ಲಿಂಗ ಸಮಾನತೆ ಗಡಿ ಮೀರಿ- ಟಿ ಆರ್ ಚಂದ್ರಶೇಖರ್
ಇಂದು ಲಿಂಗ ಸಮಾನತೆ ಅನ್ನುವುದನ್ನು ಮಾನವ ಸಮಾನತೆಯನ್ನಾಗಿ ಮಹಿಳಾ ನ್ಯಾಯ ಅನ್ನುವುದನ್ನು ಮಾನವ ನ್ಯಾಯ ಎಂಬುದಾಗಿ ಪರಿಭಾವಿಸಿಕೊಳ್ಳುವ ಬಗ್ಗೆ ನಾವು ಚಿಂತಿಸಬೇಕಾಗಿದೆ.
ಲಿಂಗ ಸಮಾನತೆಯು ಒಂದು ಆದರ್ಶ ಗುರಿಯಾಗಿ ಅನೇಕ ಶತಮಾನಗಳ ಕಾಲ ನಮ್ಮ ಮುಂದಿದೆ. ಅದೊಂದು ಮಹತ್ವದ ಸಂಗತಿಯನ್ನಾಗಿ ಪರಿಗಣಿಸಿಕೊಂಡು ಬರಲಾಗಿದೆ. ಸಾಕ್ಷರತೆ, ಶಿಕ್ಷಣ, ಉದ್ಯೋಗ, ವರಮಾನ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಸಮಾನತೆಯನ್ನು ಸಾಧಿಸಿಕೊಂಡು ಬಿಟ್ಟರೆ ಮಹಿಳೆಯರ ಸಮಸ್ಯೆಗಳೆಲ್ಲವೂ ಬಗೆಹರಿದುಬಿಡುತ್ತವೆ ಎಂದು ನಂಬಿಕೊಂಡು ಬರಲಾಗಿದೆ. ಈ ದಿಶೆಯಲ್ಲಿ ಚಳುವಳಿಗಳನ್ನು ನಡೆಸಲಾಗಿದೆ, ಸಿದ್ಧಾಂತಗಳನ್ನು ರೂಪಿಸಲಾಗಿದೆ, ಶಾಸನಗಳನ್ನು ರಚಿಸಲಾಗಿದೆ. ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಂದು ಸಾಕ್ಷರತೆ, ಶಿಕ್ಷಣ, ಉದ್ಯೋಗ, ವರಮಾನ, ಆಹಾರ, ಆಸ್ತಿ, ಭದ್ರತೆ ಮುಂತಾದ ಕ್ಷೇತ್ರಗಳಲ್ಲಿ ಸಮಾನತೆಯನ್ನು ಸಾಧಿಸಿಕೊಳ್ಳಲು ಸಾಧ್ಯವಾಗದಿದ್ದರೂ ಅಲ್ಲಿ ಅಸಮಾನತೆಯ ಪ್ರಮಾಣ, ತೀವ್ರತೆ ಮತ್ತು ವ್ಯಾಪ್ತಿ ಕಡಿಮೆಯಾಗಿದೆ. ಆದರೆ ನಿರೀಕ್ಷಿಸಿದಂತೆ ಮಹಿಳೆಯರಿಗೆ ಸ್ವಾತಂತ್ರ್ಯ ದೊರೆತಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆ, ಅತ್ಯಾಚಾರ, ಕೊಲೆ, ದಬ್ಬಾಳಿಕೆ, ಶೋಷಣೆ ಇಂದಿಗೂ ಬೇರೆ ಬೇರೆ ರೂಪದಲ್ಲಿ ಮುಂದುವರಿದಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಅನ್ನುವುದು ಇಂದು ಸುದ್ದಿಯ ಗುಣವನ್ನೇ ಕಳೆದುಕೊಂಡು ಬಿಟ್ಟಿದೆ. ಅದು ದೈನಂದಿನ ಚರ್ವಿತ ಚರ್ವಣ ಸಂಗತಿಯಾಗಿಬಿಟ್ಟಿದೆ.
ಇಂದು ಯಾವುದೇ ಅನುಮಾನಕ್ಕೂ ಅವಕಾಶವಿಲ್ಲದಂತೆ ಖಚಿತವಾಗಿರುವ ಸಂಗತಿಯೆಂದರೆ ಲಿಂಗ ಸಮಾನತೆ ಅನ್ನುವುದು ಮಹಿಳೆಯರ ಸ್ವಾತಂತ್ರ್ಯವನ್ನು ವಿಸ್ತೃತಗೊಳಿಸಲಾರದು ಎಂಬುದಾಗಿದೆ. ಅಸಮಾನತೆ ಅನ್ನುವುದು ಮೂಲಭೂತವಾಗಿ ಸ್ವಾತಂತ್ರ್ಯವನ್ನು ಸೀಮಿತಗೊಳಿಸುವ ಒಂದು ಸಂಗತಿ. ಲಿಂಗ ಸಮಾನತೆಯನ್ನು ಅಂಕಿಸಂಖ್ಯೆಗಳ ಮೂಲಕ ಯಾಂತ್ರಿಕವಾಗಿ ಮಾಪನ ಮಾಡುವ, ಪರಾಮರ್ಶಿಸುವ, ಮೌಲ್ಯಮಾಪನ ಮಾಡುವ ಮತ್ತು ವಿಶ್ಲೇಷಣೆ ಮಾಡುದ ಕ್ರಮಗಳು ರೂಢಿಗೆ ಬಂದಿವೆ. ಆದರೆ ಲಿಂಗ ಸಮಾನತೆ ಅನ್ನುವುದು ಗಂಡಸರು ಏನನ್ನು ಸಾಧಿಸಿಕೊಂಡಿದ್ದಾರೋ ಅದನ್ನು ಮಹಿಳೆಯರು ಸಾಧಿಸಿಕೊಳ್ಳುವಂತಾಗುವುದು ಅನ್ನುವ ಸೀಮಿತ ಅರ್ಥವನ್ನು ಇಂದು ತಿರಸ್ಕರಿಸಲಾಗಿದೆ. ಸಮಾನತೆಗೆ ಎರಡು ಆಯಾಮಗಳಿವೆ. ಮೊದಲನೆಯದು ಅದನ್ನು ಒಂದು ಸಾಧನಸಂಪತ್ತನ್ನಾಗಿ ನೋಡುವ ಕ್ರಮ. ಎರಡನೆಯದು ಅದನ್ನು ಜನರ ಅಂತರ್ಗತ ಗುಣ, ಭಾವನೆ, ಜನರ ಆಂತರ್ಯಕ್ಕೆ ಸೇರಿದ ಒಂದು ಮೌಲ್ಯ ಎಂದು ಪರಿಭಾವಿಸಿಕೊಳ್ಳುವುದು. ಸರ್ವೇಸಾಮಾನ್ಯವಾಗಿ ಲಿಂಗ ಸಮಾನತೆಯನ್ನು ಒಂದು ಸಾಧನಸಂಪತ್ತನ್ನಾಗಿ ನೋಡುವ ಕ್ರಮ ವ್ಯಾಪಕವಾಗಿ ರೂಢಿಯಲ್ಲಿದೆ. ಇದಕ್ಕೆ ಪ್ರತಿಯಾಗಿ ಅದನ್ನು ಒಂದು ನೈತಿಕ ಮೌಲ್ಯವನ್ನಾಗಿ ಪರಿಭಾವಿಸಿಕೊಳ್ಳುವ ಅಗತ್ಯವಿದೆ.
ಬಹಳ ಮುಖ್ಯವಾಗಿ ಲಿಂಗ ಸಮಾನತೆಯು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ. ಅದು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ್ದು ಅನ್ನುವ ನಂಬಿಕೆ ಸಮಾಜದಲ್ಲಿ ವ್ಯಾಪಕವಾಗಿ ಹರಡಿದೆ. ಇಲ್ಲಿ ಸರ್ಕಾರದ ಪಾತ್ರವಿದೆ, ಕಾನೂನುಗಳಿವೆ, ರೂಢಿ ನಂಬಿಕೆಗಳ ಪಾತ್ರವಿದೆ. ಇದರಲ್ಲಿ ಪುರುಷರ ಪಾತ್ರವೂ ಇದೆ. ಈ ಕಾರಣಕ್ಕಾಗಿಯೇ ಇಂದು ಲಿಂಗ ಸಮಾನತೆ ಅನ್ನುವುದನ್ನು ಮಾನವ ಸಮಾನತೆಯನ್ನಾಗಿ ಮಹಿಳಾ ನ್ಯಾಯ ಅನ್ನುವುದನ್ನು ಮಾನವ ನ್ಯಾಯ ಎಂಬುದಾಗಿ ಪರಿಭಾವಿಸಿಕೊಳ್ಳುವ ಬಗ್ಗೆ ನಾವು ಚಿಂತಿಸಬೇಕಾಗಿದೆ. ಸಮಾಜ, ಸಮುದಾಯ, ಕುಟುಂಬ ಇವೆಲ್ಲವೂ ಮಹಿಳೆಯರು ಮತ್ತು ಪುರುಷರಿಂದ ಕೂಡಿದ ಸಂಸ್ಥೆಗಳಾಗಿವೆ. ಇಲ್ಲಿ ಮಹಿಳೆಯರ ಜಗತ್ತು (ಖಾಸಗಿ ಜಗತ್ತು)-ಪುರುಷರ ಜಗತ್ತು (ಸಾರ್ವಜನಿಕ ಜಗತ್ತು) ಅನ್ನುವುದಕ್ಕೆ ಯಾವುದೇ ಅರ್ಥವಿಲ್ಲ. ಇಂದು ಮಹಿಳೆಯರ ಸ್ವಾತಂತ್ರ್ಯಕ್ಕೆ ಇರುವ ಬಹು ದೊಡ್ಡ ಅಡ್ಡಿಯೆಂದರೆ ಲಿಂಗ ಸಮಾನತೆಯನ್ನು ಸಾಧಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಗಂಡಸರು ಗೈರುಹಾಜರಾಗಿರುವುದು. ಅನೇಕ ಸ್ತ್ರೀವಾದಿಗಳ, ತತ್ವಶಾಸ್ತ್ರಜ್ಞರ, ದಾರ್ಶನಿಕರ ಪ್ರಕಾರ ಮಹಿಳಾ ಗುಣ ಮತ್ತು ಪುರುಷ ಗುಣ ಅನ್ನುವ ಸಂಗತಿಗಳಿವೆ. ಈ ಎರಡೂ ಗುಣಗಳು ಇಬ್ಬರಲ್ಲೂ ಇರುವುದು ಸಾಧ್ಯ. ಮಹಿಳೆಯರ ಗುಣ-ಪುರುಷರ ಗುಣ ಅನ್ನುವುದಕ್ಕೆ ಪ್ರತಿಯಾಗಿ ನಾವು ಮಾನವ ಗುಣದ ಬಗ್ಗೆ ಚರ್ಚೆ ಮಾಡುವ ಅಗತ್ಯವಿದೆ. ಇವೆರಡು ಗುಣಗಳನ್ನು ರೂಢಿಸಿಕೊಂಡಾಗ ಮಾತ್ರ ಮನುಷ್ಯನ ಬದುಕಿಗೆ ಒಂದು ಅರ್ಥ ಸಾಧ್ಯ. ತಾಯಿ ಗುಣ ಅನ್ನುವುದು(ಮಕ್ಕಳನ್ನು ಹೆರುವ ಜೈವಿಕ ಚಟುವಟಿಕೆಯನ್ನು ಹೊರತುಪಡಿಸಿ) ಮಹಿಳೆಯರಿಗೆ ವಿಶಿಷ್ಟವಾದುದೇನಲ್ಲ. ಅವರೂ ಕೂಡ ಬೆಳೆಸಿಕೊಂಡಿರುವ ಗುಣ ಅದಾಗಿದೆ.
ಈ ಹಿನ್ನೆಲೆಯಲ್ಲಿ ಕುಟುಂಬ-ಕೆಲಸ ಎರಡನ್ನು ನಿಭಾಯಿಸಿಕೊಂಡು ಹೋಗುವ ಸಾಮರ್ಥ್ಯವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು ಎಂಬ ವಾದವನ್ನು ರೂಪಿಸಲಾಗುತ್ತಿದೆ. ಈ ದಿಶೆಯಲ್ಲಿ ಅತ್ಯಂತ ಪ್ರಸಿದ್ಧಿಗೆ ಬಂದಿರುವ ಶೆರಿ ಸ್ಯಾಂಡ್ಬರ್ಗ್ ಅವರ ‘ಲೀನ್ ಇನ್: ವುಮೆನ್, ವರ್ಕ್ ಮತ್ತು ವಿಲ್ ಟು ಲೀಡ್’ ಕೃತಿಯಲ್ಲಿ ಇಂತಹ ಒಂದು ಕರೆಯನ್ನು ನೀಡಲಾಗಿದೆ. ಕುಟುಂಬ ಮತ್ತು ಕೆಲಸ ಎರಡನ್ನು ಸಮನ್ವಯಗೊಳಿಸಿಕೊಂಡು ಹೋಗುವುದು ಸಾಧ್ಯವಾಗದಿದ್ದರೆ ಅದು ಮಹಿಳೆಯರ ವೈಫಲ್ಯದ ಸೂಚಿಯೇ ವಿನಾ ಲಿಂಗ ಅಸಮಾನತೆಯ ಸಂಗತಿಯಲ್ಲ ಎಂದು ಸ್ಯಾಂಡ್ಬರ್ಗ್ ಹೇಳುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಗಂಡಸರನ್ನು ಹೊರತುಪಡಿಸಿ ಲಿಂಗ ಸಮಾನತೆ ಬಗ್ಗೆ ನಡೆಸುತ್ತಿರುವ ಚರ್ಚೆಯಾಗಿದೆ. ಕುಟುಂಬ-ಕೆಲಸ ಇವೆರಡು ಬಗೆಯ ದುಡಿಕೆಗಳ ನಡುವೆ ಸಮನ್ವಯ ಸಾಧಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಗಂಡಸರ ಪಾತ್ರದ ಬಗ್ಗೆ ಸ್ಯಾಂಡ್ಬರ್ಗ್ ಮಾತನಾಡುವುದಿಲ್ಲ. ವಾಸ್ತವಾಗಿ ಇದು ಲಿಂಗ ಅಸಮಾನತೆಯನ್ನು ಗಟ್ಟಿ ಮಾಡುವ ಸಂಗತಿಯೇ ವಿನಾ ಮಹಿಳೆಯರಿಗೆ ಸ್ವಾತಂತ್ರ್ಯವನ್ನು ನೀಡುವ ಕ್ರಮವೇನಲ್ಲ.
ಇಂದು ನಮ್ಮ ದೇಶದಲ್ಲಿ ಸಾಮಾಜಿಕ ನಾಯಕರು ಮಹಿಳೆಯರ ಜಗತ್ತೇನಿದ್ದರೂ ಮನೆ ಮತ್ತು ಮನೆವಾರ್ತೆ ಅನ್ನುತ್ತಿದ್ದಾರೆ. ಮಹಿಳೆಯರ ಉಡುಪು ಸಂಹಿತೆ, ಆಹಾರ ಸಂಹಿತೆ, ಸಂಚಾರ ಸಂಹಿತೆ ಬಗ್ಗೆ ಸಾಧು-ಸಂತರು ಮಾತನಾಡುತ್ತಿದ್ದಾರೆ. ಮಹಿಳೆಯರು ಯಾವ ರೀತಿಯ ವಸ್ತ್ರ ತೊಡಬೇಕು, ಯಾವ ರೀತಿಯ ಆಹಾರವನ್ನು ಎಷ್ಟು ಸೇವಿಸಬೇಕು, ಎಲ್ಲೆಲ್ಲಿ ಓಡಾಡಬೇಕು, ಯಾವ ಸಮಯದಲ್ಲಿ ಓಡಾಡಬೇಕು, ಅವರು ಮೊಬೈಲ್ ಬಳಸಬೇಕೆ ಬೇಡವೆ, ಅವರು ದೇವಾಲಯಗಳ ಗರ್ಭಗುಡಿಯೊಳಗೆ ಪ್ರವೇಶಿಸಬಹುದೇ ಇಲ್ಲವೇ ಮುಂತಾದ ‘ರಾಷ್ಟ್ರೀಯ’ ಮಹತ್ವದ ಸಂಗತಿಗಳ ಬಗ್ಗೆ ದೊಡ್ಡ ದೊಡ್ಡ ನಾಯಕರು, ಸಂಘಟನೆಗಳ ಮುಖ್ಯಸ್ಥರು, ರಾಜಕೀಯ ನೇತಾರರು ಆಳವಾಗಿ ಚಿಂತಿಸಿ ನಮ್ಮ ಪರಂಪರೆಯ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದಾರೆ. ಇವರೆಲ್ಲ ಮಹಿಳೆಯರನ್ನು ಮನುಷ್ಯರೆಂದು ಪರಿಗಣಿಸಲು ಸಿದ್ಧವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅವರನ್ನು ಸಾಧನ ಸಂಪತ್ತನ್ನಾಗಿ ನೋಡುವ ಕ್ರಮಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದು. ಒಳ್ಳೆಯ-ಸಭ್ಯ ಮಹಿಳೆಯರು ಯಾರು ಎಂದರೆ ಚೆನ್ನಾಗಿ ಅಡುಗೆ ಮಾಡಿ ಗಂಡಸರಿಗೆ ಬಡಿಸುವವರು ಎಂದು ನಮ್ಮ ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿರುವ ನಾಯಕರೊಬ್ಬರು ಅಪ್ಪಣೆಕೊಡಿಸಿದ್ದಾರೆಂದು ಹೇಳಲಾಗುತ್ತಿದೆ. ಈ ಮಾತನ್ನು ಗಂಡಸರ ಬಗ್ಗೆ ಏಕೆ ಹೇಳುವುದಿಲ್ಲ? ಮಕ್ಕಳನ್ನು ಪೋಷಿಸುವುದು ತಾಯಿಯ ಜವಾಬ್ದಾರಿ ಎಂದು ನಮ್ಮ ಸಾಧು-ಸಂತರು-ಬಾಬಾಗಳು ಉಪದೇಶ ಮಾಡುತ್ತಿದ್ದಾರೆ. ಹಾಗಾದರೆ ಗಂಡಸರು ಗೃಹಸ್ಥರಲ್ಲವೆ? ಅವರಿಗೆ ಜವಾಬ್ದಾರಿ ಇಲ್ಲವೆ/ಬೇಡವೆ? ಈ ಹಿನ್ನೆಲೆಯಲ್ಲಿ ಸಾಕ್ಷರತೆ, ಶಿಕ್ಷಣ, ಆರೋಗ್ಯ, ಉದ್ಯೋಗ, ವರಮಾನ, ಭದ್ರತೆ ಮುಂತಾದ ಕ್ಷೇತ್ರಗಳಲ್ಲಿ ಸಮಾನತೆಯನ್ನು ಸಾಧಿಸಿಕೊಂಡು ಮಾಡುವುದೇನಿದೆ!
ಮಹಿಳೆಯರ ಸ್ವಾಯತ್ತೆಯ ಬಗ್ಗೆ, ಅವರ ಸ್ವಾತಂತ್ರ್ಯದ ಬಗ್ಗೆ ನಾವು ಇಂದು ಲಿಂಗ ಸಮಾನತೆಯ ಗಡಿ ಮೀರಿ ಚಿಂತಿಸಬೇಕಾಗಿದೆ. ಲಿಂಗ ಸಮಾನತೆ ಅನ್ನುವುದು ಗಂಡಸರು, ಹೆಂಗಸರು, ಸಾಧುಗಳು, ಪ್ರಧಾನಿಗಳು, ಮಠಾಧೀಶರು, ಮಂತ್ರಿಗಳು — ಹೀಗೆ ಎಲ್ಲರಿಗೂ ಸಂಬಂಧಿಸಿದ ಸಂಗತಿ. ಅದೊಂದು ಸಾಮಾಜಿಕ ಮೌಲ್ಯ. ಅದಕ್ಕೆ ಆರ್ಥಿಕ ಮಹತ್ವವೂ ಇದೆ. ಅದರಿಂದ ರಾಷ್ಟ್ರೀಯ ಉತ್ಪನ್ನವು ಅಧಿಕವಾಗುತ್ತದೆ ಎಂಬುದನ್ನು ಸಾಧಿಸಿರುವ ಅನೇಕ ಅಧ್ಯಯನಗಳು ನಮ್ಮ ಮುಂದಿವೆ. ಇದಕ್ಕಾಗಿ ಮಹಿಳೆಯರ ಸ್ವಾತಂತ್ರ್ಯವನ್ನು ಲಿಂಗ ಸಮಾನತೆಯ ಗಡಿಯನ್ನು ಮೀರಿ, ಮಹಿಳೆಯರಿಗೆ ಮಾತ್ರ ಸಂಬಂಧಿಸಿದ್ದು ಅನ್ನುವುದರ ವ್ಯಾಪ್ತಿಯನ್ನು ಮೀರಿ ಚಿಂತಿಸಬೇಕಾಗಿದೆ.
ಉಭಯ ದೃಷ್ಟಿ ಏಕದೃಷ್ಟಿಯಲ್ಲಿ ಕಾಂಬಂತೆ, ದಂಪತಿ ಏಕೋಭಾವದಲ್ಲಿ ನಿಂದಲ್ಲಿ ಗುಹೇಶ್ವರನಿಗೆ ಅರ್ಪಿತವಾಗಿತ್ತು- ಅಲ್ಲಮ ಪ್ರಭು

ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.