ಮೇಘ ಸಂದೇಶ/ ಹುಡುಗಿಯರಿಗೆ ಕಂಡಲ್ಲಿ ಗುಂಡು – ಮೇಘನಾ ಸುಧೀಂದ್ರ
ನಮ್ಮ ಬಾಯಿ, ನಮ್ಮ ಮನಸ್ಸು ನಾವೇನು ಬೇಕಾದರೂ ಮಾತಾಡಬಹುದು… ಆದರೆ ಬೇರೆಯವರ ವಿಚಾರವನ್ನ ಅಷ್ಟು ಸುಲಲಿತವಾಗಿ ಮಾತಾಡುವ ಅವಶ್ಯಕತೆ ಇಲ್ಲ. ಒಬ್ಬರ ಜೊತೆ ಮಾತು ಅಥವಾ ಹರಟೆ ನಮ್ಮ ಬೌದ್ಧಿಕ ಮಟ್ಟವನ್ನ ಸ್ವಲ್ಪವಾದರೂ ಏರಿಸಬೇಕು.
ಒಂದು ಗೆಳತಿಯರ ಗುಂಪು ಸ್ಟೆಗಿಯಲ್ಲಿ ನಾಲ್ಕಾರು ವರ್ಷದ ನಂತರ ಕೂತು ಮಾತಾಡುತ್ತಿದ್ದರು. ಒಬ್ಬಳಿಗೆ ಮದುವೆಯಾಗಿ ಮಗು ಆಗಿದೆ, ಒಬ್ಬಳಿಗೆ ಈಗಷ್ಟೆ ಮದುವೆಯಾಗಿದೆ, ಇನ್ನೊಬ್ಬಳಿಗೆ ಮದುವೆ ಗೊತ್ತಾಗಿದೆ, ಕೊನೆಯವಳಿಗೆ ಮದುವೆ ಮಾಡಿಕೊಳ್ಳುವ ಮನಸ್ಸಿಲ್ಲ. ಇಷ್ಟು ಮದುವೆ ಎಂಬ ಪದ ಬಳಸಿದ್ದಕ್ಕೆ ಒಂದು ಕಾರಣ ಏನೆಂದರೆ ಅಂದಾಜು 22 ವರ್ಷದಿಂದ 30 ವರ್ಷಕ್ಕೆ ಬರುವ ಹುಡುಗಿಯರಿಗೆ ಕಂಡಲ್ಲಿ ಗುಂಡು ಎನ್ನುವ ಮಾತಿನ ಹಾಗೆ ಕಂಡಲ್ಲಿ ಈ ಪ್ರಶ್ನೆಯನ್ನ ಕೇಳುತ್ತಾ ಇರುತ್ತಾರೆ. ಮದುವೆಯೆನ್ನುವುದು ಈ ಕಾಲದ ಅವಶ್ಯಕತೆಯಲ್ಲ ಎಂಬ ಸಣ್ಣ ಸತ್ಯವೂ ಅವರಿಗೆ ಗೊತ್ತಿರುವುದಿಲ್ಲ.
ಎನಿವೇ, ಇಲ್ಲಿ ನಾಲ್ಕು ಜನ ಗೆಳತಿಯರು ಕೂತಿದ್ದಾರಲ್ಲವಾ , ಅವರು ಒಬ್ಬೊಬ್ಬರೆ ಮನಸ್ಸಿನಾಳದ ಮಾತುಗಳನ್ನ ಆಡುತ್ತಾ ಕೂತಿದ್ದಾರೆ. ಮಗುವಾದ ಮೇಲೆ ಸಿಗದೇ ಹೋದ ಗೆಳತಿ ನಂಬರ್ 1 ಳನ್ನು ಎಲ್ಲರೂ ಕಾಲೆಳೆಯುತ್ತಿದ್ದಾರೆ.
ಅವಳು ಸ್ವಲ್ಪ ಹೊತ್ತು ಮಗಮ್ಮಾಗಿ ಕೂತು ನಂತರ ಗೆಳತಿ 4 ಳಿಗೆ ” ನೋಡೆ ಮದುವೆಯಾದ ಮೇಲೆಯಾದರೂ ನಿನಗೆ ಸರಿ ಹೋಗಲ್ಲಿಲ್ಲ ಎಂದಾಗ ಬಿಡಬಹುದು, Parenting ಹಾಗಲ್ಲ, ಕೆಲವೊಮ್ಮೆ ಕೂದಲು ಕಿತ್ತು ಎಲ್ಲಿ ಆದರೂ ಓಡಿ ಹೋಗೋಣ ಎಂದೆನಿಸುತ್ತದೆ” ಎಂದು ತನ್ನ ನಿದ್ದೆಯಿಲ್ಲದಿರುವ ರಾತ್ರಿಗಳನ್ನು ನೆನಪಿಸಿಕೊಂಡು ಕಣ್ಣೀರು ಇಡುತ್ತಿದ್ದಳು.
ಮದುವೆಯಾದವಳು ಮಾತ್ರ, ” ನಿನಗೆ ಯಾವಾಗಲೂ ಒಬ್ಬರಿರುತ್ತಾರೆ ಎಂಬ ಸೆಕ್ಯೂರಿಟಿ ಇದೆಯಲ್ಲ, ಅದಕ್ಕಿಂತ ಅಡ್ವಾಂಟೇಜ್ ಮದುವೆಯಲ್ಲಿ ಬಿಟ್ಟೆ ಇನ್ನೆಲ್ಲೂ ಸಿಗೋದಕ್ಕೆ ಸಾಧ್ಯ ಇಲ್ಲ, ಮದುವೆ ಇಸ್ ಬ್ಲಿಸ್” ಅಂದಳು.
ಗೆಳತಿ 4 ಮಾತ್ರ ನಾಳೆ ರಾಯಲ್ ಎನ್ಫೀಲ್ಡಿನಲ್ಲಿ ಆರಾಮಾಗಿ ಒಂದು ರೌಂಡ್ ಟ್ರಿಪ್ ಎಲ್ಲಿ ಹೋಗೋದು ಎನ್ನುವ ವಿಚಾರ ಮಾಡುತ್ತಿದ್ದಳು. “ಒಂದು ಮಟ್ಟಿಗೆ ಜವಾಬ್ದಾರಿ ಕಳೆದುಕೊಳ್ಳುವ ವಿಧಾನವಾಗಿ ಮುಂಚೆ ಹೆಣ್ಣಿಗೆ ಮದುವೆಯಾಗುತ್ತಿತ್ತು. ಈಗಲೂ ಎಷ್ಟೋ ಮದುವೆಗಳಲ್ಲಿ “ಅಬ್ಬಾ ಸದ್ಯ ಆಯ್ತಲ್ಲ ” ಎಂದು ಎನುವ ನಿಟ್ಟುಸಿರು ಬಿಟ್ಟೆ ಕೆಲವರು ಮದುವೆ ಮಾಡಿಕೊಡುತ್ತಾರೆ. ಆ ಡಿಮ್ಯಾಂಡುಗಳ ಪಟ್ಟಿ ನೋಡಿ ತಲೆ ಕೆಡುತ್ತದೆ” ಎಂದು ಗೆಳತಿ 3 ಹೇಳುತ್ತಿದ್ದಳು.
ಹೊರದೇಶಗಳಲ್ಲಿ ನಿನಗೆ ಮದುವೆಯಾಗಿದೆಯಾ, ಮಕ್ಕಳಾಗಿದೆಯಾ ಎಂದು ಕೇಳುವ ಪ್ರಶ್ನೆ ತೀರ ಪರ್ಸನಲ್ ಆದ್ದದ್ದು. ಇಲ್ಲಿ ಸಾರ್ವಜನಿಕ ಮಾಹಿತಿಯಾಗುತ್ತಿದೆ. ಪಕ್ಕದ ಮನೆಯಲ್ಲಿ ಮದುವೆಯಾಯಿತು, ಮುಂದಿನ ಮನೆಯಲ್ಲಿ ಮಕ್ಕಳಾಯಿತು, ಆಚೆ ಮನೆಯಲ್ಲಿ ಗಂಡು ಮಗು ಹುಟ್ಟಿತು ಹೀಗೆ ಹಾಗೆ ಎಂದು ಯಾವುದೋ ಸಮಾರಂಭದಲ್ಲಿ ಕ್ಷಣಕ್ಷಣದ ಸುದ್ದಿಯ ಹಾಗೆ ಬಿತ್ತರಗೊಳಿಸುತ್ತಿರುತ್ತಾರೆ. ಇದರಲ್ಲಿ ಹೆಣ್ಣುಮಕ್ಕಳೇ ಹೆಚ್ಚು. ಒಂದು ಸಮಾರಂಭದಲ್ಲಿ ಒಂದು ಗುಂಪು ಆಂಟಿಯರು ಕೂತಿದ್ದಾರೆ ಎಂದರೆ ಅಲ್ಲಿ ಯಾರ ಮದುವೆಯ ಮಹೂರ್ತವೋ, ಪ್ರಸ್ಥದ ಮಹೂರ್ತವೋ, ಹೆಣ್ಣಿನ ಜಾತಕವೋ, ಚಾರಿತ್ರ್ಯವೋ ವಧೆಯಾ ಗುತ್ತಿರುತ್ತದೆ, ಇಲ್ಲಾ ಗಂಡು ಮಕ್ಕಳ ಸಂಬಳ, ಅವರ ಸೊಸೆ ಮಾಡ್ ಆಗಿದ್ದರು ಪೀರಿಯಡ್ಸ್ ದಿನ ಮೂಲೆ ಸೇರುತ್ತಾಳೆ ಎಂದು ಹೊಗಳಿಕೊಳ್ಳುತ್ತಿರುವ ಗುಂಪಿನಲ್ಲಿ ಹೊಸದಾಗಿ ಮದುವೆಯಾದವರು ಕಂಡ ಕ್ಷಣವೇ ಓಹ್ ಯಾವಾಗ ಮಗು, ಏನ್ ಕಥೆ , ಸಾಕು ಓಡಾಡಿದ್ದು ಎಂದು ಬೇರೆಯವರ ಹಣೆ ಬರಹವನ್ನ ಇವರೇ ಬರೆಯುವ ಆತುರದಲ್ಲಿರುತ್ತಾರೆ.
ಒಂದು ದೊಡ್ಡ ವಾರ ಪತ್ರಿಕೆ ಭಾರತದ ಮದುವೆಯ ಬಗ್ಗೆ ಒಂದು ಸರ್ವೆ ಮಾಡಿತ್ತು. ಅದರಲ್ಲಿ ಸುಮಾರು ಹೆಣ್ಣುಮಕ್ಕಳಿಗೆ ಅವರ ಮದುವೆ ಒಂದು ಸಾರ್ವಜನಿಕ ವಿಷಯವಾಗುವುದು ಇಷ್ಟವಿರುವುದಿಲ್ಲ. ಮದುವೆಯೊಂದೇ ಅವರ ಜೀವನದ ಉದ್ದೇಶವೂ ಆಗಿರುವುದಿಲ್ಲ. ನಮ್ಮ ಫಂಕ್ಷನಿನ ಮಾತುಗಳ್ಯಾಕೆ ಇಷ್ಟು ನೀರಸವಾಗಿರುತ್ತದೆ ಎಂದು ನನಗೆ ಇನ್ನೂ ಆಶ್ಚರ್ಯವಾಗುತ್ತದೆ. ಇಲ್ಲಿ ಸಿ ಎ ಎ ಗಾಗಿ ದೇಶ ಹತ್ತಿ ಉರಿಯುತ್ತಿದೆ, ಈ ವರ್ಷದ ಎಲ್ಲಾ ವಿಶ್ವ ಸುಂದರಿಯ ಪಟ್ಟಗಳೂ ಬಿಳಿಯೇತರರು ಗೆದ್ದಿದ್ದಾರೆ, ಕನ್ನಡ ಸಾಹಿತ್ಯ ಸಮ್ಮೇಳನ ಹತ್ತಿರ ಬರುತ್ತಿದೆ, ಕನ್ನಡದಲ್ಲಿ ಒಳ್ಳೆ ಸಿನೆಮಾ ರಿಲೀಸ್ ಆಗಿದೆ, ಗಣೇಶಯ್ಯನವರ ಹೊಸ ಮಹಾಗ್ರಂಥವೇ ಬಂದಿದೆ, ಒಂದು ಹುಡುಗಿ ಇಂಜಿನಿಯರಿಂಗ್ ಬಿಟ್ಟು ಯುಟ್ಯೂಬ್ ಚಾನೆಲ್ಲಿನಲ್ಲಿ ಲಕ್ಷಾಂತರ ದುಡಿಯುತ್ತಿದ್ದಾಳೆ, ದೀಪಿಕಾ ಪಡುಕೋಣೆ ಆಸಿಡ್ ಅಟ್ಯಾಕಿನ ಬಗ್ಗೆ ಸಿನೆಮಾ ಮಾಡುತ್ತಿದ್ದಾಳೆ, ಈಸಿಯಾಗಿ ರೋಟಿ ಮಾಡಲು ರೋಟಿ ಮೇಕರ್ ಬಂದಿದೆ, ಹೊಸ ಕೋಡಿಂಗ್ ಲ್ಯಾಂಗ್ವೇಜ್ ಬಂದಿದೆ ಇವಿಷ್ಟನ್ನೂ ಬಿಟ್ಟು ಯಾಕೆ ಅಲ್ಲಿ ಕೆಂಪು ಡ್ರೆಸ್ಸಿನಲ್ಲಿ ಮುದ್ದಾಗಿ ನಡೆದುಕೊಂಡು ಬರುವವಳನ್ನ “ನಿನ್ನ ಮದುವೆ ಯಾವಾಗ, ಬೇಗ ಮಾಡಿಕೋ” ಎಂದು ಕೇಳುವ ಕೆಟ್ಟ ಮನಸ್ಸೋ ನನಗೆ ಗೊತ್ತಾಗುವುದಿಲ್ಲ.
ನಮ್ಮ ಸಮಾರಂಭದ ಮಾತುಗಳು ಮನೆ, ಮಕ್ಕಳು, ಮದುವೆ ಎನ್ನುವ ತೀರಾ ನಾರ್ಮಲ್ ಆದ ವಿಷಯದಿಂದ ಕೊಂಚ ಬದಲಾಗಬೇಕು. ಹೌದು ನಮ್ಮ ಬಾಯಿ, ನಮ್ಮ ಮನಸ್ಸು ನಾವೇನು ಬೇಕಾದರೂ ಮಾತಾಡಬಹುದು. ಆದರೆ ಬೇರೆಯವರ ವಿಚಾರವನ್ನ ಅಷ್ಟು ಸುಲಲಿತವಾಗಿ ಮಾತಾಡುವ ಅವಶ್ಯಕತೆ ಇಲ್ಲ. ಒಬ್ಬರ ಜೊತೆ ಮಾತು ಅಥವಾ ಹರಟೆ ನಮ್ಮ ಬೌದ್ಧಿಕ ಮಟ್ಟವನ್ನ ಸ್ವಲ್ಪವಾದರೂ ಏರಿಸಬೇಕು, ಅಥವಾ ನಾವು ಹೊಸ ವಿಷಯವನ್ನ ಅವರಿಗೆ ತಲುಪಿಸಬೇಕು.
ಕೆಲವೊಮ್ಮೆ ನಮಗೆ ಏನೂ ವಿಷಯವಿಲ್ಲದಿದ್ದಾಗ ಈ “ಹೆಲ್ತಿ ಗಾಸಿಪ್” ಎನ್ನುವ ಹೆಸರಲ್ಲಿ ಬೇಕು ಬೇಕಾದನ್ನ ಬೇರೆಯವರ ತಲೆಮೇಲೆ ಅಂಟಿಸುವ ಹುನ್ನಾರ ನಡೆದಿರುತ್ತದೆ. ಇದು ಗಂಡಸರು ಮಾಡುವುದಿಲ್ಲವಾ ? ಹೂ ಮಾಡುತ್ತಾರೆ ಒಟ್ಟೂ ಸೇರಿಸಿ ಈ ಮಾತನ್ನ ಮುರಿದರೆ ನಮಗೇ ವಾಸಿ.
ಡಿವಿಜಿ ಬಹಳ ಮುಂಚೆಯೇ ಬರೆದಿದ್ದಾರೆ, ಇದನ್ನ ಪಾಲಿಸಿದ್ದರೆ ಉತ್ತಮ –
ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ ।
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ ॥
ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿ- ।
ನ್ನುದ್ಧಾರವೆಷ್ಟಾಯ್ತೊ? – ಮಂಕುತಿಮ್ಮ ॥
ಅಲ್ವಾ ?

ಮೇಘನಾ ಸುಧೀಂದ್ರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.