ಮೇ ದಿನ / ಕಾರ್ಮಿಕರ ಬದುಕಿಗೇ ಬೀಗ ಹಾಕಿದ ಕೊರೋನ

ಕೊರೋನ ಕಳವಳ ಜಗತ್ತನ್ನೇ ಮಾರ್ಪಡಿಸಿದ್ದರೂ ಅಂದಿನ ದುಡಿಮೆಯಲ್ಲಿ ಅಂದು ಉಣ್ಣುವ ಅಸಂಘಟಿತ ಕಾರ್ಮಿಕರ ಬದುಕಿನಲ್ಲಿ ಮೂಡಿರುವ ತಳಮಳಗಳನ್ನು ಬಣ್ಣಿಸಲು ಸಾಧ್ಯವಿಲ್ಲ. ಈ ಅಭದ್ರ ಲೋಕದಲ್ಲಿ ಅರ್ಧಕೂಲಿಗೆ ದುಡಿಯುವ ಕಾರ್ಮಿಕ ಮಹಿಳೆಯರ ಬದುಕಂತೂ ನಾಳೆಗಳೇ ಇಲ್ಲವೆನ್ನುವಂತೆ ಶೂನ್ಯವಾಗಿದೆ. ಅನಿವಾರ್ಯವಾದ ಲಾಕ್ ಡೌನ್ ಅವರ ಕಷ್ಟಗಳನ್ನು ಅಪಾರವಾಗಿ ಹೆಚ್ಚಿಸುತ್ತಿದೆ.

ಕೊರೋನ- ಕೋವಿಡ್ 19 ಹಾವಳಿ ಹೆಚ್ಚಾಗಿ ಲಾಕ್ ಡೌನ್ ಘೋಷಣೆಯಾದಾಗ, ಇಡೀ ಉತ್ಪಾದನಾ ವಲಯ ಮತ್ತು ನಿರ್ಮಾಣ ವಲಯಗಳು ಥಟ್ಟನೆ ಸ್ತಬ್ಧವಾದವು. ಇವುಗಳು ಜೀವಂತವಾಗಿ ಇದ್ದದ್ದೇ ವಲಸೆ ಕಾರ್ಮಿಕರ ಶ್ರಮದಿಂದ. ಆ ಕೋಟಿ ಕೋಟಿ ಕಾರ್ಮಿಕರ ಬದುಕು ಈಗ ದಿಕ್ಕೆಟ್ಟಂತಾಗಿದೆ. ಹಳ್ಳಿಗಳಲ್ಲಿ ಬರಗಾಲ, ಗ್ರಾಮೀಣ ಉದ್ಯೋಗಗಳ ಕೊರತೆ, ಸ್ಥಗಿತಗೊಂಡ ಕೃಷಿ ಚಟುವಟಿಕೆಗಳಿಂದ ಹೊಟ್ಟೆ ತುಂಬುವುದೇ ಕಷ್ಟವಾದಾಗ, ಅವರೆಲ್ಲ ನಗರಗಳಿಗೆ ವಲಸೆ ಬಂದು ಅಲ್ಲಿ ದುಡಿದು ಜೀವನ ಮಾಡುವುದು, ಕಾರ್ಮಿಕರಾದ ಅವರ ಜೊತೆ ಅವರ ಸಂಸಾರವೂ ದುಡಿಮೆಗೆ ಕೈಜೋಡಿಸುವುದು ಅನಿವಾರ್ಯವಾಯಿತು. ಈ ಕೆಲಸಗಿತ್ತಿಯರಿಗೆ ಸಮಾನ ವೇತನ ಎನ್ನುವುದು ಕನಸಿನ ಮಾತು. ಜೊತೆಗೆ ಅವರು ವಲಸೆ ಬಂದಿರುವುದರಿಂದ, ಸರ್ಕಾರ ನೀಡುವ ಅಲ್ಪಸ್ವಲ್ಪ ಸೌಲಭ್ಯಗಳಿಂದಲೂ ವಂಚಿತರು.

ತಮ್ಮ ದುಡಿಮೆಯಿಂದ ಬರುವ ಹಣವನ್ನೆಲ್ಲ ಸಂಸಾರಕ್ಕೆ ಸಮರ್ಪಿಸುವ ಈ ಮಹಿಳೆಯರು, ಸಂಸಾರದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವನ್ನೇನೂ ಪಡೆದಿರುವುದಿಲ್ಲ. ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯಗಳಂತೂ ಸರ್ವೇಸಾಮಾನ್ಯ. ನಗರಗಳಿಗೆ ವಲಸೆ ಬಂದ ಆ ಹೆಣ್ಣುಮಕ್ಕಳ ಬವಣೆಗಳು ಒಂದು ಬಗೆಯಲ್ಲಿ ಅದೃಶ್ಯವೇ ಆಗಿ ಉಳಿದಿವೆ. ಅವರ ನಿಶ್ಶಕ್ತಿ, ಅಪೌಷ್ಟಿಕತೆ, ಮುಟ್ಟು, ಬಸಿರು, ಬಾಣಂತನ ಇವೆಲ್ಲದರ ನಡುವೆ ಮಕ್ಕಳ ಪಾಲನೆ, ಅಡುಗೆ ಕೆಲಸ, ಕುಡಿಯುವ ನೀರು ತರುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಮುಂತಾದ ನೂರೆಂಟು ಕೆಲಸಗಳು ನಡೆಯುತ್ತಿರುತ್ತವೆ. ಕೋಟ್ಯಂತರ ಸಂಸಾರಗಳಿಗೆ ಗುಡಿಸಲ ಭಾಗ್ಯವೂ ಇಲ್ಲದೆ ಬಯಲು, ರಸ್ತೆ ಬದಿ, ಸೇತುವೆ ಕೆಳಗೆ, ಹೆದ್ದಾರಿಯ ಅಂಚು ಮುಂತಾದ್ದರಲ್ಲೇ ಬದುಕು ಉರುಳುತ್ತಿತ್ತು. ಈಗ ಲಾಕ್ ಡೌನ್ ನಂತರ ವಲಸೆ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ವಾಪಸಾಗಲು ನೂರಾರು ಕಿಲೋಮೀಟರ್ ದೂರವನ್ನು ನಡೆದುಕೊಂಡೇ ಹೋಗುತ್ತಿರುವ ದೃಶ್ಯಗಳು ಎಲ್ಲರ ಮನ ಕಲಕಿದ್ದು ಅಷ್ಟಿಷ್ಟಲ್ಲ. ಗಂಡಸರ ಜೊತೆಗೆ ನಡೆದುಹೋಗುತ್ತಿದ್ದ ಇವರು ತಲೆಯ ಮೇಲೆ ಮನೆಯ ಗಂಟುಮೂಟೆ ಹೊತ್ತು, ಕಂಕುಳಲ್ಲಿ ಮಗು ಹಿಡಿದು ಆತಂಕದಿಂದ ಊರ ಕಡೆಗೆ ಹೋಗುತ್ತಿದ್ದ ಚಿತ್ರಗಳು ಅವರ ಸಂಕಷ್ಟಗಳನ್ನು ಸಾರುತ್ತಿದ್ದವು.

ನಗರಗಳ ಕಟ್ಟಡ ನಿರ್ಮಾಣ ಯೋಜನೆಗಳು, ಹೆದ್ದಾರಿ ನಿರ್ಮಾಣ, ಇಟ್ಟಿಗೆ ಕಾರ್ಖಾನೆಗಳು, ಕೃಷಿ ಫಾರಂಗಳು, ಸಣ್ಣ ಕೈಗಾರಿಕೆಗಳು, ನಗರಗಳ ಮನೆಗೆಲಸ ಮುಂತಾದ ಸಾವಿರಾರು ಕೆಲಸಗಳಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದ ಕುಟುಂಬಗಳು ಈಗ ತಮ್ಮ ಮೂಲ ಹಳ್ಳಿಗಳಿಗೆ ಪಟ್ಟಣಗಳಿಗೆ ವಾಪಸಾಗಿ ಅಲ್ಲೇನು ಮಾಡುತ್ತವೆ ಎನ್ನುವುದೂ ದೊಡ್ಡ ಪ್ರಶ್ನೆ. ಏಕೆಂದರೆ ತಮ್ಮ ಮೂಲ ಸ್ಥಳಗಳಲ್ಲಿ ಕೈಗೆ ಕೆಲಸವಿಲ್ಲದೆ, ಹೊಟ್ಟೆ ತುಂಬಿಸಿಕೊಳ್ಳುವುದು ಸಾಧ್ಯವಾಗದೆ ಅವರೆಲ್ಲ ನಗರಗಳಿಗೆ ಬಂದವರು. ಈಗ ಹಳ್ಳಿಗಳಿಗೆ ಹೋಗುತ್ತಿರುವ ಅವರು ಪರಿಸ್ಥಿತಿ ಸುಧಾರಿಸಿದ ಮೇಲೆ ಮತ್ತೆ ನಗರಗಳತ್ತ ವಲಸೆ ಬಂದರೆ ಅಲ್ಲಿ ಅವರಿಗೆ ಮೊದಲಿನಷ್ಟು ಕೆಲಸಗಳು ಸಿಗದೇ ಹೋಗಬಹುದು. ಏಕೆಂದರೆ ಉದ್ದಿಮೆಗಳು ತಕ್ಷಣ ಚೇತರಿಸಿಕೊಂಡು ಇವರಿಗೆ ಕೆಲಸ ಒದಗಿಸುವುದಿಲ್ಲ. ಇನ್ನು ಕಾರ್ಮಿಕ ಮಹಿಳೆಯರ ಪಾಡು ಯಾರಾದರೂ ಊಹಿಸಬಹುದು. ಈ ಅಸಂಘಟಿತ ಕಾರ್ಮಿಕ ವಲಯ ಶೋಷಣೆ ಮತ್ತು ಸಂಕಷ್ಟದ ಹೊಸ ಅಲೆಯನ್ನು ನಿಭಾಯಿಸಲು ಸರ್ಕಾರ ನೆರವಿಗೆ ಹೊಸ ಯೋಜನೆಗಳನ್ನು ರೂಪಿಸಬೇಕು. ಅವುಗಳಲ್ಲಿ ಮಹಿಳೆಯರ ಬಗ್ಗೆ ವಿಶೇಷ ಗಮನ ಅತ್ಯಗತ್ಯ.
-ಹಿತೈಷಿಣಿ ಬಳಗ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *