Uncategorizedಅಂಕಣ

ಮೇಘ ಸಂದೇಶ / ಮೈಬಣ್ಣವೇ ಸೌಂದರ್ಯವಲ್ಲ – ಮೇಘನಾ ಸುಧೀಂದ್ರ

ಭಾರತದಲ್ಲಿ ೭೦ ಪ್ರತಿಶತ ಹೆಣ್ಣುಮಕ್ಕಳಿಗೆ ಹೀಗೆ ಫೇರ್ ಆಗಿರಬೇಕು ಎಂಬ ಆಸೆಯಿದೆ. ಸಂಗಾತಿಗಳು ಸಹ ಫೇರ್ ಆಗಿರಬೇಕು ಎಂಬ ಆಸೆಯಿರುತ್ತದೆ. ಅಂದರೆ ನಾವೇನು ಅಲ್ಲವೋ ಅದನ್ನ ನಾವು ಅಪೇಕ್ಷೆ ಪಡುತ್ತೇವೆ. ಆದರೆ ಒಂದು ಹೆಣ್ಣು ಸುಂದರಿಯಾಗಿರುವುದು ಅವಳ ಚರ್ಮದ ಬಣ್ಣದಿಂದ ಎನ್ನುವುದು ಎಷ್ಟು ಹಾಸ್ಯಾಸ್ಪದ! ಕಪ್ಪು, ಬಿಳುಪು, ಕಂದು – ಬಣ್ಣವಷ್ಟೆ, ಅದು ಸೌಂದರ್ಯದ ಸೂಚಕ ಅಲ್ಲ. ಅದು ಗುಣಲಕ್ಷಣಗಳನ್ನೂ ತೋರಿಸುವುದಿಲ್ಲ.

“ಆಹಾ ನೋಡು ಆ ಹುಡುಗಿ ಅದೇನ್ ಬಣ್ಣ, ಅದೆಷ್ಟು ಕಾಂತಿ, ಸಿಕ್ಕಾಪಟ್ಟೆ ಬಿಳಿ, ಏನು ಲಕ್ಷಣ ” ಎಂಬ ಮಾತು ಕೇಳಿದ್ದರೆ ನಾವು ಭಾರತದಲ್ಲೇ ಇದ್ದೀವಿ ಎಂದು ಅರ್ಥ ಆಗುತ್ತದೆ. ಇಲ್ಲಿ ಬಿಳಿಯ ವಿಪರೀತವಾದ ಒಂದು ಆದ್ಯತೆ ಇದೆ. ಮೂಲತಃ ನಾವು ಕಂದು ಮೈಬಣ್ಣದವರು. ಲಿಬಿಲಿಯ ಚರ್ಮದ ಮೇಲೆ ವ್ಯಾಮೋಹ ಬಂದಿದ್ದು ಬ್ರಿಟಿಷರು ನಮ್ಮನ್ನ ದಬ್ಬಾಳಿಕೆ ಮಾಡೋದಕ್ಕೆ ಬಂದಾಗಲೇ. ಅವರು “ಇಂಡಿಯನ್ಸ್ ಅಂಡ್ ಡಾಗ್ಸ್” ಇವುಗಳನ್ನು ಸಿನಿಮಾ ಮಂದಿರದ ಒಂದು ಜಾಗಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದರಿಂದಲೋ ಏನೋ ಅವರಿಗೆ ತಮ್ಮ ಚರ್ಮದ ಬಣ್ಣದ ಮೇಲೆ ಒಂದು ರೀತಿಯ ಕೀಳರಿಮೆ ಬಂದಿದೆ. ಬಿಳಿ ಆಳುವವರು, ಕಪ್ಪು ಮತ್ತು ಕಂದು ವರ್ಣದವರು ತುಳಿಸಿಕೊಳ್ಳುವವರು, ಗುಲಾಮರು ಎಂದು ಅವರಿಗೆ ತಲೆಯಲ್ಲಿ ತುಂಬಿರುವುದರಿಂದ ಅದು ನಮಗೆ ಕಪ್ಪು, ಕಂದು ಎಂದರೆ ಕೆಟ್ಟದ್ದು ಎಂಬುದು ಜೆನೆಟಿಕಲಿ ಬಂದಿದೆ.

ಅದರಲ್ಲೂ ಹೆಣ್ಣುಮಕ್ಕಳು ಈ ಸ್ಟುಪಿಡಿಟಿಗೆ ಆದಷ್ಟು ಬೇಗ ಬಲಿಯಾಗುತ್ತಾರೆ! ಹೆಣ್ಣುಮಕ್ಕಳು ಏನು ಸಾಧನೆ ಮಾಡದಿದ್ದರೂ ಪರವಾಗಿಲ್ಲ ಅವರು ಲಕ್ಷಣವಾಗಿರಬೇಕು ಅಂದರೆ ಬೆಳ್ಳಗಿರಬೇಕು. ಹಾಗಿದ್ದರೆ ಅವರನ್ನ ಗಂಡು ಬೇಗ ಒಪ್ಪಿ ಮದುವೆಯಾಗುತ್ತಾನೆ, ಸುಗಮವಾಗುತ್ತದೆ ಎಂದು ಅಂದುಕೊಳ್ಳವುದರಿಂದ ನಮ್ಮ ಫೇರ್ ನೆಸ್ ಕ್ರೀಮ್ ಗಳಿಗೆ ದೊಡ್ಡ ಮಾರುಕಟ್ಟೆಯೇ ಇದೆ. ೨೦೧೪ರಲ್ಲಿ ಒಂದು ಸರ್ವೇ ಮಾಡಲಾಯಿತು. ಅದರಲ್ಲಿ ಭಾರತದಲ್ಲಿ ೭೦ ಪ್ರತಿಶತ ಹೆಣ್ಣುಮಕ್ಕಳಿಗೆ ಹೀಗೆ ಫೇರ್ ಆಗಿರಬೇಕು ಎಂಬ ಆಸೆಯಿದೆ. ಸಂಗಾತಿಗಳು ಸಹ ಫೇರ್ ಆಗಿರಬೇಕು ಎಂಬ ಆಸೆಯಿರುತ್ತದೆ. ಅಂದರೆ ನಾವೇನು ಅಲ್ಲವೋ ಅದನ್ನ ನಾವು ಅಪೇಕ್ಷೆ ಪಡುತ್ತೇವೆ ಸರಿ ಆದರೆ ಒಂದು ಹೆಣ್ಣು ಸುಂದರಿಯಾಗಿರುವುದು ಅವಳ ಚರ್ಮದ ಬಣ್ಣದಿಂದ ಎನ್ನುವುದು ಎಷ್ಟು ಹಾಸ್ಯಾಸ್ಪದ!

ಸಣ್ಣವರಿದ್ದಾಗಲೇ ಹೆಣ್ಣು ಮಕ್ಕಳಿಗೆ ಕಡಲೆ ಹಿಟ್ಟು ಹಚ್ಚಿಕೋ, ಇದು ಅದು ಹಚ್ಚಿಕೋ, ಬೆಳ್ಳಗಿರ್ತೀಯಾ, ಆಟಕ್ಕೆ ಜಾಸ್ತಿ ಹೋಗಬೇಡ, ಸೂರ್ಯನ ಶಾಖಕ್ಕೆ ಮುಖ ಕೊಡಬೇಡ ಕಪ್ಪಾಗಿಬಿಡ್ತೀಯ ಎಂದು ಎಷ್ಟು ಜನ ಅಮ್ಮಂದಿರು ಮಗಳಿಗೆ ಹೇಳಿದ್ದಾರೆ ನೀವೇ ಪ್ರಶ್ನೆ ಕೇಳಿಕೊಳ್ಳಿ. ಮುಖಕ್ಕೆ ಅದು ಹಚ್ಚಿ ಇದು ಹಚ್ಚಿ ಎಂದು ಮಾತಾಡಿದವರು, ಮೊಣಕೈ ಹತ್ತಿರವು ಬೆಳ್ಳಗಿರಲಿ ಎಂದು ಜಾಹಿರಾತು ಕೊಟ್ಟರು, ಆಮೇಲೆ ಮಂಡಿ ಬೆಳ್ಳಗಿರಲಿ ಎಂದು ಅದಕ್ಕೆ ಥರಾವರದ ಕ್ರೀಮುಗಳನ್ನ ಮಾರುಕಟ್ಟೆಗೆ ಬಿಟ್ಟು ಬಿಟ್ಟು ನಮ್ಮ ದೇಹದ ಯಾವ ಭಾಗ ಕೊಂಚ ಕಪ್ಪಾದರೂ ಅದು ನಮ್ಮ ಡಿಸೈರಬಿಲಿಟಿ ಅಲ್ಲ, ನಾವು ಸುಂದರ ಅಲ್ಲ ಎಂದು ಹೆಚ್ಚು ನಂಬಿಸಿದ್ದರು.

ಆದರೆ ಅತಿರೇಕಕ್ಕೆ ಹೋಗಿದ್ದು ಹೆಣ್ಣಿನ ಬಹಳ ಪ್ರೈವೇಟ್ ಪಾರ್ಟ್ ವಜೈನಾ ಸಹಾ ಬೆಳ್ಳಗಿಡಲು ಈ ಕ್ರೀಮ್ ಸಹಾಯಕ ಎಂದ ಹುಚ್ಚು ಜಾಹಿರಾತು ಬಂದಾಗ. ಆ ಜಾಹೀರಾತಿನಲ್ಲಿ ಒಂದು ಗಂಡು ಹೆಣ್ಣಿನ ಹತ್ತಿರ ಹೋಗೋಕೆ ಈ ಗೌರವರ್ಣ ಬಹುಮುಖ್ಯ ಎಂದು ಪೆಕರು ಪೆಕರಾಗಿ ಮಾತಾಡಿ ಆ ಕಂಪೆನಿಯ ಮಾರಾಟ ಜಾಸ್ತಿ ಮಾಡಿಕೊಂಡಿತ್ತು. ಒಂದು ಗಂಡು ಹೆಣ್ಣು ಕೂಡೋದಕ್ಕೂ ಈ ಬೆಳ್ಳಗಿನ ಚರ್ಮ ಅದೆಷ್ಟು ಅವಶ್ಯಕ ಎಂದು ತೋರಿಸುವ ಹುನ್ನಾರ.

ಈ ಕ್ರೀಮುಗಳಲ್ಲೋ ಸ್ಟೆರಾಯ್ಡ್ಸ್ , ಹೈಡ್ರೊಕ್ವಿನೋನ್, ಟ್ರೇಟಿನಾಯ್ನ್ ಎಂಬ ಹಾನಿಕಾರಕ ಕೆಮಿಕಲ್ಲುಗಳ ಸಮಾಗಮ. ಇವು ನಮ್ಮ ದೇಹದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಪರ್ಮನೆಂಟ್ ಪಿಗ್ಮೆಂಟೇಷನ್, ಚರ್ಮದ ಕ್ಯಾನ್ಸರ್, ಲಿವರ್ ಡ್ಯಾಮೇಜ್ ಇವೆಲ್ಲವುಗಳು ಆಗುವ ಸಾಧ್ಯತೆ ಬಹಳ ಇದೆ. ೪೦೦ ಮಿಲಿಯನ್ ಯು ಎಸ್ ಡಾಲರ್ಸ್ ಬೆಲೆಯ ದೊಡ್ಡ ಇಂಡಸ್ಟ್ರಿ ಈ ಫೇರ್ನೆಸ್ ಕ್ರೀಮಿನ ದಂಧೆ. ಏಷಿಯಾ ಮತ್ತು ಆಫ್ರಿಕಾದ ಜನರೇ ಇವರ ಬಂಡವಾಳ. ಹೇಗಿದ್ದರೂ ಯುರೋಪಿನವರು ಅಲ್ಲೆಲ್ಲಾ ಹೋಗಿದ್ದರು, ವಸಾಹತುಗಳನ್ನ ಮಾಡಿದ್ದರು, ಅವರ ಚರ್ಮದ ಬಣ್ಣದ ಮೇಲೆ ಕೀಳರಿಮೆಯನ್ನು ಬಿತ್ತಿದ್ದರು ಹಾಗಿದ್ದಾಗ ಇದನ್ನೇ ಯಾಕೆ ಎನ್ ಕ್ಯಾಶ್ ಮಾಡಿಕೊಳ್ಳಬಾರದೆಂದು ಎಲ್ಲಾ ಕಂಪೆನಿಗಳು ಸರಿಯಾಗಿ ಟೋಪಿ ಹಾಕುತ್ತಿದೆ.

ಅದಕ್ಕೆ ಪೆದ್ದುಪೆದ್ದಾಗಿ ಬಲಿಯಾಗುತ್ತಿರುವುದು ಹೆಣ್ಣುಮಕ್ಕಳು, ಅದೂ ಆ ಜಾಹಿರಾತಿನ ಭಾಷೆಯಲ್ಲಿ ಬಳಸುವ ಗೌರವರ್ಣ ಎಂಬ ಕೆಟ್ಟ ಪದದಿಂದ ಹೆಣ್ಣುಮಕ್ಕಳು ಪೈಲೆಟ್ ಆಗುತ್ತಾರೆ, ಮದುವೆಯಾಗುತ್ತದೆ, ದೊಡ್ಡ ಆಫೀಸರ್ ಆಗುತ್ತಾರೆ ಎಂಬ ಹುಚ್ಚು ಕಲ್ಪನೆಗಳನ್ನ ಸಾಮಾನ್ಯ ಜನರ ತಲೆಯಲ್ಲಿ ಬಿತ್ತಿ ಅವರು ಅವರ ಬಗ್ಗೆಯೇ ಅಸಹ್ಯವಾಗುವ ಹಾಗೆ ಮಾಡುವುದು ವಿಷಾದಕರ.

ಯಾವುದೇ ಪಾರ್ಲರಿಗೆ ಹೋದರೂ ಮೊದಲು ಹೇಳೋದು, “ಬ್ಲೀಚ್ ಮಾಡೋದಾ, ಮುಖದಲ್ಲಿ ಗ್ಲೋ ನೇ ಇಲ್ಲ” ಎಂದು. ನಾಲ್ಕು ಟೋನ್ ಕಲರ್ ತೆಗೆದರೆ ಮುಖ ಗ್ಲೋ ಆಗಿ ಫ್ರೆಶ್ ಆಗಿರತ್ತಂತೆ ಎಂಬುದು ಪಾರ್ಲರ್ ಅವರ ಅಭಿಪ್ರಾಯ. ಇದನ್ನ ನಂಬಿ ಸಾವಿರಾರು ಖರ್ಚು ಮಾಡಿ ಮುಖದಲ್ಲಿನ ಕೊಳೆ ಎಂಬ ಕಪ್ಪು ಬಣ್ಣವನ್ನು ತೆಗೆಸಿಕೊಳ್ಳುತ್ತಾರೆ ಹೆಣ್ಣುಮಕ್ಕಳು. ಅದಕ್ಕೆ ಉಪಯೋಗಿಸೋದು ಹೈಡ್ರೋಜನ್ ಪೆರಾಕ್ಸೈಡ್.

ಒಮ್ಮೆ ಯೋಚನೆ ಮಾಡಿ , ನಮ್ಮ ದೇಹ ಸೌಂದರ್ಯಕ್ಕೆ, ನಮ್ಮ “ಗೌರವರ್ಣಕ್ಕೆ” ಜನ ಮೆಚ್ಚಿಕೊಳ್ಳಬೇಕು ಎಂಬ ಹುಚ್ಚು ನಮಗ್ಯಾಕೆ? ನಾವು ಇರುವುದೇ ಹೀಗೆ, ನಮ್ಮ ಚರ್ಮದ ಬಣ್ಣ ನಮ್ಮ ಹವಾಮಾನದ, ನಮ್ಮ ಜೆನಿಟಿಕ್ಕಿನ ಸಂಕೇತ. ಅದನ್ನ ಮೀರಿ ಹುಚ್ಚುಚ್ಚಾಗಿ ಆಡೋದು ನಿಲ್ಲಿಸೋಣ. ಕಪ್ಪು, ಬಿಳುಪು, ಕಂದು – ಬಣ್ಣವಷ್ಟೆ, ಅದು ಸೌಂದರ್ಯದ ಸೂಚಕ ಅಲ್ಲ. ಅದು ಗುಣಲಕ್ಷಣಗಳನ್ನೂ ತೋರಿಸುವುದಿಲ್ಲ.

ಮೇಘನಾ ಸುಧೀಂದ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *