ರಾಜಕೀಯದಲ್ಲಿ ಮಹಿಳೆ : ಬದಲಾಗದ ಸ್ಥಿತಿಗತಿ – ಮೋಟಮ್ಮ

“ನಾನು ಚುನಾವಣಾ ರಾಜಕಾರಣಕ್ಕೆ ಪದಾರ್ಪಣೆ ಮಾಡಿ ನಲವತ್ತು ವರ್ಷಗಳೇ ತುಂಬಿವೆ. 1978ರ ಫೆಬ್ರವರಿ 25ರಂದು ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದೆ. ಮೂಡಿಗೆರೆ ಕ್ಷೇತ್ರದಿಂದ ಕಾಂಗ್ರೆಸ್ (ಐ) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದೆ. 2018ರ ಮೇ 12ರಂದು ಮತ್ತೆ ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದೆ. ಈ ಬಾರಿ ಜಯ ಗಳಿಸಲಿಲ್ಲ. ಅಂದರೆ, ನನ್ನ ಸಾರ್ವಜನಿಕ ಬದುಕಿಗೆ ಇದೀಗ ನಲವತ್ತು ವರ್ಷಗಳು. ಇದೊಂದು ಸುದೀರ್ಘ ಪಯಣ. ಈ ಸುದೀರ್ಘ ಕಾಲಾವಧಿಯಲ್ಲಿ ಜಗತ್ತಿನಲ್ಲಿ ಏನೆಲ್ಲ ಬದಲಾವಣೆಗಳಾಗಿವೆ!” – ಮೋಟಮ್ಮ

ಕರ್ನಾಟಕದಲ್ಲೂ ಏನೆಲ್ಲಾ ಆದರೂ ರಾಜಕೀಯ ರಂಗದಲ್ಲಿ ಮಾತ್ರ ಮಹಿಳೆಯರ ಸ್ಥಿತಿಗತಿಗಳಲ್ಲಿ ಬದಲಾವಣೆಗಳೇನೂ ಆಗಿಲ್ಲ. ನಲವತ್ತು ವರ್ಷಗಳ ಹಿಂದೆ ನಾವು ಎಲ್ಲಿದ್ದೆವೋ ಅಲ್ಲಿಯೇ ಇದ್ದೇವೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು, ಹಲವು ಮಹಿಳೆಯರು ಮುಖ್ಯಮಂತ್ರಿಗಳಾಗಿದ್ದರು, ಈಗಲೂ ಆಗಿದ್ದಾರೆ. ಅಂಥವರಲ್ಲಿ ದಿವಂಗತ ಜಯಲಲಿತಾ, ಮಮತಾ ಬ್ಯಾನರ್ಜಿ, ವಸುಂಧರಾ ರಾಜೆ, ಮಾಯಾವತಿ, ಮೆಹಬೂಬಾ ಮುಫ್ತಿ ಪ್ರಮುಖರು. ಆದರೂ ಮಹಿಳಾ ರಾಜಕಾರಣಿಗಳ ಸಂಖ್ಯೆಯಲ್ಲಿ ಏರಿಕೆಯಾಗಿಯೇ ಇಲ್ಲ. ನಮ್ಮ ದೇಶದಲ್ಲಿ ಮಹಿಳೆಯರಿಗೆ ಸಿಗುವ ರಾಜಕಾರಣದ ಅವಕಾಶಗಳೂ ಅಷ್ಟಕ್ಕಷ್ಟೆ.

ನಲವತ್ತು ವರ್ಷಗಳ ಹಿಂದಿನ ಕರ್ನಾಟಕದ ವಿಧಾನಸಭಾ ಚುನಾವಣೆಗಳಲ್ಲಿ ನಾವು ಕೇವಲ ಎಂಟು ಜನ ಮಹಿಳೆಯರು ಗೆದ್ದಿದ್ದೆವು. ಈಗ ನಡೆದ 2018ರ ವಿಧಾನಸಭಾ ಚುನಾವಣೆಗಳಲ್ಲಿಯೂ ಎಂಟೇ ಜನ ಮಹಿಳೆಯರು ಗೆದ್ದಿದ್ದಾರೆ. ಅಂದರೆ, ಈ ನಲವತ್ತು ವರ್ಷಗಳಲ್ಲಿ ಮಹಿಳಾ ರಾಜಕಾರಣಿಗಳ ವಿಚಾರದಲ್ಲಿ ಏನೂ ಬದಲಾವಣೆ ಆಗಿಲ್ಲ. ಈ ಸತ್ಯವನ್ನು ಈ ಅಂಕಿಸಂಖ್ಯೆಗಳೇ ಹೇಳುತ್ತವೆ.

1978ರ ಚುನಾವಣೆಯಲ್ಲಿ ಮೂಡಿಗೆರೆಯಿಂದ ನಾನು ಗೆದ್ದರೆ, ಮಾಯಕೊಂಡದಿಂದ ನಾಗಮ್ಮ ಕೇಶವಮೂರ್ತಿ, ಚಿಕ್ಕಬಳ್ಳಾಪುರದಿಂದ ರೇಣುಕಾ ರಾಜೇಂದ್ರನ್, ಚಾಮರಾಜಪೇಟೆಯಿಂದ ಪ್ರಮೀಳಾ ನೇಸರ್ಗಿ, ಎಚ್.ಡಿ. ಕೋಟೆಯಿಂದ ಸುಶೀಲಾ ಚೆಲುವರಾಜ್, ಉಡುಪಿಯಿಂದ ಮನೋರಮಾ ಮಧ್ವರಾಜ್, ಅಳ್ನಾವರದಿಂದ ಅನಸೂಯಾ ಶರ್ಮ ಮತ್ತು ಧಾರವಾಡ ಗ್ರಾಮಾಂತರದಿಂದ ಸುಮತಿ ಬಾಲಚಂದ್ರ ಗೆದ್ದುಬಂದಿದ್ದೆವು.

ನಂತರದ 1983ರ ಚುನಾವಣೆಯಲ್ಲಿ ಹುಣಸೂರಿನಿಂದ ಚಂದ್ರಪ್ರಭಾ ಅರಸ್ ಬಿಟ್ಟರೆ ಬೇರೆ ಯಾರೂ ಗೆಲ್ಲಲಿಲ್ಲ. ಆಗ 101 ಜನ ಮಹಿಳೆಯರು ನಾಮಪತ್ರ ಸಲ್ಲಿಸಿದ್ದೆವು. 38 ಮಹಿಳೆಯರು ಕಣದಲ್ಲಿದ್ದೆವು. ಆದರೆ ನನ್ನನ್ನೂ ಸೇರಿದಂತೆ 37 ಜನ ಮಹಿಳೆಯರು ಸೋತು ಹೋದೆವು. ಮಹಿಳೆಯರ ಪ್ರತಿನಿಧಿಯಾಗಿ ಗೆದ್ದದ್ದು ಚಂದ್ರಪ್ರಭಾ ಮಾತ್ರ. ವಿಧಾನಸೌಧದಲ್ಲಿ ನಮ್ಮ ಸಂಖ್ಯೆ ಎಂಟರಿಂದ ಒಂದಕ್ಕಿಳಿಯಿತು!

1985ರ ಚುನಾವಣೆಗಳಲ್ಲಿ ಸ್ವಲ್ಪ ಸುಧಾರಣೆಯಾಯಿತೆನ್ನಿ. ಒಟ್ಟು 108 ಜನ ಮಹಿಳೆಯರು ಕಣದಲ್ಲಿದ್ದೆವು. ಅವರಲ್ಲಿ ಎಂಟು ಜನರು ಆಯ್ಕೆಯಾದರು. ಹುಲಸೂರಿನಿಂದ ಶಿವಕಾಂತಾ ಚಟೂರು, ದೇವದುರ್ಗದಿಂದ ಎ. ಪುಷ್ಪಾವತಿ, ನರಸಿಂಹರಾಜದಿಂದ ಮುಖ್ತ್ತಾರ್ ಉನ್ನೀಸಾ, ಗುಂಡ್ಲುಪೇಟೆಯಿಂದ ಕೆ.ಎಸ್. ನಾಗರತ್ನಮ್ಮ, ವಿರಾಜಪೇಟೆಯಿಂದ ಸುಮಾ ವಸಂತ್, ಉಡುಪಿಯಿಂದ ಮನೋರಮಾ ಮಧ್ವರಾಜ್, ಚಿಕ್ಕೋಡಿಯಿಂದ ಶಕುಂತಲಾ ಚೌಗುಲೆ ಮತ್ತು ಅಥಣಿಯಿಂದ ಲೀಲಾದೇವಿ ಆರ್. ಪ್ರಸಾದ್. ಹಾಗೆಯೇ 1989ರ ವಿಧಾನಸಭಾ ಚುನಾವಣೆಗಳಲ್ಲಿ ನಾಗಮ್ಮ ಕೇಶವಮೂರ್ತಿ (ಮಾಯಕೊಂಡ), ರೇಣುಕಾ ರಾಜೇಂದ್ರನ್ (ಚಿಕ್ಕಬಳ್ಳಾಪುರ), ಮಲ್ಲಾಜಮ್ಮ (ಮಳವಳ್ಳಿ), ದಮಯಂತಿ ಬೋರೇಗೌಡ (ಶ್ರೀರಂಗಪಟ್ಟಣ), ಕೆ.ಎಸ್. ನಾಗರತ್ನಮ್ಮ (ಗುಂಡ್ಲುಪೇಟೆ), ಚಂದ್ರಪ್ರಭಾ ಅರಸ್ (ಹುಣಸೂರು), ಸುಮಾ ವಸಂತ್ (ವಿರಾಜಪೇಟೆ), ಮನೋರಮಾ ಮಧ್ವರಾಜ್ (ಉಡುಪಿ) ಮತ್ತು ಮೂಡಿಗೆರೆಯಿಂದ ನಾನು- ಹೀಗೆ ಒಂಬತ್ತು ಜನರು ಗೆದ್ದು ಬಂದೆವು. ಆಗ 78 ಜನ ಮಹಿಳೆಯರು ಕಣದಲ್ಲಿದ್ದೆವು.

ನಂತರ ಬಂದ 1994ರ ಚುನಾವಣೆಯಲ್ಲಿ 117 ಮಹಿಳೆಯರು ಕಣದಲ್ಲಿದ್ದರೆ, ಗೆದ್ದವರು ಮಾತ್ರ ಏಳು ಮಹಿಳೆಯರು. ಅವರೆಂದರೆ, ಬಿ.ಟಿ. ಲಲಿತಾ ನಾಯಕ್ (ದೇವದುರ್ಗ), ಜ್ಯೋತಿ ರೆಡ್ಡಿ (ಗೌರಿಬಿದನೂರು), ಪ್ರಮೀಳಾ ನೇಸರ್ಗಿ (ಚಾಮರಾಜಪೇಟೆ), ಡಿ.ಜಿ. ಹೇಮಾವತಿ (ಶಾಂತಿನಗರ), ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ), ಲೀಲಾದೇವಿ ಆರ್. ಪ್ರಸಾದ್ (ಅಥಣಿ) ಮತ್ತು ವಿಮಲಾಬಾಯಿ ದೇಶಮುಖ್ (ಮುದ್ದೇಬಿಹಾಳ). 1999ರ ಚುನಾವಣೆಗೆ 62 ಜನ ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿದೆವು. ಆದರೆ, ಅವರಲ್ಲಿ ನಾವು ಕೇವಲ ಆರು ಜನರು ಗೆಲ್ಲಲು ಸಾಧ್ಯವಾಯಿತು. ಜಯಲಕ್ಷ್ಮಿ ಗುಜ್ಜಲ್ (ಹೊಸಪೇಟೆ), ಭಾಗೀರಥಿ ಮರುಳಸಿದ್ಧನಗೌಡ (ಕೊಟ್ಟೂರು), ಅನಸೂಯಮ್ಮ ನಟರಾಜ್ (ಚಿಕ್ಕಬಳ್ಳಾಪುರ), ಪಾರ್ವತಮ್ಮ ಶ್ರೀಕಂಠಯ್ಯ (ಶ್ರೀರಂಗಪಟ್ಟಣ), ಸುಮಾ ವಸಂತ್ (ವಿರಾಜಪೇಟೆ) ಮತ್ತು ಮೂಡಿಗೆರೆಯಿಂದ ನಾನು.

2004ರಲ್ಲಿ ಮತ್ತೆ ಅದೇ ಇತಿಹಾಸ ಮರುಕಳಿಸಿತು. ಆರು ಜನರಷ್ಟೇ ಗೆದ್ದದ್ದು. ಪುತ್ತೂರಿನ ಶಕುಂತಲಾ ಶೆಟ್ಟಿ, ಬನ್ನೂರಿನ ಸುನೀತಾ ವೀರಪ್ಪಗೌಡ, ಹನೂರಿನಿಂದ ಪರಿಮಳಾ ನಾಗಪ್ಪ, ಶ್ರೀರಂಗಪಟ್ಟಣದಿಂದ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ, ಕಿರುಗಾವಲಿನಿಂದ ಎಂ.ಕೆ. ನಾಗಮಣಿ ಹಾಗೂ ಕೊಟ್ಟೂರಿನಿಂದ ಟಿ. ಭಾಗೀರಥಿ. 2008ರ ಚುನಾವಣೆಗಳಲ್ಲಿ ಧಾರವಾಡದ ಸೀಮಾ ಮಸೂತಿ, ಯಶವಂತಪುರದಿಂದ ಶೋಭಾ ಕರಂದ್ಲಾಜೆ ಮತ್ತು ಪುತ್ತೂರಿನಿಂದ ಮಲ್ಲಿಕಾ ಪ್ರಸಾದ್ ಮಾತ್ರ ಗೆದ್ದರು. ಅಂದರೆ ಮೂರೇ ಮೂರು ಜನ ಮಹಿಳೆಯರು.

2013ರಲ್ಲಿ ಮಹಿಳೆಯರ ಸಂಖ್ಯೆ ಮತ್ತೆ ಆರಕ್ಕೇರಿತು. ಶಶಿಕಲಾ ಜೊಲ್ಲೆ, ಉಮಾಶ್ರೀ, ಶಾರದಾ ಮೋಹನ್ ಶೆಟ್ಟಿ, ಶಾರದಾ ಪೂರ್ಯಾನಾಯಕ್, ವೈ. ರಾಮಕ್ಕ ಮತ್ತು ಶಕುಂತಲಾ ಶೆಟ್ಟಿ ಆಯ್ಕೆಯಾದರು. ಇದೀಗ 2018ರಲ್ಲಿ ಮಹಿಳಾ ಶಾಸಕಿಯರ ಸಂಖ್ಯೆ ಎಂಟಕ್ಕೇರಿದೆ. ಲಕ್ಷ್ಮೀ ಹೆಬ್ಬಾಳ್ಕರ್, ಶಶಿಕಲಾ ಜೊಲ್ಲೆ, ಅಂಜಲಿ ನಿಂಬಾಳ್ಕರ್, ಕನೀಜ್ ಫಾತಿಮಾ, ರೂಪಕಲಾ ಎಂ. ಕೆ. ಪೂರ್ಣಿಮಾ, ರೂಪಾಲಿ ಸಂತೋಷ ನಾಯ್ಕ್ ಹಾಗೂ ಸೌಮ್ಯ ರೆಡ್ಡಿ- ಆಯ್ಕೆಯಾಗಿದ್ದಾರೆ. ಅಂದರೆ, ನಾಲ್ಕು ದಶಕಗಳಲ್ಲಿ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಎಂದೂ ಎರಡಂಕಿ ಮುಟ್ಟಿಲ್ಲ. ಒಂದರಿಂದ ಒಂಬತ್ತು ಅಷ್ಟೆ.

ಇಂಥ ಪರಿಸ್ಥಿತಿಗೆ ಕಾರಣವೇನು?

ಇಡೀ 40 ವರ್ಷಗಳ ಅವಧಿಯಲ್ಲಿ ಕೇವಲ 47 ಜನ ಮಹಿಳೆಯರು ಶಾಸಕಿಯರಾಗಿ ವಿಧಾನಸೌಧದಲ್ಲಿ ಪ್ರವೇಶಿಸಿದ್ದಾರೆ. ಇವರಲ್ಲಿ ನಾವು 12 ಶಾಸಕಿಯರು ಮಾತ್ರ ಒಂದಕ್ಕಿಂತ ಹೆಚ್ಚು ಸಲ ಚುನಾವಣೆಯಲ್ಲಿ ಆಯ್ಕೆಯಾಗಿದ್ದೇವೆ. ಉಳಿದವರೆಲ್ಲರೂ ಒಂದೇ ಒಂದು ಬಾರಿ ಆಯ್ಕೆಯಾದವರು. ಅಂದರೆ, 47 ಜನರಲ್ಲಿ ಮರು ಆಯ್ಕೆಯಾದವರು ಕೇವಲ 12 ಮಹಿಳೆಯರು.

ಇದಕ್ಕೆಲ್ಲ ಕಾರಣವೇನು ಎಂದರೆ ಹಲವಾರು ಅಂಶಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಮೊದಲನೆಯದಾಗಿ, ಮಹಿಳೆಯರಿಗೆ ರಾಜಕೀಯ ಪಕ್ಷಗಳು ಆದ್ಯತೆ ನೀಡುವುದಿಲ್ಲ. ನಮ್ಮ ಸಮಾಜವೇ ಪುರುಷ ಪ್ರಧಾನ. ಹಾಗೆಯೇ ರಾಜಕೀಯ ಪಕ್ಷಗಳೂ ಕೂಡ. ಹೀಗಾಗಿ ಪುರುಷರಿಗೆ ನೀಡಿದಷ್ಟು ಸಂಖ್ಯೆಯಲ್ಲಿ ಯಾವುದೇ ರಾಜಕೀಯ ಪಕ್ಷವು ಮಹಿಳೆಯರಿಗೆ ಪ್ರಾಧಾನ್ಯ ನೀಡುವುದಿಲ್ಲ. ಮಹಿಳೆಯರು ಗೆದ್ದು ಬರುವುದಿಲ್ಲ ಎಂಬ ಕಾರಣ ಹೇಳಿ ಅವರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ. ಮಹಿಳೆಯರೂ ತಮ್ಮ ಹಕ್ಕುಗಳಿಗಾಗಿ ಹೋರಾಡುವುದಿಲ್ಲ. ಚುನಾವಣೆಯಲ್ಲಿ ನಿಲ್ಲಲು, ನಿಂತು ಗೆಲ್ಲಲು, ಗೆದ್ದುಬಂದು ತಮ್ಮ ಸಮಾಜದ ಶ್ರೇಯೋಭಿವೃದ್ಧಿಗಾಗಿ ತಮ್ಮೆಲ್ಲ ಶಕ್ತಿ ಸಾಮಥ್ರ್ಯವನ್ನು ಒಟ್ಟುಗೂಡಿಸಿ ಕೆಲಸ ಮಾಡಲು ಮನಸ್ಸು ಮಾಡುವುದಿಲ್ಲ.

ಮಹಿಳೆಯರಲ್ಲಿ ಸಂಘಟನಾ ಚಾತುರ್ಯ ಕಡಿಮೆ. ಸಂಘಟಿಸುವ ಚತುರತೆ ಇದ್ದರೂ ಗಂಡಸರಂತೆ ಮಹಿಳೆಯರು ಎಲ್ಲವನ್ನೂ ನಿಭಾಯಿಸಲು ಆಗುವುದಿಲ್ಲ. ಉದಾಹರಣೆಗೆ ಹೇಳಬೇಕೆಂದರೆ ಕಾರ್ಯಕರ್ತರ ಸಂಘಟನೆ. ಕಾರ್ಯಕರ್ತರನ್ನು ಹೊಗಳಿಕೊಂಡಿರಬೇಕು. ನಿಮ್ಮನ್ನು ಬಿಟ್ಟರೆ ಬೇರೆ ಗತಿಯಿಲ್ಲ ಎನ್ನುವ ಹಾಗೆ ಉಬ್ಬಿಸಬೇಕು. ಗಂಡಸಾದರೆ, ಕಾರ್ಯಕರ್ತರ ಹೆಗಲ ಮೇಲೆ ಕೈಹಾಕಿಕೊಂಡು ಓಡಾಡುತ್ತಾರೆ. ಅವರಿಗೆ ಚೆನ್ನಾಗಿ ಕುಡಿಸಿ ತಿನ್ನಿಸಿ ಖುಷಿಯಾಗಿಡುತ್ತಾರೆ. ತಂತಮ್ಮ ಗಾಡಿಗಳಲ್ಲೇ ಮದ್ಯವನ್ನಿಟ್ಟುಕೊಂಡು ಹಳ್ಳಿ ಹಳ್ಳಿಗೆ ಹೋಗಿ ಅವರಿಗೆಲ್ಲ ಸಂತೋಷ ಕೂಟ ಏರ್ಪಡಿಸಿ, ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ. ಅಬ್ಬಬ್ಬ ಅಂದರೆ ನಾವು ಅವರಿಗೆ ಸಣ್ಣಪುಟ್ಟ ಸಹಾಯ ಮಾಡಬಹುದು.

ಗಂಡಸರಿಗೆ ಹಣಬಲ, ತೋಳ್ಬಲ ಕೆಲಸ ಮಾಡುತ್ತದೆ. ಅದೆಲ್ಲವೂ ನಮಗೆ ಕಡಿಮೆ. ಅದಕ್ಕಿಂತ ಮುಖ್ಯವಾಗಿ ಹೆಣ್ಣುಮಕ್ಕಳಾದ ನಾವುಗಳು ಮರ್ಯಾದೆಗೆ ಹೆಚ್ಚು ಹೆದರುತ್ತೇವೆ. ಹೀಗಾಗಿ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನೇ ನಂಬಿಕೊಂಡಿರುತ್ತೇವೆ. ಆದರೆ, ಏನೇ ಅಭಿವೃದ್ಧಿ ಕಾರ್ಯ ಮಾಡಿದರೂ ಗೆಲ್ಲಲು, ಇನ್ನೇನೋ ಜಾದೂ ಮಾಡಬೇಕು. ಕಾರ್ಯಕರ್ತರೊಂದಿಗೆ ಬೆರೆಯಬೇಕು. ಆದರೆ ಅದು ಪುರುಷರಂತೆ ನಮಗೆ ಸಾಧ್ಯವೇ ಆಗುವುದಿಲ್ಲ. ಜೊತೆಗೆ, ಪುರುಷ ರಾಜಕಾರಣಿಗಳ ಬಳಿ ಯಾವಾಗ ಅಂದರೆ ಆವಾಗ ಭೇಟಿ ಮಾಡಲು ಜನರು ಬರುತ್ತಾರೆ. ಆ ಸ್ವಾತಂತ್ರ್ಯ ನಮಗೆ ಇರುವುದಿಲ್ಲ. ಅಥವಾ ನಾವೇ ಲಕ್ಷ್ಮಣ ರೇಖೆಗಳನ್ನು ಹಾಕಿಕೊಂಡಿರುತ್ತೇವೆ. ಇಲ್ಲವೇ ನಮ್ಮ ಸಂಪ್ರದಾಯಬದ್ಧ ಸಮಾಜವೇ ನಮಗೆ ನೂರಾರು ಲಕ್ಷ್ಮಣ ರೇಖೆಗಳನ್ನು ಹಾಕಿದೆ. ಹೀಗಾಗಿ ನಾವು ಕಾರ್ಯಕರ್ತರ ಜೊತೆಗೆ ಚೆನ್ನಾಗಿ ಕಮ್ಯುನಿಕೇಟ್ ಮಾಡಲಾಗುವುದಿಲ್ಲ. ಇದೇ ನಮಗೆ ದೊಡ್ಡ ಕೊರತೆ ಮತ್ತು ದೊಡ್ಡ ಅಡೆತಡೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ನಮ್ಮ ರಾಜಕಾರಣದಲ್ಲಿ ಮಹಿಳೆಯರಿಗೆ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ. ಮಹಿಳೆಯರೂ ಅದರತ್ತ ಕೊಡಬೇಕಾದಷ್ಟು ಗಮನ ಕೊಡಲಾಗಿಲ್ಲ. ಇದಕ್ಕೆ ಕಾರಣಗಳು ಹಲವಾರು.

ಮಹಿಳೆಯರೆಂದರೆ ಇತ್ತ ರಾಜಕಾರಣದಲ್ಲೂ ಸಕ್ರಿಯವಾಗಿರಬೇಕು, ಅತ್ತ ಸಂಸಾರದ ಜವಾಬ್ದಾರಿಯನ್ನೂ ಹೊರಬೇಕು. ನಾನು 1978ರಲ್ಲಿ ಶಾಸಕಿಯಾದ ನಂತರ ನನ್ನ ಮದುವೆಯಾಯಿತು. ಆಮೇಲೆ ಮೂರು ಮಕ್ಕಳಾದವು- ಮಗಳು ಮತ್ತು ಅವಳಿಜವಳಿ ಗಂಡುಮಕ್ಕಳು. ಅವರಿಗೆಲ್ಲ ಏನೇನೂ ಕೊರತೆ ಆಗದಂತೆ ನೋಡಿಕೊಳ್ಳಬೇಕಾದ, ಅವರ ಬೇಕು ಬೇಡಗಳನ್ನು ಪೂರೈಸಬೇಕಾದ ಜವಾಬ್ದಾರಿ ದೊಡ್ಡದು. ನಾನು ನನ್ನ ಮಕ್ಕಳನ್ನು ಬೋರ್ಡಿಂಗ್ ಸ್ಕೂಲ್‍ಗೆ ಸೇರಿಸಿದೆ. ಏಕೆಂದರೆ, ರಾಜಕಾರಣದ ಧಾವಂತದಲ್ಲಿ ಅವರನ್ನು ಸರಿಯಾಗಿ ನೋಡಿಕೊಳ್ಳಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಬೋರ್ಡಿಂಗ್ ಸ್ಕೂಲ್‍ಗೆ ಸೇರಿಸಿದ್ದರಿಂದ ಮಕ್ಕಳನ್ನು ಅವರಿಗೆ ರಜೆ ಬಂದಾಗ ಮಾತ್ರ ನೋಡುತ್ತಿದ್ದೆ. ಹೀಗೆ ಒಂದು ಕಡೆ ಸಂಸಾರ, ಇನ್ನೊಂದು ಕಡೆ ರಾಜಕಾರಣ. ಎರಡು ದೋಣಿಗಳ ಪಯಣ- ಆಳವನರಿಯದ ಯಾನ. ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕು. ಇಲ್ಲದೇ ಹೋದರೆ ಎರಡಲ್ಲಿ ಒಂದು ದೋಣಿ ಮುಳುಗುತ್ತದೆ. ಆದರೆ, ಪುರುಷರಿಗೆ ಅಂಥ ಅನಿವಾರ್ಯತೆ ಇರುವುದಿಲ್ಲ. ಅವರಿಗೆ ಸಂಸಾರದ ಸಂಪೂರ್ಣ ಜವಾಬ್ದಾರಿ ಇರುವುದಿಲ್ಲ. ವಾರಗಟ್ಟಲೆ ಅವರು ತಮ್ಮ ಸಂಸಾರದ ಕಡೆ ಗಮನ ಹರಿಸದಿದ್ದರೂ ನಡೆಯುತ್ತದೆ. ಅವರವರ ಮನೆಯವರು ಎಲ್ಲವನ್ನೂ ನಿಭಾಯಿಸುತ್ತಾರೆ. ಪುರುಷ ರಾಜಕಾರಣಿಗಳಿಗೆ ರಾಜಕೀಯವೊಂದೇ ಗುರಿ. ಅದೇ ಊಟ-ತಿಂಡಿ-ನಿದ್ರೆ ಎಲ್ಲವೂ.

ಚುನಾವಣಾ ರಾಜಕಾರಣದಲ್ಲಿ ಮತದಾರರೂ ಕೂಡ ಮಹಿಳಾ ಅಭ್ಯರ್ಥಿಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಮತದಾರರಲ್ಲಿ ಶೇ. 50ರಷ್ಟು ಮಹಿಳೆಯರೇ ಇದ್ದರೂ ಅವರೆಲ್ಲರೂ ಮಹಿಳಾ ಅಭ್ಯರ್ಥಿಗೆ ಮತ ಹಾಕುವುದಿಲ್ಲ. ಅಥವಾ ಹಾಕಬೇಕು ಎಂಬ ತಿಳಿವಳಿಕೆ ಇರುವುದಿಲ್ಲ. ಜೊತೆಗೆ ಆರ್ಥಿಕ ಸ್ವಾವಲಂಬನೆ ಇರುವುದಿಲ್ಲ. ಸ್ವಾಭಿಮಾನವೂ ಕಡಿಮೆ. ಮನೆಯಲ್ಲಿ ತಂದೆ- ಗಂಡ- ಮಕ್ಕಳು ಹೇಳಿದ ಪಕ್ಷಕ್ಕೆ ಓಟು ಹಾಕುತ್ತಾರೆ. ಮಹಿಳೆಗೆ ಮತ ಹಾಕಿದರೆ, ತಮ್ಮ ಪರವಾಗಿ ಕೆಲಸ ಮಾಡುತ್ತಾರೆ ಎನ್ನುವ ತಿಳಿವಳಿಕೆ ಕಡಿಮೆ. ಹೀಗಾಗಿ ಮಹಿಳಾ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲುವುದು ಅಪರೂಪ.

ನಾನು ಶಾಸಕಿಯಾಗಿ ನಮ್ಮ ಮೂಡಿಗೆರೆ ಕ್ಷೇತ್ರದಲ್ಲಿ ಎಷ್ಟೆಲ್ಲಾ ಅಭಿವೃದ್ಧಿ ಮಾಡಿದೆ. 1978ರಲ್ಲಿ ಮೂಡಿಗೆರೆಯಲ್ಲಿ ಒಂದೇ ಒಂದು ಹೈಸ್ಕೂಲು ಇತ್ತು. ಶಾಸಕಿಯಾದ ಮೇಲೆ ಮೂಡಿಗೆರೆಯ ಪ್ರತಿ ಹೋಬಳಿ ಕೇಂದ್ರಕ್ಕೂ ಒಂದೊಂದು ಹೈಸ್ಕೂಲು, ಹಿಂದುಳಿದ ವರ್ಗಗಳ ಹಾಸ್ಟೆಲ್ ಮಂಜೂರು ಮಾಡಿಸಿದೆ. ಮೂಡಿಗೆರೆಗೆ ಜ್ಯೂನಿಯರ್ ಕಾಲೇಜ್, ಫಸ್ಟ್ ಗ್ರೇಡ್ ಕಾಲೇಜ್ ಬಂದವು. ಜನರಲ್ ಹಾಸ್ಟೆಲ್, ನೂರು ಹಾಸಿಗೆಗಳ ಆಸ್ಪತ್ರೆ ಬಂತು. ಎಷ್ಟೊಂದು ಕಡೆಗಳಲ್ಲಿ ಸೇತುವೆಗಳ ನಿರ್ಮಾಣವಾಯಿತು. ಉತ್ತಮ ರಸ್ತೆಗಳಾದವು. ನಾನು ಸಚಿವೆಯಾಗಿದ್ದಾಗ ಇಡೀ ರಾಜ್ಯದಾದ್ಯಂತ ಸ್ವಸಹಾಯ ಸಂಘಗಳ ಸ್ಥಾಪನೆಯಾಗಿ ಅವುಗಳು ಆಂದೋಲನದ ರೀತಿಯಲ್ಲಿ ಬೆಳೆದವು. ಅವುಗಳಿಗೆಲ್ಲ ಬ್ಯಾಂಕ್ ಖಾತೆ ಮಾಡಿಸಿ, ಸೀಡ್ ಮನಿ ನೀಡಿದೆವು. ಮಹಿಳೆಯರು ಸಂಘಟಿತರಾದರು. ಉಳಿತಾಯ ಶಕ್ತಿ ವೃದ್ಧಿಯಾಯಿತು. ಕುಡುಕ ಗಂಡಂದಿರ ಪಾಲಾಗುತ್ತಿದ್ದ ಹಣವೆಲ್ಲ ಉಳಿತಾಯವಾಗಿ ಅಭಿವೃದ್ಧಿಗೆ ಬಳಕೆಯಾಗತೊಡಗಿತು. ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಂದ ರಾಜ್ಯದಲ್ಲಿ ಭಾರಿ ಬದಲಾವಣೆ ಸಾಧ್ಯವಾಯಿತು. ಆದರೆ, ಇದು ಮಹಿಳೆಯರಲ್ಲಿ ರಾಜಕೀಯದ ಜಾಗೃತಿ ಮೂಡಿಸಲು ಸಾಧ್ಯವಾಗಲಿಲ್ಲ. ನಿಧಾನಕ್ಕೆ ತಮ್ಮ ಮೂಲ ಉದ್ದೇಶ ಮರೆತ ಸ್ವಸಹಾಯ ಸಂಘಗಳು ಓಟ್ ಬ್ಯಾಂಕ್‍ಗಳಾದವು. ಸ್ವಸಹಾಯ ಸಂಘಗಳ ಸದಸ್ಯೆಯರು ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು, ಅವರ ಕೈಗೊಂಬೆಗಳಾದರು. ರಾಜಕೀಯದವರು ಕೊಡುವ ಪುಡಿಗಾಸಿಗಾಗಿ ಆಸೆಪಟ್ಟರು. ಸಂಘಗಳ ಸದಸ್ಯೆಯರು ಸಹ ಒಂದು ಓಟಿಗೆ ಇಷ್ಟು ಅಂತ ದುಡ್ಡು ಫಿಕ್ಸ್ ಮಾಡಿಕೊಂಡರು ಎಂಬ ಆರೋಪಗಳೂ ಕೇಳಿಬಂದವು. ಸ್ವಾಭಿಮಾನದಿಂದ ಬದುಕಬೇಕಾದ ಇಂಥ ಸ್ವಸಹಾಯ ಸಂಘಗಳೇ ಓಟ್ ಬ್ಯಾಂಕ್‍ಗಳಾದದ್ದು ದುರಂತ.

ಇದಕ್ಕೂ ಕೂಡ ಮಹಿಳೆಯರಲ್ಲಿನ ರಾಜಕೀಯ ತಿಳಿವಳಿಕೆಯ ಕೊರತೆಯೇ ಕಾರಣ. ರಾಜಕಾರಣ ನಮಗೆ ಸೇರಿದ್ದಲ್ಲ, ಅದೇನಿದ್ದರೂ ಗಂಡಸರ ಕೆಲಸ, ನಾವೇನಿದ್ದರೂ ಮನೆಯಲ್ಲಿ ಕೆಲಸ ಮಾಡಿಕೊಂಡಿರುವವರು, ನಮಗೆ ಅದರ ಗೊಡವೆ ಬೇಡ, ಯಾರು ಅಧಿಕಾರಕ್ಕೆ ಬಂದರೆ ಏನು, ದಿನವೂ ನಾವು ಗೇಯುವುದು ತಪ್ಪÅತ್ತದೆಯೇ ಎಂಬ ನೆಗೆಟಿವ್ ಭಾವನೆ. ಹೀಗಾಗಿ ಸ್ವಸಹಾಯ ಸಂಘಗಳ ಸದಸ್ಯೆಯರೂ ಕೂಡ ಅಲ್ಪಾವಧಿಯಲ್ಲಿ ಸಿಗುವ ಸ್ವಲ್ಪ ಲಾಭಕ್ಕಾಗಿ ತಮ್ಮ ಅಸ್ಮಿತೆಯನ್ನು, ಉದ್ದೇಶವನ್ನು ಗಾಳಿಗೆ ತೂರಿಬಿಟ್ಟರು. ಈಗಲೂ ಕೆಲವು ಉತ್ತಮ ಸಂಘಗಳಿವೆ, ಅವುಗಳು ಮಾದರಿ ಕೆಲಸ ಮಾಡುತ್ತಿವೆ. ಆದರೆ, ಅವುಗಳ ಸಂಖ್ಯೆ ಕಡಿಮೆ. ಸ್ತ್ರೀಶಕ್ತಿ ಸ್ವಸಹಾಯ ಮಹಿಳಾ ಗುಂಪುಗಳು ಹೇಗೆ ರಾಜಕೀಯ ದಾಳಗಳಾಗಿ ಬಳಕೆಯಾಗುತ್ತಿವೆ ಎಂಬುದು ಸಂಶೋಧನಾರ್ಹ.

ಮಹಿಳೆಯರು ರಾಜಕಾರಣದಲ್ಲಿ ಮುಂದೆ ಬಂದರೂ, ನಮ್ಮ ವಿರುದ್ಧ ಷಡ್ಯಂತ್ರ ನಡೆದೇ ಇರುತ್ತದೆ. ದಬ್ಬಾಳಿಕೆಯಂತೂ ನಿರಂತರ. ಪುರುಷ ರಾಜಕಾರಣಿಗಳು ತಮ್ಮ ವಿರುದ್ಧದ ಪಿತೂರಿ, ಷಡ್ಯಂತ್ರ, ಅಪಪ್ರಚಾರಗಳನ್ನೆಲ್ಲ ಚೆನ್ನಾಗಿ ನಿಭಾಯಿಸುತ್ತಾರೆ. ಆದರೆ, ನಮ್ಮ ವಿರುದ್ಧ ಸ್ವಲ್ಪ ಅಪ್ರಪ್ರಚಾರ ನಡೆದರೂ ಮಾನಸಿಕವಾಗಿ ಕುಗ್ಗಿ ಹೋಗುತ್ತೇವೆ. ಅದರಿಂದ ಹೊರಬರಲು ಸಮಯ ಬೇಕಾಗುತ್ತದೆ. ನಮ್ಮ ವಿರುದ್ಧ ಅಪಪ್ರಚಾರ ಮಾಡುವವರನ್ನು ರಿಪೇರಿ ಮಾಡಲು ಆಗುವುದೇ ಇಲ್ಲ. ಇಂಥ ಎಷ್ಟೋ ವಿಚಾರಗಳು ನಮ್ಮನ್ನು ರಾಜಕೀಯದಲ್ಲಿ ಮುನ್ನೆಲೆಗೆ ಬರದಂತೆ ತಡೆಯುತ್ತವೆ.

ಮಹಿಳಾ ಮೀಸಲಾತಿ

ರಾಜಕೀಯದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗಬೇಕು ಎಂದರೆ ಮಹಿಳಾ ಮೀಸಲಾತಿ ಬೇಕೇಬೇಕು. ಶೇ. 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು. ಶೇ. 33 ಕ್ಷೇತ್ರಗಳಲ್ಲಿ ಮಹಿಳೆಯರೇ ಪರಸ್ಪರ ಸ್ಪರ್ಧಿಸುತ್ತಾರೆ. ಇಂಥದ್ದೊಂದು ಕರಡನ್ನು ಯುಪಿಎ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿತು. ಆದರೆ ಅದಿನ್ನೂ ಅಂಗೀಕಾರವಾಗಿಲ್ಲ.

ಕರ್ನಾಟಕ ರಾಜ್ಯದಲ್ಲಿ ವಿಧಾನಸಭೆಗೆ 224 ಕ್ಷೇತ್ರಗಳಿವೆ. ಶೇ. 33ರಷ್ಟು ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿಟ್ಟರೆ, ರಾಜ್ಯದ 74 ಕ್ಷೇತ್ರಗಳಲ್ಲಿ ಮಹಿಳೆಯರೇ ಸ್ಪರ್ಧಿಸುತ್ತಾರೆ. ಅಂತಿಮವಾಗಿ 74 ಕ್ಷೇತ್ರಗಳಲ್ಲಿ ಮಹಿಳೆಯರೇ ಆಯ್ಕೆಯಾಗಿ ವಿಧಾನಸೌಧ ಪ್ರವೇಶಿಸುತ್ತಾರೆ. ಅವರೆಲ್ಲರೂ ಮಹಿಳೆಯರ ಪರವಾದ ಆಡಳಿತ ಚಿಂತನೆಗೆ ಒತ್ತಾಯಿಸುವುದರಲ್ಲಿ ಎರಡು ಮಾತಿಲ್ಲ. ಈಗ ಮಹಿಳೆಯರು ಪುರುಷರ ವಿರುದ್ಧ ನಿಂತು ಗೆಲ್ಲಬೇಕಾದ ಪರಿಸ್ಥಿತಿ ಇದೆ. ಪುರುಷ ಅಭ್ಯರ್ಥಿಗಳ ವಿರುದ್ಧ ಚುನಾವಣೆಯಲ್ಲಿ ಗೆಲ್ಲುವುದು ಎಷ್ಟು ಕಷ್ಟ ಎನ್ನುವುದು ಆ ಚುನಾವಣಾ ಅಗ್ನಿಕುಂಡದಲ್ಲಿ ಹಾದು ಬಂದವರಿಗಷ್ಟೇ ಗೊತ್ತು.

ರಾಜಕೀಯ ಹಿನ್ನೆಲೆಯುಳ್ಳ ಮಹಿಳೆಯರೇ ಇಲ್ಲಿಯವರೆಗೂ ಚುನಾವಣೆಗಳಲ್ಲಿ ಗೆದ್ದು ಬಂದಿದ್ದಾರೆ. ಅವರಲ್ಲಿ ಅಪವಾದವೆಂದರೆ ನಾನೊಬ್ಬಳೇ. ಯಾವ ರಾಜಕೀಯದ ಹಿನ್ನೆಲೆಯೂ ಇರದ, ಒಬ್ಬ ಬಡ ಕೂಲಿಕಾರನ ಮಗಳಾಗಿ ಹುಟ್ಟಿದ ನಾನು ರಾಜಕಾರಣದ ಮೆಟ್ಟಿಲುಗಳನ್ನೇರಿದೆ. ನನ್ನಂಥವರ ಸಂಖ್ಯೆ ಹೆಚ್ಚಾಗಬೇಕು ಎಂದರೆ ಮೀಸಲಾತಿ ಬೇಕೇಬೇಕು.

ಮಹಿಳಾ ಮೀಸಲಾತಿಯಲ್ಲಿಯೇ ಎಸ್‍ಸಿ/ಎಸ್‍ಟಿ ಮಹಿಳೆಯರಿಗೆ ಒಳಮೀಸಲಾತಿ ನೀಡಬೇಕು ಎಂಬ ಬೇಡಿಕೆ ಇದೆ. ಇಂಥ ಅನೇಕ ಕಾರಣಗಳಿಂದಾಗಿ ಅದು ಎಲ್ಲಿ ಶುರುವಾಗಿತ್ತೋ ಅಲ್ಲಿಯೇ ನಿಂತಿದೆ.

ರಾಜಕೀಯ ಅರಿವು

ಸ್ಥಳೀಯ ಸಂಸ್ಥೆಗಳಲ್ಲಿ ಶೇ. 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಆದರೆ, ಈ ಮೀಸಲಾತಿಯು ನಮಗೆ ವಿಧಾನಸಭೆ, ಲೋಕಸಭಾ ಚುನಾವಣೆಗಳಲ್ಲಿ ಮೇಲೇರಲು ಏಣಿಯಾಗಿ ಪರಿವರ್ತನೆಯಾಗುತ್ತಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿನ ಮಹಿಳೆಯರ ಬಹುತೇಕ ಜವಾಬ್ದಾರಿಗಳನ್ನು ಪುರುಷರೇ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅದು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಅಲ್ಲಿಂದ ಬೆರಳೆಣಿಕೆಯ ಮಹಿಳಾ ನಾಯಕಿಯರು ಬರುತ್ತಿರುವುದೇ ಇದಕ್ಕೆ ಸಾಕ್ಷಿ.

ಇವೆಲ್ಲದರ ಹೊರತಾಗಿ ನಮ್ಮ ಮಹಿಳೆಯರಿಗೆ ರಾಜಕೀಯ ಅರಿವು ಮೂಡಬೇಕಾಗಿದೆ. ಆದರೆ ಅರಿವು ಮೂಡುತ್ತದೆ ಎನ್ನುವುದೇ ಅಸಾಧ್ಯದ ಸಂಗತಿ. ಯಾಕೆಂದರೆ, ಈ ಹಿಂದಿನ ಸರ್ಕಾರದಲ್ಲಿ `ಮನಸ್ವಿ’, `ಮೈತ್ರಿ’, `ಮಾತೃಪೂರ್ಣ’ದಂಥ ಮಹಿಳಾ ಪರ ಕಾರ್ಯಕ್ರಮಗಳಿದ್ದವು. ಗರ್ಭಿಣಿಯರಿಗೆ ಆರು ತಿಂಗಳು ಅಂಗನವಾಡಿಯ ಮೂಲಕ ಆರೈಕೆ ಮಾಡುವ ಯೋಜನೆ `ಮಾತೃಪೂರ್ಣ’. ಮನಸ್ವಿ ಮತ್ತು ಮೈತ್ರಿಯಂಥ ಕಾರ್ಯಕ್ರಮಗಳು ಇಡೀ ಮಹಿಳೆಯರಿಗೆ ಗೌರವ ತರುವಂಥವು. ಪತಿ ತೊರೆದ ಮಹಿಳೆಯರಿಗೆ, ಕುಡುಕ ಗಂಡಂದಿರಿಂದ ತೊಂದರೆಗೊಳಗಾದವರಿಗೆ ಪ್ರತಿತಿಂಗಳೂ ಗೌರವಧನ ನೀಡುವ ಉತ್ತಮ ಯೋಜನೆಗಳಿವು. ಇಂಥವುಗಳ ಬಗ್ಗೆಯೂ ಗ್ರಾಮೀಣ ಮಟ್ಟದಲ್ಲಿ ಮಹಿಳೆಯರಿಗೆ ಅರಿವಿಲ್ಲ. ಹೀಗೆ ನಮ್ಮ ಹೆಣ್ಣುಮಕ್ಕಳು ತುಂಬ ಹಿಂದುಳಿದಿದ್ದಾರೆ. ಅವರಿಗೆ ಎಲ್ಲಿಯವರೆಗೂ ಜಾಗೃತಿ ಮೂಡುವುದಿಲ್ಲವೋ ಅಲ್ಲಿಯವರೆಗೂ ಮಹಿಳೆಯರು ರಾಜಕೀಯ ಅಧಿಕಾರ ಹಿಡಿಯುವುದು ಮತ್ತು ಸಮಾನತೆಯನ್ನು ಬಯಸುವುದು ಕಷ್ಟಸಾಧ್ಯ!

ಕೊನೆಯ ಮಾತು

ನಮಗೆ ರಾಜಕೀಯ ಜಾಗೃತಿ ಮೂಡಬೇಕೆಂದರೆ ಅದಕ್ಕೆ ನಾವೇ ಶ್ರಮಪಡಬೇಕು. ಜೊತೆಗೆ ಪುರುಷ ಸಮಾಜವೂ ನಮ್ಮನ್ನು ತಮ್ಮ ಸಮಾನರನ್ನಾಗಿ ಪರಿಗಣಿಸಬೇಕು. ನಮಗೂ ಅವಕಾಶ ನೀಡಬೇಕು. ಯಾವುದೇ ಒಬ್ಬ ಪುರುಷನನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುವಂತೆ, ನಮ್ಮನ್ನೂ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುವುದನ್ನು ಪಕ್ಷಗಳು ರೂಢಿಸಿಕೊಳ್ಳಬೇಕು. ಪಕ್ಷಗಳು ಸ್ವಯಂ ಮೀಸಲಾತಿಯನ್ನು ಪಾಲಿಸಬೇಕು. ಆಗ ಸಹಜವಾಗಿ ವಿಧಾನಸೌಧದಲ್ಲಿ ನಮ್ಮ ಸಂಖ್ಯೆ ಹೆಚ್ಚಾಗುತ್ತದೆ. ಈಗಿನಂತೆ ಕೇವಲ ಏಳೆಂಟು ಜನ ಶಾಸಕಿಯರಾಗಿ, ಕೇವಲ ಒಬ್ಬಳೇ ಒಬ್ಬ ಮಹಿಳೆ ಮಂತ್ರಿಯಾಗಿ ಕೆಲಸ ಮಾಡುವ ಬದಲಾಗಿ ಹಲವಾರು ಮಹಿಳೆಯರು ಶಾಸಕಿಯರಾಗಿ, ಹತ್ತಾರು ಜನರು ಸಚಿವೆಯರಾಗಿ ಮಹಿಳಾಪರವಾದ ಕಾರ್ಯಕ್ರಮ ರೂಪಿಸಲು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಬಹುದು. ನ್ಯಾಯಯುತ ನಿಸ್ಪೃಹವಾದ  ಸರ್ಕಾರ ರೂಪಿಸಲು ಸಾಧ್ಯವಾಗುತ್ತದೆ.
(ನಿರೂಪಣೆ: ವೀರಣ್ಣ ಕಮ್ಮಾರ)

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

3 thoughts on “ರಾಜಕೀಯದಲ್ಲಿ ಮಹಿಳೆ : ಬದಲಾಗದ ಸ್ಥಿತಿಗತಿ – ಮೋಟಮ್ಮ

 • August 22, 2018 at 9:14 am
  Permalink

  ಅತ್ಯುತ್ತಮ ಮಾಹಿತಿಯ ಒಂದೊಳ್ಳೆ ಬರಹ .

  Reply
  • August 25, 2018 at 6:21 am
   Permalink

   Thank you Dr. Devu Shiramalli for giving your comments. There should lot of discussions among women of our country for empowering ourselves. Our footprints in political geography should be increased at greater phase. Men leaders will speak sympathetically about women leadership, but they don’t encourage women to become leaders in this country. We only have to fight and struggle. Learned women like you and others have to come together and work endlessly for this cause.
   -Motamma.

   Reply
 • October 11, 2020 at 11:35 pm
  Permalink

  ಶ್ರೀಮತಿ ಮೋಟಮ್ಮ ಅವರ ಲೇಖನ ಇಂದಿಗೂ ಹೊಸದೇ. ಫೇಸ್ ಬುಕ್ ನಲ್ಲಿ ಹಂಚಿಕೊಂಡೆ. ಪಂಚಾಯಿತಿ ಗೆ ಆರಿಸಿ ಬರುವ ಮಹಿಳೆಯರಿಗೆ ವಿಶಿಷ್ಟ ತರಪೇತಿ ನೀಡುವ ಕೆಲಸ ಮಾಡಬೇಕು
  ಮೂರರಲ್ಲಿ ಒಂದು ಪಾಲು ಮಹಿಳೆಯರಿಗೆ ಮೀಸಲಾತಿ ವಿಷಯ ಸಾಧಿಸುವವರೆಗೂ ಮುನ್ನೆಲೆಯಲ್ಲಿಟ್ಟು ಪಕ್ಷಾತೀತವಾಗಿ ಹೋರಾಟ ಆಗಬೇಕು
  ಸಾಮಾನ್ಯ ತಿಳಿವಿನ ರಾ ಜಕೀಯ ಶಿಕ್ಷಣ ನಿರಂತರ ಚಿಕ್ಕವಯಸಿನ ಹೆಣ್ಣುಮಕ್ಕಳಿಗೆ ಸಿಗಬೇಕು

  Reply

Leave a Reply

Your email address will not be published. Required fields are marked *