ಭಾವಯಾನ / ಅವನೊಬ್ಬನೇ ಅನ್ನಿಸಿತು… ಸೀಮಾ ಕುಲಕರ್ಣಿ
ಮಾನವ ತಾನೇ ಸೃಷ್ಟಿಸಿದ ಎಲ್ಲೆಗಳನ್ನು ಮೀರಿ, ಸಹಾನುಭೂತಿ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಎತ್ತಿ ಹಿಡಿಯುವ ದೃಷ್ಟಿಕೋನವನ್ನು ಅಳವಡಿಸಿಕೊಂಡಾಗ ಮಾತ್ರ ಇಡೀ ಮಾನವ ಜನಾಂಗ ಒಂದು ಸುಂದರವಾದ ಪರಿವಾರ ಆಗಬಲ್ಲುದಲ್ಲವೇ? ಅದು ಸಾಧ್ಯವೇ?
ರಾಜಧಾನಿ ಕೌಲಾಲಂಪೂರವನ್ನು ಒಳಗೊಂಡು ಮಲೇಶಿಯಾದ ಎಲ್ಲ ರಾಜ್ಯಗಳಲ್ಲಿ ಲಾಕ್ ಡೌನ್ ಅವಧಿ ಶುರುವಾಗಿ ನಾವೆಲ್ಲ ಒಂದು ತರಹದ ಗೃಹ ಬಂಧನದಲ್ಲಿದ್ದು ವಾರಗಳೇ ಕಳೆದು ಹೋಗಿದ್ದವು. ಈ ದಿನಗಳಲ್ಲಿ ಮಲೇಶಿಯಾದ ಉದ್ದಗಲಕ್ಕೆ ಕೊರೋನಾ ವೈರಸ್ಸಿನ ಕೆಂಗಣ್ಣು ಸಾವಿರಾರು ಹೆಚ್ಚು ಜನರ ಮೇಲೆ ಬಿದ್ದಾಗಿತ್ತು. ಸರಕಾರದ ಆದೇಶದ ಮೇರೆಗೆ ಎಲ್ಲ ಆಫೀಸುಗಳು, ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳನ್ನು ಅನಿರ್ದಿಷ್ಟ ಅವಧಿಯವರೆಗೆ ಮುಚ್ಚಲಾಗಿತ್ತು. ಮನೆಯ ಸುತ್ತಲಿನ ಕಾಂಪೌಂಡ್ ಬಿಟ್ಟು ಹೊರಗೆ ಬರಲಾರದ ಪರಿಸ್ಥಿತಿ. ನಾನು , ಸಮ್ಯಕ್ ಮನೆಯಿಂದಲೇ ನಮ್ಮ ಲ್ಯಾಪ್ ಟಾಪ್ ಗಳ ಮೂಲಕ ನಮ್ಮ ಆಫೀಸು ಕೆಲಸ, ಮೀಟಿಂಗುಗಳಲ್ಲಿ ತೊಡಗಿಸಿಕೊಂಡಿದ್ದರೆ ಹದಿನಾಲ್ಕು ವರ್ಷದ ಮಗಳು ಅನುಷ್ಕಾಳ ಶಾಲೆ ಝೂಮ್ ಮುಖಾಂತರ ಪಾಠಗಳನ್ನು ಮುಂದುವರೆಸಿತ್ತು. ಲಾಕ್ ಡೌನಿನ ಒಂದನೆಯ ಹಂತ ಮುಗಿದು ಎರಡನೆಯ ಅವಧಿ ಶುರುವಾಗುವ ಸಮಯ. ಪವಿತ್ರ ರಮದಾನ್ ತಿಂಗಳು ಆರಂಭವಾಗಿತ್ತು.
ಲಾಕ್ ಡೌನ್ ಅವಧಿ ಶುರುವಾಗುವ ಮೊದಲು ಗಡಿಬಿಡಿಯಲ್ಲಿ ತಂದಿಟ್ಟುಕೊಂಡ ದಿನಸಿ ಸಾಮಾನು ಮತ್ತು ತರಕಾರಿಗಳು ಖಾಲಿಯಾಗಿದ್ದವು . ಹತ್ತು ದಿನಗಳವರೆಗೆ ಕಾಯ್ದ ನಂತರ ಮನೆ ಕಾಂಪೌಂಡ್ ಎದುರಿಗೆ ಬಂದು ನಿಂತ ಟೆಸ್ಕೋ ಸೂಪರ್ ಮಾರ್ಕೆಟ್ಟಿನ ಹೋಮ್ ಡೆಲಿವರಿ ವ್ಯಾನ್ ನೋಡಿ ನನಗಂತೂ ಮರುಭೂಮಿಯಲ್ಲಿ ಸಿಹಿ ನೀರಿನ ತೊರೆ ನೋಡಿದಷ್ಟು ಖುಶಿಯಾಗಿತ್ತು. ಸಂಜೆಯ ಹೊತ್ತು ಮನೆಯಲ್ಲಿ ದೀಪ ಹಚ್ಚುವ ಸಮಯ. ನಾನು ಎಂದಿನಂತೆ ಮನೆ ಬಾಗಿಲಿನ ಹೊರಗೆ ಇಕ್ಕೆಲಗಳಲ್ಲಿದ್ದ ಪ್ರಣತಿಗಳಿಗೆ ಎಣ್ಣೆ ತುಂಬಿಸಿ, ಬತ್ತಿಯ ಮಕ್ಕು ಸ್ವಚ್ಛಗೊಳಿಸಿ ಲೈಟರ್ ಸಹಾಯದಿಂದ ಅದಷ್ಟೇ ದೀಪ ಹಚ್ಚಿಯಾಗಿತ್ತು. ಅದೇ ಸಮಯಕ್ಕೆ ಸಾಮಾನಿನ ಟ್ರಾಲಿ ತಳ್ಳಿಕೊಂಡು ಮನೆ ಬಾಗಿಲಿಗೆ ಬಂದ ಮಾಸ್ಕ್ ಧಾರಿ ಡೆಲಿವರಿ ಮ್ಯಾನ್ ತನ್ನನ್ನು ಪ್ರಭು ಅರವಿಂದನ್ ಎಂದು ಪರಿಚಯಿಸಿಕೊಂಡು, “ಮೇಡಂ, ನಿಮ್ಮದು ಇಂದಿನ ದಿನದ ಕೊನೆಯ ಡೆಲಿವರಿ. ನಿಮ್ಮ ಸಾಮಾನು ನಿಮಗೆ ಒಪ್ಪಿಸುವ ಮೊದಲು ನನ್ನದೊಂದು ಸಣ್ಣ ವಿನಂತಿಯಿದೆ. ಈಗ ಸಂಜೆಯ ಮಘ್ರಿಬ್ ( ಸೂರ್ಯಾಸ್ತದ ನಂತರ ಇಸ್ಲಾಂ ಧರ್ಮೀಯರು ಮಾಡುವ ಪ್ರಾರ್ಥನೆ) ಪ್ರಾರ್ಥನೆಯ ಸಮಯವಾಗಿದೆ. ನಿಮಗೆ ತೊಂದರೆ ಇಲ್ಲ ಎಂದರೆ ನಿಮ್ಮ ಮನೆಯ ಮುಂದಿನ ಪ್ಯಾಸೇಜಿನಲ್ಲಿ ನಾನು ಪ್ರಾರ್ಥನೆ ಮಾಡಲು ಅನುಮತಿ ಬೇಡುತ್ತೇನೆ ” ಎಂದಾಗ ಸೋಜಿಗ ಪಡುವ ಸರದಿ ನನ್ನದಾಗಿತ್ತು. ಸೇಲ್ಸ್ ಮ್ಯಾನ್ ಹೆಸರು ಆತ ಹಿಂದು ಎಂದು ಹೇಳುತ್ತದೆಯಲ್ಲ? ಮತ್ತೆ ಮಘ್ರಿಬ್ ಪ್ರಾರ್ಥನೆ? ಎಂಬೆಲ್ಲ ಪ್ರಶ್ನೆಗಳು ತಲೆಯ ಹುತ್ತದಿಂದೆದ್ದು ನನ್ನ ನಾಲಿಗೆಯ ತನಕ ಬಂದು ಮುಟ್ಟುವ ಮೊದಲೇ “ನಮಗೆಂಥ ತೊಂದರೆ, ನೀವು ನಿಮ್ಮ ಪ್ರಾರ್ಥನೆ ಮಾಡಿರಿ, ಮುಗಿಯುವವರೆಗೆ ನಾನು ಕಾಯುತ್ತೇನೆ ” ಎಂದು ನಾನು ನನಗರಿವಿಲ್ಲದೇ ಹೇಳಿಯಾಗಿತ್ತು.
ಕೃತಜ್ಞತೆಗಳನ್ನು ಸಲ್ಲಿಸಿ ಪ್ರಭು ಅರವಿಂದನ್ ತಲೆಗೆ ಕುಫಿ (ಪ್ರಾರ್ಥನೆಯ ವೇಳೆಗೆ ಮುಸ್ಲಿಂಪುರುಷರು ತಲೆಯ ಮೇಲೆ ಧರಿಸುವ ಅಂಚಿಲ್ಲದ ಟೊಪ್ಪಿಗೆ) ಧರಿಸಿ ತನ್ನ ಪ್ರಾರ್ಥನೆಯ ಚಾಪೆಯನ್ನು ನೆಲದ ಮೇಲೆ ಹಾಸಿ ಪ್ರಾರ್ಥನೆಯನ್ನು ಆರಂಭಿಸಿದ. ಆತ ಪ್ರಾರ್ಥನೆ ಮಾಡುವಾಗ ನಾನೂ ಕೂಡ ಕಣ್ಮುಚ್ಚಿ ಕೈ ಮುಗಿದು ಮನಸ್ಸಿಲ್ಲೇ ಕೊರೋನಾ ಪರಿಸ್ಥಿತಿಯಲ್ಲೂ ತಮಗೆದುರಾಗಬಹುದಾದ ಅಪಾಯಗಳನ್ನು ಲೆಕ್ಕಿಸದೇ ಫ್ರಂಟ್ ಲೈನಿನಲ್ಲಿ ದುಡಿಯುತ್ತಿರುವ ವೈದ್ಯರು, ನರ್ಸುಗಳು, ಲೀಸ್ ದಳ, ಮಿಲಿಟರಿ ದಳ, ಅರವಿಂದನ್ ನಂಥ ಅಸಂಖ್ಯ ಹೋಮ್ ಡೆಲಿವರಿ ಸಿಬ್ಬಂದಿಯನ್ನು ಸುರಕ್ಷಿತವಾಗಿಡು ಎಂದು ದೇವರಲ್ಲಿ ಬೇಡಿಕೆ ಸಲ್ಲಿಸಿದೆ. ನಾನು ಕಣ್ತೆರೆದಾಗ, ಪ್ರಭು ಅರವಿಂದನ್ ತನ್ನ ಪ್ರಾರ್ಥನೆಯನ್ನು ಮುಗಿಸಿ ನಾನು ಕಣ್ತೆರೆಯುವುದನ್ನೇ ನಿರೀಕ್ಷಿಸುತ್ತ ನಿಂತ ಹಾಗಿತ್ತು. “ಮಿಸ್ಟರ್ ಅರವಿಂದನ್, ನೀವು ಪ್ರಾರ್ಥನೆ ಮಾಡುವಾಗ ನೀವು ಹಾಗೂ ನಿಮ್ಮಂತೆ ಕೆಲಸ ಮಾಡುವ ಅನೇಕ ಬಂಧು ಬಾಂಧವರು ಸುರಕ್ಷಿತವಾಗಿರಬೇಕೆಂದು ನಾನೂ ಕೂಡ ದೇವರಲ್ಲಿ ಬೇಡಿಕೊಂಡೆ” ಎಂದು ನಾನು ಹೇಳುವಷ್ಟರಲ್ಲಿ ನಮ್ಮ ಮಾತುಗಳನ್ನು ಆಲಿಸುತ್ತಿದ್ದ ಅನುಷ್ಕಾ ಬೆಳಿಗ್ಗೆ ಮನೆಯಲ್ಲಿ ತಾನೇ ತಯಾರಿಸಿದ ಕೇಕಿನ ಒಂದು ಪುಟ್ಟ ಪೆಟ್ಟಿಗೆಯನ್ನು ತಂದು ಅವನ ಗ್ಲವ್ಸ್ ತೊಟ್ಟ ಕೈಗಳಲ್ಲಿಟ್ಟಳು.
“ಮಿಸ್, ತರಿಮಕಾಸಿ ( ಧನ್ಯವಾದಗಳು)! ನನ್ನ ಕುಟುಂಬದಲ್ಲಿ ನಾನೊಬ್ಬನೇ ದುಡಿಯುವವ. ವಯಸ್ಸಾದ ನನ್ನ ಅಯಾ (ತಂದೆ), ಇಮಾಕ್ (ತಾಯಿ) ಹಾಗೂ ನೇತ್ರಹೀನ ಕಾಕ್ ಸುಲುಂಗ್ (ಅಕ್ಕ) ಇವರ ಆರೈಕೆಯ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ನೌಕರಿ ಬಿಟ್ಟು ವೈರಸ್ಸಿಗೆ ಹೆದರಿ ಮನೆಯಲ್ಲಿ ಕುಳಿತರೆ ಹೇಗಾದೀತು? ಆದರೆ ಇಂದು ನೀವು ನನಗಾಗಿ ಆ ಸರ್ವಶಕ್ತನಲ್ಲಿ ಸಲ್ಲಿಸಿದ ಮನವಿ ಹಾಗೂ ನಿಮ್ಮ ಮಗಳು ಕೊಟ್ಟ ಕೇಕ್ ನೋಡಿ ಮೊದಲ ಬಾರಿಗೆ ನನಗೆ ನಾನು ಮಾಡುತ್ತಿರುವ ಕೆಲಸದ ಬಗ್ಗೆ ಬಹಳ ಹೆಮ್ಮೆ ಎನ್ನಿಸುತ್ತಿದೆ. ನಾನು ನಿಮಗೆ ಪೆÇಲೀಸ್ ಚಿರಋಣಿ. ಪವಿತ್ರ ಹರಿರಾಯ (ರಮದಾನ್) ತಿಂಗಳಲ್ಲಿ ನನ್ನ ನಿತ್ಯದ ಪ್ರಾರ್ಥನೆಯಲ್ಲಿ ನಿಮ್ಮ ಕುಟುಂಬದವರಿಗೆ ಯಾವತ್ತೂ ಸುರಕ್ಷೆ ಹಾಗೂ ಆರೋಗ್ಯಗಳನ್ನು ದಯಪಾಲಿಸುವಂತೆ ಅಲ್ಲಾಹುವಿನಲ್ಲಿ ಮರೆಯದೇ ಬೇಡುವೆ” ಎಂದು ತನ್ನ ಹರುಕು ಮುರುಕು ಮಲಯ್ ಮಿಶ್ರಿತ ಇಂಗ್ಲೀಷಿನಲ್ಲಿ ಹೇಳುತ್ತ, ಒದ್ದೆಯಾದ ತನ್ನ ಕಣ್ಣುಗಳನ್ನು ಕರ್ಚೀಪಿನಿಂದ ಒರೆಸುವ ವ್ಯರ್ಥ ಪ್ರಯತ್ನ ಮಾಡುತ್ತ ನಿಂತಿದ್ದ ಸೇಲ್ಸಮನ್ನನನ್ನು ನೋಡಿ ನನ್ನ , ಅನುಷ್ಕಾಳ ಕಣ್ಣುಗಳಲ್ಲಿಯೂ ಕಣ್ಣೀರಿನ ಪೊರೆ ಮೂಡಿತ್ತು.
ಕೇಳಲೋ ಬೇಡವೋ ಎಂದು ಅಳುಕುತ್ತಲೇ ” ಅರವಿಂದನ್ ನೀವು ತಪ್ಪು ತಿಳಿಯುವುದಿಲ್ಲವೆಂದರೆ ನಾನೊಂದು ಪ್ರಶ್ನೆ ಕೇಳಬಹುದೇ? ” ಎಂದಾಗ, ಆಗಬಹುದೆಂದು ಆತ ತಲೆಯಾಡಿಸಿದ. “ನಿಮ್ಮ ಹೆಸರಿನಿಂದ ನೀವು ಹಿಂದು ಎಂದುಕೊಂಡಿದ್ದೆ. ಆದರೆ ನೀವು ಮುಸ್ಲಿಂ ಪದ್ಧತಿಯಲ್ಲಿ ಪ್ರಾರ್ಥನೆ ಮಾಡುವಿರಲ್ಲ?” ನನ್ನ ಪ್ರಶ್ನೆಗೆ ಆತ ತನ್ನ ಕುಫಿ ಹಾಗೂ ತನ್ನ ಪ್ರಾರ್ಥನೆಯ ಚಾಪೆಗಳನ್ನು ಮಡಚಿ ತನ್ನ ಚೀಲದಲ್ಲಿಡುತ್ತ, “ಅದೊಂದು ದೊಡ್ಡ ಕತೆ ಮೇಡಂ, ಸಣ್ಣದರಲ್ಲಿ ಹೇಳುತ್ತೇನೆ. ಮನೆಯಲ್ಲಿ ಅಯಾ, ಇಮಾಕ್ ಹಾಗೂ ಕಾಕ್ ಸುಲುಂಗ್ ಇಫ್ತಾರ್ (ರಮದಾನ್ ಸಮಯದಲ್ಲಿ ಪ್ರತಿದಿನ ಸೂರ್ಯಾಸ್ತದ ನಂತರ ಮುಸ್ಲಿಮರು ಅಂದಿನ ಉಪವಾಸ ಮುಕ್ತಾಯಗೊಳಿಸಲು ಸೇವಿಸುವ ಆಹಾರ ಅಥವಾ ಊಟ ) ಗಾಗಿ ನನ್ನ ದಾರಿ ನೋಡುತ್ತಿರುತ್ತಾರೆ. ನಾನು ಹುಟ್ಟಿದ್ದು ಶ್ರೀಲಂಕಾ ಮೂಲದ ಒಂದು ಹಿಂದೂ ಕುಟುಂಬದಲ್ಲಿ. ನಾನು ಆರು ವರ್ಷದವನಾಗಿದ್ದಾಗ ನನಗೆ ಜನ್ಮ ಕೊಟ್ಟ ತಂದೆ, ತಾಯಿ ತಾವಿಬ್ಬರೂ ಕೆಲಸ ಮಾಡುತ್ತಿದ್ದ ರಬ್ಬರ್ ತೋಟದಿಂದ ಮನೆಗೆ ಮರಳುತ್ತಿರುವಾಗ ದಾರಿಯಲ್ಲಿ ಒಂದು ದುರದೃಷ್ಟಕರ ರಸ್ತೆ ಅಪಘಾತದಲ್ಲಿ ಒಟ್ಟಿಗೇ ಸಾವನ್ನಪ್ಪಿದರು. ಅನಾಥನಾದ ನನ್ನನ್ನು ಅಯಾ ಹಾಗೂ ಇಮಾಕ್ ದತ್ತು ಮಗನಾಗಿ ಸ್ವೀಕರಿಸದಿದ್ದಲ್ಲಿ ನಾನು ಬಹುಶಃ ಯಾವುದೋ ಒಂದು ಅನಾಥಾಶ್ರಮದಲ್ಲಿ ಬೆಳೆಯುತ್ತಿದ್ದೆ. ಅಯಾ, ಇಮಾಕ್ ಮತ್ತು ನನಗೆ ಜನ್ಮ ಕೊಟ್ಟ ತಂದೆ ತಾಯಿ ಒಂದೇ ರಬ್ಬರ್ ತೋಟದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರಷ್ಟೇ ಅಲ್ಲ ಬಹಳ ಒಳ್ಳೆಯ ಸ್ನೇಹಿತರೂ ಆಗಿದ್ದರಂತೆ. ನನ್ನನ್ನು ದತ್ತು ಮಗನಾಗಿ ಸ್ವೀಕರಿಸಿದ ಮೇಲೆ ಅಯಾ, ಇಮಾಕ್ ನನ್ನ ಹೆಸರು ಬದಲಿಸಲಿಲ್ಲ. ಧರ್ಮ ಬದಲಿಸಲು ನನ್ನ ಮೇಲೆಎಂದೂ ಒತ್ತಾಯ ತಂದಿಲ್ಲ. ಹಿಂದೂ ಕುಟುಂಬದಲ್ಲಿ ಹುಟ್ಟಿ ಮುಸ್ಲಿಂ ಕುಟುಂಬದಲ್ಲಿ ಬೆಳೆದವ ನಾನು. ಹಿಂದೂ ಹಬ್ಬ ಇದ್ದಾಗ ನಾನು ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗುತ್ತೇನೆ; ಹಾಗೆಯೇ ನನ್ನ ಪರಿವಾರದವರೊಟ್ಟಿಗೆ ಮನೆಯಲ್ಲಿ, ಮಸ್ಜಿದ್ದಿನಲ್ಲಿ ಪ್ರಾರ್ಥನೆ ಮಾಡುತ್ತೇನೆ ಮತ್ತು ಹರಿರಾಯ ಇದ್ದಾಗ ಇಡೀ ತಿಂಗಳು ಉಪವಾಸ ವೃತವನ್ನೂ ಪಾಲಿಸುತ್ತೇನೆ. ಎರಡೂ ಧರ್ಮಗಳಲ್ಲಿ ನನಗೆಶೃದ್ಧೆ ಮತ್ತು ನಂಬಿಕೆ ಇದೆ. ಹಿಂದು ಧರ್ಮ ನನಗೆ ಜನ್ಮ ಕೊಟ್ಟ ತಾಯಿಯಾದರೆ ಇಸ್ಲಾಂ ಧರ್ಮ ಕಷ್ಟದ ಘಳಿಗೆಯಲ್ಲಿ ನನ್ನ ಕೈಹಿಡಿದು ಆಶ್ರಯ ಕೊಟ್ಟ ತಂದೆಯಿದ್ದಂತೆ. ಎರಡೂ ಧರ್ಮಗಳು ನನ್ನ ಎರಡು ಕಣ್ಣಿನಂತೆ ಎಂದು ನನ್ನ ಭಾವನೆ. ಇವುಗಳಲ್ಲಿ ಯಾವ ಧರ್ಮವನ್ನೂ ನಾನುಬಿಡಲಾರೆ. ಬಿಟ್ಟೆನಾದರೆ ನಾನು ಅಪೂರ್ಣನಾಗಿಬಿಡುವೆ” ಎಂದು ಭಾವುಕನಾಗಿ ಹೇಳುತ್ತಲೇ ನಮ್ಮ ದಿನಸಿ ಸಾಮಾನುಗಳನ್ನು ನಮಗೊಪ್ಪಿಸಿ, ಪಾವತಿ ಹಣವನ್ನು ಪಡೆದು ‘ಬಾಯ್ ಬಾಯ್’ ಮಾಡುತ್ತ ಗಡಿಬಿಡಿಯಿಂದ ತನ್ನ ಟ್ರಾಲಿಯೊಂದಿಗೆ ನಮ್ಮ ಮನೆಯ ಕಂಪೌಂಡಿನ ಗೇಟ್ ತೆಗೆದು ಮಿನಿ ವ್ಯಾನಿನಲ್ಲಿ ಹತ್ತಿ ಅದೃಶ್ಯನಾದ. ಪ್ರಭು ಅರವಿಂದನ್ ಹೋದ ದಿಕ್ಕಿನಲ್ಲಿ ನೋಡುತ್ತ, ಆತ ಹೇಳಿದ ಕತೆಯ ಗುಂಗಿನಲ್ಲಿ ಎಷ್ಟೊತ್ತು ನಿಂತಿದ್ದೆನೋ!
ಬಾಲ್ಯದಲ್ಲಿ ಅನಾಥನಾದ ಅರವಿಂದನ್ ನನ್ನು ದತ್ತುಮಗನಾಗಿ ಸ್ವೀಕರಿಸಿ, ಅವನಿಗೆ ತನ್ನ ಹುಟ್ಟಿನಿಂದ ಬಳುವಳಿಯಾಗಿ ಬಂದ ಹಿಂದೂ ಧರ್ಮವನ್ನು ಅನುಸರಿಸುವ ಔದಾರ್ಯ ತೋರಿ ಧರ್ಮ ಸಹಿಷ್ಣುತೆಯ ಅತ್ಯುನ್ನತ ಉದಾಹರಣೆಯನ್ನು ತಾವಿರುವ ಸಮಾಜದ ಮುಂದಿಟ್ಟ ಮುಸ್ಲಿಂ ದಂಪತಿಗಳು ಒಂದೆಡೆಯಾದರೆ, ತನ್ನ ಧರ್ಮದ ಜೊತೆ ಜೊತೆಗೆ, ತನಗೆ ಆಶ್ರಯ ನೀಡಿ, ತಂದೆ ತಾಯಿಯ ಮಮತೆ ನೀಡಿ ಸ್ವಂತ ಮಗನಂತೆ ಬೆಳೆಸಿದ ಪರಿವಾರದ ಇಸ್ಲಾಂ ಧರ್ಮವನ್ನೂ ಮುಕ್ತ ಮನಸ್ಸಿನಿಂದ ಸ್ವೀಕರಿಸಿ, ಅನುಸರಿಸಿದ ಅರವಿಂದನ್ ನ ಆದರ್ಶ ಮತ್ತೊಂದೆಡೆ! ಎಂಥ ಮಾನವೀಯತೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಆದರ್ಶ ಪರಿವಾರವಿದು ಎಂದು ಮನಸ್ಸಿನಲ್ಲಿ ಗೌರವ ಭಾವನೆ ಮೂಡಿತು.
ಜಗತ್ತಿನ ಮೂಲೆ ಮೂಲೆಗಳಲ್ಲಿ ಧರ್ಮದ ಹೆಸರಿನಲ್ಲಿ ಇಂದಿಗೂ ಹೊತ್ತಿ ಉರಿಯುತ್ತಿರುವ ದ್ವೇಷ, ಮತ್ಸರ, ತಾತ್ಸಾರದ ಭಾವನೆಗಳು ಹಾಗೂ ಅವುಗಳ ಪರಿಣಾಮದಿಂದ ಆಗುತ್ತಿರುವ ರಕ್ತಪಾತಗಳಿಗೆ ಪೂರ್ಣವಿರಾಮ ನೀಡಬೇಕೆಂದರೆ ಸಮಾಜದಲ್ಲಿ ಅರವಿಂದನ್ ನಂಥ ಪರಿವಾರಗಳು ಇರಬೇಕು. ಸುಖ ಹಾಗೂ ದುಃಖದ ಘಳಿಗೆಗಳನ್ನು ಸಮವಾಗಿ ಹಂಚಿಕೊಂಡು, ಮಾನವ ತಾನೇ ಸೃಷ್ಟಿಸಿದ ದೇಶ, ಪ್ರಾಂತ್ಯ, ಜಾತಿ, ಜನಾಂಗ, ಧರ್ಮದ ಎಲ್ಲೆಗಳನ್ನು ಮೀರಿ, ಸಹಾನುಭೂತಿ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಎತ್ತಿ ಹಿಡಿಯುವ ದೃಷ್ಟಿಕೋನವನ್ನು ಜನರು ಅಳವಡಿಸಿಕೊಂಡಾಗ ಮಾತ್ರ ಇಡೀ ಮಾನವ ಜನಾಂಗ ಒಂದು ಸುಂದರವಾದ ಪರಿವಾರವಾಗಬಲ್ಲುದಲ್ಲವೇ ಎಂದು ಮನದಲ್ಲಿ ವಿಚಾರ ಮಂಥನ ಮಾಡುತ್ತ ಮನೆಯೊಳಗೆ ಬಂದಾಗ ಅನುಷ್ಕಾ ಬಾಲ್ಕನಿಯಲ್ಲಿ ನಿಂತು ಆಗಸದಲ್ಲಿ ಎಂದಿಗಿಂತ ದೊಡ್ದವನಾಗಿ, ಪ್ರಕಾಶಮಾನವಾಗಿ ಮೂಡಿದ್ದ ಬೌದ್ಧ ಪೂರ್ಣಿಮೆಯ ಚಂದ್ರನನ್ನು ನೋಡುತ್ತ ನಿಂತಿದ್ದಳು. ಹಿನ್ನೆಲೆಯಲ್ಲಿ ಸಮ್ಯಕ್ ನ ಮೊಬೈಲಿನಿಂದ ಲತಾ ಮಂಗೇಷ್ಕರ್ ಹಾಡಿದ ’ಹಮ್ ದೋನೋ’ ಹಿಂದಿ ಚಲನಚಿತ್ರದಲ್ಲಿನ ’ಅಲ್ಲಾ ತೇರೋ ನಾಮ್, ಈಶ್ವರ ತೇರೋ ನಾಮ್……’ ಹಾಡು ತೇಲಿಬರುತ್ತಿತ್ತು.
- ಸೀಮಾ ಕುಲಕರ್ಣಿ, ಕೌಲಾಲಂಪೂರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ತುಂಬಾ ಇಷ್ಟವಾಯಿತು
ಪ್ರತಿ ಹೆಣ್ಣೂ ಬೇರೆ ಗಂಡಿನಲ್ಲಿ ತನ್ನಪ್ಪನನ್ನು ಕಾಣಬಹುದು ಆದರೆ ಅಪ್ಪನಲ್ಲಿ ಗಂಡನ್ನು ಕಾಣಲಾರಳು,ಅದಕ್ಕೆ ತಾನೇ ಅವಳು ಅಪ್ಪನನ್ನು ಅಷ್ಟು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳಲು ಸಾಧ್ಯವಾಗೋದು.ಆಧುನಿಕತೆಗೆ ತನ್ನನ್ನು ತೆರೆದುಕೊಂಡಿದ್ದರೂ ಸಮಾಜ ಇನ್ನೂ ಸಾಂಪ್ರದಾಯಿಕ ಸಂಕೋಲೆಗಳನ್ನು ನಿಗೂಢವಾಗಿ ತನ್ನುದರದಲ್ಲಿ ಹುದುಗಿಸಿಕೊಂಡಿದೆ ಅದಕ್ಕೆ ಇಂದಿಗೂ ನಾವು ನಮ್ಮ ಹೆಣ್ಣುಮಕ್ಕಳನ್ನು ಅವಳ ಹೆಣ್ತನದ ಅರಿವಿನೊಂದಿಗೇ ಬೆಳೆಸೋದು ಬಹುಶಃ ಇದು ನನ್ನೊಬ್ಬಳ ಅನಿಸಿಕೆಯೂ ಆಗಿರಬಹುದು ಅಥವಾ ನಿಮ್ಮೆಲ್ಲರ ಅನುಭವವೂ ಸಹ