ಮೇಘ ಸಂದೇಶ/ ಮಾನಸಿಕ ಹಿಂಸೆಗೆ ಮಾಪನ ಯಾವುದು? – ಮೇಘನಾ ಸುಧೀಂದ್ರ
ಮಾನಸಿಕ ಒತ್ತಡ ಆಗುವುದು ಹೇಗೆ ವೈಯಕ್ತಿಕವೋ ಒತ್ತಡ ನಿರ್ವಹಣೆ ಎನ್ನುವುದು ಕೂಡ ವೈಯಕ್ತಿಕ ಮನೋಭಾವವನ್ನು ಅವಲಂಬಿಸುತ್ತದೆ. ಮಾನಸಿಕ ಹಿಂಸೆಗೆ ಮಾಪನಗಳೂ ಅದನ್ನು ಎದುರಿಸುವ ಮನಃಶಕ್ತಿಯೂ ಏಕರೂಪದಲ್ಲಿ ಇರುವುದಿಲ್ಲ. ಹೆಣ್ಣು ಅನುಭವಿಸುವ ನೋವು, ಅಪಮಾನಗಳು ಅವಳನ್ನು ಖಿನ್ನತೆಗೆ ದೂಡುವ ಮುನ್ನ ಗುರುತಿಸಿ ಭಾವನಾತ್ಮಕ ಬೆಂಬಲ ನೀಡುವುದು ಸ್ನೇಹವಲಯದ ಕರ್ತವ್ಯವೇ ಆಗಿದೆ.
ಒಂದು ಐಟಿ ಕಂಪೆನಿಯಲ್ಲಿ ನಾಲ್ವರು ಈಗಿನ ಕಾಲದ ಹುಡುಗಿಯರು ಮಾತಾಡುತ್ತಾ ಇದ್ದಾರೆ ಎಂದುಕೊಳ್ಳಿ. ನಾಲ್ಕೂ ಜನಕ್ಕೂ ಒಂದೊಂದು ಸಮಸ್ಯೆ. ಒಬ್ಬಳಿಗೆ ಊಟ ಇಲ್ಲ, ಮತ್ತೊಬ್ಬಳಿಗೆ ಮನೆಯಲ್ಲಿ ಮದುವೆಗೆ ಒತ್ತಾಯ, ಇನ್ನೊಬ್ಬಳಿಗೆ ಮಕ್ಕಳು ಮಾಡಿಕೊಳ್ಳಲು ಒತ್ತಾಯ, ಮತ್ತೊಬ್ಬಳಿಗೆ ಆಫೀಸಿನ ಬಾಸ್ ಕಡೆಯಿಂದ ಬೇರೆ ಥರದ ಕಿರುಕುಳ. ಈ ಕಿರುಕುಳಗಳನ್ನ ಆಫೀಸಿನ ಲಂಚ್ ಬ್ರೇಕಿನ ನಂತರದ ವಾಕಿಂಗ್ ಸಮಯದಲ್ಲಿ ಒಬ್ಬರು ಮತ್ತೊಬ್ಬರಿಗೆ ತಮ್ಮ ಕಷ್ಟಗಳನ್ನ ಹೇಳಿಕೊಳ್ಳುವ ಉಭಯ ಕುಶಲೋಪರಿ ಸಮಯ. ಒಬ್ಬೊಬ್ಬರಿಗೂ ಮತ್ತೊಬ್ಬರ ಕಷ್ಟ ಸಿಕ್ಕಾಪಟ್ಟೆ ಬಾಲಿಶವಾದದ್ದು. ಅವರವರ ಕಷ್ಟ ದೊಡ್ಡದು. ಆದರೆ ನಾಲ್ಕೂ ಜನರ ಕಷ್ಟಗಳು ಐದನೆಯವರಿಗೆ ಬಹಳ ಹಾಸ್ಯಾಸ್ಪದವಾದವು.
ಮಾನಸಿಕ ಖಾಯಿಲೆಗಳು ಮತ್ತು ಹಿಂಸೆಯ ವಿಷಯಗಳು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಬಹಳ ನಿರ್ಲಕ್ಷ್ಯಕ್ಕೊಳಗಾದ ವಿಷಯಗಳು. ನನಗೆ ಹಿಂಸೆಯಾಗುತ್ತಿದೆ ಅಥವಾ ಇನ್ನೇನೋ ಮಾನಸಿಕ ಖಾಯಿಲೆ ಅಂದಾಗ ದೇವರನ್ನು ನಂಬದಿದ್ದಕ್ಕೆ, ವ್ರತ ಮಾಡದಿದ್ದಕ್ಕೆ ಆಗುತ್ತಿರುವ ಕರ್ಮಫಲವೆಂದು ಸುಪ್ರೀಮ್ ಕೋರ್ಟು ಹೇಳುವ ತೀರ್ಪಿನಂತೆ ಹೇಳಿ ಮುಗಿಸುವ ಜನರಿರುವ ನಮ್ಮ ಸಮಾಜದಲ್ಲಿ ಇಲ್ಲಿ ಮಾನಸಿಕವಾಗಿ ಹಿಂಸೆಯಾಗುತ್ತಿದೆ ಅಥವಾ ಇನ್ನೇನೋ ಸಮಸ್ಯೆ ಇದೆ ಎಂದು ಹೇಳಿದರೆ ಕೇಳುವ ಜನರೂ ಇಲ್ಲ.
ಈ ಮಾನಸಿಕ ಹಿಂಸೆಯೆಂಬುದನ್ನ ನಮ್ಮ ಉಚ್ಛ ನ್ಯಾಯಾಲಯ ವಿವರಿಸಿರೋದು ಹೀಗೆ, “ಬೇಕುಬೇಕಂತಲೇ ಒಂದು ಮನುಷ್ಯ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳಲು ಆ ಮನುಷ್ಯನ್ನನ್ನು ಛೇಡಿಸುವುದು, ಅವರ ಬಗ್ಗೆ ಕೆಟ್ಟದಾಗಿ ಮಾತಾಡಿಕೊಂಡು ಪ್ರಚೋದಿಸುವುದು, ಕೊಲ್ಲುತ್ತೇನೆಂದು ಬೆದರಿಕೆ ಹಾಕುವುದು, ಹಾಗೂ ಹೆಣ್ಣುಮಕ್ಕಳಿಗೆ ಸ್ಪೆಸಿಫಿಕ್ ಆಗಿ ಅವಳ ಗಂಡ ಹಾಗೂ ಗಂಡನ ಮನೆಯವರು ಮಾಡುವ ಬೈಗುಳ, ಬೇಕೆಂತಲೇ ಹಳಿಯುವುದು. ಮತ್ತು ವರದಕ್ಷಿಣೆಯ ಮೌಖಿಕ ಬೇಡಿಕೆಯನ್ನೂ ಮಾನಸಿಕ ಹಿಂಸೆ” ಎಂದು ವರ್ಗೀಕರಿಸಲಾಗಿದೆ. ಇಷ್ಟೆಲ್ಲಾ ಇದ್ದಾಗಿಯೂ ಈ ದೈಹಿಕ ಹಿಂಸೆಗೆ ಮಾಪನ ಇರುವಷ್ಟು ಮಾನಸಿಕ ಹಿಂಸೆಗೆ ಇಲ್ಲ. ದೈಹಿಕ ಹಿಂಸೆಯಲ್ಲಿ ರಕ್ತ, ದೇಹದ ಮೇಲಿನ ಗುರುತುಗಳು ಸಾಕ್ಷಿಯಾದರೆ ಈ ಮಾನಸಿಕ ಹಿಂಸೆಗೆ ಮಾಪನ ಏನು ಎಂಬುದು ಅರಿವಾಗುವುದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸ್ಟ್ರಾಂಗಾಗಿ ಇರುತ್ತಾರೆ. ಹೆಣ್ಣುಮಕ್ಕಳು ಪೀರಿಯಡ್ಸ್ ಸಮಯದಲ್ಲೇ ಒಬ್ಬೊಬ್ಬರ ಮನಸ್ಥಿತಿ ಒಂದೊಂದು ಥರ ಇರತ್ತೆ, ಇನ್ನು ಈ ಮಾನಸಿಕ ಸ್ಥಿತಿಯನ್ನು ಹೇಗೆ ವಿವರಿಸೋದು ಅನ್ನೋದು ಒಂದು ಯಕ್ಷ ಪ್ರಶ್ನೆ.
ಮದುವೆಯಾದ ಹೆಣ್ಣುಮಕ್ಕಳಲ್ಲಿ ಈ ಮಾನಸಿಕ ಹಿಂಸೆಗಳು ವಿವಿಧ ರೀತಿಯಲ್ಲಿ ಅನುಭವಿಸುತ್ತಾರೆ. ಸಾಧಾರಣವಾಗಿ ಅರೇಂಜ್ಡ್ ಮದುವೆಗಳೇ ನಮ್ಮಲ್ಲಿ ಜಾಸ್ತಿಯಾಗಿರೋದರಿಂದ ಹೊಸ ಮನೆ, ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಗುಣ ಮತ್ತು ಹೆಣ್ಣುಮಕ್ಕಳ ಮನಸ್ಸಿಗೆ ಬೇರೆ ಮನೆಯ ಎಲ್ಲಾ ಆಚರಣೆ ಮತ್ತು ವಿಚಾರಗಳು ಸರಿಯಾಗಿದೆ ಅಂತ ಅನ್ನಿಸೋವರೆಗೂ ಒಂದು ಸಂಘರ್ಷ ನಡೆಯುತ್ತಲೇ ಇರುತ್ತದೆ. ಆ ವ್ಯತ್ಯಾಸಗಳೇ ಒಮ್ಮೊಮ್ಮೆ ಮನಸ್ಸಿಗೆ ಹಿಂಸೆಯಾಗಬಹುದು. `ಹೀಗಲ್ಲ ಹಾಗೆ ಅಡುಗೆ ಮಾಡು, ಹೀಗಲ್ಲ ಹಾಗೆ ಕಸ ಗುಡಿಸು’ ಅನ್ನುವುದನ್ನು ಐವತ್ತು ಬಾರಿ ಹೇಳಿದಾಗ ಅಥವಾ ಅವಳ ಇರುವಿಕೆಯನ್ನು ಪದೇ ಪದೇ ಹೀಯಾಳಿಸುವುದು ಸಹ ಕೆಲವು ಹೆಣ್ಣುಮಕ್ಕಳಿಗೆ ಸ್ಟ್ರೆಸ್ ಆಗೋದಕ್ಕೆ ಶುರುವಾಗತ್ತೆ.
ಒಬ್ಬ ಮನುಷ್ಯನಿಗೆ ಭಯವಾದಾಗ ಅಥವಾ ಅವನಿಗೆ ಆಗುವ ಬೇಜಾರಿಗೆ ಒಮ್ಮೊಮ್ಮೆ ನಮ್ಮ ದೇಹದ ನರಮಂಡಲ ಸ್ಟ್ರೆಸ್ ಹಾರ್ಮೋನ್ಸನ್ನ ಬಿಡುಗಡೆ ಮಾಡುತ್ತದೆ. ಅದು ಅಡ್ರೆನಾಲಿನ್ ಮತ್ತು ಕರ್ತೋಸಲ್ ಜೊತೆಜೊತೆಗೆ. ಆಗ ನಮ್ಮ ಹೃದಯ ವೇಗವಾಗಿ ಬಡಿದುಕೊಳ್ಳಲು ಶುರುವಾಗುತ್ತದೆ, ಸ್ನಾಯುಗಳು ಬಿಗಿಯಾಗುತ್ತದೆ, ಬ್ಲಡ್ ಪ್ರೆಷರ್ ಏರುತ್ತದೆ, ಉಸಿರಾಟ ಜಾಸ್ತಿಯಾಗುತ್ತದೆ. ಹೀಗಾದಾಗ ಈ ಒತ್ತಡ ಮನುಷ್ಯರ ದೇಹಕ್ಕೆ ಒಮ್ಮೊಮ್ಮೆ ಮತ್ತೊಬ್ಬರಿಗೆ ಹಾನಿ ಮಾಡೆಂದೂ ಹೇಳಿಕೊಡುತ್ತದೆ. ಹೀಗೆ ಶುರುವಾಗುವ ವಿಷಯಗಳು ಬೇರೆಯವರನ್ನ ಕುಗ್ಗಿಸುವ ಪ್ರಯತ್ನ ಮಾಡುತ್ತದೆ. ಇದು ಹಿಂಸೆಯ ಮೊದಲ ಭಾಗ . ಕೆಲವೊಮ್ಮೆ ಹೆಣ್ಣುಮಕ್ಕಳಿಗೆ ಅವರ ಮನೆಗೆ ಸೊಸೆ ಬಂದಾಗ ತಮ್ಮ ಸ್ಥಾನವನ್ನು ಎಲ್ಲಿ ಕಿತ್ತುಕೊಂಡುಬಿಡುತ್ತಾರೋ ಎಂಬ ಅಭದ್ರತೆ ಶುರುವಾಗುತ್ತದೆ. ಆ ಅಭದ್ರತೆ ಆಂಕ್ಸೈಟಿ ಉದ್ವೇಗವಾಗಿ ಅದು ಒತ್ತಡವಾಗಿ ಈ ಹಿಂಸೆಗೆ ದಾರಿಮಾಡಿಕೊಡುತ್ತದೆ.
ಒಬ್ಬೊಬ್ಬರಿಗೆ ಹಿಂಸೆಯನ್ನು ತಡೆದುಕೊಳ್ಳುವ ಶಕ್ತಿ ಒಂದೊಂದು ಥರ ಇರುತ್ತದೆ. ಕೆಲವರಿಗೆ ಮುಟ್ಟಾದಾಗ ಎದ್ದೇಳೋದಕ್ಕೆ ಆಗಲ್ಲ, ಇನ್ನು ಕೆಲವರು ಕುಣಿಯುತ್ತಿರುತ್ತಾರೆ. ಇದನ್ನೇ ಮಾಪನವಾಗಿಟ್ಟುಕೊಂಡರೆ ಒತ್ತಡ ಹಾಗೆ. ಹಿಂಸೆಯೂ ಹಾಗೆ. ಆದರೆ ಯಾರೊಬ್ಬರ ಮಾತು ನಮಗೆ ನಮ್ಮ ಸಂತೋಷಕ್ಕೆ, ಜೀವನ ಸುಗಮವಾಗಿ ನಡೆಸೋದಕ್ಕೆ ಹಾನಿಯಾಗುತ್ತಿದೆ ಎಂದರೆ ಅವರು ನಿಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದೇ ಅರ್ಥ. ಅದನ್ನ ನೀವು ಕಡೆಗಣಿಸಬಾರದು. `ಸಂಸಾರದ ಗುಟ್ಟು ವ್ಯಾಧಿ ರಟ್ಟು’ ಎಂದು ಹೇಳಿದರೂ ಸಹ ಒಮ್ಮೊಮ್ಮೆ ಮನೆಯಲ್ಲಿ ಶಾಂತಚಿತ್ತವಾಗಿ ಮಾತಾಡಿ ಬಗೆಹರಿಯದಿದ್ದರೆ ಅದನ್ನ ಮುಂದೆ ಬೇರೆ ರೀತಿಯಲ್ಲೆ ಬಗೆಹರಿಸಿಕೊಳ್ಳಲೇಬೇಕು. ಯಾವುದೇ ಹೆಣ್ಣು ತನ್ನ ಆತ್ಮ ಗೌರವಕ್ಕೆ ಚ್ಯುತಿ ಬರುವ ಯಾವ ಸಂಬಂಧವನ್ನು ಮುಂದುವರೆಸುವ ಅವಶ್ಯಕತೆ ಇಲ್ಲ. ಅದು ಅನಿವಾರ್ಯವೂ ಅಲ್ಲ. ಎಂತಹ ವಯಸ್ಸೇ ಆಗಿರಲಿ.
ಇದು ಅರಿತು ನಡೆದರೆ ಮಾತ್ರ ಸಂಬಂಧಗಳು ಮತ್ತು ಮನಸ್ಸಿನ ಸ್ವಾಸ್ಥ್ಯ ಸರಿಯಾಗಿರೋದು. ಒಂದು ಹೆಣ್ಣಿಗೆ ಚುಚ್ಚುಮಾತಿನಿಂದ ಅವಳು ಸ್ಟ್ರೆಸ್, ಡಿಪ್ರೆಶನ್ ಹೀಗೆ ಮುಂತಾದುವುದಕ್ಕೆ ದೂಡಲ್ಪಟ್ಟರೆ ಅವಳಿಗೆ ಅದು ತೊಂದರೆ ಎಂದೇ ಅರ್ಥ. ಅದನ್ನ ನಾವು ಸರಿಪಡಿಸಿಕೊಳ್ಳಬೇಕು. ಇನ್ನು ಮುಂದೇ ಯಾರೇ ಮಾನಸಿಕ ಹಿಂಸೆ ಎಂದು ಬಂದಾಗ ನಗದೇ ಅವರ ತೊಂದರೆಯನ್ನು ಸರಿ ಮಾಡುವ ಕಡೆಗೆ ಅವರನ್ನ ಕಳಿಸೋಣ ಅಲ್ವಾ?

ಮೇಘನಾ ಸುಧೀಂದ್ರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ನಿಮ್ಮ ಮಾತುಗಳು ನಿಜ. ಮಾನಸಿಕ ಒತ್ತಡ ವನ್ನು ಅಳೆಯುವುದು ತೀರಾ ಕಷ್ಟ. ಅದು ಹೆಣ್ಣಿರಲಿ ಗಂಡಿರಲಿ. ಒಬ್ಬನ ಒತ್ತಡ ಇನ್ನೊಬ್ಬನಿಗೆ ಕ್ಷುಲ್ಲಕ ಅನ್ನಿಸಿಬಿಡಬಹುದು. ಅದರಲ್ಲೂ ಹೆಣ್ಣು ಮದುವೆಯಾದ ಬಳಿಕ ಗಂಡನ ಮನೆ, ಅಲ್ಲಿಯ ರೀತಿ ನೀತಿ, ಅಲ್ಲಿಯ ಸಮಾಜ, ಊರು ಕೇರಿ ಎಲ್ಲವುದರಿಂದಲೂ ಒಂದಲ್ಲ ಒಂದು ಮಾನಸಿಕ ಒತ್ತಡಕ್ಕೆ ಒಳಗಾಗುವ ಸಂಭವ ಇದ್ದೇ ಇದೆ ಇವತ್ತಿಗೂ ಎಂಬುದು ನನ್ನ ಅಭಿಪ್ರಾಯ. ಒಳ್ಳೆಯ ಲೇಖನ ಥ್ಯಾಂಕ್ಸ್.