ಮೌಢ್ಯಮುಕ್ತ ಸಮಾಜಕ್ಕಾಗಿ ಶ್ರಮಿಸುತ್ತಿರುವ ಮುಕ್ತಾ: ಎನ್. ಗಾಯತ್ರಿ/ ಮೈತ್ರಿ ಬೆಂಗಳೂರು

ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್ ಮೂಲಭೂತವಾದಿ ಮೂಢರ ಗುಂಪಿನವರ ಗುಂಡಿನಿಂದ ಹತರಾಗಿ ಇಂದಿಗೆ ಐದು ವರ್ಷಗಳಾದವು. ಇಂದು ದೇಶಾದ್ಯಂತ ಈ ದಿನವನ್ನು “ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ” ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭಕ್ಕಾಗಿ ಮುಕ್ತಾ ದಾಬೋಲ್ಕರ್ ಅವರೊಡನೆ ಕೆಲವು ಕಾಲದ ಹಿಂದೆ ನಡೆಸಿದ ಸಂದರ್ಶನವನ್ನು ಪ್ರಕಟಿಸುತ್ತಿದ್ದೇವೆ.

ಪ್ರಶ್ನೆ: ನಮಸ್ಕಾರ. ಮಹಾರಾಷ್ಟ್ರ್ರದಲ್ಲಿ ಮುಢನಂಬಿಕೆ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿರುವ ನಿಮ್ಮನ್ನು ಪರಿಚಯ ಮಾಡಿಕೊಳ್ಳಲು ಬಯಸುತ್ತೇವೆ. ನಿಮ್ಮ ಮುಖ್ಯ ಚಟುವಟಿಕೆಗಳೇನು?
ಮುಕ್ತಾ: ನಾನು ಮಹಾರಾಷ್ಟ್ರದ ದಾಬೋಲಿಯಲ್ಲಿ ಕೆಲಸ ಮಾಡುತ್ತಿರುವೆ. ಮೊದಲಿಗೆ ಕಾನೂನು ಪದವಿ ಪಡೆದ ನಂತರ ನಾನು ಸ್ವಲ್ಪ ಕಾಲ ವಕೀಲ ವೃತ್ತಿ ಮಾಡಿದೆನಾದರೂ ನಂತರ ಅದನ್ನು ಬಿಟ್ಟುಬಿಟ್ಟೆ. ಕಾನೂನಿನ ಜ್ಞಾನವನ್ನು ಬಳಸಿಕೊಂಡು ಜನರ ನಡುವೆ ಕೆಲಮಾಡಲು ಆರಂಭಿಸಿದೆ. ಹಳ್ಳಿಗಳಲ್ಲಿರುವ ಹಲವಾರು ಸಮಿತಿಗಳಲ್ಲಿ ನಾನು ವಿಶೇಷವಾಗಿ ಶಿಕ್ಷಣದ ಸಮಿತಿಯಲ್ಲಿ ಕೆಲಸ ಮಾಡುತ್ತಿರುವೆ. ಇದೇ ಸಂದರ್ಭದಲ್ಲಿ ಟಾಟಾ ಇನ್‍ಸ್ಟಿಟ್ಯೂಟ್‍ನಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಎಂ.ಎ ಮಾಡಿದೆ. ಈ ಅಧ್ಯಯನ ನನಗೆ ತುಂಬಾ ಸಹಕಾರಿಯಾಯಿತು. ಈ ಓದು ಮುಗಿಸಿ ಹೊರಬಿದ್ದ ಮೇಲೆ ಶಿಕ್ಷಣದ ಹಕ್ಕಿನ ಮಸೂದೆ ಜಾರಿಯಾಗಿತ್ತು. ಇದರ ಅನುಷ್ಠಾನದಲ್ಲಿ ಇದ್ದ ತೊಡಕುಗಳನ್ನು ಬಿಡಿಸುವತ್ತ ಶಾಲಾ ಸಮಿತಿಗಳಲ್ಲಿ ಕೆಲಸ ಮಾಡುತ್ತಿರುವೆ. ಇದು ಬಹಳ ಕಷ್ಟದ ಕೆಲಸವೇ ಆಗಿದೆ. ದಾಬೋಲಿ ಒಂದು ಸಣ್ಣ ತಾಲ್ಲೂಕು. ಹೀಗಾಗಿ ಶಾಲಾ ಶಿಕ್ಷಣದ ಕ್ಷೇತ್ರವೇ ನನ್ನ ಮುಖ್ಯ ಕಾರ್ಯಕ್ಷೇತ್ರವಾಗಿದೆ. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ‘ಹಳ್ಳಿ ಮತ್ತು ಶಾಲೆ’ ಎಂಬ ಪುಸ್ತಕವನ್ನು ರಚಿಸಿರುವೆ.

ಪ್ರಶ್ನೆ: ಸಾಮಾಜಿಕ ಕ್ಷೇತ್ರದ ನಿಮ್ಮ ಇನ್ನಿತರ ಚಟುವಟಿಕೆಗಳೇನು?
ಮುಕ್ತಾ: ನನ್ನ ಊರಿನಲ್ಲಿ ನನ್ನ ಕೆಲವು ಗೆಳತಿಯರು ‘ಸಖಿ’ ಎನ್ನುವ ಹೆಸರಿನಲ್ಲಿ ಸಂಘಟನೆಯೊಂದನ್ನು ಮಾಡಿಕೊಂಡಿದ್ದಾರೆ. ಅವರು ಕೌಟುಂಬಿಕ ದೌರ್ಜನ್ಯದ ಪ್ರಕರಣಗಳನ್ನು ತೆಗೆದುಕೊಂಡು ನೊಂದ ಮಹಿಳೆಯರಿಗಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಅವರೊಂದಿಗೆ ಕೆಲಸ ಮಾಡುತ್ತಿರುವೆ. ಮತ್ತೆ, ಚುನಾಯಿತ ಪಂಚಾಯತಿ ಸದಸ್ಯರಲ್ಲಿ ಅವರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಲು ತರಬೇತಿ ನೀಡುವ ಕೆಲಸ ಮಾಡುತ್ತಿರುವೆ. ನಾನು ಸ್ತ್ರೀವಾದಿಯಾಗಿರುವೆನಾದ್ದರಿಂದ ಮಹಿಳೆಯರನ್ನು ಆವರಿಸಿರುವ ಮೂಢನಂಬಿಕೆಗಳ ವಿರುದ್ಧ ವಿಶೇಷವಾಗಿ ಕೆಲಸ ಮಾಡುತ್ತಿರುವೆ.

ಪ್ರಶ್ನೆ: ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಬಗ್ಗೆ ಸ್ವಲ್ಪ ತಿಳಿಸುವಿರಾ?
ಮುಕ್ತಾ: ಈ ಸಮಿತಿ ಆರಂಭವಾದದ್ದು 1989ರಲ್ಲಿ. ಅದು ಒಂದು ಫೆಡರಲ್ ಸ್ವರೂಪ ಹೊಂದಿದೆ. ಅದರ ಕೇಂದ್ರ ಸತಾರದಲ್ಲಿ ಇದ್ದರೂ ಅದರ ಹಲವಾರು ಶಾಖೆಗಳು ಹಳ್ಳಿ, ತಾಲ್ಲೂಕುಗಳಲ್ಲಿ ಹರಡಿಕೊಂಡಿವೆ.  ಈ ಸಮಿತಿಗೆಂದು ಸ್ವಂತ ಕಟ್ಟಡವಾಗಲೀ, ಆಸ್ತಿಯಾಗಲೀ ಇಲ್ಲ. ಯಾರು ಅಧ್ಯಕ್ಷರು/ಕಾರ್ಯದರ್ಶಿಗಳಾಗಿ ಕೆಲಸ ಮಾಡುತ್ತಿರುತ್ತಾರೋ ಅವರ ವಿಳಾಸವನ್ನೇ ಕೊಡುತ್ತೇವೆ. ದೇಶ-ವಿದೇಶದ ಯಾವ ಅನುದಾನವನ್ನು ಪಡೆಯದೆ ಸ್ವಂತ ಬಲದಿಂದ ಈ ಸಂಸ್ಥೆಯನ್ನು ನಡೆಸುತ್ತಿದ್ದೇವೆ. ಇದರಲ್ಲಿ ಸುಮಾರು ಎಂಭತ್ತು ಶಾಖೆಗಳಿವೆ. ನನ್ನ ತಂದೆ ಅವರ ಸಾವಿನ ಐದು ವರ್ಷಗಳಿಗೆ ಮುಂಚೆಯೇ ತಮ್ಮ ಎಲ್ಲಾ ಹುದ್ದೆಗಳನ್ನು ತೊರೆದು ಸಾಮಾನ್ಯ ಸದಸ್ಯರಾಗಿ ಕೆಲಸ ಮಾಡುತ್ತಿದ್ದರು. ಸಮಿತಿಗೆ ತನ್ನದೇ ಮಾಸಪತ್ರಿಕೆಯೊಂದಿದೆ. ‘ಅಂಧಶ್ರದ್ಧಾ ನಿರ್ಮೂಲನಾ ವಾರ್ತಾಪತ್ರ’ವು ಸುಮಾರು 12,000 ಸದಸ್ಯರನ್ನು ತಲುಪುತ್ತದೆ.
ನಾನು ಕಾಲೇಜು ದಿನಗಳಲ್ಲಿ ಈ ಸಮಿತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದೆ. ನನ್ನ ಸೋದರ ಹಮೀದ್ ದಲವಾಯಿ ಮನೋವೈದ್ಯ. ಅವನೂ ತನ್ನ ಖಾಸಗಿ ಪ್ರಾಕ್ಟೀಸ್‍ನ ಜೊತೆಗೆ ಗ್ರಾಮಗಳ  ಆರೋಗ್ಯ ಕೇಂದ್ರಗಳಿಗಾಗಿ ಕೆಲಸ ಮಾಡುತ್ತಾನೆ. ಅವನು ಮುಖ್ಯವಾಗಿ ಜನರ ಮಾನಸಿಕ ಪ್ರಾಥಮಿಕ ಆರೋಗ್ಯದ ವಿಷಯಗಳಿಗಾಗಿ ಕೆಲಸ ಮಾಡುತ್ತಾನೆ.

ಪ್ರಶ್ನೆ: ನಿಮ್ಮ ಇಡೀ ಕುಟುಂಬದಲ್ಲಿ ಇಂತಹ ವೈಜ್ಞಾನಿಕ ಮನೋಭಾವವಿದೆಯೇ?
ಮುಕ್ತಾ : ಹೌದು, ಇದೆ. ನಮ್ಮ ತಂದೆ ಆರಂಭದ ಕೆಲವು ವರ್ಷಗಳ ಕಾಲ ವೈದ್ಯ ವೃತ್ತಿಯನ್ನು ಆಚರಿಸಿದರಾದರೂ ನಂತರದಲ್ಲಿ ಸಂಪೂರ್ಣವಾಗಿ ಈ ಚಳುವಳಿಗೆ ತಮ್ಮನ್ನು ತೊಡಗಿಸಿಕೊಂಡರು. ಅವರಿಗೆ ಬೆನ್ನೆಲುಬಾಗಿ ನಿಂತವರು ನಮ್ಮ ತಾಯಿ ಡಾ| ಶೈಲಾ. ಅವರು ಪ್ರಸೂತಿ ವೈದ್ಯೆ. ಅವರು ಅತ್ಯಂತ ಪರಿಶ್ರಮದಿಂದ ನಮ್ಮ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತರು. ಮನೆಯ ಒಳಗೂ ಹೊರಗೂ ದುಡಿಯುತ್ತಾ ನಮ್ಮ ತಂದೆಗೆ ಚಳುವಳಿಯಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟರು. ಅವರು ತಮ್ಮ ವೈದ್ಯ ವೃತ್ತಿಯ ಸುಮಾರು ನಲವತ್ತು ವರ್ಷಗಳಲ್ಲಿ ಮೂವತ್ತು ಸಾವಿರ ಹೆರಿಗೆಯನ್ನು ಮಾಡಿರಬಹುದು. ನನ್ನ ತಂದೆಯ ಮತ್ತು ತಾಯಿಯ ಕುಟುಂಬಗಳೆರಡೂ ನಮ್ಮ ಮನೆಗಳ ಹತ್ತಿರವೇ ಇದ್ದದ್ದರಿಂದ ಅವರ ನೆರವೂ ನಮ್ಮ ಕುಟುಂಬಕ್ಕೆ ಸಕಾಲದಲ್ಲಿ ದೊರಕುತ್ತಿತ್ತು. ಎಲ್ಲರೂ ವಿಚಾರವಾದಿಗಳೇ ಆದ್ದರಿಂದ ನಮಗೆ ನಮ್ಮ ಕೆಲಸ, ಕಾರ್ಯಗಳಲ್ಲಿ ಯಾವುದೇ ತೊಂದರೆ ಉದ್ಭವಿಸಲಿಲ್ಲ.

ಪ್ರಶ್ನೆ: ಮೂಢನಂಬಿಕೆ ವಿರೋಧಿ ಮಸೂದೆ ಜಾರಿಯಾಗುವ ಪ್ರಕ್ರಿಯೆಯಲ್ಲಿ ನೀವು ಎದುರಿಸಿದ ಸವಾಲುಗಳನ್ನು ತಿಳಿಸುವಿರಾ?
ಮುಕ್ತಾ: ಈ ಮಸೂದೆಯನ್ನು ಮುಖ್ಯವಾಗಿ ನಮ್ಮ ತಂದೆ ರಚಿಸಿದರಾದರೂ ಅದು ಹಲವಾರು ಜನರ ಚರ್ಚೆ, ಅಧ್ಯಯನದ ಫಲ. ಹದಿನೆಂಟು ವರ್ಷಗಳ ಹಿಂದಿನಿಂದ ಅದರ ಜಾರಿಗಾಗಿ ಹೋರಾಟ ನಡೆದಿದೆ. ನಮ್ಮ ತಂದೆಗೆ ಮಾತುಕತೆ- ಚರ್ಚೆಯ ಸಂಧಾನದಲ್ಲಿ ಅಪಾರವಾದ ವಿಶ್ವಾಸ. ಎಂದೂ ತಮ್ಮ ವಿಚಾರಗಳಿಂದ ಬೇರೆಯವರ ಮೇಲೆ ಆಕ್ರಮಣ ನಡೆಸುತ್ತಿರಲಿಲ್ಲ. ಮೊದಲಿ ಈ ಮಸೂದೆಗೆ ವಿರೋಧ ಬಂದಿದ್ದೇ ಬಲ ಪಂಥೀಯರು ಮತ್ತು ಶಿವಸೇನೆಯವರಿಂದ. ಇವರುಗಳು ತಮ್ಮ ವಾದವನ್ನು ಬಿತ್ತಲು ಭಕ್ತಿಪಂಥದ ವಾರ್ಕರಿಗಳನ್ನು ಬಳಸಿಕೊಂಡರು. ಅವರನ್ನು ಚಳುವಳಿಯ ವಿರುದ್ಧ ಎತ್ತಿಕಟ್ಟಿದರು. ಜ್ಞಾನೇಶ್ವರ ಪಂಥಾನುಯಾಯಿಗಳಾದ ಈ ವಾರ್ಕರಿಗಳಿಗೆ ದಾರಿ ತಪ್ಪಿಸಿ ಅವರು ಈ ಮಸೂದೆಯನ್ನು ವಿರೋಧಿಸುವಂತೆ, ಖಂಡಿಸುವಂತೆ ಮಾಡಿದರು. ಸಹಜವಾಗಿಯೇ ಸರ್ಕಾರ ಅವರ ಮಾತಿಗೆ ತಲೆದೂಗಿತು. ನನ್ನ ತಂದೆಯ ಸಾವಿನ ನಂತರ ಈ ಗುಂಪಿನವರಿಗೆ ತಮ್ಮ ತಪ್ಪಿನ ಅರಿವಾಯಿತು. ಅವರೇ ಮುಂದೆ ಬಂದು ಮಸೂದೆಯ ಪರವಾದ ಮೆರವಣಿಗೆಯಲ್ಲಿ ಭಾಗವಹಿಸಿದರು. ಈ ಚಳುವಳಿಯಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡರು. ಸರ್ಕಾರ ಜನರ ಒತ್ತಾಯಕ್ಕಾಗಿ ಈ ಮಸೂದೆಯನ್ನು ಮಂಡಿಸಿದರೂ ತಮ್ಮದೇ ಸಾಧನೆಯಂತೆ ಕೊಚ್ಚಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ. ಮೇ1, 2003ರ ಮಹಾರಾಷ್ಟ್ರ ರಾಜ್ಯೋತ್ಸವದಂದು ಸರ್ಕಾರ ತಾನು ಈ ಮಸೂದೆಯನ್ನು ಜಾರಿಗೊಳಿಸಿರುವುದಾಗಿ ಘೋಷಿಸಿತ್ತು. ನನ್ನ ತಂದೆ ಕೊಲೆಯಾದ ಮಾರನೆಯ ದಿನ ಮಹಾರಾಷ್ಟ್ರ ಸರ್ಕಾರ ಈ ಮಸೂದೆಗೆ ಅಂಗೀಕಾರ ಮುದ್ರೆಯೊತ್ತಿತು.

ಪ್ರಶ್ನೆ: ಈ ನಿಮ್ಮ ಸಂಸ್ಥೆಯಲ್ಲಿ ಯುವಜನರು, ಮಹಿಳೆಯರು ಮತ್ತು ಅಲ್ಪ ಸಂಖ್ಯಾತರು ಎಷ್ಟರ ಮಟ್ಟಿಗೆ ಭಾಗವಹಿಸುತ್ತಿದ್ದಾರೆ?
ಮುಕ್ತಾ: ಯುವಕರು ತುಂಬಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಮಹಿಳೆಯರೂ ಭಾಗವಹಿಸುತ್ತಾರಾದರೂ ತುಂಬಾ ಹೆಚ್ಚಿನ ಸಂಖ್ಯೆಯಲ್ಲಿ ಎಂದು ಹೇಳಲಾರೆ. ಎಲ್ಲಾ ಸಂಸ್ಥೆಗಳೂ ಪುರುಷಾಧಿಪತ್ಯದವೇ ಎಂದು ನಿಮಗೆ ಗೊತ್ತಲ್ಲಾ? ಇನ್ನು ಅಲ್ಪ ಧರ್ಮೀಯರು ಮತ್ತು ಬುಡಕಟ್ಟು ಜನಾಂಗದ ಜನರು ಬಿಡಿ ಬಿಡಿ ವ್ಯಕ್ತಿಗಳಾಗಿ ಭಾಗವಹಿಸುತ್ತಾರಾದರೂ ಅವರು ಇಡೀ ಸಮುದಾಯವಾಗಿ ಬಂದು ಭಾಗವಹಿಸಿರುವುದು ಕಡಿಮೆಯೇ.

ಪ್ರಶ್ನೆ: ಇಂದು ಯುವಜನರು ಸಾಮಾಜಿಕ ಚಳುವಳಿಗಳಲ್ಲಿ ಭಾಗವಹಿಸುವುದು ಕಡಿಮೆ. ಹಾಗಿರುವಾಗ ಅವರನ್ನು ಆಕರ್ಷಿಸಲು ನೀವು ಎಂತಹ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೀರಾ?
ಮುಕ್ತಾ: ನಮ್ಮಲ್ಲಿ ಮಾತಿಗಿಂತ ಕ್ರಿಯೆಗೆ ಆದ್ಯತೆ ಹೆಚ್ಚು. ವಿದ್ಯಾರ್ಥಿಗಳು, ಯುವಜನರು ಭಾಗವಹಿಸಬಹುದಾದಂತಹ ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಉದಾಹರಣೆಗೆ, ಜನರು ಗಣೇಶೋತ್ಸವದ ಸಂದರ್ಭದಲ್ಲಿ ಗಣೇಶನ ಮೂರ್ತಿಗಳನ್ನು ಕೆರೆಯಲ್ಲಿ ಮುಳುಗಿಸಿ ಜಲ ಮಾಲಿನ್ಯವನ್ನು ಉಂಟುಮಾಡುವರು. ಆಗ ನಮ್ಮ ಸಮಿತಿಯ ಸದಸ್ಯರು ಅವರಲ್ಲಿ ಹೋಗಿ ಮುಳುಗಿದ ಗಣೇಶ ಮೂರ್ತಿಗಳನ್ನು ತೆಗೆದುಕೊಂಡು ಸ್ವತಃ ಇದಕ್ಕೆಂದೇ ನಿರ್ಮಿಸಿದ ಕೃತಕ ಬಾವಿಗಳಲ್ಲಿ ಮುಳುಗಿಸುವರು. ಇದನ್ನೊಂದು ಚಳುವಳಿಯ ರೂಪದಲ್ಲಿ ಮಾಡುವುದರಿಂದ ಜನರಿಗೂ ಇದರ ಬಗ್ಗೆ ಜಾಗೃತಿಯುಂಟಾಗಿ ಅವರೇ ಸ್ವತಃ ಈ ಚಳುವಳಿಯಲ್ಲಿ ಭಾಗವಹಿಸುವರು. ಹಾಗೆಯೇ, ಪಟಾಕಿ ಹಬ್ಬದ ಸಂದರ್ಭದಲ್ಲೂ ಪ್ರತಿಯೊಂದು ಮನೆಗೂ ಹೋಗಿ ಪ್ರತಿ ಬಾರಿಯು ಕೊಳ್ಳುವ ಪಟಾಕಿಯಲ್ಲಿ ಮೊದಲಿಗೆ ನೂರು ರೂಪಾಯಿ ಉಳಿಸುವಂತೆ ಮಕ್ಕಳ ಮನವೊಲಿಸಿ ಅರ್ಜಿಯೊಂದಕ್ಕೆ ಸಹಿ ಹಾಕಿಸಿಕೊಳ್ಳುವರು. ಕೊನೆಗೆ ಈ ಅರ್ಜಿಗಳನ್ನೆಲ್ಲಾ ಸಂಗ್ರಹಿಸಿ ಒಟ್ಟಾಗಿ ಉಳಿತಾಯ ಮಾಡಿದ ಪಟಾಕಿಯ ಮೊತ್ತವನ್ನು ಘೋಷಿಸುವುದು ಒಂದು ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಯುವ ಜನರನ್ನು ತೊಡಗಿಸಿಕೊಳ್ಳುವುದು ಸಾಧ್ಯ.

ಪ್ರಶ್ನೆ: ನೀವು ಜನರ ಮೂಢನಂಬಿಕೆಗಳನ್ನು ಹೋಗಲಾಡಿಸಲು ವಿಶಿಷ್ಟವಾದ ಮಾರ್ಗೋಪಾಯಗಳನ್ನು ಆಚರಿಸುತ್ತೀರಾ?
ಮುಕ್ತಾ: ನಾವು ಮೊದಲು ಜನರು ಈ ಮೂಢನಂಬಿಕೆಗಳಿಗೆ ಏಕೆ ದಾಸರಾಗಿದ್ದಾರೆ, ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಉದಾಹರಣೆಗೆ ಜನರಿಗೆ ಬರುವ ಖಾಯಿಲೆ, ಕಸಾಲೆ ಇರಬಹುದು, ಇಲ್ಲವೆ ಮಾನಸಿಕ ವೈಕಲ್ಯಗಳಿರಬಹುದು- ಹುಚ್ಚು ಬಿಡಿಸಲು, ಖಾಯಿಲೆ ಹೋಗಿಸಲು ಜನ ದರ್ಗಾ, ದೇವಾಲಯಗಳಿಗೆ ಹೋಗುತ್ತಾರೆ. ಮಾಟ, ಮಂತ್ರಗಳಿಗೆ ಮೊರೆಹೋಗುತ್ತಾರೆ. ಆಗ ಅವರು ಹೋಗುವ ದರ್ಗಾಗಳೋ, ದೇವಾಲಯದ ಬಳಿಯೋ ಮಾನಸಿಕ ಚಿಕಿತ್ಸಾ ಕೇಂದ್ರವನ್ನು ತೆರೆದು ಅಲ್ಲಿಗೆ ಬರುವ ರೋಗಿಗಳನ್ನು ಕರೆದು ಅವರಿಗೆ ಮಾನಸಿಕ ಸಾಂತ್ವನ ಹೇಳುವುದು, ಶುಶ್ರೂಷೆ ಮಾಡುವುದು ಮುಂತಾದವನ್ನು ಹಮ್ಮಿಕೊಳ್ಳುತ್ತೇವೆ. ಈ ಕೆಲಸ ಮಾಡುವ ಕಾರ್ಯಕರ್ತರನ್ನು ‘ಮಾನಸ ಮಿತ್ರ’ ಎಂದು ಕರೆಯುತ್ತೇವೆ. ಅವರಿಗೆ ಮಾನಸಿಕ ಆರೋಗ್ಯದ ತರಬೇತಿಯನ್ನು ನೀಡಿ ಸಜ್ಜುಗೊಳಿಸಲಾಗಿರುತ್ತದೆ. ಹೀಗೆಯೇ ಜನರ ನಂಬಿಕೆ, ಪದ್ಧತಿಯನ್ನು ಒಮ್ಮೆಗೆ ಖಂಡಿಸದೆ ವೈಜ್ಞಾನಿಕ ಪದ್ಧತಿಗಳಲ್ಲಿ ವಿಶ್ವಾಸ ಮೂಡುವಂತೆ ಮಾಡುವುದು ನಮ್ಮ ತಂತ್ರವಾಗಿದೆ.

ಪ್ರಶ್ನೆ: ಇಂತಹ ಚಳುವಳಿಗಳು ಅಲ್ಪ ಸಂಖ್ಯಾತ ಧರ್ಮಗಳ ಮೂಢನಂಬಿಕೆಗಳನ್ನು ಕುರಿತು ಧ್ವನಿಯೆತ್ತುವುದಿಲ್ಲ, ಎನ್ನುವ ಆಕ್ಷೇಪಣೆಯನ್ನು ಮಾಡುತ್ತಾರಲ್ಲ, ಅದಕ್ಕೆ ಏನು ಹೇಳುತ್ತೀರಿ?
ಮುಕ್ತಾ: ಹಾಗೇನಿಲ್ಲ, ಎಲ್ಲ ರೀತಿಯ ಮೂಢನಂಬಿಕೆಗಳ ವಿರುದ್ಧವೂ ನಾವು ಮಾತನಾಡುತ್ತೇವೆ. ನೀವು ನಮ್ಮ ತಂದೆ ಬರೆದಿರುವ ಪುಸ್ತಕವನ್ನು ಓದಿ. ನಾವು ಮಸೂದೆಯಲ್ಲಿ ಪಟ್ಟಿ ಮಾಡಿರುವ ಮೂಢನಂಬಿಕೆಗಳಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ 600 ಮೂಢ ನಂಬಿಕೆಗಳು ಸೇರಿವೆ. ನನ್ನ ಸೋದರನಿಗೆ ನಮ್ಮ ತಂದೆ ಹಮೀದ್ ದಲವಾಯಿ ಎಂದು ನಾಮಕರಣ ಮಾಡಿದ್ದಾರೆ. ಅದು ಮುಸ್ಲಿಂ ಸಂತ ಹಮೀದ್‍ನ ಹೆಸರು.
ಮತ್ತೊಂದು ಉದಾಹರಣೆ ಕೊಡುವೆ: ಮಾಹಿಮ್‍ನಲ್ಲಿ ಸಮುದ್ರದ ನೀರು ತುಂಬಾ ಗಲೀಜಾಗಿರುತ್ತದೆ. ಅಲ್ಲಿ ಮೌಂಟ್ ಮೇರಿ ಕೆಥಡ್ರಲ್‍ನವರು ದೈವೀ ಕೃಪೆಯಿಂದ ಚಮತ್ಕಾರವುಂಟಾಗಿ ನೀರು ಸಿಹಿಯಾಗಿದೆ, ಎಂದು ಸುದ್ದಿ ಹಬ್ಬಿಸಿದರು. ಜನ ಕೂಡ ಅದನ್ನು ನಂಬಿ ಧಾವಿಸಿ ಬಂದರು. ಅಷ್ಟೊಂದು ಕೊಳಕಾದ ನೀರನ್ನು ಹಾಗೆಯೇ ಸೇವಿಸುವುದು ಜೀವಕ್ಕೆ ಹಾನಿ ಎಂದು ಈ ಮೂಢ ಜನ ಭಾವಿಸಲೇ ಇಲ್ಲ. ಆ ನೀರನ್ನು ಬಾಟಲ್‍ಗಳಲ್ಲಿ ತುಂಬಿಕೊಂಡು ತೀರ್ಥವೆಂಬಂತೆ ಸೇವಿಸುತ್ತಿದ್ದರು. ಆಗ ನಾವು ಈ ಪವಾಡದ ವಿರುದ್ಧವೂ ಹೋರಾಟ ನಡೆಸಿದೆವು. ಆ ಧರ್ಮಕ್ಕೆ ಸೇರಿದ ಜನರೂ ಈ ಚಳುವಳಿಯಲ್ಲಿ ಭಾಗವಹಿಸಿದರು.

ಪ್ರಶ್ನೆ: ಆದರೂ ಈ ಮೂಢನಂಬಿಕೆ ನಿರ್ಮೂಲನಾ ಚಳುವಳಿಯಲ್ಲಿ ಕಾರ್ಯಕರ್ತರಾಗಿ ಅಲ್ಪ ಸಂಖ್ಯಾತ ಧರ್ಮಗಳ ಜನರು ಭಾಗವಹಿಸುವುದು ಕಡಿಮೆಯಲ್ಲವೆ?
ಮುಕ್ತಾ: ಅದು ನಿಜ. ಆದರೆ, ನಾವು ಒಂದಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಜನರಿಗೆ ಅವರ ಧರ್ಮಗಳ ಒಳಗೆ ಬಂಡೇಳಲು ಸಾಧ್ಯವಾಗುವಂತಹ ಒಂದು ವೇದಿಕೆಯಿರುವುದಿಲ್ಲ. ಅಷ್ಟೇ ಅಲ್ಲ, ವಿದ್ಯಾಭ್ಯಾಸದ ಅವಕಾಶಗಳು ಕಡಿಮೆ. ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮೂಢನಂಬಿಕೆ ನಿರ್ಮೂಲನೆಯ ಚಳುವಳಿ ಈ ಹಲವಾರು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ.

ಎನ್. ಗಾಯತ್ರಿ/ ಮೈತ್ರಿ ಬೆಂಗಳೂರು

 

 

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *