ಮೇಘ ಸಂದೇಶ / ವೈವಿಧ್ಯಮಯ ವರ್ಚುಯಲ್ ಕಿರುಕುಳ – ಮೇಘನಾ ಸುಧೀಂದ್ರ
ವರ್ಕ್ ಫ್ರಮ್ ಹೋಮ್- ಮನೆ ಮತ್ತು ಆಫೀಸಿನ ಮಧ್ಯೆ ಯಾವುದೇ ಗೆರೆ ಇಲ್ಲದೆ ಎಲ್ಲರೂ ಕೆಲಸ ಮಾಡುತ್ತಿರುತ್ತಾರೆ. ಸುಮಾರು ಹುಡುಗಿಯರಿಗೆ ಸ್ವಲ್ಪ ಖುಷಿಯಾಗಿದೆ. ಜಾಸ್ತಿ ಹುಚ್ಚುತನವಾದರೆ ಕಾಲ್ ಕಟ್ ಮಾಡಬಹುದು ಎಂಬ ಒಂದು ಅಸ್ತ್ರ ಸುಮಾರು ಹೆಣ್ಣುಮಕ್ಕಳಿಗೆ ವರದಾನವಾಗಿದೆ. ಆದರೆ ಕಿರುಕುಳಗಳು ಇವೆ ಎಂಬುದನ್ನ ಮನಗಾಣಲು ತುಂಬಾ ದಿವಸಗಳು ಬೇಕಾಗಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಬ್ಲಾಕ್ ಮಾಡುವ ಹಾಗೆ ಕಚೇರಿಯ ಜನರನ್ನ ಬ್ಲಾಕ್ ಮಾಡಲು ಸಾಧ್ಯವಿಲ್ಲ. ಈ ವರ್ಚುಯಲ್ ಅಂಗಳದಲ್ಲಿ ಕಿರುಕುಳಗಳನ್ನ ಡಿಫೈನ್ ಮಾಡುವುದು ತುಂಬಾ ಕಷ್ಟ.
ಕೋವಿಡ್ ಬಂದು ಕಂಪೆನಿಗಳಲ್ಲಿ ವರ್ಕ್ ಫ್ರಮ್ ಹೋಮ್ ಖಾಯಂ ಆಗಿದೆ. ಮನೆ ಮತ್ತು ಆಫೀಸಿನ ಮಧ್ಯೆ ಯಾವುದೇ ಗೆರೆ ಇಲ್ಲದೆ ಎಲ್ಲರೂ ಕೆಲಸ ಮಾಡುತ್ತಿರುತ್ತಾರೆ. ಬಟ್ಟೆ ಒಣಗಿ ಹಾಕುವಾಗ ವರ್ಕ್ ಕಾಲ್ಸ್, ಒಗ್ಗರಣೆ ಸದ್ದಿನೊಂದಿಗೆ ನಡೆಯುವ ಕೋಡ್ ಕಂಪೈಲ್ ಹೀಗೆ ಕಾಲ ನೂಕುವಾಗ ಕೆಲವಾರು ಹೆಣ್ಣುಮಕ್ಕಳಿಗೆ ಆಫೀಸಿನಲ್ಲಿ ನಡೆಯುವ ಕಿರುಕುಳಗಳು ಕಡಿಮೆಯಾಗಿದೆ. ಎಲ್ಲೋ ಲಂಚಿಗೆ ಹೋಗೋಣ, ಮತ್ತೆಲ್ಲೋ ಗ್ರೂಪ್ ಔಟಿಂಗ್, ಇನ್ನೆಲ್ಲೋ ಮನೆಗೆ ಡ್ರಾಪ್ ಮಾಡುತ್ತೇನೆ ಎಂಬ ಮಾತುಗಳು ಪೂರ್ತಿ ಇಲ್ಲದೆ ಇರುವುದು ಸುಮಾರು ಹುಡುಗಿಯರಿಗೆ ಸ್ವಲ್ಪ ಖುಷಿಯಾಗಿದೆ. ತುಂಬಾ ಜಾಸ್ತಿ ಹುಚ್ಚುತನವಾದರೆ ಕಾಲ್ ಕಟ್ ಮಾಡಬಹುದು ಎಂಬ ಒಂದು ಅಸ್ತ್ರ ಸುಮಾರು ಹೆಣ್ಣುಮಕ್ಕಳಿಗೆ ವರದಾನವಾಗಿದೆ.
ಆದರೆ ಕಿರುಕುಳಗಳು ಇವೆ ಎಂಬುದನ್ನ ಮನಗಾಣೋದಕ್ಕೆ ತುಂಬಾ ದಿವಸಗಳು ಬೇಕಾಗಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಬ್ಲಾಕ್ ಮಾಡುವ ಹಾಗೆ ಕಚೇರಿಯ ಜನರನ್ನ ಬ್ಲಾಕ್ ಮಾಡಲು ಸಾಧ್ಯವಿಲ್ಲ. ಕ್ರಿಟಿಕಲ್ ವಿಷಯಗಳು ಯಾವುದ್ಯಾವುದೋ ಟೈಮ್ ಜೋನಿನಲ್ಲಿ ನಡೆಯುವುದರ ಪರಿಣಾಮ ಒಮ್ಮೊಮ್ಮೆ ನಮ್ಮ ಸಮಯವನ್ನು ಮೀರಿ ಕೆಲಸ ಮಾಡಬೇಕಾಗುತ್ತದೆ. ಹೆಣ್ಣುಮಕ್ಕಳು ತಾವು ಕೆಲಸಕ್ಕೆ ಬಹಳ ನಿಷ್ಠರು ಎಂದು ಗಂಡಸರಿಗಿಂತ ಜಾಸ್ತಿ ತೋರಿಸಬೇಕಾಗುತ್ತದೆ. ಹಾಗಾಗಿ ಕೆಲವೊಮ್ಮೆ ಅವರು ವಿಪರೀತ ಕೆಲಸ ಮಾಡುವ ರಿಸೋರ್ಸುಗಳಾಗಿ ಬದಲಾಗುತ್ತಾರೆ. ಮಗುವಿಗೆ ಊಟ ಮಾಡಿಸಿಕೊಂಡು ಬೇರೆ ಭಾಷೆಯಲ್ಲಿ ಮಾತಾಡಿಕೊಂಡು ಮನೆ, ಮಗು ಎಲ್ಲವನ್ನು ಸಂಭಾಳಿಸುತ್ತಿರುತ್ತಾರೆ.
ಈ ವರ್ಚುಯಲ್ ಅಂಗಳದಲ್ಲಿ ಕಿರುಕುಳಗಳನ್ನ ಡಿಫೈನ್ ಮಾಡುವುದು ತುಂಬಾ ಕಷ್ಟ. ಒಂದು ಹೆಣ್ಣಿಗೆ ಅದು ಅಸಹ್ಯ ಅನ್ನಿಸಬಲ್ಲ ಕಾರಣಗಳು ಕೊಟ್ಟಾಗ ಅದು ಕಿರುಕುಳ ಅನ್ನಿಸಿಕೊಳ್ಳುತ್ತದೆ. ಈಗ ಹೆಣ್ಣುಮಕ್ಕಳ ಟಾಲೆರೆಬೆಲ್ ಲಿಮಿಟ್ ಹೇಗೆ ಎನ್ನುವುದನ್ನ ಹೇಳುವುದು ಕಷ್ಟ. ಒಮ್ಮೆ ರಾತ್ರಿ ಹನ್ನೊಂದು ಘಂಟೆಗೆ ವಿಡಿಯೋ ಕಾಲಿಗೆ ಬರಬೇಕು, ಮಾತಾಡಬೇಕು ಎಂದು ಗಂಡಸು ಬಾಸ್ ಹೇಳಿದರೆ ಅದು ಒಂದು ಈ ಮೇಲಿನಲ್ಲಿ ಅಥವಾ ಮರುದಿವಸ ಬೆಳಗ್ಗೆ ಸಾಲ್ವ್ ಆಗುವುದುದಾದರೆ ವಾಯ್ಸ್ ಕಾಲ್ ಬದಲು ಬೇಕು ಬೇಕು ಅಂತ ವಿಡಿಯೋ ಕಾಲಿನಲ್ಲಿ ಬರಲೇಬೇಕು ಎಂದು ಒತ್ತಾಯ ಮಾಡಿದರೆ ಈಗ ಅದು ಕಿರುಕುಳ ಎಂದು ಪರಿಗಣಿಸಬಹುದು. ಅಥವಾ ವಿಡಿಯೋ ಕಾಲ್ ಮಾಡಿದಾಗ “ನಿನ್ನ ಮಗು ನಿನ್ನನ್ನ ಪದೇ ಪದೇ ಕರೆಯುತ್ತಿದೆ, ಅದಕ್ಕೆ ನಿನಗೆ ಯಾವುದೇ ಸೀರಿಯಸ್ನೆಸ್ ಇಲ್ಲ ಕೆಲಸ ಮಾಡುವುದರಲ್ಲಿ” ಹೇಳುವುದು ಸಹ ಕಿರುಕುಳದ ಒಂದು ಭಾಗವೇ ಸರಿ. ಈ ತರಹದ ವಿಷಯಗಳನ್ನ ಸುಮ್ಮನೆ ಎಲ್ಲರ ಮುಂದೆ ಹೇಳಿದ್ದರೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗುತ್ತದೆ. ಈ ಸಮಯದಲ್ಲಿ ಎಲ್ಲರ ಕೈಯಲ್ಲೂ ಕೆಲಸ ಇದ್ದರೇ ಅದೇ ಪುಣ್ಯ ಎಂದು ಅಂದುಕೊಳ್ಳುವ ಹಾಗಾಗುತ್ತದೆ.
ಕಚೇರಿಯಲ್ಲಿ ನಡೆಯುವ ಕಿರುಕುಳಗಳು ಕೆಲವೊಮ್ಮೆ ಆಫೀಸು ಎಂಬ ಫಿಸಿಕಲ್ ಪರಿಧಿಯಲ್ಲೇ ಬರಬೇಕು ಎಂಬುದು ಇನ್ನೊಂದು ದೊಡ್ಡ ಸಮಸ್ಯೆ ಹೆಣ್ಣುಮಕ್ಕಳಿಗೆ. ವಿಡಿಯೋ ಕಾಲುಗಳು, ಆಡಿಯೋ ಕಾಲುಗಳು ವರ್ಕ್ ಫ್ರಮ್ ಹೋಮ್ ನ ಅವಿಭಾಜ್ಯ ಅಂಗ. ಅದರಲ್ಲಿ ಕಿರುಕುಳ ಎಂದರೆ ನಂಬುವುದಾದರೂ ಹೇಗೆ, ಅದನ್ನ ಡಿಫೈನ್ ಮಾಡುವುದು ಹೇಗೆ ಎಂಬುದು ದೊಡ್ಡ ಆಫೀಸರುಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಮುಂಚೆ ಕೋ ವರ್ಕರ್ಸ್ ದೂರವಾಣಿ ಸಂಖ್ಯೆ ಪರ್ಸನಲ್ ಇಂಪಾರ್ಮೆಶನ್ ಎಂದು ಕರೆಯಲಾಗುತ್ತಿತ್ತು. ಆಫೀಸಿನಲ್ಲಿ ಇರುವಷ್ಟು ಹೊತ್ತು ಕೆಲಸವಾಗುತ್ತಿತ್ತು. ನಂತರ ಮನೆಗೆ ಹೋದ ಮೇಲೆ ಯಾರಿಗೂ ಕರೆ ಮಾಡುವ ಪ್ರಮೇಯ ಬರುತ್ತಿರಲಿಲ್ಲ ಈಗ ಅದು ಸಾಧ್ಯವೇ ಇಲ್ಲ. ಇಂಟರ್ನೆಟ್ ಇಲ್ಲ, ಲ್ಯಾಪ್ ಟಾಪ್ ಇಲ್ಲ ಹೀಗೆ ಸಂದರ್ಭಗಳಾದಾಗ ಫೋನ್ ನಂಬರ್ಗಳ ವಿನಿಮಯ ಆಗಿರುತ್ತದೆ. ಅದರಲ್ಲಿ ಅವರ ವಾಟ್ಸಾಪ್ ಸಂಖ್ಯೆಯು, ನಂತರ ಅದರಲ್ಲಿ ಹಾಕುವ ಫೋಟೋಗಳು, ಸ್ಟೇಟಸ್ಸುಗಳನ್ನ ನೋಡಿ ಮೂದಲಿಸುವವರು ಮತ್ತು ಆ ನಂಬರಿಗೆ ಅಸಭ್ಯ ಮೆಸೇಜುಗಳನ್ನ ಕಳಿಸುವುದು ಕಡಿಮೆಯಾಗುವುದಿಲ್ಲ. ಕೆಲವಾರು ಮ್ಯಾನೇಜರುಗಳು ತಮ್ಮ ಕೆಲಸದ ವೇಳೆಯ ನಂತರ ಸುಮ್ಮನೆ ಮೆಸೇಜುಗಳನ್ನ ಕಳಿಸಿ ಉತ್ತರ ಬರದಿದ್ದಾಗ ಸುಮ್ಮನೆ ಅದನ್ನೂ ಆಫೀಸಿನ ಕೆಲಸದ ಅಪಡೇಟ್ ಸರಿಯಾಗಿ ಕೊಡಲಿಲ್ಲ ಎಂದೇ ಬೇಕಂತ ದೊಡ್ಡ ವಿಷಯವನ್ನೇ ಮಾಡುತ್ತಾರೆ.
ಯಾವ ಆಫೀಸಾದರು ತಮ್ಮ ಮಂದಿಗೆ ಆಗುತ್ತಿರುವ ಹಿಂಸೆಯನ್ನ ಚೆಕ್ ಮಾಡಬೇಕು. ಈ ತರಹದ ಸಣ್ಣತನಗಳನ್ನು ಕೆಲಸದ ಸಮಯದಲ್ಲಾದರೂ ಬಿಟ್ಟು ಎಲ್ಲರು ಒಂದೇ ಎಂಬ ಭಾವನೆಯನ್ನು ಬರಿಸುವುದು ಆಫೀಸಿನ ಎಚ್ ಆರ್ ಗಳ ಕರ್ತವ್ಯ. ಅಥವಾ ಹೆಣ್ಣಿನ ಘನತೆಯನ್ನು ಕೆಣಕುವ ಯಾವ ಮನುಷ್ಯನೂ ದೊಡ್ಡ ಹುದ್ದೆಯನ್ನು ಏರುವುದಕ್ಕೆ ಅರ್ಹನಲ್ಲ ಎಂಬುದನ್ನು ಮನಗಾಣಬೇಕಾಗಿದೆ.
ಅದೆಷ್ಟೊಂದು ವಿಷಯದಲ್ಲಿ ನಾವು ಮುಂದುವರೆಯಬೇಕು ಅಲ್ಲವೇ? ಈ ಕೋವಿಡ್ ಕಾಲದಲ್ಲಿ ಈ ವರ್ಚುಯಲ್ ಕಿರುಕುಳಗಳು ಕಡಿಮೆಯಾಗಲಿ, ಹೆಣ್ಣುಮಕ್ಕಳು ಧೃತಿಗೆಡದಿರಲಿ ಎಂಬುದೇ ನನ್ನ ಅಭಿಲಾಷೆ.

ಮೇಘನಾ ಸುಧೀಂದ್ರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.