ಲಿಂಗ ಸಮಾನತೆಯ ಮೂರು ತೀರ್ಪುಗಳು – ಡಾ. ಟಿ.ಆರ್‌. ಚಂದ್ರಶೇಖರ್‌

ಕಳೆದ ಸೆಪ್ಟೆಂಬರ್ 2018ರಲ್ಲಿ ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು ಲಿಂಗ ಸಮಾನತೆಯ ಮೇಲೆ ಅಪಾರ ಪ್ರಭಾವ ಬೀರಬಲ್ಲ ಮೂರು ಚಾರಿತ್ರಿಕ ಮಹತ್ವದ ತೀರ್ಪುಗಳನ್ನು ನೀಡಿದೆ. ಮೊದಲನೆಯದಾಗಿ ಸಲಿಂಗಕಾಮವನ್ನು ಐಪಿಸಿ ಭಾಗ 377ರಡಿಯಲ್ಲಿ ಅಪರಾಧವಲ್ಲವೆಂದು ನೀಡಿರುವ ತೀರ್ಪು(ಸೆಪ್ಟೆಂಬರ್ 6, 2018), ಎರಡನೆಯದಾಗಿ ಐಪಿಸಿ ಭಾಗ 497ರಲ್ಲಿ ವ್ಯಭಿಚಾರವನ್ನು ಅಪರಾಧವೆದು ಪರಿಗಣಿಸುವುದನ್ನು ರದ್ದುಪಡಿಸಿದ ತೀರ್ಪು(ಸೆಪ್ಟೆಂಬರ್ 27, 2018)ಮತ್ತು ಮೂರನೆಯದಾಗಿ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಮೇಲಿನ ನಿಷೇಧವನ್ನು ರದ್ದುಪಡಿಸಿದ ತೀರ್ಪು(ಸೆಪ್ಟೆಂಬರ್ 28, 2018). ಈ ಮೂರು ವಿಸ್ತøತವಾಗಿ ಮಹಿಳೆಯರಿಗೆ ತೀವ್ರವಾಗಿ ಸಂಬಂಧಿಸಿದ ತೀರ್ಪುಗಳಾಗಿವೆ. ಹಾಗೆ ನೋಡಿದರೆ ಐಪಿಸಿ ಭಾಗ 377ಕ್ಕೆ ಸಂಬಂಧಿಸಿದ ತೀರ್ಪು ಗಂಡು ಅಥವಾ ಹೆಣ್ಣಿಗೆ ಸಂಬಂಧಿಸಿದ್ದು ಎನ್ನುವುದನ್ನು ಮರುಪರಿಶೀಲಿಸುವ ಅಗತ್ಯವಿದೆ. ಏಕೆಂದರೆ ಇದು ಮೂರನೆಯ ಲಿಂಗಿಗಳ ಸಮುದಾಯಕ್ಕೆ ಸಂಬಂಧಿಸಿದ ತೀರ್ಪಾಗಿದೆ. ಸ್ತ್ರೀಲಿಂಗ ಮತ್ತು ಪುಲ್ಲಿಂಗಗಳ ಜೊತೆಯಲ್ಲಿ ಇಂದು ನಾವು ಮೂರನೆಯ ಲಿಂಗ(ನಪುಂಸಕ ಅಲ್ಲ)ವನ್ನು ಶಾಸನಾತ್ಮಕವಾಗಿ ಮನ್ನಿಸುವ ಸಂಗತಿಗೆ ಸದರಿ ತೀರ್ಪು ಸಂಬಂಧಿಸಿದೆ. ಪುರುಷಶಾಹಿ ಮೌಲ್ಯವನ್ನು ಊರ್ಜಿತಗೊಳಿಸಿಕೊಂಡು ಬರುತ್ತಿರುವ ಭಾರತೀಯ ಸಮಾಜದ ಚೌಕಟ್ಟಿನಲ್ಲಿ ಇದೊಂದು ಕ್ರಾಂತಿಕಾರಿ ತೀರ್ಪಾಗಿದೆ. ಈ ಮೂರು ಸಂವಿಧಾನ ಪೀಠಗಳ ತೀರ್ಪುಗಳಾಗಿವೆ.

ಐಪಿಸಿ 377ರಡಿಯಲ್ಲಿ ಸಲಿಂಗಕಾಮ ಅಪರಾಧವಲ್ಲ

ಈ ಮೂರು ತೀರ್ಪುಗಳಲ್ಲಿ ಮೊದಲನೆಯದು ಸಲಿಂಗಸಂಬಂಧವನ್ನು ಅಪರಾಧವೆಂದು ಪರಿಗಣಿಸಿರುವ ಭಾರತೀಯ ದಂಡ ಸಂಹಿತೆಯ ಭಾಗ 377ಕ್ಕೆ ಸಂಬಂಧಿಸಿದೆ. ಈ ತೀರ್ಪಿನ ಭಾಗವಾಗಿ ಸರ್ವೋಚ್ಛ ನ್ಯಾಯಾಲಯವು ಕೆಲವು ಸಾಮಾನ್ಯ ಹೇಳಿಕೆಗಳನ್ನು ತನ್ನ ತೀರ್ಪಿನ ಭಾಗವಾಗಿ ಬಳಸಿದೆ. ಅದರ ಪ್ರಕಾರ ‘ಶಾಸನಗಳು ಕಾಲಮಾನಕ್ಕೆ ತಕ್ಕಂತೆ ಪ್ರತಿಸ್ಪಂದಿಸಬೇಕು’, ‘ಸಾಮಾಜಿಕ ನೈತಿಕತೆ ಎನ್ನುವುದು ವ್ಯಕ್ತಿಯ ಹಕ್ಕಿಗೆ ದಕ್ಕೆ ಉಂಟುಮಾಡುವಂತಿರಬಾರದು’, ‘ಸರ್ವೋಚ್ಛ ನ್ಯಾಯಾಲಯವು ಸಂವಿಧಾನದ ನಿಯಮಗಳಂತೆ ಕಾರ್ಯನಿರ್ವಹಿಸುತ್ತದೆ ವಿನಾ ಬಹುಮತದ ಜನಾಭಿಪ್ರಾಯದ ಮೇಲೆ ಕಾರ್ಯನಿರ್ವಹಿಸುವುದಿಲ್ಲ’ ಮತ್ತು ‘ಸಾರ್ವಜನಿಕರು ಪರಿಭಾವಿಸಿಕೊಳ್ಳುವ ಸಾಮಾಜಿಕ ನೈತಿಕತೆ ಎನ್ನುವುದು ಸಂವಿಧಾನಾತ್ಮಕವಾಗಿರುತ್ತದೆ ಎಂದು ಹೇಳಲು ಬರುವುದಿಲ್ಲ’. ಸರ್ವೋಚ್ಛ ನ್ಯಾಯಾಲಯವು 2017ರಲ್ಲಿ ಖಾಸಗಿತನ ಮೂಲಭೂತ ಹಕ್ಕು ಎಂದು ಘೋಷಿಸಿದ್ದ ತೀರ್ಪಿನ ಚೌಕಟ್ಟಿನಲ್ಲಿ ಐಪಿಸಿಯ ಭಾಗ 377ಕ್ಕೆ ಸಂಬಂಧಿಸಿದ ತೀರ್ಪನ್ನು ನೀಡಿದೆ. ಅತ್ಯಂತ ಕುತೂಹಲದ ಸಂಗತಿಯೆಂದರೆ ಸದರಿ ವಿವಾದದ ಬಗ್ಗೆ ಕೇಂದ್ರ ಸರ್ಕಾರವು ತನ್ನ ಅಭಿಪ್ರಾಯವನ್ನು ನ್ಯಾಯಲಯಕ್ಕೆ ಸಲ್ಲಿಸದೆ ನ್ಯಾಯಾಲಯದ ವಿವೇಚನೆಗೆ ಅದನ್ನು ಬಿಟ್ಟುಬಿಟ್ಟಿತು. ಅಂದರೆ ಕೇಂದ್ರ ಸರ್ಕಾರಕ್ಕೆ ಐಪಿಸಿಯ ಭಾಗ 377ರ ಬದಲಾವಣೆ ಬಗ್ಗೆ ಸಹಮತವಿರಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಸರ್ವೋಚ್ಛ ನ್ಯಾಯಾಲಯವು ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸುವ ಐಪಿಸಿಯ ಭಾಗ 377 ಶಾಸನವನ್ನು ರದ್ದುಪಡಿಸಿದೆ. ಪರಸ್ಪರ ಒಪ್ಪಿಗೆಯೊಂದಿಗೆ ಸಲಿಂಗಸಂಬಂಧವು ಅಪರಾಧವಲ್ಲವೆಂದು ಅದು ಘೋಷಿಸಿದೆ. ಲೈಂಗಿಕ ಪ್ರವೃತ್ತಿಗಳು ನೈಸರ್ಗಿಕವಾದವು. ಅವು ಮನುಷ್ಯನ ನಿಯಂತ್ರಣವನ್ನು ಮೀರಿದ ಸಂಗತಿಗಳಾಗಿವೆ ಎಂದು ತೀರ್ಪಿನಲ್ಲಿ ಅದು ತನ್ನ ಅಭಿಪ್ರಾಯ ತಿಳಿಸಿದೆ. ಪರಸ್ಪರ ಒಪ್ಪಿಗೆಯಿಂದ ವಯಸ್ಕರು ನಡೆಸುವ ಲೈಂಗಿಕ ಕ್ರಿಯೆಗಳು ಖಾಸಗಿ ಸಂಗತಿಗಳಾಗಿವೆ. ಇದು ವ್ಯಕ್ತಿಗಳ ಆಯ್ಕೆಗೆ ಸಂಬಂಧಿಸಿದ ಸಂಗತಿ. ಈ ಹಿನ್ನೆಲೆಯಲ್ಲಿ ಐಪಿಸಿ ಭಾಗ 377 ಸಂವಿಧಾನದ ನಿಯಮಕ್ಕೆ ವಿರುದ್ಧವಾಗಿದೆ. ಇದು ಸಮಾನತೆ ಹಕ್ಕಿನ ವ್ಯಾಪ್ತಿಯನ್ನು ಸೀಮಿತಗೊಳಿಸುತ್ತದೆ. ವಸಾಹತು ಕಾಲದಿಂದ 158 ವರ್ಷಗಳಿಂದ ಆಚರಣೆಯಲ್ಲಿದ್ದ ಶಾಸನವನ್ನು ನ್ಯಾಯಾಲಯವು ರದ್ದುಪಡಿಸಿ ಮೂರನೆಯ ಲಿಂಗಿ ಸಮುದಾಯಗಳಿಗೆ ಸ್ವಾತಂತ್ರ್ಯವನ್ನು ನೀಡಿದೆ. ಮೂರನೆಯ ಲಿಂಗಿಗಳ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಈ ತೀರ್ಪು ವಿಸ್ತರಿಸಿದೆ. ಈ ವರ್ಗ ಅನುಭವಿಸುತ್ತಿದ್ದ ಮಾನಸಿಕ ಹಿಂಸೆಯಿಂದ ಇದು ಮುಕ್ತಿ ನೀಡಿದೆ. ಸರ್ವೋಚ್ಛ ನ್ಯಾಯಾಲಯವು ಐಪಿಸಿಯ ಭಾಗ 377ನ್ನು ಅವೈಜ್ಞಾನಿಕವೆಂದು, ತಾರತಮ್ಯದಿಂದ ಕೂಡಿದೆಯೆಂದು ಮತ್ತು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದ ಶಾಸನವೆಂದು ಬಣ್ಣಿಸಿದೆ. ನ್ಯಾಯಾಲಯವು ಸಂವಿಧಾನದ ಪರಿಚ್ಛೇದ 21ರ ಬದುಕುವ ಹಕ್ಕಿನ ಭಾಗವಾಗಿ ಖಾಸಗಿತನದ ಹಕ್ಕನ್ನು ಪರಿಭಾವಿಸಿಕೊಂಡು 377ರ ಬಗ್ಗೆ ತನ್ನ ತೀರ್ಪವನ್ನು ರೂಪಿಸಿದೆ. ಎಲ್ಲರನ್ನು ಒಳಗೊಳ್ಳುವ ಕ್ರಮದ ಮೌಲ್ಯವನ್ನು ಸದರಿ ತೀರ್ಪು ವರ್ಧಿಸಿದೆ ಎಂದು ಹೇಳಬಹುದು.

ಈ ತೀರ್ಪಿನಲ್ಲಿ ವ್ಯಾಪಕವಾಗಿ ಚರ್ಚೆಯಾಗಿರುವ ಸಂಗತಿಯೆಂದರೆ ಮನುಷ್ಯನ ‘ಗುರುತು’. ಮನುಷ್ಯನ ಘನತೆಯ ಇರುವಿಕೆಯನ್ನು ನಿರ್ಧರಿಸುವ ಸಂಗತಿ ಗುರುತು. ನೈಸರ್ಗಿಕವಾಗಿ ಮನುಷ್ಯನಿಗೆ ಪ್ರಾಪ್ತವಾಗುವ ಗುರುತನ್ನು ಒಪ್ಪಿಕೊಳ್ಳಬೇಕು ಮತ್ತು ಗೌರವಿಸಬೇಕು. ವ್ಯಕ್ತಿಯ ಗುರುತನ್ನು ಹೀಯಾಳಿಸುವುದೆಂದರೆ ಅವನ ವ್ಯಕ್ತಿತ್ವವನ್ನು ನಾಶ ಮಾಡುವುದು ಎಂದು ಅರ್ಥ. ಇದು ವ್ಯಕ್ತಿತ್ವನ್ನು ನಾಶ ಮಾಡುವಲ್ಲಿಂದ ಆರಂಭವಾಗಿ ವ್ಯಕ್ತಿಯ ಖಾಸಗಿತನ, ಆಯ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ಅದು ನಾಶ ಮಾಡಿಬಿಡುತ್ತದೆ. ಐಪಿಸಿಯ ಭಾಗ 377 ಮೂರನೆಯ ಲಿಂಗಿಗಳ ಗುರುತನ್ನು, ಆ ಮೂಲಕ ಅವರ ಘನತೆಯ ಬದುಕನ್ನು, ವ್ಯಕ್ತಿತ್ವವನ್ನು ಅಪರಾಧದ ಸ್ಥಾನದಲ್ಲಿ ನಿಲ್ಲಿಸಿಬಿಡುತ್ತದೆ. ಈ ಎಲ್ಲ ಸಂಗತಿಗಳನ್ನು ಸರಿಪಡಿಸುವ ಕ್ರಮವಾಗಿ ಸುಪ್ರೀಮ್ ಕೋರ್ಟು ಐಪಿಸಿಯ 377 ಕಾನೂನನ್ನು ಅಸಂವಿಧಾನಿಕವೆಂದು ರದ್ದುಪಡಿಸಿದೆ.

ಸಾಮಾಜಿಕ ನೈತಿಕತೆ ಮತ್ತು ಸಂವಿಧಾನಾತ್ಮಕ ನೈತಿಕತೆ

ಈ ವಿಷಯಕ್ಕೆ ಸಂಬಂಧಿಸಿದ ತೀರ್ಪು ಅನೇಕ ಕಾರಣಗಳಿಗಾಗಿ ಮಹತ್ವದ್ದಾಗಿದೆ. ಸಂವಿಧಾನಾತ್ಮಕ ನೈತಿಕೆಯು ಎರಡು ಸ್ತಂಬಗಳ ಮೇಲೆ ನಿಂತಿದೆ. (1). ಎಲ್ಲರನ್ನೂ ಒಳಗೊಳ್ಳುವ ಸಮಾಜ (2). ಬಹುವಚನ ಸಮಾಜ. ಮೂರನೆಯ ಲಿಂಗಿಗಳು ಒಟ್ಟು ಜನಸಂಖ್ಯೆಯಲ್ಲಿ ಅತಿಸಣ್ಣ ಭಾಗವಾಗಿರಬಹುದು. ಸಂವಿಧಾನಾತ್ಮಕ ಹಕ್ಕುಗಳು ಪ್ರತಿಯೊಬ್ಬ ಪ್ರಜೆಗೂ ಅನ್ವಯವಾಗುತ್ತವೆ. ಅಲ್ಲಿ ಸಂಖ್ಯೆಯು ಮುಖ್ಯವಾಗುವುದಿಲ್ಲ. ಸಂವಿಧಾನವು ಜಡಸ್ಥಾವರ ದಾಖಲೆಯಲ್ಲ. ಅದು ಕಾಲದ ಅಗತ್ಯಗಳಿಗೆ ಮತ್ತು ಸಮಾಜದ ಒತ್ತಡಗಳಿಗೆ ಸ್ಪಂದಿಸಬೇಕು. ಐಪಿಸಿಯ ಭಾಗ 377ರ ಬಗ್ಗೆ ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪು ಅದು ಜೀವಂತ ಸಂಗತಿಯಾಗಿದೆ ಎಂಬುದನ್ನು ಸಿದ್ಧಮಾಡಿಕೊಟ್ಟಿದೆ. ನ್ಯಾಯಾಲಯದ ಪ್ರಕಾರ ಐಪಿಸಿಯ ಭಾಗ 377 ಜನರ ಘನೆತಯ ಬದುಕಿನ ಹಕ್ಕನ್ನು ಮತ್ತು ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದೆ. ಆದ್ದರಿಂದ ಇದು ಅಸಂವಿಧಾನಿಕ. ಸಾಮಾಜಿಕ ನೈತಿಕತೆಗೆ ಪ್ರತಿಯಾಗಿ ಸರ್ವೋಚ್ಛ ನ್ಯಾಯಾಲಯವು ಸಂವಿಧಾನಾತ್ಮಕ ನೈತಿಕತೆಯನ್ನು ತನ್ನ ಐಪಿಸಿಯ ಭಾಗ 377ರ ಬಗೆಗಿನ ತೀರ್ಪಿನ ಮೂಲಕ ಎತ್ತಿಹಿಡಿದಿದೆ.

ಐಪಿಸಿ ಭಾಗ 497ರಡಿಯಲ್ಲಿ ವ್ಯಭಿಚಾರ ಅಪರಾಧವಲ್ಲ

ಸರ್ವೋಚ್ಛ ನ್ಯಾಯಾಲಯದ ಐವರ ಸಂವಿಧಾನ ಪೀಠವು ಭಾರತೀಯ ದಂಡ ಸಂಹಿತೆಯ ಭಾಗ 497 ಅಸಂವಿಧಾನಿಕ ಎಂದು ಘೋಷಿಸಿ ಅದನ್ನು ರದ್ದುಪಡಿಸಿದೆ. ಈ ಕಾನೂನಿನಡಿಯಲ್ಲಿ ವ್ಯಭಿಚಾರ ಎನ್ನುವುದು ಮಹಿಳೆಯರ ವ್ಯಕ್ತಿತ್ವಕ್ಕೆ ಕುಂದುಂಟು ಮಾಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದು ಸರ್ವಾನುಮತದ ತೀರ್ಪಾಗಿದೆ. ಐಪಿಸಿ ಭಾಗ 497ರ ಪ್ರಕಾರ ಒಬ್ಬ ವಿವಾಹಿತ ವ್ಯಕ್ತಿ ಮತ್ತೊಬ್ಬ ವಿವಾಹಿತ ಹೆಂಡತಿಯ ಜೊತೆಯಲ್ಲಿ, ಆಕೆಯು ಮತ್ತೊಬ್ಬನ ಹೆಂಡತಿಯೆಂದು ತಿಳಿದಿದ್ದೂ ಆಕೆಯ ಗಂಡನ ಒಪ್ಪಿಗೆಯಿಲ್ಲದೆ ಆಕೆಯ ಜೊತೆಯಲ್ಲಿ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರಕ್ಕೆ ಪ್ರತಿಯಾಗಿ ವ್ಯಭಿಚಾರವೆನಿಸುತ್ತದೆ. ಇದು ಶಿಕ್ಷಾರ್ಹ ಅಪರಾಧವಾಗಿದೆ. ಈ ಕಾನೂನಿನ ಪ್ರಕಾರ ವ್ಯಭಿಚಾರದಲ್ಲಿ ತೊಡಗಿರುವ ತನ್ನ ಗಂಡನ ಮೇಲಾಗಲಿ ಅಥವಾ ತನ್ನ ಗಂಡನು ಲೈಂಗಿಕ ಸಂಬಂಧ ಬೆಳೆಸಿದ ವಿವಾಹಿತ ಮಹಿಳೆಯ ಮೇಲಾಗಲಿ ಕಾನೂನಿನ ಕ್ರಮ ತೆಗೆದುಕೊಳ್ಳಲು ವ್ಯಭಿಚಾರದಲ್ಲಿ ತೊಡಗಿದ ವ್ಯಕ್ತಿಯ ಹೆಂಡತಿಗೆ ಅವಕಾಶವಿಲ್ಲ. ಈ ಕಾನೂನನ್ನು ನ್ಯಾಯಾಲಯವು ‘ಮಹಿಳಾ ವಿರೋಧಿ’ ಎಂದು ಘೋಷಿಸಿದೆ. ಈ ಕಾನೂನಿನ ಪ್ರಕಾರ ವಿವಾಹಿತ ವ್ಯಕ್ತಿಯು ಮತ್ತೊಬ್ಬ ವಿವಾಹಿತ ವ್ಯಕ್ತಿಯ ಅನುಮತಿ ಪಡೆದು ಆತನ ಹೆಂಡತಿಯ ಜೊತೆಯಲ್ಲಿ ಲೈಂಗಿಕ ಸಂಬಂಧ ಬೆಳೆಸಿದರೆ ಅದು ಅಪರಾಧವಲ್ಲ. ಅಂದರೆ ಹೆಂಡತಿಯನ್ನು ಆಸ್ತಿಯಂತೆ, ಸರಕಿನಂತೆ ಗಂಡ ಬಳಸಬಹುದು. ಈ ಮಹಿಳಾ ವಿರೋಧಿ ಸಂಗತಿಯ ಹಿನ್ನೆಲೆಯಲ್ಲಿ ನ್ಯಾಯಾಲಯವು ‘ಹೆಂಡತಿಯು ಗಂಡನ ಆಸ್ತಿಯಲ್ಲ, ಗಂಡ ಹೆಂಡತಿಯ ಮಾಲೀಕನಲ್ಲ’ ಎಂದು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ. ನ್ಯಾಯಾಲಯದ ಪ್ರಕಾರ ಹೆಂಡತಿಯನ್ನು ಗಂಡನು ಆಸ್ತಿಯಂತೆ ಬಳಸುವುದು ಭಾರತೀಯ ಸಂಸ್ಕತಿಯಲ್ಲ. ನೈತಿಕತೆ ಎನ್ನುವುದು ಗಂಡ ಮತ್ತು ಹೆಂಡತಿಗೆ ಸಮಾನವಾಗಿರಬೇಕು.

ಅನೇಕರು ತಪ್ಪಾಗಿ ಭಾವಿಸಿರುವಂತೆ ಈ ಐಪಿಸಿ ಭಾಗ 497 ರದ್ದಾಗಿರುವುದರಿಂದ ವ್ಯಭಿಚಾರವನ್ನು ಕಾನೂನುಬದ್ಧ ಮಾಡಿದಂತಾಗಿದೆ ಎಂಬುದು ಸರಿಯಲ್ಲ. ಏಕೆಂದರೆ ಇಲ್ಲಿ ವ್ಯಭಿಚಾರ ಅಂದರೆ ಏನು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಐಪಿಸಿಯ ಭಾಗ 497ರ ಪ್ರಕಾರ ‘ಒಬ್ಬ ವ್ಯಕ್ತಿಯು ತನಗೆ ಪರಿಚಯವಿರುವ ಅಥವಾ ತನಗೆ ಗೊತ್ತಿರುವ ಅಥವಾ ಆಕೆಯು ಮತ್ತೊಬ್ಬನ ಹೆಂಡತಿಯೆಂದು ನಂಬಲು ಕಾರಣವಿರುವ ವ್ಯಕ್ತಿಯ ಜೊತೆ ಆಕೆಯ ಗಂಡನ ಒಪ್ಪಿಗೆಯಿಲ್ಲದೆ ಅಥವಾ ಆತನು ಇಂತಹ ಕಾರ್ಯದಲ್ಲಿ ಶಾಮೀಲಾಗದಿರುವ ಸಂದರ್ಭದಲ್ಲಿ ನಡೆಸುವ ಲೈಂಗಿಕ ಕ್ರಿಯೆ ವ್ಯಭಿಚಾರವೆನಿಸುತ್ತದೆ (ಇದು ಅತ್ಯಾಚಾರವಲ್ಲ)’. ಇಲ್ಲಿ ವ್ಯಭಿಚಾರ ಎನ್ನುವುದು ಸೀಮಿತ ವ್ಯಾಪ್ತಿಯನ್ನು ಪಡೆದಿದೆ. ಈ ಕಾನೂನಿನ ಪ್ರಕಾರ ವಿವಾಹಿತ ಮಹಿಳೆಯ ಜೊತೆಗಿನ ಲೈಂಗಿಕ ಕ್ರಿಯೆ ವ್ಯಭಿಚಾರವೆನಿಸುತ್ತದೆ ವಿನಾ ಅವಿವಾಹಿತ ಮಹಿಳೆಯರ ಜೊತೆಗಿನ ಲೈಂಗಿಕ ಕ್ರಿಯೆಯು ವ್ಯಭಿಚಾರ ಎಂಬ ವ್ಯಾಪ್ತಿಯಲ್ಲಿ ಬರುವುದಿಲ್ಲ. ಸಾಮಾನ್ಯವಾಗಿ ರೂಢಿಯಲ್ಲಿರುವ ವ್ಯಭಿಚಾರ ಎಂಬುದರ ಅರ್ಥವ್ಯಾಪ್ತಿಗೂ ಐಪಿಸಿ 497ರಡಿಯಲ್ಲಿನ ಅರ್ಥ ವ್ಯಾಪ್ತಿಗೂ ವ್ಯತ್ಯಾಸವಿದೆ.

ಸುಪ್ರೀಮ್ ಕೋರ್ಟ್ ತನ್ನ ತೀರ್ಪಿನಲ್ಲಿ ಐಪಿಸಿಯ ಭಾಗ 497ನ್ನು ಮಹಿಳಾ ವಿರೋಧಿ ಎಂದು ಕರೆದಿದೆ, ಏಕೆ?

ಈ ಕಾನೂನಿನಡಿಯಲ್ಲಿ ವಿವಾಹಿತ ವ್ಯಕ್ತಿಯೊಬ್ಬ ಮತ್ತೊಬ್ಬ ವಿವಾಹಿತ/ಅವಿವಾಹಿತ ಮಹಿಳೆಯ ಜೊತೆ ಲೈಂಗಿಕ ಕ್ರಿಯೆಯಂತಹ ವ್ಯಭಿಚಾರ ನಡೆಸಿದಾಗ ಆತನ ವಿರುದ್ಧ ಆತನ ಹೆಂಡತಿಯು ಕಾನೂನು ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ ಮತ್ತು ಇದರಲ್ಲಿ ಭಾಗವಹಿಸಿದ ವಿವಾಹಿತ/ಅವಿವಾಹಿತ ಮಹಿಳೆಯರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ. ಈ ಕಾನೂನು ಗಂಡನೊಬ್ಬ ತನ್ನ ಹೆಂಡತಿಯನ್ನು ಸ್ವಂತ ಆಸ್ತಿಯಂತೆ ಮತ್ತೊಬ್ಬ ವ್ಯಕ್ತಿಯ ಭೋಗ್ಯಕ್ಕೆ ನೀಡಲು ಅವಕಾಶ ನೀಡುತ್ತದೆ. ಈ ಕಾನೂನು ಒಬ್ಬ ವಿವಾಹಿತ ವ್ಯಕ್ತಿಯು ಮತ್ತೊಬ್ಬ ವಿವಾಹಿತ ವ್ಯಕ್ತಿಯ ಹೆಂಡತಿಯನ್ನು ಆಕೆಯ ಗಂಡನ ಒಪ್ಪಿಗೆಯಲ್ಲಿ ತನ್ನ ಲೈಂಗಿಕ ತೃಷೆಯನ್ನು ತೃಪ್ತಿಪಡಿಸಿಕೊಳ್ಳಲು ಬಳಸಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ. ಈ ಕಾನೂನಿನ ಪ್ರಕಾರ ಇದು ಅಪರಾಧವಲ್ಲ. ಅಂದರೆ ಐಪಿಸಿಯ ಭಾಗ 497 ಮಹಿಳೆಯರ ಪರವಾಗಿದೆಯೆಂದು ಕಂಡುಬಂದರೂ ಅದು ಮಹಿಳಾ ವಿರೋಧಿಯಾಗಿದೆ. ಈ ಕಾರಣಗಳಿಂದ ಈ ಕಾನೂನು ಲಿಂಗ ಅಸಮಾನತೆಯ ಸಂಗತಿಗಳನ್ನು ಒಳಗೊಂಡಿರುವಂತೆ ಕಾಣುತ್ತದೆ. ಇದಕ್ಕಾಗಿ ಸರ್ವೋಚ್ಛ ನ್ಯಾಯಾಲಯವು ಐಪಿಸಿಯ ಭಾಗ 947ಕ್ಕೆ ಸಂಬಂಧಿಸಿದಂತೆ ‘ಹೆಂಡತಿಯು ಗಂಡನ ಆಸ್ತ್ತಿಯೂ ಅಲ್ಲ; ಗಂಡನು ಹೆಂಡತಿಯ ಮಾಲೀಕನೂ ಅಲ್ಲ’ ಎಂದು ಘೋಷಿಸಿದೆ. ಆದರೆ ಐಪಿಸಿಯ ಭಾಗ 497ರ ರದ್ದುಪಡಿಸುವುದಕ್ಕೆ ಕೇಂದ್ರ ಸರ್ಕಾರದ ಸಹಮತವಿರಲಿಲ್ಲ ಎಂಬುದು ವಿಚಿತ್ರವೆನಿಸುತ್ತದೆ.

ಕೇಂದ್ರದ ಪ್ರತಿಗಾಮಿ ನಿಲುವು

ಕೇಂದ್ರ ಸರ್ಕಾರವು ಐಪಿಸಿಯ ಭಾಗ 377ಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯವು ಬಯಸಿದರೂ ಕೂಡ ತನ್ನ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ತಿಳಿಸಲಿಲ್ಲ. ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅವಕಾಶವನ್ನು ನ್ಯಾಯಾಲಯದ ಪೂರ್ಣ ವಿವೇಚನೆಗೆ ಕೇಂದ್ರವು ಬಿಟ್ಟುಕೊಟ್ಟಿತು. ಆದರೆ ಐಪಿಸಿಯ ಭಾಗ 497ರ ಬಗ್ಗೆ ಕೇಂದ್ರವು ತನ್ನ ಅಭಿಪ್ರಾಯವನ್ನು ಒಂದು ಅಫಿಡವಿಟ್ ಮೂಲಕ ನ್ಯಾಯಲಯಕ್ಕೆ ಸಲ್ಲಿಸಿತು. ಕೇಂದ್ರ ಸರ್ಕಾರದ ಗೃಹ ಇಲಾಖೆಯು ತನ್ನ ಅಫಿಡವಿಟ್‍ನಲ್ಲಿ ವ್ಯಭಿಚಾರವನ್ನು ಅಪರಾಧವೆಂದು ಪರಿಗಣಿಸಿರುವ ಐಪಿಸಿಯ 497ನ್ನು ಮುಂದುವರಿಸುವುದು ಉತ್ತಮವೆಂದು ತಿಳಿಸಿತು. ವ್ಯಭಿಚಾರದ ಕಾನೂನನ್ನು ಸಡಿಲಗೊಳಿಸಿದರೆ ವಿವಾಹವೆಂಬ ಸಂಸ್ಥೆಯ ಮೇಲೆ ಇದು ಪರಿಣಾಮ ಬೀರುತ್ತದೆ. ವಿವಾಹವೆಂಬ ಸಂಸ್ಥೆಯನ್ನು ಅಭದ್ರಗೊಳಿಸುವುದು ಅಪೇಕ್ಷಣಿಯವಲ್ಲ. ಈ ಹಿನ್ನೆಲೆಯಲ್ಲಿ ನೋಡಿದಾಗ ಕೇಂದ್ರ ಸರ್ಕಾರಕ್ಕೆ ಮಹಿಳೆಯರಿಗೆ ನ್ಯಾಯ ಒದಗಿಸುವುದಕ್ಕೆ ಪ್ರತಿಯಾಗಿ ಸಮಾಜದ ಭದ್ರತೆ, ವಿವಾಹ ಸಂಸ್ಥೆಯ ಪಾವಿತ್ರ್ಯತೆ ಮುಖ್ಯವಾಗಿರುವಂತೆ ಕಾಣುತ್ತದೆ.

ಆದರೆ ಸರ್ವೋಚ್ಛ ನ್ಯಾಯಾಲಯವು ಕೇಂದ್ರ ಸರ್ಕಾರದ ನಿಲುವನ್ನು ಪರಿಗಣನೆಗೆ ತೆಗೆದುಕೊಂಡೂ ಐಪಿಸಿಯ ಭಾಗ 497ನ್ನು ರದ್ದುಪಡಿಸಿದೆ. ಗಂಡನ ಒಪ್ಪಿಗೆಯ ಮೇರೆಗೆ ಹೆಂಡತಿಯನ್ನು ಮತ್ತೊಬ್ಬ ವಿವಾಹಿತ ವ್ಯಕ್ತಿಯ ಭೋಗಕ್ಕೆ/ಭೋಗ್ಯಕ್ಕೆ ವಹಿಸಿಕೊಡುವುದು ಅನೈತಿಕ ಎಂದು ಭಾವಿಸಿ ನ್ಯಾಯಾಲಯವು ವ್ಯಭಿಚಾರ ಶಾಸನಕ್ಕೆ ಕೊನೆ ಹಾಡಿತು. ಲಿಂಗ ನ್ಯಾಯವನ್ನು ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿದೆ.

ಶಬರಿಮಲೆ ದೇವಾಲಯದೊಳಗೆ ಮಹಿಳೆಯರ ಪ್ರವೇಶ ನಿಷೇಧದ ವಿವಾದ

ನಮ್ಮ ಸಮಾಜವು ಮೂಲಭೂತವಾಗಿ ಪುರುಷಶಾಹಿ ಎಂಬುದು ಶಬರಿಮಲೆ ದೇವಾಲಯದ ವಿವಾದದ ಸಂದರ್ಭದಲ್ಲಿ ಸಾಬೀತಾಗಿದೆ. ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಧಾರ್ಮಿಕ ಸಂಗತಿಗಳನ್ನು ಮಹಿಳಾ ವಿರೋಧಿಯಾಗಿ ಬಳಸುತ್ತಿರುವುದು ವಿಚಿತ್ರವಾಗಿ ಕಾಣುತ್ತದೆ. ಮನುಷ್ಯರೆಲ್ಲರನ್ನೂ ದೇವರ ಮಕ್ಕಳೆಂದು ಪರಿಗಣಿಸಬೇಕು ಎಂದು ಎಲ್ಲ ಧರ್ಮಗಳು ಬೋಧಿಸುತ್ತವೆ. ಆದರೆ ಇದು ಕೇವಲ ಶಾಸ್ತ್ರಕ್ಕೆ ಮಾತ್ರ ಸೀಮಿತಗೊಂಡಿದೆ. ವಾಸ್ತವವಾಗಿ ಸಮಾಜದಲ್ಲಿ ಲಿಂಗಸಂಬಂಧಗಳ ಆಧಾರದಲ್ಲಿ, ಸಾಮಾಜಿಕ ಗುಂಪುಗಳ ನೆಲೆಯಲ್ಲಿ ಮತ್ತು ಆರ್ಥಿಕ ಅಂತಸ್ತುಗಳ ವ್ಯಾಪ್ತಿಯಲ್ಲಿ ಅಸಮಾನೆತಗಳನ್ನು ಊರ್ಜಿತಗೊಳಿಸಿಕೊಂಡು ಬರಲಾಗಿದೆ. ಇದು ಕೇವಲ ಅಸಮಾನತೆ ಮಾತ್ರವಲ್ಲ. ಇದು ಶ್ರೇಣೀಕೃತ ಅಸಮಾನತೆ. ನಮ್ಮ ದೇಶದ, ಅದರಲ್ಲೂ ದಕ್ಷಿಣ ಭಾರತದ ಪ್ರಸಿದ್ಧ ಶಬರಿಮಲೆ ದೇವಾಲಯದಲ್ಲಿ 10 ರಿಂದ 50 ವರ್ಷ ವಯೋಮಾನದ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಮತ್ತು ಇದನ್ನು ಸಮಾಜದ ಬಹುದೊಡ್ಡ ಜನವರ್ಗ ಸಮರ್ಥಿಸುತ್ತಿದೆ. ‘ಮಹಿಳೆಯರು’ ಎಂಬ ನುಡಿಯನ್ನು ಅಖಂಡವಾಗಿ ಪರಿಗಣಿಸಲು ಬರುವುದಿಲ್ಲ. ಏಕೆಂದರೆ ಜಾತಿಯ ಕಾರಣವಾಗಿ ಪ.ಜಾ. ಮತ್ತು ಪ.ಪಂ. ಮಹಿಳೆಯರು ಅನೇಕ ಬಗೆಯ ಅಸಮಾನತೆ ಅನುಭವಿಸುತ್ತಿದ್ದಾರೆ. ಇದು ಬೇರೆ ವಿಷಯ. ಅದರ ಬಗ್ಗೆ ಇಲ್ಲಿ ಚರ್ಚೆ ಅನವಶ್ಯಕ.

ಶಬರಿಮಲೆ ದೇವಾಲಯಕ್ಕೆ ಶಾಸನಬದ್ಧವಾಗಿ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಕೇರಳ ಹಿಂದೂ ಸಾರ್ವಜನಿಕ ಆರಾಧನಾ ಸ್ಥಳದ (ಪ್ರವೇಶದ ಅಧಿಕಾರ) ನಿಯಮ 1965ರಲ್ಲಿ 10 ವರ್ಷದಿಮದ 50 ವರ್ಷ ವಯೋಮಾನದ ಮಹಿಳೆಯರು ಶಬರಿಮಲೆ ದೇವಾಲಯದೊಳಗೆ ಪ್ರವೇಶಿಸುವುದನ್ನು ಕಾನೂನಾತ್ಮಕವಾಗಿ ನಿಷೇಧಿಸಲಾಗಿತ್ತು. ಸರ್ವೋಚ್ಛ ನ್ಯಾಯಾಲಯವು ಸದರಿ ಕಾನೂನಿನ ಕ್ರಮಬದ್ಧತೆಯನ್ನು ವಿವರವಾಗಿ ಪರಿಶೀಲಿಸಿ, ಪರಾಮರ್ಶಿಸಿ ಸದರಿ ನಿಷೇಧವನ್ನು ರದ್ದುಪಿಡಿಸಿ ಐವರು ನ್ಯಾಯಾಧಿಶರ ಸಂವಿಧಾನ ಪೀಠವು 4:1ರ ಬಹುಮತದ ತೀರ್ಪನ್ನು ದಿನಾಂಕ, 28.09.2018ರಂದು ನೀಡಿದೆ. ನಿಷೇಧದ ಪರವಾಗಿ ಮಂಡಿಸಿದ್ದ ಎರಡು ಮುಖ್ಯವಾದಗಳನ್ನು ನ್ಯಾಯಾಲಯವು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಿದೆ. ಶಬರಿಮಲೆ ದೇವಾಲಯದ ಅಯ್ಯಪ್ಪನ ಭಕ್ತರು ಧಾರ್ಮಿಕವಾಗಿ ಪ್ರತ್ಯೇಕ ಗುಂಪು ಎಂಬುದು ಮೊದಲನೆಯ ವಾದ. ಎರಡನೆಯದು ದೇವಾಲಯಕ್ಕೆ ಪ್ರವೇಶವನ್ನು ಮಹಿಳೆಯರಿಗೆ ನಿಷೇಧಿಸಿರುವುದು ಧಾರ್ಮಿಕ ಆಚರಣೆಯ ಅತ್ಯಗತ್ಯ ಭಾಗ. ಈ ಎರಡು ವಾದಗಳನ್ನು ಸುಪ್ರೀಮ್ ಕೋರ್ಟು ತಳ್ಳಿಹಾಕಿದೆ. ಈ ತೀರ್ಪು ಮಹಿಳೆಯರ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂವಿಧಾನದ ವ್ಯಾಖ್ಯಾನಗಳ ಬಗ್ಗೆ ಒಂದು ಖಚಿತವಾದ ರೂಪವನ್ನು ಕೊಡುವಲ್ಲಿ ಯಶಸ್ವಿಯಾಗಿದೆ.

ಮಹಿಳೆಯರಿಗೆ ದೇವಾಲಯ ಪ್ರವೇಶ ನಿಷೇಧ ಮತ್ತು ಅಸ್ಪ್ರುಶ್ಯೆತೆಯ ಆಚರಣೆ

ಸರ್ವೋಚ್ಛ ನ್ಯಾಯಲಯವು ಮಹಿಳೆಯರಿಗೆ ದೇವಾಲಯದೊಳಗೆ ಪ್ರವೇಶವನ್ನು ನಿಷೇಧಿಸಿರುವ ಕ್ರಮವನ್ನು ಸಂವಿಧಾನದ ಪರಿಚ್ಛೇದ 17ರ ಅಡಿಯಲ್ಲಿ ಇದು ಅಸ್ಪ್ರುಶ್ಯೆತೆಯೆ ಸಮ ಎಂದು ಪರಿಗಣಿಸಿದೆ. ಮಹಿಳೆಯರನ್ನು ಅವರು ಪ್ರತಿ ತಿಂಗಳು ಎದುರಿಸುವ ಋತುಚಕ್ರವನ್ನು ಆಧಾರ ಮಾಡಿಕೊಂಡು ಪ್ರತ್ಯೇಕಿಸುವುದು ಅಸ್ಪ್ರುಶ್ಯೆತೆಯನ್ನು ನಿಷೇಧಿಸಿರುವ ಸಂವಿಧಾನದ ಪರಿಚ್ಛೇದ 17ರಡಿಯಲ್ಲಿ ಸರ್ವೋಚ್ಛ ನ್ಯಾಯಾಲಯವು ಪರಿಶೀಲಿಸಿ ತನ್ನ ತೀರ್ಪವನ್ನು ರೂಪಿಸಿದೆ. ಈ ತೆರನ ವಾದನ್ನು ಮೊಕದ್ದಮೆಯ ವಿರುದ್ಧ ವಾದಮಂಡಿಸಿರುವ ಪ್ರಸಿದ್ಧ ನ್ಯಾಯವಾದಿ ಇಂದಿರಾ ಜೈಸಿಂಗ್ ಪ್ರತಿಪಾದಿಸಿದ್ದರೆ. ನ್ಯಾಯಾಲಯವು ಮಹಿಳೆಯರಿಗೆ ಪ್ರವೇಶ ನಿಷೇಧದ ಪ್ರಶ್ನೆಯನ್ನು ಸಂವಿಧಾನದ ಪರಿಚ್ಛೇದ 14,  15,  17 ಮತ್ತು ಬದುಕುವ ಹಕ್ಕಿನ ಪರಿಚ್ಛೇದ 21 ರಡಿಯಲ್ಲಿ ಕೂಲಕಂಷವಾಗಿ ಪರಿಶೀಲಿಸಿದೆ. ಇಲ್ಲಿ ನ್ಯಾಯಲಯವು ಪ್ರವೇಶದ ನಿಷೇಧವನ್ನು ರದ್ದುಪಡಿಸುವ ತೀರ್ಪನ್ನು ನೀಡಲು ಸರಳವಾದ ನಿಯಮವನ್ನು ಪರಿಪಾಲಿಸಿದೆ. ಅದರ ಪ್ರಕಾರ ಸಂವಿಧಾನ ಅನ್ನುವುದು ಜಡಸ್ಥಾವರ ಸಂಗತಿಯಲ್ಲ. ಅದೊಂದು ಜೀವಂತ ದಾಖಲೆ. ಸಾಮಾಜಿಕ/ಸಾಮೂಹಿಕ ನೈತಿಕತೆಗಿಂತ ಸಂವಿಧಾನಾತ್ಮಕ ನೈತಿಕತೆನ್ನು ನ್ಯಾಯಾಲಯವು ಎತ್ತಿ ಹಿಡಿದಿದೆ. ಈ ತೀರ್ಪಿನಲ್ಲಿ ನ್ಯಾಯಾಲಯವು ಸಮಾಜದಲ್ಲಿ ರೂಢಿಗತವಾಗಿ ಬೇರುಬಿಟ್ಟಿರುವ ಪುರುಷಶಾಹಿ ಮೌಲ್ಯವನ್ನು ತೀವ್ರವಾಗಿ ಟೀಕಿಸಿದೆ.

ಈ ತೀರ್ಪನ್ನು ನೀಡಿದ ಸಂವಿಧಾನ ಪೀಠದ ಏಕೈಕ ಮಹಿಳಾ ನ್ಯಾಯಾಧೀಶರಾಗಿದ್ದ ಶ್ರೀಮತಿ ಇಂದು ಮಲ್ಹೋತ್ರ ಅವರು ನಾಲ್ವರು ನ್ಯಾಯಾಧೀಶÀರ ಬಹುಮತದ ತೀರ್ಪನ್ನು ಒಪ್ಪದೆ ಭಿನ್ನಮತದ ತೀರ್ಪನ್ನು ನೀಡಿರುವುದು ಕುತೂಹಲದ ಸಂಗತಿಯಾಗಿದೆ. ಈ ಬಗ್ಗೆ ಅವರ ಎರಡು ಭಿನ್ನಮತದ ನಿಲುವುಗಳನ್ನು ಒಪ್ಪುವುದು ಕಷ್ಟಸಾಧ್ಯ. ನ್ಯಾಯಾಧೀಶರು ಸಂವಿಧಾನಕ್ಕೆ ಬದ್ಧರಾಗಿರಬೇಕು. ನಮ್ಮ ಸಂವಿಧಾನವು ಸಾಮಾಜಿಕ ಒತ್ತಡಗಳಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಂಡಿದೆ. ಅವರ ಪ್ರಕಾರ ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆಗಳು ನ್ಯಾಯಾಲಯದ ಪರಾಮರ್ಶೆಗೆ ಒಳಪಡುವುದಿಲ್ಲ. ಎರಡನೆಯದಾಗಿ ಧಾರ್ಮಿಕತೆ ಮತ್ತು ಸಮಾನತೆ ಬೇರೆ ಬೇರೆ. ಸಂವಿಧಾನದ ಪರಿಚ್ಛೇದ 14ನ್ನು ಇಲ್ಲಿಗೆ ಅನ್ವಯಿಸಲು ಬರುವುದಿಲ್ಲ ಎಂಬುದು ಅವರ ನಿಲುವಾಗಿದೆ. ಅಂದರೆ ಇಲ್ಲಿ ಸಂವಿಧಾನಕ್ಕಿಂತ ಧಾರ್ಮಿಕ ಆಚರಣೆಗಳು ಮುಖ್ಯವಾಗಿಬಿಟ್ಟಿವೆ. ಆದರೆ ಬಹುಮತದ ತೀರ್ಪಿನಲ್ಲಿ ಇದನ್ನು ತಿರಸ್ಕರಿಸಲಾಗಿದೆ. ಬಹುಮತ ತೀರ್ಪಿನಲ್ಲಿ ಮಹಿಳೆಯರನ್ನು ದೇವರ ಸನ್ನಿಧಿಯಲ್ಲಿ ಕೀಳಾಗಿ ಕಾಣುವುದು ಸಂವಿಧಾನವನ್ನು ಕುಬ್ಜಗೊಳಿಸಿದಂತೆ ಎಂದು ಹೇಳಲಾಗಿದೆ. ನ್ಯಾಯಾಧೀಶ ಚಂದ್ರಚೂಡ್ ಪ್ರಕಾರ ಇಲ್ಲಿ ಮಹಿಳೆಯರ ಧಾರ್ಮಿಕ ಸ್ವಾತಂತ್ರ್ಯದ ಪ್ರಶ್ನೆಯಷ್ಟೇ ಅವರ ಮೇಲಿನ ದೌರ್ಜನ್ಯವೂ ಮುಖ್ಯವಾದ ಸಮಸ್ಯೆಯಾಗಿದೆ. ಮಹಿಳೆಯರಿಗೆ ದೇವಾಲಯ ಪ್ರವೇಶದ ನಿಷೇಧವು ಅವರ ಮೇಲಿನ ದೌರ್ಜನ್ಯದ ಸಂಗತಿಯಾಗಿದೆ.

ತಿರುಳು

ಹೀಗೆ ನಮ್ಮ ಸಂವಿಧಾನದ ಚರಿತ್ರೆಯಲ್ಲಿ ಲಿಂಗ ನ್ಯಾಯವನ್ನು ಎತ್ತಿ ಹಿಡಿದ ಮೂರು ಪರಸ್ಪರ ಸಂಬಂಧ ಹೊಂದಿರುವ ತೀರ್ಪುಗಳ ಕಾರಣವಾಗಿ ಸೆಪ್ಟೆಂಬರ್ 2018 ಚರಿತಾರ್ಹವಾಗಿ ನಿಲ್ಲುತ್ತದೆ. ಈ ಮೂರು ತೀರ್ಪಿನಲ್ಲಿ ನ್ಯಾಯಾಲಯ ಶತ ಶತಮಾನಗಳಿಂದ ಅನುಭವಿಸಿಕೊಂಡು ಬರುತ್ತಿದ್ದ ಅವಮಾನ, ಅಸಮಾನತೆ, ತಾರತಮ್ಯ, ದೌರ್ಜನ್ಯಗಳಿಗೆ ಒಂದು ರೀತಿಯಲ್ಲಿ ಕೊನೆ ಹಾಡಿದೆ. ನಿಜ, ತೀರ್ಪುಗಳೇ ಎಲ್ಲವೂ ಅಲ್ಲ. ಅವುಗಳ ಆಚರಣೆ ಮುಖ್ಯ. ಈ ತೀರ್ಪುಗಳ ಬಗ್ಗೆ ಸಮಾಜದಲ್ಲಿ ಸರ್ವಸಮ್ಮತ ಒಪ್ಪಿಗೆಯಲ್ಲ ಎಂಬುದು ವ್ಯಾಪಕವಾಗಿ ಕಂಡುಬರುತ್ತಿದೆ. ಅಯ್ಯಪ್ಪನ ಭಕ್ತರು ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ನಿಯಮವನ್ನು ರದ್ದುಪಡಿಸಿರುವುದರ ವಿರುದ್ಧ ಈಗಾಗಲೆ ರಸ್ತೆಗಿಳಿದಿದ್ದಾರೆ. ಐಪಿಸಿ 497ರ ಬಗೆಗಿನ ನ್ಯಾಯಾಲಯದ ತೀರ್ಪಿನ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒಪ್ಪಿಗೆಯಿದ್ದಂತೆ ಕಾಣುವುದಿಲ್ಲ. ಈ ಹಿಂದೆ ಅದು ಇಂತಹ ಮಹಿಳಾ ವಿರೋಧಿ ನಿಲುವನ್ನು ತಳೆದಿರುವುದಕ್ಕೆ ನಮಗೆ ನಿದರ್ಶನಗಳು ದೊರೆಯುತ್ತವೆ. ಉದಾಹರಣೆಗೆ ಅದು ವೈವಾಹಿಕ ಸಂಬಂಧದಲ್ಲಿ ಗಂಡ ಹೆಂಡತಿಯ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯವನ್ನು ಅತ್ಯಾಚಾರವೆಂದು ಪರಿಗಣಿಸುವುದನ್ನು ಕುಟುಂಬ ವಯವಸ್ಥೆಯ ಭದ್ರತೆ ಮತ್ತು ವಿವಾಹ ಸಂಸ್ಥೆಯ ಪಾವಿತ್ರ್ಯತೆಯ ನೆಲೆಯಲ್ಲಿ ತಿರಸ್ಕರಿಸಿತ್ತು. ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯಗಳು ಸಾಮಾಜಿಕ ಬದಲಾವಣೆಯ ಅಸ್ತ್ರಗಳಾಗಿ ಕೆಲಸ ಮಾಡುಬಹುದೆಂದು ನಮ್ಮ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ತೋರಿಸಿಕೊಟ್ಟಿದ್ದಾರೆ. ಈ ತೀರ್ಪುಗಳ ಆಶಯವನ್ನು ಅರ್ಥ ಮಾಡಿಕೊಂಡು ಅವುಗಳನ್ನು ಆಚರಣೆಗೆ ತರುವುದರ ಬಗ್ಗೆ ಮತ್ತು ಅಲ್ಲಿ ಪ್ರತಿಪಾದಿಸಿರುವ ಮೌಲ್ಯಗಳನ್ನು ಅನುಸರಿಸುವ ಬಗ್ಗೆ ಸಮಾಜ ಇಂದು ಚಿಂತಿಸಬೇಕಾಗಿದೆ.

ಡಾ. ಟಿ. ಆರ್. ಚಂದ್ರಶೇಖರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *