ಮೊದಲು ಕೇಳಿಸಿಕೊಳ್ಳಿ …

ಗೆಳೆಯ ಗೆಳತಿಯರೇ, ನಿಮ್ಮ ಸಹಮತವಿದ್ದರೆ ದಯವಿಟ್ಟು ಇದನ್ನು Share ಮಾಡಿ, ಹೆಚ್ಚು ಜನರಿಗೆ ತಲುಪಿಸಿ – ಹಿತೈಷಿಣಿ ಬಳಗ

ಅಭಿಯಾನ ಸಂಗೀತಾ ಭಟ್ ತಮ್ಮ ಅನುಭವ, ಹಂಚಿಕೊಳ್ಳುವ ಮೂಲಕ ಕರ್ನಾಟಕಕ್ಕೂ ಕಾಲಿಟ್ಟಿತು. ಮುಂದುವರಿಕೆಯಾಗಿ ಶೃತಿ ಹರಿಹರನ್‌ ತಮ್ಮ ಕೆಲವು ಅನುಭವಗಳನ್ನು ಫೇಸ್‌ಬುಕ್‌ ನಲ್ಲಿ ಹಂಚಿಕೊಂಡರು. ಅವರ ಪೋಸ್ಟ್‌ ಗೆ ಬಂದಿರುವ ಮುನ್ನೂರಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಅವರನ್ನು ವ್ಯೆಯಕ್ತಿಕವಾಗಿ ನಿಂದಿಸಿವೆ. ಅಶ್ಲೀಲ ಭಾಷೆ, ಬೆದರಿಕೆಗಳೂ ಆ ಪ್ರತಿಕ್ರಿಯೆಗಳಲ್ಲಿವೆ. ಈ ಪ್ರತಿಕ್ರಿಯೆಗಳಲ್ಲಿ ಬಳಸಲಾಗಿರುವ ಭಾಷೆ ಮತ್ತು ಧಾಟಿ, ದೌರ್ಜನ್ಯದ ವಿರುದ್ಧ ಮಾತನಾಡುವ ಹೆಣ್ಣುಗಳ ದನಿಯನ್ನೇ ಅಡಗಿಸುವಂತಿದ್ದು ಮುಂದೆ ಯಾರೂ ಈ ಬಗ್ಗೆ ಮಾತನಾಡದಿರುವಂತೆ ಮಾಡುವಷ್ಟು ತೀಕ್ಷ್ಣವಾಗಿದೆ. ಇದು ಹೀಗೆಯೇ ಮುಂದುವರಿದರೆ ಕನ್ನಡ ಚಿತ್ರರಂಗದಲ್ಲಿ ನಡೆದಿರಬಹುದಾದ ಇನ್ನೂ ದೊಡ್ಡ ಮಟ್ಟದ ದೌರ್ಜನ್ಯಗಳು ಸ್ಟಾರ್‌ ನಟರ ಪ್ರಕರಣಗಳು ಬೆಳಕಿಗೇ ಬಾರದೆ ಉಳಿದು ಬಿಡುವ ಆತಂಕವಿದೆ. ಚಿತ್ರರಂಗದವರೇ ಸಂತ್ರಸ್ತ ನಟಿಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದು ಒಂದು ಕಡೆಯಾದರೆ, ಸಾಮಾಜಿಕ ಜಾಲತಾಣಗಳಲ್ಲಿ ನಟನ ಅಭಿಮಾನಿಗಳು, ಸಮರ್ಥಕರು ಶ್ರುತಿ ಹರಿಹರನ್‌ ಬಗ್ಗೆ ಆಡಿರುವ ಮಾತುಗಳು ಬೆಚ್ಚಿಬೀಳಿಸುವಂತಿವೆ. ಅತ್ಯಾಚಾರವಿರಲಿ, ಲೈಂಗಿಕ ಕಿರುಕುಳವನ್ನು ಕುರಿತು ಮಾತನಾಡುವುದು ಅಥವಾ ದೂರು ನೀಡುವುದು ಕೂಡಾ ಸುಲಭವಲ್ಲದ ಸಮಾಜದಲ್ಲಿ ನಾವಿದ್ದೇವೆ. ಉದ್ಯೋಗ ಸ್ಥಳಗಳಲ್ಲಿ ನಡೆಯುವ ಲೈಂಗಿಕ ಕಿರುಕುಳ ಬಗ್ಗೆ ಆ ಸಂದರ್ಭದಲ್ಲೇ ಮಾತನಾಡುವ ಪರಿಸರವಾಗಲಿ ಬೆಂಬಲವಾಗಲಿ ನಮ್ಮ ಸಮಾಜದಲ್ಲಿ ಇಲ್ಲ. ಮಹಿಳೆಯರಿಗೆ ಉದ್ಯೋಗಾವಕಾಶ ದೊರೆಯುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ಇಂತಹ ಸಂಗತಿಗಳ ಬಗ್ಗೆ ದನಿ ಎತ್ತಿದರೆ, ಇರುವ ಅವಕಾಶವೂ ಕೈತಪ್ಪಿ ಹೋಗುವ ಆತಂಕ. ಈ ಆತಂಕವನ್ನೇ ಅಸಹಾಯಕತೆಯಾಗಿ ಭಾವಿಸಿಕೊಂಡು ದೌರ್ಜನ್ಯ ನಡೆಸುವ ಸಮಾಜ ಮತ್ತು ಅದಕ್ಕೆ ಪುಷ್ಟಿ ನೀಡುವ ಪ್ರತಿಕ್ರಿಯೆಗಳನ್ನು ನಾವು ನೋಡುತ್ತಿದ್ದೇವೆ. ಭಾರತದ ಮಹಿಳಾ ಜನಸಂಖ್ಯೆಯಲ್ಲಿ ಔದ್ಯೋಗಿಕ ವಲಯದಲ್ಲಿ ದಾಖಲಾಗಿರುವುದು ಕೇವಲ ೨೭% ಮಾತ್ರ. ಲೈಂಗಿಕ ಕಿರುಕುಳದಂತಹ ಸಮಸ್ಯೆಗಳು ಮುಖ್ಯವಾಗಿ ಮಹಿಳೆಯರ ದುಡಿಮೆಯ ಸ್ಪೇಸ್‌ ಅನ್ನು ಕಸಿದುಕೊಳ್ಳುತ್ತಾ ಹೋಗುತ್ತಿದೆ. ಆ ದ್ದರಿಂದ ಇದು ಕೇವಲ ಒಬ್ಬ ನಟಿ, ಒಬ್ಬ ಪತ್ರಕರ್ತೆಯ ಸಮಸ್ಯೆ ಅಲ್ಲ. ಇದು ಕೇವಲ ಮಹಿಳೆಯರ ಪ್ರಶ್ನೆಯೂ ಅಲ್ಲ. ಇದು ಒಟ್ಟು ಸಮಾಜದ ಪ್ರಶ್ನೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಮೇಲಿನ ದೌರ್ಜನ್ಯವನ್ನೂ ಹೇಳಿಕೊಳ್ಳುವ ಮಹಿಳೆಯರ ಮೇಲೆ ವಾಗ್ದಾಳಿ ನಡೆಸುತ್ತ, ಅವರ ಆತ್ಮಸ್ಥೈರ್ಯವನ್ನು ಕಸಿಯುವ ಪ್ರಯತ್ನ ನಡೆಯಲು ಬೊಡಬಾರದು. ’ಮಹಿಳೆ ಮಾತನಾಡುತ್ತಿದ್ದಾಳೆ ಎಂದರೆ, ಮೊದಲು ಅದನ್ನು ಕೇಳಿಸಿಕೊಳ್ಳಿ. ಅದರ ಸರಿ ತಪ್ಪುಗಳನ್ನು ನಂತರ ನಿರ್ಧರಿಸಿ’ ಅನ್ನುತ್ತಾರೆ ಅಂಬೇಡ್ಕರ್‌. ಈಗಿನ ಪರಿಸ್ಥಿತಿಯಲ್ಲಿ ಮುಖ್ಯವಾಗಿ ಬೇಕಿರುವುದೇ ಈ “ಕೇಳಿಸಿಕೊಳ್ಳುವಿಕೆ” .

ನಮ್ಮ ಸಮಾಜದಲ್ಲಿ ಹೆಣ್ಣು ಮಾತನಾಡಲು ನಿರ್ಭೀತ ವಾತಾವರಣ ಸೃಷ್ಟಿಯಾಗಬೇಕು. ಮತ್ತು ಕೇಳಿಸಿಕೊಳ್ಳುವ ವ್ಯವಧಾನ ಹೆಚ್ಚಬೇಕು. #Me Too ಅಭಿಯಾನ ದುಡಿಯುವ ಮಹಿಳೆಯ ಕರಾಳ ಅನುಭವವನ್ನು ಬಿಚ್ಚಿಡುತ್ತಿದೆ. ಇದು ಹೊರಬಂದರೆ ಸುಧಾರಣೆ ಸಾಧ್ಯ. ಆದ್ದರಿಂದ ಮಾತನಾಡುವ ಹೆಣ್ಣು ಮಕ್ಕಳ ಆತ್ಮಸ್ಥೈರ್ಯ ಕಸಿಯುವ ಪ್ರಯತ್ನಗಳನ್ನು ತಡೆಯಬೇಕಿದೆ. ಅಂತವರ ಪರ ನಾಡಿನ ಎಲ್ಲ ಸಂವೇದನಾಶೀಲರು ದನಿಗೂಡಿಸಿ, ಧೈರ್ಯ ತುಂಬಬೇಕಿದೆ.

ಸಹಿ:

ಪುರುಷೋತ್ತಮ ಬಿಳಿಮಲೆ, ಬೊಳುವಾರು ಮಹಮದ್‌ ಕುಂಞ, ಚೇತನಾ ತೀರ್ಥಹಳ್ಳಿ, ಸಂಧ್ಯಾರಾಣಿ, ಬಿ.ಸುರೇಶ್‌, ಪ್ರೀತಿ ನಾಗರಾಜ್, ರೇಣುಕಾ ನಿಡಗುಂದಿ, ಸಂಧ್ಯಾ ಹೊನಗುಂಟಿಕರ, ಎಂ.ಆರ್‌ ಕಮಲ, ಜಯಲಕ್ಷ್ಮೀ ಪಾಟೀಲ್‌, ಕಾವ್ಯಶ್ರೀ ಎಚ್‌, ಮಂಸೋರೆ, ನಯನಾ ಸೂಡ, ಚಿದಂಬರ ನರೇಂದ್ರ, ಸಂಜ್ಯೋತಿ ವಿ.ಕೆ, ರೇಣುಕಾ ಚಿತ್ರದುರ್ಗ, ಶ್ರುತಿ ದಮ್ಮೂರು, ಸುರೇಶ್‌ ಸಮೂಹ, ಹೇಮಲತಾ ಮೂರ್ತಿ, ರಕ್ಷಿತ್‌ ಪೊನ್ನಾತ್‌ ಪುರ, ವಿಮಲಾ ಕೆ.ಎಸ್‌, ಮಂಜುಶ್ರೀ ಕಡಕೋಳ್, ಚೇತನ್‌ ಮಂಜುನಾಥ್‌, ರೂಪಲತಾ, ಟೀನಾ ಶಶಿಕಾಂತ, ಸ್ನೇಹಲತಾ ರಾಮಪ್ಪ, ಅರ್ಚನಾ, ಡಾ. ವಿಜಯಾ, ಗೀತಾ ಕಣ್ಣಮ್ಮನವರ್‌, ಮೇಘಾ ಕೋಟಿ, ಸಂಯುಕ್ತಾ ಪುಲಿಗಲ್‌, ರಶ್ಮಿ ಕಾಸರಗೋಡು, ರಾಘವ ಶರ್ಮ, ಅಕ್ಷತಾ ದೇಶಪಾಂಡೆ, ವಿಜಯಶ್ರೀ ಎಂ.ಜಿ, ಭಾರತಿ ಬಿ.ವಿ, ಪೂರ್ಣಿಮಾ ಗಿರೀಶ್‌, ಉಷಾ ಪಿ. ರೈ, ಅನಸೂಯಾ ರಾವ್‌, ಸರಳಾ ಪ್ರಕಾಶ್, ಅನುರಾಧಾ ಕುಲಕರ್ಣಿ, ರೂಪಾ ಸತೀಶ್‌, ಸಿ.ಜಿ.ಮಂಜುಳಾ, ಬಾಲಸುಬ್ರಹ್ಮಣ್ಯ ಅಯ್ಯರ್‌, ನಜ್ಮಾ ನಜೀರ್‌, ಲಕ್ಷ್ಮೀ ರಾಜೇಶ್‌,ಜಾನಕಿ ಮುರುಳಿ, ಭಾರತಿ ಹೆಗಡೆ, ಜ್ಯೋತಿ ಇರ್ವತ್ತೂರು, ಜಯಶ್ರೀ ಜಗನ್ನಾಥ, ಪ್ರಣತಿ.ಎಸ್‌, ಅರುಣಾ, ಪಲ್ಲವಿ ರಾವ್‌, ಗೌರಿ ದತ್ತೂ, ಹೇಮಾ ವೆಂಕಟ್‌, ಲೀಲಾವತಿ ಹಾಸನ, ಶ್ವೇತಾ ಹೊಸಬಾಳೆ, ದಿನೇಶ್‌ ಕುಕ್ಕುಜಡ್ಕಾ, ವಾಸು ಎಚ್‌.ವಿ, ಚೇತನಾ ಕಂಬದ, ಪ್ರಗಾಥ್ ಕೆ.ಆರ್‌, ಸತ್ಯ ಎಸ್, ಅರುಣ ಜೋಳದಕೂಡ್ಲಿಗಿ, ಅಝೀಝ್ ಕಿರುಗುಂದ, ಮಾಲತೇಶ್‌ ಅರಸ್‌ ಹರ್ತಿಕೋಟೆ, ವಿಶ್ವೇಶ್ವರ್ ಗಾಂವ್ಕರ್‌, ಸುಮನ್‌ ಕಿತ್ತೂರು, ಕೊಟ್ರೇಶ್‌ ಕೊಟ್ಟೂರು, ರೇಣುಕಾ ಮನ್ವಂತರ, ಜ್ಯೋತಿ ಆರ್‌, ಮಹೇಶ್ ಮಹದೇವಪ್ಪ, ಬಾಬುರೆಡ್ಡಿ ಚಿಂತಾಮಣಿ, ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ, ಯಾಸೀನ್‌ ಪೃಥ್ವಿ ಎಂ.ಜಿ ಹಾಸನ, ರಮೇಶ್ ನಗರಗೆರೆ, ಆರ್ ಪೂರ್ಣಿಮಾ, ಎನ್‌ ಗಾಯತ್ರಿ, ಮಾಲತಿ ಭಟ್‌, ಮೈತ್ರಿ ಬೆಂಗಳೂರು.

 

 

 

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *