ಮೋಡ ಬೀಸೋ ಕೈಗಳು – ಗಿರಿಯಪ್ಪ ಅಸಂಗಿ
ಬಿಗಿದಷ್ಟು ಹಿತಗೈಯುವ ಮಣ್ಣ ಹೆಂಟೆಗಳಲಿ
ಚಿತ್ತ ಬಿತ್ತಿಯ ಎರೆಹುಳುವಿನ ಹೆಜ್ಜೆಗಳು
ಬೆರಳ ತುದಿಯಲಿ ಸುರುವಿಕೊಳ್ಳುವ ಬೀಜಗಳ ಮಾತೊಳಗೆ
ಅವಳ ನೆಲದ ನಗೆಯ ಪಿಸುಮಾತು
ಕೋಮಲವಾದ ಕೆಂದುಟಿಯ ತೋಟದ ಜೇನುಹನಿಗಳಲಿ ದುಂಬಿಯ ಅನವರಿತ ಯಾನ
ತಡವರಿಸದೆ ನೆಲಕ್ಕಪ್ಪಳಿಸೋ ಎಲೆಗಳ ಸಮಾಧಿಯೊಳಗೆ
ಮುಂಗೈ ತುಂಬಿದ ಮದರಂಗಿಯ ಹಸಿ ಹಸಿ ನೆನಪುಗಳು
ಅವಳ ತುರುಬು ಕುಕ್ಕುವ ಓಣಿಯ ಬಿರುಕು ನೋಟಗಳಲಿ
ಗೂಡುಕಟ್ಟಿದ ಕೈಗಳ ಬೆವರೀಗ ಜೇಡರ ಬಲೆಯೊಳಗೆ
ಸೊಂಟಕೆ ಸುತ್ತಿದ ಸೀರೆಸೆರಗನ್ನೊಮ್ಮೆ ಹೊಕ್ಕಳಿಗೆ ಒತ್ತಿ
ಕೈ ಬೆರಳ ತುದಿಯಲಿ ಇರುಳ ನೆತ್ತಿಗೊಮ್ಮೆ ಗುದ್ದಿ
ಮುಂಗೈ ನಾಡಿಯೊಳಗೆ ಕಲ್ಲ ಹೃದಯಗಳ ಮಿಡಿತವಾಗಿ
ಬೆಸೆದುಕೊಂಡಳು ಮೋಡ ಬೀಸೋ ಒಡಲಿನ ಕೈಗಳಲಿ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
“ಮೋಡ ಬೀಸೋ ಕೈಗಳು”
ಪ್ರಕಟಿಸಿದ್ದಕ್ಕಾಗಿ
‘ಹಿತೈಷಿಣಿ’ ಬಳಗಕ್ಕೆ ಧನ್ಯವಾದಗಳು
ಕಿರಸೂರ ಗಿರಿಯಪ್ಪ