ಯಾವ ಮಹಿಳೆಗೆ ಎಂಥ ವಿರಾಮ? – ಮೈತ್ರಿ ಬೆಂಗಳೂರು
‘ವಿರಾಮ’ ಎನ್ನುವುದು ಸ್ವತಂತ್ರ ವಿಷಯವೇ ಅಲ್ಲ. ವಿರಾಮ ಅಂದರೆ ಯಾವುದರಿಂದ ವಿರಾಮ ಎನ್ನುವ ಪ್ರಶ್ನೆ ಏಳುತ್ತದೆ. ವಿವಿಧ ವರ್ಗದ ಮಹಿಳೆಯರ ವಿರಾಮ ವಿವಿಧ ಸ್ವರೂಪದ್ದಾಗಿರುತ್ತದೆ. ನಮ್ಮ ದೇಶದಲ್ಲಿ ದುಡಿಮೆ ಮತ್ತು ವಿರಾಮ – ಎರಡೂ ಬೇರೆಯವರಿಂದ ನಿರ್ದೇಶಿತವಾದ ಮತ್ತು ನಿಯಂತ್ರಿತವಾದ ವಿಷಯಗಳು. ಮಹಿಳೆಯರ ದುಡಿಮೆಯಲ್ಲಿ ಉತ್ಪಾದಕ ಮತ್ತು ಅನುತ್ಪಾದಕ ಎಂಬ ಭೇದಗಳಿರುತ್ತವೆ. ನಮ್ಮ ಶ್ರೇಣೀಕೃತ ಲಿಂಗವ್ಯವಸ್ಥೆಯಲ್ಲಿ ನಿರ್ಧರಿತವಾಗಿರುವ ಸ್ತ್ರೀ-ಪುರುಷರ ನಡುವಿನ ಕೆಲಸದ ಹಂಚಿಕೆ ಮಹಿಳೆಗೆ ಬಿಡುವನ್ನು ನಿರಾಕರಿಸುತ್ತಿದೆ. ಭಾರತೀಯ ಸಂದರ್ಭದಲ್ಲಿ ದುಡಿಮೆ-ವಿರಾಮದ ಅಧ್ಯಯನ ಜಾತಿಯ ಆಯಾಮವನ್ನು ಒಳಗೊಳ್ಳದಿದ್ದರೆ ಆ ಚರ್ಚೆ ಅಪೂರ್ಣವಾದಂತೆಯೇ. ಮಹಿಳೆ ಎನ್ನುವ ಪರಿಕಲ್ಪನೆಯಲ್ಲಿ ಏಕಾಕಾರವಿಲ್ಲ. ಅದರಲ್ಲಿ ವರ್ಗ ಹಾಗೂ ಜಾತಿಯ ಪದರಗಳಿರುತ್ತವೆ.
ಸಣ್ಣಗೆ ಹಾಡೊಂದನ್ನು ಗುಣುಗುಣಿಸುತ್ತಾ ಸೂಜಿ ಮಲ್ಲಿಗೆಯ ರಾಶಿಯನ್ನು ಮುಂದೆ ಸುರಿದುಕೊಂಡು ಮಮತಾ ಯಾವುದೋ ಲೋಕದಲ್ಲಿ ಕಳೆದು ಹೋಗಿದ್ದಾಳೆ. ಕೆಲಸಕ್ಕೆ ಹೋದ ಗಂಡ, ಶಾಲೆಗೆ ಹೋದ ಮಗ ಸಂಜೆಗೆ ಮನೆಗೆ ಬರುವವರೆಗೂ ಮನೆಯಲ್ಲಿ ಅವಳೊಬ್ಬಳೇ. ಮಾಡಲು ಹೆಚ್ಚೇನೂ ಕೆಲಸವಿಲ್ಲ. ಇರುವ ಚೂರೂಪಾರು ಕೆಲಸವನ್ನು ಮನೆಗೆಲಸದವಳು ಬಂದು ಮಾಡಿ ಹೋಗುತ್ತಾಳೆ. ಇನ್ನಿರುವ ಸಮಯವವನ್ನು ಕೊಲ್ಲಬೇಕಲ್ಲಾ, ಹೇಗೆ? ಈ ಹೂವು ಕಟ್ಟುವುದೂ ಅದರಲ್ಲೊಂದು. ಮನೆಯ ಅಂಗಳದಲ್ಲಿ ಇರುವ ಸೂಜಿ ಮಲ್ಲಿಗೆಗಿಡ ಹೊರೆಹೊರೆ ಹೂ ಬಿಡುತ್ತದೆ. ಅವಳನ್ನು ಬಿಟ್ಟರೆ ಮುಡಿಯುವವರೂ ಯಾರಿಲ್ಲ. ನೆರೆಹೊರೆ ಹೆಚ್ಚು ಪರಿಚಯವಿಲ್ಲ. ಸರಿ, ಕಟ್ಟಿದ ಹೂವನ್ನು ತಾನೂ ಮುಡಿದು ಮನೆಯ ಎಲ್ಲ ದೇವರ ಪಟಗಳಿಗೆ ಅಲಂಕರಿಸಿದರೆ ಆಯಿತು. ಅವಳ ಶ್ರಮ ಸಾರ್ಥಕ! ದಿನದಲ್ಲಿ ಸ್ವಲ್ಪ ಹೊತ್ತೂ ಹೋದಂತಾಗುತ್ತದೆ.
ನಿಶಾ ಅವಸರವಸರದಲ್ಲಿ ಅಲಂಕರಿಸಿಕೊಂಡು, ಬೆಳಗಿನಿಂದ ಸಡಗರಿಸುತ್ತಾ ಮನೆಗೆಲಸದ ರೇವತಿಗೆ ಹಿಂದಿನ ದಿನ ತಂದಿಟ್ಟಿದ್ದ ಹೂವುಗಳನ್ನು ತೆಗೆದು ಕಾರಿನಲ್ಲಿಡಲು ಹೇಳುತ್ತಾಳೆ. ಅಂದು ಅವರ ರೋಟರಿ ಕ್ಲಬ್‌ನಲ್ಲಿ ಇಕೆಬಾನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಅದರಲ್ಲಿ ಅವಳು ಭಾಗವಹಿಸುವವಳಿದ್ದಾಳೆ. ಕಳೆದ ಹಲವಾರು ವರ್ಷಗಳಿಂದ ಈ ಸ್ಪರ್ಧೆಗಳಲ್ಲಿ ಅವಳು ಬಹುಮಾನ ಪಡೆಯುತ್ತಲೇ ಬಂದಿದ್ದಾಳೆ. ಈ ವರ್ಷವೂ ಅದು ಅವಳ ಕೈ ತಪ್ಪಿ ಹೋಗಕೂಡದು. ಹೂವಿನೊಡನೆಯ ಅವಳ ಒಡನಾಟ ಅವಳಿಗೆ ಅತ್ಯಂತ ಪ್ರಿಯವಾದುದು. ಅದು ಅವಳ ನೆಚ್ಚಿನ ಹವ್ಯಾಸವೂ ಹೌದು.
ಕಣ್ಣು ತೂಗುತ್ತಿದೆ. ನಿದ್ದೆಯ ಸೆಳೆತ. ಆದರೂ ಮುಂದಿರುವ ಹೂವಿನ ಗುಡ್ಡೆಯನ್ನು ಕರಗಿಸಬೇಕು. ಸಿಟಿ ಮಾರ್ಕೆಟ್ಟಿನಿಂದ ಕನಕಾಂಬರ, ಕಾಕಡ, ಮಲ್ಲಿಗೆಯ ಹೂಗಳನ್ನು ಕೊಂಡು ಬಸ್ಸಿನಲ್ಲಿ ಕುಳಿತು ಮನೆ ಬರುವವರೆಗೂ ಹೂವು ಕಟ್ಟಿದ್ದರೂ ಹೂವಿನ ರಾಶಿ ಕರಗಿದಂತೆಯೇ ಇಲ್ಲ. ಮನೆಕೆಲಸವನ್ನೆಲ್ಲ ಮುಗಿಸಿ ಮಧ್ಯರಾತ್ರಿಯ ನಂತರವೂ ಹೂವು ಕಟ್ಟುತ್ತಾ ಕೂರಬೇಕು. ಬೆಳಗೆದ್ದರೆ ಕಟ್ಟಿದ ಹೂವನ್ನು ಮಾರಲು ಹೊರಡಬೇಕಲ್ಲಾ! ಇದು ಹೂ ಮಾರುವ ರತ್ನಳ ಅನುದಿನದ ಕಾಯಕ. ಮದುವೆಗೆ ಮುಂಚೆ ತಾಯಿಯ ಮನೆಯಲ್ಲಿದ್ದಾಗಲೂ ಹೂ ಕಟ್ಟುವುದೇ ಅವಳ ಹೊಟ್ಟೆಪಾಡಿನ ದುಡಿಮೆಯಾಗಿತ್ತು. ಈಗಲೂ ಅದೇ ಅವಳ ವೃತ್ತಿ. ಮನೆಮಂದಿಯೆಲ್ಲಾ ಬೇರೆ ಏನೇ ಕೆಲಸ ಮಾಡಿದರೂ ಅವಳು ಮಾತ್ರ ಹೂ ಮಾರುವುದನ್ನು ಬಿಟ್ಟು ಬೇರೆ ಕೆಲಸಕ್ಕೆ ಕೈ ಹಾಕಿಲ್ಲ.
ಇಲ್ಲಿ ಮಮತಾ, ನಿಶಾ ಮತ್ತು ರತ್ನ— ಈ ಮೂವರೂ ಮಹಿಳೆಯರಿಗೆ ಹೂವಿನೊಡನೆ ಒಡನಾಟವಿದೆ. ಆ ಒಡನಾಟ ಒಬ್ಬರಿಗೆ ವಿರಾಮ, ಮತ್ತೊಬ್ಬರಿಗೆ ಹವ್ಯಾಸ ಮತ್ತು ಮಗದೊಬ್ಬರಿಗೆ ದುಡಿಮೆ. ಹೀಗೆ ಸಮಾಜದಲ್ಲಿ ಮಹಿಳೆಗೆ ಸಂಬಂಧಪಟ್ಟ ಯಾವುದೇ ಸಂಗತಿಯನ್ನು ಪರಿಗಣಿಸಿದರೂ, ಅಲ್ಲಿ ಭಿನ್ನತೆಯಿರುತ್ತದೆ. ಇದಕ್ಕೆ ಮುಖ್ಯ ಕಾರಣ ಮಹಿಳೆ ಎನ್ನುವ ಪರಿಕಲ್ಪನೆಯಲ್ಲಿ ಏಕಾಕಾರವಿಲ್ಲ. ಅದರಲ್ಲಿ ವರ್ಗ ಹಾಗೂ ಜಾತಿಯ ಪದರಗಳಿರುತ್ತವೆ.
‘ವಿರಾಮ’ ಎನ್ನುವುದು ಸ್ವತಂತ್ರ ವಿಷಯವೇ ಅಲ್ಲ. ವಿರಾಮ ಅಂದರೆ ಯಾವುದರಿಂದ ವಿರಾಮ ಎನ್ನುವ ಪ್ರಶ್ನೆ ಏಳುತ್ತದೆ. ಅದಕ್ಕೆ ಉತ್ತರ ಹುಡುಕಲು ಈ ಕೆಳಗಿನ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ವಿರಾಮವೆಂದರೆ
• ದೈನಂದಿನ ಜೀವನಕ್ರಮದಿಂದ ಬಿಡುಗಡೆಯೇ?
• ದುಡಿಮೆಯಿಂದ ಬದಲಾವಣೆಯೇ?
• ದುಡಿಮೆಯ ನಡುವೆ ಬದಲಾವಣೆಯೇ?
ಒಟ್ಟಿನಲ್ಲಿ ‘ದುಡಿಮೆ’ ಮತ್ತು ‘ಮಹಿಳೆ’ ಎನ್ನುವ ಪದ ಸಂವಾದಿಯಾಗಿಯೇ ಬಳಕೆಯಾಗುತ್ತದೆ. ಅಂದರೆ, ದುಡಿಯದ ಮಹಿಳೆಯರೇ ಇರುವುದಿಲ್ಲ. ಇದ್ದರೂ ಕನಿಷ್ಟ ಶೇಕಡ ೧ರಷ್ಟಿರಬಹುದು. ಇವರನ್ನೇ ಒಂದು ‘ವಿರಾಮ ವರ್ಗ’ ಎಂದು ಕರೆಯಬಹುದು. ಮಹಿಳೆಯರ ದುಡಿಮೆಯಲ್ಲಿ ಉತ್ಪಾದಕ ಮತ್ತು ಅನುತ್ಪಾದಕ ಎಂಬ ಭೇದಗಳಿರುತ್ತವೆ. ವೃತ್ತಿನಿರತ ಮಹಿಳೆಯರಿಗೂ ಮನೆಯ ಕೆಲಸ ತಪ್ಪಿದ್ದಲ್ಲ. ಮನೆಯ ಹೊರಗೆ ಕಚೇರಿಯಲ್ಲಿ ಕೆಲಸ ಮಾಡಿಬಂದ ನಂತರ ಅಡಿಗೆ, ಮನೆ, ಮಕ್ಕಳು, ಹಿರಿಯರು — ಈ ಎಲ್ಲದರ ಆರೈಕೆಯ ಜವಾಬ್ದಾರಿ ಹೆಚ್ಚಾಗಿ ಮಹಿಳೆಯರ ಹೆಗಲನ್ನೇ ಏರುತ್ತದೆ. ಈ ಎಲ್ಲ ಕೆಲಸಗಳನ್ನು ಮುಗಿಸಿದ ನಂತರ ತನ್ನ ವಿರಾಮಕ್ಕಾಗಿ ಉಳಿಯುವ ಸಮಯವಾದರೂ ಎಷ್ಟು? ದುಡಿಯುವ ಎಲ್ಲ ಮಹಿಳೆಯರ ದುಡಿಮೆಯನ್ನು ಉತ್ಪಾದಕ ಮೌಲ್ಯ ಹೊಂದಿದೆ ಎಂದು ಸಮಾಜ ಪರಿಗಣಿಸುವುದಿಲ್ಲ. ಆದಾಯ ತರುವಂತಹ ದುಡಿಮೆಯನ್ನು ಮಾತ್ರ ‘ದುಡಿಮೆ’ ಎಂದು ಮನ್ನಿಸಲಾಗುತ್ತದೆ. ಗೃಹಕೃತ್ಯದ ಬಹುಪಾಲು ಎಲ್ಲ ದುಡಿಮೆಯನ್ನು ಅನುತ್ಪಾದಕವೆಂದೇ ಪರಿಗಣಿಸಲಾಗುತ್ತದೆ. ಮಹಿಳೆಯರ ಅನುತ್ಪಾದಕ ದುಡಿಮೆಗೆ ಸಮಾಜದಲ್ಲಿ ಬೆಲೆಯೇ ಇಲ್ಲ. ಮನೆಗೆಲಸ ದುಡಿಮೆಯೇ ಅಲ್ಲ ಎನ್ನುವುದಾದರೆ ಅದರಿಂದ ವಿರಾಮವೇಕೆ ಬೇಕು ಎಂಬ ಪ್ರಶ್ನೆಯನ್ನು ಸಮಾಜ ಬಹಳ ಸುಲಭವಾಗಿ ಒಡ್ಡುತ್ತದೆ. ಒಟ್ಟಿನಲ್ಲಿ ಮಹಿಳೆಯರ ‘ಶ್ರಮ’ಕ್ಕೆ ಬೆಲೆ ದೊರಕುತ್ತದೋ ಇಲ್ಲವೋ, ಅವರಿಗೆ ವಿರಾಮದ ಕೊರತೆಯಿರುವುದಂತೂ ಸ್ಪಷ್ಟ.
ಭಾರತೀಯ ಹೆಣ್ಣಿಗೆ ವಿರಾಮದ ಕೊರತೆಯಿರುವುದಕ್ಕೆ ಹಲವಾರು ಕಾರಣಗಳಿವೆ:
• ಕೌಟುಂಬಿಕ ಜವಾಬ್ದಾರಿಯೆಲ್ಲವೂ ಮಹಿಳೆಯದೇ ಎಂಬ ಪ್ರಾಚೀನವಾದ ಮತ್ತು ಪುರುಷ ಪಕ್ಷಪಾತಿಯಾದ ಗ್ರಹಿಕೆ.
• ನಮ್ಮ ಸಾಮಾಜಿಕ ಸನ್ನಿವೇಶದಲ್ಲಿ ಗೃಹವಾರ್ತೆ, ಮಗುವನ್ನು ಸಾಕುವುದು, ಅಡಿಗೆ ಮಾಡುವುದೆಲ್ಲವನ್ನು ಉತ್ಪಾದಕ ದುಡಿಮೆಯೆಂದು ಪರಿಗಣಿಸದೇ ಇರುವುದು. ಆದ್ದರಿಂದಲೇ ಹೆಣ್ಣು ಹೊರಗಿನ ದುಡಿಮೆಯಿಂದ ನಿವೃತ್ತಳಾದರೂ ಮನೆಯ ಚಾಕರಿಯಿಂದ ನಿವೃತ್ತಿ ಪಡೆಯುವುದೇ ಇಲ್ಲ.
• ಮಹಿಳೆಯರಿಗೆ ಇರುವ ‘ಸೂಪರ್ ವುಮನ್ ಸಿಂಡ್ರೋಮ್’; ಸಣ್ಣ ವಯಸ್ಸಿನಿಂದಲೇ ಮನಸ್ಸಿನಲ್ಲಿ ಬೇರೂರುವಂತೆ ಮಾಡಿರುವ ಸಾಮಾಜಿಕ ರೀತಿನೀತಿಗಳು ಬಹಳಷ್ಟಿವೆ. ಕಚೇರಿಯಲ್ಲಿ ತಾನು ಯಾವ ಪುರುಷನಿಗೂ ಕಡಿಮೆಯಿಲ್ಲವೆಂಬುದನ್ನು ಸಾಬೀತು ಮಾಡುವ ಛಲ ಒಂದೆಡೆಯಾದರೆ, ತನ್ನ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಒಳ್ಳೆಯ ಪತ್ನಿ, ತಾಯಿ, ಸೊಸೆ ಎಂದು ಕರೆಸಿಕೊಳ್ಳುವ ಒತ್ತಡ ಇನ್ನೊಂದೆಡೆ. ‘ತೊಟ್ಟಿಲು ತೂಗುವ ಕೈ ದೇಶವನ್ನೂ ಆಳಬಲ್ಲದು’ ಎಂದು ಯಾರಾದರೂ ಹೇಳಿದರೆ ಮನಸ್ಸು ಸಂತೋಷದಿಂದ ಉಬ್ಬಿ ಅದನ್ನು ಸಾರ್ಥಕಗೊಳಿಸಲು ‘ವಿರಾಮ’ ಎಂಬ ಪದಕ್ಕೆ ತಿಲಾಂಜಲಿಯಿಟ್ಟು ಬಿಡುವಿಲ್ಲದೆ ದುಡಿಯುವುದು ಹೆಚ್ಚಿನ ಮಹಿಳೆಯರ ಅಭ್ಯಾಸ.
• ಸಾರ್ವಜನಿಕ ರಂಗದಲ್ಲಿ ದುಡಿಯುವ ಮಹಿಳೆಯರ ಕೌಟುಂಬಿಕ ಕರ್ತವ್ಯಗಳ ಬಗ್ಗೆ ಲವಲೇಶವೂ ಗೌರವ ಕೊಡದಿರುವುದು.
ಯಾವ ಮಹಿಳೆಯರಿಗೆ ವಿರಾಮ ಸಿಗುತ್ತದೆ? ವಿವಿಧ ವರ್ಗದ ಮಹಿಳೆಯರ ವಿರಾಮ ವಿವಿಧ ಸ್ವರೂಪದ್ದಾಗಿರುತ್ತದೆ. ನಮ್ಮ ದೇಶದಲ್ಲಿ ದುಡಿಮೆ ಮತ್ತು ವಿರಾಮ – ಎರಡೂ ಬೇರೆಯವರಿಂದ ನಿರ್ದೇಶಿತವಾದ ಮತ್ತು ನಿಯಂತ್ರಿತವಾದ ವಿಷಯಗಳು. ಕೆಲವು ಮಹಿಳೆಯರು ವಿರಾಮದ ಸಂದರ್ಭದಲ್ಲಿ ಕೈಗೊಳ್ಳುವ ಹವ್ಯಾಸಗಳು ಮತ್ತೆ ಕೆಲವರಿಗೆ ಅದೇ ಮುಖ್ಯ ವೃತ್ತಿಯಾಗಿಬಿಡಬಹುದು. ಆಗ ಅವರು ಅದರಿಂದ ವಿರಾಮವನ್ನು ನಿರೀಕ್ಷಿಸುವುದು ಹೇಗೆ?
ಏಕತಾನತೆಯ ದೈನಂದಿನ ನೀರಸ ಗೃಹಕೃತ್ಯದ ಜವಾಬ್ದಾರಿಯಿಂದ ಬಿಡುಗಡೆ ಬಯಸುವವರು ಅದು ಕೇವಲ ಆಧುನಿಕ ಮಹಿಳೆಯರ ಆರ್ತಾಲಾಪ ಎಂದೇನೂ ಭಾವಿಸಬೇಕಿಲ್ಲ. ಬುದ್ಧನ ಕಾಲದಿಂದಲೂ ಹೆಣ್ಣು ಇಂತಹ ಒಂದು ಬದಲಾವಣೆಗೆ, ಬಿಡುಗಡೆಗಾಗಿ ಹಂಬಲಿಸಿದ್ದಾಳೆ. ಆರನೇ ಶತಮಾನದ ಬೌದ್ಧರ ಗ್ರಂಥ ಥೇರಿಗಾಥಾದಲ್ಲಿ ಮುತ್ತಾ ಎನ್ನುವ ಒಬ್ಬ ಥೇರಿ ಬರೆದಿರುವ ಪದ್ಯದ ಸಾಲುಗಳು ಹೀಗಿವೆ:
ಆಹಾ, ಕಡೆಗೂ ನಾನು ಮುಕ್ತಳು, ಅದೆಷ್ಟು ಅದ್ಭುತ ಸ್ವಾತಂತ್ರ್ಯ!
ಮೂರು ವಕ್ರವಸ್ತುಗಳಿಂದ ನಾನು ಮುಕ್ತಳು:
ಬೀಸುವ ಕಲ್ಲು, ಒನಕೆ ಮತ್ತು ಗೂನು ಬೆನ್ನಿನ ಗಂಡ,
ಯಾವುದೂ ಈಗಿಲ್ಲ.
ಇನ್ನೊಬ್ಬಳು ಸುಮಂಗಲಾ ಮಾತಾ ಎನ್ನುವವಳು ಹೇಳುತ್ತಾಳೆ:
ಬಿಡುಗಡೆ ಹೊಂದಿದ ಮಹಿಳೆ ನಾನು! ಅದೆಷ್ಟು ಸ್ವಾತಂತ್ರ್ಯ,
ಆ ಅಡುಗೆಮನೆ ಚಾಕರಿಗೆ ಸಂಪೂರ್ಣ ವಿದಾಯ!
ಆ ಕುರುಕಲು ಕೊಳಕು ಮಡಕೆಗಳ ಮಸಿಯೆಲ್ಲಾ ನನ್ನ ಮೇಲೆ
ಅದಕ್ಕಿಂತಲೂ ಹೀನ ಆ ನನ್ನ ಕ್ರೂರಿ ಗಂಡ ಸದಾ
ನೆಳಲಲ್ಲಿ ಕೂತು ನೇದಿದ್ದೂ ನೇದಿದ್ದೆ;
ಹಿಂದಿನ ಕಾಮ-ದ್ವೇಷಗಳನ್ನು ತೊಳೆದುಹಾಕಿದ್ದೇನೆ
ನೆಳಲಲ್ಲಿ ಕೂತು ಶಾಂತವಾಗಿ ಚಿಂತಿಸುವೆ
ವಿಶಾಲ ಮರದ ಕೊಂಬೆಗಳ ಕುರಿತು. ಆದರೇನಂತೆ,
ಅದೇ ಎನಗೆ ಸಗ್ಗ ಸುಖ.
ಈ ಥೇರಿಗಳು ಬೌದ್ಧ ಸಂಘಗಳನ್ನು ಸೇರುವುದಕ್ಕೆ ಮುಂಚೆ ಸಾಮಾನ್ಯ ಗೃಹಿಣಿಯರಾಗಿದ್ದರು. ಹೀಗೆ ಒಂಭತ್ತನೇ ಶತಮಾನದಿಂದ ಇಲ್ಲಿಯವರೆಗೂ ಗೃಹಕೃತ್ಯದ ಚಾಕರಿಯನ್ನು ಅನಿವಾರ್ಯತೆಯಿಂದ ಮಾಡಿದ ಹೆಣ್ಣು ಮಕ್ಕಳೇ ಹೆಚ್ಚಿರಬಹುದು. ಈ ನಿಟ್ಟಿನಲ್ಲಿ ಇಂದು ಇಪ್ಪತ್ತೊಂದನೆಯ ಶತಮಾನದ ಸಂದರ್ಭದಲ್ಲೂ ಹೆಣ್ಣುಮಕ್ಕಳ ಸ್ಠಿತಿಗತಿಯಲ್ಲಿ ಹೆಚ್ಚಿನ ಬದಲಾವಣೆಯೇನೂ ಕಂಡುಬರುವುದಿಲ್ಲ. ಈ ವರ್ಷ ಕೋವಿಡ್-೧೯ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಈ ಅಂಶ ನಿಚ್ಚಳವಾಗಿ ಗೋಚರವಾಗುತ್ತದೆ. ಮೂರು-ನಾಲ್ಕು ತಿಂಗಳ ಕಾಲ ಲಾಕ್‌ಡೌನ್ ಘೋಷಣೆಯಾದಾಗ ಮಹಿಳೆಯರ ಕೆಲಸದ ಹೊರೆ ಎರಡು-ಮೂರು ಪಾಲಿನಷ್ಟು ಹೆಚ್ಚಾಯಿತು. ಶಾಲಾಕಾಲೇಜುಗಳಲ್ಲಿ, ಕಚೇರಿಗಳಲ್ಲಿ, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ಮನೆಯಲ್ಲಿಯೇ ಕೂತು ಆ ಕೆಲಸವನ್ನು ಮಾಡಬೇಕಾಯಿತು. ಕುಟುಂಬದ ಸದಸ್ಯರೆಲ್ಲರೂ ಮನೆಯಲ್ಲೇ ಇರುವಂತಹ ಕಟ್ಟುಪಾಡು ವಿಧಿಸಿದ್ದರಿಂದ ಅಡುಗೆ, ಮನೆಕೆಲಸ, ಮಕ್ಕಳ ಹಾಗೂ ವೃದ್ಧರ ಆರೈಕೆಯ ಜವಾಬ್ದಾರಿ ಸಹಜವಾಗಿಯೇ ಮಹಿಳೆಯರ ಮೇಲೆ ಬಿದ್ದಂತಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಲಾಕ್‌ಡೌನ್ ಕಾಲದಲ್ಲಿ ಪುರುಷರು ಮನೆಗೆಲಸ ಮಾಡಬೇಕಾದ ಬಗ್ಗೆ, ಅವರ ಹೆಂಡತಿಯರ ಸಮಾಧಾನಕ್ಕಾಗಿ ಹೊಸ ಉಪಕರಣಗಳನ್ನು ಖರೀದಿಸಿದ ಬಗ್ಗೆ ಹಲವಾರು ಲೇಖನಗಳು, ಅಪಹಾಸ್ಯ ಬರಹಗಳು ಹರಿದಾಡಿದ್ದನ್ನು ಎಲ್ಲರೂ ಓದಿದ್ದೇವೆ. ಇಂತಹ ಬರಹಗಳು ಜನರನ್ನು ಮನರಂಜಿಸಿದ್ದವಾದರೂ ಮಹಿಳೆಯರ ನಿಜವಾದ ಪರಿಸ್ಥಿತಿಯನ್ನು ಮರೆಮಾಚುವಲ್ಲಿ ಯಶಸ್ವಿಯಾದವು. ಲಾಕ್‌ಡೌನ್ ಸಮಯದಲ್ಲಿ ಮಹಿಳೆಯರ ಕೆಲಸದ ಹೊರೆಯಷ್ಟೇ ಹೆಚ್ಚಾಗಲಿಲ್ಲ. ಮನೆಯ ಹೊರಗೆ ಕಾಲಿಡಲಾಗದಿದ್ದ ಪರಿಸ್ಥಿತಿಯಲ್ಲಿ ಅವರಿಗೆ ವಿರಾಮವನ್ನು ಪಡೆಯುವ, ತಮ್ಮನ್ನು ಮನರಂಜಿಸಿಕೊಳ್ಳುವ ಅನೇಕ ಅವಕಾಶಗಳು ಕಮರಿಹೋದವು. ಹೋಟಲ್, ಚಿತ್ರಮಂದಿರ, ರಂಗಮಂದಿರ, ಉದ್ಯಾನವನ — ಹೀಗೆ ಮನರಂಜನೆ ಒದಗಿಸಬಹುದಾದ ಎಲ್ಲ ಸ್ಥಳಗಳಿಗೆ ಬೀಗ ಜಡಿದದ್ದರಿಂದ ತಮ್ಮ ವಿರಾಮದ ವೇಳೆಯನ್ನು ಮನೆಯ ಹೊರಗೆ ಕಳೆಯುವ ಅವಕಾಶದಿಂದ ಮಹಿಳೆಯರು ವಂಚಿತರಾದರು.
ಅಂದರೆ ವಿರಾಮಕ್ಕಾಗಿ ಕಾತರಿಸುವವರಿಗೂ ಒಂದು ಪರ್ಯಾಯ ವ್ಯವಸ್ಥೆ ಬೇಕಾಗುತ್ತದೆ. ನಮ್ಮ ಶ್ರೇಣೀಕೃತ ಲಿಂಗವ್ಯವಸ್ಥೆಯಲ್ಲಿ ನಿರ್ಧರಿತವಾಗಿರುವ ಸ್ತ್ರೀ-ಪುರುಷರ ನಡುವಿನ ಕೆಲಸದ ಹಂಚಿಕೆ ಮಹಿಳೆಗೆ ಬಿಡುವನ್ನು ನಿರಾಕರಿಸುತ್ತಿದೆ. ಕುಟುಂಬ ಅನ್ನುವ ಪರಿಕಲ್ಪನೆಯನ್ನು ಭಾವನಾತ್ಮಕ ನೆಲೆಯಲ್ಲಿ ನಿಲ್ಲಿಸಿ ಈ ರೀತಿ ಕೆಲಸದ ಹಂಚಿಕೆಯ ಬಗ್ಗೆ ಮಾತನಾಡುವುದು, ಹಕ್ಕು ಸ್ಥಾಪಿಸುವುದು, ವಶೀಲಿ ಮಾಡುವುದು ಕಷ್ಟಸಾಧ್ಯವಾಗುತ್ತದೆ. ಮಹಿಳೆಯ ದುಡಿಮೆ ಮತ್ತು ವಿರಾಮಕ್ಕಾಗಿ ಸಮಯವನ್ನು ಸಂರಚಿಸುವುದರಲ್ಲಿ ಲಿಂಗತ್ವದ (ಜೆಂಡರ್) ಪ್ರಭಾವವಿರುವುದನ್ನು ಅಲ್ಲಗಳೆಯಲಾಗದು. ಇದನ್ನು ಪರೀಕ್ಷಿಸಿದಾಗ ಹಲವಾರು ಸಂಗತಿಗಳು ಹೊರಬೀಳುತ್ತವೆ. ದುಡಿಮೆ ಮತ್ತು ವಿರಾಮಗಳೆರಡೂ ಸಮತೋಲನದಲ್ಲಿದ್ದರೆ ಮಾತ್ರ ಸಮಾಜದ ಮತ್ತು ಕುಟುಂಬದ ಸ್ವಾಸ್ಥ್ಯ ಸಾಧ್ಯ ಎಂಬ ಮಾತನ್ನು ಎಲ್ಲರೂ ಒಪ್ಪಲೇಬೇಕು.
ಅರಿಸ್ಟಾಟಲನು ಪುರುಷರಿರಲಿ, ಸ್ತ್ರೀಯರಿರಲಿ ಉತ್ತಮ ಜೀವನಕ್ಕೆ ಕೆಲಸ ಮತ್ತು ವಿರಾಮ ಎರಡೂ ಅಗತ್ಯ ಎಂದು ಪ್ರತಿಪಾದಿಸಿದ್ದ. ಸಂಸ್ಕೃತಿಯೊಂದರ ಪ್ರಗತಿಗೆ ಪೂರಕವಾಗುವಂತೆ ವ್ಯಕ್ತಿಯೊಬ್ಬ ತನ್ನ ರಾಜಕೀಯ ಕರ್ತವ್ಯಗಳನ್ನು ದಕ್ಷವಾಗಿ ಪರಿಪಾಲಿಸಲು ವಿರಾಮದ ಅಗತ್ಯವಿದೆ. ದುಡಿಮೆ ಹಾಗೂ ವ್ಯಕ್ತಿ ರಾಷ್ಟ್ರದ ಒಳಿತಿಗೆ ಅತ್ಯಗತ್ಯ. ಆದರೆ ಜೀವನವನ್ನು ಹಸನುಗೊಳಿಸಲು ವಿರಾಮ ಬೇಕು ಎಂದು ಅವನು ವಾದಿಸಿದ್ದ. ಅರಿಸ್ಟಾಟಲನ ಪ್ರಕಾರ ದುಡಿಮೆ ಹಾಗೂ ವಿರಾಮಗಳೆರಡೂ ಸಮತೋಲನದ ಸ್ಥಿತಿಯಲ್ಲಿದ್ದಾಗ ಸಮಾಜವು ಉತ್ಕೃಷ್ಟವಾದ ಸ್ಥಿತಿಯನ್ನು ತಲುಪಲು ಸಾಧ್ಯ.
ಲಿಂಗತ್ವ ಬೀರುವ ಪ್ರಭಾವ
ವಿರಾಮದ ಮೇಲೆ ಲಿಂಗತ್ವ ಬೀರುವ ಪ್ರಭಾವವನ್ನು ಗುರುತಿಸಿ, ಮಹಿಳೆಯರ ವಿರಾಮದ ಆಸಕ್ತಿಗಳು ಮನೆ ಮತ್ತು ಗೃಹಕೃತ್ಯದ ಸುತ್ತಲೇ ರೂಪುಗೊಂಡಿರುತ್ತವೆ ಎಂದು ಓಕ್ಲೆ ನಿರೂಪಿಸಿದ್ದಾನೆ. ಇದಕ್ಕೆ ವಿವಾಹ, ತಾಯ್ತನ, ಹೆಣ್ಣುಗಂಡಿನ ಸಂಬಂಧಗಳು ಸಮಾಜದಲ್ಲಿ ನೆಲೆಗೊಂಡಿರುವ ರೀತಿಯೇ ಕಾರಣ ಎಂದು ಅಭಿಪ್ರಾಯಪಡುತ್ತಾನೆ. ಲಿಂಗಾಧಾರಿತ ಸಮಾಜದ ನಿರೀಕ್ಷೆಗಳು ಮಹಿಳೆಯ ಜೀವನವನ್ನು ಹೆಚ್ಚು ಪ್ರಭಾವಿಸುತ್ತವೆ. ಪುರುಷರು ಹಾಗೂ ಮಹಿಳೆಯರು ತಮ್ಮ ವಿರಾಮದ ವೇಳೆಯನ್ನು ಹೇಗೆ ಕಳೆಯುತ್ತಾರೆಂಬುದನ್ನು ಗಮನಿಸಿದರೆ ಲಿಂಗಾಧಾರಿತ ವ್ಯತ್ಯಾಸವನ್ನು ಸಹಜವಾಗಿಯೇ ನಾವು ನಮ್ಮ ಮನೆಗಳಲ್ಲಿಯೇ ಗುರುತಿಸಬಹುದು. ಪುರುಷನೊಬ್ಬ ಸ್ನೇಹಿತರೊಡನೆ ವಿರಾಮದ ಸಮಯವನ್ನು ಕಳೆಯಲು ಸಾಹಸಪಡಬೇಕಿಲ್ಲ; ಸ್ವೇಚ್ಛೆಯಿಂದ ತನ್ನಿಷ್ಟದ ಹವ್ಯಾಸವನ್ನು ರೂಢಿಸಿಕೊಳ್ಳಬಹುದು. ಅವನು ಹೆಚ್ಚೇನು ಪ್ರಶ್ನೆಗಳನ್ನು ಎದುರಿಸಬೇಕಾದ ಸಂದರ್ಭವೂ ಉಂಟಾಗುವುದಿಲ್ಲ. ಅಂತೆಯೇ ವಿರಾಮವುಳ್ಳ ಮಹಿಳೆಯೊಬ್ಬಳು ಹವ್ಯಾಸವೊಂದನ್ನು ರೂಢಿಸಿಕೊಂಡರೆ ಅದು ಅವಳ ದೈನಂದಿನ ಕೆಲಸಗಳಿಗೆ, ಜವಾಬ್ದಾರಿಗಳಿಗೆ ಅಡ್ಡಿಯಾಗದಂತೆ ಇರುವ ಚಟುವಟಿಕೆಯಾಗಿರಬೇಕಾಗುತ್ತದೆ. ಚಾರಣ, ಛಾಯಾಗ್ರಹಣ, ಪಕ್ಷಿ ವೀಕ್ಷಣೆ, ಕ್ರೀಡೆ ಮುಂತಾದ ಚಟುವಟಿಕೆಗಳನ್ನು ಸಾಧಾರಣ ಮಹಿಳೆಯರು ಎಷ್ಟು ಸುಲಭವಾಗಿ ಹವ್ಯಾಸವಾಗಿ ಸ್ವೀಕರಿಸಲು ಸಾಧ್ಯ? ಮಹಿಳೆ ಮನೆಯ ಹೊರಗೆ ತನ್ನನ್ನು ತೊಡಗಿಸಿಕೊಳ್ಳಬೇಕಾದ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುವುದು ಅತ್ಯಂತ ಅಪರೂಪವಾದ ಸಂಗತಿ. ಮಹಿಳೆಯ ವಿರಾಮದ ವೇಳೆಯು ಹೆಚ್ಚಾಗಿ ಅವಳ ಮೊದಲನೆಯ ಆದ್ಯತೆ ಆಗಿರದೆ ಆಕೆಯ ಮನೆಯ ಕೆಲಸವೆಲ್ಲ ಮುಗಿದ ನಂತರ, ಹೆಚ್ಚಾಗಿ ಮನೆಯಲ್ಲೇ ಕೂತು ಭಾಗವಹಿಸಬಹುದಾದ್ದಂತಹ ಚಟುವಟಿಕೆಯಲ್ಲಿ ತೊಡಗುವುದು ಸರ್ವೇಸಾಮಾನ್ಯವಾದ ವಿಷಯ.

ಸ್ತ್ರೀವಾದಿ ನೆಲೆಯಲ್ಲಿ ಯಾವುದೇ ವಿಷಯವನ್ನು ಚರ್ಚಿಸುವುದಿದ್ದರೂ ‘ಇಂಟರ್ಸೆಕ್ಷನಲ್’ ದೃಷ್ಟಿಕೋನದಿಂದ ಅದನ್ನು ಪರೀಕ್ಷಿಸದಿದ್ದರೆ ಆ ಚರ್ಚೆ ಅಪೂರ್ಣವಾಗಿಯೇ ಉಳಿದುಬಿಡುತ್ತದೆ. ವಿರಾಮ ಕುರಿತಾದ ಚರ್ಚೆಗೆ ಈ ದೃಷ್ಟಿಕೋನವನ್ನು ಅಳವಡಿಸಿ ನೋಡಿದರೆ ದುಡಿಮೆ-ವಿರಾಮದ ಚರ್ಚೆಯಲ್ಲಿ ಮಹಿಳೆಯ ಮೇಲೆ ಲಿಂಗತ್ವವೊಂದೇ ಅಲ್ಲದೆ ವರ್ಗ ಹಾಗೂ ಜಾತಿಯ ಪ್ರಭಾವವನ್ನೂ ಪರಿಗಣಿಸಲೇಬೇಕಾದ ಅಗತ್ಯವಿದೆ. ದುಡಿಮೆ-ವಿರಾಮ ಈ ಎರಡೂ ವಿಷಯಗಳನ್ನು ವರ್ಗ ಸಂಘರ್ಷದ ಹಿನ್ನಲೆಯಲ್ಲಿ ನೋಡುವುದು ಅನಿವಾರ್ಯವಾಗುತ್ತದೆ. ವಿರಾಮ ಎನ್ನುವುದರ ಕಲ್ಪನೆಯೇ ಹುಟ್ಟಿಕೊಂಡದ್ದು ಕೈಗಾರಿಕೀಕರಣದ ಸಂದರ್ಭದಲ್ಲಿ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಯೂರೋಪ್‌ನಲ್ಲಿ ಕೈಗಾರಿಕಾ ಕ್ರಾಂತಿಯ ನಂತರ ದುಡಿಮೆಯ ಸ್ವರೂಪವೇ ಬದಲಾಯಿತು. ವಾರದಲ್ಲಿ ಐದು ಅಥವಾ ಆರು ದಿನಗಳ ಕಾಲ ದುಡಿದ ಕಾರ್ಮಿಕರಿಗೆ ವಾರಾಂತ್ಯದಲ್ಲಿ ವಿರಾಮವನ್ನು ಕೊಡುವ ಪದ್ಧತಿ ಹುಟ್ಟಿತೆಂದು ಗುರುತಿಸಲಾಗಿದೆ. ಕೈಗಾರಿಕೀಕರಣದ ಯುಗಕ್ಕೂ ಮುನ್ನ ವಾರವಿಡೀ ಬೇಸಾಯದಲ್ಲೋ ಅಥವಾ ತಮ್ಮ ಇತರೆ ವೃತ್ತಿಯಲ್ಲೋ ಮಗ್ನರಾಗಿರುತ್ತಿದ್ದ ಜನರಿಗೆ ಕಾರ್ಖಾನೆಗಳ ಉದ್ಭವದ ನಂತರ ವಾರದ ಕೊನೆಯಲ್ಲಿ ಸ್ವಲ್ಪ ವಿರಾಮ ನೀಡುವ ಪದ್ಧತಿ ಕ್ರಮೇಣ ಬೆಳೆದು ಬಂದಿದೆ. ಯಾವುದೇ ರೀತಿಯಲ್ಲಿ ತೊಡಗದ ಒಂದು ‘ವಿರಾಮ ವರ್ಗ’ವೂ ಈ ಕಾಲದಲ್ಲಿ ಇತ್ತೆಂಬುದನ್ನು ನಾವು ಗಮನಿಸಿದ್ದೇವೆ. ಅದು ಚರಿತ್ರೆಯಲ್ಲಿ ಅಧಿಕಾರದ ರುಚಿ ಕಂಡ ನಮ್ಮ ರಾಜ ಮಹಾರಾಜರ ‘ಐಷಾರಾಮಿ ವರ್ಗ’ದಂತೆ.
ಇಂದಿನ ಕಾರ್ಪೊರೇಟ್ ಯುಗದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಉದ್ಯೋಗಿಗಳ ವಿರಾಮದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿವೆ. ಕಚೇರಿಯಲ್ಲಿ ವಿಧವಿಧವಾದ ಮನರಂಜನೆಗೆ ಅವಕಾಶ ಮಾಡಿಕೊಡುವುದಲ್ಲದೆ ಉದ್ಯೋಗಿಗಳೆಲ್ಲರನ್ನೂ ಒಟ್ಟುಗೂಡಿಸಿ ‘ಟೀಮ್ ಔಟಿಂಗ್’ ಎಂದು ಪ್ರವಾಸಕ್ಕೋ ಇಲ್ಲವೆ ರೆಸಾರ್ಟ್ ಗಳಿಗೋ ಕರೆದುಕೊಂಡು ಹೋಗುವುದು ಈ ದಿನಗಳಲ್ಲಿ ವಾಡಿಕೆ. ಅಂತಹ ಪ್ರವಾಸಕ್ಕೆ ಕರೆ ಬಂದಾಗ ಮಾತ್ರ ಪ್ರಿಯದರ್ಶಿನಿಗೆ ಮನಸ್ಸಿನಲ್ಲಿ ಬಹಳ ಗೊಂದಲ. ಮನೆ ಮತ್ತು ಕಚೇರಿಯ ನಾಲ್ಕು ಗೋಡೆಗಳನ್ನು ದಾಟಿ ಹೊಸದೊಂದು ಜಾಗಕ್ಕೆ ಹೋಗುವ, ರೆಸಾರ್ಟ್ ಒಂದರಲ್ಲಿ ತಂಗುವ ಅವಕಾಶ ಮೊದಲು ಉತ್ಸಾಹದಾಯಕವಾಗಿ ಕಂಡರೂ ಕೊನೆಗೆ ಇಂತಹ ಮನರಂಜನಾ ಚಟುವಟಿಕೆಯಿಂದ ಅವಳಿಗೆ ಹೆಚ್ಚಿನ ತೊಂದರೆಯೇ. ವಾರದಲ್ಲಿ ಐದು ದಿನಗಳ ಕಾಲ ಚಾಕರಿ ಮಾಡಿ, ವಾರಾಂತ್ಯದಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ವಿಶ್ರಮಿಸಬಹುದೆಂದು ಎಣಿಸಿದ್ದ ಪ್ರಿಯದರ್ಶಿನಿಗೆ ಈ ಟೀಮ್ ಔಟಿಂಗ್‌ನಿಂದಾಗಿ ಇದ್ದ ವಿರಾಮವನ್ನೂ ಆಸ್ವಾದಿಸದಂತಾಗುತ್ತದೆ. ಟೀಮ್ ಔಟಿಂಗ್ ಎಂದ ಮೇಲೆ ಅದನ್ನು ತಪ್ಪಿಸಿಕೊಂಡರೆ ಎಚ್.ಆರ್. ಮ್ಯಾನೇಜರ್‌ನ ಕೆಂಗಣ್ಣಿಗೆ ಗುರಿಯಾಗಬಹುದೆಂಬ ಭಯ ಒಂದೆಡೆ. ಇನ್ನೊಂದೆಡೆ ಪ್ರವಾಸಕ್ಕೆ ಹೋಗುವ ಮುನ್ನ ಮನೆಯ ಕೆಲಸ ಮುಗಿಸಿ, ಅಡುಗೆ ಮಾಡಿಟ್ಟು, ವಾರಾಂತ್ಯದಲ್ಲೂ ಅಮ್ಮನಿಗೆ ಬಿಡುವಿಲ್ಲವೆಂದು ಸಿಟ್ಟಾಗುವ ಮಕ್ಕಳನ್ನು ಪುಸಲಾಯಿಸಿ ಅವರನ್ನು ಅಜ್ಜಿ ಮನೆಯಲ್ಲಿ ಬಿಟ್ಟು ನಂತರ ಕಚೇರಿಗೆ ಓಡುವ ಸಾಹಸ. ಆ ಪ್ರವಾಸದ ಮಧ್ಯೆಯೂ ಅನುದಿನದ ಕೆಲಸದ ಬಗ್ಗೆಯೇ ಮಾತುಕತೆ, ದಿನನಿತ್ಯ ಭೇಟಿಯಾಗುವ ಸಹೋದ್ಯೋಗಿಗಳೊಡನೆ ಪುನಃ ಒಡನಾಟ. ಮಾರನೆಯ ದಿನ ಎಂದಿನಂತೆ ಕಚೇರಿಯ ಕೆಲಸಕ್ಕೆ ಹಾಜರಾಗಬೇಕು. ಇನ್ನು ದೈನಂದಿನ ಕೆಲಸದೊತ್ತಡದಿಂದ ವಿರಾಮವೆಲ್ಲಿ ಬಂತು? ಬಲವಂತದ ಚಟುವಟಿಕೆಗಳು ವಿರಾಮಕ್ಕಿಂತ ಹೆಚ್ಚಿನ ಆಯಾಸ ತರುತ್ತವೆಯೆಂಬುದು ಪ್ರಿಯದರ್ಶಿನಿಗೆ ಮನದಟ್ಟಾಗಿದೆ. ಕಾರ್ಪೊರೇಟ್ ಕಂಪನಿಗಳು ‘ವಿರಾಮ’ದ ಹೆಸರಿನಲ್ಲಿ ನಡೆಸುವ ಇಂತಹ ಚಟುವಟಿಕೆಗಳ ಮೂಲಕ ಅವರ ಸಿಬ್ಬಂದಿಗಳ ‘ವಿರಾಮ’ದ ವೇಳೆಯನ್ನು ನಿಯಂತ್ರಿಸುತ್ತವೆ.
ಬಟ್ಟೆಯಂಗಡಿಯೊಂದರಲ್ಲಿ ಕೆಲಸ ಮಾಡುವ ಶಾರದಾಳಿಗೆ ವಿರಾಮ ಸಿಗುವುದು ಮನೆಯಿಂದ ಕೆಲಸಕ್ಕೆಂದು ಪ್ರಯಾಣಿಸುವಾಗ ಮಾತ್ರ. ಮನೆಯಲ್ಲಿ ಗಂಡ, ಅತ್ತೆಯ ಜೊತೆ ಸದಾ ಜಗಳ, ಕೆಲಸಕ್ಕೆಂದು ಅಂಗಡಿಗೆ ಹೋದರೆ ಊಟ ಮಾಡಲು, ಶೌಚಾಲಯಕ್ಕೆ ಹೋಗಲು ಕೂಡ ಪುರುಸೊತ್ತಿಲ್ಲದಷ್ಟು ಕೆಲಸ. ದಿನವಿಡೀ ಬರುವ ಗ್ರಾಹಕರಿಗೆ ಸಹಾಯ ಮಾಡುತ್ತ, ಅವರ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ಪುರುಸೊತ್ತೇ ಇರುವುದಿಲ್ಲ. ಕೆಲಸಕ್ಕೆ ಬರುವಾಗ ಮತ್ತು ಮನೆಗೆ ಹಿಂದಿರುಗುವಾಗ ಮಾತ್ರ ಬಸ್ಸಿನಲ್ಲಿ ಸ್ವಲ್ಪ ಬಿಡುವು ಸಿಗುವ ಸಾಧ್ಯತೆ ಅವಳಿಗೆ. ಅದೂ ಮನೆಯವರೆಗೂ ಹೋಗುವ ಬಸ್ ಸಿಕ್ಕಿ, ಕೂರಲು ಸ್ಥಳವಿದ್ದರೆ ಮಾತ್ರ ಶಾರದಾಗೆ ಮನೆ ಬರುವವರೆಗೆ ಕಣ್ಣುಮುಚ್ಚಿ, ತನ್ನ ಮನಸ್ಸಿನ ಯೋಚನಾ ಲಹರಿಯಲ್ಲಿ ಕಳೆದುಹೋಗುವ ಭಾಗ್ಯ ಸಿಗುವಂಥಾಗುವುದು.
ಐವತ್ತು ವರ್ಷದ ಬೀರಮ್ಮ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಾಳೆ. ನಿಲ್ದಾಣದ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ರಾತ್ರಿ ಪಾಳಿಯ ಕೆಲಸ ಅವಳದ್ದು. ಮನೆಯಲ್ಲಿ ಎರಡು ತಿಂಗಳ ಬಾಣಂತಿಯಾದ ತನ್ನ ಮಗಳ, ಮೊಮ್ಮಗಳ ಆರೈಕೆಯ ಜವಾಬ್ದಾರಿಯನ್ನೂ ಹೊತ್ತವಳು. ರಾತ್ರಿಯಿಡೀ ಕೆಲಸ ಮಾಡುವ ಅವಳು ಕಣ್ಣಿಗೆ ಮಂಪರು ಹತ್ತಿ ತೂಕಡಿಸುತ್ತ ತನ್ನ ಮೇಲ್ವಿಚಾರಕಿಯ ಹತ್ತಿರ ಬೈಗುಳ ತಿಂದದ್ದು ಅನೇಕ ಬಾರಿ. ಕೆಲವೊಮ್ಮೆ ಮೇಲ್ವಿಚಾರಕಿಗೆ ದೂರು ಕೊಡಬೇಡಿರೆಂದು ಪ್ರಯಾಣಿಕರಲ್ಲಿ ಅಂಗಲಾಚಿದ್ದೂ ಇದೆ. ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ ನಂತರ ಮತ್ತಷ್ಟು ಕೆಲಸದ ರಾಶಿ ಅವಳ ದಾರಿ ಕಾಯುತ್ತಾ ಕುಳಿತಿರುತ್ತದೆ. ಅಡುಗೆ, ಕಸ, ಮುಸುರೆ, ಒಗೆಯಬೇಕಾದ ಮಗು-ಬಾಣಂತಿಯ ಬಟ್ಟೆಗಳ ರಾಶಿ … ಹೀಗೆ ವಿರಾಮದ ಕನಸನ್ನು ಕಾಣಲೂ ಪುರುಸೊತ್ತಿಲ್ಲ ಬೀರಮ್ಮನಿಗೆ.
ಇಲ್ಲಿ ವಿವಿಧ ವೃತ್ತಿಗಳ ಮಹಿಳೆಯರ ಉದಾಹರಣೆಯನ್ನು ಗಮನಿಸಿದಾಗ ಗೋಚರಿಸುವುದು ಒಂದು ಮುಖ್ಯ ಅಂಶ. ಅವರ ದುಡಿಮೆ ಮತ್ತು ವಿರಾಮದ ಪರಿಕಲ್ಪನೆ ಮತ್ತು ವ್ಯಾಖ್ಯಾನಗಳು ಅವರು ಸಮಾಜದ ಯಾವ ವರ್ಗಕ್ಕೆ ಸೇರುತ್ತಾರೆ ಎಂಬುದರ ಮೇಲೆಯೂ ಅವಲಂಬಿತವಾಗಿವೆ. ಆರ್ಥಿಕವಾಗಿ ಬಲಾಢ್ಯವಾದ ವರ್ಗಕ್ಕೆ ಸೇರಿದ ಮಹಿಳೆಯರಿಗೆ ವಿರಾಮವನ್ನು ಆಸ್ವಾದಿಸುವ ಅವಕಾಶಗಳು ಹೆಚ್ಚು. ಈಗಾಗಲೇ ಪ್ರಸ್ತಾಪಿಸಿರುವ ವಿರಾಮ ವರ್ಗಕ್ಕೆ ಸೇರಿದ ಮಹಿಳೆಯರನ್ನು ಈ ಗುಂಪಿಗೆ ಸೇರಿಸಬಹುದು. ಅವರಿಗೆ ಹೋಲಿಸಿದಲ್ಲಿ ಮೇಲ್ ಮಧ್ಯಮವರ್ಗಕ್ಕೆ ಸೇರಿದ ಮಹಿಳೆಯರು ದುಡಿಮೆಯಲ್ಲಿ ನಿರತರಾದರೂ ಅವರಿಗೆ ಮನೆಕೆಲಸಕ್ಕೆ ಸಹಾಯಕರಿರುತ್ತಾರೆ. ಇಲ್ಲವೆ ಹಲವಾರು ಉಪಕರಣಗಳ ಸಹಾಯದಿಂದ ಅವರು ತಮ್ಮ ಕೆಲಸದ ಹೊರೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿಕೊಳ್ಳುವ ಅವಕಾಶವಿರುತ್ತದೆ. ತಮಗಿಂತ ಶ್ರೀಮಂತರಾದವರ ಮನೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಇಂತಹ ಸೌಲಭ್ಯಗಳಿರುವುದಿಲ್ಲ. ಹೊಟ್ಟೆಪಾಡಿಗಾಗಿ ಬೇರೆಯವರ ಮನೆಗಳಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇರುವ ಅವರುಗಳಿಗೆ ಮನೆಗೆ ಹಿಂದಿರುಗಿ ವಿಶ್ರಾಂತಿ ಪಡೆಯುವ ಸ್ವಾತಂತ್ರ್ಯ ಇಲ್ಲದ ಕಾರಣ ವಿರಾಮವೆನ್ನುವುದು ಅವರಿಗೆ ದೂರದ ಕನಸಾಗಿಯೇ ಉಳಿದುಬಿಡುತ್ತದೆ.
ಭಾರತದಲ್ಲಿ ಉದ್ಯೋಗನಿರತ ಮಹಿಳೆಯರಲ್ಲಿ ಹೆಚ್ಚಿನವರು ಅಸಂಘಟಿತ ಕಾರ್ಮಿಕರು. ಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ವಾರಾಂತ್ಯದಲ್ಲಿ ರಜೆಯಂತಹ ಸೌಲಭ್ಯಗಳು ಇರುತ್ತವೆ. ವಿರಾಮ ಸೀಮಿತವಾದರೂ ಅದನ್ನು ಪಡೆಯುವ ಅವಕಾಶಗಳಾದರೂ ಇರುತ್ತವೆ. ಆದರೆ ಕೂಲಿ ಕೆಲಸ, ಬೇಸಾಯ, ಮನೆಗೆಲಸ, ಪೌರಕಾರ್ಮಿಕ ಕೆಲಸ ಮಾಡುವಂತಹ ಕೋಟ್ಯಾಂತರ ಮಹಿಳೆಯರು ಇಂತಹ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಜಾತಿಯ ಆಯಾಮ
ಭಾರತೀಯ ಸಂದರ್ಭದಲ್ಲಿ ದುಡಿಮೆ-ವಿರಾಮದ ಅಧ್ಯಯನ ಜಾತಿಯ ಆಯಾಮವನ್ನು ಒಳಗೊಳ್ಳದಿದ್ದರೆ ಆ ಚರ್ಚೆ ಅಪೂರ್ಣವಾದಂತೆಯೇ. ಭಾರತೀಯ ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ಬಹಳ ಆಳವಾಗಿ ಬೇರೂರಿರುವ ಜಾತಿ ಪದ್ಧತಿಯು ಜನರ ಅಸ್ತಿತ್ವದ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತದೆ. ನಮ್ಮ ಸಮಾಜದಲ್ಲಿ ಜಾತಿ ಮತ್ತು ವರ್ಗಗಳ ಅಧ್ಯಯನವನ್ನು ಬೇರ್ಪಡಿಸಿ ನೋಡಲು ಸಾಧ್ಯವೇ ಇಲ್ಲ. ಮೇಲ್ಜಾತಿಯ ಹೆಣ್ಣುಮಕ್ಕಳು ಹೆಚ್ಚಾಗಿ ಅವರ ಮನೆಗಳಲ್ಲಿ ಹಾಗೂ ಕಚೇರಿಗಳಲ್ಲಿ ದುಡಿಯುತ್ತಾರೆ. ಆದರೆ ಹಿಂದುಳಿದ ವರ್ಗಗಳ ಹಾಗೂ ದಲಿತ ಹೆಣ್ಣುಮಕ್ಕಳ ಜೀವನಶೈಲಿಯೇ ಭಿನ್ನವಾದದ್ದು. ಅವರಲ್ಲಿ ಶಿಕ್ಷಿತರಾದ, ಆರ್ಥಿಕವಾಗಿ ಸಬಲರಾದವರ ಸಂಖ್ಯೆ ಹೆಚ್ಚೇನೂ ಇಲ್ಲ. ಮನೆಯ ಕೆಲಸದ ಹೊರೆಯನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊರುವುದಲ್ಲದೆ ಅವರಲ್ಲಿ ಹೆಚ್ಚಿನವರು ಅತ್ಯಂತ ಕಠಿಣವಾದ, ಬೇರಾರಿಗೂ ಬೇಡದ ಅಸ್ಪೃಶ್ಯ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಇದೆ. ರಸ್ತೆ, ಚರಂಡಿ ಶುಚಿ ಮಾಡುವ ಪೌರಕಾರ್ಮಿಕ ಮಹಿಳೆಯರು ತಮ್ಮ ದುಡಿಮೆಯಾಚೆ ವಿರಾಮ ದಕ್ಕಿಸಿಕೊಳ್ಳಲು ಪ್ರಯತ್ನಿಸಿದಾಗ ಎದುರಾಗುವ ಸಾಮಾಜಿಕ ಅಡೆತಡೆಗಳು ಹಲವಾರು.
ಹಾಗಾದರೆ ಮಹಿಳೆಗೆ ವಿರಾಮ ಕಲ್ಪಿಸುವ ಕಾರ್ಯಯೋಜನೆ ಎಲ್ಲಿಂದ ಆರಂಭವಾಗಬೇಕು?
‘ಗೃಹಿಣಿ ಗೃಹಮುಚ್ಯತೆ’ ಎಂಬ ಪರಿಕಲ್ಪನೆಯನ್ನು ಒಡೆದು ದುಡಿಮೆಗಾಗಿ ಮಹಿಳೆ ಮನೆಯ ಹೊಸ್ತಿಲನ್ನು ದಾಟಿ ಹೊರಗೆ ಬಂದಿದ್ದಾಳೆ. ದುಡಿಮೆಯೇ ಅವಳ ವಿಮೋಚನೆಯ ಮಾರ್ಗವಾದರೂ ಕೆಲವೊಮ್ಮೆ ಅದರಿಂದಲೂ ಅವಳಿಗೆ ವಿರಾಮ/ ಬದಲಾವಣೆ ಬೇಡವೇ?
ತಾಂತ್ರಿಕ ಪ್ರಗತಿ ಮತ್ತು ಪರಿಣಿತಿಯು ಹೆಣ್ಣಿಗೆ ಬಿಡುವನ್ನು ದೊರಕಿಸುವ ಮಾರ್ಗಗಳಾಗಬಹುದು. ತಂತ್ರಜ್ಞಾನದ ವಿವಿಧ ಸಂಶೋಧನೆಗಳು ಹೆಣ್ಣಿನ ಶ್ರಮವನ್ನು ಕಡಿಮೆ ಮಾಡಿವೆ. ಸೌದೆ ಒಲೆ, ಇಜ್ಜಲು ಮತ್ತು ಸೀಮೆ ಎಣ್ಣೆ ಒಲೆಗಳ ಜಾಗವನ್ನು ಗ್ಯಾಸ್ ಮತ್ತು ಎಲೆಕ್ಟ್ರಿಕ್ ಒಲೆಗಳು, ಮೈಕ್ರೊವೇವ್ ಒವನ್ ಮುಂತಾದ ಪರಿಕರಗಳು ಆಕ್ರಮಿಸಿವೆ. ಈ ಬದಲಾದ ಜೀವನಶೈಲಿಯಿಂದ ಹೆಂಗಸರ ಜೀವನಮಟ್ಟ ಸುಧಾರಿತವಾಗಿರುವುದಲ್ಲದೆ, ಅದು ಹೆಂಗಸರಿಗೆ ಕೊಟ್ಟಿರುವ ವಿರಾಮ ಊಹೆಗೂ ಮೀರಿದ್ದು. ಹಿಂದೆ ನಾವು ಪಾತ್ರೆಯಲ್ಲಿ ಅನ್ನವನ್ನು ನೇರವಾಗಿ ಬೇಯಿಸುವಾಗ, ಅದು ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಕೆಲವೊಮ್ಮೆ ಅನ್ನ ಸೀದು ಕರಕಲಾಗುತ್ತಿತ್ತು. ಈಗ ಅದಕ್ಕೆ ಪರಿಹಾರವಾಗಿ ಪ್ರೆಶರ್‌ಕುಕ್ಕರ್, ರೈಸ್‌ಕುಕ್ಕರ್ ಎಲ್ಲವೂ ಬಂದಿವೆ. ಮಿಕ್ಸಿಯ ಆವಿಷ್ಕಾರವಂತೂ ಮಹಿಳೆಯ ಶ್ರಮವನ್ನು ಕಡಿಮೆ ಮಾಡಿದೆ. ಆ ವಿರಾಮವನ್ನು ಅವಳು ಸದ್ಬಳಕೆ ಮಾಡಿಕೊಳ್ಳಬಹುದು. ಅಂದರೆ ಮಹಿಳೆಯರಿಗೆ ವಿರಾಮ ಕಲ್ಪಿಸುವ ದಿಕ್ಕಿನಲ್ಲಿ ಹೆಚ್ಚು ತಾಂತ್ರಿಕ ಪ್ರಗತಿಯಾಗಬೇಕು.
ಕೆಳಸ್ತರದ ಮಹಿಳೆಯರೂ ಸಹ ಅವರ ಬಡತನದ ಕಾರಣದಿಂದಾಗಿ ಗೃಹಕೃತ್ಯದ ಕೆಲಸವನ್ನು ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಉದಾಹರಣೆಗೆ ಉರುವಲಿಗೆಂದು ಸೌದೆ ತರಲು, ಅವರ ಸಾಕುಪ್ರಾಣಿಗಳಿಗೆ ಆಹಾರಕ್ಕೆಂದು ಸೊಪ್ಪು ತರಲು ಕಾಡುಗಳಿಗೆ ಹೋಗಿ ಬರಲು ನಾಲ್ಕೈದು ಘಂಟೆಗಳಾದರೂ ಕಳೆಯುತ್ತಾರೆ. ಈಗಲೂ ಕೆಲವು ಹಳ್ಳಿಗಳಲ್ಲಿ ನೀರು ತರಲು ಹೆಂಗಸರು ಗಂಟೆಗಟ್ಟಲೆ ಸಾಲಾಗಿ ನಿಲ್ಲುತ್ತಾರೆ ಮತ್ತು ಮೈಲಿಗಟ್ಟಲೆ ನಡೆಯುತ್ತಾರೆ. ಇಂತಹ ಸ್ಥಿತಿಯನ್ನು ಹೋಗಲಾಡಿಸಲು ಸರ್ಕಾರವು ಮಹಿಳೆಯರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಲ್ಯಾಣಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದಲ್ಲಿ ಆ ಸಮುದಾಯದ ಮಹಿಳೆಯರಿಗೂ ಸ್ವಲ್ಪ ವಿರಾಮ ಸಿಕ್ಕಂತಾಗುತ್ತದೆ.
ಇದು ಕೇವಲ ಸರ್ಕಾರದಿಂದ ಸಾಧ್ಯವಾಗುವ ಮಾತಲ್ಲ. ಸ್ತ್ರೀ-ಪುರುಷರಿಬ್ಬರೂ ಮನೆಗೆಲಸವನ್ನು ಸಮಸಮವಾಗಿ ಹಂಚಿಕೊಂಡು ಮಾಡಬಲ್ಲ ಮನಸ್ಥಿತಿಯನ್ನು ಹುಟ್ಟುಹಾಕಲು ಪ್ರಯತ್ನಿಸಬೇಕು. ಇದಕ್ಕೆ ತಕ್ಕ ವಾತಾವರಣ ನಿರ್ಮಾಣ ಇವತ್ತು ಜರೂರಾಗಿ ಆಗಬೇಕಿದೆ. ಶತಮಾನಗಳಿಂದಲೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಗೃಹ ಚಾಕರಿಗೆ ತನ್ನನ್ನು ಒಗ್ಗಿಸಿಕೊಳ್ಳದ ಪುರುಷ ಸಮುದಾಯವನ್ನು ಈ ದಿಕ್ಕಿನತ್ತ ಪರಿವರ್ತಿಸುವ ಕೆಲಸವನ್ನು ಕುಟುಂಬ ಮತ್ತು ಸಮಾಜ ಎರಡೂ ಮಾಡಬೇಕು.
ಸ್ತ್ರೀವಾದಿಗಳು ವಿರಾಮದ ಮನೋ-ಸಾಮಾಜಿಕ ವ್ಯಾಖ್ಯಾನಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಗಂಡು-ಹೆಣ್ಣಿನ ನಡುವೆ ವಿರಾಮದಲ್ಲಿ ಇರುವ ವ್ಯತ್ಯಾಸ ಜೈವಿಕವಲ್ಲ, ಬದಲಾಗಿ ಸನ್ನಿವೇಶಬದ್ಧವಾದದ್ದು. ಲಿಂಗತ್ವ ಸಿದ್ಧಾಂತದ ಬುನಾದಿಯ ಮೇಲೆ ಮಹಿಳೆ ಮತ್ತು ಪುರುಷರ ವಿರಾಮ ಜೀವನವನ್ನು ಹೆಚ್ಚು ಸರಿಯಾಗಿ ಅರ್ಥಮಾಡಿಕೊಳ್ಳಬಹುದು; ಮಹಿಳೆ ಹೆಚ್ಚುಹೆಚ್ಚು ಪಾತ್ರಗಳನ್ನು ನಿರ್ವಹಿಸಿದಷ್ಟೂ ಅವಳ ವಿರಾಮದ ವೇಳೆ ಕಡಿಮೆಯಾಗುತ್ತದೆ. ವಿರಾಮವನ್ನು ಮಹಿಳೆ ತನ್ನ ಸ್ವಹಿತಕ್ಕೆ ಬಳಸಿಕೊಳ್ಳುತ್ತಾಳೋ ಇಲ್ಲವೆ ಬೇರೆಯವರ ಉಪಯೋಗಕ್ಕಾಗಿ ಮುಡಿಪಾಗಿಡುತ್ತಾಳೋ ಎಂಬುದನ್ನು ಪರಿಶೀಲಿಸಿದಾಗ ಮಹಿಳೆಗೆ ವಿರಾಮದ ವಿಭಿನ್ನ ಅರ್ಥಗಳು ಗೋಚರಿಸುತ್ತವೆ.
ಇಂದಿನ ದಿನಗಳಲ್ಲಿ ನಿಜವಾದ ವಿರಾಮದ ಪರಿಕಲ್ಪನೆ ಮತ್ತು ಅದಕ್ಕಿರುವ ಲಿಂಗತ್ವದ ಆಯಾಮಗಳನ್ನು ಕುರಿತ ಚಿಂತನೆಗಳು ನಡೆದಿವೆ. ಇದರ ಪರಿಣಾಮವಾಗಿ ಮಹಿಳೆಗೆ ಇಂದಿನ ಸಮಾಜದಲ್ಲಿ ಒಂದಿಷ್ಟು ‘ಪುರುಸೊತ್ತು’ ಸಿಕ್ಕಬಹುದಾದರೂ ವಿಶ್ರಾಂತಿಯಂತೂ ಸಿಕ್ಕುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಮಹಿಳೆಯ ಸಮಯವಾಗಲಿ, ದುಡಿಮೆಯಾಗಲಿ, ವಿರಾಮವಾಗಲಿ ಅವಳ ನಿಯಂತ್ರಣದಲ್ಲಿಲ್ಲ ಎಂಬ ಕಟು ಸತ್ಯದ ಅರಿವಾಗಿದೆ. ಈ ಹಿನ್ನೆಲೆಯಲ್ಲಿ ವಿರಾಮದ ನಿಜವಾದ ಅರ್ಥವನ್ನು ಮಹಿಳೆಯರಿಗೆ ಮನದಟ್ಟು ಮಾಡಿಕೊಡಬೇಕಾಗಿದೆ. ದೈಹಿಕ, ಮಾನಸಿಕ ಆರೋಗ್ಯಗಳೆರಡಕ್ಕೂ ಅತ್ಯಗತ್ಯವಾದ ವಿರಾಮದಿಂದ ಮಹಿಳೆ ವಂಚಿತಳಾಗಬಾರದು. ಮಹಿಳೆ ಸ್ವಂತಿಕೆಯನ್ನು ರೂಪಿಸಿಕೊಳ್ಳಲು ವಿರಾಮ ಉತ್ತಮ ಸಾಧನ. ವಿರಾಮವನ್ನು ಯಾವುದೇ ಅಳುಕಿಲ್ಲದೆ, ತಪ್ಪಿತಸ್ಥ ಭಾವನೆಯಿಲ್ಲದೆ ಅನುಭವಿಸುವ ಹಕ್ಕು ಮಹಿಳೆಯರದಾಗಬೇಕು. ಅವಳಿಗೆ ಅವಳದೇ ಆದ ವೈಯಕ್ತಿಕ ಸಮಯ ಇರಬೇಕು. ಅದು ದೊರಕದಿದ್ದಲ್ಲಿ ಬಲವಂತವಾಗಿಯಾದರೂ ಅದನ್ನು ದಕ್ಕಿಸಿಕೊಳ್ಳಬೇಕೆನ್ನುವ ಛಲ, ಮನೋಭಾವ ಮಹಿಳೆಯರಲ್ಲಿ ಬೆಳೆಯಬೇಕು.
ವಿರಾಮದ ಪರಿಕಲ್ಪನೆಯನ್ನು ದುಡಿಮೆಯಿಂದ ಬೇರ್ಪಡಿಸಲು ಅಸಾಧ್ಯ. ದುಡಿಯುವ ಕೈಗಳು ಎಲ್ಲಿವೆಯೋ ಅಲ್ಲಿ ಸಹಜವಾಗಿಯೇ ವಿರಾಮಕ್ಕೂ ಅವಕಾಶವಿರಬೇಕು. ಈ ಸತ್ಯವನ್ನು ಸಮಾಜ ಅಳವಡಿಸಿಕೊಂಡಾಗ ಮಾತ್ರ ಮಹಿಳೆ ಸಮಾಜದ ಲಿಂಗಾಧಾರಿತ ನಿರೀಕ್ಷೆಗಳಿಂದ ಮುಕ್ತಳಾಗಿ ನಿಜವಾದ ವಿರಾಮದ ಹಕ್ಕುದಾರಳಾಗಬಲ್ಲಳು.
(ಈ ಲೇಖನವು ’ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಎಂಬ ಸಂಕಲನದ ಭಾಗವಾಗಿದೆ. ಪುಸ್ತಕದ ಸಂಪಾದಕರು: ಡಾ. ವಿನತೆ ಶರ್ಮ, ಸಹ ಸಂಪಾದಕರು: ಎನ್. ಲಕ್ಷ್ಮಿ)
– ಮೈತ್ರಿ ಬೆಂಗಳೂರು
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.