ರೂಪಾ ಹಾಸನ್‌ ಕವಿತೆಗಳು

ಶಿವೆ ನುಡಿಯುತ್ತಿದ್ದಾಳೆ

ಮುಟ್ಟಾಗುವ ಹೆಣ್ಮಕ್ಕಳ ಕಂಡರೆ
ಯಾಕಿಂಥ ಭೀತಿಯೋ ಕಂದ
ನಿನ್ನ ಭಕ್ತರಿಗೆ?

ಆ ಅರ್ಧನಾರೀಶ್ವರನ ಶಿವೆ
ಹೆಣ್ತನ ಸಂಭೂತೆ
ನಾನಿಲ್ಲದಿದ್ದರೆ…
ಹರಿಹರರೊಡಗೂಡಿಯೂ
ನೀನೆಲ್ಲಿ ಜನಿಸುತ್ತಿದ್ದೆಯೋ ಕಂದ?

ಶಿವಶಿವೆಯರ ಸಮ್ಮಿಲನದ
ಕುರುಹುಗಳು ಇಳೆಯೊಳಗೆ
ಹೆಜ್ಜೆಹೆಜ್ಜೆಗೆ

ಮುಟ್ಟು ಮೈಲಿಗೆಯ
ತೊಟ್ಟಿಲ ಗರ್ಭದೊಳಗೇ
ಸಕಲ ಚರಾಚರ
ಸೃಷ್ಟಿಯ ಹುಟ್ಟಿನ
ಗುಟ್ಟು ತೂಗುತ್ತಿರುವಾಗ…..

ಅಯ್ಯೋ ಈ ಕೇಡಿನ ಅವಿವೇಕ
ಶಾಪವಾಗದೇ ಗಂಡ್ತನಕ್ಕೆ?
ಎಚ್ಚರಿಸು ಕಂದ
ಭಕ್ತ ಸಮೂಹಕ್ಕೆ….!

***

ಸರ್ವಾಂತರ್ಯಾಮಿ 

ದಮ್ಮಯ್ಯ ನಿಮ್ಮ
ಸ್ಥಾವರದ ಮೂರ್ತಿಗಳ
ಕತ್ತಲ ಗುಡಿಗಳಲ್ಲೇ ಬಂಧಿಸಿಡಿ
ನಮಗೆ ಬೇಕಿಲ್ಲ
ಅವನ ಉಸಾಬರಿ.

ನಮ್ಮ ಎದೆ ಹಾಲುಗಳಲ್ಲಿ
ನಿಯಮಿತ ಜೀವ ಸ್ರಾವಗಳಲ್ಲಿ
ನರನಾಡಿಗಳ ಇಂಚಿಂಚಲ್ಲಿ
ಈ ಅಪವಿತ್ರ ದೇಹದ ಅಣುಕಣಗಳಲ್ಲಿ
ನೀವೇ ಪ್ರತಿಪಾದಿಸಿದ
ಸರ್ವಾಂತರ್ಯಾಮಿ ಅವನಿದ್ದಾನೆ!

ನಿರಾಕಾರ ನಿರ್ಗುಣ
ನಮ್ಮೀ ಅನಂತ ಮೈಲಿಗೆಯ
ಉಸಿರಲ್ಲೇ ಒಂದಾಗಿದ್ದಾನೆ.

ನಮಗವನೇ ಸಾಕು.
ನಮಗವನೇ ಬೇಕು.
ನಮಗವನು ಪ್ರಿಯನಾಗಿದ್ದಾನೆ!

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *