ಮೇಘ ಸಂದೇಶ/ ಮಹಿಳಾ ದಿನ ಅಂದರೆ ಡಿಸ್ಕೌಂಟ್ ಕೂಪನ್ಸ್ ಅಲ್ಲ – ಮೇಘನಾ ಸುಧೀಂದ್ರ
ಸರ್ವ ಸಮಸ್ತಕ್ಕೂ ಒಂದಷ್ಟು ಡಿಸ್ಕೌಂಟು ಕೊಟ್ಟು ಮಹಿಳಾ ದಿನಾಚರಣೆ ಎಂಬ ಮಹತ್ತರವಾದ ಕೆಲಸವನ್ನ ಮುಗಿಸಿಬಿಡುತ್ತಾರೆ. ನಾವು ಎಲ್ಲಿದ್ದೇವೆ ಎಂಬ ಪ್ರಶ್ನೆ ಮಾಡಿಕೊಂಡಾಗ ನಮ್ಮ ಆದ್ಯತೆಗಳ ಬಗ್ಗೆ ಕೊಂಚ ನಾಚಿಕೆಯಾಗುತ್ತದೆ. ಡಿಸ್ಕೌಂಟು ಕೂಪನ್ಗಳಿಂದ ನಮ್ಮ ದಿನಾಚರಣೆಯನ್ನ ಮುಕ್ತಗೊಳಿಸಬೇಕಿದೆ.
ಬೆಂಗಳೂರು ಮಹಾನಗರದಲ್ಲಿರುವ ಹೆಣ್ಣುಮಕ್ಕಳಿಗೆ ಅಥವಾ ಅವರ ಮನೆಯ ಗಂಡಸರ ಫೋನಿಗೆ ಫೆಬ್ರವರಿ ಮಧ್ಯದಿಂದ ಮಾರ್ಚ್ ಕೊನೆಯವರೆಗೆ ಒಂದಷ್ಟು ದಿಸ್ಕೌಂಟು ಕೂಪನ್ಗಳು ಬಂದು ಬೀಳುತ್ತದೆ. ಇಲ್ಲಿ ಪೆಡಿಕ್ಯೂರ್ ಉಚಿತ, ಹೇರ್ ಸ್ಟ್ರೈಟನಿಂಗ್ ಶೇ. 50 ಕಡಿಮೆ, ಬಟ್ಟೆ ಒಂದು ತಗೊಂಡರೆ ಮತ್ತೊಂದು ಉಚಿತ, ಕಾಸ್ಮೆಟಿಕ್ಸ್, ಲಾಂಜ್ರೆ ಹೀಗೆ ಸರ್ವ ಸಮಸ್ತಕ್ಕೂ ಒಂದಷ್ಟು ಡಿಸ್ಕೌಂಟು ಕೊಟ್ಟು ಮಹಿಳಾ ದಿನಾಚರಣೆ ಎಂಬ ಮಹತ್ತರವಾದ ಕೆಲಸವನ್ನ ಮುಗಿಸಿಬಿಡುತ್ತಾರೆ. ನಾವು ಹೆಣ್ಣುಮಕ್ಕಳನ್ನ ಸೆಲಬ್ರೇಟ್ ಮಾಡುತ್ತೇವೆ ಎಂದು ಹೇಳಿ ಚಿನ್ನದ ವ್ಯಾಪಾರಿಗಳು, ಸಿಲ್ಕ್ ಸೀರೆ ವ್ಯಾಪಾರಿಗಳು, ಪಾರ್ಲರುಗಳು ಕೈ ಬೀಸಿ ಕರೆಯುತ್ತವೆ. ಇನ್ನೂ ಮುಂದೆ ಹೋದರೆ ಕ್ಯಾಬ್ ಕಂಪೆನಿಗಳು ಹೆಣ್ಣುಮಕ್ಕಳಿಗೆ ಒಬ್ಬರೇ ಓಡಾಡೋದಕ್ಕೆ ಅವತ್ತಿನ ದಿವಸ ಮಾತ್ರ ಅದೆಷ್ಟೋ ದುಡ್ಡು ಕಮ್ಮಿ ಅದು ಇದು ಎಲ್ಲವೂ ನಡೆದಿರುತ್ತದೆ.
ಇನ್ನು ಆಫೀಸಿನಲ್ಲಿ ಕೂರುವ ಮಹಿಳಾ ಎಚ್ ಆರ್ ಗಳು ಅವರಿಗೆ ಒಂದು ಚಾಕ್ಲೆಟ್ಟು, ಐಸ್ ಕ್ರೀಮೂ ಇಲ್ಲ ಒಂದು ಗುಲಾಬಿ ಅಥವಾ ಒಂದು ಹೋಟೆಲ್ಲಿನಲ್ಲಿ ಊಟ ಮುಗಿಸಿ ಮಹಿಳಾ ದಿನಾಚರಣೆಯನ್ನ ಮುಗಿಸಿಬಿಡುತ್ತಾರೆ. ಹೆಣ್ಣುಮಕ್ಕಳೂ ಅಷ್ಟೆ “ಇಲ್ಲಪ್ಪ ನನ್ನ ಹಸ್ಬೆಂಡ್ ಇವತ್ತು ಕಾಫಿ ಮಾಡಿ ಕೊಟ್ಟರು, ವುಮೆನ್ಸ್ ಡೇ ಅಲ್ವಾ” ಎಂದು ಎವರೆಸ್ಟ್ ಹತ್ತಿದ ಹಾಗೆ ಬಿಲ್ಡಪ್ ಕೊಟ್ಟು ಪಿಂಕ್ ಟಾಪ್ ಹಾಕಿಕೊಂಡು ಮೆರೆಯುತ್ತಾರೆ. ಅಲ್ಲಿಗೆ ಭಾರತವೆಂಬ ದೇಶದ ಐಟಿ ಸಿಟಿಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಮುಗಿಯಿತು.
ಆಗಾಗ ಮೆಟ್ರೋದಲ್ಲಿ ಗಂಡಸರು ಹೇಳುವ, “ಸಮಾನತೆ ಸಮಾನತೆ ಎಂದು ಬಡ್ಕೋಳ್ತಾರೆ ಅದರೊಟ್ಟಿಗೆ ಇವರಿಗೆ ಲೇಡಿಸ್ ಬೋಗಿ ಜೊತೆಗೆ ಇಲ್ಲಿ ಬಂದೂ ಸೀಟ್ ಅಂತಾರೆ, ಎಲ್ಲಾದಕ್ಕೂ ಸಮಾನತೆ ಬೇಕು ಅನ್ನೋರು ಸ್ವಲ್ಪ ಶಕ್ತಿ ಇಟ್ಟುಕೊಂಡು ನಿಲ್ಲಬೇಕಪ್ಪ, ಇಲ್ಲದಿದ್ದರೆ ನಾವು ಅವರೂ ಬೇರೆ ಬೇರೆ ಎಂದು ಅರಿತುಕೊಂಡು ಈ ಸಮಾನತೆ ಎಂಬ ಹುಚ್ಚನ್ನ ಬಿಡಬೇಕು” ಎಂಬ ಮಾತುಗಳು ಕೇಳುತ್ತದೆ, ಇನ್ನು ಮುಟ್ಟಾದಾಗ ಹೆಣ್ಣುಮಕ್ಕಳನ್ನ ನೋಡುವ ಪರಿ, ಬಸಿರಾದಾಗ ಆರು ತಿಂಗಳ ಪೂರ್ತಿ ಸಂಬಳದ ರಜೆ ಕೊಡುವಾಗ ಆಡುವ ಕುಹಕದ ಮಾತುಗಳು ಇವೆಲ್ಲದರ ಮಧ್ಯೆ ಹೆಣ್ಣುಮಕ್ಕಳಿಗೆ ಅಷ್ಟೆಲ್ಲಾ ಲೋಡ್ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಗುಟ್ಟಿನಲ್ಲಿ ಹೇಳುವ ಡೈರಕ್ಟರ್ ಮಹಿಳಾ ದಿನದಂದು ಮಾತ್ರ “ಹೆಣ್ಮಕ್ಕಳೇ ಸ್ಟ್ರಾಂಗು ಗುರು” ಎಂದು ಭಾಷಣ ಬಿಗಿಯುವವರು, ವರ್ಷ ಪೂರ್ತಿ `—- ಮಕ್ಕಳು’ ಎಂದು ಹೆಣ್ಣನ್ನ ಉಪಯೋಗಿಸಿ ಬೈಯ್ಯುವ ಬೈಗುಳಗಳನ್ನೇ ಆಡುವವರು ಅವತ್ತು ಮಾತ್ರ `ಸ್ತ್ರೀ ಎಂದರೆ ಅಷ್ಟೆ ಸಾಕೇ’ ಎಂಬ ಪದ್ಯವನ್ನ ಗಿಣಿಯಂತೆ ಉಸುರುವವರು, ಪ್ರೀತಿ ಫಲಿಸಲ್ಲಿಲ್ಲ ಎಂದು ಹೆಣ್ಣುಮಕ್ಕಳ ಮೇಲೆ ಕೆಟ್ಟ ಕೆಟ್ಟ ಪದ್ಯ ಬರೆದು ಅವತ್ತು ಮಾತ್ರ ಸ್ತ್ರೀ ಸ್ವಾತಂತ್ರ್ಯಕ್ಕೆ ನಮ್ಮ ಬೆಂಬಲವಿದೆ ಎಂದು ಫೇಸ್ಬುಕ್ಕಿನಲ್ಲಿ ಸ್ಟೇಟಸ್ ಹಾಕಿ ಕೊಳ್ಳುವವರು, ಉಶಪ್ಪಾ… ಒಂದ ಎರಡಾ ಈ ಹೆಣ್ಣುಮಕ್ಕಳ ದಿನಾಚರಣೆಯ ಬವಣೆಗಳು.
ಡಿಸೆಂಬರಿನಲ್ಲಿ ಯಾವ್ಯಾವ ದೇಶದಲ್ಲಿ ಜೆಂಡರ್ ಗ್ಯಾಪ್ ಇದೆ ಎಂದು ಸಮೀಕ್ಷೆ ಮಾಡಲಾಯಿತು. 150 ದೇಶಗಳ ಸಮೀಕ್ಷೆಯಲ್ಲಿ 112ರ ಸ್ಥಾನ ಭಾರತಕ್ಕೆ ಅಂದರೆ ನಮಗಿಂತ ಬೇರೆ ದೇಶಗಳಲ್ಲಿ ಗಂಡು ಹೆಣ್ಣನ್ನು ಒಂದೆ ತಕ್ಕಡಿಯಲ್ಲಿ ತೂಗಿ, ಅವರ ಲಿಂಗದಿಂದ ಅವರ ಬುದ್ದಿಮತ್ತೆ ಮತ್ತು ಕುಶಲತೆಯನ್ನ ಅಳೆಯುವುದಿಲ್ಲ ಎಂದು ಸಾಬೀತು ಪಡಿಸಿದೆ. ಐಸ್ ಲೆಂಡ್ ವಿಶ್ವದ ಜೆಂಡರ್ ನ್ಯೂಟ್ರಲ್ ದೇಶ ಎಂದು ಘೋಷಿಸಲಾಗಿದೆ. ಅದಾದ ಮೇಲೆ ನಾರ್ವೆ, ಫಿನ್ಲೆಂಡ್, ಸ್ವೀಡನ್ ದೇಶಗಳಿವೆ. ಇವಷ್ಟೂ ದೇಶಗಳು ಧರ್ಮ, ಜಾತಿ, ಮತ ಎಂಬ ವಿಷಯಗಳನ್ನೂ ತಲೆಕೆಡಿಸಿಕೊಳ್ಳುವುದಿಲ್ಲ. ಇವರಿಗೆ ಎಲ್ಲಾ ಮನುಷ್ಯರು ಸಮಾನರು ಮತ್ತು ಅವರ ಕೌಶಲ್ಯ ಅವರ ಕೆಲಸದಲ್ಲಿ ಅಳೆಯಬೇಕು ಎಂಬ ಅರಿವು ಅವರಿಗಿದೆ.
ನಾವು ಎಲ್ಲಿದ್ದೇವೆ ಎಂಬ ಪ್ರಶ್ನೆ ಮಾಡಿಕೊಂಡಾಗ ನಮ್ಮ ಆದ್ಯತೆಗಳ ಬಗ್ಗೆ ಕೊಂಚ ನಾಚಿಕೆಯಾಗುತ್ತದೆ. ಪಾರಂಪರಿಕವಾಗಿ ಗಂಡು ಮಕ್ಕಳ `ಈಗೋ’ವನ್ನ ಸಾಕಿಕೊಂಡು ಬಂದಿರುವ ನಮ್ಮ ಸಂಸ್ಕೃತಿಯಲ್ಲಿ ಈಗಲೂ ಗಂಡು ಹುಟ್ಟಿದಾಗಲೇ ಅಪ್ಪ ಅಮ್ಮನ ಜೀವನ ಸಾರ್ಥಕ, ಅದಾದ ಮೇಲೆ ಅವರನ್ನ ಮನೆಯ ಕೆಲಸದ ಯಾವ ಸಹಾಯಕ್ಕೂ ಇಟ್ಟುಕೊಳ್ಳದೇ ಅವರ ಕನಸನ್ನ ಈಡೇರಿಸಿಕೊಳ್ಳಲಿ ಎಂದು ಹಾರಿ ಬಿಡುವಾಗ ಅದೇ ವಯಸ್ಸಿನ ಹೆಣ್ಣುಮಕ್ಕಳು ಶೇ. 50 ಆ ಅರ್ಧ ಮೆಟ್ಟಿಲನ್ನು ಹತ್ತುವುದಿಲ್ಲ. ಸರ್ಕಾರದ ಪಾಲಿಸಿಗಳನ್ನ ಮಾಡುವಲ್ಲಿ ಅಥವಾ ಪ್ರಜಾಪ್ರಭುತ್ವದ ಪ್ರತಿನಿಧಿಗಳು ಅದೆಷ್ಟು ಕಡಿಮೆ ಇದ್ದಾರೆ ಎಂದರೆ ಹೆಣ್ಣುಮಕ್ಕಳಿಗೆ ಸುಮಾರು ತಿಳಿಯುವ ಮುಟ್ಟಿನ ದಿವಸದ ಸಾನಿಟೆರಿ ಪ್ಯಾಡಿನ ಸಮಸ್ಯೆಗಳನ್ನ ವಿವರಿಸುವುದಕ್ಕೆ ಒಂದು ಐದಾರು ವರ್ಷಗಳಾಗುತ್ತದೆ.
ಇಷ್ಟೆಲ್ಲಾ ನಿರಾಸೆಗಳ ನಡುವೆ ನಮ್ಮ ನಿಜವಾದ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳನ್ನ ದೇವರು, ದೈವತ್ವ ಅದು ಇದೂ ಎಂದು ಏರಿಸಿ ಮಾತಾಡೋವಾಗ ಕೊಂಚವಾದರೂ ಹಾಗೆ ನಡೆದುಕೊಳ್ಳುವ ಅವಶ್ಯಕತೆ ಇರುತ್ತದೆ. ನಮ್ಮ ಪೆಡಿಕ್ಯೂರೂ, ನೇಲ್ ಪಾಲಿಷು, ಲಿಪ್ ಸ್ಟಿಕ್ಕು, ಇವೆಲ್ಲದರ ಮಧ್ಯ ಮಾತ್ರ ನಮ್ಮ ದಿನಾಚರಣೆಗಳು ಸೀಮಿತವಾಗಬೇಕಿಲ್ಲ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತುಗಳನ್ನ ಸೈಡಿಗಿಟ್ಟು ಹೆಣ್ಣುಮಕ್ಕಳು ತಮ್ಮ ಸ್ವಾಯತ್ತತೆ , ಸ್ವಾತಂತ್ರ್ಯ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕಿದೆ. ಡಿಸ್ಕೌಂಟು ಕೂಪನ್ಗಳಿಂದ ನಮ್ಮ ದಿನಾಚರಣೆಯನ್ನ ಮುಕ್ತಗೊಳಿಸಬೇಕಿದೆ.. ಈ ಜೆಂಡರ್ ಗ್ಯಾಪನ್ನ ಇನ್ನು ನಾವು ತಗ್ಗಿಸಲೇ ಬೇಕಿದೆ…

-ಮೇಘನಾ ಸುಧೀಂದ್ರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ಒಳ್ಳೆಯ ಲೇಖನ. ಥ್ಯಾಂಕ್ಸ್.