ಮೇಘ ಸಂದೇಶ / ಹುಡುಗಿ ಎದುರಿಸುವ ಹುಚ್ಚು ಪ್ರಶ್ನೆಗಳು – ಮೇಘನಾ ಸುಧೀಂದ್ರ

ಶಿಕ್ಷಣ, ಉದ್ಯೋಗ, ಸಾಧನೆ ಎಲ್ಲದರಲ್ಲಿ ಹೆಣ್ಣುಮಕ್ಕಳು ಎಷ್ಟೇ ಮುಂದುವರೆದಿದ್ದರೂ ಆಫೀಸ್ ಕೋಣೆಗಳನ್ನು, ಕ್ರೀಡಾ ಮೈದಾನಗಳನ್ನು ಆವರಿಸಿಕೊಂಡಿರುವ ಹುಚ್ಚು ಹಗುರ ಅನುಮಾನಗಳು ಏನೂ ಕಡಿಮೆಯಾಗಿಲ್ಲ. ತಮ್ಮ ಕೌಶಲ ಮತ್ತು ಸಾಮಥ್ರ್ಯಗಳನ್ನು ಸಾಬೀತು ಪಡಿಸುವುದು ಹುಡುಗಿಯರಿಗೆ ಈಗಲೂ ದೊಡ್ಡ ಸವಾಲು.

ಹುಡುಗಿ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿ ವಿದೇಶದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಮತ್ತೆ ಬೆಂಗಳೂರಿಗೆ ಬಂದಿದ್ದಳು. ಒಂದಷ್ಟು ಕೆಲಸದ ಅನುಭವವಿದ್ದರೂ ಸಹ , ಫಾರಿನ್ನಿನಿಂದ ಬೆಂಗಳೂರಿಗೆ ಬಂದವರನ್ನ ಅಲ್ಲಿನ ಫೇಲ್ಯೂರ್ಸ್ ಎಂದು ನೋಡುತ್ತಿದ್ದ ಕ್ಷಣದಲ್ಲಿ ಹುಡುಗಿ ಕೆಲಸಕ್ಕಾಗಿ ಬಹಳ ಅಲೆಯುತ್ತಿದ್ದಳು. ಬೆಂಗಳೂರಿನ ಮಧ್ಯ ಭಾಗದಲ್ಲಿ ಇದ್ದ ಒಂದು ಕಂಪೆನಿಗೆ ಸೇರಿಕೊಂಡಳು. ಅದಕ್ಕೂ ಮುನ್ನ ಆದ ಅನುಭವಗಳು ಅವಳನ್ನ ಘಾಸಿಗೊಳಿಸಿದ್ದವು. “ಓಹ್ ನಿಮಗೆ ಮದುವೆಯಾಗಿದೆಯಾ, ಯಾವಾಗ ಬ್ರೇಕ್ ತಗೋತೀರಾ, ನಿಮ್ಮ ಫ್ಯೂಚರ್ ಪ್ಲಾನ್ ಏನು?” ಹಾಗೆ ಹೀಗೆ ಎಲ್ಲವನ್ನೂ ಅಸಹ್ಯ ರೀತಿಯಲ್ಲಿ ಅವಳಿಗೆ ಪ್ರಶ್ನೆ ಮಾಡುತ್ತಾ ಹೋದರು.

ಹುಡುಗಿ ವಿದೇಶದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಳು. ಅವಳಿಗೆ ತುಂಬಾ ಚೆನ್ನಾಗಿ ಕೋಡಿಂಗ್ ಬರುತ್ತಿತ್ತು.
ಹಾಗಾದರೂ ಸಹ ಹೆಣ್ಣು ಎಂಬ ಕಾರಣಕ್ಕೆ ಅವಳಿಗೆ ಸಾವಿರ ಪ್ರಶ್ನೆಗಳನ್ನ ಕೇಳುತ್ತಲೇ ಇದ್ದರು.
ಒಂದು ಕೆಲಸ ಸಿಗುವ ಮುನ್ನ ಅವಳು ೨೫ ಕಂಪೆನಿಗಳನ್ನ ಅಲೆದಿದ್ದಳು. ಎಲ್ಲಾ ಕಂಪೆನಿಗಳಲ್ಲೂ ಇದ್ದ ಮಾನವ ಸಂಪನ್ಮೂಲ ವಿಭಾಗದ (ಹೆಚ್ ಆರ್ ಡಿ) ಅಧಿಕಾರಿಗಳು ಹೆಣ್ಣು ಮಕ್ಕಳೇ. ಅವರೇ ಹುಡುಗಿಗೆ ಇಂತಹ ಪ್ರಶ್ನೆಗಳನ್ನ ಕೇಳುತ್ತಿದ್ದದ್ದು. ಅವಳು ಯಾವಾಗ ಮಕ್ಕಳು ಮಾಡಿಕೊಳ್ಳುತ್ತಾಳೆ ಎಂದು ಅವಳ ಅಮ್ಮನೇ ಕೇಳಿರಲ್ಲ. ಕಂಡ ಕಂಡ ಅಪರಿಚಿತ ಹೆಚ್ ಆರ್ ಓ ಗಳಿಗೆ ಅವಳ ಮದುವೆ, ಗಂಡನ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಬೇಕಾಯಿತು.

ಇದು ಉದ್ಯೋಗದಲ್ಲಿರುವ ಹೆಣ್ಣು ಮಕ್ಕಳ ನಿತ್ಯ ಬವಣೆ. ಗಂಡಸರಿಗೆ ೩ ರೌಂಡ್ ಸಂದರ್ಶನವಾಗಿ ಬನ್ನಿ ಎಂದು ಕರೆಯುವ ಮುನ್ನ ಹೆಣ್ಣು ಮಕ್ಕಳಿಗೆ ಇನ್ನೊಂದು ನಾಲ್ಕು ರೌಂಡ್ ಜಾಸ್ತಿ ಮಾಡಿ ಈ ಥರದ ಸ್ವಂತ ಪ್ರಶ್ನೆಗಳನ್ನ ಬಹಳ ಸಲೀಸಾಗಿ ಕೇಳುತ್ತಾರೆ. ಹುಡುಗಿಯರಿಗೆ ಅವಳ ಅಪ್ಪ ಎಷ್ಟು ಸಿರಿವಂತ, ಬುದ್ಧಿವಂತ ಅಥವಾ ಅವಳ ಗಂಡ ಇನ್ನೆಷ್ಟು ಸಿರಿವಂತ ಬುದ್ಧಿವಂತ ಎಂಬುದರ ಮೇಲೆ ಅವಳ ಕೆಲಸ ಸೀರಿಯಸ್ನೆಸ್ಸನ್ನು ಅಳೆಯಲು ಹೇಸುವುದಿಲ್ಲ. ಒಂದು ಸಂದರ್ಶನದಲ್ಲಿ “ಅಲ್ಲ ಸೌತ್ ಇಂಡಿಯನ್ ಮದುವೆಯಾದ ಹುಡುಗಿಯರಿಗೆ ಟ್ರಾವೆಲ್ ಮಾಡೋದಕ್ಕೆ ಮನೆಯಲ್ಲಿ ಬಿಡುತ್ತಾರಾ?” ಎಂಬ ಪ್ರಶ್ನೆಯನ್ನು ಕಂಪೆನಿಯ ದೊಡ್ಡ ಡೈರೆಕ್ಟರ್ ಕೇಳಿದ್ದರು. ಇಲ್ಲಿ ಸೌತ್ ಇಂಡಿಯನ್, ಮದುವೆ ಎರಡೂ ನೆಗೆಟೀವ್ ಅಂಶಗಳು ಎಂದು ಹುಡುಗಿಗೆ ಅರಿವಾಗಿದ್ದು ಆವಾಗಲೇ.

ಇನ್ನು ಕೋಡಿಂಗ್ ಕೆಲಸದಲ್ಲಿ ಗಂಡು ಮಕ್ಕಳದ್ದೇ ಪಾರುಪತ್ಯ. ಅಪ್ಪಿ ತಪ್ಪಿ ಸಂದರ್ಶನಕ್ಕೆ ಹೆಣ್ಣು ಮಕ್ಕಳು ಹಾಜರಾದರೆ “ಓಹ್ ಟೆಸ್ಟಿಂಗಾ ..?” ಎಂದು ಪ್ರಶ್ನೆ ಮಾಡುತ್ತಾರೆ. ಇಲ್ಲಾ ಡೆವ್ಎಂದಾಗ ಗಂಡು ಮಕ್ಕಳನ್ನ ಅಳೆಯುವುದಕ್ಕಿಂತ ಕಡಿಮೆ ತಕ್ಕಡಿಯಲ್ಲಿ ಹಾಕಿ ತೂಗಿ ನಂತರ ” ಪರವಾಗಿಲ್ಲ ಹುಡುಗಿಯಾದರೂ ಕೋಡಿಂಗ್ ಚೆನ್ನಾಗಿ ಮಾಡುತ್ತಾಳೆ” ಎಂಬ ಹುಚ್ಚು ಪ್ರಶಂಸೆಯನ್ನೂ ನೀಡುತ್ತಾರೆ.

ಸ್ಪೋರ್ಟ್ಸ್ ಕಾಮೆಂಟರಿ ಮಾಡುವ ಮಯಾಂತಿ ಲ್ಯಾಂಗರ್ ಒಂದು ಸಂದರ್ಶನದಲ್ಲಿ ಹೇಳುತ್ತಿದ್ದದ್ದು ನೆನಪಿಗೆ
ಬರುತ್ತದೆ. ಆಕೆಯನ್ನ ಕೆಲಸಕ್ಕೆ ಸಂದರ್ಶನ ಮಾಡುವಾಗ ಅಲ್ಲಿದ್ದ ಪ್ಯಾನೆಲಿಸ್ಟ್‍ಗಳು “ನಿನಗೆ ವೈಡ್ ಬಾಲ್ ಬಗ್ಗೆ ಗೊತ್ತಾ, ಕ್ರಿಕೆಟ್ ಪಿಚ್ ಎಷ್ಟು ಯಾರ್ಡ್ ಇರುತ್ತದೆ” ಎಂಬ ತುಂಬಾ ಬೇಸಿಕ್ ಪ್ರಶ್ನೆಯನ್ನ ಕೇಳಿ ನಗುತ್ತಿದ್ದರಂತೆ. ಹುಡುಗಿ ಅವರ ಚಾನೆಲ್ಲಿಗೆ ಬಂದರೆ ಗ್ಲಾಮರ್ ಹೆಚ್ಚಾಗುತ್ತದೆ, ಹೆಚ್ಚು ಜನ ನೋಡುತ್ತಾರೆ ಎಂಬ ಅನಿಸಿಕೆಯೊಂದಿಗೆ ಅವರನ್ನ ಮೊದಲ ಎಪಿಸೋಡಿಗೆ ಕಳಿಸಿದ್ದರಂತೆ. ಆಮೇಲೆ ಆಕೆ ಕ್ರಿಕೆಟ್ಟನ್ನ ಅರೆದು ಕುಡಿದು ಮಾತಾಡಿದ ಮೇಲೆ ಅವಳ ಸ್ಕರ್ಟಿನ ಲೆಂಥಿಗಿಂತ ಅವಳ ಮಾತಿಗೆ ಬೆಲೆಕೊಡೋದಕ್ಕೆ ಶುರು ಮಾಡಿದ್ದರು ಎಂದು ಹೇಳಿಕೊಂಡಿದ್ದರು. ಆಗಿನ ಕಾಲದಲ್ಲಿ ಕ್ರೀಡೆ ಬಗ್ಗೆ ಸಿಕ್ಕಾಪಟ್ಟೆ ವಿಶ್ಲೇಷಣೆ ಮಾಡುತ್ತಿದ್ದ ಶಾರದಾ ಉಗ್ರ ಅವರಿಗಂತೂ ಡ್ರೆಸ್ಸಿಂಗ್ ರೂಮಿಗೆ ಹೋದರೆ ಆಕೆ ಯಾರದ್ದೋ ಗರ್ಲ್ ಫ್ರೆಂಡ್ ಆಗಿರಬಹುದು ಎಂದು ಊಹಿಸುವಷ್ಟು ಅವಲಕ್ಷಣವಾಗಿತ್ತು ಎಂದು ಅವರೇ ಬರೆದುಕೊಂಡಿದ್ದರು.

ಇನ್ನು ಹೆಣ್ಣು ಮಕ್ಕಳು ಕೆಲಸಕ್ಕೆ ಹೋದಾಗ “ಅಯ್ಯೋ ಮನೇಲಿ ಕೂತಿರೋ ಬದ್ಲು ಏನೋ ಒಂದು ಮಾಡ್ತಾರೆ ಬಿಡು” ಎಂಬ ಮೂದಲಿಕೆಯೋ ಇಲ್ಲ “ಅವರ ಮನೇಲಿ ಅಷ್ಟು ಮಾಡಿದರೂ ಯಾಕೆ ಸುಮ್ನೆ ಒದ್ದಾಡಿ ಕೆಲಸ ಮಾಡಬೇಕು” ಎಂದು ಬಹಳ ಸಲೀಸು ಮಾತೋ ಆಡಿಬಿಡುತ್ತಾರೆ. ಮದುವೆಯಾದ ಮೇಲೆ ಕೆಲಸಕ್ಕೆ ಕಳಿಸುತ್ತಾರಾ, ಹಾಡೋದಕ್ಕೆ, ಬರೆಯೋದಕ್ಕೆ ಬಿಡುತ್ತಾರಾ ಎಂಬ ಹಲವು ಹುಚ್ಚು ಪ್ರಶ್ನೆಗಳನ್ನು
ಹುಡುಗಿಯ ಥರದವರು ಕೇಳಿಸಿಕೊಳ್ಳುತ್ತಲೇ ಬಂದಿದ್ದಾರೆ. ಇನ್ನೊಂದು ಹತ್ತು ತಲೆಮಾರುಗಳು
ಆದಮೇಲೆ ಇವೆಲ್ಲಾ ಹೋಗತ್ತಾ ? ಅಥವಾ ಇದಕ್ಕಿಂತ ಮುಂದುವರೆಯುತ್ತೀವಾ ಎನ್ನುವ ಪ್ರಶ್ನೆ ಗೆ ಉತ್ತರವಿನ್ನೂ ಸಿಕ್ಕಿಲ್ಲ.

ಆಫೀಸಿನಲ್ಲಿ “ಬ್ಯಾಚುಲರ್ ಮೆನ್ ಗಳಿಗೆ ಈ ಪ್ರಾಜೆಕ್ಟ್ ಕೊಡಬೇಕು ಯಾಕೆಂದರೆ ಅವರು ಲೇಟ್ ನೈಟ್ ಇರಬಹುದು” ಎಂದು ಪೆಕರು ಪೆಕರಾಗಿ ಮಾತಾಡುವವರಿಗೆ ಏನು ಉತ್ತರಿಸಬಹುದು ಎಂದು ಹುಡುಗಿಯರು ಯೋಚನೆ ಮಾಡುತ್ತಲೇ ಇದ್ದಾರೆ. ಅಲ್ಲಾ ನಾವು ಸಮಾನತೆ ಅದು ಇದು ಎಂದು ರಸ್ತೆಗಿಳಿದರೂ ಈ ಹೆಣ್ಣು ಮಗು ಆಫೀಸಿನಲ್ಲಿ ಏನು ಕೆಲಸ ಮಾಡುತ್ತಾಳೆ ಎಂಬ ಯಕ್ಷ ಪ್ರಶ್ನೆಯನ್ನ ಉತ್ತರಿಸಲು ಇನ್ಯಾವ ದೇವರು ಅವತಾರ ಎತ್ತಿ ಬರಬೇಕೋ ಗೊತ್ತಿಲ್ಲ…

  • ಮೇಘನಾ ಸುಧೀಂದ್ರ


Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *