ಕೆ ಬಂದರು. ಏಕೆಂದರೆ ಮನಸ್ಸಿನಲ್ಲಿ ಚಂಚಲತೆ ಉಂಟುಮಾಡಿದ್ದು ಆಕೆಯಲ್ಲವೇ? ದೇಶ-ಕಾಲ ಯಾವುದಾದರೇನು ತಪ್ಪು ಹೆಣ್ಣಿನದ್ದೇ, ಶಿಕ್ಷೆ ಆಕೆಗೇ! ಆದರೆ ತುಳಿದರೂ, ಹುಗಿದರೂ, ಕತ್ತರಿಸಿದರೂ ಆಕೆ ಅದನ್ನು ಸಹಿಸಿ, ಮೀರುತ್ತಲೇ ಬಂದಿದ್ದಾಳೆ. ಆಕೆಯ ಅಂತಃಸತ್ವ ನಾನಾ ರೂಪದಲ್ಲಿ, ಬಹುಮುಖಿಯಾಗಿ ಪ್ರಕಟವಾಗುತ್ತಲೇ ಇದೆ. ಸ್ತ್ರೀ ಎಂಬ ಶಕ್ತಿಗೆ ಸಾವಿಲ್ಲ, ಅದುಇಡೀ ಮಾನವ ಕುಲವನ್ನು ಪೆÇರೆವ ಚೈತನ್ಯ, ಜೀವದಾಯಿನಿ! ಹಾಗಾಗಿಯೇ ಶ್ರೀಯನ್ನು ಹುಗಿದರೂ ಆಕೆ ಚಿಗುರಿದಳು, ಎಲ್ಲೆಲ್ಲೂ ಹಬ್ಬಿದಳು, ಮಣ್ಣಲ್ಲಿ ಹಾಕಿದರೂ ಲೋಕದ ಕಣ್ಣಾದಳು.
ದೇವಿಶ್ರೀಯನ್ನು ಇಂಡೋನೇ ಬಾಲಿ, ಜಾವಾ ಮತ್ತು ಸುಡಾನಿನ ವಿವಿಧ ಧರ್ಮಗಳ ಜನರು ಪೂಜಿಸುತ್ತಾರೆ. ಕೃಷಿ ಪ್ರಧಾನವಾದ ಈ ದೇಶದಲ್ಲಿ ಆಕೆ ಅನ್ನದಾತೆ. ಭತ್ತದ ನಾಟಿ ಮಾಡುವ ಮುನ್ನ ಮಾಪಾಗ್ ಶ್ರೀ ಎಂಬ ವಿಧಿಯನ್ನು ಆಚರಿಸಲಾಗುತ್ತದೆ. ಇದರಲ್ಲಿ ದೇವಿಯನ್ನು ತಮ್ಮ ಹಳ್ಳಿಗೆ ಬರುವಂತೆ ಸಕಲ ಗೌರವದಿಂದ ಆಹ್ವಾನಿಸಲಾಗುತ್ತದೆ. ಹಾಗೆಯೇ ಈ ಹಿಂದಿನ ಬೆಳೆಗಾಗಿ ವಂದಿಸಲಾಗುತ್ತದೆ. ಗದ್ದೆಗಳ ಜತೆ ಮನೆಯಲ್ಲೂ ದೇವಿಶ್ರೀಯ ಮೂರ್ತಿ ಇಟ್ಟು ಪೂಜಿಸಲಾಗುತ್ತದೆ. ಬಿದಿರಿನ ಮಂಟಪದ ಸುತ್ತ ಹಾವಿನ ಅಲಂಕಾರಿಕ ಚಿತ್ರಗಳಿರುತ್ತವೆ. ಅಲ್ಲಿ ಹಾವು ಮನೆಯಲ್ಲಿ ಕಾಣಿಸಿಕೊಂಡರೆ ಶುಭಶಕುನ, ಮಳೆ-ಬೆಳೆ ಚೆನ್ನಾಗಿಆಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಆಕೆಯ ಪ್ರೀತ್ಯರ್ಥ ಅಕ್ಕಿ ಚೀಲ ಮತ್ತು ಕಣಜದ ಹತ್ತಿರ ಹೂವುಗಳನ್ನು ಇಡಲಾಗುತ್ತದೆ. ತಿಂಗಳಲ್ಲಿ ನಿರ್ದಿಷ್ಟ ಶುಕ್ರವಾರ ಆಕೆಯ ಪೂಜೆಗೇ ಮೀಸಲು. ನಮ್ಮಲ್ಲಿ ಸಂಪತ್ತಿನ ಅಧಿದೇವತೆ, ವಿಷ್ಣುವಿನ ಪತ್ನಿ ಲಕ್ಷ್ಮಿಗೆ ಈ ದೇವಿಯನ್ನು ಹೋಲಿಸಬಹುದಾದರೂ ಸರಸ್ವತಿಗೂ ಹೋಲಿಕೆಯಿದೆ. ಇದಲ್ಲದೇ ಜಾವಾದ ವಯಾಂಗ್‍ಚಕ್ರದ ಪ್ರಕಾರ ದೇವಿಶ್ರೀ, ಸಿಂತಾ ಆಗಿ ಮರುಹುಟ್ಟು ಪಡೆದು ವಿಷ್ಣುವಿನ ಅವತಾರವಾದ ರಾಮನನ್ನು ವರಿಸುತ್ತಾಳೆ. ಹಾಗೆಯೇ ರುಕ್ಮಿಣಿಯಾಗಿ ಕೃಷ್ಣನನ್ನು, ಸುಭದ್ರೆಯಾಗಿ ಅರ್ಜುನನ್ನು ವರಿಸುತ್ತಾಳೆ. ಒಟ್ಟಿನಲ್ಲಿ ಬೇರೆ ಬೇರೆ ಹೆಸರಿನ ಶಕ್ತಿದೇವತೆ ಈ ಶ್ರೀ.
ಹೂವು-ದೀಪ- ಧೂಪಗಳಿಂದ ದೇವಿಶ್ರೀಯ ಪೂಜೆ ಸಲ್ಲಿಸುವುದು ಬಾಲಿಯ ಜನರ ದಿನಚರಿ. ಅದರೊಂದಿಗೇ ಪ್ರತೀ ಅಕ್ಕಿಯ ಕಾಳಿಗೂ ಪೂಜ್ಯ ಸ್ಥಾನ ನೀಡಿದ್ದಾರೆ.ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಹೀಗೆ ದಿನಕ್ಕೆ ಮೂರೂ ಹೊತ್ತು ಅಕ್ಕಿ ಸೇವಿಸುವ ಅಲ್ಲಿ ಅನ್ನವನ್ನು ಚೆಲ್ಲುವಂತಿಲ್ಲ. ತಟ್ಟೆಯಲ್ಲಿ ಹಾಕಿಸಿಕೊಂಡು ಬಿಟ್ಟರೆ ಪಾಪ ಬರುತ್ತದೆ ಎನ್ನುತ್ತಾರೆ. ಮಕ್ಕಳಿಗೆ ಬಾಲ್ಯದಿಂದಲೇ ಹಾಕಿಸಿಕೊಂಡಿದ್ದನ್ನು ಕಾಳೂ ಬಿಡದಂತೆ ತಿನ್ನಲು ಕಲಿಸುತ್ತಾರೆ. ಅನ್ನ ಬಿಟ್ಟರೆ, ತುಳಿದರೆ, ಚೆಲ್ಲಿದರೆ ದೇವಿಶ್ರೀ ಸಿಟ್ಟಾಗುತ್ತಾಳೆ ಎಂದು ಬಲವಾಗಿ ನಂಬಿದ್ದಾರೆ.
ಪ್ರಕೃತಿಯನ್ನು ನಾನಾ ರೂಪದಲ್ಲಿಆರಾಧಿಸುವ ಬಾಲಿಯಜನರಿಗೆ ವಿಧಿ ವಿಧಾನಗಳು ಪೂಜೆಯಲ್ಲ, ಜೀವನಕ್ರಮ. ಸರಳ, ಸಂತೃಪ್ತಜೀವನ ನಡೆಸುವ ಇಲ್ಲಿಯವರ ದೈನಂದಿನ ಪ್ರಾರ್ಥನೆ ಏನಿದ್ದರೂ ಧನ ಕನಕಗಳಿಗಲ್ಲ, ಹೊಟ್ಟೆ ತುಂಬಿಸುವ ಧಾನ್ಯ ಅಕ್ಕಿಗಾಗಿ, ತಾಯಿ ದೇವಿಶ್ರೀಯಲ್ಲಿ! ತಾಯಿಯಿಲ್ಲದೆ ನಾವಿಲ್ಲ, ಬದುಕೇ ಇಲ್ಲ ಎನ್ನುವ ಅವರ ಮಾತು- ನಂಬಿಕೆ ಅದೆಷ್ಟು ಸತ್ಯ!!
ಡಾ.ಕೆ.ಎಸ್. ಚೈತ್ರಾ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.