ಲೈಂಗಿಕ ದಾಸಿ ಈಗ ಮಾನವ ಹಕ್ಕು ಹೋರಾಟಗಾತಿ- ಮಾಲತಿ ಭಟ್‌

ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಗೆ ವಿಶೇಷ ಮಹತ್ವವಿದೆ. ಶಾಂತಿ ಪ್ರಶಸ್ತಿಯನ್ನು ಹಂಚಿಕೊಂಡ ಇಬ್ಬರೂ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದವರು. ಈ ಇಬ್ಬರಲ್ಲಿ ಹಿರಿಯರಾದ ಡೆನಿಸ್ ಮುಕ್ವೆಜ್ ಕಾಂಗೊದ ಸ್ತ್ರೀರೋಗ ತಜ್ಞರು. ಲೈಂಗಿಕ ಹಿಂಸಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳಿಗೆ ಚಿಕಿತ್ಸೆ ನೀಡಿ ಧೈರ್ಯ ತುಂಬುವ ಕೆಲಸದಲ್ಲಿ ದಶಕಗಳಿಂದ ತೊಡಗಿಕೊಂಡವರು.

ಮತ್ತೊಬ್ಬ ಪ್ರಶಸ್ತಿ ವಿಜೇತೆ ಇರಾಕ್‌ ಮೂಲದ  24 ವರ್ಷದ ನಾಡಿಯಾ ಮುರಾದ್. ಇವರು ಸ್ವತಃ ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಲೈಂಗಿಕ ದಾಸಿಯಾಗಿದ್ದವರು. ಉಗ್ರರ ಶಿಬಿರದಿಂದ ತಪ್ಪಿಸಿಕೊಂಡು ಬಂದು ತನ್ನಂತಹ ನೂರಾರು ಹೆಣ್ಣುಮಕ್ಕಳ ಕಥೆಯನ್ನು ಜಗತ್ತಿನ ಮುಂದೆ ಬಿಚ್ಚಿಟ್ಟವರು. ಯುದ್ಧದ ಸಂದರ್ಭದಲ್ಲಿ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಉಗ್ರರು, ಬಂಡುಕೋರರು, ಸೇನಾಪಡೆಗಳು ಅಸ್ತ್ರದಂತೆ ಬಳಸುವುದನ್ನು ಬಲವಾಗಿ ಖಂಡಿಸುತ್ತಾರೆ.

ಇರಾಕ್‍ನ ಸಿಂಜರ್ ಪ್ರಾಂತ್ಯದ ಹಳ್ಳಿಗಾಡಿನ ಯುವತಿಯೊಬ್ಬಳು ನೊಬೆಲ್ ಶಾಂತಿ ಪ್ರಶಸ್ತಿ ಗೆಲ್ಲುವುದು, ವಿಶ್ವಸಂಸ್ಥೆಯ ವೇದಿಕೆಯಲ್ಲಿ ಮಾತನಾಡುವುದು, ಎಷ್ಟೋ ದೇಶಗಳ ಮುಖ್ಯಸ್ಥರನ್ನು ಭೇಟಿಯಾಗಿ ಲೈಂಗಿಕ ದೌರ್ಜನ್ಯದ ವಿರುದ್ಧ ದಿಟ್ಟವಾಗಿ ಮಾತನಾಡುವುದು ಎಲ್ಲವೂ ಕನಸಿನಂತೆ ಕಾಣಬಹುದು. ಆದರೆ, ಆ ಹಾದಿಯಲ್ಲಿ ಆಕೆ ಅನುಭವಿಸಿದ ಸಂಕಷ್ಟ, ಒಡಹುಟ್ಟಿದವರನ್ನು ಕಣ್ಣೆ ಎದುರೇ ಉಗ್ರರು ಹುಳುಗಳನ್ನು ಹೊಸಕಿದಂತೆ ಕೊಂದು ಹಾಕಿದಾಗ ಆದ ನೋವು, ಯಾವುದೇ ಕ್ಷಣದಲ್ಲಿ ಗುಂಡಿಗೆ ಬಲಿಯಾಗಬಹುದು ಎಂಬ ಅರಿವಿನಲ್ಲೂ ಉಗ್ರರ ಹಿಡಿತದಿಂದ ಪಾರಾಗಿ ಬಂದ ಬಗೆ ಎಲ್ಲವೂ ಆಕೆಯ ಜೀವನಪ್ರೀತಿ ಮತ್ತು ಬದ್ಧತೆಯನ್ನು ಬಿಂಬಿಸುತ್ತವೆ.

ಇಂತಹ ನಾಡಿಯಾ ಕಥೆ ಆರಂಭವಾಗುವುದು ನಾಲ್ಕು ವರ್ಷಗಳ ಹಿಂದೆ. ಇರಾಕ್, ಸಿರಿಯಾ ಗಡಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಉಪಟಳ, ಆರ್ಭಟ ಎಲ್ಲೆಮೀರಿದ್ದ ಕಾಲವದು. ಇಡೀ ಜಗತ್ತಿನಲ್ಲಿ ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪಿಸುತ್ತೇವೆ ಎಂದು ಹೊರಟ ಕೆಲ ಸುನ್ನಿ ಬಂಡುಕೋರರು ಇರಾಕ್, ಸಿರಿಯಾ ಸರ್ಕಾರಗಳಿಗೆ ತಲೆನೋವಾಗಿದ್ದರು. ಸರ್ಕಾರಿ ಪಡೆಗಳನ್ನು ಲೆಕ್ಕಿಸದೇ ಆಸ್ಪತ್ರೆ, ಶಾಲೆಗಳಿಗೆ ನುಗ್ಗಿ ವಿದೇಶಿ ಪ್ರಜೆಗಳನ್ನು ಒತ್ತೆಯಾಗಿಸಿಕೊಳ್ಳುತ್ತಿದ್ದರು.

ಇಸ್ಲಾಂ ಮತದ ಅದರಲ್ಲೂ ಸುನ್ನಿ ಪಂಥದ ಮುಸ್ಲಿಮರಿಗೆ ಮಾತ್ರ ರಿಯಾಯತಿ. ಇಂಥ ಉಗ್ರರ ಕಣ್ಣಿಗೆ ಬಿದ್ದಿದ್ದು ಇರಾಕ್, ಸಿರಿಯಾ ಗಡಿಯಲ್ಲಿನ ಸಿಂಜರ್ ಪ್ರದೇಶ. ಸಿಂಜರ್ ಯಾಜಿದಿ ಬುಡಕಟ್ಟು ಗುಂಪಿಗೆ ಸೇರಿದವರೇ ಇದ್ದ ಪ್ರದೇಶ. ಇಸ್ಲಾಂಪೂರ್ವ ಸಂಸ್ಕೃತಿಯ ಕುರುಹುಗಳನ್ನು ಉಳಿಸಿಕೊಂಡಿರುವ ಯಾಜಿದಿಗಳು ತಮ್ಮದೇ ಆದ ದೇವರು, ಆಚರಣೆಗಳನ್ನು ಹೊಂದಿದ್ದು, ವಿಶಿಷ್ಟ ಮತವನ್ನು ಅನುಸರಿಸುತ್ತಾರೆ.

ಇಂತಹ ಯಾಜಿದಿ ಹಳ್ಳಿಗಳಿಗೆ ಮನಬಂದಂತೆ ನುಗ್ಗುತ್ತಿದ್ದ ಇಸ್ಲಾಮಿಕ್ ಉಗ್ರರು, ಯಾಜಿದಿ ಗಂಡಸರನ್ನು ಇರುವೆಗಳಂತೆ ಹೊಸಕಿಹಾಕಿ ಹೆಣ್ಣುಮಕ್ಕಳನ್ನು ಹೊತ್ತೊಯ್ಯುತ್ತಿದ್ದರು. ತಮ್ಮ ಅಸಂಖ್ಯಾತ ಯೋಧರು, ಉಗ್ರರ ಲೈಂಗಿಕ ತೃಷೆ ತೀರಿಸಲು ಪಡಿತರ ವಿತರಿಸಿದಂತೆ ಹೆಣ್ಣುಮಕ್ಕಳನ್ನು ವಿತರಿಸುತ್ತಿದ್ದರು.

2014ರ ಸೆಪ್ಟೆಂಬರ್‌ನ  ಒಂದು ದಿನ ಐಎಸ್ ಉಗ್ರರು ಸಿಂಜರ್‌ನ  ಕೊಜೊ ಎಂಬ ಹಳ್ಳಿಗೆ ನುಗ್ಗಿದರು. ಆ ಹಳ್ಳಿಯ 650ಕ್ಕೂ ಹೆಚ್ಚು ಗಂಡಸರು ಉಗ್ರರ ಬಂದೂಕಿಗೆ ಬಲಿಯಾದರು. ಕುರಿ ಸಾಗಿಸುವಂತೆ ಅಲ್ಲಿನ ಹೆಣ್ಣುಮಕ್ಕಳನ್ನು ಮೊಸುಲ್‍ನಲ್ಲಿಯ ತಮ್ಮ ಶಿಬಿರಗಳಿಗೆ ಹೊತ್ತೊಯ್ದರು.

ಕೊಜೊದ ಕೂಡುಕುಟುಂಬಕ್ಕೆ ಸೇರಿದ್ದ ನಾಡಿಯಾ ಮುರಾದ್ ಎಂಬ ಹೆಣ್ಣುಮಗಳು ಆ ಗುಂಪಿನಲ್ಲಿದ್ದಳು. ನಾಡಿಯಾಳ ಆರು ಜನ ಅಣ್ಣಂದಿರನ್ನು ಉಗ್ರರು ನಿರ್ದಯವಾಗಿ ಕೊಂದು ಹಾಕಿದ್ದರು. ಉಗ್ರರ ಶಿಬಿರದಲ್ಲಿ ನಾಡಿಯಾ ಮತ್ತು ಅವಳಂತಹ ನೂರಾರು ನತದೃಷ್ಟ ಹೆಣ್ಣುಮಕ್ಕಳು ರಾತ್ರಿಯಾಗುತ್ತಿದ್ದಂತೆ ಉಗ್ರರ ಹಾಸಿಗೆ ಸೇರಬೇಕಿತ್ತು.

ಯುವತಿಯರನ್ನು ಕೂಡಿಹಾಕಿದ್ದ ಶಿಬಿರಕ್ಕೆ ಬರುತ್ತಿದ್ದ ಉಗ್ರರು, ಏ ನೀನು ನನ್ನ ಜೊತೆ ಬಾ, ನೀನು ಬಾ ಎಂದು ಬಂದೂಕಿನ ಮೊನೆಯಿಂದ ತಿವಿದು ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ಶಿಬಿರದ ಬಾಗಿಲಲ್ಲಿ ಇರುವ ನೋಂದಣಿ ಪುಸ್ತಕದಲ್ಲಿ ಯಾವ ಹುಡುಗಿಯನ್ನು ಯಾರು ಕರೆದುಕೊಂಡು ಹೋಗಿದ್ದಾರೆ ಎನ್ನುವ ಹಾಜರಾತಿ ಪುಸ್ತಕ ಬೇರೆ..!

ದೇಹ, ಮನಸ್ಸುಗಳಿಗೆ ಹೊಂದಾಣಿಕೆಯಾಗದ ಸ್ಥಿತಿ, ಸದಾ ಸಾವಿನ ಭಯ, ತಮ್ಮವರನ್ನು ಕಳೆದುಕೊಂಡ ದುಃಖ, ಕ್ಷೀಣಿಸುತ್ತಿರುವ ಅನಾರೋಗ್ಯದ ನಡುವೆಯೂ ನಾಡಿಯಾ ಮತ್ತು ಆಕೆಯಂತಹ ನೂರಾರು ಯುವತಿಯರು ಉಗ್ರರ ಕಾಮನೆ ತಣಿಸಬೇಕಿತ್ತು. ಈ ರಾತ್ರಿ ಪಾಳಿ ತಪ್ಪಿಸಿಕೊಳ್ಳಲು ಅವರೆಲ್ಲ ದಿನವೂ ಹೊಸ ಮಾರ್ಗ ಹುಡುಕುತ್ತಿದ್ದರು. ಕೆಲವರು ನಿದ್ದೆಬಂದಂತೆ ನಟಿಸಿದರೆ, ಮತ್ತೆ ಕೆಲವರು ಮುಖ ಹುದುಗಿಸಿಕೊಂಡು ಯಾವುದೋ ಮೂಲೆ ಸೇರುತ್ತಿದ್ದರಂತೆ.

ಶಿಬಿರಕ್ಕೆ ನಾಡಿಯಾಳನ್ನು ಹೊತ್ತೊಯ್ದ ಒಂದರೆಡು ದಿನಗಳಲ್ಲೇ ನಾಡಿಯಾ ಪಾಳಿಯೂ ಬಂದಿತ್ತು. ಅಲ್ಲಿ ನೆರೆದಿದ್ದ ಪುರುಷರನ್ನು ನೋಡುವ ಧೈರ್ಯವಾಗದೇ ಅವರ ಕಾಲುಗಳನ್ನು ನೋಡುತ್ತಿದ್ದಳಂತೆ ನಾಡಿಯಾ. ಅಲ್ಲಿ ಮೃದುವಾದ ಪಾದಗಳ ಹೆಣ್ಣಿಗನಂತಿದ್ದ ವ್ಯಕ್ತಿಯೊಬ್ಬನ ಕೈಹಿಡಿದು ಅಪ್ಪಿಕೊಂಡಳಂತೆ. ಠೊಣಪರಂತಿದ್ದ ಹೆದರಿಕೆ ಹುಟ್ಟಿಸುವ ಗಂಡಸರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದೆ ಎಂದು ನಾಡಿಯಾ ಹೇಳಿಕೊಂಡಿದ್ದಾಳೆ. ಆ ವ್ಯಕ್ತಿ ಆ ಗುಂಪಿನ ನಾಯಕನಾಗಿದ್ದರಿಂದ ಕೆಲ ದಿನಗಳ ಮಟ್ಟಿಗೆ ಕಾಮುಕ ಉಗ್ರರ ಕಿರುಕುಳ ಆಕೆಗೆ ತಪ್ಪಿತು.

2014ರ ಸೆಪ್ಟೆಂಬರ್ 14ರಂದು ಉಗ್ರರ ಶಿಬಿರ ಸೇರಿದ್ದ ನಾಡಿಯಾ ನವೆಂಬರ್ ಹೊತ್ತಿಗೆ ಆ ಕಟ್ಟಡದಿಂದ ತಪ್ಪಿಸಿಕೊಂಡಿದ್ದಳು. ನೆರೆಮನೆಯಲ್ಲಿದ್ದ ದಯಾಳು ಕುಟುಂಬವೊಂದರ ಸಹಾಯದಿಂದ ಉಗ್ರರ ಪ್ರಾಬಲ್ಯದ ಪ್ರದೇಶದಿಂದ ತಪ್ಪಿಸಿಕೊಂಡು ನಿರಾಶ್ರಿತರ ಶಿಬಿರ ತಲುಪಿದಳು. ಅಲ್ಲಿಂದ ಜರ್ಮನಿಯ ನಿರಾಶ್ರಿತರ ಶಿಬಿರಕ್ಕೆ ತೆರಳಿದ ನಾಡಿಯಾಗೆ ಹೊಸ ಬದುಕು ಸಿಕ್ಕಿತ್ತು. ಐಎಸ್ ಉಗ್ರರಿಗೆ ಲೈಂಗಿಕ ದಾಸಿಯರಾಗಿದ್ದ ತನ್ನಂತಹ ನೂರಾರು ಹೆಣ್ಣುಮಕ್ಕಳ ಕಥೆಯನ್ನು, ಅಲ್ಲಿನ ಭಯಾನಕ ಅನುಭವವನ್ನು ಜಗತ್ತಿನ ಎದುರು ಹೇಳಿಕೊಂಡಳು. ವಿಶ್ವಸಂಸ್ಥೆಯಲ್ಲಿಯೂ ಈ ಬಗ್ಗೆ ಮಾತನಾಡಿದಳು.

ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ತನ್ನ ಜನರ ವ್ಯಥೆಯನ್ನು ಹೇಳಿಕೊಂಡಳು. ಇರಾಕ್‍ನ ಯಾಜಿದಿ ಸಮುದಾಯದ ಕಗ್ಗೊಲೆಯನ್ನು ನರಮೇಧ ಎಂದು ಪರಿಗಣಿಸಬೇಕು ಎಂದು ವಾದಿಸಿದಳು. ಇರಾಕ್‍ನಲ್ಲಿ ಧಾರ್ಮಿಕ ಸ್ವಾತಂತ್ರ್ಯ ಎತ್ತಿಹಿಡಿಯುವ, ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾದ ಪ್ರತ್ಯೇಕ ಪ್ರದೇಶ ಗುರುತಿಸಬೇಕು. ಐಎಸ್ ಉಗ್ರರ ಹಿಡಿತದಲ್ಲಿರುವ ತನ್ನ ಜನರನ್ನು ಬಿಡಿಸಬೇಕು ಎಂಬ ಅಹವಾಲು ಮುಂದಿಟ್ಟಳು. ಮಾನವ ಕಳ್ಳ ಸಾಗಣೆ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳ ಕಷ್ಟವನ್ನು ಆಲಿಸಿದಳು.

ನಾಡಿಯಾ ತುಡಿತವನ್ನು ನೋಡಿ ವಿಶ್ವಸಂಸ್ಥೆ ಆಕೆಯನ್ನು ರಾಯಭಾರಿಯಾಗಿ ನೇಮಿಸಿತು. ಜಗತ್ತಿನ ವಿವಿಧ ದೇಶಗಳಲ್ಲಿ ಅಂತರ್ಯುದ್ಧಕ್ಕೆ ಸಿಲುಕಿದ ಸಮುದಾಯಗಳನ್ನು, ಅವರ ಹೆಣ್ಣುಮಕ್ಕಳ ಗೋಳಿನ ಕಥೆಗಮ್ನ ಕೇಳಿ ಅವರಿಗೆ ಸಾಂತ್ವನ ಹೇಳಿದಳು. ಅಂತವರು ಬದುಕು ಕಟ್ಟಿಕೊಳ್ಳಲು, ಮಾನಸಿಕ ಆಘಾತವನ್ನು ಮರೆಯಲು ನೆರವಾಗುವ ಸ್ವಯಂಸೇವಾ ಸಂಸ್ಥೆಯನ್ನು ಕಟ್ಟಿದಳು. ‘ದಿ ಲಾಸ್ಟ್ ಗರ್ಲ್’ ಆಕೆಯ ಆತ್ಮಚರಿತ್ರಾತ್ಮಕ ಪುಸ್ತಕ. ಈಗ ನಾಡಿಯಾಗೆ ನೊಬೆಲ್ ಗೌರವ.

ಮಾಲತಿ ಭಟ್‌

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *